ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು.
ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ಮಿಕ್ರಮ ಕೂಡ ಸತ್ಯಾಗ್ರಹದಲ್ಲಿ ಸೆರೆಮನೆ ಕಂಡರು. 1942ರ ಚಲೇ ಜಾವ್ ಚಳವಳಿ ವೇಳೆ ಭೂಗತರಾಗಿದ್ದರು. ಬ್ರಿಟಿಷ್ ಸರ್ಕಾರ ಇವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಿತ್ತು. 1947ರಲ್ಲಿ ಹೈದರಾಬಾದ್ ವಿಲೀನಕ್ಕಾಗಿ ಬಿಂದು ಮಾಧವರು ವ್ಯಾಪಕ ಸಂಘಟನೆ ಕೈಗೊಂಡಿದ್ದರು. ನಾ.ಸು. ಹರ್ಡೀಕರರ ನಾಯಕತ್ವದಲ್ಲಿ ಸಂಘಟಿತವಾದ ಸೇವಾದಲದಲ್ಲಿ ಸ್ವಯಂಸೇವಕರಾಗಿದ್ದರು. 10,000 ಸ್ವಯಂಸೇವಕರ ತರಬೇತಿ ಸಾಧಿಸಿ 1947ರಲ್ಲಿ ಹೊಸ ರಾಜಕೀಯ ವಾತಾವರಣಕ್ಕೆ ಒಗ್ಗಿಕೊಳ್ಳಲಾರದೇ ರಾಜೀನಾಮೆ ಕೊಟ್ಟರು.
ಧಾರವಾಡ ತಾಲ್ಲೂಕು ಮತ್ತು ಜಿಲ್ಲಾ ಖಾದಿ ಗ್ರಾಮೋದ್ಯೋಗ ಸಂಘ ಸ್ಥಾಪನೆಯಲ್ಲಿ ದುಡಿದರು. ಹರಿಜನ ಸೇವಾ ಕಾರ್ಯಕ್ರಮ ನಡೆಸಿದರು. 1947ರಲ್ಲಿ ಧಾರವಾಡದಲ್ಲಿ ಮುನಿಸಿಪಲ್ ಭಂಗಿಗಳ (ತೋಟಿ) ಮುಷ್ಕರ ವಾದಾಗ ನಗರ ನೈರ್ಮಲ್ಯಕ್ಕಾಗಿ ಸ್ವತಃ ಊರಿನ ಕಕ್ಕಸುಗಳನ್ನು ತೊಳೆಯುವ ಕೆಲಸಕ್ಕೆ ಮುಂದಾದರು.
1936ರ ಡಿಸೆಂಬರಿನಲ್ಲಿ ಹಂಪೆಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯ ಷಟ್-ಶತಮಾನೋತ್ಸವ ಚಾಲಕ ಶಕ್ತಿಗಳಲ್ಲಿ ಒಬ್ಬರಾಗಿದ್ದರು. 1938ರಲ್ಲಿ ಇವರು ಪ್ರಾರಂಭಿಸಿದ ಮಿಂಚಿನಬಳ್ಳಿ ಪ್ರಕಾಶನವು 30 ವರ್ಷ ಪರ್ಯಂತ ನಡೆಯಿತು. ಇತಿಹಾಸ, ವಿಮರ್ಶೆ, ಜೀವನಚರಿತ್ರೆ, ವಿಜ್ಞಾನ, ಅರ್ಥಶಾಸ್ತ್ರ, ರಾಜಕೀಯ ಮೊದಲಾದ ಗಂಭೀರ ವಿಷಯಗಳ ಮೇಲೆ ತಜ್ಞರಿಂದ 110ಕ್ಕೂ ಮಿಕ್ಕಿ ಗ್ರಂಥಗಳನ್ನು ಬರೆಸಿ ಪ್ರಕಟಿಸಿತು.
964ರಲ್ಲಿ ಜರಗಿದ ಪುರಂದರದಾಸರ ಚತುಃ ಶತಮಾನೋತ್ಸವ ಅಂಗವಾಗಿ ದಾಸರ ಕೃತಿಗಳ ಸಂಗ್ರಹಕ್ಕಾಗಿ ಊರೂರು ಸುತ್ತಿದರು. ಬೆಟಗೇರಿ ಕೃಷ್ಣಶರ್ಮರಂಥ ವಿದ್ವಾಂಸರಿಂದ ಸಂಶೋಧನಗೊಳಿಸಿ ಪ್ರಗಲ್ಛ ಮುನ್ನುಡಿ ಮತ್ತು ಟಿಪ್ಪಣಿಗಳೊಡನೆ ದಾಸರ ಕೃತಿಗಳ ಪ್ರಮಾಣಿತ ಮತ್ತು ವರ್ಗೀಕೃತ ಸಂಸ್ಕರಣವೊಂದನ್ನು ಆರು ಸಂಪುಟಗಳಲ್ಲಿ ಹೊರತಂದರು. ಅದು ದಾಸರ ಕೃತಿಗಳ ಪ್ರಪ್ರಥಮ ಪ್ರಮಾಣಿತ ಆವೃತ್ತಿ.
ಹಲವರ್ಷ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಸದಸ್ಯರೂ 1937ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರು. ಯಾವ ಅಧಿಕಾರವನ್ನೂ ಅಪೇಕ್ಷಿಸದೆ ಬಡತನದಲ್ಲೇ ಬಾಳಿ 1981ರ ಅಕ್ಟೋಬರ್ 27ರಂದು ಬೆಂಗಳೂರಲ್ಲಿ ತಮ್ಮ ಮಗನ ಮನೆಯಲ್ಲಿ ನಿಧನಹೊಂದಿದರು.
1950ರಲ್ಲಿ ಧಾರವಾಡದಲ್ಲಿ ಮಿತ್ರರು ಇವರಿಗೊಂದು ಸನ್ಮಾನ ಏರ್ಪಡಿಸಿ ಅರ್ಪಿಸಿದ ಹಮ್ಮಿಣಿಯನ್ನು ಮಿಂಚಿನಬಳ್ಳಿಗಾಗಿ ನೀಡಿದ್ದರು. 1981ರಲ್ಲಿ ನಿಧನಕ್ಕಿಂತ ಸ್ವಲ್ಪ ಕಾಲ ಮುಂಚೆ ಬೆಂಗಳೂರಲ್ಲಿ ಇವರ ಮನೆಯಲ್ಲಿಯೇ ಕಡಿದಾಳ್ ಮಂಜಪ್ಪನರ ನೇತೃತ್ವದಲ್ಲಿ ಅಭಿನಂದನಾ ಗ್ರಂಥ ಸಮರ್ಪಿಸಲಾಗಿತ್ತು.