About the Author

ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪುಣೇಕರ್ ಅವರು ಮೂವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಅಪರೂಪದ ಕಾದಂಬರಿಗಳಲ್ಲೊಂದೆಂದು ಗುರುತಿಸಲ್ಪಟ್ಟಿರುವ ಗಂಗವ್ವ ಗಂಗಾಮಾಯಿ(1958), ನ್ಯಾಷನಲ್ ಬುಕ್ ಟ್ರಸ್ಟ್ ಮೂಲಕ ಎಲ್ಲ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಚಲನಚಿತ್ರವಾಗಿ ಅತ್ಯುತ್ತಮ ಕತೆ, ನಿರ್ದೇಶಕ, ಉತ್ತಮ ನಟ, ಕಲಾ ನಿರ್ದೇಶಕ ಮತ್ತು ನಿರ್ಮಾಣಕ್ಕಾಗಿ ಪ್ರಶಸ್ತಿಗಳನ್ನು ಗಳಿಸಿದೆ. 

ಋಗ್ವೇದದ ಕೆಲವೇ ಮಂತ್ರ ಮತ್ತು ಹರಪ್ಪ ಮೊಹಂಜೋದಾರೋನ ಮುದ್ರಿಕೆಗಳಲ್ಲಿ ದೊರೆಯುವ ಆಧಾರಗಳ ಮೇಲೆ ರಚಿಸಿದ ಅವದೇಶ್ವರಿ ಕಾದಂಬರಿಗೆ 1988ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ನಟನಾರಾಯಣಿ(1981) ಸುಧಾ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಅಪರೂಪದ ಕಾದಂಬರಿ. ಡೆರಿಕ್ ಡಿಸೋಜ ಮತ್ತು ಇವರ ಕಥೆಗಳು(1991) ಕಥಾ ಸಂಕಲನ, ಗಾನಕೇಳಿ(ಸಂಯುಕ್ತ ಸಂಕಲನ-1948), ಮಾಯಿಯ ಮೂರು ಮುಖಗಳು ಕವನ ಸಂಕಲನ, ಬೇಂದ್ರೆ  ಕಾವ್ಯ ಮೀಮಾಂಸೆ, ಯುರೋಪಿಯನ್ ವಿಮರ್ಶೆಯ ಇತಿಹಾಸ, ಸಾಹಿತ್ಯ ಮತ್ತು ಅಭಿರುಚಿ. ಅಪೂರ್ಣವರ್ತಮಾನಕಾಲ, ನೀರಬೆಳಗು ಮುಖ್ಯ ವಿಮರ್ಶಾ ಸಂಕಲನಗಳು. 

ದಿ ಸೈಕಲ್ ಆಫ್ ಸೀಸನ್ಸ್(ಕಾಳಿದಾಸನ ಋತುಸಂಹಾರದ ಅನುವಾದ), ದಿ ಕ್ಯಾಪ್ಟೀವ್, ದಿ ಪ್ರಿಟೆಂಡರ್, ಆನ್ ಅಪಿಸ್ಟಲ್ ಟು ಡೆವಿಡ್ ಮೆಕ್ಲೆಟನ್, ದಿ ಟೆಂಟ್ ಪೋಲ್, ಪ್ಯಾರಾಡೆಮ್ಸ್, ಇಂಗ್ಲಿಷ್ ಕವನ ಸಂಕಲನಗಳು, ದಿ ಲೇಟರ್ ಫೇಸ್ ಇನ್ ದ ಡೆವಲಪ್ ಮೆಂಟ್ ಆಫ್ ದಬ್ಯು.ಬಿ.ಯೇಟ್ಸ್(ಸಂಶೋಧನಾ ಪ್ರಬಂಧ), ದಿ ಇಂಟರ್ ಪ್ರಿಟೇಷನ್ ಆಫ್ ದ ಲೇಟರ್ ಪೊಯಮ್ಸ್ ಆಫ್ ಯೇಟ್ಸ್, ರಾಮಾಯಣದರ್ಶನ-ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದ, ಥಿಯರೆಟಿಕಲ್ ಅಂಡ್ ಪ್ರಾಕ್ಟಿಕಲ್ ಸ್ಟಡೀಸ್ ಇನ್ ಇಂಡೋ - ಇಂಗ್ಲಿಷ್ ಲಿಟರೇಚರ್, ಅವದೂತ ಗೀತಾ(ಸಂಪಾದನೆ), ಮೊಹಂಜೋದಾರೋ ಸೀಲ್ಸ್, ನಾನಾಸ್ ಕನ್ ಫೆಷನ್(ನಟನಾರಾಯಣಿ ಅನುವಾದ), ಹರಿಜನ್ ಕಾಂಟ್ರೂಬೂಷನ್ ಟು ಮೀಡಿವಲ್ ಇಂಡಿಯನ್ ಥಾಟ್ ಮುಖ್ಯ ಇಂಗ್ಲಿಷ್ ಪುಸ್ತಕಗಳು. 

ಸಂಗೀತದಲ್ಲಿ ಅಪಾರ ಪರಿಶ್ರಮವಿದ್ದ ಮೊಕಾಶಿಯವರು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಸಂಗೀತ ವಿಮರ್ಶಕರಾಗಿದ್ದರು, ಸ್ವತಃ ಮೂರು ರಾಗಗಳನ್ನು ಸಂಯೋಜಿಸಿದ್ದಾರೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಗಂಧಕೊರಡು ಇವರರ ಅಭಿನಂದನಾ ಕೃತಿ. ನಿಧನ 11-08-2004 

ಶಂಕರ್ ಮೊಕಾಶಿ ಪುಣೇಕರ್

(08 May 1928-11 Aug 2004)

Awards