ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ರಾಗಿ ಸೇವೆ ಸಲ್ಲಿಸಿದ ಅವರು ಮೇಲೆ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ 1991ರಲ್ಲಿ ವೃತ್ತಿಯಿಂದ ನಿವೃತ್ತರಾದರು. ಭೈರಪ್ಪನವರ ಸಾಹಿತ್ಯ ಸಾಧನೆಗೆ ಅನೇಕ ಪ್ರಶಸ್ತಿ ಬಂದಿವೆ, ಸನ್ಮಾನಗಳು ಸಂದಿವೆ. ತಂತು ಕಾದಂಬರಿಗೆ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ಲಭಿಸಿದೆ. ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ವಂಶವೃಕ್ಷ, ಸಾಕ್ಷಿ, ದಾಟು ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ,
ಮಾಸ್ತಿ ಪ್ರಶಸ್ತಿ (1994), ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1985) ಇವರಿಗೆ ಲಭಿಸಿದೆ. ಕನಕಪುರದಲ್ಲಿ ನಡೆದ 67 ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ (1999) ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ. ಸರಸ್ವತೀ ಸಮ್ಮಾನ್ ಪ್ರಶಸ್ತಿಯನ್ನು ಕನ್ನಡದಲ್ಲಿ ಪಡೆದವರಲ್ಲಿ ಮೊದಲಿಗರು ಇವರು. ಬರೆದ ಕಾದಂಬರಿಗಳೆಲ್ಲಾ ಜನಪ್ರಿಯವಾಗಿ ಹತ್ತಾರು ಮರುಮುದ್ರಣಗಳಾಗಿವೆ. ಮರಾಠಿ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮೊದಲಾದವು ಚಲನಚಿತ್ರಗಳಾಗಿವೆ. ಇವರು ಕಾದಂಬರಿಗಳನ್ನಷ್ಟೆ ಅಲ್ಲದೆ ಸೌಂದರ್ಯಮೀಮಾಂಸೆಯ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಸತ್ಯ ಮತ್ತು ಸೌಂದರ್ಯ ಇವರು ರಚಿಸಿದ ಪಿ ಎಚ್ ಡಿ ಗ್ರಂಥವಾಗಿದೆ. ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಗ್ರಂಥಗಳು ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿವೆ. ನಾನೇಕೆ ಬರೆಯುತ್ತೇನೆ. ಭಿತ್ತಿ ಆತ್ಮವೃತ್ತಾದ ಗ್ರಂಥವಾಗಿವೆ. ಆವರಣ, ಕವಲು ಅವರ ಈಚಿನ ಕಾದಂಬರಿಗಳಾಗಿವೆ. ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಅನ್ವೇಷಣ, ಮಂದ್ರ, ಸಾರ್ಥ, ನಾಯಿನೆರಳು, ಧರ್ಮಶ್ರೀ, ದೂರಸರಿದರು ಮತದಾನ ಮುಂತಾದವು ಅವರ ಕಾದಂಬರಿಗಳಾಗಿವೆ.