ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು.
ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ಉದಯವಾಣಿ, ಮುಂಗಾರು ಇತ್ಯಾದಿ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳ ಭಾಷೆಯನ್ನು ಕಲಿತು, ಕನ್ನಡದೊಂದಿಗೆ ಹಿಂದಿ, ಇಂಗ್ಲಿಷ್, ಮಲಯಾಳ, ತುಳು ಭಾಷೆಗಳನ್ನು ಕಲಿತು ಪಂಚಭಾಷಾಪ್ರವೀಣೆಯಾಗಿದ್ದಾರೆ. ಅವರ ಕೆಲವು ಪ್ರಕಟಿತ ಕೃತಿಗಳು ಹೊನ್ನ ಬೆಳಕೆ ಬಾ (ಕವನ ಸಂಕಲನ), ನಾನು ಗೃಹಲಕ್ಷ್ಮಿ, ನಾನೇನು ಮಾಡಲಿ, ಹೆಣ್ಣು ಮಗಳು, ವನಮಾಲ ಕೀಲುಗೊಂಬೆ, ಮೂಕ ಹಕ್ಕಿ. ‘ಜೀವಿಕ್ಯಾನ ಮರನ್ನು ಪೋಯ ಸ್ತ್ರೀ' ಕಾದಂಬರಿ ಕನ್ನಡಕ್ಕೆ ಪಟ ತೆರೆಯುವ ಮುನ್ನ ಕೃತಿಯಾಗಿ ಅನುವಾದಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಗೋವಿಂದರಾವ್ ಸ್ಮಾರಕ ಕಾದಂಬರಿ ವಿಮರ್ಶಾ ಬಹುಮಾನ, ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.