ಕತೆಗಾರ ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರದವರು. ತಂದೆ ಸಿದ್ದೇಗೌಡ, ತಾಯಿ ಲಿಂಗಮ್ಮ. ನಾಗವಾರ, ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದ ಎಂ.ಎ.(1971) ಪದವೀಧರರು. ಬೆಂಗಳೂರು ವಿ.ವಿ.ಯಿಂದ ‘ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ’ ಪ್ರಬಂಧಕ್ಕೆ ಪಿಎಚ್ ಡಿ ಪದವಿ (1985) ಪಡದರು.
ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರು ವಿ.ವಿ. ಜ್ಞಾನಭಾರತಿ ಕನ್ನಡ (1985) ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (2007ರವರೆಗೆ) ಪ್ರಾಧ್ಯಾಪಕರಾಗಿದ್ದರು. ಕಾಳೇಗೌಡ ನಾಗವಾರ ಅವರ ಕತೆಗಳಲ್ಲಿ ಗ್ರಾಮೀಣ ಸಂವೇದನೆ ಮತ್ತು ಬಂಡಾಯ ಆಶಯಗಳು ಪ್ರಮುಖವಾಗಿವೆ ಎಂದು ಗುರುತಿಸಲಾಗುತ್ತದೆ. ಕತೆಗಳಲ್ಲದೆ ಕವಿತೆಗಳನ್ನು ಬರೆದಿರುವ ಅವರನ್ನು ವಿಮರ್ಶಕ ಹಾಗೂ ಜಾನಪದ ತಜ್ಞರಾಗಿಯೂ ಗುರುತಿಸಲಾಗುತ್ತದೆ.
ಡಾ. ರಾಮಮನೋಹರ ಲೋಹಿಯಾ ಸಮಗ್ರ ಕೃತಿಗಳ ಪ್ರಕಟಣಾ ಸಮಿತಿ ಅಧ್ಯಕ್ಷರು, ಹಂಪಿಯ ಕನ್ನಡ ವಿ.ವಿ. ಸಿಂಡಿಕೇಟ್ (1995-98) ಸದಸ್ಯರು, ಕರ್ನಾಟಕ ರಾಜ್ಯ ಗ್ರಾಜ್ಯುವೇಟ್ ಸಲಹಾ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ (1995-97) ಸದಸ್ಯರು, ಕರ್ನಾಟಕ ಜಾನಪದ ಹಾಗೂ ಯಕ್ಷಗಾನಕಾಡೆಮಿ (1985-91) ಸದಸ್ಯರು ನಂತರ (1998-2001) ಅಧ್ಯಕ್ಷರು, ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕ ಸಂಚಾಲಕರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ (2001) ಚನ್ನಪಟ್ಟಣ, ಅಧ್ಯಕ್ಷರಾಗಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-2005 ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2006 ಲಭಿಸಿವೆ.
ಕೃತಿಗಳು: ಬೆಟ್ಟಸಾಲು ಮಳೆ, ಅಲೆಗಳು, ಈ ಮಂಜಿನೊಳಗೆ, ಕಣ್ಣಾಚಿಕೆ, ಆಯ್ದ ಬರಹಗಳು (ಕಥಾ ಸಂಕಲನಗಳು), ಕರಾವಳಿಯಲ್ಲಿ ಗಂಗಾಲಗ್ನ ಕನ್ನೆಯ ಸ್ನೇಹ, ಗಾಳಿ ಬೆಳಕಿನ ಪಯಣ (ಕವನ ಸಂಕಲನಗಳು), ತ್ರಿಪದಿ ರಗಳೆ ಮತ್ತು ಜನಪದ ಸಾಹಿತ್ಯ, ಪ್ರೀತಿ ಮತ್ತು ನಿರ್ಭೀತಿ, ಸರ್ವಜ್ಞ ಮತ್ತು ಹರಿಹರ, ಸೃಜನಶೀಲ ವೈಚಾರಿಕತೆ, ಭಿನ್ನಮತದ ಸೊಗಸು (ವಿಮರ್ಶಾ ಲೇಖನಗಳು), ಬಯಲು ಸೀಮೆಯ ಲಾವಣಿಗಳೂ, ಬೇಕಾದ ಸಂಗತಿ, ಬೀದಿಮಕ್ಕಳು ಬೆಳೆದೊ, ಗರಿಗೆದರಿದ ನವಿಲು, ಸಾಲು ಸಂಪಿಗೆ ನೆರಳು, ಹಲವು ತೋಟದ ಹೂಗಳು, ಮನದಾಳದ ಕನಸುಗಳು, ಗಿರಿಜನಕಾವ್ಯ,ಗಿರಿಜನ ಸಂಸ್ಕೃತಿ (ಜಾನಪದ), ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ರಾಮಮನೋಹರ ಲೋಹಿಯಾ ಅವರ ಬರಹಗಳ ಸಂಪುಟಗಳು, ಜೀಶಂಪ ಅವರ ಜಾನಪದ ಬರಹಗಳು, ಜೀವನ ಪ್ರೀತಿ (ಸಂಪಾದನೆ), ಹಾಗೂ ಮಡುಗಟ್ಟಿ ಅಕ್ಕರೆ, ಜೀವಪ್ರೇಮದ ಅಚ್ಚರಿ, ಸಂತನ ಧ್ಯಾನ, ಇಂಥ ಪ್ರೀತಿಯ ನಾವೆ (ಇವರ ವ್ಯಕ್ತಿತ್ವ ಹಾಗೂ ಸಾಧನೆ ಕುರಿತ ಗ್ರಂಥಗಳು)