About the Author

ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು.  ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ 15 ಮುದ್ರಣಗಳನ್ನು ಕಂಡಿದ್ದು ಅನ್ಯಭಾಷೆಗಳಿಗೂ ಅನುವಾದಗೊಂಡಿದೆ.  ಪ್ರಕಟಿತ ವಿಮರ್ಶಾ ಕೃತಿಗಳು - ಬದಲಾವಣೆ, ಕುವೆಂಪುಯುಗ, ಆಂತರ್ಯ, ಕಣಿಗಲೆ. ವಿಚಾರಾತ್ಮಕ ಕೃತಿಗಳು- ಭಾಷೆ ಮತ್ತು ಸಂಸ್ಕೃತಿ, ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಗಾಂಧಿಯನ್ನು ಗೋಡ್ಸೆ ಏಕೆ ಕೊಂದ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ , ಸುಖದ ಹಾದಿ, ಅನನ್ಯತೆ, Violence in Hinduism

ಭಗವಾನ್ ಅವರ ಅನುವಾದಿತ ಕೃತಿಗಳು- ಜೂಲಿಯಸ್ ಸೀಸರ್, ವೆನಿಸಿನ ವರ್ತಕ, ಹ್ಯಾಮ್ಲೆಟ್, ಆಂಟನಿ ಮತ್ತು ಕ್ಲಿಯೋಪಾತ್ರ, ಒಥೆಲೊ, ನಿಮ್ಮಿಷ್ಟ, ಮ್ಯಾಕ್ ಬೆತ್, ಮಹಾರಾಜ ಲಿಯರ್, ರೋಮಿಯೊ ಮತ್ತು ಜೂಲಿಯೆಟ್, ವೃದ್ಧ ಮತ್ತು ಸಮುದ್ರ ನಾಟಕಗಳು. ಅವರ ಸೃಜನೇತರ ಬರಹಗಳು- ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು (ಸಂ. 3, 7 ಮತ್ತು11), ಇತಿಹಾಸದ ಪಾಠಗಳು, ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ. ಇತಿಹಾಸ ಚಕ್ರ(ಚರಿತ್ರೆ). ಅವರ ಸಂಪಾದಿತ ಕೃತಿಗಳು- ಗಂಗೋತ್ರಿ, ಚಂಪಾ-ಆಯ್ದ ಕವನಗಳು, ಜಿಜ್ಞಾಸು, ಸಾಹಿತ್ಯ ವಿಮರ್ಶೆ 1985, ಕೆಂಗಲ್ಲರ ಭಾಷಣಗಳು ಸೇರಿದಂತೆ ಸಾಹಿತ್ಯ ಹಲವು ಪ್ರಕಾರಗಳಲ್ಲಿ  ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ-ಕಾವ್ಯಾನಂದ ಪ್ರಶಸ್ತಿ (1982), ಕುವೆಂಪು ಬಹುಮಾನ (1985), ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ನಾಡ ಚೇತನ ಪ್ರಶಸ್ತಿ, ಕರ್ನಾಟಕ ಕ್ರಾಂತಿರತ್ನ ಪ್ರಶಸ್ತಿ, ಸಾಹಿತ್ಯ ಕಲಾರತ್ನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ. 

ಕೆ.ಎಸ್. ಭಗವಾನ್

(14 Jul 1945)

ABOUT THE AUTHOR