About the Author

 

ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅವರು 1997ರಲ್ಲಿ ನಿವೃತ್ತರಾದರು. ಮುಂಬಯಿನಿಂದ ಪ್ರಕಟವಾಗುವ ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ ಅಂಕಣ ಬರೆಯುವಅವರು 'ಜೀವನ ಮತ್ತು ಸಾಹಿತ್ಯ ಅಂಕಣ'ದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗ್ಗೆ ಬರೆಯುತ್ತಾರೆ.

ಮಧುಸಂಚಯ, ಹುಚ್ಚ-ಹುಚ್ಚಿ, ನಾಲ್ಕು ಧ್ವನಿ, ಸಂಜೀವಿನಿ, ದಶಪದಿ, ಮ್ಯೂಸಿಂಗ್ (ಆಂಗ್ಲಭಾಷಾ ಕವನ ಸಂಗ್ರಹ), ವಚನಗಳು, ಏಳುಕವನ ಸಂಕಲನ ಕೃತಿಗಳು, ಇಂಟರ್ವ್ಯೂ, ಕನ್ನಡಿಯೊಳಗಿನ ಗಂಟು, ಸರಸ-ವಿರಸ (ಕವಿತೆ), ಧೃತರಾಷ್ಟ್ರ ಸಂತಾನ (ಕಥಾ ಸಂಕಲನ), ಶಬರಿ ಮುಂತಾದ ಹನ್ನೆರಡು ಏಕಾಂಕ ನಾಟಕಗಳು, ಪ್ರಜಾಪ್ರಭುತ್ವ, ಗುಂಡನ ಮದುವೆ, ಕಾದಿರುವಳು ಶಬರಿ, ವಿವೇಕ ಚೂಡಾಮಣಿ, ಸಂಭವಾಮಿ ಯುಗೇ ಯುಗೇ, ನರಕ (ನಾಟಕ), ವ್ಯಥೆಯಾದಳು ಹುಡುಗಿ (ಕಾದಂಬರಿ), ಶಾಂತಾರಾಮ ಪಿಕಳೆ (ಜೀವನ ಚರಿತ್ರೆ ), ನಾ ಕಂಡ ಬೇಂದ್ರೆ, ಸಮನ್ವಯಾಚಾರ್ಯ ಡಾ| ವಿ.ಕೃ.ಗೋಕಾಕ, ಜೀವನ ಮತ್ತು ಸಾಹಿತ್ಯ, ಬೇಂದ್ರೆ ಒಳನೋಟ, ಬೇಂದ್ರೆ ಸಮಗ್ರ ಕಾವ್ಯ ದರ್ಶನ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು.

ಜೀವಿ (ಜಿ.ವಿ. ಕುಲಕರ್ಣಿ)

(10 Jun 1937)