ಲೇಖಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಂಪನಹಳ್ಳಿಯವರು ಅಧ್ಯಾಪನ, ಜಾನಪದ ಅಧ್ಯಯನ, ಸಂಘಟನೆ ಮತ್ತು ಸಂವರ್ಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಬರಹಗಳಿಗೆ ಗಟ್ಟಿನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯ ಭದ್ರತೆಗೆ ಮೊದಲು ಗುರುತಿಸಿಕೊಂಡಿರುವುದು ಸತ್ವಶಾಲಿಯಾದ ಜನಪದ ಭೂಮಿ ಹಾಸನದೊಳಗೆ ಇರುತ್ತ ಅದನ್ನೊಂದು ಸಾಂಸ್ಕೃತಿಕ ಅನನ್ಯತೆಯಾಗಿ ನೋಡುವ ಮೂಲಕ ಅದರೊಳಗೆ ಅಡಗಿರುವ ಎಲ್ಲಾ ಜೀವನ ಶ್ರದ್ದೆಗಳನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಟುಕಾಟಕ್ಕೆ ಮೌಲಿಕತೆ ಇದೆ. - ಅವರು ಜಾನಪದ ಕ್ಷೇತ್ರದಲ್ಲಿ ದುಡಿದ ಮಹನೀಯರನ್ನು ಜ್ಞಾಪಿಸಿಕೊಳ್ಳುವ ನಡತೆಯನ್ನು ನೋಡಿದರೆ ಸಂಸ್ಕೃತಿಯನ್ನು ಕಟ್ಟುವ ಮನಸ್ಸಿನ ಒಬ್ಬ ಸಭ್ಯ, ಸಜ್ಜನ ಹಾಗೂ ಜೀವಪರ ನಿಲುವಿನ ವ್ಯಕ್ತಿ ಅದರೊಳಗೆ ಅಡಗಿ ಕುಳಿತಿರುವುದು ಗೊತ್ತಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ 'ಡಾ. ಗೊರೂರರ ಸಾಹಿತ್ಯ: ಮರು ಓದು' ಎಂಬ ಮಹತ್ವದ ಕೃತಿಯನ್ನು ಪ್ರಕಟಿಸಿದ್ದಾರೆ. ಖಂಡಿತ ಹಂಪನಹಳ್ಳಿಯವರು ಸಂಸ್ಕೃತಿ ವಿಚ್ಛಿದ್ರಕಾರಕ ಶಕ್ತಿಗಳ ಜೊತೆಗೆ ಸೇರಲಾರರು. ಅವರದೇನಿದ್ದರೂ ಸಂಸ್ಕೃತಿಯನ್ನು ಆಯ್ದ ಇಟ್ಟಿಗೆಗಳಿಂದ ಕಟ್ಟಬೇಕೆಂಬ ಹಂಬಲ, ಜಾನಪದ ಕರ್ನಾಟಕವನ್ನು ಆಮೂಲಕ ದೇಸೀ ಭಾರತವನ್ನು ಕಟ್ಟುವ ಮೂಲ ಚಿಂತನೆ ಇವರದಾಗಿದೆ.