"ಸುಗ್ಗಿಯು ಬಂದಿತು ಹಿಗ್ಗನು ತಂದಿತು
ನಮ್ಮಯ ನಾಡಿನ ಜನಕೆಲ್ಲ"
ಶಾಲಾ ಮಟ್ಟದ ಕನ್ನಡ ಪುಸ್ತಕದಲ್ಲಿ ಪದ್ಯವಾಗಿದ್ದ ಈ ಸುಗ್ಗಿ ಹಾಡನ್ನು ಕೇಳದವರಿಲ್ಲ. ಈ ಪದ್ಯದ ಕತೃ ದ.ರಾ ಬಳೂರಗಿ (ಡಿ.ಆರ್. ಬಳೂರಗಿ). ಬಳೂರಗಿಯವರು ಹನ್ನೊಂದು ವರ್ಷದ ಬಾಲಕನಾಗಿದ್ದ (1954) ಸಮಯದಲ್ಲಿ ಬರೆದ ಹಾಡಿದು.
ಮೂಲತಃ ವಿಜಯಪುರ ಜಿಲ್ಲೆ ಸಾರವಾಡದವರಾದ ಬಳೂರಗಿ ಅವರು ಜನಿಸಿದ್ದು 1943 ಜುಲೈ 20ರಂದು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ವಿಜಯಪುರದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮಾನವನ ವಿಕಾಸ ಎಂಬ ಸುದೀರ್ಘ ಬಾನುಲಿ ಸರಣಿ ನಿರ್ಮಿಸಿ, ಬಾರತದ ಹದಿನಾಲ್ಕು ಭಾಷೆಗಳಲ್ಲಿ ಪ್ರಸಾರ ಮಾಡಿದ್ದಾರೆ. ಬಾಲ ವಿಜ್ಞಾನ ಮಾಸಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾಗಿ, ವಿಜ್ಞಾನದೀಪ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಬಳೂರಗಿ ಅವರಿಗೆ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ, ರಾಜೀವಗಾಂಧಿ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯೂ ಸಂದಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಶಾಖ ಮತ್ತು ಶಬ್ಧ, ಪರಮಾಣು ನ್ಯೂಕ್ಲಿಯಸ್, ಬೆಳಕು, ಒತ್ತಡ, ಎನ್ರಿಕೊ ಫರ್ಮಿ, ಭಿನ್ನವಾಗಿ ಯೋಚಿಸಿ, ಹಗಲುಗನಸು ಮುಂತಾದವು.