'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ಎಂಬ ಗದ್ಯಬರಹಗಳ ಪುಸ್ತಕ ಪ್ರಕಟಿಸಿರುವ ರಶೀದ್ ಅವರ ಕಾದಂಬರಿ 'ಹೂವಿನ ಕೊಲ್ಲಿ'. ಇಂಗ್ಲೆಂಡ್ನ ಥಾಮೃನ್ ಫೌಂಡೇಶನ್ನಿಂದ ರೇಡಿಯೋ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಐರ್ಲೆಂಡಿಗೆ ಹೋಗಿ ಬಂದಿರುವ ರಶೀದ್ ಅವರು ಕೆಲಕಾಲ ಶಿಲ್ಲಾಂಗ್ ನಲ್ಲಿ ಆಕಾಶವಾಣಿಗಾಗಿ ಕೆಲಸ ಮಾಡಿದ್ದಾರೆ. ಲಂಕೇಶ್ ಪತ್ರಿಕೆಗೆ ’ಶಿಲ್ಲಾಂಗ್ ನಿಂದ ಪತ್ರ’ ಬರೆಯುತ್ತಿದ್ದ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ’ಕಾಲು ಚಕ್ರ’ ಎಂಬ ಅಂಕಣ ಬರೆಯುತ್ತಿದ್ದರು.