Poem

ತಮಾಷೆಗೂ ಹೆಣ್ಣಾಗದಿರು

ರಕ್ತ ಕಂಡರೆ ಹೆದರುವ
ಕೋಮಲೆಗೆ ಅನಿವಾರ್ಯ
ಮಂತ್ಲಿ ಪಿರಿಯಡ್ಸ್!

ಬ್ರೆಡ್-ಜಾಮ್ ಹೋಲಿಕೆಗೆ
ಲಘುವಾಗಿ ನಕ್ಕವಳೇ
ಇನ್ನೀಗ ಅಳಬೇಕು
ಹೆರಿಗೆ ಬೇನೆಯಾದರೂ
ಮುಗಿಯುತ್ತದೆ ಒಮ್ಮೆಗೇ!

ಇಪ್ಪತ್ತೆಂಟರ ಸೈಕಲ್
ಇಪ್ಪತ್ತಾರು- ಇಪ್ಪತ್ತನಾಲ್ಕಕ್ಕೇ
ಹಾಗಾದರೆ ವರ್ಷಕ್ಕೆಷ್ಟು!
ಟೆನ್ಷನ್ ಜಾಸ್ತಿಯಾದರೆ
ಬ್ಲೀಡಿಂಗೂ ಜಾಸ್ತಿ
ಪ್ಯಾಡುಗಳೂ
ಇರುಸುಮುರುಸುಗಳೂ
ನೋವು ಅಪಮಾನಗಳೂ..

ಐವತ್ತೋ ಐವತ್ಮೂರಕ್ಕೋ
ನಿಲ್ಲುತ್ತದಂತೆ
....
ಅಂತೆಕಂತೆಗಳಿಗೂ
ಆಚೆ ಬದುಕಿದೆ

ಮೆನೋಪಾಸ್ ತೀಕ್ಷ್ಣತೆಗೆ
ಡಿಪ್ರೆಶನ್ ಸುಸೈಡ್
ಉದಾಹರಣೆಗಳೂ ಉಂಟು!
ಈ ನಡುವೆ
ಯೂಟ್ರಸ್ ಒಂದಿಷ್ಟು
ಗಲಾಟೆ ಮಾಡಿದರೆ
ವಿಶ್ರಾಂತಿ ಬಯಸಿದರೆ
ಹಿಸ್ಟರೆಕ್ಟಮಿ ಸರ್ಜರಿ
ಹಾರ್ಮೋನ್ ಏರುಪೇರು!
....
ಮುಗಿವ ಕತೆಯಲ್ಲ!

ಸರ್ವಶಕ್ತನಾದ ದೇವನೇ
ತಮಾಷೆಗೂ ಹೆಣ್ಣಾಗದಿರು!

- ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು.

ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) ,

ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 

 

More About Author