Poem

ಶಿವರಾಮ ಕಾರಂತರ ನೆನೆದು...

ಕಡಲ ಗರ್ಭದಿ ಹುಟ್ಟಿ
ಬೆಳೆದ ಸಿಂಪಿಯ ಮುತ್ತು
ಹೊಳೆದಿಹುದು ಜಗದ ತುಂಬ
ಕಡಲತೀರದಿ ಜನಿಸಿ
ಬೆಳೆದೊಂದು ಜೀವ
ಬೆಳಗಿಹುದು ಜಗದ ಮನವ..

ಪೃಕೃತಿ ಮಡಿಲಿನ ಕೂಸು
ಶಿವ ಶಕ್ತಿ ಪಡೆದು
ರಾಮ ಬಾಣವನೆತ್ತಿ ಸಾಗಿ
ಕಾರ್ ಗುಣಗಳ ಮೆಟ್ಟಿ
ಅಂತ ಮಾಡುತಲದರ
ಬೆಳೆದರು ಶಿವರಾಮ ಕಾರಂತರಾಗಿ..!

ಅನ್ಯಾಯದೆದುರಿನಲಿ
ನ್ಯಾಯ ಹುಟ್ಟನು ಹಾಕಿ
ತೋರಿಹರು ಸತ್ಯತೆಯ ತೀರವ
ಪಾಶವೀ ಕೃತಿಗಳಿಗೆ
ಪಾಶಗಳ ತೊಡಿಸುತಲಿ
ಉಳಿಸಿಹರು ನಮ್ಮೀ ಪರಿಸರವ..

ಸಾಹಿತ್ಯ ದೀವಿಗೆಯ
ಹಿಡಿದು ಕೈಯಲಿ ನೀವು
ತೆರೆದಿರಿ ವಿಜ್ಞಾನ ಹೆಬ್ಬಾಗಿಲವ
ರಾಗ ತಾಳಗಳಿಂದ
ಯಕ್ಷಗಾನವ ಕುಣಿದು
ತೋರಿದಿರಿ ಜಗಕೆಲ್ಲ ಯಕ್ಷಲೋಕವ..!

ಬಿರುದುಗಳ ಹಂದರದಿ
ತಮ್ಮತನವೆತ್ತರಿಸಿ
ನಿಂದಿಹಿರಿ ಕೀರ್ತಿ ಪಾರಿಜಾತವಾಗಿ..
ಬಾಲವನದಲಿ ನಲಿವ
ಚಿಣ್ಣರೆದೆ ಹಿಗ್ಗಿಸುವ
ಜ್ಞಾನ ದಂಗಳ ಕಾರಂತಜ್ಜ ನಾಗಿ..!

ದುಷ್ಟ ಕಾಲನ ಕ್ರೂರ
ದೃಷ್ಟಿ ತಾಕಿತೆ ನಿಮಗೆ
ಸೇರಿದಿರಿ ನೀವು ಮರಳಿಮಣ್ಣಿಗೆ
ಮರೆಯಲಾರೆವು ನಿಮ್ಮ
ಅನುದಿನವು ಅನುಕ್ಷಣವು
ನಿಮ್ಮ ಚೇತನವಿರಲಿ ನಮ್ಮ ಬಾಳಿಗೆ..

- ಹಮೀದಾಬೇಗಂ ದೇಸಾಯಿ ಸಂಕೇಶ್ವರ

ಹಮೀದಾ ಬೇಗಂ ಬಾಬುರಾವ ದೇಸಾಯಿ

ಲೇಖಕಿ ಹಮೀದಾ ಬೇಗಂ ಬಾಬುರಾವ ದೇಸಾಯಿ ಮೂಲತಃ ಹುಕ್ಕೇರಿಯ ಯಮಕನಮರಡಿಯವರು. ಬಿಎಸ್ಸಿ, ಬಿ.ಇಡಿ ಪದವೀಧರರು. ವಿಜ್ಞಾನ ವಿಷಯದಲ್ಲಿ ಸಹ ಶಿಕ್ಷಕಿಯಾಗಿ  ಒಟ್ಟು 38 ವರ್ಷಗಳ ಸೇವೆ ನಂತರ ಈಗ ನಿವೃತ್ತರು. 

ಕೃತಿಗಳು : ನುಡಿಮುತ್ತುಗಳು ಪುಸ್ತಿಕೆ (ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನದಿಂದ ಆಯ್ದ ನುಡಿಗಳು), ಮನೋಗೀತೆ (ಕವನ ಸಂಕಲನ), ವಚನಾಂಜಲಿ (ಷಟ್ಪದಿಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರಿಂದ ಪುರಸ್ಕಾರ), ವಿಜ್ಞಾನ ವೈಚಾರಿಕ ಅಂಕಣ ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಶಸ್ತಿ-ಪುರಸ್ಕಾರಗಳು: ಉತ್ತಮ ವಿಜ್ಞಾನ ಸಂಘಟನಾ ಶಿಕ್ಷಕಿ (1998), ಹುಕ್ಕೇರಿ ತಾಲೂಕು ಮಟ್ಟದ ಇಂದಿರಾ ಪ್ರಿಯದರ್ಶಿನಿ ಅತ್ಯುತ್ತಮ ಶಿಕ್ಷಕಿ (2001), ಅತ್ಯುತ್ತಮ ಜನಗಣತಿ ಸೇವೆಗಾಗಿ ಭಾರತ ಸರ್ಕಾರದಿಂದ ಸನ್ಮಾನ ಪತ್ರ ಮತ್ತು ರಜತ ಪದಕ,  ಡಾ.ಸ.ಜ. ನಾಗಲೋತಿಮಠ ಪ್ರಶಸ್ತಿ ಮತ್ತು ಉತ್ತಮ ವಿಜ್ಞಾನ ಪ್ರಸಾರ ಸೇವೆಗಾಗಿ 2006ರಲ್ಲಿ ಜಿಲ್ಲಾ ಮಟ್ಟದಲ್ಲಿ, ಅತ್ಯುತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಭಾರತ ಸರ್ಕಾರದಿಂದ 2007-08ನೇ ಸಾಲಿಗಾಗಿ, ರಾಜ್ಯ ಮಟ್ಟದ ಕಾವ್ಯಸಿರಿ ಪ್ರಶಸ್ತಿ, ರಾಜ್ಯಮಟ್ಟದ ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ ಲಭಿಸಿವೆ. 

More About Author