ಲೇಖಕ, ಕವಿ, ಕತೆಗಾರ ಶ್ರೀನಿವಾಸ ಜಾಲವಾದಿ ಅವರು ಜನಿಸಿದ್ದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ. ಇವರ ಸ್ವಂತ ಊರು ಜಾಲವಾದಿ. ವಿವಿಧ ಧಾರಾವಾಹಿಗಳ ಹಾಗೂ ನಾಟಕಗಳ ವಿಮರ್ಶಕರು, ಆಕಾಶವಾಣಿ ಕಲಾವಿದರು ಕೂಡ ಹೌದು. ಪ್ರಸ್ತುತ ಅವರು ಬರೆದಿರುವ ‘ಸಾಠಕಬರ್‌ದ ಸುಂದರಿಯರು’ ಕತೆ ನಿಮ್ಮ ಓದಿಗಾಗಿ.
‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು...ಯಾವ ಬೃಂದಾವನವು...' ಅಡಿಗರ ಹಾಡು ಹಾಡುತ್ತಿದ್ದ ಮಾಯಾವತಿಯನ್ನೇ ದಿಟ್ಟಿಸುತ್ತಿದ್ದೆ. ಹಾಡಿನ ಲಯ-ಮಾಧುರ್ಯ, ಎಲ್ಲಕ್ಕೂ ಸಿರಿಕಂಠದ ಒಡತಿ ಮನಸೆಳೆದಿದ್ದಳು. ಆಗಲೇ ಬಂದು ಎಚ್ಚರಿಸಿದ ಶಂಕರ್ 'ಏನು ಗುರು ಇವತ್ತು ‘ಸಾಠಖಬರ್' ನೋಡೋಣವೆಂದು ಹೇಳಿದ್ದಿ, ರ‍್ತೇನೂ?' ಎಂದು.
ಆಗಲೇ ನನಗೆ ನೆನಪಾದದು ಗೆಳೆಯರಿಗೆಲ್ಲ್ಲಾ ಮಾತು ಕೊಟ್ಟಿದ್ದು ದುರಂತದಲ್ಲಿ ಅದ್ದಿ ತೆಗೆದ ಗೋರಿಗಳನ್ನು ನೋಡೋಣವೆಂದು ಸಂಗಮೇಶ, ಸುಶೀಲೇಂದ್ರ, ಮೇಲುಪ್ಪರಗಿಮಠ, ಶಂಕರಗೆ ಹೇಳಿದ್ದು. ಥಟ್ಟನೇ ವಾಚ್ ನೋಡಿಕೊಂಡೆ ಸಂಜೆ ಐದರ ಸುಳಿವು ಕಾಣುತ್ತಿತ್ತು.
‘ಸರಿ ನಡಿ ಶಂಕರ, ಎಲ್ಲಾ ಸೇರಿ ಸಾಠಖಬರ್‌ಗೆ ಹೋಗೋಣ' ಎಂದು ಮಾಯಾವತಿಯ ಮೇಲಿನ ದೃಷ್ಟಿ ಕೀಳಲಾಗದೆ ಎದ್ದೆ.
ಮಾಯಾವತಿ ಆಸೆಗಣ ್ಣನಿಂದ ನೋಡಿದಳು. ಜೇನಿನಲ್ಲಿ ಅದ್ದಿ ತೆಗೆದಿದ್ದಂತಹ ತುಟಿಗಳ ಚಲನೆ ನಡದೇ ಇತ್ತು. ನವರಸಪುರದ ಸಮೀಪ ಇರುವ ಅಫಜಲಖಾನನ ರಾಣ ಯರ ವಿಶ್ರಾಂತಿ ಧಾಮಕ್ಕೆ ಅಂತೂ ಹೊರಟಿತು ನಮ್ಮ ಟೋಳಿ.
‘ಅಲ್ಲಾ ಇವ್ನ ಹೆತ್ತಿ, ಎಲ್ಲಾ ಸುಂದರಿಯರನ್ನ ಒಮ್ಮೆ ಹಿಡ್ದು ಕೊಂದಾನAದ್ರ, ಎಂಥಾ ಕಟಕ ಇದ್ದಿರಬೇಕು ಆ ಖಾನ್‌ಸಾಹೇಬ?' ಎಂದು ಮಾತಿಗೆ ಶುರು ಹಚ್ಚಿದ ಶಂಕ್ರೂ. ಪಟಪಟನೆ ಅರಳು ಹುರಿದಂತೆ ಮಾತಾಡುವ ಈ ಲುಟುಪುಟು ಆಸಾಮಿ ಶಂಕ್ರೂ ಅಂದರೆ ನನಗೆ ಬಹಳ ಪ್ರೀತಿ!
‘ಅಲ್ಲೋ ತಮ್ಮ, ಅಫಜಲ್ ಖಾನನಂಗೆ ನಿಂಗೂ ಭಾಳಮಂದಿ 'ರಾಣ 'ಯರು ಇದ್ರಂದ್ರ ನಿಂಗೂ ಅವ್ನ ಸಮಸ್ಯಾ ಅರ್ಥ ಆಕ್ಕಿತ್ತೇಳು. ಈಗ ಇರಕ್ಕೆ ಒಬ್ಬಕಿ ಹ್ಯಾಣ ್ತ ಅದಾಳು, ಏನು ಮಾಡಕ ಆದೀತು? ಎಂದು ಇರುವ ವಾಸ್ತವಿಕ ಸಮಸ್ಯೆಗೆ ಕನ್ನಡಿ ಹಿಡಿದ ಬಸವರಾಜಸ್ವಾಮಿ.
‘ಹೌಂದು ಇದು ಭೀ ಸಹೀ ಬಾತ್ ಹೈ' ಎಂದು ಅದಕ್ಕೆ 'ಹೂಂ' ಗುಟ್ಟಿದ ಮೈನುದ್ದೀನ್. ನಾನು ಸುಮ್ಮನೆ ಹೊಂಟಿದ್ದೆ, ಕಲ್ಲು ಮುಳ್ಳುಗಳ ಹಾದಿ ಎದುರಾಗಿತ್ತು. ಕಾಲಲ್ಲಿ ಹೇಸಿಗೆ ಬೇರೆ, ಮನದಲ್ಲಿ ಆಕ್ರಂದನ. ಆದಿಲ್‌ಶಾಹಿಯ ರಂಭಾಳ ಅಮರ ಪ್ರೇಮದ ಗೋಳಗುಮ್ಮಟದ ಕಥೆ ಒಂದೆಡೆಯಾದರೇ ಈ ಅಲಿ ಆದಿಲ್ ಶಾಹಿಯ ಸೇನಾಧಿಪತಿ ಅಜಾನುಬಾಹು ಅಫ್ಜಲ್‌ಖಾನನ ಸ್ವಾರ್ಥ ಕಥೆ ಇನ್ನೊಂದೆಡೆ. ಮನಸ್ಸು ಎರಡನ್ನೂ ತೂಗಿ ನೋಡುತ್ತಿತ್ತು.
‘ಯಾಕಪಾ ಗುರು, ಮೊನ್ನೆ ಹಿಮಾಲಯಕ್ಕ ಹೋಗಿ ಬಂದಾಗಿನ ಹಿಡದು ಮಂಕ ಆಗಿದೆಲ್ಲಾ, ಏನು ಮೌನವೃತ ಹಿಡಿದೋ ಹ್ಯಾಂಗೋ’ ಎಂದು ಮತ್ತೆ ನನ್ನನ್ನು ಕೆಣಕಿದ ಶಂಕರ.
ಅವನೆಡೆ ನೋಡಿ ವಿಷಾದದ ನಗೆ ನಕ್ಕೆ.
ಮತ್ತೆ ಏನೋ ಹೇಳಲು ಬಾಯ್ದೆರೆದ ಅವನಿಗೆ “ಶ್”! ಎಂದAದು ಸುಮ್ಮನಿರಿಸಿದೆ. ಅಷ್ಟೊತ್ತಿಗಾಗಲೇ ಜಾಲಿ ಮುಳ್ಳುಗಳ ‘ಬನ’ ದಾಟಿ ಮುಂದುವರೆದಿತ್ತು ನಮ್ಮ ಟೀಮು. ದಾರಿಯಲ್ಲಿ ಬಿದ್ದಿದ್ದ ಬಾರಿಹಣ್ಣುಗಳನ್ನು ಆರಿಸಿಕೊಂಡು ತಿನ್ನುತ್ತಿದ್ದ ಕುಂಬಾರ ಕುಟುಂ ಕುಟುಂ ಎನಿಸಿದ.
ಅಷ್ಟರಲ್ಲಿ ಒಮ್ಮಿಂದೊಮ್ಮೆಲೇ ವಿಕಾರವಾಗಿ ಹಕ್ಕಿಯೊಂದು ಕೂಗಿ ಎದೆ ಧಡಲ್.. ಢಕ್ ಎಂದಿತು. ನೋಡುತ್ತೇನೆ ಹರಟುತ್ತಿದ್ದ ಗೆಳೆಯರ ಮುಖದ ಮೇಲೆ ಪ್ರೇತ ಕಳೆ!
‘ಹಂ! ಅಲ್ಲೇ ಐತಿ ನೋಡ್ರಿ, ನಾ ಒಂದ ಸಲ ಬಂದಿದ್ದೆ ಆದ್ರ ಈಗ ಜರಾ ದಾರಿ ತಪ್ಪಿತು, ನೋಡ್ರಿ... ಆದರ ವ್ಯಾಳ್ಯಾ ಮಾತ್ರ ಭಾಳ ಆಯ್ತು’ ಎಂದು ಬಸವರಾಜ ಚಡಪಡಿಸಿದ.
ನೋಡುತ್ತೇನೆ, ಮಾವಿನ ತೋಪಿನ ಮಧ್ಯೆ ಎತ್ತರದ ವೇದಿಕೆ, ಅದರ ಮೇಲೆ ಗೋರಿಗಳ ರಾಶಿ! ಬಾಯ ಪಸೆ ಆರಿತು. ನೀರಿಗಾಗಿ ಕಾತರಿಸಿದೆ... ‘ಯಾಕ ಗುರು ಚಕ್ರ ಬಂದAಗಾಯ್ತೆನು? ಜರಾ ನೀರ ಕೊಡ್ರಿ ನೀರು’ ಎಂದು ಶಂಕ್ರೂ ವಾಟರ್ ಬ್ಯಾಗ್ ಬಗ್ಗಿಸಿ ನನ್ನ ಬಾಯಲ್ಲಿ ನೀರು ಸುರುವಿದ.
‘ಎಲ್ಲ ಸರಿ ಉಂಟು ಮಾರಾಯಾ, ಕಾಳಜಿ ಮಾಡಬ್ಯಾಡ’ ಎಂದೆ ಸಣ್ಣದಾಗಿ ಅವನಿಗೆ ದರಿದ್ರ ಸರ್ಕಾರದ ನಿಷ್ಕಾಳಜಿ, ವೇದಿಕೆ ಎಲ್ಲಾ ಹಾಳಾಗಿದೆ. ಗೋರಿಗಳನ್ನು ಕೆಲವರು ಒಡೆದಿದ್ದಾರೆ, ನಿಧಿ ಆಶೆಗಾಗಿ ಇರಬೇಕು.. ಅಲ್ಲೇ ಪಕ್ಕದಲ್ಲಿಯೇ ಹೊರಳಿ ನೋಡಿದೆ, ಕಮಾನು ಕಮಾನು ಭಾವಿ, ನೀರೆಲ್ಲಾ ಪಾಚಿಗಟ್ಟಿದೆ.
ನೋಡು ನೋಡುತ್ತಿದ್ದಂತೆ ಕತ್ತಲೆ ಆವರಿಸಿತು.
‘ನಡ್ರೆಪೋ ನಡ್ರಿ ಇನ್ನ, ಇಲ್ಲಿರುವುದು ಭಾರಿ ಡೇಂಜರು, ಏನಪಾ ಸ್ಟ್ರೇಂಜರು! ಎಂದು ಪ್ರಾಸ ಪ್ರಿಯ ಕುಂಬಾರ ಗುಮ್ಮಿದ.
‘ಹಂ, ಮತ್ತೆ ಬೇಕಾದ್ರ ನಾಳೆ ಹಗಲ್ಹೊತ್ತಿನ್ಯಾಗ ಜಲ್ದಿನೇ ಬರೂಣಂತ ರ‍್ರಿ ರ‍್ರಿ ಎಲ್ಲರೂ..’ ನಾವು ಎಳೆಯರು, ನಾವು ಗೆಳೆಯರು ಹೃದಯ ಹೂವಿನ ಹಂದರಾ ನಾಳೆ ನಾವೇ ನಾಡ ಹಿರಿಯರು.. ಎಂದು ಹಾಡುತ್ತಾ ಹೊರಟ ಬಸವರಾಜಗೆ ಹೇಳಿದೆ.
‘ಸ್ವಾಮಿ ನಂಗ ಇಲ್ಲಿ ಜರಾ ಕೆಲಸ ಐತಿ, ನೀವೆಲ್ಲಾ ಹೋಗ್ರಿ ನಾ ಬರ್ತಿನಿ ಆಮ್ಯಾಲ’ ಅಂತ. ಧಡಕ್ಕನೇ ಎಲ್ಲರೂ ನನ್ನ ಮಾರಿ ಮಿಕಿ ಮಿಕಿ ನೋಡ್ಲಿಕ್ಕೆ ಶುರು ಮಾಡಿದ್ರು.
‘ಅಲ್ಲಾ ಇಂಥಾ ಕತ್ತಲ್ಯಾಗ, ಇಂಥಾ ಜಾಗಾದಾಗ ನಿನ್ನ ಒಬ್ಬವ್ನೆ ನಾವು ಬಿಟ್ಟು ಹೋಗುದಿಲ್ಲಾ’ ಅಂದ ಶಂಕ್ರೂ.
ಹೌದು ಅಂತ ಎಲ್ಲರೂ ಅದಕ್ಕೆ ಸೂರು ಹಿಡಿದ್ರು,
‘ಏನು ಯಾವಕ್ಕೇರೇ, ಇಲ್ಲಿ ಭೆಟ್ಟಿ ಆಗ್ಲಿಕ್ಕೆ ಬರ್ತಿನಿ ಅಂತ ಅಂದಾಳೇನು, ನಿನ್ನ ಲವ್ಹರ್’ ಎಂದು ತುಂಟನಗೆ ನಕ್ಕ ಬದಾಮಿ.
‘ಇಲ್ಲಾ ಬ್ಯಾರೆ ಕೆಲ್ಸಾ ಐತಿ, ಪ್ಲೀಸ್ ಲೀವ್ ಮೀ ಅಲೋನ್’ ಎಂದು ಅವರಿಗೆಲ್ಲಾ ಹೇಳಿದವನೇ ಹೋಗಿಬಿಟ್ಟೆ,
ಅವರೆಲ್ಲಾ ಆಶ್ರ‍್ಯಪಟ್ಟು ಅನಿವಾರ್ಯವಾಗಿ ಹಿಂದಿರುಗಿದರೇನೋ!
*** *** ***
ಗಾಢಾಂಧಕಾರ. ಕೈಯಲ್ಲಿದ್ದ ಕಡ್ಡಿಯಿಂದ ಗೋಲ್ಡ್ಫ್ಲೇಕ್ ಹಚ್ಚಿಕೊಂಡೆ, ಧೂಮ್ರವಲಯ ಹಚ್ಚಿಸುತ್ತ ಬಿರಬಿರನೆ ಬಾವಿಯೆಡೆಗೆ ಸಾಗಿದೆ. ಕಾಲಲ್ಲಿ ಏನೋ ಸಳಸಳ ಸರಿದ ಅನುಭವ. ಎದುರು ನೋಡುತ್ತೇನೆ, ಬಾವಾಜಿಯೊಬ್ಬ ಗಹಗಹಿಸುತ್ತಿದ್ದಾನೆ.
ಮೊಳಕಾಲಿನವರೆಗೆ ಬಿಳಯ ನೀಳವಾದ ದಾಡಿ, ಕೆಂಡದುAಡೆಗಳನ್ನು ಕಾರುವ ಕಣ ್ಣನ ಭಾವಜಿ.. ಚಿಟ್ಟನೇ ಚೀರುವವನೇ.. ‘ಉಶ್!’ ಎಂದ ನನ್ನೆಡೆ ನೋಡಿ ‘ಇಲ್ಯಾಕ ಬಂದಿಯೋ ಹಲಾಲ್‌ಖೋರ್... ಖಾನ್‌ಸಾಬ್ ದರ್ಬಾರದಾಗ ನಿಂದೇನೊ ಕೆಲಸ? ಗುರುಗುಟ್ಟಿದ ಮುದುಕ.
‘ನಂಗೆ.. ನಂಗೆ.. ಕ್ಷಮಿಸಿ.. ಈ ಖಾನ್‌ಸಾಬ್‌ನ ರಂಗು ರಂಗಿನ ಇತಿಹಾಸವನ್ನು ಅಧ್ಯಯನ ಮಾಡಲು ಬಂದಿದ್ದೆ..’ ಎಂದೆ ತಡವರಿಸುತ್ತಾ.
‘ಓಹೋ! ನಿನಗೆ ಇತಿಹಾಸ ಬೇರೆ ಬೇಕಾ? ಇಲ್ಲಿಯ ಧೂಳಿಕಣ.. ಪ್ರತಿಯೊಂದು ಧೂಳಿ ಕಣಕ್ಕೂ ಗೊತ್ತಿದೆ.. ಖಾನ್‌ಸಾಬ್‌ನ ವೈಭವ.. ಅಂತಸ್ತು... ನಿನಗೆ ಆ ವೈಭವದ ಇತಿಹಾಸ ಪರಿಚಯ ಬೇಕಾ? ಯಾಕೆ ಬೇಕು? ಇಲ್ಲಿಯ ರಾಣ ಯರ ಜೀವನಕ್ಕೆ ಸಿಂಪಡಿಸಲು ಅಮೃತ ತಂದಿದ್ದಿಯಾ? ಬೇವಖೂಫ್... ಯಾ ಖುದಾ ಪರ್ವದಿಗಾರ್!’ ಅಕ್ಷರಶಃ ಬೆಂಕಿಯನ್ನೇ ಉಗುಳಿದ ಆ ಬಾವಾಜಿ. ಅದಕ್ಕೆ ನಾನು ತತ್ತರಿಸಿ ಹೋದೆ.. ಮೈ ಬೆವೆತೆ ತೊಪ್ಪೆಯಾದೆ.. ಅಲ್ಲಿ ನಿಲ್ಲದೆ ಗೋರಿಗಳ ಕಡೆಗೆ ಧಾವಿಸಿದೆ..
ಅಲ್ಲಿಯ ದೃಶ್ಯ ನೋಡಿ ದಂಗು ಬಡಿದು ಹೋದೆ. ಸಾಯಂಕಾಲ ನೋಡಿದ ಹರಕು ಮುರುಕು ವೇದಿಕೆ, ಮುಸುಕು ಮುಸುಕಾದ ಗೋರಿಗಳು ಅಲ್ಲಿರಲಿಲ್ಲ. ನಂದನವನೇ ಅಲ್ಲಿ ಸೃಷ್ಟಿಯಾಗಿತ್ತು. ಸುಂದರ ಅರವತ್ನಾಲ್ಕು ಗೋರಿಗಳು. ಹಾಲಿನ ಕೆನೆಯಂತಹ ದೀಪದ ಬೆಳಕು, ಕಾರಂಜಿ.. ಇಂಪಾದ ಹಿನ್ನೆಲೆ ಶಾಸ್ತ್ರೀಯ ಗಾಯನ..
ಏನಿದು ನಾನು ನೋಡುತ್ತಿರುವುದು ಕನಸೆ ಎಂದು ಮೈ ಚಿವುಟಿಕೊಂಡು ನೋಡಿದೆ. ಊಹುಂ, ನಿಜಕ್ಕೂ ಅಲ್ಲಿ ದೀಪದ ಬೆಳಕಿನಲ್ಲಿ ವಜ್ರ ವೈಢರ‍್ಯಗಳ ರಾಶಿಯೇ ಬಿದ್ದಿದೆ.
ಅಷ್ಟರಲ್ಲಿ ಕಿಲಕಿಲನೇ ನಕ್ಕಂತೆ ಶಬ್ದ ಕೇಳಿ ಅಚ್ಚರಿಯಿಂದ ಹೊರಳಿದೆ... ಮೊದಲನೆಯ ಗೋರಿ ಸಾಲುಗಳಿಂದ ಧೂಪದ ಹೊಗೆ ಕಾಣ ಸಿತು.. ಹಾಗೇ ಕಣ್ಣರಳಿಸಿ ನೋಡಿದೆ.. ಸುಂದರ ದಂತದ ಬೊಂಬೆ ನಗುತ್ತಾ ನಿಂತಿದೆ.
ಹಾಲು ಕೆನೆಬಣ್ಣದ.. ಹಣೆಯ ಮೇಲೆ ಮುಂಗುರುಳಿನ ಲಾಲಿತ್ಯದ, ಅಗಾಧ ಕೇಶರಾಶಿಯ ಸುಂದರಿ.. ಬರೀ ಸುಂದರಿಯಲ್ಲ ಸುರಸುಂದರಿ ನಸುನಗುತ್ತಿದ್ದಾಳೆ..
‘ಅರೆ ಕತೆಗಾರಾ.. ಬಾ ಅಲ್ಲೇಕೆ ಹಾಗೆ ನಿಂತಿರುವೆ. ನಿನಗಾಗಿ ನಾನು ಬಂದಿರುವೆ!’ ಎಂದು ಉಲಿದಳು ಸುಂದರಿ.
‘ಆಂ’ ಎಂದೆ.
‘ಹೂA! ನಿನ್ನ ಕಥೆಗಾರಿಕೆಗೆ ಸೋತಿದ್ದೇನೆ.. ನನ್ನಿದಿಷ್ಟು ಕಥೆ ಆಲಿಸಲಾರೆಯಾ?’ ಧೈರ್ಯ ಮಾಡಿ ಅವಳ ಹತ್ತಿರ ಸಾಗಿದೆ, ಗೋರಿಯಿಂದ ಎದ್ದು ಬಂದ ಆ ಸುಂದರಿ ಮುಗುಳ್ನಕ್ಕು ಸ್ವಾಗತಿಸಿದಳು.
ಅಲ್ಲಿ ಹೋದವನೇ ಇದ್ದ ಬಿದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿ ಕೇಳಿದೆ..
‘ನಿಮ್ಮದಲ್ಲ ರಾಣ ಯರದು ಎಂಥಾ ಕಥೆ ಏನು ವ್ಯಥೆ.. ದಯಮಾಡಿ ನನಗೆ ಹೇಳುತ್ತೀಯಾ?’ ಎಂದು.
‘ಅದಕ್ಕೇ ನಿನಗೆ ಕರದೆನಲ್ಲೋ ಕಥೆಗಾರಾ..’ ಎಂದು ಕಿಲಕಿಲನೇ ನಕ್ಕು ರಾಣ ಒಮ್ಮೆಲೇ ಗಂಭೀರವಾದಳು.
‘ಆದಿಲ್‌ಶಾಹಿ ರಾಜರ ಗಂಡೆದೆ ಸೇನಾಧಿಪತಿ ಅಫಜಲ್‌ಖಾನ್ ನವಾಬರ ಪ್ರೀತಿಯ ರಾಣ ನಾನು. ಸ್ವರ್ಗದಲ್ಲಿದ್ದ ಅಮೃತವನ್ನೇ ತಂದು ಅದರಲ್ಲಿಯೇ ತನ್ನ ಪ್ರೀತಿಯ ಧಾರೆ ಎರೆದಿದ್ದ ನನ್ನ ಪತಿ-ಪ್ರಿಯತಮ ಎಲ್ಲಾ ಆಗಿದ್ದ ಅಫಜಲ್! ನನಗಾಗಿ ತನ್ನ ಪ್ರಾಣವನ್ನೇ ಧಾರೆ ಎರೆಯುವುದಾಗಿ ಮಾತುಕೊಟ್ಟಿದ್ದ ‘ಅಫೀ’ ಕೊನೆಗೆ ನನ್ನ ಪ್ರಾಣವನ್ನೇ ಕಿತ್ಕೊಂಡಿದ್ದು ಮಾತ್ರ ನನಗೆ ಬಹಳ ವಿಪರ್ಯಾಸವಾಗಿ ಕಂಡಿತು. ನಾನು ಅತ್ಯಂತ ಸುಂದರಿಯಾಗಿದ್ದೆ. ಸಾಮಾನ್ಯ ಜನರೆಲ್ಲ ನನ್ನನ್ನು ಒಂದು ಬಾರಿ ಕಂಡರೇ ಸಾಕು ತಮ್ಮ ಜನ್ಮವೇ ಸಾರ್ಥಕವೆಂದುಕೊAಡಿದ್ದ ಕಾಲವದು. ಅಪೀ ಜಗತ್ತಿನಲ್ಲಿಯ ಎಲ್ಲ ಶ್ರೇಷ್ಠವಾಗಿದ್ದನ್ನು ನನಗಾಗಿ ನಮ್ಮೆಲ್ಲರಿಗಾಗಿ ತಂದುಕೊಟ್ಟಿದ್ದ. ಅವನು ಆಜಾನುಬಾಹು ಒರಟು ವ್ಯಕ್ತಿತ್ವವೇ ನನ್ನನ್ನು ಮೋಡಿ ಮಾಡಿದ್ದು.. ವಾಹ್, ಎಂಥಾ ಸೊಗಸಾದ ದಿನಗಳವು! ಬೇರೆಯವರು ಕಂಡು ಕರುಬಿ ಪ್ರಾಣ ಬಿಟ್ಟಿರಬೇಕು. ಅಂತಹ ಸುಂದರ ದಿನಗಳು! ಕೇಳುತ್ತಿದ್ದಿಯೇ ಕಥೆಗಾರಾ? ನಾನು ಇದು ಕಡೆಯತನಕ.. ಜಗತ್ತು ಇರುವತನ ನನಗೆ ದೊರೆಯುವ ಸುಖ ಎಂಬ ಹಮ್ಮಿನಲ್ಲಿದ್ದೆ!
ಆಗ.. ಆಗಲೇ ಅಪ್ಪಳಿಸಿತು ನೋಡು ಉಲ್ಕೆ ನನ್ನ ತಲೆಯ ಮೇಲೆ, ನಮ್ಮ ಅರಮನೆಯ ಸಮೀಪವೇ ಬಾವಿ ತೋಡಿಸಿ, ವಿಶಾಲವಾದ ಕಟ್ಟೆ ಕಟ್ಟಿಸುತ್ತಿದ್ದಾನೆ ನನ್ನ ಜಹಾಪನಾ!
ಇದೊಂದು ರಾಣ ಯರ ಉದ್ಯಾನವನ ಎಂದು ತಿಳಿದಿದ್ದೆ! ಮುತ್ತು, ರತ್ನ, ವಜ್ರ, ವೈಢೂರ್ಯಗಳ ರಾಶಿಗಳನ್ನೇ ಚೆಲ್ಲಿದ್ದ ಇಲ್ಲಿ ನಾನು ಚಿರನಿದ್ರೆಗೈಯುವೆನೆಂದು ಎಲ್ಲಿ ತಿಳಿದಿದ್ದೆ’ ಎಂದ ರಾಣ ನಕ್ಕಳು.
‘ಈಗ ಮುಂದಿನದನ್ನು ನಾನು ಹೇಳುತ್ತೇನೆ’ ಧ್ವನಿ ಬಂದತ್ತ ನೋಡಿದೆ. ಮತ್ತೊಬ್ಬ ಸುಂದರಿ ಗೋರಿಯಿಂದ ಏಳುತ್ತಿದ್ದಾಳೆ. ಮುತ್ತಿನ ದಂತ ಪಂಕ್ತಿ ಸೂಸಿ ಮುಗುಳ್ನಗೆಯ ಬೀರುತ್ತಿದ್ದಾಳೆ.
‘ಆಯಾಸಗೊಂಡಿರುವೆಯ ಕಥೆಗರಾ? ಕುಡಿಯಲು ಅಮೃತ ಬೇಕೆ?’ ಎಂದಳು ರಾಣ .
ಈ ಎಲ್ಲಾ ವಿದ್ಯಮಾನಗಳಿಂದ ದಿಗ್ಭ್ರಮೆಗೊಂಡಿದ್ದ ನಾನು ಸಾವರಿಸಿಕೊಂಡು ಹೇಳಿದೆ.
‘ಇಲ್ಲಾ.. ಇಲ್ಲಾ ರಾಣ ಸಾಹೇಬಾ ತಮ್ಮ ಕಥೆ ಮುಂದುವರಿಯಲಿ’ ಎಂದು.
‘ನನ್ನ ಪ್ರೀತಿಯ ದೊರೆ ಯಾಕೆ ಕಟ್ಟೆ ಕಟ್ಟಿಸುತ್ತಿದ್ದಾನೆ ಎಂದು ಅವನು ನನ್ನ ಅರಮನೆಗೆ ಬಂದಾಗ ಕೇಳಬೇಕೆಂದೆ. ಅಷ್ಟರಲ್ಲಿ ನನ್ನ ಸೆವಕಿಯಿಂದ ನನಗೆ ನಿಜಸಂಗತಿ ತಿಳಿಯಿತು. ದಿಲ್ಲಿ ದೊರೆ ಔರಂಗಜೇಬ ನವಾಬನ ಕಿರಿಕಿರಿ ತಾಳದೆ, ನನ್ನ ದೊರೆಯ ದೊರೆ ತ್ರೀವ್ರ ತೊಂದರೆಗೆ ಒಳಗಾಗಿದ್ದ, ಇತ್ತ ಕಡೆಗೆ ಮರಾಠಾ ಪ್ರಾಬಲ್ಯದ ಚಾಣಾಕ್ಷ ದೊರೆ ಶಿವಾಜಿ ಮಹಾರಾಜನ ದಾಳಿ. ಹೀಗೆ ಇಕ್ಕಟ್ಟಿಗೆ ಸಿಲುಕಿದ ದೊರೆ ನನ್ನ 'ಅಫಿ'ಯನ್ನು ಕರೆಯಿಸಿ, ಶಿವಾಜಿ ಮಹಾರಾಜನ ಮೇಲೆ ದಾಳಿ ಮಾಡಲು ತಿಳಿಸಿದ.
ನನ್ನ ದೊರೆ ಅಫಜಲ್‌ಖಾನ್ ಮಹಾನ್ ನಿಷ್ಠೆಯ ಮನುಷ್ಯ. ರಾಜನಿಗೆ ಮಾತು ಕೊಟ್ಟು ಬಂದ 'ಅಫೀ' ಮಾಡಿದ ಮೊದಲ ಕೆಲಸವೇನು ಗೊತ್ತೆ ? ತನ್ನ ಜ್ಯೋತಿಷ್ಯ ಗುರುವನ್ನು ಕಂಡಿದ್ದು!
ಇಷ್ಟರಲ್ಲಿ ಕಿಲಕಿಲನೆ ನಕ್ಕಿತೊಂದು ವ್ಯಕ್ತಿ.
ತಿರುಗಿ ನೋಡಿದೆ. ಗೋರಿಗಳ ನಾಲ್ಕನೇಯ ಸಾಲಿನ ಮೂರನೇಯ ಸುಂದರಿ ನಿಜಕ್ಕೂ ಅಪ್ಸರೆಯೇ ಸರಿ ಆಕೆ! ಆ ಅಪ್ರತಿಮ ಚೆಲುವೆ ಶುರು ಮಾಡಿದಳು..
‘ಮುಂದಿನ ಕಥೆ ನಾನು ಹೇಳಿದರೆ ನಿನಗೆ ಬೇಜಾರಿಲ್ಲ ತಾನೆ? ಈ ಕಥೆ ಹೇಳುವ ಹಕ್ಕು ನನಗೂ ಇದೆ. ಯಾಕೆ ಗೊತ್ತಾ ಕಥೆಗಾರಾ? ಅಫೀಯ ಅತ್ಯಂತ ಪ್ರೀತಿಯ ಮುದ್ದಿನ ರಾಣ ಯಾಗಿದ್ದೆ ನಾನು. ನಾನು ಅತೀ ಕಿರಿಯ ರಾಣ ಕೂಡಾ, ಹೀಗಾಗಿ ನನ್ನ ಮೇಲೆ ಅಫೀಯ ಪ್ರೀತಿ ಸಹಜವಲ್ಲವೆ? ನೀನೇ ಹೇಳು, ನೀವು ಪುರುಷರು, ಹೇಗೆ ಅಂದರೆ ಅತೀ ಎಳಸು ಇದ್ದಷ್ಟು ನಿಮಗೆ ಹೆಚ್ಚು ಮಮಕಾರ ಅಲ್ಲವೆ? ಪುರುಷನಿಗೆ ಎಂಬತ್ತು ವಯಸ್ಸಾದರೂ ಅವನಿಗೂ ಕೂಡ ಹದಿನಾರರ ಸುರಸುಂದರಿಯ ಮೇಲೆಯೇ ಕಣ್ಣು ಅಲ್ಲವೆ? ಎಂದು ಕುಟುಕಿದಳು.
‘ಪಾಪ! ಇರಲಿ ನಿನ್ನದೇನು ತಪ್ಪು ಕಥೆ ಹೇಳ್ತಿನಿ ಕೇಳು'.... ಎಂದು ಗುಲಾಬಿ ರಂಗಿನAತಹ ಹೂನಗೆ ಎಸೆದು ಪ್ರಾರಂಭಿಸಿದಳು –
‘ಬಹಳ ಸಂಶಯದ ಪ್ರಾಣ ನನ್ನ ‘ಅಫಿ’, ಆತ ಏನೇ ಕೆಲಸ ಕರ‍್ಯ ಮಾಡುವುದಿದ್ದರೂ ಮೊದಲು ಭವಿಷ್ಯ ಕೇಳಿಯೇ ಶುರು. ಅದರಂತೆ ಜ್ಯೋತಿಷಿಯನ್ನು ಸಂಧಿಸಿದ. ಈ ಬಾರಿ ಜ್ಯೋತಿಷಿ ‘ಅಫಿ’ಯ ಜಯದ ಬಗ್ಗೆ, ಆಯುಷ್ಯದ ಬಗ್ಗೆನೇ ಅನುಮಾನ ಪಟ್ಟ! ಆ ಮೂಲಕ ನಮ್ಮ ಕಥೆನೂ ಮುಗಿಸಿದವ ಆ ಜ್ಯೋತಿಷಿನೇ' ಎಂದು ಕಣ್ಣಲ್ಲಿ ಕಿಡಿಕಾರಿದಳು ಸುಂದರಿ. ಮತ್ತೆ ಸಾವರಿಸಿಕೊಂಡು ಮುಂದುವರೆಸಿದಳು.
‘ಜ್ಯೋತಿಷಿಯ ಹೇಳಿಕೆಯಂತೆ ಅಫೀ 'ತ್ಯಾಗಕ್ಕೆ' ಸಿದ್ಧನಿದ್ದ. ಅಬ್ಬಾ! ಎಂಥ ತ್ಯಾಗ ಅದು. ಅವನ ಉಸಿರಾಗಿದ್ದ ನಾವು ಅರವತ್ನಾಲ್ಕು ರಾಣ ಯರ ಬದುಕಿನ ಹಕ್ಕನ್ನು, ಉಸಿರಿನ ಹಕ್ಕನ್ನು ನಿವಾರಿಸಿಕೊಳ್ಳುವ ತ್ಯಾಗ!'
‘ಅಬ್ಬಾ ಆ ಘಟನೆ ನೆನಸಿಕೊಂಡರೇ ನನ್ನ ಮೈ ಜುಮ್ಮೆನ್ನುತ್ತದೆ' ಎಂದಿತೊAದು ಧ್ವನಿ. ನೋಡಿದೆ ಮಧ್ಯೆ ಸಾಲಿನಿಂದ ನೀಳವೇಣ ರಾಣ ಯ ಧ್ವನಿ ಅದು.
‘ನನ್ನ ಅತ್ಯಂತ ಪ್ರೀತಿ ಪಾತ್ರ 'ಅಫೀ' ನಮ್ಮನ್ನು ಮುಗಿಸುವ ವಿಷಯವನ್ನು ಅತ್ಯಂತ ಗುಪ್ತವಾಗಿ ಇಟ್ಟಿದ್ದ. ಎಂಥಾ ಕ್ರೂರಿ 'ಪುರುಷ' ನೋಡು ಕಥೆಗಾರ. ತನ್ನ 'ಸುಖದ ಸಾಮಗ್ರಿ'ಗಳು ತನ್ನೊಂದಿಗೇನೇ ಅಂತ್ಯಗೊಳ್ಳಬೇಕು. ಪರರ ಸ್ವತ್ತಾಗಬಾರದು! ಇಲ್ಲಿ ಜೀವÀಕ್ಕೆ ಬೆಲೆಯೇ ಇಲ್ಲವೆ?' ಎಂದಳು ಸುಂದರಿ.
‘ಇವತ್ತಿನ ದಿನಕ್ಕಾದರೆ ಸಮಾನ ಹಕ್ಕು, ಮಹಿಳಾ ಸಂಘಟನೆ ಇವೆ ಆದರೆ ಆಗ?' ಎಂದು ನನ್ನ ಮನಸ್ಸಿನಲ್ಲಿ ವಿಚಾರ ಮಾಡುತ್ತಿದ್ದೆ.
‘ಎಲ್ಲಿದೆ ನಿನ್ನ ಚಿತ್ತ ಕಥೆಗಾರ ?' ಎಂದು ಎಚ್ಚರಿಸಿದ ಸುಂದರಿ ಹೇಳಿದಳು ‘ನನ್ನ ಪ್ರಶ್ನೆಗೆ ನೀನೇನು ಉತ್ತರ ಕೊಡಬಲ್ಲೆ?' ಬರೀ ನಿನ್ನ ಕಥೆಗೆ ವಸ್ತು ಯಾರಾಗುತ್ತಾರೆ ಎಂದು ಹುಡುಕಾಡುವ ಸ್ವಾರ್ಥಿ ನೀನು! ನೀನು, ನಿನ್ನ ಕಥೆ, ಸಂಪಾದಕರು ಎಂಬ ಭ್ರಮಾಲೋಕದ ನಿರುಪದ್ರವಿ ಜೀವಿ ನೀನು! ನಮ್ಮಂಥವರ ಜೀವ ಬಲಿದಾನದ ಕಥೆ ಬರೆದು ಇನಾಮಿಗಾಗಿ ಹೊಂಚು ಹಾಕುವವರು ನೀವು ಬರಹಗಾರರು!' ಹೀಗೆ ಸುಂದರಿ ತನ್ನ ಆಕ್ರೋಶವನ್ನೆಲ್ಲ ಸೇರಿಸಿ ನನ್ನ ಮೇಲೆ ಕಿಡಿಕಾರಿದಳು. ಮತ್ತೆ ಆಕೆಯಲ್ಲಿ ಹೆಪ್ಪುಗಟ್ಟಿದ ನೋವು ಕರಗ ಬೇಕಾದರೂ ಹೇಗೆ? ಎಂದು ನಾನು ಸುಮ್ಮನಾದೆ.
‘ನನ್ನ ತಂಗಿಗೆ ತುಂಬಾ ರೋಷ ಉಕ್ಕಿ ಬಂದಿದೆ, ನಾನು ಹೇಳುತ್ತೇನೆ ಕೇಳು ಮುಂದಿನ ಕಥೆ' ಎಂದು ಇನ್ನೊಂದು ಸಾಲಿನ ಗೋರಿಯಿಂದ ಎದ್ದು ಮಧ್ಯಮ ಸುಂದರಿ ಶುರು ಮಾಡಿದಳು.
‘ನಮಗೆ ಅಂದು ಬೇಡಿದ್ದೆಲ್ಲವನ್ನು ಕೊಟ್ಟು ಪೂರೈಸಿದ ನಮ್ಮ 'ಧಣ ', ಎಲ್ಲರನ್ನೂ ಒಟ್ಟಿಗೇ ಕೂರಿಸಿಕೊಂಡು ಭೋಜನ ಪೂರೈಸಿದ, ನಕ್ಕು ನಲಿಸಿದ. ನಮ್ಮಲ್ಲಿ ಎಲ್ಲಾ ಧರ್ಮದ, ಬೇರೆ ಬೇರೆ ದೇಶಗಳ ‘ರಾಣ 'ಯರೂ ಇದ್ದರು. ಕೊನೆಗೆ ಆ ದಿನ ರಾತ್ರಿ ನಮ್ಮನ್ನೆಲ್ಲಾ ಆ ಬಾವಿ ಬಳಿ ಕರೆದ್ಯೊಯ್ದು ನೀರಿನಲ್ಲಿ ಅದ್ದಿ ತೆಗೆದು, ಉಸಿರು ಕಟ್ಟಿಸಿ ಕೊಂದು, ನಮ್ಮ ರುಂಡ ಚೆಂಡಾಡಿ ಈ ವಿಶ್ರಾಂತಿ ಧಾಮದಲ್ಲಿ ಚಿರನಿದ್ರೆಗೆ ತಳ್ಳಿದವನು ಬೇರೆ ಯಾರೂ ಅಲ್ಲ, ನಾವೆಲ್ಲಾ ಬಹಳ ಬಹಳವಾಗಿ ಪ್ರೀತಿಸುತ್ತಿದ್ದ ನಮ್ಮ ಪ್ರೀತಿಯ ಪತಿ ‘ಅಫೀ'!
‘ಓ! ಕಥೆಗಾರ ಹಾಗೇಕೆ ಬೆಕ್ಕಸ ಬೆರಗಾಗಿ ನಿಂತಿರುವೆ. ಇಲ್ಲಿ ನೋಡು ಇಲ್ಲಿ' ಎಂದು ಚಪ್ಪಾಳೆ ತಟ್ಟಿದ ಕಡೆಗೆ ನೋಡಿದೆ.
ಖಾಲಿ ಇದ್ದ ಗೋರಿಯ ಮೇಲೆ ಕುಹಕ ಸುಂದರಿ ಹೇಳುತ್ತಿದ್ದಾಳೆ.
‘ಓ! ನಿನಗೆ ಆಶ್ಚರ್ಯವೇ?'
ನಿನ್ನ ಕಥೆಗಳಲ್ಲಿ ಒಮ್ಮೊಮ್ಮೆ ಕೆಲವು ಪಾತ್ರಗಳು ನಿನಗೇ ಸುಳಿವು ಕೊಡದಂತೆ ತಮ್ಮ ಬಣ್ಣ ಬದಲಿಸುತ್ತವೆ ಅಲ್ಲವೆ? ಹಾಗೆಯೇ ನಾನು ಕೂಡ ನನ್ನ 'ಅಫೀ'ಯ 'ಕ್ರೂರತನದ ಪ್ರೀತಿ'ಯನ್ನು ನೋಡಲಾಗದೇ ತಪ್ಪಿಸಿಕೊಂಡು ಓಡಿಹೋದೆ. ಕರಾಳ ನೆರಳಿನಂತೆ ಬೆನ್ನತ್ತಿದ 'ಅಫೀ' ನನ್ನನ್ನು ಬಿಟ್ಟನೇ? ಇಲ್ಲ.. ಇಲ್ಲಿಂದ ಸ್ವಲ್ಪ ಸಮೀಪದಲ್ಲಿರುವ ಖತಿಜಾಪೂರದಲ್ಲಿ ನಾನು ಕೈಗೆ ಸಿಕ್ಕೆ, ಅಲ್ಲಿಯೇ ನನ್ನನ್ನು ಕೊಂದು ದಫನ ಮಾಡಿದ ‘ಅಫೀ'. ತಾನು ಸತ್ತ ಮೇಲೆ ಒಬ್ಬರೂ ಉಳಿಯಬಾರದೆಂಬ ಕೆಟ್ಟ ಹಟ ನನ್ನ ಪ್ರೀತಿಯ ಪತಿಗೆ!
ಅಲ್ಲಾ ಕಥೆಗಾರ, ಜಗತ್ತಿನಲ್ಲಿ ಎಲ್ಲಿಯಾದರೂ ಇಂತಹ ಕ್ರೂರತನದ, ಹಪಾಹಪಿತನದ ಕಥೆಯನ್ನು ಕೆಳಿದ್ದಿಯಾ? ಅಕಸ್ಮಾತ್ ಆ ಜ್ಯೋತಿಷಿಯ ಮಾತು ಸುಳ್ಳಾಗಿ 'ಅಫೀ' ಬದುಕಿದ್ದನೆಂದರೇ, ಅವನು ಸನ್ಯಾಸಿಯಾಗಿ ಬದುಕುತ್ತಿದ್ದನೆ? ಇಲ್ಲಾ ಮತ್ತೆ ನೂರಾರು ಪತ್ನಿಯರನ್ನು ತರುತ್ತಿದ್ದನೇ? ಹೇಳು, ಏಕೆ ಸುಮ್ಮನಿರುವಿ?' ಎಂದಳು ಆ ಸುಂದರಿ.
‘ಅಲ್ಲಾ, ಒಬ್ಬನ ಉಪಭೋಗಕ್ಕಾಗಿ ಇಷ್ಟೆಲ್ಲ ರಾಣ ಯರ ಅವಶ್ಯಕತೆ ಇತ್ತೆ? ಹೋಗಲಿ, ಅದೂ ಹೋಗಲಿ, ಉಳಿದ ರಾಜರು, ಪ್ರಬಲರು - ತಮ್ಮ ನಂತರದ ಸ್ಥಿತಿಯ ಬಗ್ಗೆ ತಿಳಿದುಕೊಂಡು ಇಂಥಹ 'ಕ್ರೂರವಧೆ - ರಾಣ ವಧೆ'ಯಂತಹ ಹೀನಕೃತ್ಯವನ್ನು ಕೈಗೊಳ್ಳಲಿಲ್ಲವಲ್ಲ! ಅವರು ಎಷ್ಟೋ ಪಾಲು ಮೇಲು' ಎಂದ ರಾಣ ,
ಹೀಗೆಂದಾಕ್ಷಣ ನನಗೆ ನನ್ನ ‘ಅಫೀ'ಯ ಮೇಲೆ ಪ್ರೀತಿ ಇರಲಿಲ್ಲ ಎಂದು ತಿಳಿಯಬೇಡ ನೀನು! ಯಾಕೆಂದರೆ ನೀನು ಮೊದಲೇ ಕತೆಗಾರ, ಇಲ್ಲದ್ದನ್ನೆಲ್ಲಾ 'ಊಹಿಸುವ ಪ್ರಾಣ ' ಎಂದು ತಿವಿದಳು.
‘ಹಾಗಾದರೆ ದ್ವೇಷ ಪ್ರೀತಿಯ ಇನ್ನೊಂದು ರೂಪವೇ ?' ಎಂದು ಕೇಳಬೇಕೆಂದೆ , ಆದರೆ ಕೇಳಲಿಲ್ಲ.
ಅವಳೇ ಹೇಳಿದಳು.
‘ನಮ್ಮೊಂದಿಗೆ ನಮ್ಮ 'ಅಫೀ' ಇಲ್ಲೇ ಇರುತ್ತಾನೆ ಎಂದುಕೊAಡಿವಿ, ಆದರೆ 'ಅಫೀ'ಗೆ ಯಾವುದೇ ಚಿಂತೆ ಇಲ್ಲ, ಅವನು ಆರಾಮವಾಗಿ 'ಪ್ರತಾಪಗಢ'ದಲ್ಲಿ ಮಲಗಿದ್ದಾನೆ' ಎಂದು.
ಈಗ ಎಲ್ಲಾ ಗೋರಿಗಳಿಂದ ಎದ್ದ 'ಸುಂದರಿಯರು' ಈ ಮಾತಿಗೆ ‘ಹೌದು, ಹೌದು’ ಎಂದರು.
ಕ್ರಮೇಣ ಅಲ್ಲಿ ಕತ್ತಲಾವರಿಸತೊಡಗಿತು. ನನ್ನ ಮನಸ್ಸಿನ ಹಾಗೆ. ಆಗ ನನ್ನ ಭುಜದ ಮೇಲೊಂದು ಕೈ ಬಿದ್ದಿತ್ತು. ಬೆಚ್ಚಿ ಹಿಂದಿರುಗಿ ನೋಡಿದೆ, ಅದೇ ನಾನು ಇಲ್ಲಿಗೆ ಬಂದಾಗ ಕಂಡ ಬಾವಾಜಿ ನಿಂತಿದ್ದ.
‘ಇತಿಹಾಸದ ಕಥೆ ಸಿಕ್ಕಿತೆ?' ಎಂದ.
ಗೋಣು ಆಡಿಸಿದೆ.
‘ಹೀಗೆ... ಖಾನಸಾಬ್ ಯುದ್ಧಕ್ಕೆ ಹೋದ. ಅದರಲ್ಲಿ ಜಯಸಾಧಿಸಲಿಕ್ಕಾಗದೆ ಶಿವಾಜಿಯೊಡನೆ ಸಂಧಾನಕ್ಕೆ ಹೋದ. ಸಂಧಾನದಲ್ಲಿ ಶಿವಾಜಿಯ ಕೈ ಮೇಲಾಗಿ ಪ್ರತಾಪಗಢದಲ್ಲಿಯೇ ಅಸುನೀಗಿದ, ಅಲ್ಲಿಯೇ ಚಿರನಿದ್ರೆಗೈದ' ಎಂದು ಶೂನ್ಯದಲ್ಲಿ ದೃಷ್ಟಿನೆಟ್ಟು ಹೇಳಿದ ಬಾವಾಜಿ ನಿಟ್ಟುಸಿರು ಬಿಟ್ಟ.
‘ಆದರೆ ತಪ್ಪು ಮಾಡಿದ ಖಾನಸಾಹೇಬ್..' ಎಂದು ಬಿಕ್ಕಿದ ಬಾವಾಜಿ ನಿಧಾನವಾಗಿ.... ರಾಣ ಯರ ಗೋರಿಗಳ ಕತ್ತಲಲ್ಲಿ ಕರಗಿ ಹೋದ..
ಆಗ ನನಗೆ ಸಂಶಯ ಬಂತು... ಹಾಗಾದರೇ ಬಾವಾಜಿ.... ಬಾವಾಜಿಯೇ ಖಾನ್‌ಸಾಹೇಬನೇ?
ಆಗ ನೋಡುನೋಡುತ್ತಿದ್ದಂತೆಯೇ ರಾಣ ಯರ ಗೋರಿಗಳಿದ್ದ ವೇದಿಕೆಯ ಮೇಲೆ ನಿಧಾನವಾಗಿ ಕತ್ತಲು ಆವರಿಸಿತು.
ಎಲ್ಲ ಎಲ್ಲ ನಿಚ್ಚಳವಾಯಿತು.
ಆಕ್ರಂದನಗಳ, ಇತಿಹಾಸದ ಅತ್ಯಾಚಾರದ ಕತ್ತಲಲ್ಲಿ ನಾನು ಕರಗಿ ಹೋದೆ.. ನಾನು.. ನಾನು.. ಕಳೆದುಕೊಂಡೆ.
------
ಶ್ರೀನಿವಾಸ ಜಾಲವಾದಿ
ಲೇಖಕ ಶ್ರೀನಿವಾಸ ಜಾಲವಾದಿ ಅವರು ಜನಿಸಿದ್ದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ. ಇವರ ಸ್ವಂತ ಊರು ಜಾಲವಾದಿ. 1988 ರಿಂದ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ವಾಸವಿದ್ದಾರೆ. ಬಿ.ಎ. ಬಿ.ಈಡಿ ಪದವೀಧರರು. ಸದ್ಯ, ಸುರಪುರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರಾಗಿ ನಿವೃತ್ತರು. .ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆಯ ಸಂಚಾಲಕರು. ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ‘ಕಲಾ ಮಾಧ್ಯಮ ವಿಜಾಪುರದಿಂದ ‘ತಿರುಗುಪ್ಪ’ ನಾಟಕವನ್ನು ದೆಹಲಿ, ಮುಂಬಯಿ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರದರ್ಶನ ಹಾಗೂ ಬೆಂಗಳೂರು ದೂರದರ್ಶನದಿಂದ ನಾಟಕ ಪ್ರಸಾರ. ಖ್ಯಾತ ನಿರ್ದೇಶಕ ಟಿ.ಎಸ್.ರಂಗಾ ಅವರ ನಿರ್ದೇಶನದ ‘ಮೌನಕ್ರಾಂತಿ’ ಗೆ ಸಂಭಾಷಣೆ, ನಟ ಹಾಗೂ ಸಹಾಯಕ ನಿರ್ದೇಶಕರು. ವಿವಿಧ ಧಾರಾವಾಹಿಗಳ ಹಾಗೂ ನಾಟಕಗಳ ವಿಮರ್ಶಕರು, ಆಕಾಶವಾಣಿ ಕಲಾವಿದರು ಕೂಡ.
ಕೃತಿಗಳು : ಕರ್ನಾಟಕದ ಕವಿತೆಗಳು, ಕನಸುಗಳು ಸಾಯುತ್ತಾವೆ., (ಕವನ ಸಂಕಲನಗಳು) , ಮೀಸೆ ಮಾವ (ವಿಡಂಬನೆ-ಹಾಸ್ಯ ಸಂಕಲನ), ಸರಪಳಿ (ಕಥಾಸಂಕಲನ) : ಸಂತಸ ಅರಳುವ ಸಮಯ (56 ಲೇಖಕರನ್ನೊಳಗೊಂಡ ಲಲಿತ ಪ್ರಬಂಧ ಸಂಕಲನದ ಸಂಪಾದನೆ) ಹಾಗೂ ಕರ್ನಾಟಕದ ಶೇಕ್ಸ್ ಪಿಯರ್ ‘ಕಂದಗಲ್ ಹಣಮಂತರಾಯ (ಪ್ರಜಾವಾಣಿ), ದಕ್ಷಿಣ ಭಾರತದ ಮೆಹಂಜದಾರೋ ಹರಪ್ಪ-ಬೂದಿಹಾಳ (ಸುಧಾ), ತುಷಾರ ಬೆಳ್ಳಿ ಮಹೋತ್ಸವದಲ್ಲಿ ಲಲಿತ ಪ್ರಬಂಧಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಪ್ರಶಸ್ತಿ-ಗೌರವಗಳು: ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ (1997), ಕಡಕೋಳ ಮಡಿವಾಳೇಶ್ವರ ಪ್ರಶಸ್ತಿ (1995), ಡಾ. ಪುಟ್ಟರಾಜ ಗವಾಯಿಗಳ ಪ್ರಶಸ್ತಿ (ಜೀವಮಾನ ಸಾಧನೆ), ಶ್ರೇಷ್ಠ ಸಂಘಟಕ ಪ್ರಶಸ್ತಿ(.2012), ಚಂದನ (ದೂರದರ್ಶನ) ‘ಬೆಳಗು’ ಕಾರ್ಯಕ್ರಮದಲ್ಲಿ ಸಂದರ್ಶನ, 77ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನ ಬೆಂಗಳೂರು-ಗೌರವ ಸನ್ಮಾನ., ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ( 2012), ಕಲಾಮಾಧ್ಯದಿಂದ ‘ರಂಗಗೌರವ’ ಪ್ರಶಸ್ತಿ (2014), ‘ಮೀಸೆ ಮಾವ’ ಕ್ಕಾಗಿ ಗೋವಾ ಕನ್ನಡಿಗರ ಪ್ರಶಸ್ತಿ, ತರೀಕೆರೆಯ ಕೀರ್ತಿ ಪ್ರಕಾಶನದಿಂದ ಕನ್ನಡ ಶ್ರೀ ಪ್ರಶಸ್ತಿ, ಉದಯ ವಾಹಿನಿಯ ಬಾಳಿಗೊಂದು ಬೆಳಕು ಕಾರ್ಯಕ್ರಮದಲ್ಲಿ ಜಾಲವಾದಿ ಸಾಹಿತ್ಯದ ವಿಶ್ಲೇಷಣೆ,
More About Author