Poem

ನಮ್ಮ ಕುವೆಂಪು

ಕನ್ನಡದ ಪೆಂಪು
ಕಾವ್ಯಕ್ಕೆ ಕಂಪು
ಕೋಗಿಲೆಯ ಇಂಪು
ಸಾಹಿತ್ಯ ಸೊಂಪು
ಹೃನ್ಮನಕೆ ತಂಪು
ಆಗಿಹರು ಕುವೆಂಪು..ಹೃನ್ಮನಕೆ ತಂಪು.

ಹೆಸರೇನೋ ಪುಟ್ಟಪ್ಪ
ನಾಡಿಗೇ ದೊಡ್ಡಪ್ಪ
ರಾಷ್ಟ್ರ ಕವಿ ಇವರಪ್ಪ
ಯುಗದ ಕವಿ ನೋಡಪ್ಪ
ರಸ-ಋಷಿ ಕಾಣಪ್ಪ
ಹೌದಪ್ಪ ಅವರೇ ಕುವೆಂಪು..ಹೃನ್ಮನಕೆ ತಂಪು..

ಹಸುರಿನ ಒಡಲಲ್ಲಿ
ಪಕ್ಷಿಕಾಶಿಯ ನೋಡು
ಕಾನನದ ಕಂದರದಿ
ಹೆಗ್ಗಡ್ತಿಯ ಕಾಣು
ಮಲೆಯನೆತ್ತಿಯಮೇಲೆ
ಮದುಮಗಳು ನೋಡು..ಅಲ್ಲಿಹರು ಕುವೆಂಪು..

ದುಷ್ಟ ಗುಣ ಮರ್ದನಂ
ಶಿಷ್ಟ ಗುಣ ರಕ್ಷಣಂ
ಭಾವಗಳ ಸ್ಪಂದನಂ
ಆತ್ಮ ಸಾಕ್ಷಾತ್ಕಾರಮಂ
ನೀಡೆ ರಾಮಾಯಣ ದರ್ಶನಂ
ಪುಣ್ಯರೂಪಿ ಕುವೆಂಪು..ನೆನೆವ ಕ್ಷಣ ತಂಪು..

ವಾಗ್ದೇವಿ ಭಾಂಡಾರ
ರನ್ನ ಒಡೆದಿಹನಂತೆ
ಸರಸತಿಗೆ ಸಿಂಗಾರ
ಪಂಪ ಮಾಡಿದನಂತೆ
ಇಂದು ಕನ್ನಡ ನೆಲದಿ
ಶಾರದೆಯ ಪ್ರತಿರೂಪ ಕುವೆಂಪು
ವಿಶ್ವಮಾನವ ದೀಪ್ತಿ ಇವರಿಗೊಪ್ಪು..

- ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ.

ಹಮೀದಾ ಬೇಗಂ ಬಾಬುರಾವ ದೇಸಾಯಿ

ಲೇಖಕಿ ಹಮೀದಾ ಬೇಗಂ ಬಾಬುರಾವ ದೇಸಾಯಿ ಮೂಲತಃ ಹುಕ್ಕೇರಿಯ ಯಮಕನಮರಡಿಯವರು. ಬಿಎಸ್ಸಿ, ಬಿ.ಇಡಿ ಪದವೀಧರರು. ವಿಜ್ಞಾನ ವಿಷಯದಲ್ಲಿ ಸಹ ಶಿಕ್ಷಕಿಯಾಗಿ  ಒಟ್ಟು 38 ವರ್ಷಗಳ ಸೇವೆ ನಂತರ ಈಗ ನಿವೃತ್ತರು. 

ಕೃತಿಗಳು : ನುಡಿಮುತ್ತುಗಳು ಪುಸ್ತಿಕೆ (ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನದಿಂದ ಆಯ್ದ ನುಡಿಗಳು), ಮನೋಗೀತೆ (ಕವನ ಸಂಕಲನ), ವಚನಾಂಜಲಿ (ಷಟ್ಪದಿಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರಿಂದ ಪುರಸ್ಕಾರ), ವಿಜ್ಞಾನ ವೈಚಾರಿಕ ಅಂಕಣ ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಶಸ್ತಿ-ಪುರಸ್ಕಾರಗಳು: ಉತ್ತಮ ವಿಜ್ಞಾನ ಸಂಘಟನಾ ಶಿಕ್ಷಕಿ (1998), ಹುಕ್ಕೇರಿ ತಾಲೂಕು ಮಟ್ಟದ ಇಂದಿರಾ ಪ್ರಿಯದರ್ಶಿನಿ ಅತ್ಯುತ್ತಮ ಶಿಕ್ಷಕಿ (2001), ಅತ್ಯುತ್ತಮ ಜನಗಣತಿ ಸೇವೆಗಾಗಿ ಭಾರತ ಸರ್ಕಾರದಿಂದ ಸನ್ಮಾನ ಪತ್ರ ಮತ್ತು ರಜತ ಪದಕ,  ಡಾ.ಸ.ಜ. ನಾಗಲೋತಿಮಠ ಪ್ರಶಸ್ತಿ ಮತ್ತು ಉತ್ತಮ ವಿಜ್ಞಾನ ಪ್ರಸಾರ ಸೇವೆಗಾಗಿ 2006ರಲ್ಲಿ ಜಿಲ್ಲಾ ಮಟ್ಟದಲ್ಲಿ, ಅತ್ಯುತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಭಾರತ ಸರ್ಕಾರದಿಂದ 2007-08ನೇ ಸಾಲಿಗಾಗಿ, ರಾಜ್ಯ ಮಟ್ಟದ ಕಾವ್ಯಸಿರಿ ಪ್ರಶಸ್ತಿ, ರಾಜ್ಯಮಟ್ಟದ ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ ಲಭಿಸಿವೆ. 

More About Author