Poem

ಎರಡನೇ ದಿನ

 

ಮನಸಿನ ಪರವಾನಿಗಿ ಪಡೆದು
ಅಂಗಾತ ಮಲಗುತ್ತಾಳೆ
ಕನಸು ಬೀಳದ ಹಾಗೆ,
ಕನಸು ಅಂತರಂತರ ತೇಲುತ್ತಾ
ಪಲ್ಲಂಗದ ಸುತ್ತ ಗಾಳಿಯೊಂದಿಗೆ ಬೆರೆತು ಬೆವರಿ

ಮೌನದ ಕೂಡ ಒದರಾಡುವ ಮೌನ
ಗಾಳಿಯೊಂದಿಗೆ ಗುದ್ದಾಡುವ ಗಾಳಿ
ನೀರಿನೊಂದಿಗೆ ಮಾತನಾಡುವ ನೀರು

ಕನಸು ಮೌನಗಳ ನುಂಗುವ ಗಾಳಿ
ಗಾಳಿಯ ನುಂಗುವ ನೀರು
ನೀರನೆ ನುಂಗುವ ಮಾತು
ಅವಳನು ನುಂಗದ ಹೆಬ್ಬಾವಿನಂತಹ
ಎರಡನೇ ದಿನ
ಬಾಯಿ ತೆರೆದು ಬುಸುಗುಡುತ್ತಿದೆ

 

 

 

 

 

 

 

 

 

 

 

 

 

ಅವಳ ನಡು
ಅವಳ ಹೊಕ್ಕಳು
ಅವಳ ಕಾಮರೂಪ
ಕನ್ನಡಿಯೊಂದಿಗೆ ಅವನ ಹಾದರ

ನೂರು ಚೂರಾಗಿ ಹೋಯ್ತು
ತಡೆದು ತಡೆದು ಬೀಳುವ ಕನಸು
ಮುಗ್ಗರಿಸುವ ಕನ್ನಡಿ
ಅವನ ನಿಷ್ಠೆ

ಕಟಕಟೆಯಲ್ಲಿ ಭಗವದ್ಗೀತೆ ಮುಟ್ಟುವ
ಮೌನ
ಗಾಳಿ
ನೀರು
ಯಾವುದೂ ಸತ್ಯ ಹೇಳುವುದಿಲ್ಲ

ಸುಳ್ಳಿನ ನೆತ್ತಿಯ ಮೇಲೆ
ಹೊಡೆದಂತಿರಬೇಕು
ಹೊಸ ಸುಳ್ಳು
ಮತ್ತು
ಪರೆಗಳಚಿ ಬಿಸಾಡುವ
ಅವನು

ಚಿತ್ರ: ವಿಷ್ಣುಕುಮಾರ್‌

ಭುವನಾ ಹಿರೇಮಠ

ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ  ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. 


 

More About Author