ಲೇಖಕ, ಕತೆಗಾರ ಶರಣಗೌಡ ಬಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳದವರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶರಣಗೌಡ ಬಿ. ಪಾಟೀಲ ಅವರ ‘ಪರಿವರ್ತನೆ’ ಕತೆ ನಿಮ್ಮ ಓದಿಗಾಗಿ..
ಮ್ಯಾಲಿನ ಕೇರಿ ದೊಡ್ಡಾಯಿ ಜೀವನದುದ್ದಕ್ಕೂ ಸಂಪ್ರದಾಯವನ್ನೇ ಪಾಲಿಸಿಕೊಂಡು ಬಂದವಳು, ಸದಾ ಮಡಿ, ಮೈಲಿಗೆ ಅಂತ ಜಾಸ್ತಿ ಮಹತ್ವ ಕೊಡುವವಳು, ಮುಂಜಾನೆ ಜಳಕಾ ಮಾಡದೇ ಒಂದು ಹನಿ ನೀರು ಕೂಡ ಬಾಯಿಗೆ ಹಾಕಿಕೊಳ್ಳದವಳು, ಹಾಗೇನಾದರು ಹಾಕಿಕೊಂಡರೆ ಅದು ವಿಷಕ್ಕೆ ಸಮಾನ ಅಂತ ಭಾವಿಸುತಿದ್ದಳು . ಅವಳ ದಿನಚರಿ ಊರ ಜನರಿಗೆ ವಿಚಿತ್ರ ಹಾಗು ಆಶ್ಚರ್ಯ ತರಿಸುತಿತ್ತು. ದೊಡ್ಡಾಯಿಯ ವಯಸ್ಸಿನವರು ಸಧ್ಯ ಊರಲ್ಲಿ ಯಾರೂ ಉಳಿದಿಲ್ಲ ಮುಪ್ಪು ಅಪ್ಪಳಿಸಿದರೂ ಚುರುಕುತನ ಕಡಿಮೆ ಆಗದೇ ಇರುವದು ಎಲ್ಲರ ಹುಬ್ಬೇರಿಸುವಂತೆ ಮಾಡುತಿತ್ತು.
ದೊಡ್ಡಾಯಿ ಅಂದು ಕೌದಿಹೊಲೆಯುತ್ತಾ ಹೊರ ಪಡಸಾಲೆಯಲ್ಲಿ ಕುಳಿತಾಗ ಸಂಬಂಧಿಕರೊಬ್ಬರು ಯೋಗಕ್ಷೇಮ ವಿಚಾರಿಸಿ ಶಂಕ್ರೆಪ್ಪಜ್ಜನ ನೆನಪು ಮಾಡಿಕೊಂಡಿದ್ದು ಇವಳ ಕಣ್ಣಲ್ಲಿ ನೀರೂರುವಂತೆ ಮಾಡಿತು. ತನ್ನ ಸೀರೆ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ "ನಿಮ್ಮಜ್ಜ ಸತ್ತು ವರ್ಷ ಆಗಿ ಹೋಯಿತು. ಆತ ಒಂದಿನ ಗೋಲಿ ಔಷಧಿ ನುಂಗಲಿಲ್ಲ ಹಾಸಿಗೆ ಹಿಡಿದು ಆರೈಕೆಮಾಡಿಸಿಕೊಳ್ಳಲಿಲ್ಲ . ಎದೆ ನೊಯ್ತಾದೆ ಅನ್ನುವ ಒಂದೇ ನೆವ ಆಯಿತು. ಬಸವಾ ಹೊಲದಿಂದ ಬಂದು ತರಾತುರಿ ಮಾಡಿ ದವಾಖಾನಿಗಿ ಕರಕೊಂಡು ಹೋದ. ಡಾಕ್ಟರ್ ನಾಡಿ ಪರೀಕ್ಷಾ ಮಾಡಿ ಜಿಂವಾ ಹೋಗ್ಯಾದ ವಾಪಸ್ ಒಯ್ಯರಿ ಅಂದ್ರಂತೆ. ಹಂಗೇ ಹೆಣಾನೇ ವಾಪಸ್ ತಂದರು " ಅಂತ ಹಿಂದಿನ ಹಕೀಕತ ಬಿಚ್ಚಿಟ್ಟು ಕಣ್ತುಂಬಾ ನೀರು ತಂದಳು.
"ಸಾವು ಯಾರಿಗೂ ಹೇಳಿ ಕೇಳಿ ಬರೋದಿಲ್ಲ ಅದು ಯಾರ ಕೈಯಾಗೂ ಇಲ್ಲ ಅಜ್ಜನಿಗಿಂತ ನೀನೇ ಗಟ್ಟಿ ಅಂತ ಸಮಜಾಯಿಷಿ ನೀಡಿದಾಗ ಆ ಮಾತು ದೊಡ್ಡಾಯಿಗೆ ಸಮಾಧಾನ ತರದೆ "ಆ ಮ್ಯಾಲಿನವನ ಇಚ್ಛಾ ಏನು ಮಾಡೋದು? ಯಾವಾಗ ಕರೆ ಬರ್ತಾದೊ ಆವಾಗ ನಿಶ್ಚಿಂತೆಯಿಂದ ಹೊಗಿ ಬಿಡ್ತೀನಿ, ಬದುಕಿನಲ್ಲಿ ಎಲ್ಲವೂ ಕಂಡೆ ಇನ್ನೇನೂ ಬಾಕಿ ಉಳಿದಿಲ್ಲ ನಿಮ್ಮ ಅಜ್ಜನಿಗಿಂತ ಮೊದಲು ನಾನೇ ತೀರಿ ಹೋಗಿದ್ದರೆ ಛೊಲೊ ಆಗ್ತಿತ್ತು ಅಂತ ನೋವು ಹೊರ ಹಾಕಿದಳು. ಗಂಡನನ್ನು ಕಳೆದುಕೊಂಡ ಆ ನೋವು ಇವಳ ಮನಸಿನಂತರಾಳದಿಂದ ಇನ್ನೂ ಮರೆಯಾಗಿರಲಿಲ್ಲ ಅದು ಆಗಾಗ ಕಾಡಿ ಸಂಕಟ ನೀಡುತಿತ್ತು.
ದೊಡ್ಡಾಯಿ ದಿನಾ ಮುಂಜಾನೆ ಎಲ್ಲರಿಗಿಂತ ಬೇಗ ಎದ್ದು ಒತ್ತಲಿಗೆ ಫುಟು ಹೊತ್ತಿಸಿ ದೊಡ್ಡ ಹಾಂಡ್ಯಾ ನೀರು ಕಾಯಿಸಿ ಜಳಕಾ , ಪೂಜಾ ಮಾಡಿ ಹೊರ ಬರುವ ರೂಢಿ ಬೆಳೆಸಿಕೊಂಡವಳು. ಅದಾದ ನಂತರವೇ ಮನೆಗೆಲಸ ಅದು ಇದು ಅಂತ ಏನಾದರೊಂದು ಮಾಡುತ್ತಲೇ ಇರುತಿದ್ದಳು.
ಅಂದು ಮುಂಜಾನೆ ಪಡಸಾಲೆ ಕಂಬಕ್ಕೆ ಬೆನ್ನು ಹಚ್ಚಿ ಸೂರ್ಯನ ಹೊಂಬಿಸು ಕಾಯಿಸಿಕೊಳ್ಳುವಾಗ ಮೊಮ್ಮಗಳು ಸೂಜಿ ಕೊಬ್ಬರೆಣ್ಣಿ ಡಬ್ಬ ಬಾಚಣಿಕೆ ಹಿಡಿದು ಬಂದು "ಅಜ್ಜಿ ತಲೆ ಬಾಚು ಶಾಲೆಗೆ ಹೋಗಬೇಕು" ಅಂತ ಕೇಳಿಕೊಂಡಳು. ನಿನಗೂ ನಾನೇ ಬೇಕು ನಾನು ಶಿವನ ಪಾದಾ ಸೇರಿದ ಮ್ಯಾಲ ಏನು ಮಾಡತಿ , ಅಂತ ಪ್ರಶ್ನಿಸಿದಳು.
ಅಜ್ಜಿಯ ಮಾತು ಸೂಜಿಯ ಮುಖ ಸಪ್ಪಗಾಗುವಂತೆ ಮಾಡಿ ಅಲ್ಲಿಂದ ಎದ್ದು ಒಂದು ಕಡೆ ಏಕಾಂತವಾಗಿ ಕುಳಿತು " ಅಜ್ಜಿ ಯಾಕೆ ಹೀಗೆ ಮಾತಾಡಿದಳು ಒಮ್ಮೆಯೂ ನನ್ನ ಜೊತೆ ಹೀಗೆ ಮಾತಾಡುತಿರಲಿಲ್ಲ" ಅಂತ ಸೂಜಿ ಯೋಚನೆಯಲ್ಲಿ ಮುಳುಗಿದಳು. ಮೊಮ್ಮಗಳ ಮುಖ ಸಪ್ಪಗಾಗಿದ್ದು ಸಹಿಸಲಾಗದೇ ಪುನಃ ಸೂಜಿಯ ಹತ್ತಿರ ಬಂದು ತಲೆಮೇಲೆ ಕೈಯಾಡಿಸಿ , ಗದ್ದ ತುಟಿ ಹಿಡಿದು ನನ್ನ ಮಾತಿನಿಂದ ಬೇಸರವಾಯಿತಾ? ಸುಮ್ಮನೆ ಹಾಗಂದೆ ಬಾ ಅಂತ ರಮಿಸಿ ತನ್ನ ಮುಂದೆ ಕೂಡಿಸಿಕೊಂಡು ತಲೆ ಬಾಚಿ ಹೆರಳು ಹಾಕಿ " ಸಾಲೀನಿಂದ ಬೇಗ ಬಂದು ಬಿಡು" ಅಂತ ಹೇಳಿದಳು.
" ನಮ್ಮ ಅಜ್ಜಿಯ ಮನಸ್ಸು ಎಷ್ಟು ಕಠೋರವಾಗಿದೆಯೋ ಅಷ್ಟೇ ಮೃದು ಅವಳ ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಏನೋ ಒಮ್ಮೊಮ್ಮೆ ಹಾಗೆ ಮಾತಾಡ್ತಾಳೆ" ಅಂತ ಸೂಜಿ ಯೋಚಿಸುತ್ತಲೇ ಶಾಲೆಗೆ ಹೋದಳು.
ದೊಡ್ಡಾಯಿಯ ಸ್ವಭಾವ ಸೊಸೆ ಪಾರ್ವತಿಗೂ ಚನ್ನಾಗಿ ಗೊತ್ತಿತ್ತು . ತಾನು ಹೇಳಿದಂತೆ ಕೇಳದಿದ್ದರೆ ಅತ್ತೆ ಸುಮ್ಮನಿರೋದಿಲ್ಲ ಅಂತ ಇವಳಿಗೆ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸುತಿದ್ದಳು. ಬಿಸಿ ಬಿಸಿ ರೊಟ್ಟಿ ಬೇಯಿಸಿ ಊಟಕ್ಕೆ ಕರೆದಾಗ ದೊಡ್ಡಾಯಿ ಅಡುಗೆ ಮನೆ ಪ್ರವೇಶಿಸಿ ಎರ್ಡ್ಮೂರು ಬಿಸಿ ರೊಟ್ಟಿ ಗಂಗಾಳದಲ್ಲಿ ಹಾಕಿಸಿಕೊಂಡು ಮಜ್ಜಿಗೆ ಬೆಳ್ಳೂಳ್ಳಿ ಚಟ್ನಿ ಕಲೆಸಿ ಹೊಟ್ಟೆ ತುಂಬಾ ಊಟ ಮಾಡೇ ಹೊರ ಬರುತಿದ್ದಳು.
ದೊಡ್ಡಾಯಿ ಹೊರಗೆ ಬರುವದೇ ಓಣಿಯ ಮಹಿಳೆಯರು ತಲೆಬಾಗಿಲ ಕಟ್ಟೆಗೆ ಕಾಯುತ್ತಿದ್ದರು . ಬಂದಕೂಡಲೇ ಊಟ ತಿಂಡಿ ಕೆಲಸ ಕಾರ್ಯದ ಬಗ್ಗೆ ಪ್ರಶ್ನಿಸಿ ಪರಸ್ಪರ ಒಂದೆರಡು ಅನುಭವದ ಮಾತು ಜೊತೆಗೆ ಕಷ್ಟ ಸುಖ ಹಂಚಿಕೊಂಡು ಸಮಯ ಕಳೆಯುತಿದ್ದರು. ದೊಡ್ಡಾಯಿಯ ಮಾತೆಂದರೆ ಎಲ್ಲರಿಗೂ ಇಷ್ಟವಾಗುತಿತ್ತು. ಮದ್ಯಾಹ್ನವಾಗುತಿದ್ದಂತೆ ಇವಳು ಜೇಳಜಿ ಕಟ್ಟೆಗೆ ಬಂದು ಅಲ್ಲಿಯೇ ಸ್ವಲ್ಪ ವಿಶ್ರಾಂತಿ ಪಡೆಯಲು ಮುಂದಾಗುತಿದ್ದಳು.
ಸಾಯಂಕಾಲ ನಾಲ್ಕರ ಸುಮಾರಿಗೆ ಸೂಜಿ ಶಾಲೆಯಿಂದ ಬರುವದನ್ನೇ ಎದಿರುನೋಡುತಿದ್ದಂತೆ ಅವಳು ಬಂದು ಕೈಕಾಲು ಮುಖ ತೊಳೆದು ನೇರವಾಗಿ ಇವಳ ಮುಂದೆ ಬಂದು ಕುಳಿತು ಮುಗ್ಳನಗೆ ಬೀರುತಿದ್ದಳು. ಆಗ ದೊಡ್ಡಾಯಿ ಸೂಜಿಯ ಪಾಲಿಗೆ ಟೀಚರ್ ಆಗಿ ಬಿಡುತಿದ್ದಳು. ಅಂದು ಶಾಲೆಯಲ್ಲಿ ನಡೆದ ಆಟಪಾಠ ಮತ್ತಿತರ ವಿಷಯದ ಬಗ್ಗೆ ಮಾಹಿತಿ ಪಡೆದು " ನನ್ನ ಮೊಮ್ಮಗಳು ಬಹಳ ಶ್ಯಾಣ್ಯಾ" ಅಂತ ವರ್ಣನೆ ಮಾಡುವದು ಬಿಡುತಿರಲಿಲ್ಲ . ಅಜ್ಜಿಯ ಮಾತು ಸೂಜಿಗೂ ಖುಷಿ ಕೊಡುತಿತ್ತು.
" ನೀನು ಸಣ್ಣವಳಿದ್ದಾಗ ಶಾಲೆ ಇರಲಿಲ್ಲವೇ ? ಅಂತ ಒಮ್ಮೆ ಸೂಜಿ ಕುತೂಹಲದಿಂದ ಪ್ರಶ್ನಿಸಿದಾಗ " ಹ್ಜೂಂ ಆವಾಗಲೂ ಇದ್ದವು ಆದರೆ ಬರೀ ಪಾಟೀ ಬಳಪಾ ತೊಗೊಂಡು ಸಾಲೀಗಿ ಹೋಗುತಿದ್ದರು ಈಗಿನಂಗ ದುಬಾರಿ ಖರ್ಚಿನ ಸಾಲೀ ಗೀಲಿ ಇರಲಿಲ್ಲ " ಅಂತ ಹಿಂದಿನದನ್ನು ನೆನಪಿಸಿ ಹೇಳಿದಾಗ ಅಜ್ಜಿಯ ಮಾತು ಸೂಜಿಗೆ ಆಶ್ಚರ್ಯ ತರಿಸಿ "ಅಜ್ಜಿ ಇದು ಕಂಪ್ಯೂಟರ್ ಯುಗ , ಹಿಂದಿನ ಆ ಹಳೆಯ ಆ ಕಾಲ ಮುಗಿದು ಹೋಯಿತು " ಅಂತ ವಾಸ್ತವ ಹೇಳಿ ಮುಗ್ಳನಗೆ ಬೀರಿದಳು.
" ಕಾಲ ಎಂದೂ ಬದಲಾಗಲ್ಲ ನಾವು ಬದಲಾಗ್ತೀವಿ ಅಷ್ಟೇ ನಾವು ವಾಸ ಮಾಡೋ ಭೂಮಿ , ಬಿಸಿಲು ಬೆಳಕು ಗಾಳಿ ಮಳೆ ಎಲ್ಲವೂ ಅವೇ ಇರುವಾಗ ಬದಲಾಗಿದೆ ಅಂತ ಹ್ಯಾಂಗ ಹೇಳತಿ ನಿನ್ನ ಮಾತು ನಾನು ಒಪ್ಪೋದಿಲ್ಲ ಅಂತ ಹೇಳಿದಳು.
" ಇಂದು ಚಂದ್ರ ಲೋಕ , ಮಂಗಳ ಲೋಕಕ್ಕೆ ಹೋಗಿ ಹೊಸ ಹೊಸ ಸಂಶೋಧನೆ ಮಾಡುವ ಕಾಲವಿದು ಇದೆಲ್ಲ ನಿನಗ ಹ್ಯಾಂಗ ಅರ್ಥಾಆಗಬೇಕು " ಅಂತ ಹಾಸ್ಯ ಮಾಡಿದಳು.
"ಹೋದವರಿಗೆ ಚಂದ್ರ ಸಿಕ್ಕಾನೇನು? ಅಂತ ಪ್ರಶ್ನಿಸಿದಾಗ ಅಜ್ಜಿಯ ಪ್ರಶ್ನೆ ಸೂಜಿಗೆ ಆಶ್ಚರ್ಯ ತರಿಸಿತು. ಇಬ್ಬರ ಮಧ್ಯೆ ವಾದ ವಿವಾದ ಚರ್ಚೆ ಆಗಾಗ ನಿತ್ಯ ನಿರಂತರ ಮುಂದುವರೆಯುತ್ತಲೇ ಇರುತಿತ್ತು ಇಬ್ಬರ ಮಧ್ಯೆ ವಾದ ಚರ್ಚೆ ಒಮ್ಮೊಮ್ಮೆ ತಾರಕಕ್ಕೇರಿದಾಗ
" ನಿಮ್ಮ ಅಜ್ಜಿ ಜೊತೆ ಯಾಕೆ ವಾದಾ ಮಾಡತಿ? ನಿನ್ನ ಓದು ಬರಹದ ಕಡೆ ಗಮನಾ ಕೊಡು ಬಹಳ ದೊಡ್ಡವಳಗೀದೇನು " ಅಂತ ಪಾರ್ವತಿ ಪ್ರಶ್ನಿಸಿ ಬುದ್ಧಿವಾದ ಹೇಳಲು ಮುಂದಾಗುತಿದ್ದಳು.
ಆಗ ದೊಡ್ಡಾಯಿ ಮತ್ತೆ ಮೊಮ್ಮಗಳ ಪರ ವಹಿಸಿ " " ಇವಳ ವಯಸ್ಸಿನ್ಯಾಗ ನಿನಗ ಮಾತಾಡಲಿಕ್ಕೂ ಬರುತಿರಲಿಲ್ಲ , ಇವಳಷ್ಟು ಶ್ಯಾಣ್ಯಾ ನೀನು ಈಗಲೂ ಇಲ್ಲ, ಏನೋ ಕಳ್ಳುಬಳ್ಳಿ ಸಂಬಂಧ ಅಂತ ನಿನಗೆ ಸೊಸೆಯಾಗಿ ಮಾಡಿಕೊಂಡೆ" ಅಂತ ಆವಾಜ್ ಹಾಕಿ ಬಾಯಿ ಮುಚ್ಚಿಸಲು ಮುಂದಾದಾಗ ಸೂಜಿಗೆ ನಗೆ ತರಿಸುತಿತ್ತು.
ಅಜ್ಜಿ ಮೊಮ್ಮಗಳ ಮಧ್ಯೆ ಹಳೆ ಬೇರು ಹೊಸ ಚಿಗುರಿನ ಸಂಬಂಧ ಬಿಡಿಸದ ನಂಟಾಗಿತ್ತು. ಆಳು ಮಗ ಎತ್ತುಗಳಿಗೆ ನೀರು ಮೇವಿನ ವ್ಯವಸ್ಥೆ ಮಾಡುವಾಗ ಅವಳು ಪತ್ತೇದಾರಿ ಕಣ್ಣಿನಿಂದ ನೋಡಿ ಹಾಗೆ ಮಾಡು ಹೀಗೆ ಮಾಡು ಅಂತ ಸಲಹೆ ಸೂಚನೆ ಕೊಡುವದು ಬಿಡುತಿರಲಿಲ್ಲ. ಆತನಿಂದ ಸಣ್ಣ ಪುಟ್ಟ ಲೋಪವಾದರೆ ಬೈದು ಬಿಡುತಿದ್ದಳು ಆಳುಮಗ ಸಂಭಾವಿತನಾಗಿದ್ದ ಇವಳು ಏನು ಹೇಳಿಲಿ ಮರು ಮಾತಾಡದೆ ತಲೆಯಾಡಿಸುತಿದ್ದ .
"ಅವ್ವ ಹಂಗೇ ಹೇಳತಿರ್ತಾಳೆ ನೀನೇನೂ ಅವಳ ಮಾತು ಮನಸ್ಸಿಗೆ ಹಚಗೋಬ್ಯಾಡ ಅಂತ ಬಸವ ಅನೇಕ ಸಲ ಆಳುಮಗನಿಗೆ ಸಮಜಾಯಿಷಿಯೂ ನೀಡುತಿದ್ದ.
ಆಳುಮಗ ಅಂದು ಬೇಗ ಬರದೇ ಕೆಲಸಕ್ಕೆ ಸ್ವಲ್ಪ ತಡವಾಗಿ ಬಂದಾಗ ದೊಡ್ಡಾಯಿಗೆ ಆತನ ಮೇಲೆ ಕೆಂಡದಂತಹ ಕೋಪ ಬಂದು ಒಂದೇ ಸವನೆ ಬೈಗುಳ ಶುರು ಮಾಡಿದಳು. ಆಳುಮಗ ಮಾತ್ರ ದೊಡ್ಡಾಯಿ ಬೈದರೂ ಎದಿರುತ್ತರ ಕೊಡದೆ ಮೌನಕ್ಕೆ ಶರಣಾಗಿ ಮುಗ್ಳನಗೆ ಬೀರುತ್ತಾ ನಿಂತುಕೊಂಡ ಆತನ ಮೇಲೆ ಎಲ್ಲರಿಗೂ ಕನಿಕರ ಮೂಡಿದರೆ ದೊಡ್ಡಾಯಿಗೆ ಮಾತ್ರ ಯಾವುದೇ ಕನಿಕರ ಮೂಡಲಿಲ್ಲ ಆತ ಮುಖ ಸಪ್ಪಗೆ ಮಾಡಿಕೊಂಡು ಹೊಲದ ಕಡೆ ಹೊರಟು ಹೋದ. ಸಾಯಂಕಾಲ ಆಳುಮಗ ವಾಪಸ್ ಮನೆಗೆ ಬರುವಾಗ ಇನ್ನೊಂದು ಅನಾಹುತ ಸಂಭವಿಸಿತು. ಎತ್ತು ಮನೆಯ ಮುಂದಿನ ಬಂಡೆಗಲ್ಲಿಗೆ ಎಡವಿ ಕಾಲಿಗೆ ಗಾಯ ಮಾಡಿಕೊಂಡು ಕುಂಟತೊಡಗಿತು.
ಎತ್ತಿಗೆ ಹೀಗಾದದ್ದು ನೋಡಿ ದೊಡ್ಡಾಯಿಗೆ ಕೆಂಡದಂತಹ ಕೋಪ ಆವರಿಸಿ ಆಳುಮಗನಿಗೆ ಬೈಯಲು ಶುರು ಮಾಡಿದಳು.ಇವಳ ಬೈಯುವ ಧನಿ ಕೇಳಿ ಅಕ್ಕ ಪಕ್ಕದವರೂ ಜಮಾವಣೆಗೊಂಡು ಸಮಾಧಾನ ಹೇಳಲು ಮುಂದಾದರು. "ಅವನೇನು ಬೇಕಂತಲೇ ಮಾಡ್ಯಾನೇನು? ಅವನಿಗ್ಯಾಕೆ ಬೈಯೋದು ? ಏನೋ ಆಕಸ್ಮಿಕ ಆಗಿ ಹೋಗಿದೆ ಅಂತ ಬಸವ ಕೂಡ ಸಾಕಷ್ಟು ತಿಳಿ ಹೇಳಲು ಮುಂದಾದ.
" ಎತ್ತು ಪುಗಸೆಟ್ಟೆ ಬರ್ತಾವಾ? ನಾವೇನು ಪಗಾರ ಕೊಡದೇ ಇವನಿಗೆ ಜೀತಕ್ಕಿಟ್ಕೊಂಡೀವಾ? ನಾನು ಸುಮ್ಮನೆ ಬಿಡಂಗಿಲ್ಲ ನಾಲ್ಕು ಜನರ ಕರೆಸಿ ಪಂಚಾಯಿತಿ ಮಾಡಿ ದಂಡಾ ಕಟ್ಟತೀನಿ ಅಂದಾಗಲೇ ಇವನಿಗೆ ಬುದ್ಧಿ ಬರೋದು" ಅಂತ ದೊಡ್ಡಯಿ ದೊಡ್ಡ ಸದ್ದು ಮಾಡಿ ಹೇಳಿದಾಗ ಆಳು ಮಗ ಬೆವರಿಹೋದ. ಆತನ ಕಣ್ಣು ತೇವಗೊಂಡವು.
"ನಮ್ಮ ಮನ್ಯಾಗ ಇವನ ಜೀತಾ ಸಾಕು ಇವನಿಗೆ ಬಿಡಿಸಿ ಬೇರೆಯವರಿಗೆ ಜೀತಕ್ಕಿಟ್ಕೊ " ಅಂತ ಖಡಕ್ಕಾಗಿ ಸೂಚಿಸಿದಳು. ಮರುದಿನವೂ ಇವಳ ಜಿದ್ದು ಹಾಗೇ ಮುಂದುವರೆಯಿತು ಪುನಃ ಆಳುಮಗನ ವಿಷಯ ಕೆದಕಿ " ಇವನು ಯಾರ ಮನ್ಯಾಗ ಜೀತಾ ಮಾಡ್ತಾನೊ ಆ ಮನೆಯವರು ಉದ್ಧಾರೇ ಆಗಿಲ್ಲ. ಅಗಸಿ ಮನಿ ಮಲ್ಲಪ್ಪ ಎರಡೇ ವರ್ಷದಾಗ ಬಂಗಾರದಂಥಾ ಹೊಲಾ ಮಾರಿ ಬಂಬೈಕಡಿ ಕೂಲೀಗಿ ಹೋದ. ಮ್ಯಾಲಿನ ಮನಿ ಧರೆಪ್ಪ ಇವನಿಗಿಟ್ಕೊಂಡೇ ಕಿಲಾರಿ ಎತ್ತು ಸತ್ತು ಒಕ್ಕಲುತನ ಮೂರಾಬಟ್ಟೆ ಆಯಿತು. " ಅಂತ ಉದಾಹರಣೆ ನೀಡಿ ವಾದ ಮುಂದುವರೆಸಿದಳು.
ಅವ್ವನ ಖಡಕ್ಕ ಮಾತು ಬಸವನಿಗೆ ದ್ವಂದ್ವದಲ್ಲಿ ಮುಳುಗಿಸಿತು. "ಏಕಾಏಕಿ ಆಳುಮಗನಿಗೆ ಜೀತಾ ಬಿಡಿಸಿದರೆ ಹೇಗೆ? ಪಾಪ ಆತ ಬಡವ ಮುಂದೆ ಅವನ ಗತಿ ಏನು? ಜನ ಏನಂದಾರು, ಅಂತ ಯೋಚಿಸತೊಡಗಿದ.
ಮರುದಿನ ದೊಡ್ಡಾಯಿ ಎಂದಿನಂತೆ ಪೂಜಾ ಪಾಠ ಮುಗಿಸಿದರೂ ಬಾಯಿಗೆ ಹನಿ ನೀರು ಹಾಕದೆ ತುತ್ತು ಅನ್ನ ತಿನ್ನದೆ ಮೌನಕ್ಕೆ ಶರಣಾಗಿ ಕುಳಿತಾಗ ಪಾರ್ವತಿಗೂ ಚಿಂತಿಯಾಯಿತು ಅವಳ ಮನವೊಲಿಸುವ ಎಲ್ಲ ಪ್ರಯತ್ನ ಮಾಡಿದಳು ಆದರೆ ದೊಡ್ಡಾಯಿ ಮಾತ್ರ ಸೊಸೆಯ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ.
ಸಾಯಂಕಾಲ ಸೂಜಿ ಶಾಲೆಯಿಂದ ಬಂದು ಕೈಕಾಲು ಮುಖ ತೊಳೆದು ಎಂದಿನಂತೆ ಅಜ್ಜಿಯ ಮುಂದೆ ಕುಳಿತಾಗ ಇವಳ ಜೊತೆಗೂ ಅವಳು ಮಾತಾಡದೆ ಮೌನವೃತ ಮುಂದೆವರೆಸಿದಳು.
" ಅಜ್ಜಿ ನಿನಗಿವತ್ತು ಏನಾಗಿದೆ ಯಾಕೆ ಮಾತಾಡ್ತಿಲ್ಲ " ಅಂತ ಸೂಜಿ ಪ್ರಶ್ನಿಸಿದಾಗ
"ಏನು ಮಾತಾಡಲಿ ನನ್ನ ಮಾತು ಈ ಮನ್ಯಾಗ ಯಾರು ಕೇಳತಾರೆ ? ನಾನೀಗ ಸವಕಲು ನಾಣ್ಯ ಎಂದಳು. ಹಂಗ್ಯಾಕ ಹೇಳತಿ ನಿನ್ನ ಮಾತು ನಾವೇನು ಮೀರ್ತೀವಾ? ಅಂತ ಪ್ರಶ್ನಿಸಿದಳು.
" ನಾನು ಮದುವೆ ಮಾಡಿಕೊಂಡು ಈ ಮನೀಗಿ ಬಂದಾಗ ತುತ್ತು ಕೂಳಿಗೂ ಗತಿಯಿರಲಿಲ್ಲ ನಿಮ್ಮ ಅಜ್ಜ ಬಡತನ ಹಾಸಿ ಹೊದ್ದುಕೊಂಡಿದ್ದ ನನ್ನ ಮೈಮ್ಯಾಲಿನ ಬಂಗಾರ ಮಾರಿ ಹೊಲಾ ಖರೀದಿ ಮಾಡಿದ ಇವತ್ತು ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡತಾರೋದು ನನ್ನಿಂದಲೇ ಆದರೆ ಯಾರೂ ಇವತ್ತು ನನ್ನ ಮಾತಿಗೆ ಬೆಲೆ ಕೊಡ್ತಿಲ್ಲ " ಅಂತ ಕಣ್ಣಂಚಿನಲ್ಲಿ ನೀರು ತಂದಳು .
ಅಜ್ಜಿಯ ಮಾತು ಸೂಜಿಗೆ ಯೋಚನೆಯಲ್ಲಿ ಮುಳುಗಿಸಿತು. ಇಷ್ಟೆಲ್ಲಾ ಮಾಡಿದ್ದಾಳೇನೊ ನಿಜಾ ಆದರೆ ಆಳು ಮಗನ ವಿಷಯದಲ್ಲಿ ಹಿಂಗ್ಯಾಕೆ? ವರ್ತಿಸುತಿದ್ದಾಳೆ? ಪಾಪ ಆಳುಮಗ ದಿನವಿಡಿ ಕಷ್ಟ ಪಟ್ಟು ದುಡಿಯೋದು ನಮ್ಮ ಸಲುವಾಗೇ ಅಲ್ಲವೇ? ಆದರೂ ಅವನ ಮ್ಯಾಲ ಯಾಕೆ ಇವಳಿಗೆ ಕನಿಕರ ಮೂಡ್ತಿಲ್ಲ ? ಆತನ ಕಂಡರೆ ಯಾಕೆ ತಿರಸ್ಕಾರ, ಕೋಪ ತಾಪ ಅಂತ ಯೋಚಿಸಿದಳು.
ಮರುದಿನ ಮುಂಜಾನೆ ಸೂಜಿ ತಲೆ ಬಾಚಿಕೊಳ್ಳಲು ಬಂದಾಗ ಅಜ್ಜಿಯ ಮುಖದಲ್ಲಿ ಬರೀ ನೋವು ನಿರಾಸೆಯೇ ತುಂಬಿತ್ತು.
"ನನ್ನ ಜೀವನ ಹನ್ನೊಂದು ತಾಸು ಕಳೆದು ಇನ್ನೊಂದು ತಾಸು ಉಳಿದಿದೆ ಆದಷ್ಟು ಜಲ್ದಿ ಕಣ್ಮುಚ್ಚಬೇಕು" ಅಂತ ಮುಖ ಸಪ್ಪಗೆ ಮಾಡಿ ಹೇಳಿದಾಗ "ಅಜ್ಜಿ ನೀ ಹಿಂಗ್ಯಾಕೆ ಮಾತಾಡ್ತಿ" ಅಂತ ಸೂಜಿ ಪ್ರಶ್ನಿಸಿದಳು. ಆದರೆ ಅವಳು ಉತ್ತರ ಕೊಡದೆ ಶೂನ್ಯ ದಿಟ್ಟಿಸತೊಡಗಿದಳು ಅಜ್ಜಿಯ ಯೋಚನೆಯಲ್ಲೇ ಸೂಜಿ ಶಾಲೆಗೆ ಹೋದಳು.
ಅಂದು ಮನೆಯಲ್ಲಿ ದೊಡ್ಡಾಯಿ ಹೊರತು ಬೇರೆ ಯಾರೂ ಇರಲಿಲ್ಲ ಮಗ ಸೊಸೆ ಇಬ್ಬರೂ ಸಂಬಂಧಿಕರ ಮದುವೆಗೆ ಹೋಗಿದ್ದರು. ಇದ್ದಕ್ಕಿದ್ದಂತೆ ಇವಳ ಆರೋಗ್ಯದಲ್ಲಿ ಏರುಪೇರಾಗಿ ತಿರುಗಾಡಲಾಗದೆ ನರಳುತ್ತಾ ಜೇಳಜಿ ಕಟ್ಟೆಗೆ ಮಲಗಿಕೊಂಡಳು.
ಆಳುಮಗ ಹೊಲದಿಂದ ಬರುತ್ತಲೇ ಇವಳ ಸ್ಥಿತಿ ನೋಡಿ ಗಾಬರಿಯಾದ. ದೊಡ್ಡಾಯಿಯ ನರಳಾಟ ಅವನಿಂದ ಸಹಿಸಲಾಗದೆ ಹತ್ತಿರ ಬಂದು ಹಣೆಯ ಮೇಲೆ ಕೈಯಿಟ್ಟು ನೋಡಿದಾಗ ಅದು ಕಾದ ಹಂಚಿನಂತೆ ಒಂದೇ ಸವನೆ ಸುಡುತಿತ್ತು. ತಕ್ಷಣ ತನ್ನ ಹೆಗಲ ಮೇಲಿನ ಶಲ್ಯ ನೀರಿನಲ್ಲಿ ತೊಯ್ಸಿ ಅವಳ ಹಣೆಯ ಮೇಲೆ ಹಾಕಿ ಸ್ವಲ್ಪ ಹೊತ್ತು ಉಪಚರಿಸಿದ. ಅಷ್ಟರಲ್ಲಿ ಸೂಜಿ ಕೂಡ ಶಾಲೆಯಿಂದ ವಾಪಸ್ಸಾದಳು ಅಜ್ಜಿಗೆ ಏಕಾಏಕಿ ಹೀಗಾದದ್ದು ಇವಳ ಮನಸ್ಸಿಗೆ ಅಘಾತವಾಯಿತು. ಅಜ್ಜಿ ನಮಗೆಲ್ಲ ಬಿಟ್ಟು ಹೋದರೆ ಏನು ಮಾಡೋದು? ಅನ್ನುವ ಆತಂಕ ಕಾಡಿ ಕಣ್ಣೀರು ಸುರಿಸತೊಡಗಿದಳು. ಸ್ವಲ್ಪ ಸಮಯದ ನಂತರ ಅವಳು ಕಣ್ಣು ಬಿಟ್ಟು ಸೂಜಿಯ ಕಡೆಗೊಮ್ಮೆ ಆಳುಮಗನ ಕಡೆಗೊಮ್ಮೆ ನೋಡಿ ಕಣ್ತುಂಬಾ ನೀರು ತಂದಳು.
ಮದುವೆ ಮುಗಿಸಿಕೊಂಡು ಬಸವ ಮನೆಗೆ ಬಂದಾಗ ಇವಳ ಸ್ಥಿತಿ ಗಾಬರಿ ತರಿಸಿತು. ತಕ್ಷಣ ಇವಳನ್ನು ದವಾಖಾನೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ. ಆಳು ಮಗನ ಸಮಯ ಪ್ರಜ್ಞೆಯ ಬಗ್ಗೆ ಸೇರಿದವರೆಲ್ಲ ವರ್ಣನೆ ಮಾಡುತಿದ್ದರು " ನೀನಿರದಿದ್ದರೆ ನಮ್ಮ ಅವ್ವನ ಜೀವ ಉಳೀತಿರಲಿಲ್ಲ" ಅಂತ ಬಸವ ಆಳುಮಗನಿಗೆ ಕೃತಜ್ಞತೆ ಹೇಳಿದಾಗ . ದೊಡ್ಡಾಯಿ ಮಗನ ಕಡೆ ನೋಡಿ ಕಣ್ತುಂಬಾ ನೀರು ತಂದಳು. ಅವನಿಗೆ ನಾಳೆನೆ ಜೀತಾ ಬಿಡಸ್ತೀನಿ ಚಿಂತೆ ಮಾಡಬೇಡ ಅಂತ ಬಸವ ದೊಡ್ಡಾಯಿಗೆ ಭರವಸೆ ನೀಡಿದಾಗ ಇವಳು ಬೇಡ ಅಂತ ಕೈಸನ್ನೇ ಮಾಡಿದಳು. ಇವಳ ಮಾತು ಎಲ್ಲರಿಗೂ ಆಶ್ಚರ್ಯ ತರಿಸಿತು. ದೊಡ್ಡಾಯಿ ಇಷ್ಟು ಬೇಗ ಪರಿವರ್ತನೆಯಾಗ್ತಾಳೆ ಅಂತ ಯಾರೂ ಉಹಿಸಿರಲಿಲ್ಲ. ಅಜ್ಜಿ ಬದಲಾದದ್ದು ಸೂಜಿಗೆ ಎಲ್ಲಿಲ್ಲದ ಖುಷಿಯಾಯಿತು ಅಮ್ಮನ ಕಡೆಗೊಮ್ಮೆ ಅಜ್ಜಿಯಕಡೆಗೊಮ್ಮೆ ನೋಡಿ ಒಂದೇ ಸವನೆ ಆನಂದಭಾಷ್ಪ ಸುರಿಸಲು ಆರಂಭಿಸಿದಳು.
ಶರಣಗೌಡ ಬಿ.ಪಾಟೀಲ ತಿಳಗೂಳ
ಲೇಖಕ ಶರಣಗೌಡ ಪಾಟೀಲ ಅವರು ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)
ಪ್ರಶಸ್ತಿ-ಪುರಸ್ಕಾರಗಳು: ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ ಪ್ರಶಸ್ತಿ ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ.
More About Author