Poem

ನೀವು ಕೂರಿಸಿದ ತಕ್ಕಡಿಯಲ್ಲಿ

ಬೆಳಕಿನಲ್ಲಿ ಅಣುರೇಣುಗಳ ಹೊಯ್ದಾಟ
ಕತ್ತಲಿನಲ್ಲಿ ಅವೇ ಚುಕ್ಕಿಗಳ ಹುಡುಕಾಟ
ಇನ್ನೇನು ಉಕ್ಕಿಸ ಬಲ್ಲದು ಕಣ್ಣು?
ಅತ್ತರೂ, ನಕ್ಕರೂ ಒಂದೇ ಚಕ್ರ
ಅಸಹಾಯಕತೆಯ ಚಲನಚಿತ್ರ ಮಾತ್ರ
ಒಲವಿರಲಿಲ್ಲ ನನಗೂ ದುರಂತದ
ಚಿತ್ರವೆಂದು ಕರೆಸಿಕೊಳ್ಳಲು!

ಎಲ್ಲ ಹೇಗೆ ಆಗುತ್ತದೆ?
ಯಾಕಾಗಿ ಆಗುತ್ತದೆ?
ಲೋಕದ ವ್ಯವಹಾರ,
ಪರ ಲೋಕದ ವಿಚಾರ
ಸಿಗದ ಲೆಕ್ಕಾಚಾರ

ಪುಣ್ಯದ ಕಾಯಕಗಳು
ಕಾಯುತ್ತವೆ; ನಂಬಿಕೆಗಳು
ಸತ್ಯವಾಗುತ್ತವೆಂದೇನಿಲ್ಲ.
ತರ್ಕಮೀರಲು ಸಂಗತಿಗಳು
ಕಾಯುತ್ತಿರುತ್ತವೆ
ಆಟ ಆಡಿಸುವವನ ಚಿತ್ತವೃತ್ತಿ
ಯೋಗವೂ, ವಿಯೋಗವೂ!

ನೀವು ಕೂರಿಸುತ್ತೀರಿ ತಕ್ಕಡಿಯಲ್ಲಿ
ತೂಕಕ್ಕೆ ಹಾಕಲು ಮನಸ್ಸಿಲ್ಲ.
ಸರಿ ತಪ್ಪುಗಳು ಲೆಕ್ಕಕ್ಕೆ ಸಿಗುವುದಿಲ್ಲ
ಜಮಖಾನೆ ಹಾಸಿ, ತಬ್ಬಿ
ತಾಂಬೂಲ ಕೊಟ್ಟವರೆಲ್ಲ
ಒಳ ಮನೆಯಲ್ಲೇ ನಿಂತು ಬಿಡುತ್ತಾರೆ.
ಮಾತು ಮಥಿಸಿ ಬೆಂಕಿ ತರುತ್ತಾರೆ.

ಹೇಳಲಾಗುತ್ತದೆಯೆ? ನನ್ನದೇನಿಲ್ಲ
ಆಡಬೇಡಿ ಪಾಪದ ಮಾತುಗಳ
ಚುಚ್ಚಬೇಡಿ ಮುಳ್ಳುಗಳ.
ಒಗೆಯಬೇಡಿ ಗೂಡಿಗೆ ಕಲ್ಲುಗಳ.

ಹಾರಿಹೋದ ಜೇನುಹುಳುಗಳು
ಮತ್ತೆ ಬರುವುದಿಲ್ಲವೆಂದಿಲ್ಲ.
ಗೂಡು ಕಟ್ಟಲು ಜಾಗವಿದೆ.
ಹೊಸ ಹೂಗಳು ಅರಳುತ್ತವೆ

ಆಕಾರವ ಪಡೆಯಲಿ ತಂಪು ಬೆಳಕಿನ
ಶುಭದ ಮಾತುಗಳು ಮಾತ್ರ.
ಇಲ್ಲವಾದರೆ
ಬೆಂಕಿ ಮಾತುಗಳ ಝಳಕ್ಕೆ ಮೈ ಕರಗಿ
ನಾನು ಕೂಡ ಇಲ್ಲವಾಗಿ ಬಿಡುತ್ತೇನೆ.

- ವಿದ್ಯಾ ಭರತನಹಳ್ಳಿ

ವಿಡಿಯೋ
ವಿಡಿಯೋ

ವಿದ್ಯಾ ಭರತನಹಳ್ಳಿ

ವಿದ್ಯಾ ಭರತನಹಳ್ಳಿ ಅವರು ಮೂಲತಃ ಶಿರಸಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕವನ, ಕಥೆ ಅವರ ಆಸಕ್ತಿ ಕ್ಷೇತ್ರ.

More About Author