2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ಯ್ರೋತ್ಸವ ಕಥಾಸ್ಪರ್ಧೆಯ ಸಮಾಧಾನಕರ ಬಹುಮಾನ ಪಡೆದ ಅನುಪಮಾ ಪ್ರಸಾದ್ ಅವರ ‘ಕುಂತ್ಯಮ್ಮಳ ಮಾರಾಪು’ ಕತೆ ನಿಮ್ಮ ಓದಿಗಾಗಿ..
ರಾಜಪ್ಪ ತನ್ನ ನಿಲ್ದಾಣ ಬರುವ ಅರ್ಧಘಂಟೆ ಮೊದಲೇ ಎಚ್ಚರಾಗುವಂತೆ ಅಲರಾಂ ಇಟ್ಟುಕೊಂಡಿದ್ದ. ಮುಖ್ಯ ಪೇಟೆಗಿಂತ ಬಹಳ ಹಿಂದೆಯೇ ಅವನಿಳಿಯಬೇಕಾದ ಊರು ಸಿಗುವುದರಿಂದ ಬೆಳಗಿನ ಜಾವ ಬಸ್ಸಿಂದ ಇಳಿಯುವ ಮೊದಲ ಪಯಣಿಗ ಅವನೇ. ಅಲರಾಂ ಅವಶ್ಯಕತೆ ಇಲ್ಲದಂತೆ ಮತ್ತೂ ಕಾಲು ಘಂಟೆ ಮೊದಲೇ ಅವನ ಸೀಟ್ ತಟ್ಟಿ ನಿರ್ವಾಹಕ ಎಚ್ಚರಿಸಿ ಹೋಗಿದ್ದರಿಂದ ನಿಧಾನವಾಗಿ ಎದ್ದು ಅರೆ ಬೆನ್ನಿನಲ್ಲಿ ಕುಳಿತು ಕಿಟಕಿಯ ಪರದೆ ಸರಿಸಿ ಹೊರಗಿಣುಕಿದ. ಆಗಲೇ ಆಗಸದಲ್ಲಿ ಬೆಳಕಿನ ಛಾಯೆ. ಕನ್ನಡಕ, ಹೊದೆದುಕೊಂಡಿದ್ದ ತೆಳ್ಳನೆ ರಗ್ಗು ಬ್ಯಾಗಿಗೆ ತುರುಕಿಸಿ, ಮುಖ ಗವುಸು ಹಾಕಿಕೊಂಡು ಅಪ್ಪರ್ ಸೀಟಿಂದ ಕೆಳಗಿಳಿದು, ಚಪ್ಪಲಿ ಸಿಗಿಸಿ, ಹೆಗಲ ಬ್ಯಾಗ್ ನೇಲಿಸಿಕೊಂಡು ಮೆಟ್ಟಿಲುಗಳ ಸಮೀಪ ಬಂದು ನಿಂತ. ತನ್ನ ಹಿಂದೆ ಇನ್ಯಾರಾದರೂ ಇಳಿಯುತ್ತಾರೇನೊ ಎಂದು ಬಸ್ಸಿನುದ್ದಕ್ಕು ಕಣ್ಣಾಡಿಸಿದ. ಯಾರು ಇರಲಿಲ್ಲ. ಒಂದಿಬ್ಬರು ತಂತಮ್ಮ ಸೀಟುಗಳಡಿಯಲ್ಲಿ ತುರುಕಿಸಿಟ್ಟ ಚಪ್ಪಲಿಗಳನ್ನು ಹುಡುಕುವುದೊ, ಬ್ಯಾಗುಗಳನ್ನು ಸರಿಪಡಿಸಿಕೊಳ್ಳುವುದರಲ್ಲೊ ತೊಡಗಿದ್ದರು. ಬಸ್ಸು ಅರೆಕ್ಷಣ ನಿಂತಂತೆ ಮಾಡಿ ಆತನ ಕಾಲುಗಳು ನೆಲ ಸೋಕುತ್ತಿದ್ದಂತೆ ಮುಂದಕ್ಕೆ ಚಲಿಸಿತ್ತು.
ರಾಜಪ್ಪ ಮೈ ಮುರಿದು ಕೈ ಕಾಲು ಜಾಡಿಸಿಕೊಳ್ಳುತ್ತ ರಸ್ತೆಯ ಎರಡೂ ದಿಕ್ಕಿಗೆ ಕಣ್ಣಾಡಿಸಿದ. ನಿರ್ಜನ ರಸ್ತೆ. ನಸುಕು ವಿಸ್ತರಿಸಿಕೊಳ್ಳುತ್ತಿತ್ತು. ಇಕ್ಕೆಲಗಳಲ್ಲಿ ಹಸಿರು. ಅರೆಬರೆ ಒಣಗಿದ ಹುಲ್ಲು. ಮುಖ ಗವುಸು ತೆಗೆದು ಅಕ್ಕಪಕ್ಕದ ಹಸಿರನ್ನು ಕಣ್ಣೊಳಗಿಳಿಸಿಕೊಳ್ಳುತ್ತ, ಇಷ್ಟು ದಿನ ಅರೆಬರೆ ಉಸಿರಾಡಿದವನಂತೆ ನಿಧಾನವಾಗಿ ಒಂದು ದೀರ್ಘ ಉಸಿರೆಳೆದು ಅಷ್ಟೇ ನಿಧಾನವಾಗಿ ಹೊರ ಕಳಿಸಿದ. ಒಣ ಹುಲ್ಲಿನ ಮೇಲೆ ಸಣ್ಣ ಸಣ್ಣ ಚಿಟ್ಟೆಗಳ ಹಾರಾಟ, ಆಗಷ್ಟೆ ಸುರುವಾಗುತ್ತಿರುವ ಹಕ್ಕಿಗಳ ಕಲರವ. ರಾತ್ರಿ ಪ್ರಯಾಣದ ಆಯಾಸ ಮೈ ಮನಸಿಂದ ಹೊರ ಹೋದ ಅನುಭವವಾಗಿ ನಿರಾಳವೆನಿಸಿತು. ನೀರಿನ ಬಾಟ್ಲಿ ತೆರೆದು ಮುಖಕ್ಕೆ ಸೋಕಿಕೊಂಡು ಬಾಯಿ ಮುಕ್ಕಳಿಸಿದ. ತುಸು ಆಚೆ ಹೋಗಿ ಜಿಪ್ ಇಳಿಸಿ ಕೆಳಹೊಟ್ಟೆ ಖಾಲಿ ಮಾಡಿದಾಗ ಮತ್ತಷ್ಟು ಹಾಯೆನಿಸಿತು. ಇಳಿದಲ್ಲಿಂದ ಅರ್ಧ ಕಿಮೀ ಹಿಂದಕ್ಕೆ ನಡೆದು ಕಿರಿದಾದ ಸರ್ವಿಸ್ ರಸ್ತೆಯಲ್ಲಿ ಹೆಜ್ಜೆ ಹಾಕಿದ. ನಡೆಯುತ್ತ ಹೋದಂತೆ ಸಣ್ಣ ಊರು ಪೇಟೆ ಎದುರಾಯ್ತು. ಆ ಊರು ಈ ಊರುಗಳಂತೆ ಅದೊಂದು ಸಣ್ಣೂರು. ಆದರೂ ಕೆಲವೊಂದು ಊರುಗಳಿಗೆ ಸಿಗುವ ತುಸು ಹೆಚ್ಚಿನ ಅನುಕೂಲವೆಂಬಂತೆ ಈ ಊರು ಹೆದ್ದಾರಿಗೆ ಸಮೀಪವಿರುವ, ಸರ್ವಿಸ್ ರಸ್ತೆಯ ಬದಿಯಲ್ಲೆ ಇದೆ. ಸರ್ವಿಸ್ ಬಸ್ಟಾಪಿಗೆ ಹೊಂದಿಕೊಂಡಂತೆ, ಎದುರುಗಡೆಯಿಂದ ಆಮ್ಲೆಟ್ಟು, ಪಾನು, ಹಿಂದುಗಡೆಯಿಂದ ಓಸಿ ಕಟ್ಟುವ ವ್ಯವಸ್ಥೆಯಿರುವ ಗೂಡಂಗಡಿ, ತುಸು ಆಚೀಚೆ ನಾಲ್ಕಾರು ಅಂಗಡಿಗಳು, ಒಂದು ದವಾಖಾನೆ, ತುಸು ಅಂತರದಲ್ಲಿ ಎರಡು ಬ್ಯಾಂಕುಗಳು, ಹಳೆ ಕಾಲದ ಒಂದು ದರ್ಶಿನಿ, ಈ ಕಾಲದ್ದಾಗಿ ನೆಲಕ್ಕೆ ಟೈಲ್ಸ್ ಅಳವಡಿಸಿದ ತಾರಸಿ ಮಾಡಿನ ಕೋಲ್ಡ್ ಹೌಸ್ ಇರುವ ಹಳ್ಳಿಪೇಟೆ. ಇದು ಇನ್ನೂ ಪೇಟೆಯಾಗಿ ಬೆಳೆಯುವುದಿದೆ ಎಂಬಂತೆ ನೇರ ರಸ್ತೆಯ ಎರಡು ಬದಿಯಲ್ಲೂ ಅಲ್ಲಲ್ಲಿ ಅರೆಬರೆ ಕಟ್ಟಡ ಕಾಮಗಾರಿ. ದೂರ ದೂರದಲ್ಲಿ ಅಲ್ಲೊಂದು ಇಲ್ಲೊಂದು ಲಾಗಾಯ್ತಿನಿಂದ ಇರುವ ನಾಡ ಹೆಂಚಿನದ್ದೊ, ತಾರಸಿಯದ್ದೊ ಸಾಧಾರಣ ಮನೆಗಳು. ಕೆಲವು ಮನೆಗಳಲ್ಲಿ ದಿನಚರಿ ಸುರುವಾದ ಕುರುಹೆಂಬಂತೆ ಮಾಡಿನ ಯಾವುದೋ ಮೂಲೆಯಿಂದ ಏಳುತ್ತಿರುವ ಹೊಗೆ. ಅದರಲ್ಲೆ ಒಂದು ಮನೆ ರಾಜಪ್ಪ ಹೋಗಬೇಕಾಗಿರುವ ಅವನ ತರವಾಡು.
ನಡೆಯುತ್ತ ಹೋದಂತೆ, ಹಳ್ಳಿಯ ಸ್ವಭಾವದಿಂದ ಪೇಟೆ ಸ್ವಭಾವದ ಸೆಳೆತಕ್ಕೆ ಒಳಗಾಗಿದ್ದ ತನ್ನೂರು ಕೂಡ ಕೋವಿಡ್ ದಾಳಿಯಿಂದ ತತ್ಕಾಲಕ್ಕೆ ಚಲನೆ ನಿಲ್ಲಿಸಿದ್ದು ಮೊದಲ ನೋಟದಲ್ಲೆ ಕಾಣಿಸಿತು ರಾಜಪ್ಪನಿಗೆ. ಕೊವಿಡ್ ಪೂರ್ವ ಕಾಲದಲ್ಲಿ ಅಂದರೆ 2020ರ ಜನವರಿ ಮೊದಲ ವಾರದಲ್ಲಿ ತಾಯಿಗೆ ಶಸ್ತ್ರಚಿಕಿತ್ಸೆ ಮಾಡಿಸುವುದಿದೆಯೆಂದು ಬಂದಿದ್ದ. ಆಗ ಮತ್ತೆ ನಾಲ್ಕು ತಿಂಗಳಲ್ಲಿ ಊರಿಗೆ ಬಂದು ತಾಯಿಯನ್ನು ಒಂದಷ್ಟು ದಿನಗಳ ಮಟ್ಟಿಗೆ ಕರೆದೊಯ್ಯಬೇಕೆಂದುಕೊಂಡಿದ್ದ. ಆದರೆ, ಊಹಿಸಲಾಗದ ದಿಗ್ಬಂಧನ ಜಗತ್ತನ್ನೇ ಕಟ್ಟಿ ಹಾಕಿದ್ದು, ಚಲನೆಯೇ ನಿಂತು ಹೋಗಿದ್ದನ್ನು ಮಾತ್ರ ಈಗಲೂ ನಂಬಲಾಗುತ್ತಿಲ್ಲ. ಮಹಾ ನೆರೆಯೇನೊ ಹಿಮ್ಮೆಟ್ಟಿತ್ತು. ನೆರೆ ತಂದು ಉಳಿಸಿ ಹೋದ ಕೊಳೆ ನೀರು ಇನ್ನೂ ಇಂಗಲಿಲ್ಲ. ಮಾಯದ ಗಾಯದಂತಾಗಿತ್ತು ಜನರ ಬದುಕು. ವರ್ಷದ ಹಿಂದೆ ಬಂದಾಗ ಕಾಂಪ್ಲೆಕ್ಸ್ಗಳ ನಿರ್ಮಾಣಕ್ಕಾಗಿ ಅಲ್ಲಲ್ಲಿ ಕಟ್ಟಡ ಕಾಮಗಾರಿಗಳು ನಡೆಯುತ್ತಿತ್ತು. ಅಂದು ಹಿಂತಿರುಗುವಾಗ ಸಂಜೆ ಆ ಊರಿನ ಪುರಾತನ ಕಾಲದ್ದೆಂದೇ ಹೇಳಬಹುದಾದ ದರ್ಶಿನಿಯಲ್ಲಿ ಚಾ ಕುಡಿಯೋಣವೆಂದು ಹೊಕ್ಕವನಿಗೆ ಬೆಂಚು ಸಿಕ್ಕದೆ ಹಿಂದಿ ಮಾತಾಡುವ ಕಾರ್ಮಿಕರು ಈ ಊರಲ್ಲೂ ಸರಾಗ ಸೇರಿಕೊಂಡುಬಿಟ್ಟಿದ್ದಾರಲ್ಲ ಅನಿಸಿ ಗಲ್ಲಾ ಪೆಟ್ಟಿಗೆ ಬಳಿ ನಿಂತುಕೊಂಡೇ ಚಾ ಕುಡಿಯುತ್ತ, ಹಳೆ ಪರಿಚಯದ ಯಜಮಾನನ ಬಳಿ ಚರ್ಚಿಸಿದಾಗ ಆತ ಗುಟ್ಟು ಹೇಳುವಂತೆ ಸಣ್ಣ ಸ್ವರದಲ್ಲಿ, ಊರಿನ ಜನಕ್ಕೆ ಎಷ್ಟು ಸಂಬಳ ಕೊಟ್ರೂ ಸಾಕಾಗುವುದಿಲ್ಲ. ಕೆಲಸವೂ ಸರಿಯಾಗಿ ಮಾಡುವುದಿಲ್ಲ ಇವರು. ಎಲ್ಲಾ ಮೇಸ್ತ್ರಿಗಳೂ ಬಿಹಾರಿಗಳನ್ನೇ ತರ್ತಾ ಇದ್ದಾರೆ. ಕೃಷಿ ಕೂಲಿಗೂ ಈಗೀಗ ಉತ್ತರ ಕರ್ನಾಟಕದವರನ್ನು, ಉತ್ತರ ಭಾರತದವರನ್ನು ಕರ್ಕೊಂಡು ಬರ್ತಿದ್ದಾರೆ. ಇದೆಲ್ಲ ಎಲ್ಲಿಗೆ ಮುಟ್ಲಿಕ್ಕುಂಟೊ ಗೊತ್ತಿಲ್ಲ ರಾಜಪ್ಪ. ನಮ್ಮಂತವರಿಗೂ ಇದು ಒಳ್ಳೆಯದೆ. ನಾಲ್ಕು ಗ್ಲಾಸು ಚಾ ಜಾಸ್ತಿ ಖರ್ಚಾಗ್ತದೆ ಅಂದಿದ್ದ. ಇಂದು ನೋಡಿದರೆ ಎಲ್ಲವೂ ಬಣಗುಡುತ್ತ ಅಲ್ಲಲ್ಲೆ ನಿಂತಿತ್ತು. ಆ ಹಿಮ್ಮುಖ ಮಹಾ ವಲಸೆಯಲ್ಲಿ ತಲೆ ಮೇಲೆ ಗಂಟು ಹೊತ್ತು ನಡೆದವರ ನಡುವೆ., ವಾಹನಗಳಲ್ಲಿ ಹೇರಿಕೊಂಡವರ ನಡುವೆ ಇಲ್ಲೆಲ್ಲ ನಡೆದಾಡಿದ ಆ ಜನರೂ ಸೇರಿಹೋಗಿರಲೇಬೇಕು. ಕಣ್ಣಿಗೆ ಕಾಣುವುದಿಷ್ಟು. ಕಾಣದಿರುವುದೆಷ್ಟೊ ಅನಿಸಿ ಸುಯಿಲೊಂದು ಹೊರಬಿತ್ತು. ರಾಜಪ್ಪ ಅದಾಗಲೇ ಸಹಕಾರಿ ಬ್ಯಾಂಕ್ ಕಟ್ಟಡ ದಾಟಿ ಮುಂದೆ ಬಂದಿದ್ದ. ಅಲ್ಲೊಂದು ಹಿಂದಿವಾಲನ ಪಾನಿಪೂರಿ ಡಬ್ಬಿ ಗಾಡಿ ಬಹಳ ವರ್ಷಗಳಿಂದ ಇದ್ದಿದ್ದು ಈಗ ಕಾಣಿಸಲಿಲ್ಲ. ಈ ಭಯ್ಯಾ ಎಲ್ಲಿ ಹೋದ ಎಂಬ ಯೋಚನೆಯ ಬೆನ್ನಿಗೇ ಕೋರೊನಾ ಪರಿಣಾಮ ಎಂಬುದು ನೆನಪಾಯಿತು. ದರ್ಶಿನಿ ಬಾಗಿಲು ತೆರೆದಿದ್ದರೆ ಒಂದು ಚಾ ಕುಡಿದೇ ಹೋದರಾಯ್ತೆಂದುಕೊಂಡು ತುಸು ಮುಂದಿರುವ ದರ್ಶಿನಿಯತ್ತ ಕಣ್ಣು ಹಾಯಿಸಿದ. ಹಂಚಿನ ಮಾಡಿನೆಡೆಯಿಂದ ಹೊಗೆ ಏಳುತ್ತಿತ್ತು. ಒಳ ಹೊಕ್ಕ. ಯಾರೂ ಕಾಣಿಸಲಿಲ್ಲ.
ಪುರಾತನ ಪರಿಮಳದ ಅದೇ ಕರ್ರಗಿನ ನಾಲ್ಕಾರು ಬೆಂಚು, ಮೇಜು. ಒಳಗಿದ್ದವರಿಗೆ ಯಾರೊ ಬಂದಿದ್ದಾರೆಂದು ಗೊತ್ತಾಗಲೆಂಬಂತೆ ಗಂಟಲು ಕ್ಯಾಕರಿಸಿ ಬೆಂಚೊಂದರ ಮೇಲೆ ಕುಂಡೆ ಊರಿದ. ಮಾಸ್ಕ್ ಹಾಕಿಕೊಂಡ ಹೆಂಗಸೊಬ್ಬಳು ಹೊರ ಬಂದಳು. ಇವನನ್ನು ಗುರುತಾಗುತ್ತಿದ್ದಂತೆ ಅವಳ ಮುಖ ಇಷ್ಟಗಲವಾಯಿತು. “ಹೋ..ರಾಜಣ್ಣ, ಯಾವಾಗ ಊರಿಗೆ ಬಂದದ್ದು.” ಕೇಳುತ್ತ ತನ್ನ ಮಾಸ್ಕ್ ಗಡ್ಡಕ್ಕಿಳಿಸಿದಳು. ರಾಜಣ್ಣನಿಗೂ ಅವಳನ್ನಲ್ಲಿ ಕಂಡು ಆಶ್ಚರ್ಯ, ಖುಷಿ. “ಓ..ಪದ್ದಕ್ಕ. ನೀವೇನು ಇಲ್ಲಿ?” ಕೇಳಿದ.
“ಇಲ್ಲಿ ಕೆಲಸಕ್ಕೆ ಸೇರಿ ಎರಡು ತಿಂಗಳಾಯ್ತು ರಾಜಣ್ಣ. ಮುಂಚಿನ ಹಾಗೆ ಕೂಲಿಗೆ ಹೋಗ್ಲಿಕ್ಕಿಲ್ಲ. ಮನೆಯಲ್ಲೆ ಕೂತ್ಕೊಂಡ್ರೆ ಮರ್ಲು ಹಿಡಿದ ಹಾಗಾಗ್ತದೆ. ಕೂಡಿದಷ್ಟು ಗೇಯ್ದ್ರೆ ಹೊಟ್ಟೆಗೂ ಸುಖ. ಮೈಗೂ ಸುಖ” ಕೈಯಲ್ಲಿದ್ದ ಒರೆಸುವ ಬಟ್ಟೆಯಿಂದ ಮೇಜೊರೆಸುತ್ತ,
“ಗೋವಿಂದಣ್ಣ ಕಾಪಿ ಮಾಡ್ತಾ ಇದ್ದಾರೆ. ಅಡುಗೆ ಬಟ್ರು ಒಬ್ರೆ. ಈಗ ಮೊದಲಿನ ವ್ಯಾಪಾರ ಇಲ್ಲಲ್ಲ. ಲಾಕ್ಡೌನ್ ಸಮಯದಲ್ಲಿ ಕೆಲಸದಿಂದ ಬಿಟ್ಟವರನ್ನು ಮತ್ತೆ ಕರಿಲಿಲ್ಲ ಗೋವಿಂದಣ್ಣ. ನಿಮ್ಗೆ ಎಂತ ಕೊಡ್ಲಿಕ್ಕೆ ಹೇಳ್ಬೇಕು. ಕಡ್ಲೆ ಉಸ್ಲಿ ರೆಡಿಯಾಗಿದೆ. ಇಡ್ಲಿ ಬೇಯ್ತಾ ಉಂಟು” ಅಂದಳು. ರಾಜಪ್ಪನಿಗೆ ಕಡ್ಲೆ ಉಸ್ಲಿ ತಿನ್ನುವ ಹುಕಿ ಬಂತು. ರಾತ್ರಿ ಹೊರಡುವಾಗ ಮಾಲಿನಿ, “ಗೋವಿಂದಣ್ಣನ ದರ್ಶಿನಿಯಲ್ಲಿ ಗೋಳಿಬಜೆ, ಪೋಡಿ ಅಂತ ಕಸಪ್ಪಟೆ ತಿಂದು ಗ್ಯಾಸು ಗ್ಯಾಸು ಅಂತ ಹೊಟ್ಟೆ ಕೆಡಿಸಿಕೊಳ್ಳಬೇಡ” ಎಂದು ಎಚ್ಚರಿಸಿದ್ದು ನೆನಪಾದರೂ ಕಡ್ಲೆಬೇಳೆ ಆದ್ರೆ ಮಾತ್ರ ಗ್ಯಾಸ್ ಉಪದ್ರ. ಇದು ನೆನೆ ಹಾಕಿದ ಇಡಿ ಕಡ್ಲೆ. ಎಂತ ಆಗುದಿಲ್ಲ ಎಂದು ತನಗೆ ತಾನೇ ಪರಿಹಾರ ಹುಡುಕಿಕೊಂಡು ಕಡ್ಲೆ ಉಸ್ಲಿ ಮತ್ತೆ ಚಾಯ ಅಂದ.
“ರಾಜಣ್ಣ ತರವಾಡಿಗೆ ಹೋಗಿ ಅಮ್ಮನನ್ನು ಕಾಣ್ಬೇಕಷ್ಟೆ ಅಲ್ವಾ?” ಸ್ವಲ್ಪ ಧ್ವನಿ ತಗ್ಗಿಸಿ ಏನೊ ಗುಟ್ಟೆಂಬಂತೆ ಕೇಳಿದಳು ಪದ್ದು. ತುಸು ಉಸಿರುಗಟ್ಟಿದ ಅನುಭವ ರಾಜಪ್ಪನಿಗೆ.
“ನಾನು ಈಗಷ್ಟೆ ಬಸ್ಸಿಳಿದು ಬರ್ತಾ ಇರುವುದು ಪದ್ದಕ್ಕ. ಅಮ್ಮನನ್ನು ಕಂಡು ಮತ್ತೆ ಬ್ಯಾಂಕಿನ ಕೆಲಸ ಸ್ವಲ್ಪ ಇದೆ. ಅದನ್ನು ಮುಗಿಸಿ ಇವತ್ತೆ ವಾಪಸ್ಸು ಹೋಗ್ಬೇಕು.” ರಾಜಪ್ಪ ಮಾತು ಮುಗಿಸುವ ಮೊದಲೇ,
“ಪಾಪ. ಕುಂತೆಮ್ಮನಿಗೆ ಈಗ ಉಚ್ಚೆ ಕಟ್ಟುವುದೇ ಇಲ್ಲಂತೆ. ಪಿರಿ ಬಿಟ್ಟ ಹಾಗೆ ಹೋಗಿಕೊಂಡೇ ರ್ತದಂತೆ. ತುಂಬಾ ಬಟ್ಟೆ ಬೇಕಾಕ್ತದೆ”
“ಹೌದು ಪದ್ದು. ಕಳೆದ ವರ್ಷ ಆಪ್ರೇಷನ್ ಆದ ಮೇಲೆ ಹೀಗೆ ಸುರುವಾಗಿದ್ದು. ಈಗೀಗ ಜಾಸ್ತಿ ಆಗಿದೆ. ಬಟ್ಟೆ ಪೂರೈಸುದಿಲ್ಲ ಅಂತ ಪ್ಯಾಡ್ ಕಟ್ತಾರೆ”
“ಹೋ..ಹಾಗಾದ್ರೆ ನಿಮ್ಗೆ ಈಗಿನ ಸಂಗತಿ ಗೊತ್ತಿಲ್ಲ ಅಂತಾಯ್ತು”. ಮುಂದಿನದನ್ನು ಹೇಳುವ ಮೊದಲು ಅವನಿಂದ ಪ್ರಶ್ನೆಯೊಂದು ಬರಲೆಂಬಂತೆ ಅಲ್ಪ ವಿರಾಮ ಕೊಟ್ಟು ಅವನ ಮುಖ ನೋಡಿದಳು. ಏನೆಂಬಂತೆ ಹುಬ್ಬೇರಿಸಿದ ರಾಜಪ್ಪ.
“ಈಗ ವಾರದ ಹಿಂದೆ ಒಂದು ದಿನ ಸಂಜೆ ನಿಮ್ಮ ಅಮ್ಮಂಗು ಮತ್ತೆ ನಿಮ್ಮ ತಮ್ಮನ ಹೆಂಡ್ತಿಗೂ ಜೋರು ಲಡಾಯಿ. ಬೊಬ್ಬೆ ಮಾರ್ಗಕ್ಕೇ ಕೇಳ್ತಿತ್ತು. ನಂಗೆ ತಡಿಲಿಕ್ಕಾಗ್ಲಿಲ್ಲ. ನೋಡಿ ಬರುವ ಅಂತ ಮೆಲ್ಲ ಹೋಗಿದ್ದೆ. ನಾನು ಹೋಗ್ವಾಗ ಕುಂತೆಮ್ಮ ಬಟ್ಟೆ ತೊಳಿತಾ ಇದ್ರು. ದೊಡ್ಡ ಬಾಲ್ದಿಯಲ್ಲಿ ತುಂಬ ಬಟ್ಟೆ ಇತ್ತು. ಎಂತ ಕೂಡುದಿಲ್ಲ ಪಾಪ. ಸೇಂಕು*(ಏದುಸಿರು) ಬಿಡ್ತಿದ್ರು. ವಾಷಿಂಗ್ ಮಿಷನ್ನು ಇರುವಾಗ ನೀವೆಂತಕೆ ಬಟ್ಟೆ ತೊಳಿತೀರಿ ಕೇಳಿದೆ. ಉಚ್ಚೆ ವಸ್ತ್ರ ಹಾಕಿದ್ರೆ ಅವ್ಳು ಬೈತಾಳೆ. ಈಗ ಅವ್ಳು ಆರ್ಬಟೆ ಕೊಟ್ಟದ್ದು ಕೇಳ್ಲಿಲ್ವಾ ಅಂದ್ರು. ಈಗ ಅದೆಂತದೊ ಕಟ್ಟಿಕೊಳ್ಲಿಕ್ಕೆ ಸಿಗ್ತದಲ್ಲ. ನೀವೂ ಅದನ್ನು ಕಟ್ಟಿಕೊಳ್ಳಿ ಅಂತ ಹೇಳಿದೆ. ಅದನ್ನು ಬಿಸಾಡುದೆಲ್ಲಿ ಅಂತ ಸೊಸೆ ಚಿರಿಚಿರಿ ಮಾಡ್ತಾರಂತೆ. ಇವರಿಗೆ ಅದನ್ನು ಹೊತ್ತಿಸಿ ಪೂರೈಸುವುದಿಲ್ಲ. ಅದರ ಹೊಗೆ ತಡ್ಕೊಳ್ಳಿಕ್ಕೆ ಆಗುದಿಲ್ಲ. ಎಂತದೇ ಹೇಳಿ. ನಿಮ್ಮ ಅಪ್ಪ ಕುಂತೆಮ್ಮನ ಹೆಸರಿಗೆ ಮನೆ ಆದ್ರೂ ಬರ್ದಿಡಬೇಕಿತ್ತು. ಆಗ ಎಲ್ಲ ಬಾಲ ಸುರುಟಿ ಕೂತ್ಕೊಳ್ತಿದ್ರು. ನಿಮ್ಮ ಅಮ್ಮನಿಗೆ ಆ ವಿಷಯದಲ್ಲಿ ಬೇಜಾರುಂಟು.” ಪದ್ದು ಬೇಗ ಬೇಗ ಹೇಳಿ ಮುಗಿಸಿ ಒಳ ಹೋದಳು. ದಂಗು ಬಡಿದು ಅವಳು ಒಳ ಹೋದ ಕಡೆಯೇ ನೋಡುತ್ತ ಕುಳಿತ ರಾಜಪ್ಪ. ಮಕ್ಕಳು ಸಣ್ಣವರಿದ್ದಾಗ ಉಚ್ಚೆ ವಸ್ತ್ರ ಒಣಗಿಸುವುದು ಕಷ್ಟವಾಗುತ್ತದೆಂದೇ ವಾಷಿಂಗ್ ಮಷಿನ್ ತಂದಿದ್ದಾಗಿತ್ತು. ಮನೆಯಲ್ಲಿ ಏನೇನೊ ಕಿರಿಕಿರಿಗಳಿವೆ ಎಂಬುದಷ್ಟೆ ಗೊತ್ತಿತ್ತು. ಅದಕ್ಕೆ ಮೂಗು ತೂರಿಸುವುದು ತರವಲ್ಲವೆಂದುಕೊಂಡಿದ್ದ. ಒಂದೆರಡು ಬಾರಿ ಮಾಲಿನಿ ಅತ್ತೆ ಜೊತೆ ಫೋನಲ್ಲಿ ಮಾತಾಡಿದ ಮೇಲೆ ಹಾಗಂತೆ ಹೀಗಂತೆ ಎಂದೇನೋ ಹೇಳಲು ಬಂದಾಗ ಎಲ್ಲ ಅಪ್ಪ ಅಮ್ಮಂದ್ರು ಮಾಡುವ ತಪ್ಪು ಇದೇ ನೋಡು. ಒಬ್ಬರ ಮನೆಯಲ್ಲಿರುವಾಗ ಅಲ್ಲಿಯ ಹುಳಿ ರಗಳೆ ಬೇರೆ ಮಕ್ಕಳ ಕಿವಿಗೆ ತುರುಕುವುದು. ನೀನು ಅಂತದ್ದಕ್ಕೆಲ್ಲ ಜಾಸ್ತಿ ಕಿವಿ ಕೊಡ್ಬೇಡ. ಅದು ಸರಿಯಾಗ್ಲಿಕ್ಕಿಲ್ಲ. ನನ್ನ ಹಾಗೆ ಅವನಿಗೂ ಅಮ್ಮ. ಹೇಗೆ ನೋಡ್ಬೇಕು ಅಂತ ಅವನಿಗೂ ಗೊತ್ತರ್ತದೆ. ಈ ಅಮ್ಮನಿಗೆ ಮೊದಲಿಂದ್ಲೂ ಕಡ್ಡಿಯನ್ನು ಗುಡ್ಡ ಮಾಡಿ ಅಭ್ಯಾಸ.” ಅಂದುಬಿಟ್ಟಿದ್ದ. ಪದ್ದುಳ ಮನೆ ಅವನ ತರವಾಡು ಮನೆಗಿಂತ ಕೂಗಳತೆಯ ದೂರ. ಆತ ಚಿಕ್ಕವನಿದ್ದಾಗ ಅವರ ಮನೆಯಲ್ಲಿ ಏನಾದರೂ ವಿಶೇಷ ದಿನಗಳಲ್ಲಿ ಕೆಲಸಕ್ಕೆ ಬರುತ್ತಿದ್ದಳು. ಅವನ ಕೊನೆಯ ತಂಗಿ ಹುಟ್ಟಿದಾಗ ಬಾಣಂತಿ ಮೀಯಿಸಿದವಳೂ ಅವಳೆ. ಆ ನೆನಪಲ್ಲಿ ಯಾವಾಗಾದರೊಮ್ಮೆ ಬಂದು ಮಾತಾಡಿಸಿ ಹೋಗುತ್ತಿರುತ್ತಾಳೆ ಎಂದು ಅಮ್ಮನೇ ಹೇಳಿದ್ದಳು. ಗೋವಿಂದಪ್ಪ ತಿಂಡಿ ಪ್ಲೇಟು, ಚಾ ತಂದಿಟ್ಟು ಯೋಗಕ್ಷೇಮ ವಿಚಾರಿಸಿದ. ಹೊಟೆಲಿಂದ ಹೊರ ಬೀಳುವಾಗ ಮೇಜು ಒರೆಸುತ್ತಿದ್ದ ಪದ್ದು ಕೈಗೆ ಮೊಮ್ಮಕ್ಕಳಿಗೆ ಚಾಕ್ಲೇಟಿಗಿರಲಿ ಎನ್ನುತ್ತ ಐವತ್ತರ ಒಂದು ನೋಟು ಕೊಟ್ಟು ತಾನು ತರವಾಡಿಗೆ ಹೋಗಿ ತಾಯಿಯನ್ನು ಕಂಡು ರಾತ್ರಿ ಬಸ್ಸಿಗೆ ಹಿಂತಿರುಗುವುದಾಗಿ ಹೇಳಿ ಹೊರ ಬಿದ್ದ. ಹೊರ ಬರುತ್ತಿರುವಾಗ, ಪದ್ದು ಹತ್ತಿರ ತಾನು ತಾಯಿಯನ್ನು ಮಾತಾಡಿಸಿ ಹೋಗುತ್ತೇನೆಂದು ಸಮಜಾಯಿಸುವಂತೆ ಪುನಃ ಹೇಳಬೇಕಾದ ಅಗತ್ಯವೇನಿತ್ತು ಎಂದನಿಸಿತು. ದಾರಿಯಲ್ಲಿ ಸಿಕ್ಕಿದ ಗುರುತಿನವರು ಯಾರೇ ಮಾತಾಡಿಸಿ ತಾಯಿಯನ್ನು ಕಾಣ್ಲಿಕ್ಕೆ ಬಂದದ್ದಾ ಎಂದು ಲೋಕರೂಢಿಯಲ್ಲೆ ಕೇಳಿದರೂ ಅವರ ಮನಸಲ್ಲಿ ಇವರು ಇಂತದ್ದೇನೊ ಮನಸಲ್ಲಿಟ್ಟುಕೊಂಡೇ ಕೇಳುತ್ತಿರಬೇಕೆಂಬ ಭ್ರಮೆ ಒಳಗೊಳಗೇ ಸುಳಿಯುತ್ತ, ಮನೆ ಸಮೀಪಿಸುತ್ತಿದ್ದಂತೆ ಹಣೆ ಪಕ್ಕದ ನರಗಳು ಬಿಗಿದು ಸಣ್ಣಗೆ ಹೊಡೆದುಕೊಳ್ಳಲು ಸುರು ಮಾಡಿತು.
**
ಕುಂತ್ಯಮ್ಮ ಬೆಳಬೆಳಗ್ಗೆಯೇ ಬಚ್ಚಲೊಲೆಗೆ ಬೆಂಕಿ ಹಾಕಿ ಡೈಪರ್ ಸುಡಲು ಕುಳಿತಿದ್ದಳು. ಅದರಿಂದ ಹೊರಟ ಕಮಟು ಹೊಗೆ, ತುಸು ಅಧಿಕವೆನಿಸುವ ಗಾಳಿ ಜೊತೆ ಜಗಳಾಡುತ್ತ ಆಕಾಶ ಸೇರಿಕೊಳ್ಳಲು ದಾರಿ ಹುಡುಕಿಕೊಳ್ಳುತ್ತಿತ್ತು. ಗಾಳಿ ಆ ಬಚ್ಚಲಿನಿಂದ ಪೇಟೆ ದಿಕ್ಕಿಗೆ ಬೀಸುತ್ತಿದ್ದುದರಿಂದ ಹೊಗೆ ಅತ್ತ ವಾಲಿತ್ತು. ಕುಂತೆಮ್ಮ ಡೈಪರ್ ಹಾಗು ಬಟ್ಟೆ ಎರಡನ್ನೂ ಉಪಯೋಗಿಸುತ್ತಾಳೆ. ಮೊದಲೊಂದಷ್ಟು ದಿನ ಡೈಪರ್ ತನಗೆ ಸಾಧ್ಯವೇ ಇಲ್ಲ ಅನ್ನುತ್ತಿದ್ದವಳು ಬಟ್ಟೆ ರಾಶಿ ತೊಳೆದು ಪೂರೈಸುವುದಿಲ್ಲವೆಂದು ಒಂದೊಂದು ದಿನ ಡೈಪರ್ ಕಟ್ಟಿಕೊಳ್ಳಲು ಸುರು ಮಾಡಿದ್ದಳು. ಆದರೆ, ಈ ಡೈಪರ್ ಬಿಸಾಡುವುದೇ ಒಂದು ಸಮಸ್ಯೆಯಾಗಿ ಬೇರೆ ದಾರಿ ಇಲ್ಲದೆ ಅದನ್ನು ಸುಡಲಾರಂಭಿಸಿದ್ದಳು. ಡೈಪರ್ ಸುಡುವ ದಿನ ನಸುಕಿನಲ್ಲೆ ಎದ್ದು ಬಚ್ಚಲೊಲೆ ಮುಂದೆ ಕುಳಿತು ಒಂದಷ್ಟು ತರಗೆಲೆ ಕಸಕಡ್ಡಿ ತುರುಕಿ ಬೆಂಕಿ ಕಡ್ಡಿ ಗೀರಿ ಉರಿ ಹಾಕಿಕೊಳ್ಳುವಳು. ಈಗೀಗ ಡೈಪರ್ ಸುಡಲೆಂದು ಕುಕ್ಕುರುಗಾಲಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿತ್ತು. ಕೆಳಗಿನಿಂದ ಮೂಗಿಗೆ ಬಡಿಯುವ ಆ ಉಚ್ಚೆ ಘಾಟು ತನ್ನದೇ ಆದರೂ ಸಹಿಸಲಸಾಧ್ಯವಾಗುತ್ತಿತ್ತು. ಆಗೆಲ್ಲ ಅವಳಿಗೆ ಯಾವುದೋ ಒಂದು ವರ್ಷ ಜಿರುಗಿಡುವ ಮಳೆಗೆ ಮುಟ್ಟಾದ ಸಮಯಲ್ಲಿ ಹೀಗೇ ಕುಕ್ಕುರುಗಾಲಲ್ಲಿ ಕುಳಿತು ಬಚ್ಚಲೊಲೆಗೆ ಬೆಂಕಿ ಒಟ್ಟುತ್ತಿರುವಾಗ ಕೆಳಗಿನಿಂದ ಮೂಗಿನ ಹೊಳ್ಳೆಗೆ ನುಗ್ಗುವ ತನ್ನ ಮುಟ್ಟಿನ ಬಟ್ಟೆಯ ಪರಿಮಳವನ್ನು ಉಸಿರೆಳೆದುಕೊಂಡು ಆಸ್ವಾದಿಸುತ್ತಿದುದು ನೆನಪಾಗುತ್ತಿತ್ತು. ಆಗ ಇದೇ ತರ ದಪ್ಪ ಮಡಿಕೆಯ ಬಟ್ಟೆಯೇ ಬೇಕಾಗುತ್ತಿತ್ತು. ಕೆಲವೊಮ್ಮೆ ಪುಳುಕ್ಕನೆ ತಳ್ಳಿದಂತೆ ಹೊರಬರುತ್ತಿದ್ದ ಲೋಳೆ ನೆತ್ತರ ರಾಡಿ ತೊಳೆಯುವುದೇ ಹಿಂಸೆಯಾಗುತ್ತಿತ್ತು. ಆಧರೂ ಅವಳಿಗೆ ಅದೊಂದು ತರಾ ಅಮಲು ಹತ್ತಿಸುತ್ತಿತ್ತು. ಈಗ..? ಈ ಉಚ್ಚೆ ವಾಸನೆ ತಪ್ಪಿಸಿಕೊಳ್ಳಲು ಆದಷ್ಟು ಉಸಿರುಬಿಗಿದುಕೊಳ್ಳುತ್ತಿದ್ದಳು. ಆದರೂ ವಾಕರಿಕೆ ಬಂದೇಬಿಡುತ್ತಿತ್ತು. ಎಷ್ಟು ದಪ್ಪ ಬಟ್ಟೆ ಕಟ್ಟಿಕೊಂಡರೂ ನಿಮಿಷದೊಳಗೆ ನೆನದು ಸೋರಲಾರಂಭಿಸುತ್ತಿತ್ತು. ಆಪರೇಷನ್ ಆಗಿ ನಾಲ್ಕು ತಿಂಗಳು ಕಳೆದಿತ್ತೇನೊ. ಒಂದು ರಾತ್ರಿ ಎದ್ದು ಬಚ್ಚಲು ತಲುಪುವುದರೊಳಗೆ ಉಚ್ಚೆ ಹರಿಯಲು ಸುರುವಾಗಿತ್ತು. ಅವತ್ತೇನೊ ಪರಮೋಶಿ ಆಗಿದ್ದು ಅಂದುಕೊಂಡರೆ ವಾರದಲ್ಲಿ ಮತ್ತೆ ಮತ್ತೆ ಮರುಕಳಿಕೆ. ಮೊದಮೊದಲು ಯಾರಿಗೂ ಗೊತ್ತಾಗದಂತೆ ನಿಭಾಯಿಸಿದ್ದಳು. ದಿನಗಳುರುಳಿದಂತೆ ಆಕೆ ಸೋಫಾದಲ್ಲೊ, ಕುರ್ಚಿಯಲ್ಲೊ ಕುಳಿತಲ್ಲಿ ತೇವಾಂಶ ಇಳಿಯಲಾರಂಭಿಸಿ, ಅಲ್ಲೆಲ್ಲ ಒಂದು ನಮೂನೆ ಘಾಟು. ಮೂತ್ರನಾಳದಲ್ಲೆಲ್ಲೊ ಅಂಟಿಕೊಂಡಿರುವ ಗಡ್ಡೆ ತೆಗೆಯುತ್ತಾರೆಂದುಕೊಂಡಿದ್ದರೆ ಒಂದು ಕಿಡ್ನಿಯನ್ನೆ ತೆಗೆಯಬೇಕಾಗುತ್ತದೆ ಅಂದಿದ್ದರು ಕೊನೆಕ್ಷಣದಲ್ಲಿ. ಹಾಗೆ ಆಪರೇಷನ್ ಮಾಡಿಸಿಕೊಂಡು ದೊಡ್ಡಾಸ್ಪತ್ರೆಯಿಂದ ಹೊರಡುವಾಗ ಇನ್ನು ಜನ್ಮದಲ್ಲಿ ಆಸ್ಪ್ಪತ್ರೆಗೆ ನನ್ನ ಮಾರಾಪು ಇಲ್ಲ ಎಂದು ಗಟ್ಟಿ ಮಾಡಿಕೊಂಡುಬಿಟ್ಟಿದ್ದಳು ಕುಂತೆಮ್ಮ. ಬಹುಶಃ ಅವಳಿಗೆ ಅಪ್ಪನಿಂದ ಸಿಕ್ಕಿದ ಒಂದೇ ಒಂದು ಗಂಟು ಯಾವತ್ತೂ ಅಳಿಯದಂತದ್ದು ಅಂದರೆ ಮಾರಾಪು ಎಂಬ ಈ ಪದ. ಆಗ ಅವಳಿಗೆ ಏಳೋ ಎಂಟೋ ವರ್ಷವಿರಬೇಕು. ಅಪ್ಪನ ಜೊತೆ ಅಜ್ಜಿ ಮನೆಗೆ ಹೊರಟಿದ್ದಳು. ಮೈಲುಗಟ್ಟಲೆ ನಡೆಯಬೇಕು. ದಾರಿ ಮಧ್ಯೆ ಅಪ್ಪನಿಗೆ ಉಚ್ಚೆ ಹೊಯ್ಯಬೇಕಾಗಿತ್ತು. ಅವನ ತಲೆ ಮೇಲಿದ್ದ ಬಟ್ಟೆ ಗಂಟನ್ನು ಕಂಕುಳಲ್ಲಿ ಅವುಚಿಕೊಂಡು ಕಂಕುಳಲ್ಲಿದ್ದ ಮತ್ತೊಂದು ಸಣ್ಣ ಗಂಟನ್ನು ಕುಂತೆವ್ವಳ ತಲೆ ಮೇಲಿಟ್ಟು ಸ್ವಲ್ಪ ಹೊತ್ತು ಈ ಮಾರಾಪು ಹೊತ್ತುಕೊ ಮಗಾ ಈಗ ಬಂದೆ ಎಂದು ಉಚ್ಚೆ ಹೊಯ್ಯಲು ಕುಳಿತಿದ್ದ. ಕುಂತೆವ್ವಳಿಗೆ ಮಾರಾಪು ಎಂಬ ಪದ ಮಜವಾಗಿ ಕೇಳಿಸಿತ್ತು. ಅಂದಿನಿಂದ ಅವಳು ಯಾವುದೇ ಕಟ್ಟ ಇದ್ದರೂ ಮಾರಾಪು ಎಂದೇ ಹೇಳುತ್ತಿದ್ದಳು. ವಯಸ್ಸು ಬಲಿತಂತೆ, ಅನುಭವ ಹೆಚ್ಚಿದಂತೆ ಯಾರಾದರೂ ಚೀಲ ಹಾಕಿಕೊಂಡು ಹೊರಟರೆ ಎತ್ಲಾಗಿ ನಿನ್ನ ಮಾರಾಪು? ಎಂದು ಕೇಳುತಿದ್ದಳು. ಬದುಕಿನ ಈ ಮುಸ್ಸಂಜೆಯಲ್ಲಂತು ಮಾರಾಪು ಎಂಬುದು ಯಾವ ಯಾವುದೊ ಅರ್ಥ ಹೊತ್ತು ಅವಳ ಮುಂದೆ ಕುಣಿಯುತ್ತಿತ್ತು. ಕುಂತೆಮ್ಮಳ ಮಾತಿನಲ್ಲೆ ಹೇಳುವುದಾದರೆ ಅವಳು ಆಸ್ಪತ್ರೆಯಿಂದ ಬಂದ ಎರಡು ತಿಂಗಳಿಗೆ ಕೊರೊನಾ ಮಾರಾಪು ಕಟ್ಟಿಕೊಂಡು ಬಂದು ಬಿಡಾರ ಹೂಡಿದ್ದರಿಂದ, ಗರ್ಮೆಂಟಿನವರು ಜನರನ್ನು ಅವರವರ ಮಾರಾಪು ಸಮೇತ ಮನೆಯೊಳಗೆ ಕೂಡಿ ಹಾಕಿದ್ದರು. ಈ ಸಮಯದಲ್ಲೆ ಅವಳ ಸಮಸ್ಯೆ ಜಾಸ್ತಿಯಾದಾಗ, ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಫೋನ್ ಮಾಡಿದ್ದರು. ಅವರಿಗೂ ಈಗ ಅವರ ಮಾರಾಪು ಬಿಚ್ಚುವ ದೈರ್ಯ ಇರಲಿಲ್ಲವೆನೊ. ಎಮರ್ಜೆನ್ಸಿ ಕೇಸುಗಳಲ್ಲದೆ ಆಸ್ಪತ್ರೆಯೊಳಗೆ ರೋಗಿಗಳನ್ನು ಸೇರಿಸುವುದಿಲ್ಲ ಎಂದು ಹೇಳಿದ್ದಲ್ಲದೆ, ನಿಮ್ಮ ಈ ತೊಂದರೆಗೂ ಸರ್ಜರಿಗೂ ಸಂಬಂಧ ಇಲ್ಲ. ವಯಸ್ಸಾದಾಗ ಕೆಲವರಿಗೆ ಹೀಗಾಗ್ತದೆ. ಎಂದಂದು, ಕೆಲವು ಗುಳಿಗೆಗಳನ್ನು ತೆಗೆದುಕೊಳ್ಳಲು ಸೂಚಿಸಿ, ಜೊತೆಗೆ ಡೈಪರ್ ಉಪಯೋಗಿಸಲು ಹೇಳಿದ್ದರು. ಈ ಡಾಕ್ಟ್ರುಗಳು ಮಾರಾಪು ಬಿಚ್ಚಿದರೂ ತಾನು ಸಾಯುವವರೆಗೂ ಈ ಮಾರಾಪಿಂದ ತನಗೆ ಮುಕ್ತಿ ಇನ್ನು ಇಲ್ಲ ಎಂಬುದು ಕುಂತೆಮ್ಮಳಿಗೆ ಗೊತ್ತಾಗಿ ಹೋಗಿತ್ತು. ಮೊದ ಮೊದಲು ವಾಷರ್ ಪೆಡಸಾದ ನಳದಿಂದ ಸೆಕೆಂಡುಗಳ ಅಂತರದಲ್ಲಿ ಹನಿಯುವಂತೆ ಹುಂಡು ಹುಂಡು ಹೋಗುತ್ತಿದ್ದುದು ದಿನ ಕಳೆದಂತೆ ನಿಲುಗಡೆ ಇಲ್ಲದೆ ಹನಿಯುತ್ತಲೇ ಇರುತ್ತದೆ. ಈಗೀಗ ಅವಳಿಗೆ ಜೀವದೊಳಗೆ ತ್ರಾಣ ಕುಸಿಯುತ್ತಿರುವ ಅನುಭವವಾಗುತ್ತಿದೆ. ಗಂಡ ಸತ್ತ ಮೇಲೆ ಮನೆಯ ಹಕ್ಕು ಪರ್ತಿ ತನ್ನದೆ ಎಂದುಕೊಂಡಿದ್ದವಳಿಗೆ, ಆ ದಿನ ಕಿರಿ ಮಗನ ಹೆಂಡತಿ ರಜನಿ ಅಟ್ಟಹಾಸದಿಂದ ಹಂಗಿಸುವಂತೆ ಹೇಳಿದ ಸಂಗತಿಯಿಂದ ಸತ್ಯ ತಿಳಿದಾಗ ಒಳಗಿಂದ ಒದ್ದುಕೊಂಡು ಬಂದ ದುಮ್ಮಾನದಿಂದ ಮುಖ ಕಪ್ಪಿಟ್ಟಿದ್ದರೂ ಕುಂತ್ಯಮ್ಮ ಗರ್ವ ಕಳೆದುಕೊಂಡಿರಲಿಲ್ಲ. ಆದರೆ, ಈಗ ದಿನದಿಂದ ದಿನಕ್ಕೆ ಉಚ್ಚು ಸೋರುವಂತೆ ಗರ್ವವೂ ಸೋರುತ್ತಿದೆ..
.. ಆ ದಿನ ಕುಂತ್ಯಮ್ಮ ಶಾಣ್ಯಪ್ಪನ ಬಳಿ, “ಕಾಫಿಪುಡಿ ಖಾಲಿಯಾಗಿದೆ ಅಂತ ಮೊನ್ನೆಯಿಂದ ಹೇಳ್ತಾ ಇದ್ದೇನೆ. ಕೆಪ್ಪನ ಹಾಗೆ ಹೋಗ್ತೀಯಲ್ಲ ನೀನು. ಎಂತ ನಾನೇ ಅಂಗಡಿಗೆ ಹೋಗಿ ತರ್ಬೇಕಾ?” ಎಂದು ಧ್ವನಿ ಏರಿಸಿದ್ದಳು.
“ಅಂಗಡಿ ಓ ಅಲ್ಲಿಯೇ ಉಂಟಲ್ಲ. ಕಾಫಿ ಬೇಕಾದ್ರೆ ನೀನೇ ಹೋಗಿ ತಾ” ಎಂದು ಚಾಯ ಕುಡಿಯುತ್ತ ಉಡಾಫೆಯಿಂದ ಹೇಳಿದ್ದ ಶಾಣ್ಯಪ್ಪ. ಅದು ಸಾಲದೆಂಬಂತೆ ಆತ ಹೆಂಡತಿಯ ಕಡೆ ಓರೆ ನೋಟ ಹರಿಸಿ ಹುಬ್ಬು ಹಾರಿಸಿದ್ದು ಕುಂತ್ಯಮ್ಮನಿಗೆ ಕಂಡು ಬಿಟ್ಟಿತ್ತು. ಅವಮಾವನದಿಂದ ಗರ್ವ ಉಕ್ಕುಕ್ಕಿ ಬಂದು,
“ಓ..ಹಾಗಾ? ಈಗಲೇ ಕೊಡು ಪೈಸೆ. ನಂಗೆ ಬೇಕಾದ ಸಾಮಾನು ನಾನೇ ತಂದ್ಕೊಳ್ತೇನೆ.” ಎನ್ನುತ್ತ ಅವನ ಮೇಲೆ ಏರಿ ಹೋಗುವವಳಂತೆ ಕಣ್ಣು ಹೊರಳಿಸಿದ್ದಳು. ಆದರೆ, ಅವನನ್ನು ಬದಿಗೆಳೆದು ಎದುರು ನಿಂತ ರಜನಿ,
“ನಾವ್ಯಾಕೆ ಪೈಸೆ ಕೊಡ್ಬೇಕು ನಿಮ್ಗೆ. ನಿಮ್ಮ ಅಕೌಂಟಲ್ಲಿ ಲಕ್ಷ ಲಕ್ಷ ಉಂಟಲ್ಲ. ಅದರಿಂದ ತೆಗಿರಿ” ಎಂದು ಸವ್ವಾಸೇರೆಂಬಂತೆ ಏರುಸ್ವರದಲ್ಲಿ ಸವಾಲು ಹಾಕಿದ್ದಳು.
“ಕೊಡುದಿಲ್ಲ ಅಂತ ಹೇಳ್ಲಿಕ್ಕೆ ನೀನ್ಯಾರು? ಅದು ನಾವು ಕಷ್ಟ ಪಟ್ಟು ಕಟ್ಟಿದ ವಹಿವಾಟು. ನಿನಗಿಂತ ಜಾಸ್ತಿ ನನ್ನ ಹಕ್ಕಿದೆ ಅದರಲ್ಲಿ” ಕುಂತ್ಯಮ್ಮ ಸಿಟ್ಟಿನಿಂದ ತರತರ ಕಂಪಿಸುತ್ತ ಹೇಳುತ್ತಿದ್ದಾಗಲೆ ರಜನಿ ಕೈ ಸೊಡ್ಡು ತೋರಿಸುತ್ತ,
“ತೊಪ್ಪಟೆ ನಿಮ್ಮ ಹಕ್ಕು. ನಿಮ್ಮ ಹೆಸರು ಅದರಲ್ಲಿ ಎಲ್ಲಿ ಉಂಟು ತೋರಿಸಿ ನೋಡುವ. ನೀವು, ನಿಮ್ಮ ಗಂಡ ಮಾಡಿದ್ದು ಅಂತ ಕುಣಿತೀರಿ. ನಿಮ್ಮ ಹೆಸರಲ್ಲಿ ಎಂತಾದ್ರೂ ರಿಜಿಸ್ಟರ್ ಮಾಡಿಟ್ಟಿದ್ದಾರ? ವಕೀಲ್ರ ಹತ್ರ ನಾವು ಎಲ್ಲ ವಿಚಾರಿಸಿಯಾಗಿದೆ. ಈಗ ನಾವು ವಯಿವಾಟು ಮಾಡಿದ್ರೆ ಮಾತ್ರ ವ್ಯಾಪಾರ. ಇನ್ನು ಮುಂದೆ ನಿಮ್ಮ ಈ ಬೊಬ್ಬೆ ಉಂಟಲ್ಲ ಅದು ನನ್ನ ಕಾಚಕ್ಕೆ ಅಂಟಿದ ಕೂದಲಿಗೂ ಸಮ ಇಲ್ಲ” ಎಂದು ತಿವಿಯುವಂತೆ ಹೇಳಿದ್ದಳು. ಅವಳ ನಾಲಿಗೆಯ ಹೊರಳು ಭಯಂಕರ ಅಪಾಯಕಾರಿ ಎಂದು ಗೊತ್ತಿದ್ದರೂ ಹೀಗೂ ಮಾತಾಡ್ತಾಳಾ ಎಂಬಂತೆ ಅಪನಂಬಿಕೆಯಿಂದ ಒಂದು ಕ್ಷಣ ರಜನಿಯನ್ನು ನೋಡಿದ್ದಳು ಕುಂತ್ಯಮ್ಮ. ಆದರೆ, ಅವಳು ಬಳಸಿದ ಪದ, ಆ ಧ್ವನಿಯಲ್ಲಿದ್ದ ತಿರಸ್ಕಾರ, ತಿವಿತಗಳೇ ಕುಂತ್ಯಮ್ಮನಿಗೆ ಸತ್ಯ ದರ್ಶನ ಮಾಡಿಸಿದ್ದು. ಮದುವಣಗಿತ್ತಿಯಾಗಿ ಹೊಸಿಲು ದಾಟಿ ಒಳ ಹೊಕ್ಕ ಕ್ಷಣದಿಂದ ಲೆಕ್ಕ ಹಾಕಿ ಐವತ್ತೆಂಟು ವರ್ಷಗಳಿಂದ ಸುಭದ್ರವೆಂದುಕೊಂಡಿದ್ದ ಮಾಡು ಸರಿ ಪಡಿಸಲಾಗದಂತೆ ಕುಸಿದು, ಬಿರುಗಾಳಿ ಮಳೆಯ ನಡುವೆ ಸಿಕ್ಕಿಕೊಂಡ ಅನುಭವವಾಗಿ ಇಂತದ್ದೇ ಎಂದು ಕಂಡುಕೊಳ್ಳಲಾಗದ ಅಂಜಿಕೆಯಿಂದ ಕುಂತ್ಯಮ್ಮ ಜರ್ರನೆ ಇಳಿದುಬಿಟ್ಟಿದ್ದಳು. ಆದರೂ ಮರುಕ್ಷಣದಲ್ಲೆ ಗರ್ವ ಆವಾಹಿಸಿಕೊಂಡವಳಂತೆ,
“ನನ್ನ ಚೆಕ್ ಪುಸ್ತಕಕ್ಕೆ ಸೈನ್ ಮಾಡಿ ಕೊಡ್ತೇನೆ. ಬ್ಯಾಂಕಿಂದ ದುಡ್ಡು ತಾ” ಅನ್ನುತ್ತ ತನ್ನ ಕಪಾಟಿನಲ್ಲಿ ಭದ್ರವಾಗಿಟ್ಟಿದ್ದ ಚೆಕ್ ಪುಸ್ತಕವನ್ನೇನೊ ತಂದಿದ್ದಳು. ಆದರೆ, ಆ ಕ್ಷಣದಲ್ಲೆ ರಜನಿಯ ಬಗ್ಗೆ ನಿಗೂಢ ಅಂಜಿಕೆ ಹುಟ್ಟಿಕೊಂಡುಬಿಟ್ಟಿತ್ತು. ಹೀಗೇ ಆದರೆ, ಈ ಎರಡು ಲಕ್ಷ ತನ್ನ ಕೈಯಿಂದ ಖಾಲಿಯಾಗಲು ಹೆಚ್ಚು ದಿನ ಬೇಡ. ಅವರ ಉದ್ದೇಶವೂ ಅದೇ ಎಂಬುದು ಖಾತ್ರಿಯಾಗಿತ್ತು ಅವಳಿಗೆ. ಈಗೀಗ ತನ್ನ ಈ ದೀನತೆಗೆ ಕಾರಣನಾದ ಗಂಡನ ಬಗ್ಗೆ ಅವಳಿಗೆ ತಡಕೊಳ್ಳಲಾಗದಷ್ಟು ಸಿಟ್ಟು ಬರುತ್ತಿತ್ತು. ಸಮಪಾಲು ಅಂತ ನನ್ನ ತಲೆಯೊಳಗೆ ಬಿತ್ತುವ ಬದಲು, ತಾಕತ್ತಿದ್ದರೆ ಮಾಡಿ ಮುಗಿಸಬೇಕಿತ್ತು. ಇರುವಾಗ ಅಖಂಡ ಸಾಮ್ರಾಜ್ಯದ ಧಣಿಯ ಹಾಗೆ ಬದುಕಿ, ಸತ್ತ ಮೇಲೆ ತನ್ನ ತುಂಡು ನೆಲದಲ್ಲೂ ಹೆಣ್ಣು ಗಂಡೆಂದು ಭೇದ ಮಾಡದೆ ಮಕ್ಕಳಿಗೆ ಸಮಪಾಲು ಕೊಟ್ಟ ಊರಿನ ಮೊದಲಿಗನೆಂದು ಹೆಸರುಳಿಸಿಕೊಳ್ಳಲು, ಕಟ್ಟಿಕೊಂಡವಳನ್ನು ದಿಕ್ಕೇಡಿಯಾಗಿ ಮಾಡಿದನೆಂದು ಹತಾಶೆಯಿಂದ ಕನಲುತ್ತಿದ್ದಳು. ಅದರ ತೀವ್ರತೆ ಎಷ್ಟಿತ್ತೆಂದರೆ ಒಂದೇ ಒಂದು ಅವಕಾಶ ಆ ದೇವರೇನಾದರೂ ಕೊಟ್ಟರೆ ತನ್ನ ಈ ದೈನೇಸಿಗೆ ಕಾರಣನಾದ ಸತ್ತು ಹೋದ ಗಂಡನನ್ನು ಎಳೆದು ತಂದು ಕೆನ್ನೆಗೆರಡು ಬಾರಿಸುತ್ತಿದ್ದೆ ಎಂದಂದುಕೊಳ್ಳುವಾಗೆಲ್ಲ ತ್ರಾಣ ಕಳೆದುಕೊಂಡ ಅವಳ ನರಗಳೂ ಬಿಗಿಯುತ್ತಿತ್ತು. ಅಂತ ಒಂದು ಸಂದರ್ಭದಲ್ಲೆ ಅವಳು ತಾವಿಬ್ಬರೂ ಮಲಗುತ್ತಿದ್ದ ಹಾಸಿಗೆಯನ್ನು ಮಂಚದಿಂದ ಕಿತ್ತೊಗೆದು ಯಾವುದೊ ಹಳೆಯದನ್ನು ಹಾಕಿಕೊಂಡಿದ್ದಳು.
..ಕುಂತ್ಯಮ್ಮ ಗಂಡನ ಬಳಿ ಆಸ್ತಿ ಪತ್ರದ ವ್ಯವಸ್ಥೆ ಬಗ್ಗೆ ಮಾತಾಡಿದಾಗಲೆಲ್ಲ, ಯಾವಾಗ ಹೇಗೆ ಮಾಡ್ಬೇಕು ಅಂತ ನಂಗೆ ಗೊತ್ತಿದೆ. ನಾನೇನು ನಾಳೆಯೇ ಸಾಯುದಿಲ್ಲ. ಅಷ್ಟಕ್ಕು ಈಗ ಕಾನೂನು ಎಲ್ಲರಿಗೂ ಸಮಪಾಲಿನ ಹಕ್ಕು ಕೊಟ್ಟಿದೆ. ಆಸ್ತಿಪತ್ರ ಮಾಡದಿದ್ದರೂ ತೊಂದರೆ ಇಲ್ಲ. ಒಂದು ಲೆಕ್ಕದಲ್ಲಿ ಮಾಡದಿರುವುದೇ ಒಳ್ಳೆಯದು ಅಂದಿದ್ದ. ನಮ್ಮ ಹೆಸರಲ್ಲಿ ಸದ್ಯಕ್ಕೆ ಎರಡು ಲಕ್ಷ ಡೆಪಾಸಿಟ್ ಇಟ್ಟಿದೇನೆ. ಅಂಗಡಿ ಶಾಣ್ಯಪ್ಪನಿಗಾಯ್ತು. ನಮ್ಮ ಹಿತ್ತಿಲು ಮನೆಯಲ್ಲಿ ಎಲ್ಲರಿಗೂ ಸಮಪಾಲು ಮಾಡಿದರಾಯ್ತು ಅಂದಿದ್ದ. ಆದರೆ, ಯಾವಾಗ ಮಾಡ್ಬೇಕು ಅಂತ ಅವನು ನಿರ್ಧರಿಸುವುದರೊಳಗೆ ಒಂದು ದಿನ ಅಸೌಖ್ಯವೆಂದು ಮಲಗಿದವನು ಚೇತರಿಸಿಕೊಳ್ಳದೆ ವಾರದೊಳಗೆ ಇಹದ ವ್ಯಾಪಾರ ಮುಗಿಸಿದ್ದ. ಸೂತಕ ಕಳೆದ ದಿನ ಮಕ್ಕಳೆಲ್ಲ ಮುಂದೇನು ಎಂಬ ಮಾತಿಗೆ ತೊಡಗಿದಾಗ, ಉಯಿಲು ಪತ್ರ ಆಗದಿದ್ದರೂ ಗಂಡನ ನಂತರ ಎಲ್ಲ ಹಕ್ಕು ಹೆಂಡತಿಗೇ ಬರಬೇಕಾದ್ದು ಎಂದು ನಂಬಿಕೊಂಡಿದ್ದ ಕುಂತ್ಯಮ್ಮ, “ಅಂಗಡಿ ಶಾಣ್ಯಪ್ಪನಿಗೆ ಬಿಡುವುದು, ಉಳಿದಂತೆ ಎಲ್ಲದರಲ್ಲು ಎಲ್ಲರಿಗೂ ಸಮಪಾಲು ಅಂತ ನಾವು ತೀರ್ಮಾನ ಮಾಡಿದೇವೆ” ಅಂದಿದ್ದಳು. ಅವಳ ಅನಿರೀಕ್ಷಿತ ಹೇಳಿಕೆಯಿಂದ ಕೆಲವರ ಮುಖ ತಟ್ಟನೆ ಅರಳಿತ್ತು. ಕೆಲವರ ಮುಖ ವಿಪರೀತ ಕಂದಿತ್ತು. ಶಾಣ್ಯಪ್ಪ ಹಾಗು ರಜನಿ ಅಲ್ಲಿಂದ ಎದ್ದು ನಡೆದಿದ್ದರು. ದಿನಗಳುರುಳಿದಂತೆ ಇದು ಒಂದೊಂದು ರೂಪ ತಾಳಲಾರಂಭಿಸಿತ್ತು. ಸಮಪಾಲು ಬೇಕಾದವರು ಕೋರ್ಟಿಗೆ ಹೋಗಲಿ ಎಂದು ನೇರವಾಗಿಯೇ ಹೇಳಿದ್ದ ಶಾಣ್ಯಪ್ಪ. ಆಗಲೆ ಅವಳಿಗೆ ಹಿತ್ತಿಲು ಮನೆ ಮಾರಿ, ಎಲ್ಲರಿಗೂ ಅವರವರ ದುಡ್ಡು ಹಂಚಿಕೊಟ್ಟು ತಾನು ತನಗೆ ಬೇಕಾದಲ್ಲಿ ಸ್ವತಂತ್ರವಾಗಿರುವುದೇ ಪರಿಹಾರ ಎಂದನಿಸಿದ್ದು. ಕುಂತ್ಯಮ್ಮ ತನ್ನ ತೀರ್ಮಾನ ಹೀಗೆ ಎಂದು ಹೇಳಿದಾಗ ಶಾಣ್ಯಪ್ಪ ಹಾಗು ಅವನ ಹೆಂಡತಿ ರಜನಿ, ನಾವು ಇಲ್ಲಿಂದ ಏಳುವುದಿಲ್ಲ. ಹೇಗೆ ಮರ್ತೀರಿ ನಾವೂ ನೋಡ್ತೇವೆ ಎಂದು ತಿರುಗಿ ನಿಂತಿದ್ದರು. ಇದು ನಾನು ನನ್ನ ಗಂಡ ಹೊಟ್ಟೆ ಬಟ್ಟೆ ಕಟ್ಟಿ ಸಂಪಾದಿಸಿದ್ದು. ನಾನು ಕೊಟ್ಟರಷ್ಟೆ ನಿಮಗೆ ಎಂದು ಕುಂತ್ಯವ್ವ ಅಬ್ಬರಿಸಿದ್ದಳು. ರಜನಿ ಕಿಸಕ್ಕನೆ ನಗುತ್ತ, ನಿಮ್ಮತ್ರ ಕೊಡಿ ಅಂತ ಯಾರು ಕೇಳ್ತಾರೆ ಅಂತ ಬೇಕಲ್ಲ. ನಮಗೆಲ್ಲ ಇರುವ ಹಾಗೆ ನಿಮಗೆ ಇದರಲ್ಲಿ ಒಂದು ಪಾಲಿಗೆ ಮಾತ್ರ ಹಕ್ಕು. ನಾವು ವಕೀಲ್ರ ಹತ್ತಿರ ಕೇಳಿದೇವೆ ಎಂದು ಕಾನೂನಿನ ಮತ್ತೊಂದು ಒಳ ಪಾಠ ಹೇಳಿದ್ದಳು. ಆದರೆ, ಕುಂತೆಮ್ಮನಿಗೆ ಅರ್ಥ ಮಾಡಿಕೊಳ್ಳಲು ಕೆಲವು ದಿನಗಳೇ ಬೇಕಾಗಿತ್ತು. ಅಷ್ಟೊತ್ತಿಗೆ ಕುಟುಂಬಸ್ಥರೊಳಗೆ, ಊರಲ್ಲಿ, ಆ ಬದಿ ಈ ಬದಿಯವರಿಗೆಲ್ಲ ಸುದ್ದಿ ಹರಡಿ, ನಿನ್ನ ಬುದ್ದಿಗೆಂತಾಗಿದೆ ಕುಂತೆಮ್ಮ. ಇದೆಲ್ಲ ಎರಡು ಮಕ್ಕಳು ಮಾತ್ರ ಇದ್ದವರಿಗೆ ಮಾತ್ರ ಆದೀತು. ನಮ್ಮಂತೋರಿಗೆ ಆಗುಹೋಗುವ ವಯಿವಾಟಲ್ಲ ತಿಳಕೊ. ಜವ್ವನದ ಗರ್ವ ಈ ಮುದಿ ಪ್ರಾಯಕ್ಕಲ್ಲ. ಮಗಳಂದಿರಿಗೆ ಬುದ್ದಿ ಹೇಳಬೇಕಾದ ನೀನೇ ಹೀಗೆ ಮಾಡುವುದಾ? ನಿಂಗೆ ಇನ್ನು ಆಗ್ಬೇಕಾದ್ದಾದ್ರು ಎಂತದು. ಒಂದು ಮುಷ್ಠಿ ಅನ್ನ, ನೆತ್ತಿ ಮೇಲೊಂದು ನೆರಳು. ಸಮಪಾಲು ಅಂತ ಮಾಡ್ಲಿಕ್ಕೆ ಇದರಲ್ಲಿ ಎಂತ ಉಂಟು ಅಂತ ಬೇಕಲ್ಲ. ನಾವು ಆಸ್ತಿವಂತರೇ ಇಂತದ್ದೆಕ್ಕೆಲ್ಲ ಹೋಗ್ಲಿಲ್ಲ. ಹೆಣ್ಣು ಮಕ್ಳಿಗೆ ಪ್ರಸಾದ ಅಂತ ಒಂದಿಷ್ಟು ದುಡ್ಡು ಇಡುವುದು ಕ್ರಮ. ಕೊಟ್ಟದ್ದನ್ನು ಕೈ ನೀಡಿ ಖುಷಿಯಿಂದ ತಗೊಂಡು ದಸ್ಕತ್ ಹಾಕಿ ಹೋಗುವುದು ನಾಲ್ಕು ಜನ ಒಪ್ಪುವ ಮಾತು. ಪಾಪ! ಶಾಣೆಪ್ಪ ಎಂತದೊ ಕಾಂಪ್ಲೆಕ್ಸ್ ಕಟ್ಬೇಕು ಅಂತಿದಾನೆ. ಮಾಡಿಕೊಳ್ಳಲಿ ಎಂಬ ಬಿಟ್ಟಿ ಉಪದೇಶ ಸಿಕ್ಕಿತ್ತು. ತನಗೆ ಆಗಬೇಕಾದ್ದು ಏನೂ ಇಲ್ವಾ..? ಎಂಬ ಪ್ರಶ್ನೆಗೆ ಉತ್ತರ ಹೊಳೆದಿರಲಿಲ್ಲ. ಶಾಣಪ್ಪ, ಮತ್ತೂ ಒಂದು ಹೆಜ್ಜೆ ಮುಂದುವರಿದು, ಮನೆ-ಜಾಗ ಮಾರಿ ದುಡ್ಡು ಪಾಲು ಮಾಡಿ ಕೊಡಿ ಅಂತ ಕಾನೂನಲ್ಲಿ ಇಲ್ಲಂತೆ. ನಿಂಗೆ ತಾಕತ್ತಿದ್ರೆ ಮನೆಯನ್ನೂ, ಹಿತ್ತಿಲನ್ನೂ ಒಂದೊಂದು ಮೂಲೆ ಪಾಲು ಮಾಡಿ ಕೊಡುದಾದ್ರೆ ಕೊಡು ನೋಡುವ. ಎಲ್ಲರೂ ಬಂದು ಒಂದೊಂದು ಮೂಲೆಯಲ್ಲಿ ಕೂತುಕೊಳ್ಳಲಿ. ನೀನೂ ಎಲ್ಲಾ ಮೂಲೆಯಲ್ಲೂ ಬೇಕಾದಷ್ಟು ದಿನ ಇರು ಎಂದಿದ್ದ. ಕುಂತೆವ್ವ ಆ ಹೊತ್ತಿಗೆ ಕಂಗಾಲಾದರೂ, ಒಳಗೊಳಗೇ ಅವರ ಮಾತಿನ ಜಾಡಿನಲ್ಲೆ ಲೆಕ್ಕಾಚಾರ ಹಾಕಿ, ಹೆಣ್ಣು ಮಕ್ಕಳಿಗೆ ಫೋನ್ ಮಾಡಿ, ನೀವೆಲ್ಲ ಆಗಾಗ ಒಂದಷ್ಟು ದಿನ ಬಂದು ಇಲ್ಲಿ ಉಳಿದುಕೊಂಡು ನಿಮ್ಮ ಹಕ್ಕು ಸ್ಥಾಪನೆ ಮಾಡಿದ್ರೆ ಅವರು ಬೇಗ ಬಗ್ಗಿ ಬರ್ತಾರೆ ಎಂದು ಉಪದೇಶ ಮಾಡಿದ್ದಳು. ಆದರೆ, ಅದಕ್ಕೆಲ್ಲ ಪುರುಸೊತ್ತಿರುವವರು, ಮನಸಿರುವವರು ಯಾರೂ ಇರಲಿಲ್ಲ. ಒಂದೂ ಬರ್ಕತ್ತಿನದಲ್ಲ. ಇವರು ಕೂತಲ್ಲಿಗೆ ಪಾಲು ಬೇಕು ಎಂದು ಗೊಣಗಿದ್ದಳು ಕುಂತೆಮ್ಮ. ಅತ್ತೆ ಫೋನ್ ಮಾಡಿ ಹೇಳುವುದನ್ನು, ಗೊಣಗಿದ್ದನ್ನು ಕೇಳಿಸಿಕೊಂಡಿದ್ದ ರಜನಿಗೆ ಮತ್ತೊಂದು ಆಯುಧ ಸಿಕ್ಕಿತ್ತು. ಎಲ್ಲರಿಗೂ ಸಮಪಾಲು ಕೊಡ್ತೇನೆ ಅಂತ ಕುಣಿದ ಹಾಗಲ್ಲ ಅದನ್ನು ಸಾಧಿಸುವುದು. ಹೇಗೂ ಸಮಪಾಲು ಉಂಟಲ್ಲ. ನೀವು ಎಲ್ಲರ ಮನೆಗೂ ಹೋಗಿ ಆರಾರು ತಿಂಗಳು ನಿಲ್ಲಿ. ನಮಗೂ ಇಲ್ಲಿ ಕರ್ಚು ಹೆಚ್ಚಾಗಿದೆ ಎಂದು ಹಂಗಿಸಿದ್ದಳು. ತನ್ನ ಕರ್ಚಿನ ಬಗ್ಗೆ ಮಾತಾಡ್ಲಿಕ್ಕೆ ಇಲ್ಲಿ ಯಾರಿಗೂ ಹಕ್ಕಿಲ್ಲ. ಅವರಿಗೆಲ್ಲ ಪಾಲು ಕೊಟ್ಟ ಮರುದಿನವೇ ತನಗೆ ಎಲ್ಲಿಗೆ ಬೇಕೊ ಅಲ್ಲಿಗೆ ತಾನು ಹೋಗುವವಳೆಂದು ಕುಂತ್ಯಮ್ಮ ಮಾತಿನೇಟು ಕೊಟ್ಟಿದ್ದಳು. ಆದರೆ, ರಜನಿ ನಿಧಾನವಾಗಿ ಕುಂತ್ಯಮ್ಮಳ ದಿನದ ಅಗತ್ಯಗಳು ಪೂರೈಕೆಯಾಗದಂತೆ ಕಡಿವಾಣ ಹಾಕಲು ಸುರು ಮಾಡಿದ್ದಳು. ಸ್ವತಂತ್ರವಾಗಿ ವ್ಯವಹರಿಸಲು ಗೊತ್ತಿಲ್ಲದ ಕುಂತ್ಯಮ್ಮ ಅಸಹಾಯಕತೆಯ ಸಿಟ್ಟು ಏರಿ ಹರಿ ಹಾಯ್ದಗಲೆಲ್ಲ ರಜನಿ, ತಲೆಗೆ ಎರೆದದ್ದು ಕಾಲಿಗೆ ಬೀಳದೆ ಎಲ್ಲಿ ಹೋಗ್ತದೆ ಅಂತ ನನ್ನ ಅಜ್ಜಿ ಹೇಳ್ತಿದ್ಲು ಎಂದು ಹಂಗಿಸುವಂತೆ ಹೇಳುತ್ತಿದ್ದಳು. ಕುಂತ್ಯಮ್ಮ, ರಾಜಪ್ಪನಿಗೆ ಫೋನ್ ಮಾಡಿ, ನಿನ್ನ ಹೆಂಡತಿಯನ್ನು ಸ್ವಲ್ಪ ದಿನಕ್ಕೆ ಇಲ್ಲಿಗೆ ಕಳಿಸು. ಇವಳ ಹಾಂಕಾರ ಜಾಸ್ತಿ ಆಗಿದೆ. ನಂಗೆ ನಿತ್ಯ ಉಡುವ ವಾಯಿಲ್ ಸೀರೆ, ಲಂಗ, ಕಾಚಾ ಎಲ್ಲಾ ಆಗ್ಬೇಕು. ಇವರು ಎಂತದೂ ತಂದು ಕೊಡ್ತಾ ಇಲ್ಲ ಅಂದಿದ್ದಳು. ಮಾಲಿನಿ ಕುಂತ್ಯಮ್ಮಳಿಗೆ ಫೋನ್ ಮಾಡಿ, ಇಲ್ಲಿಯ ಪರಿಸ್ಥಿತಿ ನಿಮಗೆ ಗೊತ್ತುಂಟಲ್ಲ ಅತ್ತೆ. ಹಾಗೆಲ್ಲ ಅಲ್ಲಿ ಬಂದು ಇರ್ಲಿಕ್ಕೆ ಸಾಧ್ಯ ಉಂಟಾ? ಅದಲ್ಲದೆ ಇಂತಹ ಹುಳಿ ರಗಳೆ ಎಲ್ಲ ನನ್ನಿಂದ ಆಗ್ಲಿಕ್ಕಿಲ್ಲ ಅಂತ ನಿಮಗೂ ಗೊತ್ತಿದೆ. ನಿಮಗೆ ಬೇಕಾದ ಸಾಮಾನು ಕೊರಿಯರ್ ಮಾಡ್ತೇವೆೆ. ಹೆಣ್ಣು ಮಕ್ಕಳಿಗೆ ಹಕ್ಕು ಕೊಟ್ಟ ಕಾನೂನು, ಅದನ್ನು ಅವಳು ಪಡಕೊಬೇಕು ಅಂದರೆ ಮತ್ತೆ ಕೋರ್ಟಿಗೇ ಬರುವಂತೆ ಮಾಡಿದ್ದು ಯಾರ ಸುಖಕ್ಕಾಗಿಯೋ ಎಂದು ಕುಂತ್ಯಮ್ಮಳ ಬಳಿಯೇ ಕನಲಿ ಗೊಣಗಿದ್ದಳು ಮಾಲಿನಿ. ಸಣ್ಣ ಸೊಸೆ ರಜನಿಯೋ ತನಗೆ ಬೇಕಾದ್ದಕ್ಕೆ ಸರಿಯಾಗಿ ತರ್ಕ ಹಿಡಿದು ಅದನ್ನು ಪಡೆದೇ ತೀರುವವಳು. ಇವಳೋ ಕೈಗೆ ಖಾಲಿ ಚಿಪ್ಪು ಬೀಳುವ ತನಕ ಎಲದಕ್ಕು ತತ್ವ ಹೇಳುತ್ತ ಅದಕ್ಕೇ ಜೋತು ಬೀಳುವವಳು. ನಯಾಪೈಸೆ ಕೆಲಸ ಆಗ್ಲಿಕ್ಕೆ ಬಿಡುವ ಬುದ್ಧಿ ಅಲ್ಲ. ರಜನಿಯೆದುರು ತನ್ನ ಕೈ ಸೋಲುತ್ತದೆಂದು ಅರ್ಥವಾದಾಗ, ಹೇಗಾದರೂ ಮಾಡಿ ಹೆಣ್ಣು ಮಕ್ಕಳನ್ನೆ ಸಮಪಾಲಿನ ಹಠದಿಂದ ಹಿಮ್ಮಟ್ಟಿಸಿದರೆ ತಾನು ಇಲ್ಲಿ ಸ್ವಲ್ಪ ನೆಮ್ಮದಿಯಿಂದ ಗಂಜಿತೆಳಿಯಾದರೂ ಕುಡಿದೇನು ಅನಿಸಿ ಮಾಲಿನಿಗೆ, ನೀನು ಸ್ವಲ್ಪ ಬಾಯ್ಮುಚ್ಚಿಕೊಂಡಿದ್ದರೆ ರಾಜಪ್ಪನ ಹಿರಿತನ ಉಪಯೋಗಿಸಿ ಮಗಳಂದಿರನ್ನು ಬಗ್ಗಿಸುತ್ತಿದ್ದೆ ಅಂದಿದ್ದಳು. ಹೆಣ್ಣು ಮಕ್ಕಳ ಮನಸಲ್ಲಿ ಎಂತೆಂತದೊ ಆಸೆ ಹುಟ್ಟಿಸಿ, ಈಗ ನೀರೊಳ್ಳೆಯಂತ ರಾಜಕಾರಣಿಗಳ ಹಾಗೆ ಯೋಚಿಸ್ತಿದ್ದೀರಲ್ಲ ಅತ್ತೆ. ನೀವೇನೊ ಮಗನನ್ನು ಮುಂದಿಟ್ಟುಕೊಂಡು ನಿಮ್ಮ ಕಾರ್ಯ ಸಾಧಿಸ್ತೀರಿ. ಮತ್ತೆ ಜನ್ಮ ಪೂರ್ತಿ ಅಪವಾದ ನಮ್ಮ ತಲೆಗೆ. ಅದೂ ಸಾಲದ್ದಕ್ಕೆ ಮುಂದೆ ಮಕ್ಕಳ, ಮೊಮ್ಮಕ್ಕಳ ಕಾಲಕ್ಕೂ ಅವರದ್ದೇನೊ ತಿಂದುಬಿಟ್ಟಿದ್ದೇವೆ ಎಂಬಂತ ಹಂಗು. ಅದೆಲ್ಲ ಬೇಡ. ನೀವೇ ಇಲ್ಲಿಗೆ ಬನ್ನಿ ಅಂದಿದ್ದಳು ಮಾಲಿನಿ. ಕಾಲಾಡಿಸಲು ಹಿತ್ತಿಲೂ ಇಲ್ಲದ, ಕಿಟಕಿಯಿಂದ ನೋಡಿದರೆ ನಾಲ್ಕು ಸುತ್ತೂ ಬರಿ ಗೋಡೆಗಳೇ ಕಾಣುವ ಆ ಎರಡು ಕೋಣೆಯ ಬಾಡಿಗೆ ಅಪಾರ್ಟ್ಮೆಂಟಲ್ಲಿ ಎರಡು ವಾರ ಉಳಿಯುವುದೇ ಕುಂತ್ಯಮ್ಮಳಿಗೆ ಕಷ್ಟವಾಗುತ್ತಿತ್ತು. ಅಲ್ಲಿಗೆ ಹೋದಾಗಲೆಲ್ಲ ತಿಂಗಳುರುಳುತ್ತಲೇ ಹೊರಟು ಬಿಡುತ್ತಿದ್ದಳು. ಸಮಪಾಲಿನ ತಕರಾರು ಸುರುವಾದ ಮೇಲಂತು ಮನೆ ಬಿಟ್ಟು ಒಂದು ದಿನ ಹೊರಟರೂ, ಏನೊ ಪಿತೂರಿ ನಡೆಸಿ ತನ್ನ ಹಕ್ಕು ಇವರು ಕಸಿದುಬಿಡುತ್ತಾರೆಂಬ ಭ್ರಮೆ ಹೊಕ್ಕಿತು..
**
ರಜನಿಗೆ ಕೆಮ್ಮು ಬಂದು ಎಚ್ಚರಾಯಿತು. ಎದ್ದು ಕುಳಿತವಳು ಬೆವರಿನಿಂದ ಒದ್ದೆಯಾದ ಕೊರಳು ಒರೆಸಿಕೊಂಡಳು. ನಾಲ್ಕು ವರ್ಷದ ಮಗಳು ಕೈ ಕಾಲು ಅಗಲಿಸಿ ನಿದ್ರಿಸುತ್ತಿದ್ದಳು. ಮಂಚದ ಅರ್ಧಭಾಗವನ್ನು ಅವಳೇ ಆವರಿಸಿಕೊಂಡಿದ್ದರಿಂದ ಶಾಣಪ್ಪ ಗೋಡೆಗೆ ಒತ್ತರಿಸಿಕೊಂಡು ಗೊರಕೆ ಹೊಡೆಯುತ್ತಿದ್ದ. ರಾತ್ರಿ ಕರೆಂಟ್ ಕೈ ಕೊಟ್ಟು ನುಸಿಕಾಟ, ಸೆಖೆಯಿಂದ ನಿದ್ದೆಯಿರಲಿಲ್ಲ. ಒಂದೆರಡು ಬೇಸಿಗೆ ಮಳೆ ಬಂದು ಹೋಯ್ತೆಂದರೆ ಮತ್ತಷ್ಟು ದಗೆ. ಆರಾಮವೆನಿಸುವ ನಿದ್ದೆ ಸಿಗಬೇಕೆಂದರೆ ರಾತ್ರಿ ಎರಡು ಘಂಟೆ ದಾಟಬೇಕು. ಮೊಬೈಲ್ ತೆರೆದು ಘಂಟೆ ನೋಡಿದಳು. ಆಗಲೇ ಆರು ಘಂಟೆ. ಈ ಕಮಟು ವಾಸನೆ ಅಲ್ಲದಿದ್ದರೆ ಇನ್ನೊಂದರ್ಧ ಘಂಟೆ ಚೆನ್ನಾಗಿ ನಿದ್ದೆ ಮಾಡಬಹುದಿತ್ತು. ಸೆಕೆ ಅಂತ ಕಿಟಕಿ ತೆರೆದಿಟ್ಟರೆ ಈ ಬೆಳಬೆಳಗ್ಗೆ ಯಾರೊ ಕಸ ಸುಡ್ತಿದ್ದಾರೆ ದರಿದ್ರಗಳು ಎಂದು ಬೈದುಕೊಂಡಳು. ತಟ್ಟನೆ ಅವಳಿಗೆ ಕಮಟು ಹೊಗೆ ಎಲ್ಲಿಂದ ಬರುತ್ತಿದೆಯೆಂಬುದು ಗೊತ್ತಾಗಿ ಸಿಟ್ಟು ನೆತ್ತಿ ಹತ್ತಿತು. ಕಲಿಸ್ತೇನೆ ಈ ಮುದುಕಿಗೆ ಅಂದುಕೊಳ್ಳುತ್ತ, ದಡಾರನೆ ಬಾಗಿಲು ತೆರೆದು ಬಚ್ಚಲಿನತ್ತ ನಡೆದವಳು ಒಂದು ಪಾಟೆ ನೀರು ತೆಗೆದು ತಪಕ್ಕನೆ ರಾಚುವಂತೆ ಒಲೆಗೆ ಸೋಕಿದಳು. ಏನಾಗುತ್ತಿದೆಯೆಂದರಿವಾಗದೆ ಬೆಚ್ಚಿ ಅದುರಿ ಬಿದ್ದಂತೆ ಹಿಂದಕ್ಕೆ ಸರಿದಳು ಕುಂತ್ಯಮ್ಮ. ಕಣ್ಣು ಮುಚ್ಚಿಕೊಂಡಿದ್ದರಿಂದ ಹಾರಿದ ಬೂದಿ ಕಣ್ಣೊಳಗೆ ಹೋಗುವುದು ತಪ್ಪಿತ್ತು. ರೆಪ್ಪೆಗೆ ಅಂಟಿಕೊಂಡ ಬೂದಿ ಒರೆಸಿಕೊಳ್ಳುತ್ತ ಕುಂತ್ಯಮ್ಮ, ಸಿಟ್ಟಿನಿಂದ ಉರಿಯುತ್ತ “ನೀನೆಂತ ನನ್ನನ್ನು ಕೊಲ್ತೀಯ?” ಕೇಳಿದಳು. ಬೂದಿ ಹಾರುತ್ತಿದ್ದಂತೆ ರಜನಿ ತಾನು ಮಾಡಿದ ಕೆಲಸದ ಅಪಾಯ ಏನೆಂಬುದು ಹೊಳೆದು ಹೆದರಿದ್ದಳು. ತಾನೀಗ ಸುಮ್ಮನಿರುವುದೇ ಸರಿ. ಈಗೀಗ ಏನು ಹೇಳಿದರೂ ತೆಪ್ಪಗಿರುತ್ತಿದ್ದ ಕುಂತ್ಯಮ್ಮ ಬಹಳ ಅಪರೂಪಕ್ಕೆ ಪಿಸುರು ಏರಿದರೆ ಬಾಯಿ ಮಾಡುತ್ತಿದ್ದಳು. ಈಗ ಇವಳ ದೊಡ್ಡ ಮಗ ರಾಜಪ್ಪ ಬರುವ ಸಮಯಕ್ಕೆ ಸರಿಯಾಗಿ ತನ್ನನ್ನು ಕೊಲ್ಲಲ್ಲು ಬಂದಳೆಂದೇ ಗಲಾಟೆ ಮಾಡಿದರೂ ಮಾಡಿಯಾಳು ಅನಿಸಿ, “ನಿಮ್ಗೆ ಪ್ರಾಯ ಆಯ್ತು. ನಿದ್ದೆ ಕಮ್ಮಿ ಅಂತ ನಾವೂ ನಿದ್ದೆ ಮಾಡದ ಹಾಗೆ ಮಾಡಿದ್ರೆ ಯಾರಿಗಾದ್ರೂ ಕೋಪ ಬರದೆ ಇದ್ದೀತಾ. ಕೋಣೆಯೊಳಗೆ ಹೊಗೆ ತುಂಬಿ ಮಗಳಿಗೆ ಉಸಿರು ಕಟ್ಟಿದ ಹಾಗಾಗಿತ್ತು” ಅನ್ನುತ್ತ ಅಲ್ಲಿಂದ ನಡೆದಳು. ಕುಂತ್ಯಮ್ಮಳಿಂದ ಸಮಪಾಲೆಂಬ ಪದ ಹೊರ ಬಿದ್ದ ಮೇಲೆ ರಜನಿಗೆ ದಿನದಿಂದ ದಿನಕ್ಕೆ ಅತ್ತೆಯ ಇರುವಿಕೆಯೇ ಅಸಹನೀಯವೆನಿಸುತ್ತಿತ್ತು. ತಲೆ ಕಂಡರಾಗುವುದಿಲ್ಲ ಅನ್ನುತ್ತಾರಲ್ಲ್ಲ ಹಾಗೆ. ಆಸ್ತಿ ಹಕ್ಕು ತಮ್ಮ ಕೈಗೆ ಸಿಕ್ಕಿದ ಕೂಡಲೆ, ಹಿತ್ತಲಿನ ಒಂದು ಭಾಗ ಮಾರಿ ಡಿಪಾಸಿಟ್ ಇಟ್ಟು, ಬ್ಯಾಂಕಿಂದ ಲೋನ್ ತೆಗೆದು ಕಾಂಪ್ಲೆಕ್ಸ್ ಕಟ್ಟುವ, ಮನೆ ಮೇಲೆ ಮಹಡಿ ಏರಿಸಿ ಬಾಡಿಗೆ ಕೊಡುವ ಕನಸು ಕಂಡಿದ್ದರು ಶಾಣ್ಯಪ್ಪ ಹಾಗು ರಜನಿ. ಕುಂತ್ಯಮ್ಮ ಸಮಪಾಲೆಂಬ ಬಾಂಬು ಸ್ಪೋಟಿಸಿ ಅವರ ಕನಸೆಲ್ಲ ಛಿದ್ರವಾಗಿ ಚಿಪ್ಪಾಚೂರಾಗುವಂತೆ ಮಾಡಿದ್ದಳು. ರಜನಿ ಮೊದಮೊದಲು ಹತಾಶಳಾದರೂ ತನ್ನ ಗಡದ್ದಾಗಿ ಬದುಕಬೇಕೆಂಬ ಕನಸು ಕೈ ತಪ್ಪಿ ಹೋಗುತ್ತಿರುವುದನ್ನು ಒಪ್ಪಿಕೊಳ್ಳಲಾಗದೆ ಹೇಗಾದರೂ ಸಾಧಿಸಬೇಕೆಂಬ ಛಲವೇ ಗೆದ್ದಿತ್ತು. ಗುರಿ ಸಾಧಿಸುವ ಮೊದಲ ಮೆಟ್ಟಿಲಾಗಿ ಶಾಣ್ಯಪ್ಪನನ್ನು ಕರೆದುಕೊಂಡು ವಕೀಲರ ಭೇಟಿ ಮಾಡಿದ್ದಳು. ಅಲ್ಲಿಂದ ಒಂದೊಂದೇ ಧಾಳ ಎಸೆದಿದ್ದಳು. ನಿಧಾನವಾಗಿ ಅವಳಿಗೆ ಸಂದರ್ಭದ ಮೇಲೆ ಹತೋಟಿ ಸಿಗಲಾರಂಭಿಸಿತ್ತು. ಶಾಣ್ಯಪ್ಪನಿಗೆ ಹೆಂಡತಿಯ ಬುದ್ದಿವಂತಿಕೆ ಬಗ್ಗೆ ನಂಬಿಕೆ ಇದ್ದಿದ್ದರಿಂದ ಅವಳು ಹೇಳಿದ್ದಕ್ಕೆ ಹೂಂಗುಡುವ ಬುದ್ದಿವಂತನಾಗಿದ್ದ. ಈಗಲೂ ಅವಳು ಅದೇ ಬುದ್ದಿವಂತಿಕೆಯಿಂದಲೇ ರಾಜಪ್ಪ ತಲುಪಬಹುದಾದ ಈ ಹೊತ್ತಲ್ಲಿ ತಾನು ಅವನ ಕಂಣ್ಣಲ್ಲಿ ತಪ್ಪಿತಸ್ಥಳಾಗಿ ಕಾಣಿಸಬಾರದೆಂಬ ಎಚ್ಚರಿಕೆಯಿಂದಲೇ ಕುಂತ್ಯಮ್ಮಳ ಜೊತೆ ವಾದ ಮಾಡಿರಲಿಲ್ಲ. ಆದರೆ, ಅದಾಗಲೇ ರಾಜಪ್ಪ ಕಾಲಿಂಗ್ ಬೆಲ್ ಅದುಮಿದ್ದ. ರಾಜಪ್ಪ ಬರುವ ವೇಳೆಗೆ ಮನೆಯಲ್ಲಿರಬಾರದು. ಮಗನನ್ನು ಕಾಣಲಿದೆಯೆಂಬ ನೆಪದಲ್ಲಿ ಅವನ ಹಾಸ್ಟೆಲ್ಲಿಗೆ ಹೋಗಬೇಕು. ಬೆಳಗ್ಗೆ ಆರು ಘಂಟೆಗೆ ಹೋಗುವ ಬಸ್ಸಲ್ಲಿ ಹೋದರೆ ಸಂಜೆ ಎಂಟು ಘಂಟೆಯ ಬಸ್ಸಿಗೆ ವಾಪಸ್ಸಾಗಬಹುದು ಅಂದುಕೊಂಡಿದ್ದಳು. ಆದರೆ, ರಾತ್ರಿ ಕರೆಂಟ್ ಕೈ ಕೊಟ್ಟು ಫ್ಯಾನ್ ಇಲ್ಲದೆ ನಿದ್ರೆ ಕೆಟ್ಟು ಹೋಗಿದ್ದರಿಂದ ಬೆಳಗ್ಗೆ ತರಾತುರಿಯಲ್ಲಿ ಏಳುವ ಯೋಜನೆ ಕೈ ಬಿಟ್ಟಿದ್ದಳು. ಈಗ ನೋಡಿದರೆ ಹೀಗೆ. ಸಂದರ್ಭಗಳು ತನ್ನ ಹಿಡಿತದಲ್ಲಿಲ್ಲ ಅನಿಸಿದಾಗ, ಮೈ ಪರಚಿಕೊಳ್ಳುವಷ್ಟು ಅಸಹಾಯ ಸಿಟ್ಟು ಏರಿದಾಗ, ಅಥವಾ ತಪ್ಪು ತನ್ನ ಕಡೆ ಇರುವುದು ಇತರರ ಗಮನಕ್ಕೆ ಬರದಿರಬೇಕು ಎಂಬಂತಹ ಪರಿಸ್ಥಿತಿಗಳಲ್ಲಿ ರಜನಿ ಉದ್ರಿಕ್ತಳಾಗಿ ಕಚ್ಚಾ ಬೈಗುಳ ಪದಗಳನ್ನೆ ಕರ್ಕಶ ಏರು ಧ್ವನಿಯಲ್ಲಿ ಒದರುತ್ತಿದ್ದಳು. ಮನೆಯೊಳಗೆ ಜಗಳಗಳು ಸುರುವಾದರೆ ಹೊರಗೆ ಕೇಳಿಸೀತೆಂದು ಕಿಟಕಿ ಮುಚ್ಚಿಕೊಳ್ಳುವ, ಸಾಮಾಜಿಕ ಮರ್ಯಾದೆಗೆ ಅಂಜುವ ಅಂಜುಗುಳಿಗಳು ಬಾಯಿ ತೆರೆಯುವ ಮೊದಲೇ ಅವರ ತುಟಿಗಳಿಗೆ ಅಂಟು ಮಣ್ಣು ಮೆತ್ತಿ ಅದುಮುವ ತನ್ನ ಈ ಸ್ವಭಾವವೇ ತನ್ನ ಗೆಲುವಿನ ಗುಟ್ಟು ಎಂಬುದು ಅವಳಿಗೆ ಚೆನ್ನಾಗಿಯೇ ಅರ್ಥವಾಗಿದ್ದರಿಂದ ಕಾಲಕಾಲಕ್ಕೆ ಸರಿಯಾಗಿ ದುಡಿಸಿಕೊಳ್ಳುತ್ತಿದ್ದಳು. ರಜನಿಗೆ ಸಿಟ್ಟು ಉಕ್ಕುಕ್ಕಿ ಬಂತು. ಸೀದಾ ಕೋಣೆಗೆ ಹೋದಳು. ಶಾಣ್ಯಪ್ಪನ ಮೊದಲಿನ ಭಂಗಿ ಬದಲಿತ್ತು. ಈಗ ಕವುಚಿ ಮಲಗಿ ಗೊರಕೆ ಹೊಡೆಯುತ್ತಿದ್ದ. ಮೋಹ ಮೈದುಂಬಿದ ಸಮಯದಲ್ಲೇನಾದರೂ ಆತ ಕವುಚಿ ಮಲಗಿದ್ದರೆ ತನ್ನ ಭಾರವನ್ನೆಲ್ಲ ಅವನ ಮೇಲೆ ಹೇರುವಂತೆ ಮೈ ಚಾಚಿ ಬಿಸಿ ಏರಿಸಿ ಏಳಿಸುತ್ತಿದ್ದಳು. ಆದರೀಗ ಮೈಯೊಳಗೆ ಆವಾಹನೆಯಾಗಿ ಉರುಳುರುಳಿ ಹೊರ ನುಗ್ಗಲು ಜಾಗ ಹುಡುಕುತ್ತಿರುವ ಉರಿಮಾರಿಯನ್ನು ಹೊರ ಕಳಿಸುವ ಮೊದಲ ಹಂತವೆಂಬಂತೆ ಶಾಣ್ಯಪ್ಪನನ್ನು ಮೊಣಕಾಲಿಂದ ತಿವಿದು, ಮಂಚದಿಂದ ದೂಡಿ ಹಾಕುವಂತೆ ತಳ್ಳಿದಳು. ಶಾಣ್ಯಪ್ಪ ದಡಬಡಿಸಿ ಎಂತಾಯ್ತು ಎಂತಾಯ್ತು ಅನ್ನುತ್ತ ಎದ್ದು ನಿಂತು ಲುಂಗಿ ಕಟ್ಟಿಕೊಂಡ. “ಭೂಕಂಪ ಆದ್ರೂ ಕುಂಭಕರ್ಣನಿಗೆ ಎಚ್ಚರಾಗ್ಲಿಕ್ಕಿಲ್ಲ. ಇಲ್ಲಿ ನಾನೊಬ್ಬಳು ಎಲ್ಲದಕ್ಕು ಸಾಯ್ಬೇಕು. ಕಾಲಿಂಗ್ ಬೆಲ್ ಆಗ್ತಾ ಉಂಟು. ನಿಮ್ಮ ಅಣ್ಣ ಬಂದರೂಂತ ಕಾಣ್ತದೆ” ಎನ್ನುತ್ತ ದಡದಡ ಅಡುಗೆ ಮನೆಯತ್ತ ಹೊರಟವಳು ಮತ್ತೇನೊ ನೆನಪಾದವಳಂತೆ, ಸ್ಯಾನಿಟೈಸರ್ ಗೋಡೆ ಕಪಾಟಲ್ಲುಂಟು ಎಂದಂದು ಒಳ ನಡೆದಳು. ಕುಂತ್ಯಮ್ಮ ಮುಖಕ್ಕೆ ಹಾರಿದ ಬೂದಿ ತೊಳೆದುಕೊಂಡು ಜಗಲಿಗೆ ಬರುವುದು ರಾಜಪ್ಪ ಒಳ ಹೊಕ್ಕಿದ್ದು ಒಂದೇ ಸಮಯದಲ್ಲ್ಲಾಯಿತು. ತಾಯಿಯನ್ನು ನೋಡಿ ತೆರೆದ ಬಾಯಿ ತೆರೆದಂತೆಯೇ ದಂಗಾಗಿ ನಿಂತ ರಾಜಪ್ಪ. ಶಾಣ್ಯಪ್ಪ ತಟ್ಟನೆ, “ಅಮ್ಮನನ್ನು ಅಪರೂಪಕ್ಕೆ ನೋಡುವವರಿಗೆ ನಾವು ಅವಳಿಗೆ ಸರಿಯಾಗಿ ಊಟ ಕೊಡುವುದಿಲ್ವಾ ಅಂತ ಕಂಡೀತು. ಊಟಕ್ಕೆ ಕುಳಿತರೆ ಈಗಲೂ ಅಮ್ಮನಿಗೆ ಆ ಹಳೆ ಸಟ್ಟುಗದಲ್ಲಿ ನಾಲ್ಕು ಸಟ್ಟುಗ ಅನ್ನ ಬೇಕು. ಶುಗರಿಂದಾಗಿಯೇ ತಿಂದದ್ದು ಮೈಗೆ ಹತ್ತುವುದಿಲ್ಲ ಕಾಣ್ಬೇಕು. ದಿನದಿಂದ ದಿನಕ್ಕೆ ವೀಕ್ ಆಗ್ತಿದಾಳೆ” ಅಂದ. ರಾಜಪ್ಪ ತಾಯಿಯ ಮುಖ ನೋಡಿದ. ಕುಂತ್ಯಮ್ಮ ಬಲವಂತದ ನಗು ಎಳೆದುಕೊಂಡು ಇನ್ನೇನೊ ಗುಟ್ಟು ಹೇಳುವಂತೆ, ಒಮ್ಮೆ ಶುಗರ್ ಪರೀಕ್ಷೆ ಮಾಡಿದ್ರೆ ಗೊತ್ತಾದೀತು ಅಂದಳು. ಅಡುಗೆ ಮನೆಯಲ್ಲಿ ಪಾತ್ರೆ ಬಿದ್ದ ಸದ್ದು. ಮರುಕ್ಷಣವೇ ಶಾಣ್ಯಪ್ಪನೆದುರು ನಿಂತಿದ್ದಳು ರಜನಿ. ಅವನ ಮುಂದೆ ಬುತ್ತಿ ಪಾತ್ರೆಯೊಂದನ್ನು ಕುಕ್ಕಿ, “ಇಲ್ಲಿ ಈಗ ನೆಕ್ಲಿಕ್ಕೆ ಎಂತದೂ ಮಾಡ್ಲಿಲ್ಲ. ದರ್ಶಿನಿಯಿಂದ ಎರಡು ಪ್ಲೇಟು ಇಡ್ಲಿ ತನ್ನಿ. ನಂಗೆ ಮಗನನ್ನು ಕಾಣ್ಲಿಕ್ಕೆ ಹೋಗ್ಲಿಕ್ಕುಂಟು.” ಅನ್ನುತ್ತ ಶಾಣ್ಯಪ್ಪನ ಮುಂದೆ ಡಬ್ಬಿ ತಂದು ಕುಕ್ಕಿ ದುರುದುರುನೆ ಮತ್ತೇನೊ ಗಡಿಬಿಡಿಯಿರುವಂತೆ ಹೊರಟಳು. ರಜನಿ ರಾಜಪ್ಪನನ್ನು ಗಮನಿಸದವಳಂತಿರುವುದನ್ನು ನೋಡಿ ಶಾಣ್ಯಪ್ಪ ತುಸು ಮುಜುಗರದಿಂದ, “ರಜನಿ, ಅಣ್ಣ ಬಂದಿದಾನೆ” ಅಂದ. ರಜನಿ ರಾಜಪ್ಪನ ಮುಖವನ್ನೊಮ್ಮೆ ನೋಡಿದಂತೆ ಮಾಡಿ, “ನಂಗೆ ತಡ ಆಗ್ತಿದೆ. ಯರ್ಯಾರಿಗೆ ಬೇಕೊ ಕೇಳಿಕೊಂಡು ತನ್ನಿ” ಎಂದು ಒಳ ನಡೆದಳು. ರಾಜಪ್ಪ ತನಗೇನೂ ಬೇಡವೆಂದ. ಕುಂತ್ಯಮ್ಮ, “ಎರಡು ಪ್ಲೇಟು ತಂದ್ರೆ ನಾನೆಂತ ಮಣ್ಣು ತಿನ್ನುವುದಾ. ನಿನ್ನೆ ರಾತ್ರಿ ಅನ್ನ ಉಳಿಲಿಲ್ಲ” ಅಂದಳು.
“ನೀವು ಹೇಳುದು ಕೇಳಿದ್ರೆ ನಾವು ನಿಮ್ಗೆ ಯಾವಾಗ್ಲೂ ತಂಗಳನ್ನ ಕೊಡ್ತೇವೆ ಅಂತ ತಿಳ್ಕೊಳ್ಬೇಕು.” ರಜನಿಯ ಸ್ವರ ಏರಿತ್ತು. ರಾಜಪ್ಪ ತಟ್ಟನೆ, “ಅಮ್ಮಾ, ನೀನು ಸುಮ್ಮನಿರು. ನಿಮ್ಮ ಬೊಬ್ಬೆ ಊರಿಗೆಲ್ಲ ಕೇಳ್ಬೇಕಾ? ಅವನು ತರುದಿಲ್ಲ ಅಂತ ಹೇಳಿದ್ನಾ? ನಾನೇ ಹೋಗಿರ್ತೇನೆ” ಅಂದುಬಿಟ್ಟ.
“ಬಂದ ನೋಡು ಮಹಾ ಸಜ್ಜನ ಶ್ರೀರಾಮಚಂದ್ರ. ನಿನ್ನ ಈ ಬುದ್ದಿಯಿಂದಾಗಿಯೇ ನೀನೂ ಉದ್ದಾರ ಆಗುದಿಲ್ಲ. ಆ ದಶರಥ ರಾಜನ ಹಾಗೆ ನಾನೂ ಅನುಭವಿಸುವುದು.” ತಿರಸ್ಕಾರದಿಂದ ಹೇಳಿ ತನ್ನ ಕೋಣೆಗೆ ಹೋಗಿಬಿಟ್ಟಳು ಕುಂತ್ಯಮ್ಮ. ರಜನಿ ಶಾಣ್ಯಪ್ಪನಿಗೆ, ಹೋಗು ಎಂಬಂತೆ ಕಣ್ಣು ಸನ್ನೆ ಮಾಡಿದಳು. ತಟ್ಟನೆ ಆವರಿಸಿದ ಪ್ರಕ್ಷುಬ್ದ ಖಾಲಿಯಲ್ಲಿ ಏನು ಮಾಡಬೇಕೆಂದು ತೋಚದೆ ಚಡಪಡಿಸಿದ ರಾಜಪ್ಪ. ಅಮ್ಮನನ್ನು ಸಮಾಧಾನ ಪಡಿಸಬೇಕೆಂದುಕೊಂಡು ಅವಳ ಕೋಣೆಯತ್ತ ಹೋಗಿ ಕದ ತಳ್ಳಿದ. ಚಿಲಕ ಹಾಕಿರಲಿಲ್ಲ. ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಸಾರ್ವಜನಿಕ ಶೌಚಾಲಯದ ಸುತ್ತಮುತ್ತ ಬರುವಂತ ಘಾಟು ವಾಸನೆ ಹೊಡೆದು ಹಾಗೇ ನಿಂತ. ಅಮ್ಮ ಎಂದರೆ ಅವನಿಗೆ ಚಿರ ಪರಿಚಿತವಿರುವುದು ಅವಳು ಮೈಗೆ ಹಚ್ಚಿಕೊಳ್ಳುತ್ತಿದ್ದ ಕಯ್ಯಾಳಕುಡಿ ಸೊಪ್ಪಿನ ಎಣ್ಣೆ ಹಾಗು ಮೆಡಿಮಿಕ್ಸ್ ಸಾಬೂನು ಬೆರೆತ ವಿಶೇಷ ಪರಿಮಳ. ಕುಂತ್ಯಮ್ಮ ತೊಡುವ ಬಟ್ಟೆಯಿಂದ ತೊಡಗಿ ಹಾಸಿಗೆಯ ಹಾಸು, ಹೊದೆವ ಚಾದರ, ಅವಳು ಕುಳಿತ ಜಾಗ ಎಲ್ಲೆಂದರಲ್ಲಿ ಈ ಪರಿಮಳ ಅಂಟಿರುತ್ತಿತ್ತು. ಅಮ್ಮ ಈಗ ಈ ಕೋಣೆ ಉಪಯೋಗಿಸುತ್ತಿಲ್ಲವೆ ಅಂದುಕೊಂಡು ಅನುಮಾನಿಸುತ್ತಿರುವಾಗ, ಕುಂತ್ಯಮ್ಮ ಯಾಕೆ ಅಲ್ಲೆ ನಿಂತೆ ಎಂಬಂತೆ ನೋಡುತ್ತ, ಮೂಲೆಯಲ್ಲಿ ಗುಡಾಣದಂತೆ ರಾಶಿ ಹಾಕಿಕೊಂಡಿದ್ದ ಬಟ್ಟೆ ರಾಶಿಯಿಂದ ಒಂದಷ್ಟು ತೆಗೆದು ಅಲ್ಲೆ ಇದ್ದ ಬಕೆಟಿಗೆ ತುಂಬಿದಳು.
“ಏನಮ್ಮ ಇದು? ಎಲ್ಲಿಗೆ ತಗೊಂಡು ಹೋಗ್ತಿದ್ದಿ ಅದನ್ನ?” ಆತನ ಮಾತು ಮುಗಿಯುವ ಮೊದಲೇ, “ನಿಮ್ಮದೆಲ್ಲ ಉಚ್ಚಿನ ವಸ್ತ್ರ ತೊಳೆದಾಯ್ತು. ಈಗ ತೊಳಿಲಿಕ್ಕಿರುವುದು ನನ್ನ ಉಚ್ಚಿನ ವಸ್ತ್ರ.” ಹೇಳ ಹೇಳುತ್ತ ಅವಳ ಸ್ವರ ನಡುಗಿತ್ತು. ಕಣ್ಣು ಒರೆಸಿಕೊಳ್ಳುತ್ತ ಬಾಲ್ದಿ ಹಿಡಿದು ಹೊರ ನಡೆದಳು.
“ವಾಷಿಂಗ್ ಮಷಿನ್ನಿಗೆ ಹಾಕ್ಬರ್ದ?”
“ಹಾಗೆ ಕೇಳು ನಿನ್ನ ಮೈದಿನಿಗೆ. ಹೇಸಿಗೆ ಆಗ್ತದಂತೆ”
“ಡೆತಾಲ್ ಹಾಕಿದ ಬಿಸಿ ನೀರಲ್ಲಿ ಅದ್ದಿ ವಾಷಿಂಗ್ ಮಷಿನಿಗೆ ಹಾಕ್ಬಹುದಲ್ಲ...”
“ಅಮ್ಮನ ಹತ್ರ ಅಷ್ಟು ಕೊಂಡಾಟ ಇದ್ರೆ ನಿಮ್ಗೇ ರ್ಕೊಂಡು ಹೋಗ್ಬಹುದಲ್ಲ” ಅವನ ಮಾತು ಪರ್ತಿಗೊಳ್ಳುವ ಮೊದಲೇ ಚಟ ಪಟಾಕಿಯಂತೆ ಮಾತು ಸಿಡಿದಿತ್ತು. ರಜನಿ ಅವನ ಹಿಂದೆ ಬಂದು ನಿಂತಿದ್ದಳು. ಕುಂತ್ಯಮ್ಮ ಕೈಯಲ್ಲಿದ್ದ ಬಾಲ್ದಿ ಇಟ್ಟು ಯುದ್ದಕ್ಕೆ ನಿಂತವಳಂತೆ ಸೊಂಟಕ್ಕೆ ಕೈ ಇಟ್ಟು ಬೆನ್ನು ನೆಟ್ಟಗೆ ಮಾಡಿದಳು. ಅವಳ ನಿತ್ರಾಣಿ ಶರೀರದಲ್ಲಿ ಅದೆಲ್ಲಿಂದ ಶಕ್ತಿ ಆವಾಹನೆಯಾಗುತ್ತದೆಯೊ. ಕರ್ಕೊಂಡು ಹೋಗು ಅಂತ ಹೇಳ್ಲಿಕ್ಕೆ ನೀನ್ಯಾರು? ನಿನಗಿಂತ ಮೊದಲು ಈ ಮನೆ ಮೆಟ್ಟುಕಲ್ಲು ಹತ್ತಿದವಳು ನಾನು. ನಮ್ಮ ಎಂಜಲು ಚೋರು ನೀನು ತಿಂತಾ ಇರುವುದು. ಮೊದಲು ನೀನು ನಡಿ ಇಲ್ಲಿಂದ” ಕುಂತ್ಯಮ್ಮಳ ಸ್ವರ ಏರಿತ್ತು.
“ಎಂತ ಹೇಳಿದ್ದು ನೀವು. ನಿಮ್ಮೆಲ್ಲರ ಮೇಲೆ ಈಗ್ಲೇ ಪೋಲಿಸ್ ಕಂಪ್ಲೇಂಟ್ ಕೊಡ್ತೇನೆ ನೋಡಿ.” “ಪೊಲೀಸಿಗೆ ಈಗ್ಲೆ ಹೇಳು. ರ್ಲಿ ಅವರು. ಎಲ್ಲ ತೋರಿಸ್ತೇನೆ. ಯಾರು ಯಾರ ಶಂಟಕ್ಕೆ ಸಮ ಅಂತ ಸಾಬೀತು ಮಾಡ್ತೇನೆ.” ರಜನಿ ಮಾತು ಮುಗಿಸುವ ಮೊದಲೇ ಕುಂತ್ಯಮ್ಮ ಸವಾಲು ಹಾಕಿದಳು. ತಾಯಿಯ ಬಾಯಿಯಿಂದ ಎಂದೂ ಕೇಳದ ಶಬ್ದ ಕೇಳಿ ರಾಜಪ್ಪ ಕಂಗಾಲಾದ.
“ಶ್ಶೇ..ಎಂತ ಮಾತಮ್ಮ ಇದು. ನಿಂಗೆ ಪ್ರಾಯ ಆಗಿದ್ದೆಂತದಕ್ಕೆ. ಮಾರ್ಗಕ್ಕೆ ಕೇಳುವ ಹಾಗೆ ಬೊಬ್ಬೆ ಹಾಕ್ತೀರಲ್ಲ” ಅನ್ನುತ್ತ ತಡೆಯಲು ಪ್ರಯತ್ನಿಸಿದ ರಾಜಪ್ಪನನ್ನು ತಳ್ಳಿ,
“ನಂಗೇ ಬುದ್ದಿ ಹೇಳುವುದಾದರೆ ಬಂದಿದ್ಯಾಕೆ ನೀನು. ಕೈಲಾಗದ ಸಂಭಾವಿತ” ಅಂದಳು. ರಜನಿಗೆ ಮಾತ್ರ ಅತ್ತೆಯ ಮಾತಿನೊಳಗಿನ ಹಿನ್ನೆಲೆ ಹೊಳೆದು ಮಾತು ಮುಂದುವರಿಸದೆ ಒಳ ಹೋದಳು. ರಾಜಪ್ಪ ಬ್ಯಾಗಿಂದ ತಾಯಿಗಾಗಿ ತಂದ ಸಾಮಾನುಗಳನ್ನು ತೆಗೆದಿಟ್ಟು ಅಲ್ಲಿಂದ ಹೊರಟುಬಿಟ್ಟ. ಅವನು ಹೋಗುತ್ತಿರುವುದನ್ನೆ ನೋಡುತ್ತ ನಿಂತ ಕುಂತ್ಯಮ್ಮ ಮಗನನ್ನು ಕರೆಯಬೇಕೆಂದುಕೊಂಡಳು. ಆದರೆ, ಅವನು ಮರೆಯಾದರೂ ನಾಲಿಗೆ ಹೊರಳಲೇ ಇಲ್ಲ. ತನ್ನ ನಾಲಿಗೆಯೇಕೆ ಇದ್ದಕ್ಕಿದ್ದಂತೆ ನರ ಮುರಿದ ಬೆಕ್ಕಿನ ಬಾಲದಂತಾಯಿತು ಎಂದು ಯೋಚಿಸುತ್ತ, ಅವನು ತೆಗೆದಿಟ್ಟ ಸಾಮಾನುಗಳನ್ನು ಒಂದೊಂದಾಗಿ ಎತ್ತಿಟ್ಟುಕೊಂಡಳು.
** **
ಬಸ್ಸು ಘಾಟಿ ರಸ್ತೆಯ ತಿರುವಿನ ಚಡಾವಿನಲ್ಲಿ ಏದುಬ್ಬಸ ಹತ್ತಿದಂತೆ ಏರುತ್ತಿತ್ತು. ಘಾಟಿ ಸುರುವಾಗುವ ಮೊದಲು ಸಿಗುವ ಚಾ ಅಂಗಡಿ ಮುಂದೆ ಡ್ರೈವರ್ ಬಸ್ ನಿಲ್ಲಿಸಿದಾಗ ಬಾಳೆಹಣ್ಣು, ಬ್ರೆಡ್ಡು, ಚಹಾ ಕುಡಿದಿದ್ದರಿಂದ ಹೊಟ್ಟೆ ತುಸು ತಂಪಾಗಿದ್ದರೂ ತಲೆಯ ಎರಡೂ ಬದಿಯ ನರಗಳು ಹೊಡೆದುಕೊಳ್ಳುವುದು ಜೋರಾಗುತ್ತಿತ್ತು ರಾಜಪ್ಪನಿಗೆ. ಮಾಸ್ಕ್ ತೆಗೆದರೆ ತುಸು ಹಗುರಾದೀತೆಂದು ಕಿವಿ ಬಳಿ ಕೈ ಹೋಗುತ್ತಿದ್ದಂತೆ, ತಾನಿನ್ನೂ ಎರಡನೆ ಡೋಸ್ ವಾಕ್ಸಿನೇಷನ್ ಹಾಕಿಸಿಕೊಂಡಿಲ್ಲ ಎಂಬುದು ನೆನಪಾಯಿತು. ಜೊತೆಗೆ ಪ್ರಯಾಣಿಕರೂ ಜಾಸ್ತಿ ಇದ್ದಾರೆ. ರಿಸ್ಕ್ ಯಾಕೆ ಅಂದುಕೊಂಡು ಕೈ ಹಿಂತೆಗೆದುಕೊಂಡ. ಕಣ್ಣು ಮುಚ್ಚಿಕೊಂಡರೆ ತಾಯಿಯ ಕೋಣೆಯ ನೋಟ ದುತ್ತನೆ ಒಳಗಣ್ಣಲ್ಲಿ ಪ್ರತ್ಯಕ್ಷವಾಗುತ್ತಿತ್ತು. ತಾನು ಹಾಗೆ ಹೊರಟು ಬಂದಿದ್ದರ ಬಗ್ಗೆ ಕೆಡುಕೆನಿಸಲಾರಂಭಿಸಿತು. ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು ಎಂಬುದು ತನ್ನ ಕುಟುಂಬದ ಹೆಗಲೇರಿ ಕುಳಿತು ಬೇತಾಳವಾಗಬಹುದೆಂಬ ಕಲ್ಪನೆಯೇ ರಾಜಪ್ಪನಿಗಿರಲಿಲ್ಲ. ತಾಯಿಯ ಮೊಂಡು ಹಠಮಾರಿತನ ಯಾವ ಹೊತ್ತಿಗೆ ಹೇಗೆ ಕೆಲಸ ಮಾಡುತ್ತದೆಂದು ಊಹಿಸಲೇ ಸಾಧ್ಯವಿಲ್ಲವೆಂಬುದು ಹಲವಾರು ಅನುಭವದಿಂದಲೇ ಕಂಡುಕೊಂಡಿದ್ದ ರಾಜಪ್ಪ. ಅದರಲ್ಲಿ ಅವನಿಗೆ ಇವತ್ತಿಗೂ ಕಾಡುವುದು, ತಂದೆ ಆಸ್ಪತ್ರೆಯಲ್ಲಿದ್ದಾಗ ಒಂದು ರಾತ್ರಿಯೂ ಅಲ್ಲಿ ಅವರೊಂದಿಗೆ ಉಳಿಯಲು ತಾಯಿ ಒಪ್ಪದೆ ಇದ್ದಿದ್ದು. ತನಗೆ ಆ ವಾಸನೆಯೆಲ್ಲ ಆಗಿ ಬರುವುದಿಲ್ಲ ಅಂದು ಬಿಟ್ಟಿದ್ದಳು. ಆಗ ಎಲ್ಲ ಮಕ್ಕಳೂ ಗದರಿದಾಗ, ನಿಮ್ಮ ಅಪ್ಪ. ನೀವೇ ನೋಡಿಕೊಳ್ಳಿ. ನಾನು ಬೇಕಾದಷ್ಟು ನೋಡಿಕೊಂಡಾಗಿದೆ ಅಂದಿದ್ದಳು. ಅವಳ ಮೊಂಡುತನವನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕೆಂಬುದೇ ತಿಳಿಯುವುದಿಲ್ಲ ರಾಜಪ್ಪನಿಗೆ. ಯಾವುದಕ್ಕಾದರೂ ಮೊಂಡು ಹಿಡಿದಳೆಂದರೆ ಅದನ್ನು ಸಾಧಿಸಲು ಆರಂಭದಲ್ಲಿ ಹೇಗೆ ಬೇಕೊ ಹಾಗೆ ಜಿದ್ದಿಗೆ ನಿಲ್ಲುತ್ತಾಳೆ. ನಂತರ ತಾನೇನಾದರೂ ಸೋಲುತ್ತೇನೆ ಅನಿಸಿದರೆ ತಟ್ಟನೆ ಅದರಿಂದ ವಿಮುಖಳಾಗುತ್ತಾಳೆ. ತಾನು ಮೊದಲು ಹಾಗೆ ಮಾಡಿದ್ದೇ ಸುಳ್ಳೆಂಬಂತಿರುತ್ತದೆ ಅವಳ ನಡೆನುಡಿ. ಮೊದಲು ಅವಳನ್ನು ವಹಿಸಿ ಮಾತಾಡಿ ವಿರೋಧ ಕಟ್ಟಿಕೊಂಡವರು ಪೆಕರಗಳಂತೆ ತಲೆ ಕೆರೆದುಕೊಳ್ಳಬೇಕಷ್ಟೆ. ಮನೆಯ ಆಸ್ತಿ ವಿಚಾರದಲ್ಲಿ ತಗಾದೆ ಸುರುವಾಗಿದ್ದೇ ಅವಳ ಈ ಸಮಪಾಲು ಎಂಬ ಹಟದಿಂದ. ಹೆಣ್ಣು ಮಕ್ಕಳಲ್ಲಿ ಆಸೆ ಹುಟ್ಟಿಸಿದವಳೇ ಅವಳು. ಕೊನೆಗೆ ಇದು ತನ್ನ ಕೈ ಮೀರುತ್ತಿದೆಯೆಂದಾದಾಗ ಅವರಿಗೆ ಹಿಂದೆ ಸರಿಯಲು ದುಂಬಾಲು ಬಿದ್ದಳು. ಕನಸು ಚಿಗುರೊಡೆದ ಮೇಲೆ ಅದನ್ನು ಹಿಸುಕುವುದು ಅಷ್ಟು ಸುಲಭವೆ. ತನ್ನ ಅಣ್ಣತನ ಬಳಸಿಕೊಂಡು ಮಗಳಂದಿರನ್ನು ಬಗ್ಗಿಸಲು ನೋಡಿದಳು.
ಹೆರಿಯನೆಂಬ ನೆಪದಿಂದ ಎಲ್ಲರ ನಡುವೆ ಹಣ್ಣಾದವನು ರಾಜಪ್ಪ. ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ನನಗೆ ಏನೂ ಬೇಡ ಎಂದು ಬರೆದುಕೊಡುತ್ತೇನೆ ಅಂದುಕೊಂಡ ರಾಜಪ್ಪ ಹೆಂಡತಿಯ ಬಳಿ ಹಾಗೆ ಹೇಳಿದ್ದಕ್ಕೆ, ಬಗೆ ಹರಿಸುವುದು ಕಷ್ಟ ಅಂತ ಓಡಿ ಹೋಗುವುದಾ? ಅದೂ ಅಲ್ಲದೆ ಇದು ಅಪ್ಪನನ್ನೇ ಧಿಕ್ಕರಿಸುವ ಅಹಂಕಾರ ಅಲ್ವಾ ಅಂದಿದ್ದಳು. ಇದೊಳ್ಳೆ ಬಿಸಿ ತುಪ್ಪದಂತಾಯ್ತಲ್ಲ ಅನಿಸಿದರೂ ಅವಳು ಹೇಳಿದ್ದರಲ್ಲಿ ದಿಟವಿರುವುದು ಕಂಡು ಆ ನಿಲುವಿನಿಂದ ಹಿಂದೆ ಸರಿದಿದ್ದ. ಯಾರಿಗೆ ಬೇಕಿತ್ತು ಈ ಹಿರಿ ಮಗನೆಂಬ ಎರಡಲುಗಿನ ಪಾತ್ರ ಎಂದು ಅಲವತ್ತುಕೊಂಡಿದ್ದ. ಬಗೆ ಹರಿಸುವ ಅವನ ಪ್ರಯತ್ನಗಳೆಲ್ಲ ಫಲ ನೀಡದೆ, ಕೋರ್ಟಿನ ಹೋಗುವ ಮಾತು ಮುನ್ನೆಲೆಗೆ ಬಂದು ಎಲ್ಲವೂ ಮುಸುಕಿನ ಗುದ್ದಾಟದಂತಾಗಿತ್ತು. ಕಾನೂನೇನೊ ತನ್ನ ಕೋರ್ಟ್ ರೂಮಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಕೊಟ್ಟಿದೆ. ಆದರೆ, ಅದನ್ನು ನೊಣಂಪ್ರತಿ ಪಾಲಿಸಿದರೆ ಕೆಲವೊಮ್ಮೆ ಮನೆ ನಂಬಿ ಕುಳಿತ ಗಂಡು ಮಕ್ಕಳು ಅಬ್ಬೆಪಾರಿಗಳಾಗಬೇಕಾದೀತು ಎಂಬಂತಿದೆ ನಮ್ಮ ಕೌಟುಂಬಿಕ, ಸಾಮಾಜಿಕ ವ್ಯವಸ್ಥೆ ಎಂದು ಮಾಲಿನಿ ಬಳಿ ಹೇಳಿದ್ದ ರಾಜಪ್ಪ. ಆಕೆ ಹೌದೆಂದು ಒಪ್ಪಿಕೊಂಡರೂ ಮರು ಘಳಿಗೆಯಲ್ಲೆ ಈ ಕಾನೂನು ಬರುವ ಮೊದಲು ಮದುವೆಯಾಗದ, ಗಂಡ ಸತ್ತ ಎಷ್ಟು ಹೆಂಗಸರು ಅಬ್ಬೆಪಾರಿಗಳಂತೆ ನರಕ ಬರ್ಲಿಲ್ವಾ. ತವರಿನಲ್ಲಿ ಸಿರಿವಂತಿಕೆ ಇದ್ದೂ ಹಣೆಬರಹ ಅಂದುಕೊಂಡು ಗಂಡನ ಮನೆಯ ಬಡತನದಲ್ಲಿ ಮಿಂದವರಿಲ್ವಾ. ನಮ್ಮ ಹಿರಿಯರ ಮನೆಗಳಲ್ಲೆ ನಾವಿದನ್ನ ಕಂಡಿದೇವಲ್ವಾ. ಆಗ ಯಾಕೆ ಯಾರಿಗೂ ಇದು ಕಾಣಲಿಲ್ಲ. ಸಾಮಾಜಿಕ ನ್ಯಾಯ ಅಂತ ಬಂದಾಗ ಲಕ್ಷ ಜನಕ್ಕೆ ಒಳ್ಳೆಯದಾಗಲು ನೂರು ಜನ ಅನುಭವಿಸಬೇಕಾಗುತ್ತದಲ್ವಾ? ಹಾಗೆಯೇ ಇದು. ಎಲ್ಲರಿಗೂ ಒಂದೊಂದು ಕಾಲ ಬರುತ್ತದೆ ಎಂಬುದು ಪ್ರಕೃತಿ ನಿಯಮ ಅಂದಿದ್ದಳು. ತನ್ನ ವಿಧವೆ ದೊಡ್ಡಮ್ಮ ಮಕ್ಕಳನ್ನು ಕಟ್ಟಿಕೊಂಡು ಊರೂರು ತಿರುಗಿ ಅವರಿವರ ಮನೆ ಚಾಕರಿ ಮಾಡಿ ಹೊಟ್ಟೆ ಹೊರೆದಿದ್ದು ನೆನಪಾಗಿದ್ದರಿಂದ ರಾಜಪ್ಪ ಸುಮ್ಮನಾಗಿದ್ದ. ಹಳವಂಡಗಳ ಸುಳಿಯಲ್ಲಿ ಸುತ್ತುತ್ತಲೇ ಮುಂದಿನ ವಾರ ಮತ್ತೆ ಹೋಗಿ ತಾಯಿಯನ್ನು ಕರೆತರಬೇಕು ಅಂದುಕೊಳ್ಳುತ್ತಲೇ ತೂಕಡಿಸುತ್ತ, ಅರೆಬರೆ ನಿದ್ದೆಗಿಳಿಯುತ್ತಿದ್ದಾಗಲೇ ಅವನ ಬಸ್ ನಗರ ತಲುಪಿತ್ತು.
ಬಸ್ಸಿಳಿದು ಅಟೊ ಮಾಡಿಕೊಂಡು ಮನೆ ಸೇರಿಕೊಂಡ ರಾಜಪ್ಪ ಒಡೆದೇ ಹೋಗುವಂತೆ ಹೊಡೆದುಕೊಳ್ಳುತ್ತಿದ ತಲೆಗೆ ಬಟ್ಟೆ ಬಿಗಿದುಕೊಂಡು ತಲೆನೋವಿನ ಗುಳಿಗೆ ನುಂಗಿ ಬಿದ್ದುಕೊಂಡ. ಆದರೆ, ಗುಳಿಗೆಯೂ ನಿಲ್ಲದಂತೆ ಹೊಕ್ಕುಳ ಮೂಲದಿಂದಲೇ ಕಿತ್ತುಕೊಂಡು ಬರುವಂತೆ ವಾಕರಿಸಿ ವಾಂತಿ ಮಾಡಿಕೊಂಡ. ಹೊಟ್ಟೆ ಖಾಲಿಯಾಗಿದ್ದರಿಂದ ಹಳದಿ ನೀರು ಮಾತ್ರ ಬರುತ್ತಿತ್ತು. ಅಪರಿಚಿತ ರೋಗವಿನ್ನೂ ಸುತ್ತಮುತ್ತ ಹೊಂಚು ಹಾಕುತ್ತಲೇ ಇದ್ದಿದ್ದರಿಂದ ಮಾಲಿನಿ ಒಂದು ಕ್ಷಣ ನಡುಗಿಬಿಟ್ಟಳು. ಡಾಕ್ಟ್ರಿಗೆ ಫೋನ್ ಮಾಡ್ತೇನೆ ಅಂದವಳಿಗೆ ಇನ್ನೊಂದು ಗುಳಿಗೆ ಇದ್ದರೆ ಕೊಡು. ಅರ್ಧ ಘಂಟೆ ತಾಳ್ಮೆಯಿಂದ ನಿನ್ನ ಕೆಲಸ ಮಾಡಿಕೊ. ಆಫೀಸಿಗೆ ಒಂದು ಘಂಟೆ ಲೇಟಾಗಿ ಬರ್ತೀನಿ ಅಂತ ಮೆಸೇಜ್ ಹಾಕ್ತೀನಿ. ಎಂದಂದು ಹಾಸಿಗೆ ಮೇಲೆ ಬಿದ್ದುಕೊಂಡಿದ್ದ. ಇದುವರೆಗೆ ಅವನಲ್ಲಿ ಕಂಡಿರದ ವ್ಯಗ್ರತೆಯೊಂದು ಧ್ವನಿಯೊಳಗೆ ಇಣುಕಿದ್ದು ಮಾಲಿನಿಯ ಗಮನಕ್ಕೆ ಬಂತು. ಮಲಗಿ ತುಸು ಹೊತ್ತಿಗೆ ಸಣ್ಣಗೆ ಗೊರೆಯಲಾರಂಭಿಸಿದ. ಮಾಲಿನಿ ತುಸು ಹೊತ್ತು ನಿಂತು ನೋಡಿದಳು. ಬಳಲಿಕೆಯಿದ್ದರೂ ಮುಖದಲ್ಲಿ ತುಂಬಿದ್ದ ಮಗುವಿನ ಕಳೆಗೆ ಮುದ್ದು ಉಕ್ಕಿ ಬಂದಿತ್ತು. ನಿದ್ರೆಯಲ್ಲಿ ಎಲ್ಲರಲ್ಲೂ ಮಕ್ಕಳ ಮುಗ್ಧತೆಯೇ. ಎಚ್ಚರಾದಗಲೇ ಅವರವರ ವಯೋಮಾನಕ್ಕೆ ಸಂದರ್ಭಗಳಿಗೆ ತಕ್ಕಂತೆ ಮೈ ಇಡೀ ಹೊತ್ತು ನಡೆಯುವ ದಂದುಗಗಳು ಅನಿಸಿ ಅವನಿಗೆ ಎಚ್ಚರಾಗದಂತೆ ಚಾದರ ಹೊದೆಸಿದಳು. ಆತ ಬಚ್ಚಲಿನಲ್ಲಿ ಕಳಚಿಟ್ಟ ಬಟ್ಟೆ, ಮುಖ ಗವುಸುಗಳನ್ನು ಬಿಸಿ ನೀರಲ್ಲಿ ನೆನೆ ಹಾಕಬೇಕೆಂದು ಬಚ್ಚಲಿಗೆ ಹೋದವಳು ಅಲ್ಲಿ ತುಂಬಿದ್ದ ಉಚ್ಚಿನ ವಾಸನೆಗೆ ಮೂಗು ಮುಚ್ಚಿಕೊಂಡಳು. ಯಾವಾಗ್ಲೂ ಎರಡೆರಡು ಬಾರಿ ಫ್ಲಷ್ ಮಾಡುವವನಿಗೆ ಇವತ್ತು ಫ್ಲಷ್ ಮಾಡಲೂ ಮರೆಯುವಷ್ಟು ತಲೆ ನೋವು ಅಂದ್ರೆ ಅವನು ಎದ್ದ ತಕ್ಷಣ ವೈದ್ಯರಲ್ಲಿಗೆ ಹೋಗುವುದೇ ಸರಿ ಅಂದುಕೊಂಡಳು. ತಾಸು ಕಳೆದು ಅವನು ಎದ್ದಾಗ ತಲೆ ನೋವು ವಾಸಿಯಾಗಿದ್ದರಿಂದ ಆಸ್ಪತ್ರೆ ಮಾತು ತಳ್ಳಿ ಹಾಕಿದ. ಆದರೆ, ಊರಿನ ಸುದ್ದಿ ಎತ್ತದೆ ಅಸಹಜವೆನಿಸುವ ಮೌನದಿಂದಲೇ ತನ್ನ ಕೆಲಸಗಳಲ್ಲಿ ತೊಡಗಿದ್ದ. ಅವನಾಗಿ ಏನೂ ಹೇಳಲಾರ ಎಂದು ಖಾತ್ರಿಯಾಗಿದ್ದೆ ಮಾಲಿನಿ, “ಅತ್ತೆ ಹೇಗಿದಾರೆ? ಏನಾಯ್ತು? ಕೇಳಿದಳು.
“ನನ್ನ ಬಟ್ಟೆ ಬಕೆಟಲ್ಲಿ ಹಾಕಿಟ್ಟಿದ್ದೀಯಲ್ಲ. ಬಾತ್ರೂಮಿಗೆ ಹೋಗಿದ್ಯ” ತಾನು ಕೇಳಿದ್ದಕ್ಕೆ ಉತ್ತರಿಸದೆ ಮಾತು ತಪ್ಪಿಸುತ್ತಿದ್ದಾನಿವನು ಎಂಬ ಸಿಟ್ಟಿಗೆ,
“ಮತ್ತೇನು ಬಟ್ಟೆ ಹೋಗಿ ಬಕೆಟೊಳಗೆ ಕೂತಿದ್ದು ಅನ್ಕೊಂಡ್ಯಾ? ಕೇಳಿದಳು.
“ನಾನು ಫ್ಲಷ್ ಮಾಡಿರಲಿಲ್ಲ.”
“ಹ್ಹ.. ಒಳ ಹೊಗುತ್ತಿದ್ದಂತೆ ಗಬ್ಬು ವಾಸ್ನೆ ಹೊಡೀತು.” ನಗುತ್ತ ಹೇಳಿದಳು.
“ಮಾಲಿ, ಅಮ್ಮನ ರೂಮಲ್ಲಿ ಈಗ ಇದೇ ವಾಸ್ನೆ. ನಿಂಗೆ ವಿವರಿಸೋದು ಹೇಗೆ ಅಂತ ಗೊತ್ತಾಗ್ಲಿಲ್ಲ. ಅದಕ್ಕೆ ಹಾಗೆ ಮಾಡಿದೆ. ಸ್ಸಾರಿ” ಏನೊಂದು ಅರ್ಥವಾಗದೆ ಅವನ ಮುಖ ನೋಡಿದಳು. ಅಮ್ಮ ಅವಳ ಕೆಲಸ ಅವಳೇ ಮಾಡಿಕೊಳ್ಳುವಷ್ಟು ತ್ರಾಣ ಇಟ್ಟುಕೊಂಡಿದಾಳೆ. ಆದರೆ, ಉಚ್ಚೆ ಹನಿತಾನೇ ಇರ್ತದೆ. ಗುಡ್ಡೆ ಗುಡ್ಡೆ ಬಟ್ಟೆ ತೊಳಿತಾಳೆ. ಹೀಗಾದರೆ ಹಾಸಿಗೆ ಹಿಡಿಯಲು ಹೆಚ್ಚು ದಿನ ಇಲ್ಲ. ಏನು ಮಾಡ್ಬಹುದು ಅಂತ ಯೋಚಿಸ್ತಿದ್ದೀನಿ” ತನ್ನೊಂದಿಗೇ ಮಾತಾಡಿಕೊಳ್ಳುವಂತಿತ್ತು ಅವನ ಧ್ವನಿ.
“ಡೈಪರ್ ಹಾಕುದಿಲ್ವಾ?” “ಕೆಲವೊಮ್ಮೆ ಹಾಕ್ತಾಳಂತೆ. ದಿನಾ ಡೈಪರ್ ಹಾಕಿದ್ರೆ ಅದನ್ನ ಬಿಸಾಡುವುದಕ್ಕೆ ಜಾಗ ಇಲ್ಲ. ಪೇಟೆಯಂತೆ ಅಲ್ಲೆಲ್ಲ ಕಸದ ಗಾಡಿಗಳಿಲ್ವಲ್ಲ. ಕಪಾಟಲ್ಲಿದ್ದ ಅವಳ ಎಲ್ಲಾ ಸೀರೆಗಳೂ ಈಗ ಉಚ್ಚೆ ವಸ್ತ್ರ ಆಗಿದೆ.”
“ವಾಷಿಂಗ್ ಮೆಷಿನ್ ಇದೆಯಲ್ಲ. ಮತ್ಯಾಕೆ..” ಎನ್ನುತ್ತಿದ್ದವಳನ್ನು ಅರ್ಧದಲ್ಲೇ ತಡೆದು,
“ಉಚ್ಚೆ ವಸ್ತ್ರ ವಾಷಿಂಗ್ ಮಷಿನಿಗೆ ಹಾಕಿದ್ರೆ ಬೇರೆ ಬಟ್ಟೆ ಹಾಕಲು ಹೇಸಿಗೆಯಾಗ್ತದಂತೆ. ಬಿಸಿನಿರಲ್ಲಿ ಹಾಕಿ ವಾಷಿಂಗ್ ಮಷಿನಿಗೆ ಹಾಕ್ಬಹುದಲ್ಲ ಅಂದೆ. ಅಷ್ಟೆಲ್ಲ ಪ್ರೀತಿ ಕಾಳಜಿ ಇದ್ರೆ ನೀನೇ ರ್ಕೊಂಡು ಹೋಗಿ ನೋಡಿಕೊ ಅಂತ ಜಗಳಕ್ಕೆ ನಿಂತು ಬಿಟ್ರು. ಏನು ಹೇಳಿದ್ರೂ ತಪ್ಪಾಗಿ ಅರ್ಥ ಮಾಡ್ಕೊಳ್ತಾರೆ ಅವರಿಬ್ರು. ಮಾತಿಗೆ ಅರ್ಥ ಇಲ್ಲ.”
“ಪರಿಸ್ಥಿತಿ ಈ ಮಟ್ಟಕ್ಕೆ ಹದಗೆಟ್ಟಿದೆ ಅಂದ್ಮೇಲೆ ಕರ್ಕೊಂಡು ಬರಬೇಕಷ್ಟೆ”
“ನಾನೂ ಅದನ್ನೇ ಯೋಚಿಸ್ತಿದೀನಿ. ಅಲ್ಲಿಯ ವ್ಯವಸ್ಥೆ ನೋಡಿದ್ರೆ ಅಮ್ಮನ್ನ ಈಗಿಂದೀಗ ಕರ್ಕೊಂಡು ಬರ್ಬೇಕು ಅನಿಸ್ತಿದೆ. ತುಂಬ ವೀಕ್ ಆಗಿದಾಳೆ. ಡಯಾಬಿಟಿಸಿಂದ ಅಂತ ಅನ್ಕೊಂಡ್ರೂ ಏನೊ ಸರಿ ಇಲ್ಲ ಅನಿಸ್ತು. ಮುಂದಿನ ಭಾನುವಾರ ಹೋಗಿ ಕರ್ಕೊಂಡು ಬರುವುದೇ ಸರಿ.”
“ಯಾವುದಕ್ಕು ರಾತ್ರಿ ಬಂದ ಮೇಲೆ ಇದನ್ನ ಡಿಸ್ಕಸ್ ಮಾಡೋಣ. ಅಷ್ಟು ಹೊತ್ತಿಗೆ ಮಗಳೂ ಬಂದರ್ತಾಳೆ.” ಎಂದಂದು ನಡೆದ.
ತಮ್ಮ ಎರಡು ಕೋಣೆಗಳ ಈ ಬಾಡಿಗೆ ಮನೆಗೆ ಆ ಸ್ಥಿತಿಯಲ್ಲಿರುವ ಅವರನ್ನು ಕರೆತಂದು ನಿರ್ವಹಿಸುವುದು ನಿರ್ಧರಿಸಿದಷ್ಟು ಸರಳವಲ್ಲ. ಒಂದು ಕೋಣೆ ಮಗಳಿಗೆ ಬೇಕು. ನಾಲ್ಕು ಕುರ್ಚಿ ಇಟ್ಟೊಡನೆ ಇಕ್ಕಟ್ಟಾಗುವ ಹಾಲ್. ಸಾಲದ್ದಕ್ಕೆ ಮನೆ ಮಾಲಿಕರು ಮನೆ ಮಾರಾಟ ಮಾಡುತ್ತೇವೆ. ಆದಷ್ಟು ಬೇಗ ಖಾಲಿ ಮಾಡಿ ಎಂದು ರಗಳೆ ಸುರು ಮಾಡಿದ್ದಲ್ಲದೆ, ಹೊತ್ತು ಗೊತ್ತಿಲ್ಲದೆ ಮನೆ ಕೊಳ್ಳುವವರು ನೋಡಲು ಬಂದಿದಾರೆಂದು ಬೆಲ್ ಮಾಡುವುದು, ಹಾಗೆ ಬಂದವರು ಕೆಲವೊಮ್ಮೆ ಬೆಡ್ ರೂಮಲ್ಲಿ ವಾರ್ಡ್ರೋಬ್ ನೋಡುವವರೆಗೂ ಮುಂದುವರಿಯುವುದನ್ನು ಸಹಿಸುವುದೇ ಕಷ್ಟವಾಗುತ್ತಿತ್ತು. ಕಳೆದ ವಾರವಂತು ಮಗಳು ರಣ ಚಂಡಿಯಂತಾಡಿದ್ದಳು. ಬಂದವರೆದುರೇ ಇನ್ನು ಎರಡು ವಾರದಲ್ಲಿ ಮನೆ ಖಾಲಿ ಮಾಡ್ತೇವೆ. ಅಲ್ಲಿ ತನಕ ನಿಮ್ಮ ಗಿರಾಕಿಗಳನ್ನು ಹೊತ್ತಲ್ಲದ ಹೊತ್ತಲ್ಲಿ ಕರ್ಕೊಂಡು ಬಂದು ಬೆಲ್ ಮಾಡಿದ್ರೆ ಬಾಗಿಲು ತೆಗೆಯೋದಿಲ್ಲ ಅಂದುಬಿಟ್ಟಿದ್ದಳು. ಅವರು ಹೊರಗೆ ಕಾಲಿಡುತ್ತಿದ್ದಂತೆ ದಡಾರನೆ ಬಾಗಿಲು ಹಾಕಿ ಫಕ್ ದೀಸ್ ಬುಲ್ಲೀಸ್ ಎಂದು ವಾಕರಿಸಿ ಸಿಂಕಿಗೆ ತುಪ್ಪಿದಾಗ ಮಾಲಿನಿ ಅವಳ ಆಕ್ರೋಶಕ್ಕೆ ಬೆಚ್ಚಿದ್ದಳು.
..ಆವತ್ತು ಅವಳು ಮನೆಯಲ್ಲೆ ಇದ್ದಳು. ಕೋಣೆ ಬಾಗಿಲು ಅರೆ ತೆರೆದಿಟ್ಟು ಬಚ್ಚಲಿಗೆ ಹೋಗಿದ್ದಳು. ಅದೇ ಹೊತ್ತಿಗೆ ಓನರ್ ಪಟಾಲಂ ಬಂದಿತ್ತು. ಮಗಳ ಕೋಣೆ ಬಾಗಿಲು ತೆರದಿದ್ದನ್ನು ಗಮನಿಸದೆ, ಮಾಲಿನಿ ಮನೆ ಬಾಗಿಲು ತೆರದಿದ್ದಳು. ಬಂದವರು ಹಾಲ್ ನೋಡುತ್ತಿರುವಾಗ, ಒಲೆ ಮೇಲೆ ಹುರಿಯಲಿಟ್ಟಿದ್ದ ಮಸಾಲೆ ಸೀದು ಹೋದೀತೆಂದು ಅತ್ತ ಓಡಿದ್ದಳು. ಅದೇ ಹೊತ್ತಿಗೆ ಈ ಮಹಾಶಯರು ಅರೆ ತೆರೆದಿದ್ದ ಬಾಗಿಲು ತಳ್ಳಿಕೊಂಡು ಒಳ ಹೋಗಿಬಿಟ್ಟಿದ್ದಾರೆ. ಮಂಚದ ಮೇಲೆ ಶಾಲಿನಿ ಸ್ಯಾನಿಟರ್ ಪ್ಯಾಡ್ ಸಹಿತ ತಾನು ಸ್ನಾನ ಮಾಡಿ ಬಂದು ತೊಡಲಿರುವ ಬಟ್ಟೆಗಳನ್ನಿಟ್ಟಿದ್ದಳು. ಮಗಳಿಗೆ ಸೂಚನೆ ಕೊಡದೆ ಅವರನ್ನು ಹಾಗೆ ಒಳಗೆ ಬಿಟ್ಟುಕೊಂಡಿದ್ದರಲ್ಲಿ ತನ್ನದು ತಪ್ಪಿದೆ ಅನಿಸಿತ್ತು ಮಾಲಿನಿಗೆ.
ಕಳೆದ ವಾರ ನೋಡಿದ ಎರಡ್ಮೂರು ಮನೆಗಳ ಓನರುಗಳೂ ನೀವು ವೆಜ್ಜಾ? ನಾನ್ವೆಜ್ಜಾ? ನಾನ್ವೆಜ್ಜೋರಿಗೆ ನಾವು ಮನೆ ಕೊಡುವುದಿಲ್ಲ ಎಂದಾಗ ಇವರ ಬಳಿ ನಮ್ಮ ಪರ್ಸನಲ್ ಸಂಗತಿ ಅಡವಿಟ್ಟು ಮನೆ ಬೇಡ ಎಂದು ಚಿವುಟಿ ಹೊರಡಿಸಿದ್ದಳು. ಒಂದು ಮಾತೇನಾದರು ಹೇಳಿದರೆ ಅವಳ ‘ಫಕ್ ದೀಸ್..’ ಕೇಳಬೇಕಾದೀತೆಂಬ ಭಯದಿಂದ ಬೇಗ ಹೊರಟಿದ್ದಳು.
“ನೀನು ಹೀಗೆ ನ್ಯಾಯ-ಅನ್ಯಾಯ ಅಂತ ತತ್ವ ಮಾತಾಡಿಯೇ ನಿನ್ನ ಮಗಳನ್ನು ಹಾಳು ಮಾಡ್ತಿ.” ಎಂದು ಕಳೆದ ಬಾರಿ ಬಂದಾಗ ಅತ್ತೆ ಹೇಳಿದ್ದು ಇತ್ತೀಚೆಗೆ ಪದೇ ಪದೇ ನೆನಪಾಗುವಂತೆ ಮಾಡುತ್ತಿದ್ದಳು ಮಗಳು. ಈಗೀಗ ತಾಯಿ-ಮಗಳ ನಡುವೆ ಮಾತಿನ ಚಕಮಕಿ ಜಾಸ್ತಿಯಾಗುತ್ತಿತ್ತು. ಇಂತಾ ಸಂದಿಗ್ಧ ಸಮಯದಲ್ಲಿ ತಮ್ಮ ಈ ನಿರ್ಧಾರ ಕುದಿ ನೀರಿನ ಬಾಂಡಲಿಯನ್ನು ಮೈ ಮೇಲೆ ಎಳೆದುಕೊಂಡಂತೆಯೇ ಎಂಬುದು ಇಬ್ಬರಿಗೂ ಗೊತ್ತಿರುವುದೇ. ಮನೆ ಬದಲಿಸಿದರೂ ದೊಡ್ಡ ಮನೆಯನ್ನು ನೋಡುವ ಪರಿಸ್ಥಿತಿಯಂತೂ ಅವರದಲ್ಲ.
**
ರಾಜಪ್ಪ ಆಫೀಸಿಗೆ ಹೋದ ಮೇಲೆ ತನ್ನದೇ ಹಳವಂಡಗಳಲ್ಲಿ ಕಳೆದು ಹೋಗಿ ಯಾಂತ್ರಿಕವಾಗಿ ಒಂದೊಂದೇ ಕೆಲಸ ಮಾಡಿಕೊಳ್ಳುತ್ತಿದ್ದವಳಿಗೆ, ಸಂಜೆ ತರಕಾರಿ ಹೆಚ್ಚಲೆಂದು ಬುಟ್ಟಿ ನೋಡಿದಾಗಲೆ ತರಕಾರಿ ಮುಗಿದಿದೆಯೆಂದರಿವಾಗಿದ್ದು. ಎಂಟುಗಂಟೆಗೆ ಮಗಳು ಶಾಲಿನಿ ಬರುತ್ತಾಳೆ. ಒಂಭತ್ತಕ್ಕೆ ರಾಜಪ್ಪ ಬರುತ್ತಾನೆ. ಶಾಲಿನಿ ಬರುವಾಗಲೇ ಹಸಿವು ಎನ್ನುತ್ತಲೇ ಬರುತ್ತಾಳೆ. ಅವಳು ಬರುವ ಮೊದಲು ಅಡುಗೆ ಆಗಬೇಕು. ದಿನವೂ ಬರುತ್ತಿದ್ದ ಗಾಡಿಯವ ಈಗ ವಾರಕ್ಕೆ ಎರಡು ಬಾರಿ ಮಾತ್ರ ಬರುವುದರಿಂದ ಅಂಗಡಿಗೇ ಹೋಗಬೇಕು. ಮುಸ್ಸಂಜೆ ಆಗಲೇ ದಾಟುತ್ತಿತ್ತು. ಇನ್ನೇನು ಕ್ಷಣದಲ್ಲಿ ಕಾವಳ ಬೆಳಕನ್ನು ಪರ್ತಿಯಾಗಿ ಕಬಳಿಸಿಬಿಡುತ್ತದೆ. ನಗರದ ಹೊರ ಭಾಗವಾದ್ದರಿಂದ ಆ ಬೀದಿಯಲ್ಲಿ ಬೀದಿ ದೀಪಗಳ ಉತ್ಸವವೂ ಇಲ್ಲ. ದೂರ ದೂರ ಅಲ್ಲೊಂದು ಇಲ್ಲೊಂದು ದೀಪದ ಕಂಬ. ಮುಸ್ಸಂಜೆ ಅಂದರೆ ಒಂದು ನಮೂನೆ ಆತಂಕ ಅವಳಿಗೆ. ಮುಖ ಗವುಸು ಹಾಕಿಕೊಂಡು ಮನೆಗೆ ಬೀಗ ಜಡಿದು ತರಾತುರಿಯಲ್ಲಿ ಓಡಿದಳು. ಸಿಕ್ಕಿದ ಕೆಲವು ತರಕಾರಿ ಆಯ್ದುಕೊಂಡು ಹಿಂದಿರುಗಿದವಳು ಅದೇ ಅವಸರದಲ್ಲೆ ಬೀಗ ತೆರೆದು ಒಳ ಬಂದಳು. ಈಗೀಗ ಹೊರ ಹೋದರೆ, ಮನೆಯೊಳಗೆ ಸೇರಿಕೊಳ್ಳುವವರೆಗೂ ಏನೊ ಅಟ್ಟಿಸಿಕೊಂಡುಬರುತ್ತಿದೆಯೆಂಬ ಭ್ರಮೆ. ತರಕಾರಿ ಚೀಲ ಅಡುಗೆ ಮನೆಯಲ್ಲಿಟ್ಟು, ಮಾಸ್ಕ್ ತೆಗೆದು, ಸ್ಯಾನಿಟೈಸರ್ ಹಾಕಿಕೊಂಡು, ಕೈಕಾಲು ತೊಳೆದು ಬಂದು ತರಕಾರಿಗಳನ್ನೆಲ್ಲ ತೊಳೆಯಲೆಂದು ಉಪ್ಪು ನೀರಿಗೆ ಹಾಕಿ ಜಾಲಾಡುತ್ತಿದ್ದಾಗ, ಅಸಹ್ಯ ಘಾಟು ಮೂಗಿಗಡರಿತು. ಬಾಗಿಲು ಹಾಕಲು ಮರೆತುಬಿಟ್ಟಿರಬೇಕು. ಒಂದು ಘಳಿಗೆ ಬಾಗಿಲು ತೆಗೆದಿಟ್ಟರೆ ಎಲ್ಲೆಲ್ಲಿಂದಲೊ ಎಂತೆಂತದೊ ವಾಸನೆ ನುಗ್ಗಿ ಬರ್ತದೆ. ತತ್, ಮೂತ್ರದ ಘಟಾರ ತೆರೆದುಕೊಂಡಂತ ಘಾಟು ಎಂದು ಗೊಣಗುತ್ತ ಪಡಸಾಲೆಗೆ ಬಂದವಳು, ಅಲ್ಲಿ ನೆಲ ಹಾಸಿನ ಮೇಲೆ ಕಾಲು ನೀಡಿ ಕುಳಿತ ವ್ಯಕ್ತಿಯನ್ನು ನೋಡಿ ಅವಾಕ್ಕಾದಳು. ಇವರು ಇಲ್ಲಿವರೆಗೆ ಹೇಗೆ ಬಂದರು..? ಅದ್ಯಾವ ಮಾಯಕದಲ್ಲಿ ಒಳ ಬಂದರು..? ಹಾಗಾದರೆ, ನಾನು ಬಾಗಿಲು ಹಾಕಿಕೊಳ್ಳಲು ಮರೆತಿದ್ದು ಹೌದು. ಆದರೆ, ಇವರು....! ಏನೊಂದು ಅರ್ಥವಾಗದೆ ಕಕ್ಕಾಬಿಕ್ಕಿಯಾದಳು. ಮರುಕ್ಷಣದಲ್ಲೆ,
ರಾಜಪ್ಪ ಹೊರಟ ಮೇಲೆ ಮನೆಯಲ್ಲಿ ಏನೊ ಜಗಳ ನಡೆದಿರಬೇಕು. ಅದಕ್ಕೆ ಶಾಣ್ಯಪ್ಪನೇ ಕರೆ ತಂದಿದಾನೆ.., ಹೌದು. ಇದು ಹಾಗೆಯೇ ಆಗಿದೆ. ಆದರೆ, ಅವನೆಲ್ಲಿಗೆ ಹೋದ..ಅತ್ತಿತ್ತ ನೋಡಿದಳು. ಬಾಗಿಲು ತೆರೆದೇ ಇದ್ದಿದ್ದರಿಂದ ತಾಯಿಯನ್ನು ಒಳ ಕಳಿಸಿ, ಲಗೇಜ್ ಈಚೆ ತರಲು ಹೋಗಿರಬಹುದು. ಮಾಲಿನಿಯ ತಲೆಯೊಳಗೆ ರೇಗಳ ಸಾಮ್ರಾಜ್ಯ ವಿಸ್ತರಿಸುತ್ತಿದ್ದಾಗಲೇ ಅಡುಗೆ ಮನೆಯತ್ತ ಬೆನ್ನು ಹಾಕಿ ಕುಳಿತಿದ್ದ ಕುಂತ್ಯಮ್ಮ ಹಿಂತಿರುಗಿ ನೋಡಿದ್ದಳು. ಮಾಲಿನಿಯ ಮುಖ ಕಂಡಿದ್ದೇ ಕುಂತ್ಯಮ್ಮ,
“ನೀವು ಕರ್ಕೊಂಡು ಹೋಗ್ಲಿಕ್ಕೆ ಅಂತ ಬರುವ ಅಂದಾಜು ಮಾಡಿದ್ರಲ್ಲ. ನಾನೇ ಬಂದುಬಿಟ್ಟೆ.”
ಮಾಲಿನಿಯ ಕಣ್ಣು ಕುಂತ್ಯಮ್ಮಳ ಮುಂದೆ ಅವಳಿಗಿಂತಲೂ ಎತ್ತರವಾಗಿದ್ದ ಗಂಟುಮೂಟೆ ಮೇಲೆ ಪ್ರಶ್ನಾರ್ಥಕವಾಗಿ ನೆಟ್ಟಿತು. ಕುಂತ್ಯಮ್ಮ ಅದನ್ನು ಗಮನಿಸಿ,
“ಓ..ಅದು ನನ್ನ ಮಾರಾಪು” ಅಂದಳು. ಅರ್ಥವಾಗದೆ ಮಾಲಿನಿ ಅತ್ತೆಯ ಮುಖ ನೋಡುತ್ತ,
“ಇಷ್ಟು ದೊಡ್ಡ ಮಾರಾಪು ನೀವೇ ಹೊತ್ತುಕೊಂಡು ಬಂದ್ರಾ? ಶಾಣ್ಯಪ್ಪ ಎಲ್ಲಿದ್ದಾನೆ? ತಡೆಯಲಾರದೆ ಕೇಳಿದಳು.
“ಎಲ್ಲಾ ಗೊತ್ತಿದ್ದು ಕೇಳ್ತೀಯಲ್ಲ. ನಮ್ಮ ನಮ್ಮ ಮಾರಾಪು ನಾವೇ ಹೊತ್ತುಕೊಂಡು ಹೋಗಬೇಕು ಅಲ್ವ. ಮುಂದೆ ಇದಕ್ಕಿಂತ ದೊಡ್ಡ ಮಾರಾಪು ಹೊರುವುದಿದೆ. ಹುಟ್ಟುವಾಗ ಇದೆಲ್ಲ ಇಲ್ಲ ನೋಡು. ನಾವು ದೊಡ್ಡವರಾದಂತೆ ನಮ್ಮ ಮಾರಾಪು ದೊಡ್ಡದಾಗುತ್ತದೆ.” ಎಲ್ಲಿಂದೆಲ್ಲಿಗೋ ಮಾತು ಹೋಗುತ್ತಿದೆ ಅನಿಸಿತು ಮಾಲಿನಿಗೆ. ವಾಸನೆ ತೀಕ್ಷ್ಣವಾಗುತ್ತಿದ್ದುದರಿಂದ, ಮುಖ- ಮೂಗು ಸಿಂಡರಿಸುತ್ತ,
“ಎಂತದೊ ನರ್ತಾ ಇದೆ. ಬಾಲ್ಕನಿ ಕಿಟಕಿ ಹಾಕ್ತೇನೆ ಅನ್ನುತ್ತ ಅತ್ತ ಹೊರಟಳು.
“ಅದು ಹೊರಗಿಂದ ಅಲ್ಲ. ನಿಂಗೆ ಗೊತ್ತುಂಟಲ್ಲ. ಈಗ ಉಚ್ಚೆ ಕಟ್ಟುವುದೇ ಇಲ್ಲ. ನನ್ನಷ್ಟೆ ಎತ್ರಕೆ ಬಟ್ಟೆಗಳ ರಾಶಿ ಆಗ್ತಿದೆ. ಹೊರಡ್ಲಿಕ್ಕೆ ಅರ್ಜೆಂಟಾಯ್ತು. ತೊಳೆದು ಮುಗಿಸ್ಲಿಕ್ಕೆ ಪುರುಸೊತ್ತಿರಲಿಲ್ಲ. ಅದಕ್ಕೆ ಈ ಮಾರಾಪು ಕಟ್ಟಿಕೊಂಡು ಬಂದೆ.”
ಅಷ್ಟರಲ್ಲಿ ಮಾಲಿನಿಯ ಮೊಬೈಲ್ ರಿಂಗಾಯ್ತು. ಅದು ಅಡುಗೆ ಕಟ್ಟೆಯ ಮೂಲೆ ಸ್ಟಾಂಡಲ್ಲಿತ್ತು. ಒಳ ಹೋಗಿ ರಿಸೀವ್ ಮಾಡಿದಳು. ಅತ್ತಲಿಂದ ರಾಜಪ್ಪನ ನಡುಗುವ ಸ್ವರ.
“ಅಮ್ಮ ಹೋಗಿ ಬಿಟ್ಟಳಂತೆ. ಬಟ್ಟೆ ತೊಳಿತಾ ಅಲ್ಲೇ ಕುಸಿದಿದ್ದಳಂತೆ. ಈಗ ಊರಿಂದ ಶಾಣಪ್ಪನ ಫೋನ್ ಬಂತು.”
“ಎಂತ ಮಾತಾಡ್ತಿದ್ದಿ ನೀನು! ಅತ್ತೆ ಇಲ್ಲೇ ಇದ್ದಾರೆ.” ಅನ್ನುತ್ತ ಹೊರಗೆ ಬಂದಳು ಮಾಲಿನಿ. ಕುಂತೆಮ್ಮ ಕಾಣಿಸಲಿಲ್ಲ. ಅವರ ಮಾರಾಪು ಇರಲಿಲ್ಲ. ಬಹುಶಃ ಬಚ್ಚಲಿಗೆ ಹೋಗಿರಬೇಕೆಂದು ಅತ್ತ ನಡೆದಳು. ಅಲ್ಲೂ ಇಲ್ಲ. ವಾಸನೆ ಮನೆಯೊಳಗೆ ದಟ್ಟವಾಗಿ ಹಬ್ಬುತ್ತಿತ್ತು..
ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ.
ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ಅವರ ಮಗ ತೇಜಸ್ವಿ ವ್ಯಾಸರ ನುಡಿಗಳ ಕಥನ ನಿರೂಪಣೆ, ಜೊತೆಗೆ ಕೆನ್ನೀರು ಎಂಬ ಹೆಸರಿನ ರೇಡಿಯೋ ನಾಟಕ ಮತ್ತು ಮನಸ್ಸು ಮಾಯೆಯ ಹಿಂದೆ ಎಂಬ ನಾಟಕಗಳನ್ನು ರಚಿಸಿದ್ದಾರೆ. ಇವರ ‘ಕರವೀರದ ಗಿಡ’ ಕಥಾಸಂಕಲನದ ಹಸ್ತಪ್ರತಿಗೆ 2009ನೇ ಸಾಲಿನ (ರಂಗಕರ್ಮಿ ಸದಾನಂದ ಸುವರ್ಣ) ಮುಂಬೆಳಕು ಸಾಹಿತ್ಯ ಪ್ರಶಸ್ತಿ, 2011 ರಲ್ಲಿ ಬೇಂದ್ರೆ ಪುಸ್ತಕ ಬಹುಮಾನ, ಹಾಗೂ ಇದೇ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ. ದೂರತೀರ ಕಥಾಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ತ್ರಿವೇಣಿ ಕಥಾ ಪ್ರಶಸ್ತಿ ನೀಡಿ ಗೌರವಿಸಿದೆ, ಜೊತೆಗೆ ಇದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ,"ವಸುದೇವ ಭೂಪಾಲಂ" ದತ್ತಿ ಕಥಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಅನುಪಮಾ ಅವರ ಬರಹಗಳು ದಮನಿಸಲ್ಪಟ್ಟ ಮನಸುಗಳ ಆಕ್ರಂದನಕ್ಕೆ, ಶೋಷಿತರ ಒಳ ಬಂಡಾಯಕ್ಕೆ ದನಿಯಾಗಿವೆ.
More About Author