Poem

ಕೆಂಪು ಹೂವಿನ ಮರದ ಕೆಳಗೆ 

ಕೆಂಪು ಹೂವಿನ ಮರದ ಕೆಳಗೆ 

ಉದುರಿದ ಕೆಂಪು ಹೂವಿನ ಪಕಳೆಗಳ ಮೇಲೆ 

ಬುರ್ರಂತ ಬುಲ್ಲೆಟ್ ಬೈಕ್‌ನಲ್ಲಿ ಓಡಾಡುವಾಗಲೆಲ್ಲಾ 

ನೆನಪೊಂದು ಎದುರಿಗೆ ಪುಟಿಪುಟಿದು ಬರುತ್ತಿದೆ.. 

ಇಲ್ಲೇ.. ಇದೇ ಮರದ ಕೆಳಗೆ ನನ್ನಪ್ಪ ಚಪ್ಪಲಿ ಹೊಲೆಯುತ್ತಿದ್ದ 

ಅವರ ಮಧುರ ಪಾದಗಳಿಗೆ ಯಾವುದೇ ಹಾನಿಯಾಗದಿರಲೆಂದು ಹದ ಮಾಡಿದ 

ಚರ್ಮದ ಚಪ್ಪಲಿಗಳನ್ನು ಹೊಲೆದು ಬದುಕಿನ ಬವಣೆ ಬದಿಗಿರಿಸುತಿದ್ದ..! 

ಜೊತೆ ಜತೆಗೇ ಹಾದಿಬದಿ ಹರಿದು ಹೋದ ಮನಸುಗಳ್ನೂ ಸರಿಪಡಿಸುತ್ತಿದ್ದ 

ಹಸಿದ ಕನಸಿನ ಕುಡಿಗಳಿಗೆ ಶ್ರಮದ ನದಿಯ ನೀರು ಕುಡಿಸುತ್ತಿದ್ದ 

ತಾಯಿಯ ತಟ್ಟೆಯಲಿ ಮಮತೆಯ ಮೊಟ್ಟೆಯನಿಡುತ್ತಿದ್ದ 

ಅವಳ ಸೆರಗಿನ ಸಿಹಿ ಮಾತಿಗೆ ಗುಲ್‌ಮೊಹರ್ ಅರಳಿಸುತ್ತಾ 

ಹಾಡಹಗಲಲ್ಲೂ ಇರುಳಲ್ಲಿ ಮಿನುಗುವ ಚುಕ್ಕಿಗಳ ಹಾಡಾಗುತ್ತಿದ್ದ..! /೧/. 

 
 

ಈ ಕೆಂಪು ಹೂವಿನ ಈ ಮರದ ಕೆಳಗೆ.. 

ಬೆದರಿದ ಚಿಗುರೆಲೆಗಳ ನೆರಳಮೇಲೆ 

ನನ್ನವಳ ಕೇಶರಾಶಿ ಹಾರಾಡಿದಾಗಲೆಲ್ಲಾ 

ನನ್ನಪ್ಪನ ಬ್ಯೂಟಿಫುಲ್ ರೂಪಕವೊಂದು ರೌದ್ರಾವತಾರವಾಗುತ್ತದೆ 

ಇಲ್ಲೇ.. ಇದೇ ಕಾಂಡದ ಕೆಳಗೆ ಆತ ಚಕ್ಕಂಬಕ್ಕಳ ಹಾಕಿದ ಋಷಿಯಂತಿರುತ್ತದ್ದ 

ಆತನ ಕೆಣಕಿದ ಬಾಟ, ಪೂಮಾ, ಅಡಿಡಾಸ್, ನೈಕ್,ಕ್ರಾಕ್ಸ್ ಚಪ್ಪಲಿಗಳೆಲ್ಲಾ 

ನನ್ನ ಕೂದಲಿಗೆ ಸಮ ಅಂತ ರಂಗೇರಿದ ರಾತ್ರಿಯಲಿ ಬಯಲಾಟವಾಗುತ್ತಿದ್ದ..! 

ಬೀಸಿ ಬರುವ ಬೆಂಗಳೂರ ತಂಗಾಳಿಗೆ 

ತೂಗ್ಯಾಡುವ ಮಹಲಿನ ಬೆಳಿಕಿಗೆ ಬೆವೆತು 

ಅವರ ಕೊಳೆತ ಕಾಲುವೆಗಳಿಗೆ ಇಳಿದು ಪಾಚಿಗಟ್ಟಿದ ಪ್ಲಾಸ್ಟಿಕ್, 

ಅಡ್ಡಗಟ್ಟಿದ್ದ ಕಾಂಡೋಮ್, ಬಾಟ್ಲಿಗಳನ್ನು ಬಾಚಿ ತೆಗೆದು 

ಶುಚಿಗೊಳಿಸಿದ ಅಣ್ತಮ್ಮಂದಿರ ಕೈಗಳನ್ನು ಕಂಡು ಕಾರ್ಮುಗಿಲಾಗಿ ಬಿಡುತ್ತಿದ್ದ..! /೨/ 

 
 

ಈ ಕೆಂಪು ಹೂವಿನ ಮರದ ಕೆಳಗೆ.. 

ಉದುರಿದ ಹಣ್ಣೆಲೆಗಳ ಮೇಲೆ ಹರಿದ 

ನನ್ಮಕ್ಕಳ ಕಾಂಟೆಸ್ಸಾ ಕಾರಿನ ಕಿಟಕಿ ತೆಗೆದಾಗಲೆಲ್ಲಾ 

ಅಪ್ಪನ ಅದಮ್ಯ ಬದುಕಿನ ಅದ್ಭುತ ಅನುಭೂತಿ ಮೂಡುತ್ತದೆ 

ಕೆರೆಮಣ್ಣಿನಡಿ ಆಡಿದ ಕೈಗಳಿಗೆ ಮರದ ಬುಡ, ತಾರು,ಸಿಮೆಂಟಿನ ಸಹವಾಸ. 

ನವಿಲೂರು, ಬಸವನ ಹುಳುವಿನ ಬದು, ಮೊಟಕುಮೀನಿನ ಸಾರು ಇಂದು ಬರೀ ಕನಸು 

ಬೆಳೆದ ಜೋಳದ ಬೆಳೆಯೆತ್ತರ ಬೆಳೆದ ಬಡ್ಡಿಗೆ ಎಲ್ಲವೂ ಬಿಟ್ಟು ಬೆಂಗಳೂರಿಗೆ ಬಂದ ನೆಲೆಗೆ ಅದೆಷ್ಟೋ ವರ್ಷ,

ಬಗುರಿಯ ಬಯಕೆ, ಬೆಂಬಿಡದ ಬದುಕುವಾಸೆಗೆ ಸಾವಿಗೇ ಸಡ್ಡು..! 

ಬಾನಿನೆತ್ತರದ ಅಪಾರ್ಟ್‌ಮೆಂಟಿನ ಕೊಳೆ, ಕಸ ಮುಸರೆತ್ತುವ ತಾಯಿಯ ವಾತ್ಸಲ್ಯ 

ತಂಗಳು ತಿನ್ನಲಾರದ ಮಕ್ಕಳ ಮುಸುಡಿ ಕಂಡ ನನ್ನಪ್ಪನ ಮೀಸೆಯ ತುಂಬ ರೋಷದ ವೇಷ 

ಮಧುರ ಮಯಿ ತಾಯಿಯ ಶಾಂತ ನಗುವಿನ ನದಿಯಲೆಯಲಿ ತೇಲಿ ಹೋಗುವ ಆವೇಶ..!/೩/ 

 
 

ಈ ಕೆಂಪು ಹೂವಿನ ಮರದ ಕೆಳಗೆ.. 

ಬಿರು ಮಳೆಗಾಳಿಗೆ ಹರಡಿದ ಕೊಂಬೆಗಳ ಮೇಲೆ 

ಕಾಲಿಟ್ಟಾಗಲೆಲ್ಲಾ ಕದಡುವ ಮನಸು, ಕಣ್ಮಂಜಾದರೂ 

ನನ್ನಪ್ಪನ ಅವಿರತ ಅವಧೂತಾಸೆ ಧುತ್ತನೆ ಪ್ರತ್ಯಕ್ಷವಾಗುತ್ತದೆ 

ಕಲಿಯದ ಮಕ್ಕಳು, ಕಣ್ತುಂಬಿ ಕುಳಿತ ಮಡದಿ ಕೈ ಬಿಡದ ಚಪ್ಪಲಿ 

ಹೊಲೆಯುವಾಗಲೆಲ್ಲಾ ಕಣ್ತಪ್ಪಿನಿಂದ ಕೈ ಕುಯ್ಯುವ ಕಲೆಯಿಂದ ನೆತ್ತರ ಚಿತ್ತಾರ 

ಕಸದ ರಾಶಿಯ ನಡುವೆ ಕಣ್ಬಿಡುತ್ತಿದ್ದ ಗುಡಿಸಿಲೊಳಗಿನ ಬಿಸಿಲ್ಗೋಲುಗಳ ಜೊತೆ 

ಗಿಣ್ಣಿದಾಂಡುವಾಡುತ್ತಿದ್ದ ಅಣ್ತಮ್ಮಂದಿರಿಗೆಲ್ಲಾ ಪ್ಲೇಗೋ, ನ್ಯೂಮೋನಿಯವೋ,ಟೈಫಾಯಿಡ್ಡೋ..! 

ಸುತ್ತದ ಸರ್ಕಾರಿ ಆಸ್ಪತ್ರಗಳಿಲ್ಲ, ನಿಂದನೆ, ಅಪಮಾನದ ಜೊತೆ ಬೈಸಿಕೊಳ್ಳದ ಬೈಗಳಿಲ್ಲ 

ದಣಿವರಿಯದ ತಾಯಿಗೆ ರಾತ್ರಿಗಳೆಲ್ಲ ಬಿಟ್ಟುಕೊಡದ ಚಟ್ಟಕಟ್ಟಿದವು ಬೈಗು ಕಾಣದ ತಂದೆಯ 

ಬಯಕೆಗಳೆಲ್ಲಾ ಬೂದಿ ಪಾಲಾದವು, ಬದುಕುಳಿದ ನನ್ನ ಬದುಕಿಗೆ ಕಾಣದ ಕೈಗಳೆಲ್ಲಾ 

ಇದೇ ಮರದ ಕೆಳಗಿನ ನೆರಳ ನೇಗಿಲಾಗಿ, ಫಲ ಮುಗಿಲೆತ್ತರಕೆ ಬೆಳೆಸಿ ಬಯಲಾದವು..!/೪/  
 

 

ಎಂ. ಮಹ್ಮದ್ ಬಾಷ ಗೂಳ್ಯಂ

ಆಂಧ್ರಪ್ರದೇಶದ  ಗಡಿಗ್ರಾಮ ಗೂಳ್ಯಂನಲ್ಲಿ  ಜನಿಸಿದ ಮಹ್ಮದ್ ಬಾಷ ಗೂಳ್ಯಂ ಅವರು ಕನ್ನಡ ಮಾಧ್ಯಮ ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲೂ, 1994 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ 1994ರಲ್ಲಿ ಸ್ನಾತಕೋತ್ತರ ಪದವಿ;  ಇದೇ ವಿಶ್ವವಿದ್ಯಾಲಯದಿಂದ 1996 ರಲ್ಲಿ ಎಂಫಿಲ್( ವಿಯಷ: ಪುರಂದರ ದಾಸರು ಮತ್ತು ತ್ಯಾಗರಾಜರ ಕೀರ್ತನೆಗಳ ತೌಲನಿಕ ಅಧ್ಯಯನ) ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ 2009ರಲ್ಲಿ ಪಿಎಚ್.ಡಿ (ವಿಷಯ: ಇಮ್ಮಡಿ ನಾಗವರ್ಮನ ಶಾಸ್ತ್ರ ಸಾಹಿತ್ಯ- ಒಂದು ಅಧ್ಯಯನ) ಪದವಿ ಪಡೆದಿದ್ದಾರೆ. ಸೈನಿಕ, ಗೀಯ ಗೀಯ, ಹಂತಕಿ, ಗ್ರಾಮ ದೇವತೆ ಸೇರಿದಂತೆ ಹಲವು ಚಿತ್ರಗಳಿಗೆ ಗೀತರಚನೆ. ಕಾಮನ ಬಿಲ್ಲು, ಮಡಿಲು, ಸಾಧನಾ, ಅರುಣ ರಾಗ, ನಾ ನಿನ್ನ ಬಿಡಲಾರೆ ಸೇರಿದಂತೆ  ಅನೇಕ ಮೆಗಾ ಧಾರಾವಾಹಿಗಳಿಗೆ ಶೀರ್ಷೀಕೆ ಗೀತೆ ರಚನೆ. ಇವು ಈ ಟಿವಿ, ಝೀ ಕನ್ನಡ, ದೂರದರ್ಶನ ಚಂದನದಲ್ಲಿ ಪ್ರಸಾರಗೊಂಡಿವೆ. ಸ್ನಾತಕೋತ್ತರ ವ್ಯಾಸಂಗದ ಅವಧಿಯಲ್ಲೇ ಮದ್ರಾಸಿನ ಚೆಂದ ಮಾಮ ಮಾಸಿಕದಲ್ಲಿ ಮೂರು ವರ್ಷ ಉಪ ಸಂಪಾದಕನಾಗಿ ಕೆಲಸ ಮಾಡಿದ ಅನುಭವ. ಹಲವು ವರ್ಷ ಬೆಂಗಳೂರಿನ ಪ್ರತಿಷ್ಠಿತ ಸಿನಿಮಾ ಮಾಸಿಕ ಅರಗಿಣಿಯಲ್ಲೂ, ಪ್ರಿಯಾಂಕ, ಸೂರ್ಯ ಮತ್ತಿತರ ಮಾಸಿಕಗಳಲ್ಲೂ ಕಾರ್ಯ ನಿರ್ವಹಣೆ. ಮಯೂರ, ಉದಯವಾಣಿ, ಸಂಜೆವಾಣಿ, ವಿಜಯ ಕರ್ನಾಟಕ ಸೇರಿ ಹಲವಾರು ವಿಶೇಷಾಂಕಗಳಲ್ಲಿ ಕತೆ, ಕವನ ಹಾಗೂ ಲೇಖನಗಳ ಪ್ರಕಟ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 15 ವರ್ಷಗಳಿಂದ ವೃತ್ತಿ ಜೀವನ,  ಪ್ರಸ್ತುತ ಚೀಫ್ ಕಾಪಿ ಎಡಿಟರ್ ಆಗಿ ಸೇವೆ.

ಅವರ ಪ್ರಕಟಿತ ಕೃತಿಗಳು- ಶಾಸ್ತ್ರ ಕಾರ ಇಮ್ಮಡಿ ನಾಗವರ್ಮ,  ಮಾಲೆ ಗಟ್ಟುವರ ಬೆವರು -ಕವನ ಸಂಕಲ, ಕನ್ನಡ ವ್ಯಾಕರಣ ಕುರಿತ ಕೃತಿ -ಶಾಸ್ತ್ರ ಸಾಹಿತ್ಯ, ವಾಗ್ಗೇಯಕಾರರ ವಾಙ್ಮಯ : (ಪುರಂದರ ದಾಸರು ಹಾಗೂ ತ್ಯಾಗರಾಜರ ಕೀರ್ತನೆಗಳ  ಪೂರ್ವಾಪರ-, ಸಂಭವ- ಎರಡನೇ ಕವನ ಸಂಕಲ, ಉತ್ಕ್ರಾಂತಿ- ಮೂರನೇ ಕವನ ಸಂಕಲನ, ಗೋಂದು -ಕಾದಂಬರಿ 

More About Author