ಕತೆಗಾರ್ತಿ ಜ್ಯೋತಿ ಡಿ. ಬೊಮ್ಮಾ ಅವರ ಆಸಕ್ತಿಯ ಕ್ಷೇತ್ರ ಸಾಹಿತ್ಯ. ಕತೆ, ಕವನ ಪ್ರಕಾರದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರ ‘ಮನದ ಮುಂದಣ ಮಾಯೆ’ ಶೀರ್ಷಿಕೆಯ ಕತೆ ನಿಮ್ಮ ಓದಿಗಾಗಿ.
ಬೆಳಿಗ್ಗೆಯಿಂದ ನಿರ್ಮಲ ತಾನು ಅನುಭವಿಸುತ್ತಿರುವ ಮನಸ್ಥಿತಿಯ ಭಾವ ಅದಾವುದೆಂದು ತಿಳಿಯದೇ ಸೋತಿದ್ದಳು. ತಾನು ದುಃಖಿತಳಾಗಿದ್ದೆನೆಯೇ, ನಿರಾಳಳಾಗಿದ್ದೆನೆಯೇ, ಮನಸ್ಸಿನಲ್ಲಿ ಕಳವಳ ತುಂಬಿದೆಯೇ, ಉಹೂಂ, ಬರಿ ನಿರ್ಲಿಪ್ತ ಭಾವ. ನಸುಕಿನ ಜಾವ ಅಣ್ಣ ಕರೆ ಮಾಡಿ ಚಂದ್ರನ ಹೆಂಡತಿ ತೀರಿಕೊಂಡ ವಿಷಯ ಹೇಳಿದಾಗ ಯಾಂತ್ರಿಕವಾಗಿ ಅಯ್ಯೋ ಅಂದಿರಬಹುದು. ಅಂದರೆ ತನಗೆ ದುಃಖವಾಗಿರಬಹುದೆ, ಅನಿಸುತ್ತಿಲ್ಲ. ಖುಷಿಯಾಗಿದೆಯೇ, ಆ ಆಲೋಚನೆ ದಂಗು ಬಡಿಸಿತು. ತನ್ನ ಮನಸ್ಸು ಮತ್ತೊಬ್ಬರ ಸಾವನ್ನು ಸಂಭ್ರಮಿಸುವಷ್ಡು ಕೀಳಲ್ಲ ಅನಿಸಿತು. ತನಗೆ ದುಃಖ ವಾಗಿಲ್ಲವೆಂದರೆ ಸಂತೋಷವಾಗಿದೆ ಎಂದು ಭಾವಿಸಿಕೊಳ್ಳುವದು ಸಲ್ಲದು. ಹಾಗಾದರೆ ವಿನಯಳ ಸಾವು ತನಗೇಕೆ ದುಃಖಿತಳನ್ನಗಿಸಿಲ್ಲ. ಅರೆ, ಭೋರೆಂದು ಅತ್ತರೆ ಮಾತ್ರ ದುಃಖ ವ್ಯಕ್ತಪಡಿಸಿದಂತೆಯೇ, ಒಮ್ಮೊಮ್ಮೆ ಅಘಾತವಾದರೂ ಕಣ್ಣಿರು ಬರುವದಿಲ್ಲ. ಹಾಗಾದರೆ ತನಗೆ ಅಘಾತವಾಗಿದೆಯೇ, ಇಲ್ಲ, ವಿನಯಳ ಅನಾರೋಗ್ಯ ತನಗೆ ತಿಳಿದೆ ಇತ್ತು. ಮೂರುವರ್ಷದಿಂದ ಅವರ ಆಸ್ಪತ್ರೆ ಅಲೆದಾಟ ತನಗೆ ಅಣ್ಣನಿಂದ ತಿಳಿದಿತ್ತು. ಸ್ತನಕ್ಯಾನ್ಸರ್ ನಿಂದ ಬಳಲುತಿದ್ದ ಅವಳು ಹುಷಾರಾಗಬಹುದೆಂದುಕೊಂಡಿದ್ದೆ. ಈಗ ಸ್ತನ ಕ್ಯಾನ್ಸರ್ ಅಷ್ಟೊಂದು ಮಾರಕ ರೋಗವಲ್ಲ. ಸೂಕ್ತ ಚಿಕಿತ್ಸೆ ದೊರಕಿದರೆ ಗುಣಪಡಿಸಬಹುದಾದ ರೋಗ. ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ಅವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವದು ಹೊರೆಯಾಗಲಾರದು. ಗುಣಹೊಂದಬಹುದೆಂಬ ನಂಬಿಕೆ ಹುಸಿಯಾಯಿತು. ಅವನಿಗೆ ಇಬ್ಬರು ಹೆಣ್ಣು ಮಕ್ಕಳು. ಓದು ಮುಗಿಸಿ ಕೆಲಸ ಮಾಡುತ್ತಿರಬಹುದು. ಪಾಪ ತಾಯಿಯನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಮನ ಮರುಗಿತು. ಹೋಗಿ ಮಾತಾಡಿಸಿಕೊಂಡು ಬರಬೇಕೆಂದರೂ ಏನೋ ನಿರಾಸಕ್ತಿ. ಸಾವಿನ ಮನೆಯವರನ್ನು ಮಾತಾಡಿಸಲು ಹೋಗುವದೆಂದರೆ ನಾಟಕೀಯ ಅನಿಸತೊಡಗಿದೆ. ತೋರಿಕೆಯ ಸಾಂತ್ವನದ ಅಗತ್ಯವೇನಿದೆ..! ಸಮಯವೆ ಎಲ್ಲಕ್ಕೂ ಉತ್ತಮ ಮದ್ದು. ತಾನೆ ಅಲ್ಲವೆ ಅದಕ್ಕೊಂದು ಉದಾಹರಣೆ ಎಂದು ತಲೆಕೊಡಹಿ ಎದ್ದಳು.
ನಿಚ್ಚಳವಾಗಿ ಬೆಳಗಾಗಿತ್ತು. ಅದಾಗಲೆ ಕೊಟ್ಟಿಗೆಯ ದನಗಳನ್ನೆಲ್ಲ ಮೇಯಲು ಅಟ್ಟಿಬಿಟ್ಟಿದ ಕೆಲಸದ ನಿಂಗ. ಬೆಳಿಗ್ಗೆ ತನ್ನ ತೋಟದಲ್ಲಿ ಒಂದು ರೌಂಡ್ ವಾಕ್ ಹೋಗುವದು ನಿರ್ಮಲಾಳ ಹವ್ಯಾಸ.
ಹೆಜ್ಜೆ ಮುಂದೆ ಮುಂದೆ ಇಡುತಿದ್ದಂತೆ ಆಲೋಚನೆಗಳು ಹಿಂದಕ್ಕೆ ಚಲಿಸುತಿದ್ದವು. ಈ ಹೊಲ ತೋಟದ ಆಸ್ತಿಗಾಗಿಯೇ ಅಲ್ಲವೆ ಅಪ್ಪ ತನ್ನನ್ನು ಇವರಿಗೆ ಮದುವೆ ಮಾಡಿ ಕೊಟ್ಟದ್ದು. ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ಮಾಡಿದ ತನಗೆ ಸಿಟಿಯಲ್ಲಿ ಇರುವ ಹಂಬಲವಿತ್ತು. ಏನಾದರೂ ಉದ್ಯೋಗ ಮಾಡಿ ಸ್ವಾವಲಂಬಿ ಯಾಗಿ ಬದುಕುವ ಕನಸಿತ್ತು. ಅಣ್ಣನ ಓದಿಗೆ ಅಷ್ಟೊಂದು ಆಸಕ್ತಿ ತೋರುತಿದ್ದ ಅಪ್ಪ ತನ್ನ ಓದಿಗೆ ಆಸಕ್ತಿ ತೋರಲೆ ಇಲ್ಲ. ಹತ್ತನೆ ತರಗತಿ ಮುಗಿಯುತ್ತಲೇ ವರಾನ್ವೇಷಣೆಗೆ ತೊಡಗಿದ ಅಪ್ಪನ ನ್ನ ಒಲಿಸಿ ನನ್ನನ್ನು ಕಾಲೇಜಿಗೆ ಸೇರಿಸಬೇಕಾದರೆ ಅಮ್ಮ ತನ್ನ ಕಲಿತ ಬುದ್ದಿ ಯನ್ನೆಲ್ಲ ಖರ್ಚು ಮಾಡಬೇಕಾಯಿತು. ವರ ನಿಶ್ಚಯವಾಗುವವರೆಗೂ ಓದಲಿ ಎಂದು ಒಪ್ಪಿದ. ಡಿಪ್ಲೊಮಾ ಬೇರೆ ಊರಲ್ಲಿ ಸೀಟು ಸಿಕ್ಕಾಗಲೂ ಮನೆ ಬಿಟ್ಟು ದೂರ ಕಳಿಸಲು ಎಷ್ಟೊಂದು ತಗಾದೆ. ಮದುವೆ ಮಾಡಿಕೊಟ್ಡು ಜವಾಬ್ದಾರಿ ಕಳೆದುಕೊಳ್ಳುವ ಅವನ ಹಂಬಲಕ್ಕೆ ನನ್ನ ಓದುವ ಇಚ್ಚೆ ತೊಡಕಾಗಿತ್ತು. ಮಗಳು ಹೆಚ್ಚು ಓದಿದರೆ ಹೆಚ್ಚು ಓದಿರುವ ವರ ಹುಡುಕಬೇಕಾದಿತೆಂಬ ದಿಗಿಲಿರಬಹುದು. ಹೆಚ್ಚು ಓದಿದ ವರ ಹೆಚ್ಚು ವರದಕ್ಷಿಣಿ ಕೇಳಬಹುದೆಂಬ ಅಳುಕು ಇರಬಹುದು. ಒಟ್ಟಿನಲ್ಲಿ ಅಪ್ಪನ ಉದ್ದೇಶ ತನಗೆ ಬೇಗ ಮದುವೆ ಮಾಡಿ ಜವಾಬ್ದರಿಕಳೆದುಕೊಳ್ಳುವದೆ ಆಗಿತ್ತು.
ಅಮ್ಮ ಅಣ್ಣನ ಪ್ರೋತ್ಸಾಹ ದಿಂದ ಬೀದರ್ ನ ಡಿಪ್ಲೊಮಾ ಕಾಲೇಜಿನಲ್ಲಿ ಭರ್ತಿಯಾದೆ. ಅಡ್ಮೀಷನ್, ಹಾಸ್ಟೆಲ್ ವ್ಯವಸ್ಥೆ ಮಾಡಲು ಅಣ್ಣನಿಗೆ ಅವನ ಗೆಳೆಯ ಚಂದ್ರ ನೆರವಾದ.ಚಂದ್ರ ನಮಗೆ ಅಮ್ಮನ ಕಡೆಯಿಂದ ದೂರದ ಸಂಭಂದಿಕನಂತೆ. ಅಣ್ಣನ್ನೂ ಅವನು ಗುಲ್ಬರ್ಗ ದಲ್ಲಿ ಎಮ್ ಎಸ್ಸಿ ಓದುತಿದ್ದರು. ಅಣ್ಣನಿಗೆ ಬರಲಾಗದಿದ್ದಾಗ ನನಗೆ ಬೇಕಾದ ಅವಶ್ಯಕ ವಸ್ತುಗಳೊಂದಿಗೆ ಅವನೊಬ್ಬನೆ ಬರುತಿದ್ದ. ಅಪ್ಪಾಮ್ಮನಿಗೂ ಈ ವಿಷಯ ತಿಳಿದಿತ್ತು. ಸಂಬಂಧಿಕ ಎನ್ನುವ ಆಪ್ತ ಭಾವನೆ ಇತ್ತು ಅವರಿಗೂ. ಆವಾಗಲೇ ಅಲ್ಲವೆ ತನಗೆ ಅವನ ಬಗ್ಗೆ ಮಧುರ ಭಾವನೆ ಬೆಳೆದದ್ದು. ಕೌಮಾರ್ಯದ ಆಕರ್ಷಣೆಗೆ ಪ್ರೀತಿ ಅನ್ನಬಹುದೆ, ಗೊತ್ತಿಲ್ಲ. ಆದರೂ ಆಗ ಚಂದ್ರುವಿನೊಡನೆಯ ಒಡನಾಟ ಮನದಲ್ಲಿ ಮಧುರ ಕಂಪನ ಮೂಡಿಸುತಿತ್ತು. ಅವನನ್ನು ನೋಡಲು ಮಾತಾಡಲು ಮನ ಹಾತೊರೆಯುತಿತ್ತು. ಅವನು ಹಾಸ್ಟೆಲ್ ಗೆ ಬಂದಾಗ ಗೆಳತಿಯರ ಕೆಣಕು ನಗು ಅದೆಷ್ಟು ಹಿತ ನಿಡುತಿತ್ತು. ಚಂದ್ರನಿಗೂ ತನ್ನ ಮನದ ಭಾವನೆಯ ಅರಿವಿತ್ತೆ. ಇರಬಹುದು, ಇಲ್ಲದಿದ್ದರೆ ಅವನೇಕೆ ಪದೆಪದೆ ತನ್ನ ನೋಡಲು ಹಾಸ್ಟೆಲ್ ಗೆ ಬರುತಿದ್ದ. ಪ್ರತಿ ಭಾನುವಾರ ಅವನಿಗಾಗಿ ಅದೆಷ್ಟು ಕಾತರುಸುತಿದ್ದೆ. ಪ್ರತಿಸಲ ಬಂದಾಗಲೂ ಬ್ಯಾಗ್ ತುಂಬಾ ಚಾಕಲೇಟ್ ಬಿಸ್ಕತ್ತು ಅಥವಾ ತನ್ನ ಮನೆಯಲ್ಲಿ ತಯಾರಿಸಿದ ತಿಂಡಿ ತಂದುಕೊಡುತಿದ್ದ. ಆವಾಗ ಅವನ ಕಣ್ಣಲ್ಲೂ ತನ್ನ ಬಗ್ಗೆ ಮೆಚ್ಚುಗೆ ಕಂಡು ಪುಳುಕಿತಳಾಗಿದ್ದೆ. ತನ್ನ ಮುಗುಳು ನಗು, ಓರೆ ನೋಟಕ್ಕೆ ಅವನು ಹಾತೋರೆಯುತ್ತಿರಬಹುದೆಂದು ಉಹಿಸಿ ಮನ ಮುದಗೊಳ್ಳುತಿತ್ತು. ಆದರೆ ಈ ವಿಷಯ ಬಾಯ್ಬಿಟ್ಟು ಹೇಳುವ ದೈರ್ಯ ಬರಲೇ ಇಲ್ಲ. ಸಂಕೋಚವೂ ಅಪ್ಪನ ಭಯವೋ ಬರಿ ಮನಸಲ್ಲಿ ಮಂಡಿಗೆ ತಿಂದದ್ದೆ ಬಂತು.
ನನಗೆ ಮದುವೆ ಮಾಡುವ ಅಪ್ಪನ ಗಡಿಬಿಡಿ ಹೆಚ್ಚಾಯಿತು. ನೋಡಲು ಬಂದ ವರಗಳೆದುರು ಪ್ರದರ್ಶನಕ್ಕೆ ಕೂಡುವದು ಅದೆಷ್ಟು ಹಿಂಸೆ ಯಾಗುತಿತ್ತು. ಚಂದ್ರ ತನ್ನಮನೆಯವರೊಂದಿಗೆ ನನ್ನ ನೋಡಲು ಬರಬಾರದೇ ಎಂದು ಸದಾ ಮೊರೆ ಇಡುತಿತ್ತು ಮನ. ನನ್ನ ಮೊರೆ ದೇವರಿಗೆ ಕೇಳಿತೋ ಎಂಬಂತೆ ಅಪ್ಪನಿಗೆ ಯಾರೋ ಚಂದ್ರನ ನೆಂಟಸ್ತಿಕೆ ಬಗ್ಗೆ ಹೇಳಿದರಂತೆ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಏಕೆ ಅಲೆಯುತಿದ್ದಿರೀ, ನಿಮ್ಮ ಸಂಭಂಧಿಕ ಹುಡುಗನ ಬಗ್ಗೆ ವಿಚಾರಿಸಿ ಎಂದು ಅಪ್ಪನಿಗೆ ಯಾರೋ ಹೇಳಿದಾಗ ಅಪ್ಪನಿಗೂ ಸಂತೋಷವೇ ಆಗಿತ್ತಲ್ಲ. ಗುರುತು ಪರಿಚಯ ವಿಲ್ಲದವರಿಗೆ ಮಗಳಿಗೆ ಕೊಡುವದಕ್ಕಿಂತ ಪರಿಚಯದ ಸಂಬಂಧ ಉತ್ತಮ ಎಂದು ಬೇರೆಯವರಿಂದ ತಮ್ಮ ಮಗಳನ್ನು ಚಂದ್ರನಿಗೆ ಕೊಡುವ ಬಗ್ಗೆ ಕೇಳಿಸಿದ್ದರೂ. ಆದರೆ ಆ ಕಡೆಯಿಂದ ಯಾವ ಉತ್ತರವೂ ಬರದಿದ್ದಾಗ ಎಷ್ಟೊಂದು ನಿರಾಶೆಯಾಗಿತ್ತು. ಚಂದ್ರನ ಮೇಲೆ ಕೋಪವೂ. ಹಾಗಾದರೆ ಅವನಿಗೆ ತನ್ನ ಮೇಲೆ ಯಾವ ಭಾವನೆಯು ಇಲ್ಲವೇ, ತಾನು ಕಲ್ಪಿಸಿಕೊಂಡದ್ದೆಲ್ಲ ಬರಿ ಉಹೆ ಮಾತ್ರವೇ. ನಾವು ಅವರ ನೆಂಟಸ್ತನಕ್ಕೆ ಸರಿಸಮಾನರಲ್ಲ ಎಂಬ ಕಾರಣ ಅಪ್ಪನಿಗೆ ಬೆರೆಯವರಿಂದ ತಿಳಿದು ಕೆಂಡಾಮಂಡಲನಾಗಿದ್ದ. ಅವರಿಗಿಂತ ಶ್ರೀಮಂತರಿಗೆ ಕೊಟ್ಟು ಮಗಳ ಮದುವೆ ಮಾಡುವ ಛಲ ಬೆಳೆಯಿತು ಅವನಿಗೆ. ಚಂದ್ರ ಎಟುಕದ ತಾರೆ ಎಂದು ನಿರಾಶೆ ತಾಳಿದ ನನಗೆ ಮದುವೆ ಎನ್ನುವದು ನಿರುತ್ಸಾಹ ಮೂಡಿಸಿತು. ಅಪ್ಪನ ಇಚ್ಚೆಯಂತೆ ಭಾರಿ ಹೊಲ ಮನೆ ಇರುವ ಆಂದ್ರಮೂಲದ ಶ್ರೀಮಂತರು ನನ್ನ ಒಪ್ಪಿ ನಿಶ್ಚಿತಾರ್ಥ ಮುಗಿಸಿಕೊಂಡು ಹೋದರು. ಎದುರಿಗೆ ಕುಳಿತ ವರನನ್ನು ಪರಿಚಯಿಸಿದಾಗ ಕಣ್ಣೆತ್ತಿ ನೋಡಿದೆ. ಗಂಭಿರ ಮೊಗದ ಇವರನ್ನು ನೋಡಿದಾಗ ಆ ಕ್ಷಣ ಮನದಲ್ಲಿ ಯಾವ ಭಾವನೆಯು ಮೂಡಲಿಲ್ಲ. ಇಂಜಿನಿಯರಿಂಗ್ ಓದಿದರು ಕೆಲಸವನ್ನರಸಿ ಎಲ್ಲಿಗೂ ಹೋಗದೆ ಕೃಷಿಯಲ್ಲಿ ಆಸಕ್ತಿ ಇರುವುದರಿಂದ ಹೊಲ ಗದ್ದೆ ನೋಡಿಕೊಳ್ಳುತ್ತ ಹಳ್ಳಿಯಲ್ಲೆ ಇರಬಯಸಿದನೆಂದು ವರನ ತಂದೆ ಹೆಮ್ಮೆಯಿಂದ ಹೇಳಿಕೊಳ್ಳತಿದ್ದರು. ಹಳ್ಳಿಯಲ್ಲಿರುವ ತಮ್ಮ ಗದ್ದೆಯಲ್ಲೆ ಭಾರಿ ಪೆಂಡಾಲ ಹಾಕಿ ವಿಜೃಂಭಣೆಯಿಂದ ಮದುವೆ ಮಾಡಿದಾಗ ಅಪ್ಪನ ಸಂತೋಷಕ್ಕೆ ಪಾರವೆ ಇರಲಿಲ್ಲ. ಚಂದ್ರನೂ ತನ್ನ ಅಪ್ಪ ಅಮ್ಮನೊಡನೆ ಮದುವೆಗೆ ಬಂದಿದ್ದ. ದೂರದಿಂದ ಅವನನ್ನು ನೋಡಿದ ತನ್ನ ಮನದಲ್ಲಿ ಅದೆಂಥ ಕೋಲಾಹಲ ಎದ್ದಿತ್ತು. ಸಿನಿಮಾಗಳಲ್ಲಿ ಆಗುವಂತೆ ಕೊನೆ ಕ್ಷಣದಲ್ಲಿ ನನ್ನ ಮದುವೆ ಅವನೊಂದಿಗೆ ಆಗಬಾರದೆ ಎಂದು ಹಂಬಲಿಸಿತ್ತು ಮನ. ಶುಭ ಹಾರೈಸಲು ಸ್ಟೇಜ್ ಮೇಲೆ ಬಂದಿದ್ದ ಅವನನ್ನು ಅಣ್ಣನ ಗೆಳೆಯ ಎಂದು ಗಂಡನಿಗೆ ಪರಿಚಯಿಸಿದ್ದೆ. ವಧುವಿನ ಅಲಂಕಾರದಲ್ಲಿದ್ದ ನನ್ನನ್ನು ತುಸು ಹೆಚ್ಚು ಹೊತ್ತು ನೋಡಿದಂತೆ ಭಾಸವಾಗಿತ್ತು ನನಗೆ, ಆ ನೋಟದ ಆಳ ಅರಿಯಲು ಆಗಲೂ ಪ್ರಯತ್ನಿಸಿದ್ದೆ.
ಗಂಡನ ಜೊತೆಗೆ ಹೋಸ ಬದುಕಿಗೆ ಹೊಂದಿಕೊಂಡೆ, ಕಷ್ಟದಿಂದಲ್ಲ ಇಷ್ಟದಿಂದಲೆ. ಗಂಡನ ಪ್ರೀತಿ ಅತ್ತೆ ಮಾವ ಮನೆಯವರ ಆತ್ಮೀಯತೆಯಿಂದ ಅದೆ ನನ್ನ ಮನೆಯಾಯಿತು. ಆದರೆ ಒಲವಿನ ನೆನಪುಗಳು ಸದಾ ಜಾಗೃತವಾಗಿರುತಿದ್ದವು. ಇರಲಿ ನಾನು ಅವುಗಳನ್ನು ಅಳಿಸುವ ಪ್ರಯತ್ನ ಮಾಡಲಿಲ್ಲ, ಗಂಡನಿಗೆ ಹೇಳುವ ಅವಶ್ಯಕತೆಯು ಕಾಣಲಿಲ್ಲ.ಗಂಡ ಇಬ್ಬರು ಮಕ್ಕಳೊಂದಿಗೆ ಬಾಳು ಸಾಗುತ್ತಿರುವಾಗ ಅತ್ತೆ ಮಾವ ಒಬ್ಬರಿಂದೆ ಒಬ್ಬರು ನಿರ್ಗಮಿಸಿದರು. ಯಾವ ಜವಾಬ್ದಾರಿ ಇಲ್ಲದೆ ಸುಖವಾಗಿ ಬೆಳೆದ ಗಂಡನ ಮೇಲೆ ಒಮ್ಮೆಲೆ ಎಲ್ಲಾ ಜವಾಬ್ದಾರಿ ಬಿದ್ದಾಗ ಅವರು ಅಧಿರರಾದರು. ಮಾವನವರು ಹೊಲ ಗದ್ದೆ ಗಳ ಮೇಲೆ ತೆಗೆದುಕೊಂಡ ಲೋನ ಒಂದಕ್ಕೆ ನಾಲ್ಕು ಪಟ್ಟಾಗಿತ್ತು. ಇದ್ದ ಆಸ್ತಿ ಮಾರದೆ ವಿಧಿ ಇರಲಿಲ್ಲ. ಅಪ್ಪ ಅಣ್ಣನ ಸಹಕಾರ ಇರದಿದ್ದರೆ ಇದಿಷ್ಟು ಉಳಿಯುತ್ತಿರಲಿಲ್ಲವೇನೋ, ಗಂಡನ ಕಡೆಯವರಿಗೆ ಸಿಕ್ಕಷ್ಟು ಕಬಳಿಸುವ ಹುನ್ನಾರ. ಎಲ್ಲಾ ಕಳೆದು ಉಳಿದದ್ದು ಹತ್ತು ಎಕರೆ ತೋಟ, ಮನೆ ಮಾತ್ರ. ಬರಿ ತೋಟದ ಆದಾಯದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅದೆಷ್ಟು ಪರಿಪಾಟಲು ಪಟ್ಟಿಲ್ಲ. ಅತಿವೃಷ್ಟಿ ಅಥವಾ ಅನಾವೃಷ್ಡಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸಂದರ್ಭಗಳೆ ಹೆಚ್ಚು. ಈ ಸಮಯದಲ್ಲಿ ಹೈನುಗಾರಿಕೆ ತನ್ನ ಕೈಬಿಟ್ಟಿಲ್ಲ. ಮತ್ತೊಮ್ಮೆ ಸಾಲ ಮಾಡಿ ಕೈಸುಟ್ಟುಕೊಳ್ಳದಂತೆ ಹೆಣಗುವದರಲ್ಲೆ ಇಪ್ಪತೈದು ವಸಂತಗಳು ಕಳೆದುಹೋದವು. ಮಕ್ಕಳಿಬ್ಬರೂ ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತಿದ್ದರು. ಚಂದ್ರನ ಹಿರಿಮಗಳು ಇಂಜಿನಿಯರಿಂಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದಳು. ಅಣ್ಣನ ಜೊತೆ ಚಂದ್ರ ಅವನ ಹೆಂಡತಿ ಮಗಳೊಡನೆ ನಮ್ಮ ತೋಟದ ಮನೆಗೂ ಬಂದಿದ್ದ. ಅವನ ಹೆಂಡತಿ ಅವನಂತೆ ಲೆಕ್ಚರರ್. ವಿನಯಾ ಸ್ನೇಹಮಯಿ. ಪಟ್ಟಣದಲ್ಲಿ ಇರುವ ಅವಳಿಗೂ ಗದ್ದೆಯಲ್ಲಿ ಕೆಲಸಮಾಡುವ ನನಗೂ ಬಹಳ ವ್ಯತ್ಯಾಸ ಅನಿಸಿತು. ಅವಳ ನಾಜೂಕಿನ ಮುಂದೆ ತಾನು ಒರಟಳೆನೋ ಅನಿಸಿತು. ಬಿಸಿಲು ಗಾಳಿ ಸೋಕದೆ ಕೆಲಸ ಮಾಡುವ ಅವಳಿಗೂ ಬಿಸಿಲಲ್ಲಿ ತೋಟ ಗದ್ದೆ ಕೊಟ್ಟಿಗೆಗೆ ಅಲೆದಾಡುವ ತನಗೂ ವ್ಯತ್ಯಾಸ ವಿರದೆ ಇರುತ್ತದೆಯೇ. ಅವಳ ಚರ್ಮ ನುಣ್ಣಗೆ ಹೊಳೆಯುತಿದ್ದರೆ ತನ್ನ ಚರ್ಮ ಕಳೆಗುಂದಿದಂತೆ ಅನಿಸಿತು. ಅವಳ ಬಗ್ಗೆ ಅಸೂಯೆ ಪಡುತ್ತಿರುವೆನೆ ನಾನು. ನಗು ಬಂತು. ಚಂದ್ರನ ಬಾಯಲ್ಲಿ ತನ್ನಿಬ್ಬರ ಮಕ್ಕಳ ಸಾಧನೆ ಕೇಳಿದಾಗ ಹೆಮ್ಮೆಯಿಂದ ಬೀಗಿತು ಮಾತೃ ಹೃದಯ. ತನ್ನ ಹಿರಿ ಮಗನ ಸಹಾಯದಿಂದ ಅವನ ಮಗಳಿಗೂ ಕೆಲಸ ದೊರಕಿತು. ಕೆಲ ದಿನಗಳಲ್ಲೆ ವಿನಯಳಿಗೆ ಸ್ತನ ಕ್ಯಾನ್ಸರ್ ಇರುವ ವಿಷಯ ತಿಳಿದು ನೊಂದುಕೊಂಡಿದ್ದೆ. ಗಂಡನೊಡನೆ ಹೋಗಿ ಮಾತಾಡಿಸಿ ಚಂದ್ರನಿಗೆ ಧೈರ್ಯಹೇಳಿ ಬಂದಿದ್ದೆವು.
ಇಷ್ಟರಲ್ಲೆ ಒಕ್ಕರಿಸಿದ ಕರೋನಾ ಮಾರಿ ಜಗತ್ತನ್ನೇ ತಲ್ಲಣ್ಣಗೊಳಿಸಿತು. ಅದೇಷ್ಟು ಸಾವು ನೋವುಗಳು, ಎಲ್ಲರಿಂದ ಸಂಪರ್ಕ ಕಳೆದುಕೊಂಡು ಎಲ್ಲರ ಮನೆಗಳು ದ್ವೀಪದಂತಾದವು. ಊರಿನಿಂದ ಸಾಕಷ್ಟು ದೂರ ತೋಟದಲ್ಲಿ ವಾಸ ಮಾಡುವ ನಮಗೆ ಕರೋನಾ ವೈರಸ್ ತಗಲುವ ಸಾದ್ಯತೆಗಳಿಲ್ಲ ಎಂದು ನಂಬಿದ ನಮ್ಮ ನಂಬಿಕೆ ಬುಡ ಮೇಲು ಮಾಡುವಂತೆ ಗಂಡನಿಗೆ ಸಣ್ಣಗಾಗಿ ಶುರುವಾದ ಗಂಟಲು ನೋವು ಕೆಮ್ಮು ಉಲ್ಪಣಿಸತೊಡಗಿದಾಗ ತಡಮಾಡದೆ ಆಸ್ಪತ್ರೆಗೆ ಅಡ್ಮಿಟ್ ಮಾಡಲು ನಿರ್ಧರಿಸಿದೆವು. ಆಸ್ಪತ್ರೆಯಲ್ಲಿ ಒಂದು ಬೆಡ್ ದೊರಕಿಸಿಕೊಳ್ಳಲು ಮಗ ಅದೆಷ್ಟು ಪರಿಪಾಟಲು ಪಟ್ಟ. ಅಲ್ಲಿ ಎಲ್ಲರ ಸ್ಥಿತಿಯು ಅದೇ. ರೋಗಕ್ಕಿಂತ ಭಯವೆ ಅತೀ ತುಂಬಿದ ಆ ಸಂದರ್ಭ ಎಲ್ಲರನ್ನೂ ಭಯಬೀತನಾಗಿಸಿತ್ತು. ರೋಗಿಗಳಂತೂ ಅತ್ಯಂತ ಭಯಬೀತರಾಗಿದ್ದರು. ಇವರು ತನಗೇನಾಗುವದೋ ಎಂಬ ಅತೀ ಆತಂಕದಿಂದ ರಕ್ತದೊತ್ತಡ ಅಧಿಕವಾಗಿ ಏರತೊಡಗಿತು. ನಾನು ಪಕ್ಕದಲ್ಲಿ ಕುಳಿತು ಅದೆಷ್ಟು ದೈರ್ಯ ಹೇಳಿದರೂ ಅವರ ಆತಂಕ ಹೆಚ್ಚುತ್ತಿತ್ತೆ ವಿನಃಹ ಕಡಿಮೆಯಾಗಲೆ ಇಲ್ಲ. ಕರೋನಾ ಎಂಬ ರೋಗದ ಭಿತಿಯಿಂದಲೇ ಹೃದಯಸ್ತಂಭನವಾಗಿ ಸಾವು ಸಂಭವಿಸಿತು. ಒಂದು ಕ್ಷಣ ಜಗತ್ತೆ ಸ್ತಬ್ಧ ವಾದಂತೆನಿಸಿತು. ಅಂತಹ ಉದಾರಣೆಗಳು ಅಲ್ಲೆಷ್ಟೋ, ಯಾರಿಗೆ ಯಾರು ಸಾಂತ್ವನ ಹೇಳದ ಪರಿಸ್ತಿತಿ. ಗಂಡನ ಅಗಲುವಿಕೆ ತನ್ನನ್ನು ಅನಾಥಳನ್ನಾಗಿ ಮಾಡಿತು. ಸಂಗಾತಿಯನ್ನು ಕಳೆದುಕೊಳ್ಳುದೆಂದರೆ ಮರದ ಬೇರುಗಳನ್ನು ಭದ್ರವಾಗಿ ಹಿಡಿದ ಭೂಮಿ ಒಮ್ಮೆಗೆ ಬೇರುಗಳನ್ನು ಬಿಟ್ಟಂತೆ. ಭೂಮಿಯ ಆಧಾರವಿಲ್ಲದ ಮರ ನಿಲ್ಲಬಹುದೇ. ಕರೋನಾ ಮಾರಿ ಅದೆಷ್ಟು ಭೂಮಿ ಬೇರುಗಳನ್ನು ಬೆರ್ಪಡಿಸಿದೆಯೋ. ಜೀವನವೆಲ್ಲ ತೋಟ ಗದ್ದೆಗೆ ಸವೆಸಿದ ಜೀವ ಕೊನೆಗೆ ತೋಟದಲ್ಲಿ ಮಣ್ಣಾಗಲೂ ಅವಕಾಶವಿಲ್ಲದಂತೆ ಆಸ್ಪತ್ರೆಯವರೆ ಶವವನ್ನು ಅದೇನೋ ಮಾಡಿದರೋ, ದೂರದಿಂದ ನೋಡಲಷ್ಟೆ ಅವಕಾಶ ಸಿಕ್ಕದ್ದು.
ಕರೋನಾ ಜೀವನದ ನಶ್ವರತೆಯ ಪಾಠ ಚೆನ್ನಾಗಿ ಕಲಿಸಿಕೊಟ್ಟಿತ್ತು. ಆದರೂ ಜೀವ ಇರುವವರೆಗೂ ಬದುಕಲೇಬೇಕು. ಬದುಕು ಸಾಗುತಿತ್ತು. ಮಕ್ಕಳು ದೊಡ್ಡ ಪಟ್ಟಣಗಳಲ್ಲಿ ಉದ್ಯೋಗ ಮಾಡುತಿದ್ದರು. ತನ್ನನ್ನು ಅವರ ಜೊತೆ ಇರಲು ಕರೆದರು. ವಿಷಾಲ ಮನೆ ತೋಟದಲ್ಲಿ ಪ್ರಕೃತಿಯೊಂದಿಗೆ ವಾಸವಿದ್ದ ತನಗೆ ಪಟ್ಟಣದಲ್ಲಿ ಕದವಿಕ್ಕಿದ ಮನೆಯಲ್ಲಿ ವಾಸ ಮಾಡುವದು ಅಸಾದ್ಯ. ತಾನು ತೋಟದಲ್ಲೆ ಇರಬಯಸಿದಳು. ಪೂರ್ಣ ತೋಟದ ಉಸ್ತುವಾರಿ ವಹಿಸಿಕೊಂಡು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವ ಪ್ರಯತ್ನ ಮಾಡಿದಾಗ ಸದಾ ನಷ್ಟವನ್ನೆ ನೋಡಿದ ತಾನು ಮೂರು ಮೂರು ತಿಂಗಳಿಗೊಂದರಂತೆ ವರ್ಷದಲ್ಲಿ ಮೂರು ಬೆಳೆ ತೆಗೆದಾಗ ಎಲ್ಲವೂ ಲಾಭದಾಯಕವೇ ಆಗಿದ್ದವು. ವ್ಯವಸಾಯದಲ್ಲಿನ ಲಾಭ ಕೃಷಿಯಲ್ಲಿ ಆಸಕ್ತಿ ಮೂಡಿಸಿತು. ಹೈನುಗಾರಿಕೆ ಮತ್ತೊಂದಿಷ್ಟು ಅಭಿವೃದ್ದಿ ಮಾಡಿ ಜೊತೆಗೆ ರೇಷ್ಮೆ ಕೃಷಿಯು ಪ್ರಾರಂಭಿಸಲಾಯಿತು. ಆಸಕ್ತಿ ದುಡಿಮೆ ಎರಡರ ಫಲವೇ ತಾನಿಗ ಒಬ್ಬ ಯಶಸ್ವಿ ಕೃಷಿಕ ಮಹಿಳೆ. ಈ ಮೂರು ವರ್ಷಗಳಲ್ಲಿ ಕೃಷಿಯಲ್ಲಿ ಅನೇಕ ಹೊಸ ಹೊಸ ಪ್ರಯೋಗ ಕೈಗೊಂಡು ಯಶಸ್ವಿಯಾಗಿದದ್ದೆ. ಕೃಷಿಯಲ್ಲಿ ಹೈನುಗಾರಿಕೆಯಲ್ಲಿ ರೇಷ್ಮೆಯಲ್ಲಿ ತನ್ನ ಪ್ರಯೋಗ ನೊಡಲು ಸುತ್ತಲಿನ ಜನ ಬರುತ್ತಾರೆ. ಅದರಲ್ಲಿ ಅಭಿನಂದಿಸುವರೂ, ಕುಹಕವಾಡುವರು ಇರುತ್ತಾರೆ. ಒಂಟಿ ಹೆಣ್ಣಿನ ಬದುಕು ನೋಡುವ ಕುತೂಹಲ ಸಮಾಜಕ್ಕೆ ಯಾವಾಗಲೂ ಇದ್ದದ್ದೇ. ಬಿದ್ದರೆ ಕನಿಕರಿಸುತ್ತಾರೆ, ಎದ್ದರೆ ಹಂಗಿಸುತ್ತಾರೆ. ಇವು ಎಲ್ಲಕ್ಕೂ ನನ್ನ ಉತ್ತರ ಬದುಕಿ ತೋರಿಸುವ ಛಲ ಒಂದೇ. ಮಕ್ಕಳು ಕೆಲಸದಲ್ಲಿ ಉನ್ನತಿ ಹೊಂದಿದ್ದಾರೆ. ಅವರಿಗೆ ಮದುವೆ ಮಾಡಿದರೆ ಜವಾಬ್ದಾರಿ ಕಳೆದಂತೆ. ಮುಂದಿನ ದಿನಗಳು ಬಂದಂತೆ ಕಳೆಯುವದು ಎಂದು ದಿನಗಳು ಸಾಗಿಸುತ್ತಿರುವಾಗ ಬೆಳಿಗ್ಗೆ ಅಣ್ಣನಿಂದ ಬಂದ ವಿನಯಳ ಸಾವಿನ ಸುದ್ದಿ ಮನಸ್ಸೆಲ್ಲ ಕದಡಿತು.
ಆಲೋಚಿಸುತ್ತ ಅದೆಷ್ಟು ಹೊತ್ತು ವಾಕಿಂಗ್ ಮಾಡಿದಳೊ ನಿರ್ಮಲಾ. ಬೇಗ ಮನೆಗೆ ಬಂದು ಉಳಿದ ಕೆಲಸ ನಿರ್ವಹಿಸುವಾಗಲೂ ಚಂದ್ರನದೇ ಯೋಚನೆ. ಹೆಂಡತಿಯನ್ನು ಕಳೆದುಕೊಂಡು ಅದೇಷ್ಟು ಪರಿತಪಿಸುತಿದ್ದಾನೋ, ತಾನು ಈ ಸಂದರ್ಭ ಎದುರಿಸಿದವಳೆ. ಆದರೂ ಮನಸ್ಸು ತಡೆಯದಾಯಿತು, ಡ್ರೈವರ್ ಗೆ ಬರಹೇಳಿ ಬಿದರ್ ನತ್ತ ಪ್ರಯಾಣ ಬೆಳೆಸಿದಳು. ನಿರ್ಮಲಳನ್ನು ನೋಡುತ್ತಲೇ ಚಂದ್ರ ಅವಳೆರಡು ಕೈಗಳನ್ನು ಹಿಡಿದುಕೊಂಡು ಚಿಕ್ಕ ಬಿಕ್ಕಿ ಅತ್ತ. ಸಮಾನ ದುಃಖಿಗಳಿಗೆ ಮಾತಿನ ಸಾಂತ್ವನದ ಅಗತ್ಯವಿರಲಿಲ್ಲ. ಭಾರವಾದ ಮನದಿಂದ ಮನೆಗೆ ತೆರಳಿದಳು.
ಎಕೋ ಈಗೀಗ ಚಂದ್ರನ ನೆನಪುಗಳೆ ಅವಳಿಗೆ ಮುತ್ತಿಕ್ಕುತ್ತಿದ್ದವು. ಕೆಲಸ ದಲ್ಲಿನ ಏಕಾಗ್ರತೆಯು ಕಡಿಮೆಯಾಯಿತು. ಏಕೆ ಹೀಗಾಯಿತು, ತಾನು ತನ್ನ ಪತಿಯನ್ನು ಕಳೆದುಕೊಂಡಂತೆ ಅವನು ತನ್ನ ಪತ್ನಿಯನ್ನು ಕಳೆದುಕೊಳ್ಳುವದೆಂದರೆ.. ಎಂಥ ವಿಪರ್ಯಾಸ. ವಿಧಿ ತಾವಿಬ್ಬರು ಒಂದಾಗಲು ಮತ್ತೊಂದು ಅವಕಾಶ ಕೊಟ್ಟಿರಬಹುದೆ. ಆ ಆಲೋಚನದ ದಂಗು ಬಡಿಸಿತು. ಇಬ್ಬರಿಗೂ ಮದುವೆ ವಯಸ್ಸಿಗೆ ಬಂದ ಮಕ್ಕಳಿರುವಾಗ ಇದು ಸಾಧ್ಯವೇ, ಏಕೆ ಸಾಧ್ಯವಾಗದು. ಧೈರ್ಯ ಬೇಕಷ್ಟೆ, ಮಕ್ಕಳು ಅವರ ದಾರಿ ಹಿಡಿದು ಹೋದ ಮೇಲೆ ಒಂಟಿತನ ಕಾಡುವದು ತಮಗೆ ಹೊರತು ಮಕ್ಕಳಿಗಲ್ಲ .ಸಂಗಾತಿಯ ಅವಶ್ಯಕತೆ ಯೌವನಕ್ಕಿಂತ ಹೆಚ್ಚಾಗಿ ವಯಸ್ಸು ಮಾಗಿದಾಗಲೇ ಅನಿವಾರ್ಯ ವಾಗುವದು. ಇದಕ್ಕೆ ಮಕ್ಕಳು ಒಪ್ಪಬಹುದೇ, ಒಪ್ಪಲಿಕ್ಕಿಲ್ಲ, ಮಕ್ಕಳು ಯಾವಾಗಲೂ ತಮ್ಮ ಸುಖ ಮಾತ್ರ ನೋಡಿಕೊಳ್ಳುವವರು, ವಯಸ್ಸಾದ ತಂದೆ ತಾಯಿಯರ ಭಾವನೆ ಅವರಿಗೆ ಅರ್ಥವಾಗದು. ಒಂದು ವೇಳೆ ಚಂದ್ರ ಮತ್ತು ತಾನು ಮದುವೆಯಾಗಬಯಸಿದರೆ ತಾನು ಅವನ ಮನೆಗೆ ಹೋಗಿರಬೇಕೆ..! ಅವನೇ ಇಲ್ಲಿಗೆ ಬಂದಿರಬಾರದೇಕೆ, ಯಾವಾಗಲೂ ಹೆಣ್ಣು ಮಾತ್ರ ಮನೆ ಬಿಟ್ಟು ತೆರಳಬೇಕೇ..
ಮದುವೆಯಾದರೆ ತವರು ಬಿಟ್ಟು ಗಂಡನ ಮನೆಗೆ, ಗಂಡ ಬಿಟ್ಟರೆ ಗಂಡನ ಮನೆ ಬಿಟ್ಟು ಮರಳಿ ತವರಿಗೆ. ತಾನಂತೂ ತನ್ನ ಹೊಲ ಗದ್ದೆ ಬಿಟ್ಟು ಎಲ್ಲಿಗೂ ಹೋಗಲಾರೆ. ಬೇಕಾದರೆ ಅವನೆ ಇಲ್ಲಿ ಬಂದಿರಬೇಕು. ಅವನಿಲ್ಲಿ ಬಂದತೆರೆ ಅವನ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವರಾರು. ತನ್ನ ತರ್ಕಕ್ಕೆ ನಗು ಬಂತು. ಅಷ್ಟಕ್ಕೂ ಮದುವೆ ಅನ್ನುವ ಬಂದ ತಮಗೆ ಅಗತ್ಯವಿಲ್ಲ. ಹೀಗೆ ಸಂಗಾತಿಗಳಾಗಿ ಇರಬಹುದಲ್ಲ. ಇದು ಅಸಾದ್ಯ ಸಮಾಜ ಇದನ್ನು ಒಪ್ಪದು, ಮಕ್ಕಳು ಕೂಡ, ತನ್ನ ಯೋಚನಾ ಲಹರಿಗೆ ಬೆಚ್ಚಿಬಿದ್ದಳು. ಏನಾಗಿದೆ ತನಗೆ ಚಂದ್ರನ ಬಗೆಗಿದ್ದ ಸೂಪ್ತ ಪ್ರೀತಿ ಜಾಗೃತಗೊಂಡಿತ್ತು. ಆದಕ್ಕೊಂದು ಬಂಧನದ ಹೆಸರು ಕೊಡಲು ಮನ ಒಪ್ಪಲಿಲ್ಲ. ಇಷ್ಟಕ್ಕೂ ನಾನೆ ಅವನ ಕುರಿತು ಚಿಂತಿಸುತ್ತಿರುವೆ. ಅವನ ಮನದಲ್ಲಿ ನನ್ನ ಕುರಿತು ಅದಾವ ಭಾವವಿದೆಯೋ, ಮೊದಲೂ ಹೀಗೆ ತನ್ನ ಪ್ರೀತಿ ಒನ್ ವೇ ಯಾಗಿತ್ತು. ಛೆ ಅವನ ಕುರಿತು ಯೋಚಿಸಕೂಡದು ಎಂದು ದೃಢನಿರ್ಧಾರ ಮಾಡಿದಷ್ಟು ಮನ ಅವನ ಸುತ್ತಲೆ ಸುತ್ತುತಿತ್ತು. ಮನಸ್ಸು ಕಟ್ಟಿ ಹಾಕಿದಷ್ಟು ಅದರ ಹಾರಾಟ ಅತೀ ಎಂದು ತಿಳಿದು ಅದನ್ನು ಕಟ್ಡಿಹಾಕುವ ಪ್ರಯತ್ನ ಮಾಡದೆ ಬಿಟ್ಟಳು. ಒಂದೆರಡು ಸಲ ಅಣ್ಣನಿಂದಲೆ ಅವನ ಕುರಿತು ತಿಳಿದುಕೊಂಡಳು, ತಾನಗಿ ಮಾತಾಡಲೂ ಪ್ರಯತ್ನಿಸಲಿಲ್ಲ. ಕಡಿವಾಣವಿಲ್ಲದ ಕುದುರೆಯಂತೆ ಎತ್ತೆತ್ತಲೋ ಹರಿದಾಡಿದ ಮನ ಕೆಲದಿನಗಳ ನಂತರ ತಾನಾಗೆ ಹತೋಟಿಗೆ ಬಂತು. ತನ್ನ ಆಲೋಚನೆಯಂತಾಗುವದು ಕೇವಲ ಚಲನಚಿತ್ರಗಳಲ್ಲಿ ಮಾತ್ರ ನಿಜಜೀವನದಲ್ಲಿ ಇಂತಹವು ಘಟಿಸುವದು ಬರಿ ಕನಸ್ಸು ಮಾತ್ರ ಎಂಬ ವಾಸ್ತವವನ್ನರಿತು ತನ್ನ ಕಾಯಕದಲ್ಲಿ ವ್ಯಸ್ತಳಾದಳು.
ಹೀಗೆಯೆ ಕೆಲ ತಿಂಗಳುಗಳುರುಳಿದವು. ಒಂದು ದಿನ ಸಾಯಂಕಾಲ ಹಸುಗಳಿಗೆ ಹುಲ್ಲು ಕಲಗಚ್ಚುಗಳನ್ನಿಕ್ಕಿ ಹಾಲು ಕರೆದು, ದೇವರಿಗೆ ದೀಪ ಹಚ್ಚಿ ರಾತ್ರಿ ಅಡುಗೆಗೆ ಏನು ಎಂದು ಚಿಂತಿಸುವಷ್ಟರಲ್ಲಿ ಮೊಬೈಲ್ ರಿಂಗಾಯಿತು. ಹಲೋ ಎಂದಾಗ ಆ ಕಡೆಯಿಂದ, ನಿರ್ಮಲಾ ನಾನು ಚಂದ್ರು ಎಂಬ ಶಬ್ದ ಕೇಳಿ ಎದೆ ನಗಾರಿಯಂತೆ ಹೊಡೆದುಕೊಳ್ಳತೊಡಗಿತು. ನಿನ್ನೊಂದಿಗೆ ಮಾತಾಡಬೇಕು, ನಿಮ್ಮ ಮನೆಗೆ ಬರಬಹುದೇ ಎಂಬ ಅವನ ಕೋರಿಕೆಗೆ ಸಮ್ಮತಿಸಿದ್ದು ಅರಿವಿರಲಿಲ್ಲ ಅವಳಿಗೆ. ಅವನೇಕೆ ಬರುತ್ತಿರಬಹುದು. ಅವನು ನನ್ನಂತೆ ಆಲೋಚಿಸುತಿದ್ದರ ಬಹುದೆ. ತನ್ನ ಒಪ್ಪಿಗೆ ಕೇಳಲು ಬರುತ್ತಿರಬಹುದೆ. ಈಗ ಅವಳಿಗೆ ಭಯವಾಗತೊಡಗಿತು. ಗಂಡ ಈಗಲೂ ಮಾನಸಿಕವಾಗಿ ಅವಳನ್ನು ಆವರಿಸಿಕೊಂಡಿದ್ದ.ಅವನ ಸ್ಥಾನ ಮತ್ತೊಬ್ಬರಿಗೆ ನೀಡುವದು ಅಸಾದ್ಯವೆನಿಸಿತು. ಮಕ್ಕಳ ನೆನಪು ಬಂದು ಅಧಿರಳಾದಳು. ಇಷ್ಟು ದಿನ ಚಂದ್ರನಿಗಾಗಿ ಎಷ್ಟು ಹಂಬಲಿಸಿದ್ದೆ, ಈಗ ಅವನಾಗೆ ಬರುತ್ತಿರುವಾಗ ಎಕಿಂಥ ತಳಮಳ. ಅವನ ಕೋರಿಕೆ ಮನ್ನಿಸುವದೋ ನಿರಾಕರಿಸುವದೋ ಎಂಬ ತೊಳಲಾಟದಲ್ಲೆ ರಾತ್ರಿ ಕಳೆದು ಬೆಳಗಾಯಿತು.
ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡಳು, ಐವತ್ತು ಸಮೀಪಿಸುತ್ತಿದೆ, ಶ್ರಮಜೀವಿಯಾಗಿರುವದರಿಂದ ಅನವಶ್ಯಕ ಬೊಜ್ಜು ಬಳೆಯದೆ ನೀಳ ಕಾಯ ಆರೋಗ್ಯ ದಿಂದಿತ್ತು. ತಲೆಯಲ್ಲಿ ಇಣುಕುತ್ತಿರುವ ಬಿಳಿಕೂದಲು ಮರೆಮಾಚದೆ ಕಾಟನ್ ಸೀರೆ ಉಟ್ಟುಕೊಂಡು ನವಿರಾಗಿ ಅಲಂಕರಿಸಿಕೊಂಡು ಚಂದ್ರ ನಿಗಾಗಿ ಕಾಯುತ್ತ ಕುಳಿತಳು.
ಹೇಳಿದ್ದ ಸಮಯಕ್ಕೆ ಸರಿಯಾಗಿ ಬಂದ ಚಂದ್ರ. ಹೆಂಡತಿಯ ಅಗಲುವಿಕೆಯಿಂದ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ಕಾಣುತಿದ್ದ. ಅವನನ್ನು ಕರೆದು ಉಪಚರಿಸಿದಳು, ಚಾ ಕುಡಿಯುತ್ತ ಕುಳಿತ ಅವನು ಮಾತಿಗಾಗಿ ತಡಕಾಡುವಂತೆ ಕಂಡಿತು. ಅವನ ಸ್ಥಿತಿ ಅರ್ಥಮಾಡಿಕೊಂಡು ಅವನ ತಂದೆ ತಾಯಿ ಮಕ್ಕಳ ಬಗ್ಗೆ ಕೇಳಿದಳು.
ದೊಡ್ಡ ಮಗಳ ಮದುವೆಗೆ ವರನ ಹುಡುಕಾಟದಲ್ಲಿರುವಾಗಿ ಹೇಳಿದ. ಎಲ್ಲಿಯಾದರೂ ವರ ನೋಡಿದ್ದಿರಾ ಎಂದು ಕೇಳಿದಳು.ಮಗಳ ಭಾವಚಿತ್ರ ಬಯೊಡಾಟ ಇರುವ ಪೋಟೋ ನಿರ್ಮಲಳ ಕೈಗಿಡುತ್ತ, ನಿನ್ನ ಹಿರಿ ಮಗನಿಗೆ ನನ್ನ ಮಗಳನ್ನು ತಂದು ಕೊಳ್ಳುವೆಯಾ ನಿರ್ಮಲ, ತಾಯಿ ಇಲ್ಲದ ಅವಳಿಗೆ ನೀನು ತಾಯಿಯಾಗಬಲ್ಲೆ. ಇಲ್ಲ ಅನ್ನಬೇಡ ಎಂದು ಕೈಮುಗಿದನು. ನಿಶ್ಚಲವಾಗಿ ಕುಳಿತಳು ನಿರ್ಮಲ.
ಅವನು ಬಯಸುತ್ತಿರುವದು ಅವನ ಮಗಳಿಗೆ ತಾಯಾಗಲೂ ಆದರೆ ತಾನಂದುಕೊಂಡತಲ್ಲ, ಅವನ ಇಚ್ಚೆಯಂತೆ ಅತ್ತೆ ಎಂಬ ತಾಯಾಗಿ. ಹಿಂದೆ ತನ್ನ ತಂದೆ ತನಗಾಗಿ ಅವರ ಸಂಬಂಧ ಕೇಳಿದಾಗ ಅವರ ಶ್ರಿಮಂತಿಕೆಗೆ ತಾವು ತಕ್ಕವರಲ್ಲ ಎಂದು ಅವನ ತಂದೆ ನಿರಾಕರಿಸಿದ್ದರು. ಈಗ ಅವನಾಗೆ ಮಗಳಿಗೆ ವರ ಕೇಳಲು ಬಂದಿದ್ದಾನೆ. ವ್ಯಂಗನಗೆ ತುಟಿಯಂಚಿಗೆ ಬಂದಿತ್ತು.
ಚಂದ್ರ ಮಾತು ಮುಂದುವರೆಸಿದ. ಅಪ್ಪ ಅಮ್ಮನಿಗೆ ತನಗೆ ಮದುವೆ ಮಾಡುವ ಹಂಬಲ ಹೆಚ್ಚಾಗಿದೆ. ಇಬ್ಬರೂ ಹೆಣ್ಣು ಮಕ್ಕಳು ಮದುವೆಯಾಗಿ ಹೋದರೆ ನನ್ನ ನೋಡಿಕೊಳ್ಳುವರಾರು ಎಂಬ ಚಿಂತೆ ಅವರಿಗೆ. ಆದರೆ ಮಗಳ ಮದುವೆ ಮೊದಲು ಮಾಡಬೇಕೆಂಬುದು ನನ್ನ ಇಚ್ಚೆ.
ಅವನ ಮಾತು ಅರ್ದಕ್ಕೆ ತಡೆದು ಕೇಳಿದಳು, ನೀವು ಮತ್ತೊಂದು ಮದುವೆ ಮಾಡಿಕೊಳ್ಳತಿದ್ದಿರಾ..
ಹೌದು ನಿರ್ಮಲ, ಹೆಣ್ಣು ನಿಶ್ಚಯವಾಗಿದೆ, ನಿನಗೂ ಪರಿಚಯವಿರಬಹುದು, ನಮ್ಮ ದೊಡ್ಡಮ್ಮನ ಮಗಳು ಸುಲೋಚನಾಳಾ ನಾದಿನಿ..
ರೆವತಿಯೇ ,ಅಷ್ಟು ಚಿಕ್ಕವಳು ಎಂದು ಉದ್ಗಾರ ತೆಗೆದಳು.
ಅವರಿಗೆ ಒಪ್ಪಿಗೆ ಇದೆ. ಅವಳಿಗೆ ಮೊದಲು ನಿಶ್ಚಿತಾರ್ಥ ಆಗಿ ಮದುವೆ ಮುರಿಯಿತಂತೆ ಏನು ಕಾರಣವೋ ಗೊತ್ತಿಲ್ಲ. ನಿರ್ಮಲ ನಾನು ಮದುವೆಯಾಗುವ ಮುಖ್ಯ ಉದ್ದೇಶ ವಯಸ್ಸಾದ ನನ್ನ ತಂದೆ ತಾಯಿಯನ್ನು ನೋಡಿಕೊಳ್ಳಲು..
ಅವನ ಮಾತು ಅರ್ಧಕ್ಕೆ ತುಂಡರಿಸುತ್ತ, ನಿನ್ನ ಅಪ್ಪ ಅಮ್ಮನನ್ನು ನೋಡಿಕೊಳ್ಳುವದಕ್ಕೆ ಅಷ್ಟು ಚಿಕ್ಕ ವಯಸ್ಸಿನವಳನ್ನು ಮದುವೆತಯಾಗಬೇಕೆ, ಅದೂ ನಿನ್ನ ಅರ್ಧದಷ್ಟು ವಯಸ್ಸಿನವಳನ್ನು. ಅವಳ ಒಪ್ಪಿಗೆ ಕೇಳಿದ್ದಿಯಾ..
ಅವಳ ಮನೆಯಲ್ಲಿ ಎಲ್ಲರೂ ಒಪ್ಪಿದ್ದಾರೆ ಎಂದನು ಮೆಲ್ಲನೆ.
ಅವಳು..ಎಂದಾಗ, ಮೌನವಾದನವ.
ಭಲೆ ಗಂಡಸೇ, ಅವಕಾಶ ಮತ್ತು ಆಯ್ಕೆಯ ಸ್ವಾತಂತ್ರ್ಯ ನಿನಗೆ ಮಾತ್ರ ಅಂದಿಗೂ ಇಂದಿಗೂ ಎಂದೆಂದಿಗೂ ಎಂದು ಮನ ಚೀರಿತು. ಯಾವಾಗಲೂ ಮರುಮದುವೆಯು ಗಂಡಿಗೆ ಅನಿವಾರ್ಯ ಆದರೆ ಹೆಣ್ಣಿಗೆ ಅನವಶ್ಯಕ. ಇದು ಸಮಾಜವೆ ನಿರ್ಧರಿಸಿದ್ದು.ಚಂದ್ರನಂತವರಿಗೆ ಮರುಮದುವೆಯಾಗಲು ಚಿಕ್ಕ ವಯಸ್ಣಿನ ಹೆಣ್ಣು ಮಕ್ಕಳೆ ಬೇಕು. ಬಾಳು ಕೊಡುವ ನೆಪದಲ್ಲಿ ಬಿಟ್ಟಿ ಚಾಕರಿಯವಳಾಗಿ, ಅವನ ಸಂಗಾತಿಯಾಗಲು ಹಂಬಲಿಸಿದ ತನ್ನ ಮೂರ್ಖತನಕ್ಕೆ ಹಳಿದುಕೊಂಡಳು. ಇಷ್ಟು ದಿನ ಅವನೊಂದು ಮಾಯೆಯಾಗಿ ಕಾಡಿದ್ದ. ಈಗ ಆ ಮಾಯೆ ಶೂನ್ಯತೆ ಸೃಷ್ಟಿಸಿತ್ತು. ಮನಸ್ಸು ಅವನ ಕುರಿತು ನಿರ್ವಿಕಾರ ಭಾವ ತಾಳಿತು.
ತನ್ನ ಮಗಳಿಗಾಗಿ ಸಂಭಂಧ ಕುದುರಿಸಲು ಬಂದಿದ್ದಾನೆ, ತನ್ನ ಮಗಳಿಗೆ ಅತ್ತೆ ಎಂಬ ತಾಯಿಯಾಗಲು ಕೇಳಿಕೊಳ್ಳುತಿದ್ದಾನೆ. ಕೈಯಲ್ಲಿರುವ ಪೋಟೊ ನೋಡಿದಳು, ಹುಡುಗಿ ಥೆಟ್ ವಿನಯಳ ಪಡಿಯಚ್ಚು.ಸುಂದರಿ ವಿದ್ಯಾವಂತೆ ಬೇಡ ಎನ್ನಲು ಯಾವ ಕಾರಣವೂ ಇರಲಿಲ್ಲ.
ಜ್ಯೋತಿ ಡಿ. ಬೊಮ್ಮಾ ಅವರು ಆಸಕ್ತಿಯ ಕ್ಷೇತ್ರ ಸಾಹಿತ್ಯ. ಕತೆ, ಕವನ ಪ್ರಕಾರದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
More About Author