ಪಡ್ಡೆ ಹುಡುಗರು ಸಾಲಾಗಿ
ಗಂಗೋತ್ರಿಯ ಸ್ಟ್ಯಾಂಡಲ್ಲಿ ಕುಳಿತು
ಕುಣಿಯುವ ಹೊಕ್ಕುಳಿಗೆ ಕಾದಿದ್ದಾರೆ
ಎಷ್ಟು ಮುಚ್ಚಿಟ್ಟರೂ ತಾಯಿಯಾಗುವ ಹಂಬಲ
ಇಣುಕುವಂತೆ
ಇಣುಕುವುದು ಬಳ್ಳಿಯ ಮೂಲ.
ಕ್ಯಾಮರಾಮಾನ್ ಈಗ ಅರ್ಜುನ
ಅವನಿಗೆ ರೆಂಬೆ ಕೊಂಬೆಗಳಾವುವೂ ಕಾಣುತ್ತಿಲ್ಲ
ಹೊಕ್ಕುಳು ಬರಿ ಹೊಕ್ಕುಳು..
*
ಇಣುಕಿದ ತಪ್ಪಿಗೆ ಕುಣಿಸಿದ ಖುಷಿಗೆ
ಮುತ್ತಿಟ್ಟ ಗಳಿಗೆ ಬೆಂಕಿ ಬಿದ್ದು, ಬೆಂದು, ಆವಿಯೆದ್ದು
ವಿಲವಿಲನೆ ಒದ್ದಾಡಿ
ಬಾಳಹರಿತಕ್ಕೆ ಪಕ್ಕಾಗಿ, ರಕ್ತದಲಿ ಮಿಂದು
ಅಲೆ ಅಲೆಯಾಗಿ ಮೂರ್ತವಾದ ಹೊಕ್ಕುಳು
ಮಹಾಸ್ಪೋಟಕ್ಕೆ ಕಾದು
*
ಸೂಲಗಿತ್ತಿ
ಮೂರು ಬಾರಿ ಎದೆ ಹಣೆ ಮುಟ್ಟಿ ನಮಿಸಿ
ತಾಯಿ ಮಗುವಿನ ಕೊಂಡಿಯನು
ಕಣ್ಮುಚ್ಚಿ ಅದುಮಿದಾಗ
ಎರಡು ಹೊಕ್ಕುಳು ನಕ್ಕವು
ಬ್ರಹ್ಮ ಕವಿತೆ ಬರೆದ
*
ಒಂದು ವರ್ಷದ ಮಗು
ತನ್ನ ಪುಟಾಣಿ ತೋರ್ಬೆರಳನ್ನು ಮೆಲ್ಲನೆ ಉದ್ದಕ್ಕೆ ನೀಡಿ
ನಿದ್ದೆಯಲ್ಲಿರುವ ಅಮ್ಮನ ಹೊಕ್ಕುಳು ಮುಟ್ಟಿ
ತಾನೆ ಕಿಲ ಕಿಲ ನಗುವುದು
*
ಅಮ್ಮ ಮಗುವಿನ ಹೊಕ್ಕುಳಲಿ
ಮುಖವಿಟ್ಟು ಪುರ್ರ್ ಎಂದು ಊದಿ
ಸಂಭ್ರಮಿಸುವಳು
ಕಲಾಕೃತಿ : ಮಹಾಂತೇಶ ದೊಡ್ಡಮನಿ
ಆಡಿಯೋ
ವಿಡಿಯೋ
ಧನಂಜಯ ಕುಂಬ್ಳೆ
ಲೇಖಕ ಧನಂಜಯ ಕುಂಬ್ಳೆ ಅವರು ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ 1975 ಡಿಸೆಂಬರ್ 11ರಂದು ಜನಿಸಿದರು. ಪ್ರಸ್ತುತ ದ.ಕ ಜಿಲ್ಲೆಯ ಮೂಡುಬಿದಿರೆ ನಿವಾಸಿ. ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿಯನ್ನು ಮೂರನೇ ರ್‍ಯಾಂಕ್‌ನೊಂದಿಗೆ ಹಾಗೂ ನಂತರ 1999ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸಹ ತೃತಿಯ ರ್‍ಯಾಂಕ್‌ನೊಂದಿಗೆ ಪೂರೈಸಿದರು. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ ಅವರ ಪಿಎಚ್.ಡಿ ಗ್ರಂಥ. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ, ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಇವರು ಈಗ ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಅವರ ಮೊದಲ ಕವನ ಸಂಕಲನ ‘ಮೊದಲ ಪಾಪ’ 1998ರಲ್ಲಿ ಪ್ರಕಟವಾಯಿತು. ನಂತರ ‘ನಾನು ಮತ್ತು ಆಕಾಶ’ - ವಿಮರ್ಶಾ ಲೇಖನಗಳು, ‘ಹಾಡು ಕಲಿತ ಹಕ್ಕಿಗೆ’ - ಕವನ ಸಂಕಲನ, ‘ಕಜಂಪಾಡಿ ರಾಮ’, ಪ್ರಗತಿಶೀಲ ಲೇಖಕ ನಿರಂಜನ, ಬಹುಭಾಷಾ ವಿದ್ವಾಂಸ ವೆಂಕಟರಾಜ ಪುಣಿಂಚತ್ತಾಯ- ವ್ಯಕ್ತಿಚಿತ್ರ ಕೃತಿಗಳು, ‘ಹಣತೆ ಹಾಡು’ - ಕವನ ಸಂಕಲನ, ‘ಕುಮಾರವ್ಯಾಸನ ಕಾಲ ನಿರ್ಣಯ - ಹೊಸಬೆಳಕು’ ಅರುಣಾಬ್ಜ ಮತ್ತು ಕುಮಾರವ್ಯಾಸ - ‘ಐತಿಹ್ಯಗಳು ಕಟ್ಟಿಕೊಡುವ ತುಳುನಾಡಿನ ಇತಿಹಾಸ’ - ಸಂಶೋಧನ ಗ್ರಂಥಗಳು ಇವರ ಪ್ರಮುಖ ಕೃತಿಗಳು. ‘ನವೀನ’ ಎಂಬ ಕನ್ನಡದ ಮೊಟ್ಟ ಮೊದಲ ಅಂಚೆ ಕಾರ್ಡು ಪತ್ರಿಕೆಯ ಸಂಪಾದಕರಾಗಿದ್ದರು. ಕೆಲ ಕಾಲ ವಿವಿಧ ಪತ್ರಿಕೆಗಳ ವರದಿಗಾರರಾಗಿದ್ದರು. ಪಾಲ್ಗಡಲ ಮುತ್ತುಗಳು, ಸಿರಿಗನ್ನಡ - ಕನ್ನಡ ನಾಡು ನುಡಿ ಸಂಸ್ಕೃತಿ ಸಂಬಂಧಿತ ಬರಹಗಳ ಸಮಗ್ರ ಸಂಪುಟ (ಇತರರೊಂದಿಗೆ), ಯಕ್ಷಗಾನ ಪ್ರಸಂಗಗಳು ಮೊದಲಾದವು ಇವರ ಸಂಪಾದಿತ ಕೃತಿಗಳು. ಪಳಕಳ ಸೀತಾರಾಮ ಭಟ್ಟರ ಮಕ್ಕಳ ಕತೆಗಳ ಸಮಗ್ರ ಸಂಪುಟಗಳನ್ನು ಸಂಪಾದಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾಗಿದ್ದ ಇವರು ಈಗ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾಗಿ, ಪ್ರಸಾರಾಂಗದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಪೇಜಾವರ ಸದಾಶಿವ ರಾವ್ ರಾಜ್ಯಮಟ್ಟದ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುನರೂರು ಟ್ರಸ್ಟ್ ನ ಮುದ್ದಣ ಕಾವ್ಯ ಪ್ರಶಸ್ತಿ - 2011, ಸಾಹಿತ್ಯ ಯುವ ಸಾಧಕ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪ್ರೋತ್ಸಾಹ ಅನುದಾನ, ರೋಟರಿ ಕ್ಲಬ್ ಕಾಸರಗೋಡುವಿನ ಸೃಜನಶೀಲ ಬರಹಗಾರ ಪ್ರಶಸ್ತಿ, ಮೂಡುಬಿದರೆಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕೋದ್ಯಮ ವಾರ್ಷಿಕ ಪ್ರಶಸ್ತಿ ಲಭಿಸಿವೆ. 2020ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ