Poem

ಗಾಂಧಿಯನ್ನು ಕಂಡಿರಾ?

 

ಹೇ ರಾಮ್
ಹೊರಗೆ ಎಲ್ಲೋ ಭಜನೆ ನಡೆಯುತ್ತಿತ್ತು
ಪೂರ್ವದಿಂದ ಪಶ್ಚಿಮಕ್ಕೆ
ಬೆಳಕು ಗಾಳಿಯೊಡನೆ
ಬೆರೆತು ಸಾಗುವಾಗ
ದೃಷ್ಟಿ ಹಾಯಿಸಿ
ಹುಡುಕಿದೆ ಹುಡುಕಿದೆ
ಹುಡುಕೇ ಹುಡುಕಿದೆ,
ಇಲ್ಲ,
'ಗಾಂಧಿ' ಮಾತ್ರ ಕಾಣಲೇ ಇಲ್ಲ
ನೂಲಿಗೆ ಕೈ ಮಗ್ಗ ನೇಯುತ್ತ
ಖಾದಿ ಟೋಪಿ ತಯಾರಿಸುತ್ತಿದ್ದ
ಬಿಳಿಯ ಗಡ್ಡದಾರಿ
ತಾತನೊಬ್ಬನ ಕೇಳಿದೆ
"ಇಲ್ಲಿ ಎಲ್ಲಾದರೂ
ಗಾಂಧಿಯನ್ನು ಕಂಡಿರಾ?"
ಇಲ್ಲವೆಂದು ತಲೆಯಾಡಿಸಿದರು.

ಮುಂದೆ ಹೆಜ್ಜೆ ಇರಿಸಿದೆ
ರಸ್ತೆಯ ಚರ್ಮದ ತುಂಬಾ
ರಕ್ತದ ಕಲೆ,
ಕ್ಷಣಕಾಲ ಭಯವಾಯಿತು
ನಿಲ್ಲಲಿಲ್ಲ ಮತ್ತೆ
ಮುಂದೆ ಮುಂದೆ ನಡೆದೆ
ಕೊಲೆ ಹಿಂಸೆ ಕಣ್ಮುಂದೆ ಸುಳಿದು
"ಅಸಹಕಾರ ಅಸಹಕಾರ ಎಂದು
ಯಾರೋ ಕೂಗಿದಂತಾಗಿ"
ಕ್ಷಣಕಾಲ ನಿಂತು ಕೇಳಿಕೊಂಡೆ
ಕೋವಿ ಹಿಡಿಯದೆ ಕೋಲನ್ಹಿಡಿದು
ಸ್ವಾತಂತ್ರ್ಯ ತಂದುಕೊಟ್ಟ
ಆ ಮಹಾತ್ಮ ಹೋದದ್ದಾದರೂ ಎಲ್ಲಿಗೆ?

ಬೀದಿಯಲ್ಲಿ ನಿಂತ
ಆ ದಿವ್ಯ ಮೂರ್ತಿಗೆ ಕೇಳಿದೆ
"ನಿನ್ನ ಕನ್ನಡಕದ ತುಂಬಾ
ಮಸಿಯ ಎರಚಿದವರು ಯಾರು?"
ಉತ್ತರ ಬರಲಿಲ್ಲ!
ಗಾಂಧಿಭವನದಲ್ಲಿ
ಗಾಂಧೀ ಇರುವರೆ?
ಕಿಟಕಿ ಬಾಗಿಲುಗಳಿಗೂ ಕೇಳಿದೆ
ದುರುಗುಟ್ಟಿ ನನ್ನನೇ ನೋಡಿದವು!
ಗಾಂಧಿ‌ನೋಟಿನಲ್ಲಿ
ಜೇಬಿನಿಂದ ಜೇಬಿಗೆ
ನಡೆಯುತ್ತಿರುವರೆ ಎಂದೇ
ಹಣವೇ ಅಣಕ ಮಾಡಿತು
ಗಾಂಧಿಕ್ಲಾಸಿನಲ್ಲಿ ಕೂತ ಬಾಪೂ
ಬಡವರ ಸಂತೈಸುತ್ತಿರುವನೆ ಎಂದೇ
ಮೌನವೇ
ಉಪವಾಸ ಉಪವಾಸ ಎನ್ನುತ್ತಿತ್ತು!

ಮತ್ತೆ
ಗಾಂಧೀ ಹೋದದ್ದಾದರು ಎಲ್ಲಿಗೆ?
ಎಂದು ಕೇಳುತ್ತಾ
ಒಂದು ಪುಟದ ಪತ್ರ ಬರೆದೆ!
ತಲುಪಿಸಲು ವಿಳಾಸ ಸಿಗಲಿಲ್ಲ!
ಇನ್ನೂ ಕಾಯುತ್ತಲೇ ಇದ್ದೇನೆ
ಗಾಂಧೀ ಬಗ್ಗೆ ಉತ್ತರಿಸುವ
ಯೋಗ್ಯವುಳ್ಳ ಮಹನೀಯರು
ಉಳಿದಿದ್ದಾರೆಯೇ ಎಂದು!
ಬರೆದ ಪತ್ರ ತಲುಪಿಸಲು!

ನಾಗರಾಜ್ ನವೀಮನೆ

ನಾಗರಾಜ್ ನವೀಮನೆ ಅವರು ಮೂಲತಃ ಹಾಸನದವರು. ಪ್ರಸ್ತುತ 20 ವರ್ಷದಿಂದ ಮೈಸೂರಿನಲ್ಲಿ ವಾಸ್ತವ್ಯ. ಪತ್ರಿಕೋದ್ಯಮದಲ್ಲಿ ಎಂ. ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಿಎಚ್.ಡಿ ಅಧ್ಯಯನ ಕೂಡ ಮಾಡುತ್ತಿದ್ದಾರೆ. 'ಕನ್ನಡಪ್ರಭ' ಪತ್ರಿಕೆಯಲ್ಲಿ ವೃತ್ತಿ ಪ್ರಾರಂಭಿಸಿದ ಅವರು ಪ್ರಸ್ತುತ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯದ ಬಗ್ಗೆ ವಿಶೇಷ ಆಸಕ್ತಿ. ವನ್ಯಜೀವಿ, ಪರಿಸರ, ಕಾಡೆಂದರೆ ಒಲವು, ಪ್ರವಾಸವೆಂದರೆ ಅಚ್ಚುಮೆಚ್ಚು. 'ಆನೆ ಕಥೆ' ಅವರ ಮೊದಲ‌ ಕೃತಿ.

 

More About Author