ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ಎಂ.ಎ., ಬಿ.ಎಡ್. ಪದವೀಧರರಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ‘ಏಕತಂತು’ ಕತೆ ನಿಮ್ಮ ಓದಿಗಾಗಿ
ಮಳೆ ಕತ್ತಲೆಂದರೆ ಅಂತಿತಾದ್ದಲ್ಲ. ಇಡೀ ಜಗತ್ತಿಗೇ ಮೋಡದ ಪದರ ಪದರಗಳು ಕಂಬಳಿ ಕವುಚಿದಂತೆ ಕವುಚಿಗೊಂಡು ಕಣ್ಣಿಗೇನೂ ಕಾಣದಷ್ಟು ಮಬ್ಬು ಭೂಮಿಗೆ ಆವರಿಸಿಕೊಂಡಿತ್ತು. ಗಾಳಿ ಬೀಸಿದ ಹೆಳೆಗೇ ಚಿಮಣಿ ದೀಪದಂತೆ ಅದುರದುರಿ ಬೀಳುತ್ತಿದ್ದ ಕರೆಂಟಂತೂ ಯಾವ ಮಾಯಕದಲ್ಲೋ ಹೋದದ್ದು ಒಂದು ದಿನದಿಂದ ಇತ್ತ ಮುಖಹಾಕಿ ಬಂದಿರಲಿಲ್ಲ. ಆಗಿನ್ನೂ ಬೆಳಗ್ಗಿನ ಹತ್ತೂವರೆ ಆಗುತ್ತಿತ್ತಷ್ಟೇ. ಮಕ್ಕಳೆಲ್ಲ ಬ್ಯಾಗುಗಳನ್ನು ಹೊತ್ತು ಶಾಲೆಗೆ; ಗಂಡಂದಿರು ಕಾಲೆಳೆಯುತ್ತಾ ಆಫೀಸಿಗೆ ತಲುಪಿ ಗೃಹಿಣಿಯರು ಒಂಚೂರು ಬಿಡುವಾದ ಹೊತ್ತು. ಬೆಳಗ್ಗಿನ ಜಾವಕ್ಕೇ ಎದ್ದು ಮಕ್ಕಳಿಗೆ ಪ್ರೀತಿಯೆಂದು ಮಸಾಲೆದೋಸೆ ಮಾಡುವ ಕೆಲಸ ಹಮ್ಮಿಕೊಂಡು ಗಡಿಬಿಡಿಯಲ್ಲಿ ಪಲ್ಯ, ದೋಸೆ, ಕಾಫಿ ಎಲ್ಲ ಮಾಡಿ ಜೊತೆಗೆ ಅನ್ನ, ಸಾರೂ ಅಟ್ಟು ಮೂರು ಟಿಫನ್ ಬಾಕ್ಸ್
ಗಳಿಗೆ ತುಂಬಿ ಮೂರು ಜನರಿಗೂ ಬೇಕು. ಬೇಕಾದಂತೆ ತಿಂಡಿ ಅಣಿ ಮಾಡಿಕೊಟ್ಟು ಅಡುಗೆ ಮನೆಯೇನು, ಇಡೀ ಮನೆಯೇ ಒಮ್ಮೆಗೇ ರಂಪವೆದ್ದು ರಾಡಿಯಾಗಿ ಅಂತೂ ಮಕ್ಕಳು, ಗಂಡ ಮನೆಯಿಂದ ಹೊರಬಿದ್ದು ಇದೀಗ ನಿಟ್ಟುಸಿರು ತೆಗೆದು ರೂಮಿಗೆ ಹೋಗಿ ಕುಳಿತಿದ್ದಳು ಸಂಗೀತಾ. ಈ ಬೆಳಗ್ಗಿನ ಗಡಿಬಿಡಿ ಇವತ್ತು ನಿನ್ನೆಯದಲ್ಲ; ಭಾನುವಾರವೊಂದನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಇದು ಖಾಯಂ ಆದದ್ದರಿಂದ ಅವಳಿಗೂ ಅಭ್ಯಾಸವಾಗಿ ಹೋಗಿದೆ. ಬೆಳಿಗ್ಗೆ ಎದ್ದೊಡನೆ ಯದ್ವಾ ತದ್ವಾ ಹೊಡೆದುಕೊಳ್ಳಲು ಆರಂಭವಾಗುತ್ತಿದ್ದ ಸಂಗೀತಾಳ ಗುಂಡಿಗೆ ತುಸು ತಹಬಂದಿಗೆ ಬರುತ್ತಿದ್ದುದೇ ಗಂಡ-ಮಕ್ಕಳು ರೆಡಿಯಾಗಿ ಹೊರ ಹೊರಟ ನಂತರ, ಆದರೆ ಆಗಲೂ ಪುಕು ಪುಕು ಕಮ್ಮಿಯಾಗುತ್ತದೆ ಅನ್ನುವ ಹಾಗಿಲ್ಲ. ಬಸ್ ಹತ್ತಿದ ಮಕ್ಕಳು ಏನೂ ಅವಘಡವಿಲ್ಲದೆ, ಜೊತೆಯ ಹುಡುಗರೊಂದಿಗೆ ಕಟಿಪಿಟಿ ಇಲ್ಲದೆ ಶಾಲೆಗೆ ಹೋದರೋ ಎಂತದೋ ಎಂಬ ಚಿಂತೆಯಿಂದ ಹಿಡಿದು ಗಂಡನ ಆಫೀಸಲ್ಲಿ ಏನೂ ಹಿಂದು ಮುಂದಾಗದೆ ಅವನು ಸಾಬೀತಾಗಿ ಕೆಲಸ ಮುಗಿಸಿಕೊಂಡು ಮನೆಗೆ ಬರುವುದರಲ್ಲಿ ರಾತ್ರಿ ಎಂಟಾಗುತ್ತೋ, ಒಂಬತ್ತಾಗುತ್ತೋ; ತರಕಾರಿ-ಹಾಲು ಮರೆತು ಬರುತ್ತಾನೋ ಹೇಗೋ... ಎಂಬಂತಹ ಏನೇನೋ ನಿರ್ದಿಷ್ಟ ರೂಪುರೇಷೆಗಳು ಇಲ್ಲದ ತಲೆಬಿಸಿಯೊಂದಿಗೆ ಮುಂದುವರಿಯುತ್ತಿತ್ತು. ಸದ್ಯ ಈಗ ಕೋಣೆಯ ಮಂಚದ ಮೇಲೆ ಕುಳಿತವಳು ಸುಮ್ಮನೇನೂ ಇದ್ದಿರಲಿಲ್ಲ; ಅವಳ ಸ್ವಭಾವವೇ ಹಾಗೆ, ಒಂದು ನಿಮಿಷವಾದರೂ ಕೈಕಾಲು ಆಡಿಸದೆ ಇರುವುದು ಅವಳಿಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಗಾಢನಿದ್ದೆ ಬಂದಾಗೊಮ್ಮೆ ಕೊರಡಿನಂತೆ ಬೀಳುತ್ತಿದ್ದು ಮಾಫಿ ! ಕರೆಂಟು ಹೋಗಿ ಇಪ್ಪತ್ತನಾಲ್ಕು ಗಂಟೆಗಳೇ ಕಳೆದದ್ದರಿಂದ ಇನ್ನು ಅದು ಬಂದರೆ ದೇವರ ದಯೆ ಎಂದುಕೊಂಡು ಚಾರ್ಜರ್ ದೀಪವನ್ನು ಹಚ್ಚಿ ಮೇಜಿನ ಮೇಲಿಟ್ಟು, ಕೈಯ್ಯಲ್ಲಿ ತಿಂಡಿಯ ತಟ್ಟೆ ಹಿಡಿದು ಪಕ್ಕದಲ್ಲೇ ಹಬೆಯಾಡುವ ಕಾಫಿ ಇಟ್ಟುಕೊಂಡು ಪುಸ್ತಕವೊಂದನ್ನು ಓದುತ್ತಾ ಮೂಲೆಯಲ್ಲಿ ಕುಳಿತಿದ್ದಳು. “ಅವಳೇನು ಪರೀಕ್ಷೆಯೇನಾದರೂ ಕಟ್ಟಿದ್ದಾಳಾ... ಅಷ್ಟು ಚೂರು ಸಮಯವನ್ನೂ ವ್ಯರ್ಥ ಮಾಡದೆ ಮಳೆ ಕತ್ತಲಲ್ಲಿ ಕುಳಿತು ಓದಲು !” ಎಂದು ಕೇಳಿದರೆ ಹಾಗೇನೂ ಇಲ್ಲ; ತಿನ್ನುವಾಗ ಏನಾದರೂ ಓದುವುದು ಅವಳ 'ಹುಟ್ಟುಗುಣ' ಅಷ್ಟೇ ! ಇವತ್ತೂ ಹಾಗೆ ಪುಸ್ತಕವೊಂದನ್ನು ಬಿಡಿಸಿಟ್ಟುಕೊಂಡಿದ್ದಳು. ಆದರೆ ಹೊರಗೆ ಸುರಿಯುತ್ತಿದ್ದ ಧಾರಾಕಾರ ಗಾಳಿ ಮಳೆಯನ್ನು ಲೆಕ್ಕಿಸದಷ್ಟು ಅವಳ ತಲೆಯಲ್ಲಿ ಯೋಚನೆಗಳು ಸುಳಿದಾಡುತ್ತಿದ್ದವು. ಅವುಗಳಲ್ಲಿ ಮುಖ್ಯವಾದದ್ದೆಂದರೆ ಇತ್ತೀಚಿನ ದಿನಗಳಲ್ಲಿ ಅವರ ಮನೆಯ ಸುತ್ತಮುತ್ತ ನಡೆಯುತ್ತಿದ್ದ ಮಾರ್ಜಾಲ ಪ್ರಪಂಚದ ಕೊಡುಕೊಳು ವ್ಯವಹಾರ. 'ಅಂದರೆ ಅಲ್ಲಿ ಬೆಕ್ಕಿನ ಸಂತೆ ನಡೆಯುತ್ತಿತ್ತಾ ? ಬೆಕ್ಕನ್ನು ಮಾರುತ್ತಿದ್ದರಾ ?' ಎಂದರೆ ಅದಲ್ಲ; ಬಿಡಿಸಿ ಹೇಳಿದರೆ ದೊಡ್ಡ ಕತೆ-ಕಾದಂಬರಿಯೇ ಆಗಬಹುದು !
ಸಂಗೀತಾಳ ಮನೆಯ ಎಡಕ್ಕೆ ಇರುವುದು ಶೆಟ್ಟರ ಮನೆ... ಅದೇ, ಪೇಟೆಯಲ್ಲಿ ಮೀನು ಹೋಟೆಲ್ ಇಟ್ಟುಕೊಂಡಿದ್ದಾರಲ್ಲ ಕೃಷ್ಣಶೆಟ್ಟರು; ಅವರ ಮನೆ. ಮನೆಯ ಹಿಂಭಾಗ ಇವರ ಕಿಟಕಿಯಿಂದ ಸಂಪೂರ್ಣವಾಗಿ ಕಾಣುವಂತಿತ್ತು. ಅದರಿಂದ ಆಚೆ ಬದಿ ಕ್ರಿಶ್ಚಿಯನ್ ಬಾಯಮ್ಮನ ಮನೆ. ಗಂಡ ದೂರದೇಶದಲ್ಲಿದ್ದು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದುದರಿಂದ ಬಾಯಮ್ಮ ಇಲ್ಲಿ ಮನೆ ಕಾಯುತ್ತಾ ಮಕ್ಕಳನ್ನು ಓದಿಸಿಕೊಂಡು ಇದ್ದರು. ಅದರ ಒತ್ತಿಗೆ ಇನ್ನೊಬ್ಬರು ಯಾರೋ ಬೇಕರಿ ಇಟ್ಟುಕೊಂಡ ಪರ್ಬುಗಳ ದೊಡ್ಡ ಬಂಗಲೆ. ಅದರಿಂದ ಬಲಗಡೆಗೆ ಇರುವ ಕೆಲ ಮನೆಗಳ ಬಗ್ಗೆ ಸಂಗೀತಾಗೆ ಗೊತ್ತಿಲ್ಲ. ಅಲ್ಲೇ ಆಚೆ ಎಲ್ಲೋ ಕೆಂಚಿಬೆಕ್ಕಿಯ ಓನರ್ ತಾತನ ಮನೆ. ಶೆಟ್ಟರ ಮನೆ ಹಿಂಭಾಗದ ಹಿತ್ತಿಲು ಮುಗಿದೊಡನೆ ತಾಯಿ-ಮಗು ಇಬ್ಬರೇ ವಾಸಿಸುವ ಪರವೂರಿನ ಬಾಡಿಗೆದಾರರ ಒಂದು ಸಣ್ಣ ಬಿಡಾರ. ಬಾಯಮ್ಮನ ಮನೆಯ ಸ್ವಲ್ಪ ಹಿಂದಕ್ಕೆ ನೇರಳೆ ಪೇಯಿಂಟ್‍ನ ಒಬ್ಬಳು ಚೆಲುವೆಯ ಮನೆ. ಅವಳ್ಯಾರು ಏನು ಎತ್ತ ಎಂದು ಸಂಗೀತಾಗೆ ಮಾಹಿತಿ ತಿಳಿದಿಲ್ಲವಾದರೂ ಇತ್ತೀಚೆಗೆ ಅವಳ ಮೇಲೆ ಇನ್ನಿಲ್ಲದ ಸಿಟ್ಟು ಉಕ್ಕಿ ಬರುತ್ತಿತ್ತು. ಈ ಇಷ್ಟು ಪ್ರತಿ ದಿನವೂ ಸಂಗೀತಾ ಅಡುಗೆ ಮನೆ ಕಿಟಕಿಯಿಂದ ನೋಡಿದಾಗ ಕಾಣುತ್ತಿದ್ದ ಪ್ರಪಂಚ ವಿಸ್ತಾರ. ವಿಚಿತ್ರವೆಂದರೆ ಈ ಇಷ್ಟು ಸಣ್ಣ ಪರಿಧಿಯೊಳಗೆ ಮತ್ತು ಒಂಚೂರು ಅದರ ಹೊರ ಅಂಚಿನಲ್ಲಿ ಕೆಂಚಿಬೆಕ್ಕಿಗೆ ಸಂಬಂಧಿಸಿದ ಎಂತೆಂತಾ ಘಟನೆಗಳು ನಡೆಯುತ್ತಿವೆಯೆಂದರೆ ಇವತ್ತಿಗೂ ಅದನ್ನೆಲ್ಲ ಅರಗಿಸಿಕೊಳ್ಳಲು ಸಂಗೀತಾಗೆ ಸಾಧ್ಯವಾಗುತ್ತಿಲ್ಲ. ಕೆಂಚಿಬೆಕ್ಕಿನ ವಿಚಾರಗಳಲ್ಲಿ ಆಸಕ್ತಿ ತೋರಿಸುತ್ತಾ ಹೋದಂತೆ ತನ್ನ ಕಾಲಬುಡಕ್ಕೇ ಬಂದು ಈ ಎಲ್ಲವೂ ಸುತ್ತಿಕೊಳ್ಳಲು ಆರಂಭವಾದದ್ದು ಹೇಗೋ ಸಂಗೀತಾಗೆ ತಿಳಿಯದೆ “ಈ ಪ್ರಪಂಚದಲ್ಲಿ ಪ್ರತಿಯೊಂದು ಸಜೀವಿ ನಿರ್ಜೀವಿ ವಸ್ತುಗಳು ಏಕತಂತುವೊಂದರಿಂದ ಬಂಧಿಸಲ್ಪಟ್ಟಿರುತ್ತವೆ” ಎಂದು ಎಲ್ಲೋ ಓದಿದ ಸಾಲೊಂದು ನೂರಕ್ಕೆ ನೂರು ನಿಜವೇನೋ ಎಂಬ ಅನುಮಾನ ಅವಳಿಗೆ ಶುರುವಾಗಿತ್ತು !
ಆ ಮನೆಗೆ ಬಂದ ಹೊಸದರಲ್ಲಿ ಒಂದು ಸಂಜೆ ತುಪ್ಪಳದಂತಾ ರೋಮದ ಸಣ್ಣ ತಲೆಯ ಉದ್ದ ದಪ್ಪ ತೋಳದ ಬಾಲದ ಕೆಂಚು ಬಿಳಿ ಮಿಶ್ರಿತ ಸುಂದರಿ ಬೆಕ್ಕೊಂದು ಗಾಳಿಯಲ್ಲಿ ತೇಲಿಬಂದಂತೆ ಕಾಂಪೌಂಡ್‍ಗಳ ಮೇಲೆ ಹಾರುತ್ತಾ ಶಿಸ್ತಾಗಿ ನಡೆದುಬಂದಾಗ ಸಂಗೀತಾ ತನ್ನ ಕಣ್ಣುಗಳನ್ನೇ ನಂಬದಾಗಿದ್ದಳು! ಅಷ್ಟು ಸುಂದರವಾಗಿತ್ತು; ಆ ಬೆಕ್ಕು ಮತ್ತು ಅದರ ಬಾಲ! ಬೆಕ್ಕುಗಳಲ್ಲಿ ಸೌಂದರ್ಯ ಸ್ಪರ್ಧೆ ಇಟ್ಟಿದ್ದರೆ ಈ ಕೆಂಚಿಬೆಕ್ಕೇ ಗೆದ್ದು ಕಿರೀಟ ತೊಟ್ಟುಕೊಳ್ಳುತ್ತಿತ್ತು ಎಂದುಕೊಳ್ಳುತ್ತಾ ಸಂಗೀತಾ “ಬಾ ಕೆಂಚಿ ಚ್ಚು ಚ್ಚು” ಎಂದು ಕರೆದು ಅದಕ್ಕೆ ಅಲ್ಲೇ ಅನ್ವರ್ಥನಾಮವನ್ನೇ ಹೆಸರಾಗಿ ಮಾರ್ಪಡಿಸಿದ್ದಳು. ಅದರ ತಲೆ ತೀರಾ ಸಣ್ಣದಿದ್ದುದರಿಂದ ಬೆಕ್ಕುಗಳ ವಿಷಯದಲ್ಲಿ ಅನುಭವಿಯಾಗಿದ್ದ ಸಂಗೀತಾ ಅದು ಹೆಣ್ಣುಬೆಕ್ಕೆಂದು ನಿರ್ಧರಿಸಿದ್ದಳು. ಹೀಗೆ ಅಪರಿಚಿತಳಾಗಿ ಬಂದ ಕೆಂಚಿ ಪ್ರತಿದಿನ ಕಣ್ಣು ಮುಚ್ಚಿಕೊಂಡು ಸ್ವಲ್ಪ ಸ್ವಲ್ಪವೇ ಹಾಲನ್ನು ನೆಕ್ಕಿ ಬಾಲ ಎತ್ತಿಕೊಂಡು ಮನೆಯೊಳಗೆ ನೆಗೆದಾಡುತ್ತ ಆತ್ಮೀಯಳಾಗಿಬಿಟ್ಟಳು. ಸಂಗೀತಾ ಹೇಗೆಂದರೆ ಅವಳಿಗೆ ಬೆಕ್ಕು ಎಂದರೆ ಬರೀ ಬೆಕ್ಕು ಎಂದು ಅರ್ಥವಾಗುವುದೆ ಇಲ್ಲ. ಬೆಕ್ಕಿಗೂ ಮನುಷ್ಯತ್ವ ಆರೋಪಿಸಿ ಅದಕ್ಕೆ ಬೇಜಾರಾಯಿತು, ಸಿಟ್ಟುಬಂತು, ಖುಷಿಯಾಯಿತು ಎಂದೆಲ್ಲ ಹೇಳುತ್ತ 'ಅದು ನನ್ನ ಮಗುವಿನ ತರ' ಎನ್ನುವಲ್ಲಿಗೂ ಮುಂದುವರಿಯುತ್ತದೆ ಅವಳ ಯೋಚನಾ ಲಹರಿ! ಒಟ್ಟಿನಲ್ಲಿ ಮಕ್ಕಳಿಗೂ ಬೆಕ್ಕು ಬಂದು ಹೋಗುವುದು ಇಷ್ಟವೇ ಆದ್ದರಿಂದ ಕೆಂಚಿಬೆಕ್ಕಿಗೆ ಹಾಲು, ಮೊಸರು ಮೀನು-ಮಾಂಸ ಧಾರಾಳವಾಗಿ ಸಿಕ್ಕು ಮತ್ತಷ್ಟು ಚಂದದ ಬೆಕ್ಕಾಗಿ ಹೊರಹೊಮ್ಮಿತು. ಈ ನಡುವೆ ಇನ್ನೊಂದು ಗುಂಡಗಿನ ತಲೆಯ ಗಂಡುಬೆಕ್ಕು ಬಂದು ಅದೂ ಒಂತರ ಕೆಂಪಾಗಿದ್ದುದರಿಂದ ಅದು 'ಕೆಂಚ'ನಾಗಿ, ಕೆಂಚಿ ಹೆಣ್ಣು ಬೆಕ್ಕಾದ್ದರಿಂದ ಅದರೊಂದಿಗೆ ಹೊಂದಿಕೊಂಡು ಎರಡೂ ಒಂದೇ ತಟ್ಟೆಯಲ್ಲಿ ಊಟ ತಿಂದು ನಿರುಮ್ಮಳವಾಗಿದ್ದವು. ಕೆಂಚ, ಸಂಗೀತಾಳ ಮನೆಗೆ ಬರುತ್ತಿದ್ದುದು ಹಸಿವೆ ನೀಗಿಸಿಕೊಳ್ಳಲು ಮತ್ತು ತುಸು ವಿಶ್ರಾಂತಿಗಾಗಿ ಮಾತ್ರ. ಆದರೆ ಕೆಂಚಿ ಹಾಗಲ್ಲ; ಗಂಟೆಗಟ್ಟಲೆ ಅಲ್ಲೇ ಠಿಕಾಣಿ ಹೂಡುತ್ತಿದ್ದಳು. ವಿಚಿತ್ರವೆಂದರೆ ಈ ಕೆಂಚಿಬೆಕ್ಕು ಕೂಗಿದ್ದೇ ಯಾರೂ ನೋಡಿರಲಿಲ್ಲ. ಅದು ಮೂಕಬೆಕ್ಕೆಂದು ಸಂಗೀತಾ, ಅವಳ ಗಂಡ ಸೂರ್ಯ ತೀರ್ಮಾನಿಸಿಯಾಗಿತ್ತು. ಆದರೆ ಭಾರೀ ಜೋರಿನ ಬೆಕ್ಕು ಎಂಬುದಂತೂ ನಿಜ. ಅಷ್ಟುದ್ದ ಬಾಲ ನೀಡಿಕೊಂಡು ಅಡುಗೆ ಮನೆಯಲ್ಲಿ ಮಲಗಿದ್ದಾಗ ಕೆಲಸದ ಭರದಲ್ಲಿ ಎಡವಟ್ಟಾಗಿ ಚೂರು ತುಳಿದರೂ ಸಾಕು, ಬುಸ್ ಎಂದು ಹೆದರಿಸಿ ಕಚ್ಚಲು ಬಂದುಬಿಡುತ್ತಿತ್ತು “ಅನ್ನ ಇಟ್ಟವರಿಗೇ ಕನ್ನ ಹಾಕುವ ಬೆಕ್ಕು” ಎಂದು ಬಯ್ದು ಸಂಗೀತಾ ಸಮಾಧಾನವಾಗುತ್ತಿದ್ದಳು. ಪರಿಸ್ಥಿತಿ ಹೀಗಿರುವಾಗ ಕ್ರಮೇಣ ಕೆಂಚಿ ಗರ್ಭಿಣಿಯೆಂದು ತಿಳಿದು ಸಂಗೀತಾ ಖುಷಿಗೊಂಡಳು. 'ಮೊದಲ ಸಲ ಮರಿಯಿಡುತ್ತಿದೆ ಪಾಪ... ಅದಕ್ಕೆ ಹೇಗೆ ಗೊತ್ತಾಗುತ್ತದೋ, ಎಲ್ಲಿ ಮರಿಯಿಡಬೇಕು, ಹೇಗೆ ಮರಿಯಿಡಬೇಕು ಎಂದು' ಮುಂತಾಗಿ ತಲೆಕೆಡಿಸಿಕೊಳ್ಳುತ್ತಿದ್ದಳು ಅವಳು. ಅದರ ಗುಡಾಣ ಹೊಟ್ಟೆ ನೋಡಿ ನಾಲ್ಕೈದು ಮರಿಯಾದರೂ ಇದ್ದೀತೆಂದು ಶೆಟ್ಟರ ಮನೆಯವರೊಂದಿಗೆ ಚರ್ಚಿಸಿಯೂ ಆಗಿತ್ತು. ಹೀಗಿರುತ್ತ ಅಕಸ್ಮಾತ್ ಒಂದು ದಿನ ಕೆಂಚಿ ಮನೆಗೆ ಬರುವುದನ್ನು ನಿಲ್ಲಿಸಿದಳು! ಮೂರ್ನಾಲ್ಕು ದಿನ ಕಾದ ಸಂಗೀತಾ 'ಬೆಕ್ಕು ಮರಿಯಿಟ್ಟಿರಬೇಕು!' ಎಂದು ನಿರ್ಧರಿಸಿ ಶೆಟ್ಟರ ಮನೆಯಲ್ಲಿ ವಿಚಾರಿಸಿ 'ಹೌದಂತೆ' ಎಂದು ಖಾತ್ರಿಪಡಿಸಿಕೊಂಡು ಎಂತದೋ ಹಿಂದುಮುಂದಿಲ್ಲದ ಸಂತಸದಲ್ಲಿ ತೇಲತೊಡಗಿದಳು.
ಒಂದು ದಿನ ರಾತ್ರಿಯೂಟದ ನಂತರ ಸಂಗೀತ ಕಾದಂಬರಿಯೊಂದನ್ನು ಓದುತ್ತ ಎಡೆ ಎಡೆಯಲ್ಲಿ ಮಕ್ಕಳಿಗೆ ಹೋಂ ವರ್ಕ್ ಮಾಡಿಸುತ್ತ ಕುಳಿತಿದ್ದಾಗ ಕೆಂಚಿ ಬಂದಳು. ಬಾಯಲ್ಲಿ ಪುಟ್ಟ ಮರಿಯೊಂದನ್ನು ಕಚ್ಚಿಕೊಂಡು ಅವಸರಪಡುತ್ತಾ ಬಂದೇ ಬಿಟ್ಟಳು! ಸಂಗೀತಾ ಆಶ್ಚರ್ಯ, ಉದ್ವೇಗಗಳಿಂದ ಕೂಗಿಕೊಂಡು ಗಮನ ಸೆಳೆದಾಗ ಮನೆಯ ಎಲ್ಲರೂ ನಿಶ್ಯಬ್ಧವಾಗಿ ಕೆಂಚಿಯ ಹಿಂದೆ ಕಳ್ಳ ಹೆಜ್ಜೆಯಿಟ್ಟು ಕೋಣೆಗೆ ಹೋದರು. ಅಲ್ಲಿ ಹಳೆ ಬಟ್ಟೆ ಮೂಟೆಯ ಹಿಂದುಗಡೆ ಮುರುಕು ಹಾಸಿಗೆ ಸುರುಳಿಯ ಮೇಲೆ ಮರಿಯನ್ನಿಟ್ಟು ಮತ್ತೆ ಹೊರಗೋಡಿ ಕಗ್ಗತ್ತಲಲ್ಲಿ ಕಣ್ಮರೆಯಾದಳು ಕೆಂಚಿ. ಹೀಗೆ ಎರಡು ಮರಿಗಳನ್ನು ಬಾಯಲ್ಲಿ ಕಚ್ಚಿತಂದು 'ಗುರ್‍ಮ್ಯಾಂವ್' ಅಂತ ಮೊದಲ ಸಲ ಕೂಗಿ ಆತುರಾತುರವಾಗಿ ಮರಿಗಳನ್ನು ಮಲಗಿಸಿಕೊಂಡು ಕ್ರಮೇಣ ಆರಾಮಾಗಿ ನಿದ್ದೆ ಹೊಡೆಯತೊಡಗಿದಾಗ ಸಂಗೀತಾಳ ಕೊರೆತ ಶುರುವಾಯಿತು. “ಅಯ್ಯೋ, ನಮ್ಮ ಮೇಲೆ ಎಷ್ಟು ಪ್ರೀತಿ ಕೆಂಚಿಗೆ, ಎಂತಾ ಮುದ್ದಿನ ಮರಿಗಳು! ನಮ್ಮ ಮನೆಗೇ ತಂದುಬಿಟ್ಟಳಲ್ಲಾ ಅಂತಾ ಚಿಕಣಿಮರಿಗಳನ್ನು; ಒಳ್ಳೆಯ ಮನುಷ್ಯರನ್ನು ಪ್ರಾಣಿಗಳು ಹೆಚ್ಚು ಪ್ರೀತಿಸುವುದಂತೆ!” ಮುಂತಾಗಿ ಶುರುಹಚ್ಚಿಕೊಂಡಾಗ ಸೂರ್ಯ “ಸುಮ್ನೆ ಮಕ್ಕಳನ್ನು ಮಲಗಿಸಿ ಮಲಗು ಮಾರಾಯ್ತಿ. ನನಗೆ ಆಯಾಸವಾಗಿದೆ. ಬೆಳಿಗ್ಗೆ ಬೇಗ ಡ್ಯೂಟಿಗೆ ಹೋಗಬೇಕು, ತಲೆ ತಿನ್ನಬೇಡ” ಎಂದು ಅವಳ ಮಾತಿನ ಪ್ರವಾಹಕ್ಕೆ ಅಣೆಕಟ್ಟು ಹಾಕುವವನಂತೆ ಆಡಿದಾಗ “ಹಾ, ಆಯ್ತಾಯ್ತು, ಎಲ್ರೂ ಬಿದ್ಕೊಳ್ಳಿ” ಎಂದು ಪಟ್ಟಂತ ದೀಪವಾರಿಸಿ ಮಕ್ಕಳನ್ನು ತನ್ನ ಕೋಣೆಗೆ ಎಳೆದುಕೊಂಡು ಹೋಗಿ ಮಲಗುವ ವ್ಯವಸ್ಥೆ ಮಾಡತೊಡಗಿದಳು.
ಮನೆಯೊಳಗೆ ಬೆಚ್ಚಗೆ ಮಲಗಿದ್ದ ಕೆಂಪು ಕೆಂಪು ಬೆಕ್ಕಿನ ಮರಿಗಳಿಂದಾಗಿ ಮಕ್ಕಳಿಗೇನು, ಸಂಗೀತಾಗೂ ಸವೆಯುತ್ತಿದ್ದ ಹಗಲು ರಾತ್ರಿಗಳಲ್ಲಿ ಹೊಸತೇನೋ ಇದೆ ಅನಿಸತೊಡಗಿತ್ತು. ಉಣ್ಣೆ ಬಟ್ಟೆ ಹಾಸಿದ ಬುಟ್ಟಿಯೊಳಗೆ ಬೆಕ್ಕಿನ ಮರಿಗಳನ್ನು ಮಲಗಿಸಿ ರೂಮಿನ ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಇಳಿಬಿಟ್ಟು, ಧೂಪ ಹಾಕಿ ಬಾಣಂತಿ ಕೋಣೆಯಂತೆ ಕಳೆಬಂದಿತ್ತು ಕೋಣೆಗೆ! ಮಕ್ಕಳು ಶಾಲೆಯಿಂದ ಬಂದವೇ ಬ್ಯಾಗೆಸೆದು ಗಂಟೆಗಟ್ಟಲೆ ಬೆಕ್ಕನ್ನು, ಮರಿಗಳನ್ನು ನೋಡುತ್ತಾ ಕಾಲಕಳೆಯುತ್ತಿದ್ದವು. ನೋಡನೋಡುತ್ತ ಮರಿಗಳಿಗೆ ಕಾಲು ಬಂದು ಪುಟಾಣಿ ಹೆಜ್ಜೆಯಿಟ್ಟು ಕೋಣೆಯೊಳಗೆಲ್ಲ ಅರೆಹೆದರಿಕೆಯಲ್ಲಿ ಸುತ್ತತೊಡಗಿದಾಗ ಸಂಗೀತಾಗೆ ತಲೆಬಿಸಿಯಾಗತೊಡಗಿತು. ಇನ್ನು ಹಾಲು ಅನ್ನ ತಿಂದರೆ ಈ ಮರಿಗಳು ಮನೆಯೆಲ್ಲ ಗಲೀಜು ಮಾಡಿ ಕಡೆಗೆ ಊಟಕ್ಕೆ ಕೂತರೆ ಒಂದು ಅಗುಳೂ ಸೇರುವುದಿಲ್ಲ ಅಂತ ಯೋಚಿಸಿ ಮರಿಗಳನ್ನು ಅದರ ಓನರ್ ಮನೆಗೆ ಕೊಟ್ಟುಬಿಡುವುದೆಂದು ಕಠಿಣ ನಿರ್ಧಾರ ತೆಗೆದುಕೊಂಡಳು. ಆದರೆ ಅವಳ ನಿರ್ಧಾರ ಕಾರ್ಯ ಸಾಧನೆಯಾಗಲು ಮಕ್ಕಳು ಬಿಡದ ಕಾರಣ ಹೀಗೇ ವಾರವೊಂದು ಕಳೆಯುತ್ತಿರಲು ಅಚಾನಕ್ ಒಂದಿನ ಬಾಯಮ್ಮ “ಕೆಂಚಿ ಬೆಕ್ಕಿನ ಮರಿಗಳು ನಿಮ್ಮ ಮನೆಯಲ್ಲಿದೆ ಅಲ್ಲವಾ!?” ಅಂತ ಅಲ್ಲಿಂದಲೇ ಕಳ್ಳನನ್ನು ಹಿಡಿಯುವವರಂತೆ ಕೂಗಿ ಕೇಳಿದರು. ಸಂಗೀತಾಗೆ ಒಂತರಾ ಅವಮಾನವಾದಂತಾಗಿ “ಹಾ, ನಮ್ಮನೆಯಲ್ಲಿ ತಂದಿಟ್ಟಿದೆ ಬೆಕ್ಕು; ನಮಗೇನೂ ಬೇಡ. ಇವತ್ತೇ ಕೊಟ್ಟುಬಿಡುತ್ತೇನೆ. ಮೊನ್ನೆಯಿಂದ ಹೇಳುತ್ತಲೇ ಇದ್ದೇನೆ ನಮ್ಮನೆಯವರಲ್ಲಿ, ಕೊಂಡು ಹೋಗಿ ಕೊಡಿ ಕೊಡಿ ಅಂತ” ಅನ್ನುತ್ತಿರುವಾಗ ಬಾಯಮ್ಮ “ನಿಮಗೆ ಬೇಡವಾ ಹಾಗಾದರೆ” ಎಂದು ಜಾಪಿನಲ್ಲಿ ಕೇಳಿದರು. “ಅಯ್ಯೋ ನಮಗೆ ಬೇಡಪ್ಪಾ... ಮನೆಪೂರಾ ಹೇಸಿಗೆ ಮಾಡಿದರೆ ನನ್ನಿಂದಾಗುವುದಿಲ್ಲ” ಸಂಗೀತಾ ಅಂದಾಗ “ಹಾಗಾದರೆ ಈಚೆ ಕೊಡಿ, ನಮಗೆ ಬೇಕು. ತಕ್ಕೊಳ್ಳಿ ಈ ಚೀಲ, ಇದರೊಳಗೆ ತುಂಬಿ ಕೊಡಿ ನೋಡುವಾ” ಎಂದು ಕಾಂಪೌಂಡ್‍ಗಳನ್ನು ದಾಟಿ ಬಂದು ಬೀಣಿ ಕೈಚೀಲವೊಂದನ್ನು ಕೊಟ್ಟಾಗ “ಇನ್ನೂ ಅಮ್ಮನ ಹಾಲು ಕುಡಿಯುವುದಷ್ಟೇ ಪಾಪ ಮರಿಗಳು; ಬೇರೆ ಅನ್ನ, ಹಾಲು ಎಂತ ಮೂಸುವುದಿಲ್ಲ" ಎಂದೇನೋ ಗೊಣಗುತ್ತ ಸಂಗೀತಾ ರೂಮೊಳಗೆ ಬಂದು ಮರಿಗಳನ್ನು ದುಬುದುಬು ಕೈಚೀಲಕ್ಕೆ ಹಾಕಿ ಭಾರವೊಂದನ್ನು ಕಳೆದುಕೊಳ್ಳುವಂತೆ ಬಾಯಮ್ಮನ ಕೈಗೆ ದಾಟಿಸಿದಳು. “ಸಂಗೀತಮ್ಮಾ, ಕೆಂಚಿ ಬೆಕ್ಕು ನಮ್ಮನೆಗೂ ಬರುತ್ತದೆ. ಮರಿಗಳು ಅಲ್ಲೇ ಹಾಲು ಕುಡಿಯುತ್ತವೆ, ನೀವೆಂತ ತಲೆಬಿಸಿ ಮಾಡಬೇಡಿಯಪ್ಪಾ” ಎನ್ನುತ್ತ ಸರಸರನೆ ಬಾಯಮ್ಮ ಗೇಟು ದಾಟಿ ಹೋದಾಗ ಸಂಗೀತಾ ರಪ್ಪನೆ ಬಾಗಿಲು ಮುಚ್ಚಿ ಬಂದು ಸೋಫಾದಲ್ಲಿ ಕುಕ್ಕರಿಸಿದಳು. ಯಾಕೋ ತಲೆಸುತ್ತು ಬಂದಂತಾಗಿ ಅಡುಗೆಮನೆಗೆ ಹೋಗಿ ಹಾಲು ಬಿಸಿ ಮಾಡಿಕೊಂಡು ಕಾಫಿ ಡಿಕಾಕ್ಷನ್ ಬೆರೆಸಿ ಚೂರೇ ಚೂರು ಬೆಲ್ಲ ಹಾಕಿ ಕಲಕಿ ಕುಡಿಯುತ್ತ, ಸಣ್ಣ ಭಯ ಆವರಿಸತೊಡಗಿತು. 'ಇನ್ನು ಸಂಜೆ ಮನೆಗೆ ಬಂದು ಉತ್ಸಾಹದಲ್ಲಿ ಬೆಕ್ಕಿನ ಮರಿಗಳ ಬುಟ್ಟಿ ಇಣುಕುವ ಮಕ್ಕಳಿಗೇನು ಹೇಳುವುದು' ಎಂಬ ತಲೆಬಿಸಿಯೊಂದಿಗೆ 'ಕೆಂಚಿಬೆಕ್ಕಿಗೆ ಬಾಯಮ್ಮನ ಮನೆಯಲ್ಲಿ ತನ್ನ ಮರಿಗಳಿದ್ದಾವೆಂದು ಹೇಗೆ ಗೊತ್ತಾಗುತ್ತದೆ ಅಯ್ಯೋ! ಎಂತಾ ಕೆಲಸ ಮಾಡಿಬಿಟ್ಟೆ ತಾನು... ಯಾವುದೋ ಮಾಯಕದಲ್ಲಿ ಎಲ್ಲ ನಡೆದುಹೋಯಿತಲ್ಲಾ' ಎಂಬೆಲ್ಲ ಸರಣಿ ಆಲೋಚನೆಗಳು ದಾಳಿಯಿಟ್ಟು ಊಟವೂ ಮಾಡಲಾಗದೆ ಮಂಚದಲ್ಲಿ ಉರುಳಿಕೊಂಡವಳಿಗೆ ನಿದ್ದೆಯೋ ಎಚ್ಚರವೋ ಗೊತ್ತಿಲ್ಲದ ಸ್ಥಿತಿಯಲ್ಲಿ ಹಾಗೇ ಸಂಜೆಯಾಯಿತು. ದಡಬಡಿಸಿ ಎದ್ದು ಗಂಟೆ ನೋಡಿ ಎದುರಿನ ಬಾಗಿಲು ತೆರೆದಿಟ್ಟು ಇನ್ನೇನು ಮುಖ ತೊಳೆದು ತಿಂಡಿ ಮಾಡಲು ತೊಡಗಿಕೊಳ್ಳಬೇಕು ಎನ್ನುವಷ್ಟರಲ್ಲಿ ಬೆಕ್ಕಿನ ಓನರ್ ತಾತ ಬಾಗಿಲ ಹತ್ತಿರ ಕಾಣಿಸಿಕೊಂಡರು. “ಸಂಗೀತಮ್ಮಾ, ಬೆಕ್ಕಿನ ಮರಿಗಳನ್ನು ಬಾಯಮ್ಮನಿಗೆ ಕೊಟ್ಟಿರಾ? ನನ್ನನ್ನು ಕೇಳದೆ ಯಾಕೆ ಹೀಗೆ ಮಾಡಿದಿರಿ ನೀವು? ಅಲ್ಲಿ ಬೆಕ್ಕು ಬಂದು ಕೂಗಿ ನನ್ನ ಜೀವ ತಿನ್ನುತ್ತಿದೆ ನೋಡಿ. ನಾನೆಂತ ಮಾಡಬೇಕು ಈಗ ಹೇಳಿ ನೋಡುವಾ ಆ ಬಾಯಮ್ಮ ಬೇರೆ ಯಾರಿಗೋ ಕೊಟ್ಟಾಯ್ತಂತೆ ಮರಿಗಳನ್ನು...” ಮುಂತಾಗಿ ಕೂಗಾಡಿ ಹೋದಾಗ ಸಂಗೀತಾ ಉದ್ವೇಗಕ್ಕೊಳಗಾಗಿ ಸೂರ್ಯನಿಗೆ ಕರೆ ಮಾಡಿ ಎಲ್ಲವನ್ನೂ ಹೇಳಿಕೊಂಡು ಅತ್ತಳು. “ಅಯ್ಯೋ, ಇಲ್ಲಿ ಆಫೀಸಲ್ಲಿ ಬೇಕಾದಷ್ಟು ಸಮಸ್ಯೆಗಳು ನನ್ನ ತಲೆ ಕೊರೆಯುತ್ತಿವೆ; ಮಧ್ಯದಲ್ಲಿ ನಿಂದೆಂತದು ಬೆಕ್ಕಿನ ಪುರಾಣ? ಸ್ವಲ್ಪ ಸುಮ್ಮನಿರು ಮಾರಾಯ್ತಿ. ಆಮೇಲೆ ನೋಡುವಾ..." ಅವನು ಫೋನಿಟ್ಟಾಗ ಕಣ್ಣೊರೆಸಿಕೊಂಡು ಉಪ್ಪಿಟ್ಟು ಮಾಡಲು ಅಡುಗೆ ಮನೆಗೆ ಹೋದಳು.
ತುಸುಹೊತ್ತಿಗೆ ಕಿಟಕಿಯಲ್ಲಿ ಎಂತದೋ ವಿಚಿತ್ರ ಶಬ್ದ ಕೇಳಿದಂತಾಗಿ ಹಣಕಿ ನೋಡಿದರೆ ಶೆಟ್ಟರ ಮನೆ ಕಾಂಪೌಂಡ್ ಮೇಲೆ ಕೂತು ಕೆಂಚಿ ಕೂಗುತ್ತಿದೆ! ಆ ಶಬ್ದ ಅದರ ಬಾಯಿಂದಲೇ ಬರುತ್ತಿರುವುದೋ ಅಲ್ಲವೋ ಅಂತ ಅನುಮಾನ ಪಡುವಷ್ಟು ವಿಚಿತ್ರವಾಗಿದೆ ಸ್ವರ! ಗಂಟಲಲ್ಲಿ ಮೂಳೆಯೋ, ಎಂತದೋ ಸಿಕ್ಕಿಹಾಕಿಕೊಂಡಂತೆ; ಗಂಡುಬೆಕ್ಕು ಮೊರೆವಂತೆ ಒಂದೇ ಸಮನೆ ಹುಯ್ಯಲಿಡುತ್ತಿದೆ. ಚೂರು ಹೊತ್ತಲ್ಲಿ ತೆರೆದ ಬಾಗಿಲ ಮೂಲಕ ಕೆಂಚಿ ಮನೆಯೊಳಗೂ ಬಂದು ರೂಮಲ್ಲೆಲ್ಲ, ಮರಿಗಳಿಗಾಗಿ ಹುಡುಕಾಡತೊಡಗಿತು. “ಕೆಂಚಿ ಬಾ” ಅಂತ ಹಿಡಿಯಲು ಹೋದರೆ ಸಂಗೀತಾಳ ಕೈಗೆ ಕಚ್ಚಿ ಓಡಿಹೋಯಿತು. ಅವಳ ಹೊಟ್ಟೆಯಲ್ಲಿ ಸಂಕಟದ ಅಲೆಗಳೆದ್ದು ಉಪ್ಪಿಟ್ಟು ಮಾಡಲಾಗದೆ ಸುಮ್ಮನೆ ಮನೆಮುಂದಿನ ಮೆಟ್ಟಿಲಿನಲ್ಲಿ ಕುಳಿತುಕೊಂಡು ರಪರಪನೆ ರಾಚತೊಡಗಿದ ಮಳೆ, ಕೆಂಪು ಹಳ್ಳವಾಗಿ ಹರಿಯುತ್ತಿದ್ದ ಮನೆ ಮುಂದಿನ ಸಪೂರ ತೋಡನ್ನು ನೋಡತೊಡಗಿದಳು.
ಕೆಲವು ಧೂರ್ತ ದಿನಗಳಿರುತ್ತವೆ; ಅದೆಷ್ಟು ಕಾಲದಿಂದ ಹೊಂಚು ಹಾಕಿ ಕಾದುಕೊಂಡಿರುತ್ತವೋ, ಅದೇನು ಪ್ರತೀಕಾರದ ವಾಂಛೆಯನ್ನು ಮೈ ತುಂಬಾ ಹೊತ್ತಿಕೊಂಡಿರುತ್ತವೋ ಗೊತ್ತಿಲ್ಲ. ನಮ್ಮ ಪ್ರಯತ್ನವನ್ನೂ ಮೀರಿ ಏನೇನೊ ನಡೆದುಬಿಟ್ಟಿರುತ್ತದೆ! ಏನೋ ಮಾಡಲು ಹೋಗಿ ಇನ್ನೇನೋ ಘಟಿಸಿ ಕಾಲ ಒಬ್ಬ ಮನುಷ್ಯನಂತೆ ಆಟವಾಡುತ್ತಾ ಯಾವುದೋ ಅರಿಯದ ಜಾಲದಲ್ಲಿ ಬಂಧಿಯಾಗಿಸಿ ತಮಾಷೆ ನೋಡತೊಡಗುತ್ತದೆ. ಆ ಬೆಳಗು ಸಂಗೀತಾಳಿಗೆ ಅಕ್ಷರಶಃ ಎದೆ ಬಿರಿದಿತ್ತು. ಇಡೀ ರಾತ್ರಿ ಕೆಂಚಿಯ ಮೊರೆತ ಕರುಳ ಹಿಂಡಿ ಆ ತಾಯಿ-ಮರಿಗಳ ಅಗಲಿಕೆಗೆ ತಾನೇ ಕಾರಣನಾದೆನೋ ಏನೋ ಎಂಬ ಅಳುಕು ಕೊರೆದು ತಬ್ಬಲಿಭಾವವೊಂದು ಒಳಸೇರಿ ಯಾರಾದರೂ ಮಾತಾಡಿಸಿದರೆ ಸಾಕು, ಅತ್ತುಬಿಡುವಷ್ಟು ಸೋತಿದ್ದಳು ಸಂಗೀತಾ. ಸಂಜೆ ಬಾಯಮ್ಮ ಹೇಳಿದ ಮಾತು ತಿರುತಿರುಗಿ ಕೇಳಿದಂತಾಗುತ್ತಿತ್ತು. “ಬೆಕ್ಕು ಈ ಪಾಟಿ ಕೂಗುತ್ತಿದೆಯಲ್ಲಾ... ಮರಿಗಳನ್ನು ಅದಕ್ಕೆ ತೋರಿಸಿ ಬಾಯಮ್ಮಾ” ಎಂದು ಅನುನಯದಿಂದ ಕೇಳಿದರೆ “ಮರಿಗಳಾ? ಅವೆಲ್ಲಿದಾವೆ? ಆಗಲೇ ಕೊಟ್ಟಾಯ್ತಲ್ಲ! ನೇರಳೆ ಮನೆಯ ಶರ್ಮಿಳಾ ಬೇಕು ಅಂದಳು; ಕೊಟ್ಟುಬಿಟ್ಟೆ” ಅಂದವರೇ ನೇರಳೆ ಮನೆಯ ಚೆಲುವೆಗೆ ಆ ಬೆಕ್ಕುಗಳ ಅಗತ್ಯವೇನು ಎಂಬುದನ್ನು ಸ್ವಾರಸ್ಯಕರ ಧಾಟಿಯಲ್ಲಿ ಸಿನಿಮಾ ಕತೆ ಹೇಳುವವರಂತೆ ಒಪ್ಪಿಸಿಬಿಟ್ಟಿದ್ದರು. ಶರ್ಮಿಳಾ ಎನ್ನುವ ಆ ಚೆಲುವೆಯ ತಮ್ಮನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾವಂತೆ. ಆದರೆ ಆ ಮನುಷ್ಯ ಹೆಚ್ಚಾಗಿ ಇರುವುದು ಕಡಲತಡಿಯ ಅವನ ಪ್ರೇಯಸಿಯ ಊರಿನಲ್ಲಿ. ಆ ಪ್ರೇಯಸಿಯ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೆಂಚಿಬೆಕ್ಕಿನ ಮರಿಗಳನ್ನು ಒಯ್ದು ಕೊಟ್ಟನಂತೆ. ಈ ಕಾರಣಕ್ಕೇ ಗಡಿಬಿಡಿಯಲ್ಲಿ ಬೆಕ್ಕಿನ ಮರಿಗಳನ್ನು ಬಾಯಮ್ಮ ಕೊಂಡುಹೋದದ್ದಂತೆ. “ಬೇಜಾರಾಗ್ಬೇಡಿ ಸಂಗೀತಮ್ಮ, ನಾನೊಂದು 'ಪುಣ್ಯಕಾರ್ಯ' ಮಾಡುವ ಅಂತ ಹಾಗೆ ಮಾಡಿದೆ. ಕೆಂಚಿಬೆಕ್ಕು ನಾಲ್ಕು ದಿನದಲ್ಲಿ ಎಲ್ಲ ಮರೆತು ನೆಮ್ಮದಿಯಾಗಿರುತ್ತದೆ. ಒಂದೆರಡು ಮೀನುಮಂಡೆ ಹಾಕಿ ಅದನ್ನು ಸರಿಮಾಡುವಾ” ಎಂದು ಬಾಯಮ್ಮ ವಿಕೃತವಾಗಿ ನಕ್ಕಾಗಿ ಕೈಯ್ಯಲ್ಲಿದ್ದ ಹಾಲಿನ ಚೊಂಬಲ್ಲೇ ಅವರ ತಲೆಗೆ ಕುಟ್ಟಬೇಕಿನ್ನಿಸಿ ಸಂಗೀತಾ ಮರುಮಾತಾಡದೆ ಮನೆಯೊಳಗೆ ಬಂದಿದ್ದಳು. ಈಗ ಅವಳ ಮುಂದಿದ್ದ ದೊಡ್ಡ ಪ್ರಶ್ನೆಯೆಂದರೆ ಆಗಿ ಹೋದ ಅಚಾತುರ್ಯವನ್ನು ಸರಿಮಾಡುವ ಬಗೆ ಹೇಗೆ ಎಂಬುದು. 'ಮರಿಗಳನ್ನು ಹೇಗಾದರೂ ಮಾಡಿ ವಾಪಸ್ಸು ತಂದು ಕೆಂಚಿಬೆಕ್ಕಿಗೆ ಸಮಾಧಾನ ಕೊಡಬೇಕು; ಪಾಪ, ಹಾಲು ಕುಡಿಯುವ ಎರಡು ಮರಿಗಳೂ ಕಣ್ಣು ಕಾಣದೆ ಹೊರಟುಹೋದರೆ ಆ ತಾಯಿ ಜೀವಕ್ಕೆ ಏನಾಗಬೇಕು' ಎಂದೆಲ್ಲ ಆಲೋಚಿಸಿ ಸಂಗೀತಾ ಹಿಂದೆ ಮುಂದೆ ನೋಡದೆ ಸೀದಾ ನೇರಳೆಮನೆ ಮುಂದೆ ನಿಂತು ಬಾಗಿಲು ತಟ್ಟಿದಳು. ಕೆಂಪು ಸೀರೆಯುಟ್ಟು ಹೊರಬಂದ ಚೆಲುವೆ ಕೆಲಸಕ್ಕೆ ಹೊರಟಿದ್ದಳೆನಿಸುತ್ತದೆ, ಅವಸರದಲ್ಲೇ ಏನು, ಎತ್ತ ಎಂದೆಲ್ಲ ವಿಚಾರಿಸಿದಾಗ ಸಂಗೀತಾ ಬೆಕ್ಕಿನ ಮರಿಗಳ ವಿಷಯ ತೆಗೆದು “ದಯವಿಟ್ಟು ವಾಪಸ್ಸು ತಂದುಕೊಡಿ" ಎಂದು ಕಣ್ಣೀರಿಟ್ಟು ಬೇಡಿಕೊಂಡಳು. “ಇದೆಲ್ಲ ಪಾರುಪತ್ಯ ನಿಮಗ್ಯಾಕೆ? ಓನರ್ ಅಜ್ಜನ ಬಳಿ ನಾನು ಹೇಳುತ್ತೇನೆ. ನೀವು ಸುಮ್ಮನೆ ಹೋಗಿ ನಿಮ್ಮ ಕೆಲಸ ನೋಡಿ” ಚೆಲುವೆ ಉಡಾಫೆಯ ಮಾತಾಡಿದಾಗ ಸಂಗೀತಾಗೆ ಸಿಟ್ಟು ಬಂದು “ಕರುಣೆಯಿಲ್ಲದ ಜನರು, ಇನ್ನೂ ಅಮ್ಮನ ಹಾಲು ಕುಡಿಯುವ ಮರಿಗಳನ್ನು ಅಷ್ಟು ಬೇಗ, ತೆಗೆದುಕೊಂಡು ಹೋಗಿ ಇವರೆಂತ ದರ್ಬಾರ್ ಮಾಡುವುದು... ತಾಯಿಯ ಕಷ್ಟ ಅರ್ಥವಾಗುವುದಿಲ್ಲವಾ” ಎಂದೆಲ್ಲ ಬಾಯಿತಪ್ಪಿ ಹೇಳಿಬಿಟ್ಟಳು. ಚೆಲುವೆ ಮುಖ ಊದಿಸಿಕೊಂಡು ರಪ್ಪನೆ ಬಾಗಿಲು ಹಾಕಿಕೊಂಡಾಗ ತನಗೆ ಇನ್ನೂ ಬೇಕಾದಷ್ಟು ಕಾದಿದೆ ಎನ್ನುವುದು ಆ ಕ್ಷಣಕ್ಕೆ ಸಂಗೀತಾಗೆ ಅರ್ಥವಾಗಲಿಲ್ಲ.
ಕೆಂಚಿಬೆಕ್ಕಿನ ರೋದನದ ಗುಂಗಿನಲ್ಲೇ ಬೆಳಿಗ್ಗೆಯ ಕೆಲಸಗಳನ್ನು ಮುಗಿಸಿ ನಿಂತಲ್ಲಿ ನಿಲ್ಲಲಾರದೆ ಕೂತಲ್ಲಿ ಕೂರಲಾರದೆ ಸಂಗೀತಾ ಚಡಪಡಿಸುತ್ತಿದ್ದಾಗ ಫೋನು ಸದ್ದಾಯಿತು. ಯಾವುದೋ ಹೊಸ ನಂಬರ್; ಯಾರಿರಬಹುದು ಎಂದುಕೊಳ್ಳುತ್ತಾ ತೆಗೆದುಕೊಂಡಾಗ “ನಾನು ಆಶಾ, ನೆನಪಾಯ್ತಾ ಯಾರಂತ?” ಆ ಕಡೆಯ ದನಿ ಗಡುಸಿನಿಂದ ಕೇಳಿತು. “ಇಲ್ಲ, ಯಾರು ?” ಎಂದಳು ಸಂಗೀತಾ. “ನಾನು, ನಿನ್ನ ಡಿಗ್ರಿ ಕ್ಲಾಸ್‍ಮೇಟ್ ಆಶಾ” ಎಂದು ಶುರುಮಾಡಿದ ಆ ಧ್ವನಿ ಕಾಲೇಜಿನ ದಿನಗಳನ್ನು ನೆನಪಿಸಿದಾಗ 'ಓ ಆಶಾ! ತುಂಬ ಚುರುಕಿನ ಹುಡುಗಿ, ಜೋರು ಕೂಡಾ' ಎಂದುಕೊಳ್ಳುತ್ತಾ ಕ್ಷೇಮ ಸಮಾಚಾರ ವಿಚಾರಿಸಿದಳು. “ಅದೆಲ್ಲ ಇರಲಿ, ನನಗೆ ಬೆಕ್ಕಿನ ಮರಿ ಕೊಡಬಾರದು ಅಂತ ನೀನು ಅಡ್ಡಗಾಲು ಹಾಕುತ್ತಿದ್ದೀಯಂತಲ್ಲ, ನಿನ್ನ ಗಂಟೇನಾದರೂ ಹೋಗುತ್ತದೆಯಾ? ಯಾರ್ಯಾರ ವಿಷಯ ನಿನಗೆಂತದಕ್ಕೆ? ನಿನ್ನ ಗಂಡ ಸೂರ್ಯ ನಮ್ಮ ಆಫೀಸಲ್ಲೇ ನನ್ನ ಕೈಕೆಳಗೆ ಕೆಲಸ ಮಾಡುವುದು. ನೀನು ಡಿಗ್ರಿಯಲ್ಲಿದ್ದಾಗ ಅಶೋಕನ ಜೊತೆ ತಿರುಗಾಡಿದ್ದು, ಆಮೇಲೆ ಅವನು ಮದುವೆ ಆಗದೆ ನಿನ್ನ ಪಪ್ಪ, ಅಮ್ಮ ಇದನ್ನೆಲ್ಲ ಮುಚ್ಚಿಟ್ಟು ಸೂರ್ಯನಿಗೆ ನಿನ್ನನ್ನು ಕಟ್ಟಿದ್ದು ಎಲ್ಲ ಹೇಳಿಬಿಡಲಾ?" ಆಶಾ ನೇರವಾಗಿ ಕೇಳಿದಾಗ ಸಂಗೀತಾಗೆ ತಲೆ ತಿರುಗಲು ಶುರುವಾಗಿ ಫೋನ್ ಕಟ್ ಮಾಡಿದಳು. “ಅಯ್ಯೋ ದೇವರೇ... ಇದೆಲ್ಲ ಏನು ? ವಿಧಿ ಏನೇನೋ ಸಂಚು ಹೂಡಿ ನನ್ನನ್ನು ಸಿಕ್ಕಿಸಿಹಾಕಲು ನೋಡುತ್ತಿದೆಯಲ್ಲಾ” ಅನ್ನಿಸಿ ಸಂಗೀತಾ ಕಕ್ಕಾಬಿಕ್ಕಿಯಾದಳು. 'ಹೌದು, ಅಶೋಕನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು ನಿಜ, ಕೊನೆಗೆ ಅವನ ಮನೆಯವರು ತನ್ನನ್ನು ಒಪ್ಪದೆ, ತನ್ನ-ಅವನ ಮದುವೆ ಕನಸಿನ ಮಾತಾಗಿದ್ದೂ ನಿಜ; ಅಪ್ಪ ಅಮ್ಮನ ಒತ್ತಾಯಕ್ಕೆ ಸೂರ್ಯನನ್ನು ಮದುವೆಯಾದದ್ದು. ಆದರೆ ಅವೆಲ್ಲ ಈಗ, ಹೀಗೆ ಈ ಕೆಂಚಬೆಕ್ಕಿನ ಮರಿಗಳ ವಿಷಯಕ್ಕೆ ಗೋರಿಯಿಂದೆದ್ದು ಬಂದು ತನ್ನನ್ನು ಕಾಡುತ್ತವೆ ಎಂದು ಸಂಗೀತಾ ಎಷ್ಟು ಮಾತ್ರಕ್ಕೂ ಯೋಚಿಸಿರಲಿಲ್ಲ. ಆಶಾ ಬ್ಲಾಕ್‍ಮೇಲ್ ತಂತ್ರ ಉಪಯೋಗಿಸುತ್ತಿದ್ದಾಳಲ್ಲ; ಎಷ್ಟು ಜೋರಿದ್ದಾಳಪ್ಪಾ, ಯಾವ ವಿಷಯಕ್ಕೆ ಯಾವ ವಿಷಯ ಛೇ! ಈ ದರಿದ್ರ ಪ್ರಪಂಚದಲ್ಲಿ ಬದುಕುವುದೇ ಕಷ್ಟ ಅಂತೆಲ್ಲ ಯೋಚಿಸುತ್ತ ಹೋದಂತೆ ಸಂಗೀತಾಗೆ ಹೆದರಿಕೆಯಾಗತೊಡಗಿತು. ಇನ್ನು ಈ ಆಶಾ ಇಲ್ಲಸಲ್ಲದ್ದೆಲ್ಲ ಕಟ್ಟಿ ಸೂರ್ಯನ ಮುಂದೆ ಹೇಳಿದರೆ... ಮೊದಲೇ ಎದುರುಸಿಟ್ಟು, ದುಡುಕು ಬುದ್ಧಿಯ ಅವನು ತನ್ನನ್ನು, ಮಕ್ಕಳನ್ನು ತವರಿಗೆ ಕಳಿಸಿಬಿಟ್ಟರೆ... ಅಥವಾ "ಯಾಕೆ ಇಷ್ಟು ದಿನ ಎಲ್ಲ ಮುಚ್ಚಿಟ್ಟೆ" ಎಂದು ಹಿಂಸೆ ಕೊಡಲು ಆರಂಭಿಸಿದರೆ...! 'ರೆ' ಪ್ರಪಂಚದ ಚಿಂತನೆಗಳು ಸಂಗೀತಾಳ ಮನಸ್ಸು ಕೆಡಿಸಿ ಅವಳ ನೆಮ್ಮದಿಯನ್ನು ನೆಲಸಮ ಮಾಡಿಬಿಟ್ಟವು. ತನ್ನ ಬದುಕು ಮೂರಾಬಟ್ಟೆಯಾಗುವ ದಿನಗಳು ತೀರಾ ಹತ್ತಿರಕ್ಕೇ ಬಂದಂತೆ ಭ್ರಮೆಯಾಗಿ ನಿಂತ ನೆಲ ಕುಸಿಯುತ್ತಿರುವಂತೆ ಕಂಡಿತು ಅವಳಿಗೆ..
****
ನೆವಕ್ಕೆ ಮೆಟ್ಟಿಲಿನಿಂದ ಜಾರಿ ಬಿದ್ದು ತಲೆಗೆ ಒಂಚೂರು ಪೆಟ್ಟಾಗಿ ಇಪ್ಪತ್ತೆರಡು ದಿನಗಳ ಕಾಲ ಹೊರಪ್ರಪಂಚದ ಗೋಜೇ ಇಲ್ಲದೆ ಕೋಮಾಕ್ಕೆ ಹೊರಟುಹೋಗಿ ಬದುಕುವುದೇ ಇಲ್ಲವೇನೋ ಎಂದು ಎಲ್ಲರೂ ತೀರ್ಮಾನಿಸಿದ್ದಾಗ, ಎಚ್ಚರಗೊಂಡು ಸಂಗೀತಾ ಎದ್ದುಬಂದ ದಿನಕ್ಕೆ ಆಗಲೇ ಒಂದು ವರ್ಷ. ಯಾವುದೋ ಬೆಕ್ಕಿನ ಮರಿಗಳ ಕ್ಷುಲ್ಲಕ ವಿಚಾರಕ್ಕೆ ಎಷ್ಟೆಲ್ಲ ತಲೆಕೆಡಿಸಿಕೊಂಡು ಮತ್ತೆ ಬಾರದ ಲೋಕಕ್ಕೆ ಹೊರಟುಬಿಡುವುದರಲ್ಲಿದ್ದ ಹೆಂಡತಿ ಮರಳಿ ದೊರೆತದ್ದು ಪವಾಡದಂತೆ ಕಂಡು ಅವಳಲ್ಲಿ ಹೊಸ ಪ್ರೀತಿ ಹುಟ್ಟಿತ್ತು ಸೂರ್ಯನೊಳಗೆ. ಸಾವಿನ ಹೊಟ್ಟೆಯೊಳ ಹೊಕ್ಕು ಹೊರಬಂದ ಹೆಂಡತಿಯ ಜೀವ ತನಗೆ, ಮಕ್ಕಳಿಗೆ ಎಷ್ಟು ಮುಖ್ಯ ಎನ್ನುವುದು ಅವನಿಗೆ ಅರಿವಾಗಿತ್ತು! ಕೆಂಚಿ ಬೆಕ್ಕಂತೂ ಹಳೆಯ ದುಃಖವನ್ನೆಲ್ಲ ಮರೆತು ಮತ್ತೆ ಮರಿಯಿಟ್ಟು ಸಂಗೀತಾ, ಬಾಯಮ್ಮ, ಸೂರ್ಯ, ಮುಂತಾದವರಿಗೆಲ್ಲರಿಗೂ ನೆಮ್ಮದಿ ಕೊಟ್ಟಿತ್ತು. ಆಶಾಳ ಮನೆಗೆ ಪ್ರಯಾಣಿಸಿದ್ದ ಕೆಂಚಿಯ ಮೊದಲ ಮರಿಗಳು ಈಗ ಹೇಗಿದ್ದಾವೋ ಯಾರಿಗೂ ಗೊತ್ತಿಲ್ಲವಾದರೂ ಕಾಲ ಸಾಗುತ್ತಲೇ ಇತ್ತು. ತುಸು ತೂಕಡಿಸುತ್ತ, ತುಸು ಎಚ್ಚರಿಸುತ್ತ!
ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು.
ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) ,
ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
More About Author