ದಿನ
ಗೋಡೆಯ ಮೊಳೆಗೆ ಅಂಗಿ ಮತ್ತು ಪ್ಯಾಂಟ್ ನೇತಾಕುತ್ತಿದ್ದೆ
ಇವತ್ತು
ಅವುಗಳೊಂದಿಗೆ ಹೃದಯವನ್ನು ನೇತು ಹಾಕಿದೆ
ಸೀದಾ ಬಚ್ಚಲಿಗೆ ಹೋದೆ
ಕೈ ಕಾಲು ಮುಖ ತೊಳೆದುಕೊಂಡೆ
ಮೈ ತೊಳೆದುಕೊಂಡಷ್ಟು
ಸರಳ ಸುಲಭವಲ್ಲ
ಮನಸ್ಸು ತೊಳೆದುಕೊಳ್ಳುವುದು
ಅಮ್ಮ ಬಿಸಿಯಾದ ಚಹಾವನ್ನು ಮುಂದಿಟ್ಟು ಸಾರಿಗೆ ಒಗ್ಗರಣೆ ಕೊಡಲು ಬೆಳ್ಳುಳ್ಳಿ ಸುಲಿಯಲು ಪಡಸಾಲೆಗೆ ಹೋದಳು
ನಾನು ಚಹಾ ಕಪ್ಪನ್ನು ಹಿಡಿದು
ಮಾಳಿಗೆ ಮೇಲೆ ಹೋದೆ
ಸಂಜೆ ಆರು ಮಳೆಗಾಲದ ಹೊತ್ತು ಹನುಮಪ್ಪನ ಗುಡಿ ಮೈಕಿಂದ ಈ ಧರೆಯ ಭೋಗವ ಬಿಟ್ಟು ಬರ್ತೀರಾ ಇಲ್ಲೆ ಇರ್ತೀರಾ ಹಾಡು
ಧರೆಯ ಮೇಲಿನ ಭೋಗವ ಬಿಟ್ಟು ಹೋಗುವುದು ಅಷ್ಟು ಸುಲಭವ, ಸಾಧ್ಯವ ಚಹಾ ಕಪ್ಪು ತುಟಿಗೆ ಇಟ್ಟು ಯೋಚಿಸುತ್ತಿದ್ದೆ
ತಣ್ಣಗೆ ಗಾಳಿ ಬೀಸಿತು
ಸಣ್ಣಗೆ ಮಳೆ ಸುರಿಯಲು ಆರಂಭಿಸಿತು
ಚಹಾದ ಕೊನೆ ಗುಟುಕು ಹೀರಿ ಮೈ ಮುರಿದೆ
ನನಗೆ ಎದ್ದು ಹೋಗುವ ಧಾವಂತವಾಗಲಿ ಅವಸರವಾಗಲಿ ಇಲ್ಲ
ಮಳೆಯಲ್ಲಿ ನೆನೆಯುವುದು ಖುಷಿ ನನಗೆ ಅದರಲ್ಲೂ ಏಕಾಂಗಿಯಾಗಿ
ಮಳೆಗೆ ಮೈಯೊಡ್ಡಿದೆ
ಬಯಲ ಬೆಟ್ಟ ಗುಡ್ಡಗಳಂತೆ
ಗಿಡ ಮರಗಳಂತೆ
ಕಣ್ಣು ಮುಚ್ಚಿದೆ
ಅದೆಲ್ಲಿಂದಲೋ ನೀನು ನುಸುಳಿ ಬರುತ್ತಿಯ
ಅದು ಹೇಗೆ
ಹೃದಯವನ್ನು ಈಗಾಗಲೇ ನೇತು ಹಾಕಿರುವೆ....
-ಅಭಿಷೇಕ ಬಳೆ ಮಸರಕಲ್
ಅಭಿಷೇಕ್ ಬಳೆ ಮಸರಕಲ್
ಯುವ ಬರಹಗಾರ ಕವಿ ಅಭಿಷೇಕ್ ಬಳೆ ಮಸರಕಲ್ ಜನಿಸಿದ್ದು 1994 ನ. 30ರಂದು. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದವರು. ವಿಜ್ಞಾನ ಪದವೀಧರರು. ಹೈಸ್ಕೂಲ್ ನಲ್ಲಿರುವಾಗಲೇ ’ಕರ್ನಾಟಕ ಮಾತ” ಕವನ ಸಂಕಲನ ಪ್ರಕಟಿಸಿದ್ದರು. ಅಮ್ಮ ಮತ್ತು ಇತರೆ ಕವಿತೆಗಳು, ಗೋರಿ ಮೇಲಿನ ಹೂ ಇವರ ಪ್ರಮುಖ ಕೃತಿಗಳು. ಸಿರಿಗನ್ನಡ ವಚನ ಕಲ್ಯಾಣ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಕವನ ಕುಸುರಿ ಪ್ರಶಸ್ತಿ, ಯುವ ಬರಹಗಾರ ಪ್ರಶಂಸತಾ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.
More About Author