ನನ್ನೊಳಗೆ ಮಾತುಗಳು ಹುಟ್ಟಲಾಗದ ಹೊತ್ತು
ತಪ್ತ ಮೌನ, ಆಳದ ಬಿಕ್ಕು, ಬಿಸಿಯುಸಿರು
ನಿನ್ನ ತಾಗಲಾರದೇ ನನ್ನೊಳಗೇ ಉಳಿದು
ನಾಲ್ಕು ಗೋಡೆಗಳ ನಡುವೆ,
ಅಕ್ಕಪಕ್ಕ ಇದ್ದೂ ಅಪರಿಚಿತರಾದವು...
ಸಾನಿಧ್ಯ, ಸಾಂತ್ವನ, ಸಂತಸ, ಸಂಗಾತಗಳೆಲ್ಲ
ಮರೆತು ಮೇರೆಯಿಲ್ಲದ ಮೌನದಲ್ಲಿ
ನಾವಿಂದು ಸಾಧಿಸಿದ್ದೇವೆ,
ಜೊತೆಯಲ್ಲೇ ಇರುವ ಎರಡು ಜೀವಗಳು
ತಲುಪಬಹುದಾದ ಗರಿಷ್ಠ ಅಂತರ…
ಸಮತಟ್ಟಾದ ನೆಲದಲ್ಲೇ ಅರಳಿದ್ದ ನಾವು
ಎಂದು ಕಟ್ಟಿಕೊಂಡೆವು ಹತ್ತಿಳಿಯಲಾಗದ,
ಮೆಟ್ಟಿಲುಗಳೇ ಇಲ್ಲದ,
ಈ ಹತ್ತಾರು ಮಹಡಿಗಳ, ಅಳಿಸಲಾಗದ
ಮೇಲರಿಮೆಗಳ ಮಹಾಸೌಧ?!
ತಪ್ಪು ಒಪ್ಪುಗಳ ತೂಗಿ ನ್ಯಾಯ ಮಾಡುವುದು ಹೇಗೆ??
ನಿನ್ನ ಮೂಗಿನ ನೇರಕ್ಕೆ ನಿನ್ನದೇ ತಕ್ಕಡಿ…
ನನ್ನ ಮೂಗಿನ ನೇರಕ್ಕೆ ನನ್ನದೇ ತಕ್ಕಡಿ!
ನಿದ್ದೆ ಬಾರದ ರಾತ್ರಿಗಳ ಕರಗಿಸುತ
ಕಂದಿದ ಕಣ್ಣುಗಳು ಯಾವ ಲೆಕ್ಕ?
ಮೇಲರಿಮೆ, ಮುನಿಸುಗಳ ತೂಕದ ಬೊಟ್ಟಿಗೆ!
ಚಿತ್ರ : ಎಸ್. ವಿಷ್ಣುಕುಮಾರ್
ಶ್ರುತಿ ಬಿ. ಆರ್.
ಕವಿ ಮನಸ್ಸಿನ ಯುವ ಪ್ರತಿಭೆ ಶ್ರುತಿ ಬಿ. ಆರ್. ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಕೆ.ಎ.ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನಸ ಗಂಗೋತ್ರಿಯ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್‍ಯಾಂಕ್ ಮತ್ತು ಐದು ಚಿನ್ನದ ಪದಕಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, 2017 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ. ಅವರ ಹಲವಾರು ಲೇಖನಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2008ರಲ್ಲಿ ಪ್ರಜಾವಣಿ ದೀಪಾವಳಿ ವಿಶೇಷಾಂಕದ ಕವನ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದ ಬಹುಮಾನ ದೊರೆತಿದೆ.
More About Author