ಕಾರ್ತಿಕದ ಕತ್ತಲಲಿ
ಬಸವಣ್ಣ ಬಂದ
ಆಕಾಶ ದೀಪದಂತೆ ;
ಅನಾಥರ ಬಾಳಿನಲಿ
ಬಂದೆ ಸಿಂಧು ಮಾಯಿ
ಭರವಸೆಯ ಜ್ಯೋತಿಯಂತೆ..
ಹೆತ್ತವರ ಪಾಲಿಗೆ
ಹೊರೆಯಾದವಳು
ಪತಿಯ ಮನೆಯಿಂದ
ಹೊರದೂಡಿದವಳು
ಮಕ್ಕಳ ಪ್ರೀತಿಗೆ
ನೊಂದು ಬೆಂದವಳು..
ಛಲ ಹೊಂದಿ ಮನದಿ
ಸಾಗಿದಳು ಮುಂದೆ
ಬಿಸುಟ ಮಕ್ಕಳಿಗೆ ತಾಯಿಯಾಗಿ
ಭಿಕ್ಷೆಯನು ಬೇಡಿ
ಸಲುಹಿದಳು ಮಾತೆ
ತನ್ನ ನಂಬಿದ ಮುಗ್ಧ ಮಕ್ಕಳಿಗಾಗಿ..
ನಿಷ್ಕಾಮ ಸೇವೆಯ
ಫಲವಂದು ಕೈಗೂಡಿ
ಜಗವೇ ತಿರುಗಿ ನೋಡುವಂತೆ..!
ಮಾಯಿಯ ಆಸರೆಯು
ಆಲದ ಮರದಂತೆ
ಭಧ್ರತೆಯ ವಿಶ್ವಾಸ ನೀಡಿತಂತೆ..!
ಮಾಗಿದ ಹಣ್ಣೊಂದು
ದೇವನ ಚರಣದಲಿ
ಕಳಚಿ ಬೀಳುವಂತಾಯ್ತೇ..
ಸಾರ್ಥಕ ಬದುಕಿನ
ನಿಸ್ವಾರ್ಥ ಜೀವಿಯು
ವಿಶ್ರಾಂತಿ ಪಡೆಯಲು ಹಂಬಲಿಸಿತೇ..?
ನಿನ್ನ ನೆನಪಿನಲಿಂದು
ಮುಂದೆ ಸಾಗುವೆವು
ನೀ ತೋರಿದಾ ಬೆಳಕಿನೆಡೆಗೆ..
ಮತ್ತೊಮ್ಮೆ ಹುಟ್ಟಿ ಬಾ
ನಮ್ಮ ಮಾಯಿ ನೀನು
ಕಾಯುವೆವು ನಮ್ಮ ಉಸಿರಿರುವವರೆಗೆ...
- ಹಮೀದಾಬೇಗಂ ದೇಸಾಯಿ
ಹಮೀದಾ ಬೇಗಂ ಬಾಬುರಾವ ದೇಸಾಯಿ
ಲೇಖಕಿ ಹಮೀದಾ ಬೇಗಂ ಬಾಬುರಾವ ದೇಸಾಯಿ ಮೂಲತಃ ಹುಕ್ಕೇರಿಯ ಯಮಕನಮರಡಿಯವರು. ಬಿಎಸ್ಸಿ, ಬಿ.ಇಡಿ ಪದವೀಧರರು. ವಿಜ್ಞಾನ ವಿಷಯದಲ್ಲಿ ಸಹ ಶಿಕ್ಷಕಿಯಾಗಿ ಒಟ್ಟು 38 ವರ್ಷಗಳ ಸೇವೆ ನಂತರ ಈಗ ನಿವೃತ್ತರು.
ಕೃತಿಗಳು : ನುಡಿಮುತ್ತುಗಳು ಪುಸ್ತಿಕೆ (ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನದಿಂದ ಆಯ್ದ ನುಡಿಗಳು), ಮನೋಗೀತೆ (ಕವನ ಸಂಕಲನ), ವಚನಾಂಜಲಿ (ಷಟ್ಪದಿಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರಿಂದ ಪುರಸ್ಕಾರ), ವಿಜ್ಞಾನ ವೈಚಾರಿಕ ಅಂಕಣ ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರಶಸ್ತಿ-ಪುರಸ್ಕಾರಗಳು: ಉತ್ತಮ ವಿಜ್ಞಾನ ಸಂಘಟನಾ ಶಿಕ್ಷಕಿ (1998), ಹುಕ್ಕೇರಿ ತಾಲೂಕು ಮಟ್ಟದ ಇಂದಿರಾ ಪ್ರಿಯದರ್ಶಿನಿ ಅತ್ಯುತ್ತಮ ಶಿಕ್ಷಕಿ (2001), ಅತ್ಯುತ್ತಮ ಜನಗಣತಿ ಸೇವೆಗಾಗಿ ಭಾರತ ಸರ್ಕಾರದಿಂದ ಸನ್ಮಾನ ಪತ್ರ ಮತ್ತು ರಜತ ಪದಕ, ಡಾ.ಸ.ಜ. ನಾಗಲೋತಿಮಠ ಪ್ರಶಸ್ತಿ ಮತ್ತು ಉತ್ತಮ ವಿಜ್ಞಾನ ಪ್ರಸಾರ ಸೇವೆಗಾಗಿ 2006ರಲ್ಲಿ ಜಿಲ್ಲಾ ಮಟ್ಟದಲ್ಲಿ, ಅತ್ಯುತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಭಾರತ ಸರ್ಕಾರದಿಂದ 2007-08ನೇ ಸಾಲಿಗಾಗಿ, ರಾಜ್ಯ ಮಟ್ಟದ ಕಾವ್ಯಸಿರಿ ಪ್ರಶಸ್ತಿ, ರಾಜ್ಯಮಟ್ಟದ ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ ಲಭಿಸಿವೆ.
More About Author