Date: 26-07-2024
Location: ಬೆಂಗಳೂರು
"ಸೋಜಿಗವೆಂದರೆ ಬಹುತೇಕ ಅನಕ್ಷರಸ್ಥ ಗ್ರಾಮೀಣ ಕಲಾವಿದರ ಈ ರಂಗಉಮೇದು, ಸಿನೆಮಾ ಮತ್ತು ಕಿರು ತೆರೆಗಳಿಗೆ ಅಡಸ್ಯಾಡುವ ವ್ಯಂಗ್ಯಮೂದಲಿಕೆಯ ರಂಗವಸ್ತುಗಳು. ಅಷ್ಟಲ್ಲದೇ ಇಡೀ ವೃತ್ತಿರಂಗ ಪ್ರಕಾರವನ್ನೇ ಹಗುರವಾಗಿ ನೋಡುವಂತಾಗಿರುವುದು ಸುಳ್ಳಲ್ಲ. ಒಂದು ಕಾಲದ ಗತಿಯಲ್ಲಿ "ವೃತ್ತಿರಂಗದ ಪಡದೆ, ಅದಿನ್ನೂ ಸುಡದೇ" ಅಂತ ಅಂದವರುಂಟು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣದಲ್ಲಿ ‘ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ’ ಕುರಿತು ಬರೆದಿರುವ ಲೇಖನ.
ಕರ್ನಾಟಕಾದ್ಯಂತ ದಾಖಲೆಯಂತೆ ವರ್ಷಕ್ಕೆ ಏನಿಲ್ಲವೆಂದರೂ ಹದಿನಾಲ್ಕು ಸಾವಿರಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಅಚ್ಚರಿ ಹುಟ್ಟಿಸುವ ಇದು ವರ್ತಮಾನದ ಅಸಾಮಾನ್ಯ ಸಾಂಸ್ಕೃತಿಕ ಸಂಗತಿಯೇ ಆಗಿದೆ. ಕನ್ನಡನಾಡಿನ ಹಳ್ಳಿಹಳ್ಳಿಗಳ ತುಂಬೆಲ್ಲ ಇವು ಸಂಭ್ರಮದಿಂದ ವರ್ಷಕ್ಕೊಮ್ಮೆ ಪ್ರತೀತಿಯಂತೆ ಜರುಗುವ ರಂಗನಾಟಕಗಳು. ಊರಜಾತ್ರೆ ಇಲ್ಲವೇ ಊರಮ್ಮನ ಹಬ್ಬ ಹರಿದಿನಗಳಲ್ಲಿ ಸಂದರ್ಭೋಚಿತವಾಗಿ ನಡೆಯುವ ನಾಟಕಗಳು. ಉಲ್ಲೇಖಾರ್ಹ ಸಂಗತಿಯೆಂದರೆ : ಸರ್ಕಾರದ ಯಾವುದೇ ರೀತಿಯ ಸಹಾಯವಿಲ್ಲದೇ ಜನರ ಹಣ ಮತ್ತು ಸಹಭಾಗಿತ್ವದಲ್ಲೇ ಜರುಗುವ ಜನಕೇಂದ್ರಿತ ರಂಗಸಂಸ್ಕೃತಿಯ ಲೋಕಸಂಭ್ರಮ ಇದಾಗಿದೆ.
ಆರೇಳು ಹಳ್ಳಿಗಳ ವ್ಯಾಪ್ತಿಯುಳ್ಳ ಪ್ರತಿಯೊಂದು ಗ್ರಾಮ ಪಂಚಾಯ್ತಿಯ ಕಡಿಮೆ ಎಂದರೂ ಎರಡು ಇಲ್ಲವೇ ಮೂರು ಹಳ್ಳಿಗಳಲ್ಲಿ ವರ್ಷಕ್ಕೆರಡೆರಡು ನಾಟಕಗಳು ಜನರಂಜನೆಯಾಗಿ ಜರುಗುತ್ತವೆ. ನಮ‌್ಮ ಗ್ರಾಮೀಣ ಹವ್ಯಾಸಿ ಕಲಾವಿದರು ಕನಿಷ್ಠವೆಂದರೂ ಒಂದೊಂದು ನಾಟಕಕ್ಕೆ ಮೂರ್ನಾಲ್ಕು ಲಕ್ಷ ರುಪಾಯಿ ಹಣ ಖರ್ಚು ಮಾಡುತ್ತಾರೆ. ಆ ಮೂಲಕ ಕರ್ನಾಟಕಾದ್ಯಂತ ಜನಸಾಮಾನ್ಯರ ಕೋಟಿಗಟ್ಟಲೇ ಹಣ ರಂಗಭೂಮಿಗಾಗಿ ಖರ್ಚಾಗುತ್ತದೆ. ನಾಟಕವೊಂದರ ಪ್ರದರ್ಶನಕ್ಕೆ ಹಳ್ಳಿಗಳಲ್ಲಿ ತಿಂಗಳುಗಟ್ಟಲೇ ತಾಲೀಮು, ತರಹೇವಾರಿ ಸಿದ್ದತೆಗಳು. ಅಲ್ಲೆಲ್ಲ ಅಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಮಗ್ಗಲುಗಳದ್ದೇ ರೋಚಕ ಕತೆಗಳು. ಅದು ಅವರ ಜವಾರಿ ಖುಷಿ ಮತ್ತು ಗ್ರಾಮ್ಯಜನ್ಯ ಸೊಗಡಿನ ಸಡಗರವೇ ಆಗಿರುತ್ತದೆ.
ಸೋಜಿಗವೆಂದರೆ ಬಹುತೇಕ ಅನಕ್ಷರಸ್ಥ ಗ್ರಾಮೀಣ ಕಲಾವಿದರ ಈ ರಂಗಉಮೇದು, ಸಿನೆಮಾ ಮತ್ತು ಕಿರು ತೆರೆಗಳಿಗೆ ಅಡಸ್ಯಾಡುವ ವ್ಯಂಗ್ಯಮೂದಲಿಕೆಯ ರಂಗವಸ್ತುಗಳು. ಅಷ್ಟಲ್ಲದೇ ಇಡೀ ವೃತ್ತಿರಂಗ ಪ್ರಕಾರವನ್ನೇ ಹಗುರವಾಗಿ ನೋಡುವಂತಾಗಿರುವುದು ಸುಳ್ಳಲ್ಲ. ಒಂದು ಕಾಲದ ಗತಿಯಲ್ಲಿ "ವೃತ್ತಿರಂಗದ ಪಡದೆ, ಅದಿನ್ನೂ ಸುಡದೇ" ಅಂತ ಅಂದವರುಂಟು. ಹೀಗೆ ರಂಗ ವಿದ್ವಾಂಸರಿಂದ ತಿರಸ್ಕೃತಗೊಂಡ ವೃತ್ತಿರಂಗದಲ್ಲಿ ಎಲ್ಲವೂ ಸರಿ ಇದೆ ಎಂಬ 'ಮುಗುಂ' ವಾದವೂ ನನ್ನದಲ್ಲ. ಅದೇನೇ ಇರಲಿ ವೃತ್ತಿರಂಗಭೂಮಿ ಅಪ್ಡೇಟ್ ಆಗದೇ ಇರಬಹುದು. ಆದರೆ ಕೆಲವು ಅಪಸವ್ಯಗಳ ನಡುವೆಯೂ ಅದರ ರಂಗಬೇರುಗಳು ಮಾತ್ರ ಲೋಕಮೀಮಾಂಸೆಯ ಪ್ರಬಲ ಪ್ರೀತಿಯನ್ನಂತೂ ಉಳಿಸಿಕೊಂಡಿವೆ.
ಆರೂವರೆ ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿರುವ ಕರ್ನಾಟಕದಲ್ಲಿ ಒಂದು ಸಮೀಕ್ಷೆಯ ಪ್ರಕಾರ ವರ್ಷಕ್ಕೆ ಹದಿನಾಲ್ಕು ಸಾವಿರಕ್ಕೂ ಹೆಚ್ಚು ನಾಟಕಗಳು ಸಹಜವಾಗಿ ಪ್ರದರ್ಶನಗೊಳ್ಳುತ್ತವೆ. ಹೆಚ್ಚಾಗಿ ಆಯಾ ಹಳ್ಳಿಯ ಹವ್ಯಾಸಿ ಕಲಾವಿದರೆ ರಚಿಸಿ, ನಿರ್ದೇಶಿಸಿ, ಅಭಿನಯಿಸುವ ಲೋಕಜ್ಞಾನದ ನಾಟಕಗಳವು. ನೀನಾಸಂ, ರಂಗಾಯಣ, ಇತರೆ ಯಾವುದೇ ರಂಗಶಾಲೆಗಳಲ್ಲಿ ಇವರು ತರಬೇತಿ ಪಡೆದವರಲ್ಲ. ಸ್ಥಳೀಯ ರಂಗಾಸಕ್ತ ಏಕಲವ್ಯ ಪ್ರತಿಭೆಗಳು. ಈ ನಾಟಕಗಳಿಗೆ ಪ್ರತಿಭಾಶಾಲಿ ರಂಗನಟಿಯರು ದೂರದ ದಾವಣಗೆರೆ, ಗದಗ, ಹುಬ್ಬಳ್ಳಿ, ತುಮಕೂರು, ಹಂಸನೂರು, ಇಲಕಲ್ ಮೊದಲಾದ ಶಹರಗಳಿಂದ ಆಗಮಿಸಿ ರಂಗ ಪ್ರಯೋಗಗಳನ್ನು ಸಂಪನ್ನಗೊಳಿಸುತ್ತಾರೆ. ಅವರೆಲ್ಲ ವೃತ್ತಿಪರ ಕಲಾವಿದೆಯರು. ಅವರು ಆಕರ್ಷಕ ಗೌರವಧನ ಪಡೆದುಕೊಂಡೇ ನಾಟಕಗಳನ್ನು ಯಶಸ್ವಿಗೊಳಿಸುತ್ತಾರೆ.
ನೆನಪಿರಲಿ : ಹಳ್ಳಿಗರ ಈ ಎಲ್ಲಾ ನಾಟಕಗಳು ಅಕ್ಷರಶಃ ಕಂಪನಿ ಶೈಲಿಯ ವೃತ್ತಿರಂಗಭೂಮಿಯ ನಾಟಕಗಳು. ಪ್ರಸಿದ್ಧ ನಾಟಕ ಕಂಪನಿ ಮತ್ತು ಹೆಸರಾಂತ ಸೆಲೆಬ್ರಿಟಿ ಕಲಾವಿದರೇ ನಮ್ಮ ಗ್ರಾಮೀಣ ಕಲಾವಿದರಿಗೆ ರೋಲ್ ಮಾಡೆಲ್. ಅಪ್ಪಿತಪ್ಪಿಯೂ ಅವರು ಪ್ರಯೋಗಶೀಲ ಆಧುನಿಕ ರಂಗಶೈಲಿಯ ಕಾರಂತ, ಕಾರ್ನಾಡ, ಕಂಬಾರ, ಲಂಕೇಶ್ ಮುಂತಾದವರ ನಾಟಕಗಳನ್ನು ಅಭಿನಯಿಸುವುದಿಲ್ಲ. ಅಷ್ಟಕ್ಕೂ ಅವು ಸಾಮಾನ್ಯ ಜನರಿಗೆ ಅರ್ಥವೂ ಆಗುವುದಿಲ್ಲ. ಹೀಗಾಗಿ ವೃತ್ತಿರಂಗಭೂಮಿಯ ವ್ಯಾಪ್ತಿ ಕೇವಲ ನಾಟಕ ಕಂಪನಿಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ.
ಜಗದಗಲ ಎಂಬಂತೆ ಅದರ ಕ್ಯಾನ್ವಾಸ್ ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿಕೊಂಡ ಬಹುಜನ ಬಾಹುಳ್ಯದ ರಂಗಸಂಸ್ಕೃತಿಯಾಗಿದೆ. ತನ್ಮೂಲಕ ವೃತ್ತಿ ರಂಗಭೂಮಿ ಜನಸಾಮಾನ್ಯರ ಮತ್ತು ಪ್ರಜಾಪ್ರಭುತ್ವವಾದಿ ನೆಲೆಯ ರಂಗಭೂಮಿಯೆಂದೇ ಗುರುತಿಸಿಕೊಂಡಿದೆ. ನಮ್ಮ ಬಹುಪಾಲು ರಂಗಭೂಮಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಸಂಸ್ಥೆಗಳು "ಜನಸಾಮಾನ್ಯರೆಡೆಗೆ" ಎಂಬ ಘೋಷಣೆ ಸ್ವಾಭಾವಿಕ. ಆದರವು ಜನಸಾಮಾನ್ಯರನ್ನು ಮುಟ್ಟುವುದೇ ಇಲ್ಲ. ಎರಡು ಸಣ್ಣ ನಿದರ್ಶನಗಳನ್ನು ಹೇಳುವುದಾದರೆ : ಕಲಬುರ್ಗಿ ರಂಗಾಯಣ ಇರುವ ಹತ್ತಿರದ ರಾಜಾಪುರ ಎಂಬ ಹಳ್ಳಿಯ ಸಬರ್ಬನ್ ಪ್ರದೇಶದಲ್ಲಿ ರಂಗಾಯಣ ನಾಟಕಗಳ ಸಣ್ಣ ಪರಿಚಯ ಸಹಿತ ಇರುವುದಿಲ್ಲ. ಹಾಗೆಯೇ ಮಾತೃನೆಲೆಯ ಮೈಸೂರು ರಂಗಾಯಣ ಹುಟ್ಟಿ ಮೂವತ್ತೈದು ವರುಷಗಳೇ ಕಳೆದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಹೇಳಲಾಗುತ್ತದೆ. ಅಚ್ಚರಿ ಎಂದರೆ ಮೈಸೂರು ಮಹಾನಗರಕ್ಕೆ ಅಂಟಿಕೊಂಡಿರುವ ಕೆ. ಜಿ. ಕೊಪ್ಪಲು ಎಂಬ ಉಪನಗರದಲ್ಲಿ ರಂಗಾಯಣ ನಾಟಕಗಳು ಸಾಮಾನ್ಯರ ಮನಸು ಮುಟ್ಟಲ್ಲ.
ಹೊಸ ಅಲೆ ನಾಟಕಗಳ ಪರಿಚಯವಿರದ ಇವರೆಲ್ಲರಿಗೂ ಕಂಪನಿ ಶೈಲಿಯ ವೃತ್ತಿ ರಂಗಭೂಮಿಯ ಸರಳ ನಾಟಕಗಳ ದಟ್ಟ ಪರಿಚಯ ಇರುತ್ತದೆ. ಒಂದರ್ಥದಲ್ಲಿ ಅದು ಜನತೆಯ ರಂಗಭೂಮಿ. ಹೀಗೆ ಹೊಸ ಅಲೆ ನಾಟಕಗಳು ಜನಸಾಮಾನ್ಯರನ್ನು ಮುಟ್ಟಲಾಗದ ಸಂದರ್ಭದಲ್ಲಿ ಸಾಮಾನ್ಯ ಜನರ ವೃತ್ತಿ ರಂಗಭೂಮಿ ವಿದ್ಯಾವಂತರ, ಬುದ್ದಿವಂತರ, ಎಲೈಟ್ ಮಂದಿಯ ಗಮನವನ್ನೂ ಸೆಳೆಯುವಂತಾಗಬೇಕು. ತನ್ನ ಸ್ಥಗಿತ ಸ್ಥಿತಿಯಿಂದ ಜಿಗಿದು ನಿಲ್ಲಬೇಕಾಗಿರುವ ವೃತ್ತಿರಂಗದೆದುರು ಕೆಲವು ಸವಾಲುಗಳಿವೆ. ಪ್ರಮುಖವಾಗಿ ಸಾಮಾಜಿಕ ನಾಟಕಗಳ ಸಂದರ್ಭದಲ್ಲಿ ಸಿನೆಮಾ ಅನುಕರಣೆ ಮತ್ತು ಕೆಲವು ಅಸಂಗತ ಅತಿರೇಕಗಳಿಂದ ಹೊರ ಬರಬೇಕಿದೆ. ಪೌರಾಣಿಕ ನಾಟಕಗಳನ್ನು ಕಲುಷಿತ ಮಾಡುವ ಅವಕಾಶಗಳು ಇರಲಾರವೆನ್ನುವಷ್ಟು ಅಪರೂಪ.
ವೃತ್ತಿರಂಗದ ದಿಗ್ಗಜ ಏಣಗಿ ಬಾಳಪ್ಪನವರು ವೃತ್ತಿ ಮತ್ತು ಆಧುನಿಕ ರಂಗಭೂಮಿ ಕುರಿತು ಹೇಳಿದ ಹೃದಯ ಮತ್ತು ಮಿದುಳು ಸಂವೇದನೆಯ ಮಹತ್ವದ ಮಾತೊಂದು ಹೀಗಿದೆ. "ಹೊಸ ಅಲೆಯ ನಾಟಕಗಳು ಬುದ್ದಿಜೀವಿಗಳ ಮಿದುಳಿಗೆ ಮುಟ್ತಾವ. ವೃತ್ತಿರಂಗಭೂಮಿಯ ನಾಟಕಗಳು ಜನಸಾಮಾನ್ಯರ ಹೃದಯಕ್ಕೆ ತಟ್ತಾವ." ಹೀಗೆ ಹೃದಯ ಮತ್ತು ಮಿದುಳು ಸಂವೇದಿ ನಾಟಕಗಳ ಆಯ್ಕೆ ಅವರವರ ಅಭಿರುಚಿಗೆ ಸೇರಿದ್ದು. ಹಾಗೆ ನೋಡುವುದಾದರೆ ವೃತ್ತಿರಂಗಭೂಮಿಯ ಹೃದಯಸ್ಪರ್ಶಿ ನಾಟಕಗಳದ್ದೇ ಪಾರಮ್ಯ. ಗ್ರಾಮಭಾರತದ ಬಹುತೇಕ ಧರ್ಮ, ಜಾತಿ, ಜನಾಂಗದವರು ಇಂತಹ ರಂಗಸ್ವಾಸ್ಥ್ಯ ಕ್ರಿಯೆಯಲ್ಲಿ ಸಕ್ರಿಯಗೊಳ್ಳುತ್ತಾರೆ. ಆರಾಧನೆಯೆಂಬಂತೆ ತಮ್ಮ ಹಳ್ಳಿಯ ದೈವದ ಹೆಸರುಗಳನ್ನು ನಾಟ್ಯಸಂಘಗಳ ಹೆಸರುಗಳನ್ನಾಗಿ ಇಟ್ಟುಕೊಂಡು ಮಾರುದ್ದದ ವರ್ಣರಂಜಿತ ಆಮಂತ್ರಣ ಪತ್ರಿಕೆಯನ್ನೇ ಪ್ರಕಟಿಸುತ್ತಾರೆ. ಅದುವೇ ಸಂಶೋಧನಾ ಪ್ರಬಂಧದ ವಸ್ತು ಆಗಿರಬಲ್ಲದು.
ವರನಟ ಡಾ. ರಾಜಕುಮಾರ ಮತ್ತು ಅವರ ಕಾಲದ ಅನೇಕ ಪ್ರಾತಃಸ್ಮರಣೀಯ ಕಲಾವಿದರು ಇಂತಹದ್ದೊಂದು ನಿರ್ಲಕ್ಷಿತ ರಂಗ ನೆಲೆಯಿಂದ ಬಂದವರೆಂಬ ಘನತೆ, ಗೌರವದ ರಂಗಸಂಸ್ಕೃತಿ ಇದಾಗಿದೆ. ಅವರುಗಳು ಬಾಳಿ ಬದುಕಿದ ವೃತ್ತಿ ರಂಗದ ಖಾಚಿತ್ಯಗಳನ್ನು ವರ್ತಮಾನದ ವೃತ್ತಿರಂಗಭೂಮಿ ಕಂಡು ಕೊಳ್ಳಬೇಕಿದೆ. ವೃತ್ತಿರಂಗಭೂಮಿಯ ವಿಸ್ತೃತ ಮತ್ತು ಅಭಿವೃದ್ಧಿಯ ಚಿಂತನೆಗಳ ವಿಷಯದಲ್ಲಿ ಇಂತಹ ಇನ್ನೂ ಕೆಲವು ಸಂಗತಿಗಳ ಅಗತ್ಯವಿದೆ. ಏಕೆಂದರೆ ತೀರ ಇತ್ತೀಚಿಗೆ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ವೃತ್ತಿರಂಗಭೂಮಿ ತನ್ನ ಅಸ್ಮಿತೆಯ ಸಜೀವ ಸ್ಥಿತಿ ಸಾಬೀತು ಪಡಿಸಲು ಚಡಪಡಿಸುವಂತಾಗಿದೆ. ಆದರದು ಕೇವಲ ಫುಲ್ ಕಾಮೆಡಿ ಪ್ರಕಾರವೆಂಬಂತೆ ಪ್ರಸ್ತುತಿ ಆಗುವುದಲ್ಲ. ವಿನೋದವೂ ಅದರ ಭಾಗವಷ್ಟೇ. ಆದರೆ ಟಿಆರ್ಪಿ ದರದ ತೆಳು ಕಾಮೆಡಿಯಂತೂ ಖಂಡಿತಾ ಅಲ್ಲ.
ವಿದ್ಯುನ್ಮಾನ ಮಾಧ್ಯಮಗಳ ಪರಸ್ಪರ ಪೈಪೋಟಿ ಹಾಗೂ ಐಡೆಂಟಿಟಿಗಳ ಭರಾಟೆಯಲ್ಲಿ ನಮ್ಮ ಸಾಂಸ್ಕೃತಿಕ ಮಾದರಿಗಳ ಹುಡುಕಾಟ ನಿಜಕ್ಕೂ ಕಷ್ಟಕರ. ಒಂದು ಕಾಲಕ್ಕೆ ಭಾಷೆಯನ್ನು ವಿಜೃಂಭಿಸಿದ್ದು, ಸ್ವಾತಂತ್ರ್ಯ ಹೋರಾಟ, ಖಾದಿ ಚಳವಳಿ, ಒರಿಜಿನಲ್ ದೇಶಭಕ್ತಿ, ಅವಿಭಜಿತ ಕುಟುಂಬ ಪ್ರೀತಿಗೆ ಹೆಸರಾದದ್ದು ವೃತ್ತಿರಂಗಭೂಮಿ. ಅಷ್ಟೇಯಾಕೆ ಸದಭಿರುಚಿ ಮತ್ತು ಸಹೃದಯ ಪ್ರೇಕ್ಷಕ ಸಂಸ್ಕೃತಿಯನ್ನೇ ಹುಟ್ಟುಹಾಕಿದ್ದು ವೃತ್ತಿರಂಗಭೂಮಿ. ಮುಖಾಮುಖಿಯಾಗುವ ಬಹು ಜನಮುಖಿ ರಂಗ ಪ್ರಕಾರವಿಂದು ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲೂ ಮುಖ್ಯವಾಹಿನಿಯಲ್ಲಿ ತನ್ನ ಅಸ್ತಿತ್ವದ ಹುಡುಕಾಟವೂ ಮುಖ್ಯವಾಗಿದೆ. ದಾವಣಗೆರೆಯ ನೂತನ ವೃತ್ತಿ ರಂಗಾಯಣ ಈ ಎಲ್ಲ ಬೆಳವಣಿಗೆಗಳತ್ತ ಗಂಭೀರ ಗಮನ ಹರಿಸಲಿ. ಜನಸಾಮಾನ್ಯರ ರಂಗಭೂಮಿ ಭಾರತ ಬಾಳಿ ಬೆಳಗಲಿ.
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು:
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.