ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು.....

Date: 12-01-2023

Location: ಬೆಂಗಳೂರು


“ಬಂಡಾಯದ ಗೆರೆಗಳನ್ನು ಬರೆಯುವ ಮೂಲಕ ಅಂದು ಬೆಳಗ್ಗೆ ಚಿತ್ರಕಲೆಯ ಕಾರ್ಟೂನ್ ಪ್ರದರ್ಶನ ಉದ್ಘಾಟಿಸಿ ವರ್ತಮಾನದ ಹತ್ತು ಹಲವು ಬಿಕ್ಕಟ್ಟುಗಳ ಕುರಿತು ರಂಗಕರ್ಮಿ‌ ರಘುನಂದನ್ ತೀವ್ರವಾದ ಅರಿವು ಮೂಡಿಸಿದರು. ಪ್ರಕಾಶ್ ರೈ ಸೇರಿದಂತೆ ಅನೇಕರ ಅಭಿಮತಗಳು ಅಲ್ಲಿ ದಾಖಲೆಯಾದವು” ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ‘ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು...’ ಕುರಿತ ಲೇಖನವನ್ನು ಬರೆದಿದ್ದಾರೆ.

ಹಾವೇರಿಯಲ್ಲಿ ಜರುಗಿದ ಮೂರು ದಿನದ ಎಂಬತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೊನ್ನೆಯಷ್ಟೇ ಮುಗಿದಿದೆ. ಹಾಗೆಯೇ ಒಂದೇ ದಿನದ ಬೆಂಗಳೂರಿನ "ಜನಸಾಹಿತ್ಯ" ಸಮ್ಮೇಳನವೂ ಮುಗಿದಿದೆ. ಮಳೆನಿಂತ ಮೇಲೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಆ ಕುರಿತಾದ ಸಾಮಾಜಿಕ ಜಾಲತಾಣದ ಚರ್ಚೆಗಳು ನಿಂತಿಲ್ಲ. ಜನಪ್ರಭುತ್ವದಲ್ಲಿ ಸ್ವಾಸ್ಥ್ಯ ಸಂವಾದಗಳು ಸ್ವಾಗತಾರ್ಹ. ಸರಕಾರದ ಅನುದಾನ ಪಡೆದು ನಡೆಸುವ ಕಸಾಪ ಸಾಹಿತ್ಯ ಸಮ್ಮೇಳನಗಳಿಗೆ ಪ್ರತಿಕ್ರಿಯಾತ್ಮಕವಾದ ಪ್ರತಿರೋಧ ಸಾಹಿತ್ಯ ಸಮಾವೇಶಗಳು ಜರುಗಿದ ಕೆಲವು ನೆನಪುಗಳಿವೆ. ಅವು ಪರ್ಯಾಯ ಹೌದು ಅಲ್ಲ ಅನ್ನುವುದು ಬೇರೇ ಮಾತು. ಆದರೆ ಅವುಗಳಿಗೆ ಸಂದರ್ಭೋಚಿತ ಕಾರಣಗಳು ಮಾತ್ರ ಇಲ್ಲದಿಲ್ಲ.

ಪ್ರತಿರೋಧ ಎಂಬುದು ೧೯೭೯ ರ ಬಂಡಾಯ ಸಾಹಿತ್ಯ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ೧೯೯೨ರಲ್ಲಿ ಲಂಕೇಶ್ ಅವರ ಸಾರಥ್ಯದಲ್ಲಿ ಜರುಗಿದ ಜಾಗೃತ ಸಮಾವೇಶ, ೨೦೧೩ರ ಧಾರವಾಡದ ಕರ್ನಾಟಕ ಜನಸಾಹಿತ್ಯ ಸಮಾವೇಶ, ಅದೇ ಧಾರವಾಡದ ಸಾಹಿತ್ಯ ಸಂಭ್ರಮ, ಕಳೆದೆಂಟು ವರುಷಗಳಿಂದ ಜರುಗುತ್ತಿರುವ ಮೇ ಸಾಹಿತ್ಯ ಮೇಳ, ಮೂಡಬಿದಿರೆಯ ಆಳ್ವಾಸ್ ನುಡಿಸಿರಿ, ಮಂಗಳೂರಿನ ಜನನುಡಿ ಹೀಗೆ ಕನ್ನಡ ಸಾಹಿತ್ಯ ಪರಿಷತ್ತು ಹೊರತು ಪಡಿಸಿ ಭಿನ್ನ ಸಾಹಿತ್ಯ ಸಮಾವೇಶಗಳು ಜರುಗುತ್ತಲಿವೆ. ಧಾರವಾಡ ಸಾಹಿತ್ಯ ಸಂಭ್ರಮ ಜೈಪುರ ಸಾಹಿತ್ಯ ಉತ್ಸವದ ಮಾದರಿಯದು. ಅದಕ್ಕೆ ಸರಕಾರದ ಅನುದಾನ ದೊರಕಿದ ನೆನಪು ನನ್ನದು.

ಧರ್ಮಸ್ಥಳದ ಐವತ್ತೊಂದನೇ ಅ. ಭಾ. ಕ. ಸಾಹಿತ್ಯ ಸಮ್ಮೇಳನದಲ್ಲಿ ದಲಿತಗೋಷ್ಠಿ ಏರ್ಪಡಿಸಬೇಕೆಂಬ ಮನವಿ. ಅದಕ್ಕೆ ಆಗಿನ ಕ.ಸಾ.ಪ. ಅಧ್ಯಕ್ಷರಿಂದ ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ ಎಂಬ ಉಡಾಫೆ ಉತ್ತರ. ಈ ಉತ್ತರವೇ ದಲಿತ, ಬಂಡಾಯದಂತಹ ಜನಪರ ಸಾಹಿತ್ಯದ ನಿರ್ಮಾಣಕ್ಕೆ ಕಾರಣವಾಯಿತು. ಅವತ್ತು ಧರ್ಮಸ್ಥಳದ ಸಮ್ಮೇಳನಕ್ಕೆ ಸೆಡ್ಡು ಹೊಡೆದು ಬೆಂಗಳೂರಿನ ದೇವಾಂಗ ಹಾಸ್ಟೆಲ್ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಮಾವೇಶ ಜರುಗಿತು. ಅಂದು ಸಮಾಜವಾದಿಗಳು, ಮಾರ್ಕ್ಸ್ ವಾದಿಗಳು, ಗಾಂಧಿವಾದಿಗಳು, ಅಂಬೇಡ್ಕರ್ ವಾದಿಗಳು ಹೀಗೆ ಎಡ ಚಿಂತನೆಯ ಬಹುಪಾಲು ಪ್ರಗತಿಪರರು ಸೇರಿ ಕಟ್ಟಿದ್ದು ಬಂಡಾಯ ಸಾಹಿತ್ಯ ಸಂಘಟನೆ.

ಒಂದರ್ಥದಲ್ಲಿ ಇವತ್ತು ಅಂತಹದ್ದೇ ಸ್ಥಿತಿ ನಿರ್ಮಾಣಗೊಂಡಿದೆ. ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ಅವಗಣನೆ ಮಾಡಲಾಗಿದೆ ಎಂಬುದು ಆರಂಭಿಕ ಕಾರಣ. ಅಷ್ಟುಮಾತ್ರವಲ್ಲದೇ ಕಸಾಪ ಅಧ್ಯಕ್ಷರ ನಡೆ ಮತ್ತು ಬಹುಪಾಲು ಮಹಿಳೆಯರು ಮತ್ತು ದಲಿತ, ದಮನಿತ ಸಾಹಿತಿಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಹಿನ್ನೆಲೆಯಲ್ಲಿ ಜನಸಾಹಿತ್ಯ ಸಮ್ಮೇಳನ ಹುಟ್ಟಿಕೊಂಡಿತು. ಪ್ರಗತಿಪರ ತತ್ವ, ಸಿದ್ಧಾಂತ ಸಂಘಟನೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಒಕ್ಕೂಟದಂತಿರುವ ಬಂಡಾಯ ಸಾಹಿತ್ಯ ಸಂಘಟನೆಯ ಸಹಭಾಗಿತ್ವ ಬೇಕಿತ್ತು. ಆದರೆ ಜನಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಮಂದಿ ಬಂಡಾಯ ಸಾಹಿತಿಗಳು ಭಾಗವಹಿಸಿದ್ದುದು ಸ್ವಾಗತಾರ್ಹ ಸಂಗತಿ. ಅದೇನೇ ಇರಲಿ ಬೆಂಗಳೂರಿನ ಜನಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ. ತನ್ಮೂಲಕ ಸಾಹಿತ್ಯೇತಿಹಾಸದ ಸಾಂಸ್ಕೃತಿಕ ಸಂದರ್ಭದಲ್ಲಿ ಪ್ರತಿರೋಧ ಸಾಹಿತ್ಯ ಸಮಾವೇಶಕ್ಕೆ ಮಹತ್ತರ ಮಹತ್ವಗಳಿವೆ ಎಂಬುದನ್ನು ಸಾಬೀತು ಪಡಿಸಿದೆ.

ಸಾಹಿತ್ಯವೆಂಬುದು ಆಯಾ ಕಾಲದ ಜನಸಂಸ್ಕೃತಿಯ ಪ್ರತಿಬಿಂಬ ಇಲ್ಲವೇ ಗತಿಬಿಂಬವೇ ಆಗಿರುವಂತಹದ್ದು. ಅದು ಪ್ರತಿಭಟನೆಯ ಅಸ್ತ್ರ ಎನ್ನುವುದೂ ಅಷ್ಟೇ ದಿಟ. ನೂರೇಳು ವರುಷಗಳು ಕಳೆದರೂ ಸಾಹಿತ್ಯ ಪರಿಷತ್ತು ಮೇಲ್ವರ್ಗದ ಪಟ್ಟಭದ್ರರು ಮತ್ತು ಅಧಿಕಾರಶಾಹಿಗಳ ಹಿಡಿತದಿಂದ ಬಿಡುಗಡೆ ಪಡೆದಿಲ್ಲ. ಅಷ್ಟೇ ಅಲ್ಲದೇ ಶತಮಾನದ ಇತಿಹಾಸದಲ್ಲಿ ಕೇಂದ್ರ ಕಸಾಪಕ್ಕೆ ಒಬ್ಬ ಮಹಿಳೆಯೂ ರಾಜ್ಯಧ್ಯಕ್ಷೆ ಆಗದಂತಹ ಮೆಜಾರಿಟೇರಿಯನ್ ಪಾಲಿಟಿಕ್ಸ್. ಹಾಗೆಯೇ ದಲಿತರು ಮತ್ತು ಮುಸ್ಲಿಮರು ಪರಿಷತ್ತಿನ ಅಧ್ಯಕ್ಷರಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಜಾಣಗೆರೆ ವೆಂಕಟರಾಮಯ್ಯ ಹೇಳಿದಂತೆ ಪರಿಷತ್ತು ಎರಡು ಪ್ರಬಲ ಸಮುದಾಯಗಳ ಮುಷ್ಟಿಯಲ್ಲಿದೆ‌. ಇನ್ನೂ ಒಂದು ಹೆಜ್ಜೆ ಮುಂದುವರೆದು ಹೇಳುವುದಾದರೆ ಅದಕ್ಕೆ ಕೋಮುವಾದಿಗಳ ಮಹಾರೋಗ ತಗುಲಿದೆ.

ಎಂಬತ್ತು ವರುಷಗಳಿಗೂ ಹೆಚ್ಚು ಕಾಲದವರೆಗೆ ದಲಿತ ಸಾಹಿತಿಯೊಬ್ಬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಲು ಸಾಧ್ಯವಾಗಿರಲಿಲ್ಕ. ಅದಕ್ಕಾಗಿ ಶ್ರವಣಬೆಳಗೋಳ ಸಮ್ಮೇಳನದ ದಲಿತಕವಿ ಸಿದ್ಧಲಿಂಗಯ್ಯವರೆಗೆ ಕಾಯಬೇಕಾಯಿತು. ಶೂದ್ರ ದಲಿತರಷ್ಟೇ ಕಿಗ್ಗಳಾಗಿ ಕಾಣಲಾಗುವ ಮತ್ತೊಂದು ವರ್ಗವೆಂದರೆ ಮಹಿಳೆಯರು. ರಾಜ್ಯಮಟ್ಟ ಮಾತ್ರವಲ್ಲದೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಹಿಳೆ ಮತ್ತು ಕೆಳಜಾತಿ ಸಾಹಿತಿಗಳ ಕತೆ ಮತ್ತಷ್ಟು ಕರುಣಾಜನಕ.

ಎಂಬತ್ತಾರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಇದುವರೆಗೆ ಮಹಿಳೆಯರಿಗೆ ದಕ್ಕಿದ ಅವಕಾಶ ಕೇವಲ ಒಂದು ಕೈ ಬೆರಳೆಣಿಕೆಯಷ್ಟೂ ಅಲ್ಲ. ಅಂದರೆ ಇದುವರೆಗೆ ನಾಲ್ಕೇ ನಾಲ್ಕು ಮಂದಿ ಮಹಿಳೆಯರು ಮಾತ್ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಿದರ್ಶನಗಳಿವೆ. ಆ ಮೂಲಕ ಪರಿಷತ್ತು (ಅ)ಪ್ರಜ್ಞಾಪೂರ್ವಕವಾಗಿ ಮಹಿಳೆಯರು, ಶೂದ್ರರು, ದಲಿತರು, ದಮನಿತರು ಮತ್ತು ಮುಸ್ಲಿಮರನ್ನು ಕಡೆಗಣಿಸಿದೆ ಎಂಬುದು ಮೇಲ್ನೋಟಕ್ಕೆ ಸಾಬೀತು ಮಾಡಿದಂತೆ ತೋರುತ್ತದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ, ಕನ್ನಡಿಗ, ಕನ್ನಡದ ಬದುಕು, ಕನ್ನಡ ಸಾಹಿತ್ಯದ ಬೆಳವಣಿಗೆ ಮತ್ತು ನಿರ್ಣಾಯಕ ಘಟ್ಟಗಳ ಮಾನದಂಡದಂತೆ ಗಂಭೀರವಾಗಿ ನೋಡುವುದು ಎಷ್ಟು ಸರಿ.? ಇದನ್ನು ಅರಿತೋ ಅರಿಯದೆಯೋ ಅಂದು ಬಂಡಾಯ ಸಾಹಿತ್ಯ ಸಂಘಟನೆ ಕಸಾಪದೊಂದಿಗೆ ಕೈ ಕುಲುಕಿದ್ದೇ ಬಹುಶಃ ಇಂದಿನ ಬಹುತೇಕ ಅಪಸವ್ಯಗಳಿಗೆ ಅನುವಾಗಿದ್ದೀತು.?

ಇಂತಹ ಇನ್ನೂ ಅನೇಕ ಅಪಸವ್ಯಗಳ ಮೇಲೆ ಬೆಳಕು ಚೆಲ್ಲಿ ಸಾಮರಸ್ಯದ ಹಾದಿ ಹುಡುಕಿ ಕೊಳ್ಳುವಲ್ಲಿ ಬೆಂಗಳೂರಿನ ಜನಸಾಹಿತ್ಯ ಸಮ್ಮೇಳನ ಅಪೂರ್ವ ಯಶಸ್ಸು ಸಾಧಿಸಿತು. ವಾರವೊಪ್ಪತ್ತಿನಲ್ಲೇ ರೂಪುಗೊಂಡ ಸಮ್ಮೇಳನ ಅಚ್ಚುಕಟ್ಟಾಗಿ ಜರುಗಿತು. ಸಮ್ಮೇಳನ ಏರ್ಪಾಡು ಮಾಡುವಲ್ಲಿ ನವೀನ್ ಸೂರಿಂಜೆ, ಕಾವ್ಯ ಅಚ್ಚುತ್, ಮುನೀರ್ ಕಾಟಿಪಳ್ಳ, ಭೈರಪ್ಪ ಹರೀಶ ಕುಮಾರ್, ಅನಂತನಾಯಕ್ ಹೀಗೆ ಅನೇಕ‌ ಯುವಶಕ್ತಿಗಳ ಚಿಕ್ಕ ಅವಧಿಯ ಬೃಹತ್ ಪರಿಶ್ರಮವಿದೆ. ಯಾವುದೇ ರಾಜಕಾರಣಿ, ಕಾರ್ಪೋರೆಟ್ ಉದ್ಯಮಿಯ ನೆರವಿಲ್ಲದೇ ಸಮಾನ ಮನಸ್ಕ ಗೆಳೆಯರ ನೆರವಿನಿಂದ ನೆರವೇರಿದ ಜನಸಾಹಿತ್ಯ ಸಮ್ಮೇಳನ.

ಬಂಡಾಯದ ಗೆರೆಗಳನ್ನು ಬರೆಯುವ ಮೂಲಕ ಅಂದು ಬೆಳಗ್ಗೆ ಚಿತ್ರಕಲೆಯ ಕಾರ್ಟೂನ್ ಪ್ರದರ್ಶನ ಉದ್ಘಾಟಿಸಿ ವರ್ತಮಾನದ ಹತ್ತು ಹಲವು ಬಿಕ್ಕಟ್ಟುಗಳ ಕುರಿತು ರಂಗಕರ್ಮಿ‌ ರಘುನಂದನ್ ತೀವ್ರವಾದ ಅರಿವು ಮೂಡಿಸಿದರು. ಪ್ರಕಾಶ್ ರೈ ಸೇರಿದಂತೆ ಅನೇಕರ ಅಭಿಮತಗಳು ಅಲ್ಲಿ ದಾಖಲೆಯಾದವು.

ಸಮ್ಮೇಳನದ ಬ್ಯಾನರಲ್ಲಿ "ಜನಸಾಹಿತ್ಯ" ಎನ್ನುವುದನ್ನು ನೀಲಿ ಅಕ್ಷರ ಮತ್ತು "ಸಮ್ಮೇಳನ" ಎನ್ನುವುದನ್ನು ಕೆಂಪು ಅಕ್ಷರಗಳಲ್ಲಿ ಚಿತ್ರಿಸಿ, ಮೇಲಿನ ಒಂದು ಅಂಚಿಗೆ ಶಿಶುನಾಳ ಶರೀಫ ಮತ್ತೊಂದು ಅಂಚಿಗೆ ಕಳಸದ ಗುರು ಗೋವಿಂದಭಟ್ಟರ ಭಾವಚಿತ್ರಗಳು, ಸಾಮರಸ್ಯದ ದಿವ್ಯಸಂಕೇತಗಳು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಪುರುಷೋತ್ತಮ ಬಿಳಿಮಲೆ, ಮೂಡ್ನಾಕೂಡು ಚಿನ್ನಸ್ವಾಮಿ, ವಡ್ಡಗೆರೆ ನಾಗರಾಜಯ್ಯ, ಅಕ್ಕೈ ಪದ್ಮಸಾಲಿ, ಬಾನು ಮುಸ್ತಾಕ್, ಜಾಫೆಟ್, ಪ್ರಕಾಶ ರೈ, ಅಗ್ನಿ ಶ್ರೀಧರ ಇವರುಗಳೇ ಸರ್ವಜನಾಂಗದ ಶಾಂತಿಯ ತೋಟಕ್ಕೆ ನಿದರ್ಶನ. ಈ ಎಲ್ಲಾ ಹಿರಿಯರನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಗೋಷ್ಠಿಗಳ ತುಂಬೆಲ್ಲಾ ತರುಣ ತರುಣಿಯರು.

ಬಹುಶಃ ಇದೇ ಮೊದಲ ಬಾರಿಗೆ ಲಿಂಗತ್ವ ಹೋರಾಟದ ದ್ವಿಲಿಂಗಿಗಳು ಸಾಹಿತ್ಯ ಸಮ್ಮೇಳನವೊಂದರ ವೇದಿಕೆ ಹಂಚಿಕೊಂಡದ್ದು ಮತ್ತು ಮನ ಮಿಡಿಯುವ ಕವಿತೆಗಳನ್ನು ಪ್ರಸ್ತುತ ಪಡಿಸಿರುವುದು. ಅವಕಾಶ ವಂಚಿತ ಅನೇಕ ಯುವಕ ಯುವತಿಯರಿಗೆ ಅರ್ಹತೆಯ ಕವಿತೆಗಳನ್ನು ಓದುವ ಅವಕಾಶ ದಕ್ಕಿಸಿಕೊಟ್ಟ ವೇದಿಕೆ ಅದಾಗಿತ್ತು. ಮೂಡ್ನಾಕೂಡು ಚಿನ್ನಸ್ವಾಮಿ ಸಮ್ಮೇಳನ ಉದ್ಘಾಟಿಸಿ ತಮ್ಮ ಮೌಲ್ಯಯುತ ಭಾಷಣ ಅಚ್ಚುಕಟ್ಟಾಗಿ ಓದಿದರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದು ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ದಿಕ್ಸೂಚಿ ಭಾಷಣ. ಶಿವಸುಂದರ್ ಅವರ ಎರಡು ಅನುವಾದಿತ ಕವಿತೆಗಳನ್ನು ಓದಿ ಸಭಿಕರ ಮನಸು ಗೆದ್ದವರು ಪ್ರಕಾಶ್ ರೈ.

ಅಗ್ನಿ ಶ್ರೀಧರ ಹಾಕಿದ ಘೋಷಣೆ "ಹಿಂದೂ ಭಜನೆಸಾಕು. ದ್ರಾವಿಡ ದೇಶ ಬೇಕು." ಪ್ರಾಯಶಃ ಬಲಪಂಥೀಯರಿಗೆ ಇಂತಹ ಘೋಷಣೆಯೊಂದೇ ಸಾಕು. ನಮ್ಮನ್ನು ಹಣಿಯಲು ಇನ್ನೇನು ಬೇಕು.? ಎಂದು ನನ್ನ ಪಕ್ಕದಲ್ಲೇ ಕುಂತಿದ್ದ ಕೋಲಾರ ಕಡೆಯ ಹಿರಿಯರೊಬ್ಬರು ಕಳಕಳಿ ತುಂಬಿ ತಮ್ಮ ಗೆಳೆಯರೊಂದಿಗೆ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡೆ.

ಹಿರಿಯ ಲೇಖಕಿ ಬಾನು ಮುಷ್ತಾಕ್ ಉದ್ಘಾಟನಾ ಸಮಾರಂಭದ ಅಧ್ಯಕ್ಷೆ ಭಾಷಣ ಮಾಡುತ್ತಾ, ದಿಕ್ಸೂಚಿ ಭಾಷಣ ಉಲ್ಲೇಖಿಸಿ "ಕನ್ನಡವನ್ನು ಭುವನೇಶ್ವರಿ ತಾಯಿಯಾಗಿ ನೋಡಿದಿರಿ, ಅವಳನ್ನು ಮಂದಾಸನದ ಮೇಲೆ ಕೂಡಿಸಿದಿರಿ. ಅವಳಿಗೆ ಅರಿಷಿಣ ಕುಂಕುಮ ಲೇಪಿಸಿದಿರಿ. ಅದರಿಂದ ನಾನು ಕನ್ನಡದಲ್ಲಿ ಹೇಗೆ ಮಾತಾಡಲಿ, ಅಲ್ಪಸಂಖ್ಯಾತಳಾದ ನನ್ನನ್ನು ದೂರ ಮಾಡಿದಿರಿ. (ಹಾಗೆ ಹೇಳುವ ಅವರು ಕನ್ನಡದಲ್ಲೇ ಬರೆದು ಖ್ಯಾತರಾದವರು) ಕನ್ನಡ ಬಾವುಟದ ಅರಿಷಿಣ ಮತ್ತು ಕುಂಕುಮ ಬಣ್ಣಗಳು ಮುಸ್ಲಿಮಳಾದ ತಮ್ಮನ್ನು ಅದೆಂದೋ ದೂರ ಇಟ್ಟಿವೆ" ಎಂದರು. ಇಂತಹ ಮಾತುಗಳಿಗೆ ಮುನ್ನ ಸಮ್ಮೇಳನದ ಉದ್ಘಾಟನೆಯ‌ಲ್ಲಿ ಅವರೇ ಅದೇ ಬಣ್ಣದ ಬಾವುಟ ಪ್ರದರ್ಶನದ ಮಾಡಿದರು. ಮರಡಿಹಳ್ಳಿ ರಾಮಮೂರ್ತಿ, ಅ.ನ.ಕೃ. ಅವರಂತಹ ಅಪ್ಪಟ ಕನ್ನಡ ಚಳವಳಿ ಬದುಕಿದ ಪ್ರಾತಃಸ್ಮರಣೀಯರು ಅಳೆದು ತೂಗಿ ನೋಡಿಯೇ ಈ ಬಾವುಟ ರೂಪಿಸಿದವರು.

ಹಾಗಾದರೆ ಜಯ ಭಾರತ ಜನನಿಯ ತನುಜಾತೆ/ ಜಯಹೇ ಜಯ ಕರ್ನಾಟಕ ಮಾತೆ // ಎಂಬ ಕುವೆಂಪು ಅವರ ಜಯಭಾರತ ಮತ್ತು ಜಯ ಕರ್ನಾಟಕ ಮಾತೆಯೆಂದು ಅಪ್ಪಿಕೊಂಡ ಮಾತೃತ್ವದ ವಿಚಾರಕ್ಕೆ ಸೆಕ್ಯುಲರ್ ಚಿಂತಕಿಯ ವಿರೋಧವೇ.? ಹೀಗೆ ಜನಸಾಹಿತ್ಯ ಸಮ್ಮೇಳನದಲ್ಲಿ ಕೆಲವರ ಮಾತುಗಳು ಗೊಂದಲದಂತೆ ಕಂಡುಬಂದು ಇಂತಹ ಮಾತುಗಳು ವಾಸ್ತವವಾಗಿ ಕಟ್ಟಬೇಕಾದ ಜನಸಾಹಿತ್ಯ ಬದುಕಿನ ಅಗತ್ಯಕ್ಕೆ ಪ್ರಾಯಶಃ ಅಡ್ಡಿಯಾಗಬಹುದೆಂಬ ಆತಂಕಗಳು ಪ್ರೇಕ್ಷಾಂಗಣ ಕುರ್ಚಿಯಲ್ಲಿ ಮಾತಾಡುತ್ತಿದ್ದ ಆ ಹಿರಿಯರಿಗಿದ್ದೀತು.?

ಅಷ್ಟಕ್ಕೂ ಸಮಾರೋಪ ಭಾಷಣ ಮಾಡಿದ ದಿನೇಶ ಅಮೀನಮಟ್ಟು "ಜನಸಾಹಿತ್ಯ ಸಮ್ಮೇಳನದಲ್ಲಿ ಗಂಭೀರ ಸಾಹಿತ್ಯ ಚಿಂತನೆಗಳು ಇರಲಿಲ್ಲ" ಎನ್ನುವುದನ್ನು ಹೇಳಿಯೂ ಬಿಟ್ಟರು. ಆದರೆ ನೆನಪಿರಲಿ., ಪ್ರೊ. ರಾಜೇಂದ್ರ ಚೆನ್ನಿ ಮತ್ತು ಡಾ. ರಹಮತ್ ತರಿಕೆರೆ ಈ ಇಬ್ಬರು ಕನ್ನಡತನ ಮತ್ತು ಕರ್ನಾಟಕದ ಬಹುತ್ವ ಸಂಸ್ಕೃತಿ ಕುರಿತು ಚಿಂತನಶೀಲ ಮಾತುಗಳನ್ನು ಹೇಳಿದ್ದು "ಸಿಕ್ಕಾಪಟ್ಟೆ ಅಚ್ಛೇ ದಿನಗಳ" ಈ ಕಾಲದಲ್ಲಿ ಜರುಗಿದ ಜನಸಾಹಿತ್ಯ ಸಮ್ಮೇಳನಕ್ಕೆ ಕಳಸವಿಟ್ಟ ಕೆಲಸವೇ ಆಗಿತ್ತು.

ಅ.ಭಾ.ಕ.ಸಾ.ಸಮ್ಮೇಳನದ ಅಧಿಕೃತ ಆಮಂತ್ರಣ ಪತ್ರಿಕೆ ನೋಡಿದ ಮೇಲೆ ಬಂಡಾಯದ ಗೆಳೆಯ ಬಿ. ಎಂ. ಹನೀಫ ಕಸಾಪ ಅಧ್ಯಕ್ಷನ‌ ಒಳಹುನ್ನಾರ ಬಯಲಿಗೆಳೆದು ಪೋಷ್ಟ್ ಹಾಕಿ ಜಾಗೃತಿ ಹುಟ್ಟಿಸಿದರು. ದೂರದ ದಿಲ್ಲಿಯಲ್ಲಿ ಕುಂತೇ ಪುರುಷೋತ್ತಮ ಬಿಳಿಮಲೆ ಮುಸ್ಲಿಂ ಲೇಖಕರ ಲೆಕ್ಕ ಹಾಕ ತೊಡಗಿದರು. ಅಜಮಾಸು ಆರುನೂರು ಮಂದಿಯ ಪಟ್ಟಿಯೇ ದೊರಕಿತು. ಅರೆರೇ ಮುಸ್ಲಿಂ ಸಾಹಿತಿಗಳ ಸಮ್ಮೇಳನ ಮಾಡಲು ಹೊರಟಿದ್ದಾರೆಯೇ ಎಂದು ಕೆಲವರ ಅವಸರದ ಅನುಮಾನ. ವಾಸ್ತವ ಅದಾಗಿರಲಿಲ್ಲ.

ಟಿಪ್ಪುವಿನ ಕುರಿತು ಅಷ್ಟೊಂದು ಕರಾರುವಾಕ್ಕಾದ ವಿಷಯಗಳನ್ನು ಜನಸಾಹಿತ್ಯ ಸಮ್ಮೇಳನದಲ್ಲಿ ಟಿ. ಗುರುರಾಜ್ ಅವರಿಂದ ಕೇಳಿ ತಿಳಿದ ಮೇಲೆ
ಅನೇಕ ಮಂದಿ ಅರೆಬರೆ ತಿಳಿವಳಿಕೆಯ ಮುಸ್ಲಿಂ ಲೇಖಕರಿಗೆ ಟಿಪ್ಪು ಬಗ್ಗೆ ಭರ್ತಿ ಭರವಸೆ ಹುಟ್ಟಿತು. ಖರೇ ಹೇಳುವುದಾದರೆ ಸಂಘವೊಂದರ ನೆರವಿನಿಂದ ಮಹೇಶ ಜೋಷಿ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದಾಗಲೇ ಅವರ ಒಳಹೇತುಗಳ ಕುರಿತು ಅನುಮಾನದ ಅರಿವಿತ್ತು. ಜನಸಾಹಿತ್ಯ ಸಮ್ಮೇಳನ ಕುರಿತು ಬೆಂಗಳೂರಿನ ಪತ್ರಿಕಾ ಗೋಷ್ಠಿಯಲ್ಲಿ ಬಿಳಿಮಲೆ ಅದನ್ನೆಲ್ಲ ಬಿಚ್ಚಿಟ್ಟರು.

ಸಮ್ಮೇಳನದ ಊಟ ಜನಸಾಹಿತ್ಯದ ಆಶಯಗಳಿಗೆ ಪೂರಕವಾಗಿತ್ತು. ಪಾಯಸ, ಬಂಗುಡೆ ಮೀನೂಟ. ನೆಂಚಿಕೊಳ್ಳಲು ಚಿಕನ್ ಕಬಾಬ. ಅಂದಹಾಗೆ ಸಮ್ಮೇಳನದಲ್ಲಿ "ಆಹಾರ ರಾಜಕಾರಣದ" ಗೋಷ್ಠಿಯೇ ಇತ್ತು. ಹೀಗೆ ಜನಸಾಹಿತ್ಯ ಸಮ್ಮೇಳನ ಹಲವು ಸೂಕ್ಷ್ಮ ಸಂವೇದನೆಗಳ ಭರಪೂರತೆಯನ್ನು ಭಿನ್ನ ನೆಲೆಗಳಲ್ಲಿ ತುಂಬಿ ತುಳುಕಿಸಿತು.‌ ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ/ ಪರ ವಿಚಾರಮಮ್ ಪರ ಧರ್ಮಮುಂ// ಎಂಬ ಕವಿರಾಜ ಮಾರ್ಗಕಾರನ ಮಾತುಗಳು ಮತ್ತೆ ಮತ್ತೆ ವೇದಿಕೆಯಲ್ಲಿ ಅಗತ್ಯದಂತೆ ಕೇಳಿ ಬಂದವು. ಇನ್ಮುಂದೆ ಜನಸಾಹಿತ್ಯದ ನಡೆ ಜಿಲ್ಲೆಗಳ ಕಡೆಯಂತೆ. ಜಿಲ್ಲೆ ಜಿಲ್ಲೆಗೂ ದಾಪುಗಾಲು ಇಡಲು ವೇದಿಕೆ ಸಿದ್ಧಗೊಳ್ಳುತ್ತಿದೆ.
ಮಲ್ಲಿಕಾರ್ಜುನ ಕಡಕೋಳ
‌ 9341010712

ಈ ಅಂಕಣದ ಹಿಂದಿನ ಬರಹಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...