ಅಮಾಸ ಕಥೆಯಲ್ಲಿ ಕಾಣುವ ಪುನರಾವರ್ತನಾ ಬದುಕು

Date: 04-04-2025

Location: ಬೆಂಗಳೂರು


"ಅಮಾಸ ಕಥೆಯು ಇವರ ದ್ಯಾವನೂರು ಕಥಾ ಸಂಕಲನದಿಂದ ಆಯ್ದುಕೊಂಡ ಕಥೆಯಾಗಿದ್ದು ಇದು ತಬ್ಬಲಿಯಾದ ಅಮಾಸ ಎಂಬ ಹುಡುಗನನ್ನು ಕುರಿಯಯ್ಯ ಎಂಬಾತನ ಆಸರೆಯಲ್ಲಿ ಬೆಳೆದು ಹುಲಿಯಾಸ ಕುಣಿತದಲ್ಲಿ ಸೈ ಎನಿಸಿಕೊಳ್ಳುವಂತಹ ಕಥಾ ಹಂದರವೇ ಈ ಅಮಾಸ," ಎನ್ನುತ್ತಾರೆ ಅಂಕಣಗಾರ್ತಿ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ದೇವನೂರ ಮಹಾದೇವಅವರ "ಅಮಾಸ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.

ನವ್ಯೋತರ ಸಾಹಿತ್ಯ ಸಂದರ್ಭದಲ್ಲಿ ದೇವನೂರು ಮಹದೇವ ಅವರು ಅಗ್ರಗಣ್ಯ ಲೇಖಕರಲ್ಲಿ ಒಬ್ಬರು. ಕನ್ನಡ ಕಥಾ ಸಾಹಿತ್ಯಕ್ಕೆ ತನ್ನದೇ ಆದ ಹೊಸ ದಿಕ್ಕು ಆಯಾಮಗಳನ್ನು ತೋರಿಸಿಕೊಟ್ಟವರು. ಇವರು ಜೂನ್,10, 1948ರಲ್ಲಿ ಮೈಸೂರು ಜಿಲ್ಲೆ, ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಜನಿಸಿದರು. ಮೈಸೂರಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಮೈಸೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ನಲ್ಲಿ ಉದ್ಯೋಗ ನಿರತರಾಗಿದ್ದ ಇವರು, ನಂತರದಲ್ಲಿ ಪೂರ್ಣಾವಧಿಯ ಕೃಷಿಕರಾಗಿದ್ದಾರೆ. ಮೊದಲ ಕಥೆ 1967 ರಲ್ಲಿ ಪ್ರಕಟವಾಯಿತು. “ಒಡಲಾಳ, ಕುಸುಮಬಾಲೆ” ಇವರ ಎರಡು ಕಾದಂಬರಿಗಳು. “ದ್ಯಾವನೂರು ಒಟ್ಟು ಏಳು ಕಥೆಗಳ ಸಂಗ್ರಹಗೊಂಡ ಏಕೈಕ ಕಥಾಸಂಕಲನ. ಗಾಂಧಿ ಮತ್ತು ಮಾವು, ನೋಡು ಮತ್ತು ಕೂಡು, ನಂಬಿಕೆಯ ನೆಂಟ, ಇವು ಇವರ ಅನುವಾದಿತ ಕೃತಿಗಳು. ಇವರ “ಒಡಲಾಳ” ಕೃತಿಗೆ 1984 ರಲ್ಲಿ ಕಲ್ಕತ್ತೆಯ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಮತ್ತು “ಕುಸುಮಬಾಲೆ” ಕೃತಿಗೆ 1990ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಾಗೂ “ಎದೆಗೆ ಬಿದ್ದ ಅಕ್ಷರ” ಕೃತಿಗೆ ವಿ.ಎಂ ಇನಂದಾರ್ ಪ್ರಶಸ್ತಿ ದೊರೆತಿದ್ದು, ಅಲ್ಲಮಪ್ರಭು ಪ್ರಶಸ್ತಿ, ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇನ್ನೂ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ‌.

ಅಮಾಸ ಕಥೆಯು ಇವರ ದ್ಯಾವನೂರು ಕಥಾ ಸಂಕಲನದಿಂದ ಆಯ್ದುಕೊಂಡ ಕಥೆಯಾಗಿದ್ದು ಇದು ತಬ್ಬಲಿಯಾದ ಅಮಾಸ ಎಂಬ ಹುಡುಗನನ್ನು ಕುರಿಯಯ್ಯ ಎಂಬಾತನ ಆಸರೆಯಲ್ಲಿ ಬೆಳೆದು ಹುಲಿಯಾಸ ಕುಣಿತದಲ್ಲಿ ಸೈ ಎನಿಸಿಕೊಳ್ಳುವಂತಹ ಕಥಾ ಹಂದರವೇ ಈ ಅಮಾಸ.

"ನಾನು ನವ್ಯರಿಗೆ ಕಿರಿ ತಮ್ಮ ಬಂಡಾಯದವರಿಗೆ ಹಿರಿಯಣ್ಣ” ಎಂದು ಮಹದೇವ ಅವರೇ ತಮ್ಮನ್ನು ಈ ರೀತಿಯಾಗಿ ಗುರುತಿಸಿಕೊಂಡಿದ್ದಾರೆ. "ಈ ನಿಟ್ಟಿನಲ್ಲಿ 1979 ರಲ್ಲಿ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಮೊದಲನೆಯ ಸಮ್ಮೇಳನದಲ್ಲಿ ಕೂಡ ಮಹದೇವರ ವ್ಯಕ್ತಿತ್ವ ಚಿಂತನೆಯ ಪ್ರಭಾವ ಇತ್ತು ಎಂಬುದನ್ನು ದಾಖಲಿಸುವ ಅವತ್ಯವಿದೆ”. (ಸಾಲುದೀಪಗಳು)

ಅಮಾಸ ಕಥೆಯನ್ನು ವೀಕ್ಷಿಸಿದಾಗ ಇದುವರೆಗೂ ಕಂಡಂತಹ ಕಥೆಗಳಲ್ಲಿ ಅಮಾಸ ಭಿನ್ನ ಮಾದರಿಯ ಆಯಾಮವನ್ನು ತಂದು ಕೊಡುವಂತದ್ದು. ಊರಿನ ಮಾರಿಗುಡಿಯಲ್ಲಿ ನಡೆಯುವ ಜಾತ್ರೆಗೂ ಅಲ್ಲೇ ದಿಕ್ಕು ದೆಸೆ ಇಲ್ಲದೆ ಬದುಕಿ ಬಾಳಿದ ಕುರಿಯಯ್ಯನ ಬದುಕಿಗೂ ಮತ್ತು ಅನಾಥನಾಗಿ ಬೆಳೆದ ಅಮಾಸನ ಬದುಕಿಗೂ ಈ ಸಂಪ್ರದಾಯ ಹಾಗೂ ಅನಾದಿಯ ಪರಂಪರೆಯ ಒಂದು ಕೊಂಡಿಯನ್ನು ಜೋಡಿಸುತ್ತದೆ. ಸಾಮಾನ್ಯವಾಗಿ ಊರಿನಲ್ಲಿ ನಡಿಯತಕ್ಕಂಥಹ ಜಾತ್ರೆಗಳಲ್ಲಿ ಹುಲಿಯಾಸ ಇತರೆ ಯಾಸಗಳ(ವೇಷ) ಕುಣಿತಗಳು ಇರುವಂತದ್ದೆ ಡೊಳ್ಳು ಬಡಿಯುವವರು, ತಮಟೆ ಬಾರಿಸುವವರು, ಚಾಟಿ ಬಿಸಿ ಕೊಳ್ಳುವವರು ಇವರೆಲ್ಲ ದಲಿತರೆ ಎಂಬುದನ್ನು ನಾವಿಲ್ಲಿ ಅವಲೋಕಿಸಬೇಕಾದ ಅಂಶ. ಮಾರಿ ಹಬ್ಬ, ಚೌಡಿ ಹಬ್ಬ, ಇಂತಹ ಹಬ್ಬ ಜಾತ್ರೆಗಳು ಹಿಂದುಳಿದವರಿಗೆ ಹಾಗೂ ದಲಿತರಿಗೆ ಮಾತ್ರ ಸೀಮಿತವಾದಂತಹ ಆಚರಣೆಗಳು ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಇಂತಹ ಪರಂಪರೆ ಅಥವಾ ಸಂಪ್ರದಾಯದ ಒಳಚೌಕಟ್ಟಿಗೆ ಕುರಿಯಯ್ಯನು ಬಲಿಯಾದವನೇ, ಅದೆ ಪರಂಪರೆಗೆ ಈಗ ಅಮಾಸನು ಕೂಡ ಸಿಕ್ಕಿ ಹಾಕಿ ಕಾಲು ಮುರಿಕೊಳ್ಳುವ ಸ್ಥಿತಿಯ ಅವಸ್ಥೆಯನ್ನು ಈ ಕತೆಯಲ್ಲಿ ಕಂಡುಬರುತ್ತದೆ.

ಅಂದು ನಡೆದ ಜಾತ್ರೆಯಲ್ಲಿ ತರತರದ ವೇಶ ತೊಟ್ಟು ಅಸಾಧಾರಣವಾದ ಚಾತುರ್ಯವನ್ನು ಆಕಾಲದಲ್ಲಿ ಕುರಿಯಯ್ಯ ಪ್ರದರ್ಶಿಸಿದ್ದ. ಅಂದು ಅನಾಥನಾದ ಅಮಾಸನಿಗೂ ಇದೇ ಕುರಿಯಯ್ಯ ಆಸರೆಯಾಗಿದ್ದ. ಆದರೆ ಅದೇ ಕುರಿಯಯ್ಯನ ಪಾಲಿಗೆ ಒದಗಿ ಬಂದಂತಹ ಸಂದರ್ಭ ಇಂದು ನಡೆದ ಜಾತ್ರೆಯಲ್ಲಿ ಅಮಾಸನ ಹುಲಿ ವೇಷದ ಕುಣಿತಕ್ಕೆ ಎಲ್ಲರೂ ಬೆರಗಾದವರೇ. ಮತ್ತೆ ಈ ಬೆರಗು ಕುರಿಯಯ್ಯನಂತೆ ಅಮಾಸನೊಂದಿಗೆ ಪುನಾವರ್ತನಾ ಶೀಲವಾಗಿ ಕಾಣುವುದು ದುರದೃಷ್ಟಕರ ಸಂಗತಿ.

ಮಹಾದೇವ ಅವರ ಗ್ರಾಮ್ಯದ ಭಾಷಾ ಸೊಗಡು ಕಥೆಯ ನಿರೂಪಣೆಯಲ್ಲಿ ನಿಚ್ಚಳವಾಗಿ ಅಭಿವ್ಯಕ್ತಗೊಂಡು ಭಾಷೆಯ ಸಾಧ್ಯತೆಗಳನ್ನು ಅನನ್ಯವಾದ ರೀತಿಯಲ್ಲಿ ಮೂಡಿಸಿದ್ದಾರೆ.ಈ ಅಮಾಸನ ಕಥೆಯಲ್ಲಿ ಕಾಣುವ ವಿಶಿಷ್ಟವಾದ ಅಂಶವಾಗಿದೆ. "ನಗಪ್ಪಾ ನಗು ನಿಂಗ ನಗೋ ಕಾಲ ನೀ ಏನ ಮಾಡ್ತಿ ನಗ್ದೆ. ನಗು ಮಗ್ನ ಬಡವ್ರ ಉದ್ಧಾರ ಮಾಡವ ನೀನು".ಹೀಗೆಂದು ಹೇಳುವ ರೈಲ್ವೆ ಗ್ಯಾಂಗಮನ್ನು ಆದ ಸಿದ್ದಪ್ಪ ಆ ದಿನ ರಾತ್ರಿ ಹೊಟ್ಟೆ ತುಂಬಾ ಕುಡಿದದ್ದು, ಕುಡಿದ ಅಮಲಿನಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಸಿಡಿ ಕಾರುವುದು ಸಹ ಅಸಹಾಯಕತೆಯ ಬದುಕಿನ ಒಂದು ಹಾದಿಯೇ ಹೊರತು ಬೇರೆನಾಗಲು ಸಾಧ್ಯವಿದೆ? ತಳಸ್ತರದ ಜೀವನ ವಿಧಾನ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತಲಾರದೆ ಸುಪ್ತಾವಸ್ಥೆಯಲ್ಲಿ ಅಡಗಿದ ನೋವಿನ ಅನ್ಯಾಯದ ಕೂಗನ್ನು ಅಜಾಗೃತ, ಅಪ್ರಜ್ಞಾವಸ್ಥೆಯಲ್ಲಿ ಮಾತ್ರ ಧ್ವನಿ ಎತ್ತಲು ಸಾಧ್ಯವಾಗುವಂತಹದ್ದು, ಇದು ಪ್ರತಿಭಟನಾತ್ಮಕವಾದ ರೀತಿಯಲ್ಲಿ ಹೇಳುವುದು ಅಥವಾ ಕೂಗುವುದು ಮನುಷ್ಯನ ಇನ್ನೊಂದು ಸಂಕಟದ ನೋವಿನ ಕೂಗಾಗಿದೆ. ದಿಟ್ಟತೆಯಿಂದ ಎದುರಿಸುವ ಧೈರ್ಯವಿಲ್ಲದೆ ಇಲ್ಲಿ ಸಿದ್ದಯ್ಯನ ಮೂಲಕ ಕಥೆಗಾರರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದನ್ನು ನಾವು ವಿವೇಚಿಸಿದಾಗ ಮತ್ತೊಬ್ಬ ಅಮಾಸ ಇನ್ನೊಂದು ಆಯಾಮದಲ್ಲಿ ಇಂತಹ ಬದುಕಿಗೆ ಜೊತೆಯಾಗುವುದರ ಒಳನೋವನ್ನು ಕಥೆಗಾರರು ವ್ಯಕ್ತಪಡಿಸಿದ್ದಾರೆ.

“ಸಾಮಾಜಿಕ ದೃಷ್ಟಿಕೋನದಿಂದ ಕಥೆಗಳಲ್ಲಿ ಬಿಚ್ಚಿಕೊಳ್ಳುವ ಘಟನೆಗಳಿಗೆ ವಿವರಗಳಿಗೆ ಅರ್ಥ ಧಾರಣ ಮಾಡಿಸುವುದು ಇಂಥ ಕೆಲವು ಅಂಶಗಳಲ್ಲಿ ತೇಜಸ್ವಿ ಮತ್ತು ಮಹದೇವ ಅವರ ಕಥೆಗಳಲ್ಲಿ ಸಾಮ್ಯ ಹೆಚ್ಚಾಗಿ ಕಾಣುತ್ತದೆ”.(ಕನ್ನಡ ಸಣ್ಣ ಕಥೆಗಳು. ಜಿ.ಎಚ್ ನಾಯಕ್- ಪ್ರಸ್ತಾವನೆಯಿಂದ) ಒಟ್ಟಾರೆ ಸಮ್ಮತಿಯೊ ಅಥವಾ ಅಸಮ್ಮತಿಯೊ ತಿಳಿಯಲಾರದ ಸ್ಥಿತಿಯಲ್ಲಿ ನಲುಗುವ ತಳವರ್ಗದವರ ಬದುಕಿನ ಗಾಥೆಯನ್ನು ಮಹದೇವ ಅವರು ಬಹಳ ಗಟ್ಟಿ ದನಿಯಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ಮತ್ತೊಂದು ಬಹಳ ಮುಖ್ಯವಾದ ವಿಷಯ ಕಥೆಗಾರ ಹೊರಗಿನಿಂದ ನಿಂತು ಕಥೆಯನ್ನು ದಾಖಲಿಸುತ್ತಾ ಬರುತ್ತಾರೆ. ಕಥೆಯ ಒಂದು ಭಾಗವಾಗಿ ಕಥೆಯನ್ನು ನಿರೂಪಿಸುತ್ತಾ ಸಾಗುವ ಇವರ ಚಿಂತನಾ ಕ್ರಮ ಆಡು ಭಾಷೆಯ ಮೂಲಕ ವ್ಯಕ್ತವಾಗುವುದು. ಈ ಕಥೆಯಲ್ಲಿ ಕೊನೆಯದಾಗಿ ಅದೇ "ಆ ಮರಿಹುಲಿ ಮಾಡಿತ್ತಲ್ಲ, ಆ ಹೈದ ಯಾರ್ದ" ಎಂದು ಕೇಳಿದ ಊರಿನ ಗೌಡರ ಮಾತಿಗೆ 'ಅದೆ ಅಳಿ ಅಮಾಸ ಅಂತ' ಈ ಮಾತು ಮುಂದಿನ ಪರಂಪರೆಗೆ ನಾಂದಿ ಹಾಡಿದಂತೆ ಕಂಡು ಬರುವುದು."ಅಷ್ಟು ಬೆಳೆದು ಬುಟ್ಟವ್ನ"? ಎಂಬ ಅವರ ಪ್ರಶ್ನಾರ್ಥಕ ಯೋಚನಾ ಲಹರಿ ಗೌಡರ ಕಣ್ಣುಗಳಿಗೆ ಮುಂದೆ ಹಬ್ಬವಾದಂತೆ ಸಂಪ್ರದಾಯದ ಚೌಕಟ್ಟು ಮುಂದುವರಿಯುತ್ತದೆ ಎಂಬುದರ ಪುನರಾವರ್ತನೆಗೊಳ್ಳುವುದರ ಸೂಚಿತವನ್ನು ಕತೆಗಾರ ನೀಡುತ್ತಾರೆ. ಈ ವ್ಯವಸ್ಥೆಗೆ ತಾವು ಬಲಿಯಾಗುತ್ತಿದ್ದೇವೆ ಎಂಬುದರ ಅರಿವೆ ಇಲ್ಲದೆ ಸಾಗುವ ಕೆಳಸ್ತರದ ಜನರ ಬದುಕಿನ ಯಶೋಗಾಥೆಯನ್ನು ಈ ಕತೆ ಪ್ರತಿನಿಧಿಸುತ್ತದೆ. ಆಕಸ್ಮಿಕವಾಗಿ ತಿಳಿದರೂ ಸಹ ಅಸಹಾಯಕತೆಗೆ ಈಡಾಗಿ ಸಿದ್ದಣ್ಣನಂತೆ ಅಜಾಗೃತ ಸ್ಥಿತಿಯಲ್ಲಿ ಮನದ ಮಾತನ್ನು ಹೊರಜಗತ್ತಿಗೆ ತೆರೆಯುವ ಅದೆಷ್ಟು ಜನರ ಬದುಕಿನ ಅವಮಾನ ಅಪಮಾನ ಹೀನಾಯ ಸ್ಥಿತಿಗೆ ಈ ಕತೆ ನೇರ ಉದಾಹರಣೆಯಾಗಿ ನಿಲ್ಲಬಲ್ಲದು. ಈ ಕಥಾ ಹಂದರದಲ್ಲಿ ಕಾಣುವ ಸನ್ನಿವೇಶ ಮತ್ತು ಪರಿಸ್ಥಿತಿ ಸಮಾಕಾಲೀನ ಸಂದರ್ಭಗಳಲ್ಲಿ ಸಹ ಬಲಾಬಲ ವ್ಯವಸ್ಥೆ, ಪರಂಪರೆಯ ನಡುವೆ ನಲುಗಿ ಬಸವಳಿಯುತ್ತಲೇ ಇರುವುದನ್ನು ಈ ಕಥೆಯ ಮೂಲಕ ನೋಡಬಹುದು.ಒಟ್ಟಾರೆ ಕತೆಗಾರ ಅಮಾಸನ ಮೂಲಕ ಪುನರಾವರ್ತನಾ ಬದುಕಿನ ಇನ್ನೊಂದು ಕಾಲಘಟ್ಟದ ಪರಿಚಯವನ್ನು ಬಹಳ ಸೂಕ್ಷ್ಮವಾಗಿ ತೆರೆದು ತೋರಿಸುತ್ತಾರೆ.

ವಾಣಿ ಭಂಡಾರಿ

MORE NEWS

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...

ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು

28-03-2025 ಬೆಂಗಳೂರು

"ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ...

ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು

27-03-2025 ಬೆಂಗಳೂರು

"ಶಿಕ್ಶಣವನ್ನು ಕೊಡುವುದು ಮಕ್ಕಳಿಗೆ. ಹಾಗಾಗಿ ಒಟ್ಟು ಶಿಕ್ಶಣ ವ್ಯವಸ್ತೆಯ ಕೇಂದ್ರ ಬಿಂದು ಮಗು. ಆದ್ದರಿಂದ ಎಲ್ಲ ಆ...