Date: 30-08-2023
Location: ಬೆಂಗಳೂರು
''ತತ್ವಪದಗಳನ್ನು ಹಾಡಿದ ಮೇಲೆ ಪದಗಳ ಅರ್ಥ, ಪದಾರ್ಥ, ಟೀಕುಗಳನ್ನು ಸರಳಗೊಳಿಸಿ ಹೇಳುವ ವಾತ್ಸಲ್ಯದ ಮಾರ್ಗಗಳನ್ನು ಹುಡುಕಿಕೊಳ್ಳುವ ನೈಪುಣ್ಯತೆ ಅವರದಾಗಿತ್ತು. ಅವರದು ಯಾವತ್ತೂ ಶುಷ್ಕ ಅಧ್ಯಾತ್ಮದ ಮಾರ್ಗವಲ್ಲ. ಅದು ಅವರಿಗೆ ಹಣೆಗೆ ಹಚ್ಚಿಕೊಂಡ ವಿಭೂತಿಯಷ್ಟೇ ಸರಳದಾರಿ. ಹೌದು ಅನುಭಾವದ ವಿಸ್ತಾರವೇ ಅಂತಹದ್ದು. ಅದನ್ನು ಅನುಭಾವಿಸುತ್ತಲೇ ವಿಸ್ತರಿಸಿಕೊಳ್ಳುತ್ತದೆ,” ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ `ರೊಟ್ಟಿಬುತ್ತಿ' ಅಂಕಣದಲ್ಲಿ, “ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು” ಕುರಿತು ಲೇಖನವನ್ನು ಬರೆದಿದ್ದಾರೆ.
ಗ್ರಾಮ ಭಾರತದ ಕುಟುಂಬ, ಓಣಿ, ಊರಿನ ಸಾಮಾಜಿಕ ವ್ಯವಸ್ಥೆಗಳು ಪಲ್ಲಟದ ಮನಃಸ್ಥಿತಿ ತಲುಪಿವೆ. ಮಾನವೀಯ ಸಂಬಂಧಗಳು ತೀರಾ ತೆಳುವಾಗ ತೊಡಗಿವೆ. ಅಂತಃಕರಣ, ಮಧುರಪ್ರೀತಿ, ಬಂಧುತ್ವ ಕ್ಷೀಣಗೊಂಡಿವೆ. ಹೀಗಿರುವಾಗಲೂ ನನ್ನೂರಿನ ಅಸಂಖ್ಯ ನೆನಪುಗಳು ಸೌಹಾರ್ದ ಸಂಸ್ಕೃತಿಯಂತೆ ನನ್ನೊಳಗೆ ಹರಿಗಡಿಯದೇ ಹರಿಯುತ್ತವೆ. ಹಾಗೆ ಉಕ್ಕಿ ಹರಿಯುವ ಸಹೃದಯ ನೆನಹುಗಳನ್ನು ಹೆಕ್ಕಿ ತೋರಿಸುವ ಯತ್ನದಂತೆ ಪ್ರಸ್ತುತ 'ಜವಾರಿ ಗೆಣೆಕಾರ ಜೋಡೆತ್ತುಗಳ' ಈ ದೋಸ್ತಿ ಬರಹ.
ಗೆಳೆತನಕ್ಕೆ ಹೇಳಿ ಮಾಡಿಸಿದ ಭಾವಬಂಧುರ ಜೋಡಿ ಅವರದು. ಎರಡುಜೀವ ಒಂದೇ ಆತ್ಮದಂತಹ ಜಿಗ್ರೀದೋಸ್ತಿ. ಜೀವಕ್ಕೆ ಜೀವ ಕೊಡುವಂತಹ ಅಪ್ಪಟ ಗೆಣೆಕಾರರು. ಒಂದೆರಡು ವರುಷಗಳ ಕೇವಲ ತೋರಿಕೆಯ ಹುಕಿಗಾಗಿ ಇರುವ ಸ್ನೇಹ ಸಂಬಂಧ ಅದಲ್ಲ. ನಿತಾಂತ ಮತ್ತು ನಿಡಿದಾದ ಅವರ ಸ್ನೇಹಶೀಲ ಬದುಕಿನ ತಿತಿಕ್ಷೆ ಎದುರು ನಮ್ಮೆಲ್ಲ ನಿರ್ಲಿಪ್ತತೆ ಸೋಲುವಂತಹದು. ಏನಿಲ್ಲವೆಂದರೂ ಅದು ಐವತ್ತು ವರುಷಗಳನ್ನು ಮೀರಿದ ಸದೃಢ ಸ್ನೇಹದ ಜಬರ್ದಸ್ತ್ ಮಿತೃತ್ವ.
ಅಂದಹಾಗೆ ಅವರ ಹೆಸರು ಸಾಧುಶಿವಣ್ಣ ಮತ್ತು ನಿಂಗಪ್ಪ ಪೂಜೇರಿ. ಈರ್ವರೂ ರೋಮರೋಮ ಶ್ರಮಪಡುವ ಬೆವರು ಭಕ್ತಿಯ ಅಪ್ಪಟ ಒಕ್ಕಲಿಗರು. ಸಾಧುಗೆ ಅಂಗೈ ಅಗಲ ಭೂಮಿ ಇರಲಿಲ್ಲ. ಊರ ಸಾಹುಕಾರರಲ್ಲಿ ದಶಕಗಟ್ಟಲೇ ಜೀತಕ್ಕಿದ್ದ. ಅದು ಕೇವಲ ಹೊಟ್ಟೆ ಬಟ್ಟೆಗೆ ನ್ಯಾರವಾಯ್ತು. ಜೀತಬಿಟ್ಟು ಹೊಟ್ಟೆಬಟ್ಟೆ ಕಟ್ಟಿ ರಟ್ಟೆಯ ಕೂಲಿನಾಲಿ ಮಾಡಿ ನೂರೈವತ್ತು ರುಪಾಯಿ ಕೂಡಿಟ್ಟ. ಕೇವಲ ಮುನ್ನೂರು ರುಪಾಯಿ ಕಿಮ್ಮತ್ತಿನ ಹೊಲ ಕೊಳ್ಳಲು ಇನ್ನರ್ಧದಷ್ಟು ರೊಕ್ಕ ಬೇಕಿತ್ತು. ಆಗ ಆತಗೆ ಊರ ಹಿರೀಕರಾದ ಬಸಗೌಡ ಮುತ್ಯಾ ನೂರೈವತ್ತು ರುಪಾಯಿ ಸಾಲಕೊಟ್ಟು ನೆರವಾದರು. ಸಾಲ ತೀರಿಸಿಯೂ ಅವರ ನೆರವನ್ನು ಸಾಧು ಸಾಯೋಮಟ ನೆನೆಯುತ್ತಿದ್ದ. ಆದರೆ ಪೂಜೇರಿಗೆ ಅವನ ಅಪ್ಪ ಅವ್ವ ಗಳಿಸಿಟ್ಟ ಹೊಲವಿತ್ತು. ಕುಟುಂಬದ ಬದುಕಿಗೆ ಅಷ್ಟು ಹೊಲ ಸಾಕಿತ್ತು.
ಇಬ್ಬರೂ ಭೂಮ್ತಾಯಿ ಮೇಲೆ ಅಪೂರ್ವ ನಂಬುಗೆ ಇಟ್ಟು ದುಡಿದುಣ್ಣುವ ಮಣ್ಣಿನಮಕ್ಕಳು. ಹಾಗೆಯೇ ಪರಿಶ್ರಮಕ್ಕೆ ತಕ್ಕ ಫಲವನ್ನು ಕಾಣುತ್ತಿದ್ದರು. ಹೊಲದಲ್ಲಿ ಬೆಳೆಯಲಾರದ ಧಾನ್ಯರಾಶಿ ಫಲಗಳೇ ಇರ್ತಿರಲಿಲ್ಲ. ಹೆಚ್ಚೆಂದರೆ ಉಪ್ಪು ಮಾತ್ರ ಕೊಂಡುಕೊಳ್ಳುತ್ತಿದ್ದರು. ಅದರ ಹೊರತಾಗಿ ಉಳಿದೆಲ್ಲ ಗೃಹೋಪಯೋಗಿ ಎಣ್ಣೆಕಾಳು, ದವಸ ಧಾನ್ಯಗಳನ್ನು ಬೆಳೆಯುತ್ತಿದ್ದರು. ಉತ್ತಿ ಬಿತ್ತಿ ಬೆಳೆಯುವಲ್ಲಿ ಅವರಿಬ್ಬರೂ ಸೌಹಾರ್ದದ ಸವಡಿಕಾರರು. ಒಕ್ಕಲುತನ ಅವರಿಗೆ ಕಾಯಕ ಮಾತ್ರವಲ್ಲ ಅದು ಅವರ ಆತ್ಮಸಾಕ್ಷಿಯ ಜೀವನಧರ್ಮವೇ ಆಗಿತ್ತು. ಮನುಷ್ಯರ ಹಾಗೆ ಅವರು ಎತ್ತುಗಳಿಗೆ, ಹೊಲಗಳಿಗೆ ಹೆಸರುಗಳನ್ನು ಇಟ್ಟಿದ್ದರು. ಅಂತಹ ಹೆಸರುಗಳ ಮೂಲಕ ಭಾವಸೇತು ಸಂಬಂಧದ ನಡವಳಿಕೆ ಅವರದಾಗಿತ್ತು. ಯಾವತ್ತೂ ನಸೀಬದ ಮೇಲೆಯೇ ನಂಬಿ ಕುಂತವರಲ್ಲ. ಅಂತೆಯೇ ತಮ್ಮ ಸಾವಿನ ಕಡೆಯ ದಿನಗಳವರೆಗೆ ಹೊಲಕ್ಕೆ ಹೋಗಿ ತಮ್ಮ ಪಾಲಿನ ಕೈಲಾದಷ್ಟು ಕರ್ತವ್ಯ ಪಾಲಿಸಿದ ಜೀವಗಳು.
ಅವರು ಒಕ್ಕಲುಮಕ್ಕಳ ಜಾನಪದ ಭಂಡಾರದ ಒಡೆಯರೇ ಆಗಿದ್ದರು. ಹಂತಿಪದ, ಬಯಲಾಟ, ಪಾರಿಜಾತ, ಡೊಳ್ಳಿನ ಪದಗಳು. ಮೋಹರಮ್ ಹಬ್ಬದ ಅಲೈ ದೇವರ ಕುಣಿತ. ಅದೇ ಪೀರಲ್ಹಬ್ಬದ ರಿವಾಯತ ಪದಗಳನ್ನು ಇಡೀರಾತ್ರಿ ಹಾಡುವ ಅವರ ಸಂಭ್ರಮ, ಸಂತಸಕೆ ಸಾಟಿ ಇರಲಿಲ್ಲ. ಸುಡುಸುಡುವ ಕಡುಬೇಸಿಗೆಯಲ್ಲಿ ಹೊಲದ ಕೆಲಸಗಳಿಗೆ ಕೆಲಕಾಲ ಬಿಡುವು. ಹಾಗೆ ಸವುಡಿದ್ದಾಗ ಅವರಿಗೆ ಹಗ್ಗ ಹೊಸೆಯುವ ಕಾಯಕ. ಖುದ್ದು ತಾವೇ ಕಷ್ಟಪಟ್ಟು ಪುಂಡಿ, ಖೇದಗಿ ಪಟ್ಟಿಗಳನ್ನು ತಿಂಗಳುಗಟ್ಟಲೇ ಕರಮನಹಳ್ಳದಲ್ಲಿ ನೆನೆಯಿಟ್ಟು ಕಳಿತ ಮೇಲೆ ಅದನ್ನು ಬಂಡೆಗೆ ಬಡಿದು ನಿವ್ವಳದ ನಾರು ತಯಾರಿಸುತ್ತಿದ್ದರು.
ಹಾಗೆ ತಾವೇ ತಯಾರಿಸಿದ ತಿಳಿಹಳದಿ ನಾರಿನಿಂದ ಹಗ್ಗ, ಕಣ್ಣಿ, ಹಣೆಹಗ್ಗ, ಸೋಲ್ಹಗ್ಗ, ಬಾಯಿಚಿಕ್ಕ, ಮಗಡ, ಮೂಗುದಾಣ ಇತರೆ ತಮ್ಮ ರೈತಾಪಿ ಕಸುಬು, ಕೆಲಸಗಳಿಗೆ ಬೇಕಾದ ಎಲ್ಲ ಪರಿಕರಗಳನ್ನು ಕೈಯಲ್ಲೇ ಹೊಸೆದು ತಯಾರಿಸುತ್ತಿದ್ದರು. ಕುಸುಬೆ ಎಣ್ಣೆಯನ್ನು ಕೈಗಾಣದಲ್ಲಿ ತಯಾರಿಸಿ ವರುಷ ಪೂರ್ತಿ ತುಪ್ಪದಂತಹ ಅಪ್ಪಟ ಕುಸುಬೆ ಗಾಣದೆಣ್ಣೆ ಅಡುಗೆಗೆ ಬಳಸುತ್ತಿದ್ದರು. ಹಾಗೆ ತಾವು ರೂಢಿಸಿಕೊಂಡಿರುವುದು ಸಾವಯವ ಬೇಸಾಯ ಪದ್ಧತಿ ಎಂಬುದನ್ನು ಸಹ ಅರಿಯದ ಮುಗ್ಧ ಜವಾರಿತನ ಅವರದು. ಹೊರಸು ಹೆಣೆದು ಅದರ ಪೂರ್ಣ ತಯಾರಿಕೆಯಲ್ಲಿ ಪೂಜೇರಿಗೆ ವಿಶೇಷ ಪರಿಣತಿ. ತಾವು ಬೆಳೆದ ಸೇಂಗಾ, ತೊಗರಿ, ಹತ್ತಿ, ಇತರೆ ಎಲ್ಲಾ ವಾಣಿಜ್ಯ ಮಾಲುಗಳನ್ನು ತಮ್ಮ ಎತ್ತುಗಳ ಜೋಡಿ ಗಾಡಿಗಳಲ್ಲೇ ದೂರದ ಯಾದಗಿರಿಯ ಮಾರುಕಟ್ಟೆಗೆ ಒಯ್ಯುವಲ್ಲೂ ಒಮ್ಮನದ ಪ್ರೀತಿ, ಸಹಕಾರ ಅವರದು.
ಜಾತಿಯಿಂದ ಬೇರೆ ಬೇರೆಯಾದರೂ ಇಬ್ಬರ ಕುಟುಂಬಗಳಲ್ಲಿ ತುಂಬಿ ತುಳಿಕ್ಯಾಡುವ ಅವರ್ಣನೀಯ ಅನ್ಯೋನ್ಯತೆ. ಮದುವೆ ಮುಂಜಿ, ಹಬ್ಬ ಹುಣ್ಣಿಮೆ, ಕಷ್ಟ ಸುಖ ಹೀಗೆ ಎಲ್ಲದರಲ್ಲೂ ಮಧುರ ಸಂಬಂಧಗಳ ಬಂಧುರತೆ. ಪರಸ್ಪರ ಪ್ರೀತಿ ವಿನಿಮಯದ ಅನುಭೂತಿ, ಆಚರಣೆ. ಬರಿ ಇಷ್ಟೇ ಆಗಿದ್ದರೆ ಇಲ್ಲಿ ಉಲ್ಲೇಖಿಸಿ ಬರೆಯುವ ಹರಕತ್ತು ಇರಲಿಲ್ಲ. ಇದನ್ನು ಮೀರಿದ ಅವರು ಗುರುಮಾರ್ಗ ಪರಂಪರೆಯನ್ನು ಬಾಳಿ ಬದುಕಿದವರು. ಪ್ರಾಪಂಚಿಕರಾಗಿದ್ದುಕೊಂಡೇ ಪಾರಮಾರ್ಥದ ಅನುಸಂಧಾನ ಮಾಡಿಕೊಂಡವರು. ಅದನ್ನು ಬದುಕಿನುದ್ದಕ್ಕೂ ಬಾಳಿ ತೋರಿದವರು. ನೂರರ ಏರುಪ್ರಾಯದವರೆಗೆ ಬದುಕಿದ್ದ ಅವರು ಯಾವತ್ತೂ ಜಗಳವಾಡುವುದಲ್ಲ ಕನಸು ಮನಸಿನಲ್ಲೂ ಪರಸ್ಪರ ಬೇಸರ ಮಾಡಿಕೊಂಡವರಲ್ಲ.
ಉಲ್ಲೇಖಿಸಲೇ ಬೇಕಾದ ಸಂಗತಿಯೊಂದಿದೆ. ಅವರು ಗವಿ ಭೀಮಾಶಂಕರ ಅವಧೂತರಿಂದ 'ಗುರುಬೋಧೆ' ಪಡೆದು ಗುರುಪುತ್ರರಾಗಿದ್ದರು. ತಮ್ಮ ತಮ್ಮ ಬಾಳಸಂಗಾತಿಗಳಿಗೂ ಗುರುಬೋಧೆ ಕೊಡಿಸಿದ್ದರು. ಆ ಮೂಲಕ ಅವರೂ ಗುರುಪುತ್ರಿಯರಾಗಿದ್ದರು. ಗುರುಬೋಧೆ ಪಡೆದು ಸುಮ್ಮನೆ ಕೂಡಲಿಲ್ಲ. ಗವಿ ಭೀಮಾಶಂಕರರ ಗರಡಿಯಲ್ಲಿ ಪಳಗಿದ ಅವರು ತಮ್ಮ ಗುರುಗಳ ತರುವಾಯ ಗುರುತೋರಿದ ಅವಧೂತ ಬದುಕಿನ ಹಸನಾದ ಹಾದಿಗಳನ್ನು ಕಂಡುಕೊಂಡರು. ಪ್ರತಿನಿತ್ಯವೂ ಅಪ್ಪ ಮಡಿವಾಳಪ್ಪನ ತತ್ವಪದಗಳನ್ನು ಸೊಗಸಾದ ರಾಗಗಳಲ್ಲಿ ಹಾಡುವಲ್ಲಿ ಇಬ್ಬರೂ ಎತ್ತಿದ ಕೈಗಳು. ಏಕತಾರಿ, ತಾಳ, ದಮಡಿಗಳನ್ನು ಹಾಡಿಗೆ ತಕ್ಕಂತೆ ನುಡಿಸುವಲ್ಲಿ ನಿಪುಣರು. ನೂರಾರು ಮಂದಿಗೆ ಗುರುಕಲಿಸಿದ ತತ್ವಪದಗಳನ್ನು ಹೇಗೆ ಹಾಡಬೇಕೆಂಬುದನ್ನು ಕಲಿಸಿಕೊಟ್ಟರು.
ತತ್ವಪದಗಳನ್ನು ಹಾಡಿದ ಮೇಲೆ ಪದಗಳ ಅರ್ಥ, ಪದಾರ್ಥ, ಟೀಕುಗಳನ್ನು ಸರಳಗೊಳಿಸಿ ಹೇಳುವ ವಾತ್ಸಲ್ಯದ ಮಾರ್ಗಗಳನ್ನು ಹುಡುಕಿಕೊಳ್ಳುವ ನೈಪುಣ್ಯತೆ ಅವರದಾಗಿತ್ತು. ಅವರದು ಯಾವತ್ತೂ ಶುಷ್ಕ ಅಧ್ಯಾತ್ಮದ ಮಾರ್ಗವಲ್ಲ. ಅದು ಅವರಿಗೆ ಹಣೆಗೆ ಹಚ್ಚಿಕೊಂಡ ವಿಭೂತಿಯಷ್ಟೇ ಸರಳದಾರಿ. ಹೌದು ಅನುಭಾವದ ವಿಸ್ತಾರವೇ ಅಂತಹದ್ದು. ಅದನ್ನು ಅನುಭಾವಿಸುತ್ತಲೇ ವಿಸ್ತರಿಸಿಕೊಳ್ಳುತ್ತದೆ. ಅದು ಶಬ್ಧಾರ್ಥಗಳನ್ನು ಮೀರಿದ ಅರಿವಿನ ಗುರುಮನೆ. ಅದೆಷ್ಟೋ ಬಾರಿ ಅವರ ಮಾತುಗಳಿಗೆ ರಹಸ್ಯದ ರಹದಾರಿ. ನಿರಾಕಾರದಂತೆ ಭಾಷೆಯ ಅರ್ಥ, ಕ್ರಿಯೆ, ಪ್ರತಿಕ್ರಿಯೆಯ ರೋಗಗಳಿಂದ ವಿಮುಕ್ತವಾಗಿರುತ್ತಿದ್ದವು.
ಅಜಾತ, ಅವಧೂತ, ಆರೂಢ ಇದೆಲ್ಲ ತಮ್ಮಗುರು ಭೀಮಾಶಂಕರರ ಬದುಕಿನ ವ್ಯಾಕರಣ. ಅದನ್ನು ಅನುಷ್ಠಾನಕ್ಕೆ ತರುವುದು ಮಾತ್ರ ತಮ್ಮದೆಂಬ ಕಾಯಕ ಜೀವಿಗಳು. ಅಂತೆಯೇ ಊರೂರಿಗೆ ಹೋಗಿ ಭಜನೆಗಳ ಮೂಲಕ ಗುರುಮನೆಯ ತತ್ವಾನುಸಂಧಾನ ಪ್ರಮಾಣಗಳು ಜರುಗುತ್ತಿದ್ದವು. ನಿಂಗಪ್ಪ ಪೂಜೇರಿ ಮಾತ್ರ ಗುರುವಿನಿಂದ ತಪ್ಪಲು ತಡಿ, ಗಿಡಮೂಲಿಕೆ ಔಷಧಗಳ ಪರಿಚಯ ಹೊಂದಿದ್ದು ಅನೇಕರ ರೋಗಗಳನ್ನು ವಾಸಿಮಾಡಿದ ನೆನಪು ನನಗಿದೆ. ಲಕ್ಕಿ ತಪ್ಪಲು, ಔಡಲೆಲೆಗಳನ್ನು ನನಗೆ ನೆಗಡಿ, ಜ್ವರಬಂದಾಗ ಔಷಧಿಯಂತೆ ಬಳಸಿ, ಜಡ್ಡು ನೆಟ್ಟಗಾಗಿಸಿದ ಸಾಕಷ್ಟು ನೆನಪುಗಳಿವೆ. ಕಣ್ಮನಗಳಿಗೆ ತಂಪೆರೆಯುವ ಔಡಲೆಣ್ಣೆಯ ಹಣತೆ ದೀಪಗಳನ್ನೇ ಅವರು ಬಳಸುತ್ತಿದ್ದರು.
ಸಾಧು ಶಿವಣ್ಣ ೧೯೮೯ ರಲ್ಲಿ ನಿಧನರಾದರು. ಅದಕ್ಕೆ ಮೊದಲೇ ನಿಂಗಪ್ಪ ಪೂಜೇರಿ ನಿಧನರಾಗಿದ್ದರು. ಸಾವಿನ ಕಡೆಯ ಕ್ಷಣಗಳಲ್ಲಿ ಸಮಾನ ಮನಸ್ಕ ಅವರಿಬ್ಬರನ್ನು ಕಾಡಿದ್ದು ಅಸ್ಥಮಾ. ಇಬ್ಬರೂ ಅಸ್ಥಮಾದ ಉಬ್ಬಸುರೋಗಕ್ಕೆ ಬಲಿಯಾದರು. ಅವರೀರ್ವರ ನಿರ್ಗಮನದೊಂದಿಗೆ ಗ್ರಾಮ ಸೌಹಾರ್ದ ಸಂಸ್ಕೃತಿಯ 'ಜವಾರಿ ಜೋಡೆತ್ತಿನ ಪ್ರಬಲ ಕೊಂಡಿಯೊಂದು' ಕಳಚಿ ಕೊಂಡಂತಾಯಿತು. ಕಡಕೋಳ ಮಡಿವಾಳಪ್ಪನೆಂಬ ಹಸಿರು ಹೆಮ್ಮರದ ರೆಂಬೆ ಕೊಂಬೆಗಳು ಒಣಗಿ ಮುರಿದು ಬಿದ್ದಂತಹ ಮಹಾನಷ್ಟ. ಇಲ್ಲಿ ನಮ್ಮೂರು, ಸಾಧು ಮತ್ತು ಪೂಜೇರಿ ಕೇವಲ ರೂಪಕ ಉಲ್ಲೇಖಗಳು ಮಾತ್ರ. ಗ್ರಾಮಭಾರತದ ಪ್ರತೀ ಹಳ್ಳಿಗಳು ಈ ಬಗೆಯ ಕಳಚಿಕೊಂಡ ಕೊಂಡಿಗಳ ಕೊರತೆಯಿಂದ ಹಳಿತಪ್ಪಿ ನಲುಗುತ್ತಲಿವೆ. ಇಂತಹ ದುರಿತಮಯ ಗ್ರಾಮಸಮರ ಮುಗಿಯಬಲ್ಲದೇ? ಗ್ರಾಮಭಾರತ ಉಳಿಯಬಲ್ಲದೇ.?
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು:
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳ...
"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸ...
"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ...
©2025 Book Brahma Private Limited.