ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ 

Date: 10-07-2024

Location: ಬೆಂಗಳೂರು


"ಸಮ್ಮೇಳನಾಧ್ಯಕ್ಷ ಭಾಷಣದ ಪುಸ್ತಿಕೆಯ ಪುಟಸಂಖ್ಯೆ ಹದಿನೈದರ "ಕಡಕೋಳ ಮಡಿವಾಳಪ್ಪನ ನಾಡಿಗೆ ಬೇಕಾದ ಎಂಟು ಅಗತ್ಯ" ಅಂಶಗಳಲ್ಲಿ ಇದೀಗ ಮುನ್ನೆಲೆಗೆ ಬಂದು ತೀವ್ರ ಸಂಚಲನೆ ಮೂಡಿಸಿರುವ ಮೂರನೇ ಅಂಶ ಹೀಗಿದೆ. "ನೆನೆಗುದಿಗೆ ಬಿದ್ದಿರುವ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳ್ಳಬೇಕು. ಅದಕ್ಕಾಗಿ ಮಠಾಧೀಶರು ಮತ್ತೊಮ್ಮೆ ಸತ್ಯಾಗ್ರಹಕ್ಕೆ ಕೂಡುವಂತಾಗ ಬಾರದು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣದಲ್ಲಿ ‘ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ’ ಕುರಿತು ಬರೆದಿರುವ ಲೇಖನ.

ಎರಡು ಸಾವಿರದ ಹತ್ತೊಂಬತ್ತನೆಯ ಇಸವಿ ಡಿಸೆಂಬರ್ ತಿಂಗಳು ಇಪ್ಪತ್ತೆರಡನೇ ತಾರೀಖು. ಅವತ್ತು ಕಲಬುರ್ಗಿ ಜಿಲ್ಲೆಯ ನೂತನ ಯಡ್ರಾಮಿ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ. ಅದು ಮೊಟ್ಟ ಮೊದಲ‌ ಸಾಹಿತ್ಯ ಸಮ್ಮೇಳನ ಆಗಿದ್ದರಿಂದ ಸಹಜವಾಗಿ ತಾಲೂಕಿನ ತುಂಬೆಲ್ಲ ಸಂಭ್ರಮ, ಸಡಗರ ತುಂಬಿ ತುಳುಕಿತ್ತು. ಒಂದೂವರೆ ಕಿಲೋಮೀಟರ್ ಉದ್ದಕ್ಕೂ ಹಾಡು, ಕುಣಿತ, ವಿವಿಧ ವಾದ್ಯ, ಕಲಾಮೇಳಗಳ ವರ್ಣರಂಜಿತ ಮೆರವಣಿಗೆ. ಅಂತಹ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಅವಕಾಶ ನನಗೆ ಒದಗಿ ಬಂದಿತ್ತು.

ಅಂದಿನ ಸಮ್ಮೇಳನಾಧ್ಯಕ್ಷ ಭಾಷಣವನ್ನು "ಏಕತಾರಿ ನಾದ ಧ್ಯಾನದ ಬಯಲು ಕಟ್ಟೋಣ" ಎಂಬ ಪುಸ್ತಿಕೆ ರೂಪದಲ್ಲಿ ಪ್ರಕಟಿಸಿ ತಂದಿದ್ದೆ. ಇಪ್ಪತ್ತು ಪುಟಗಳ ಸುದೀರ್ಘ ಭಾಷಣ ಓದಿ ಹೇಳುವಷ್ಟು ಮತ್ತು ಕೇಳುವಷ್ಟು ವ್ಯವಧಾನ ಕಡೆಯ ಗಳಿಗೆಯಲ್ಲಿ ಇಲ್ಲವಾದ್ದರಿಂದ ಮುದ್ರಿತ ಭಾಷಣದ ಮೂರು ಸಾವಿರ ಪ್ರತಿಗಳನ್ನು ಹಂಚಲಾಯಿತು. ಅಂದಹಾಗೆ ಅಂದಿನ ನನ್ನ ಭಾಷಣದ ಪ್ರಮುಖ ಅಂಶವೊಂದು ಇಂದು ಮುನ್ನೆಲೆಗೆ ಬಂದಿದೆ. ಹಾಗೆ ನೋಡಿದರೆ ಅಂದು ಪ್ರಸ್ತಾಪಿಸಿದ ಮತ್ತು ಮುನ್ನೆಲೆಗೆ ಬರಬೇಕಾದ ಜನಮುಖಿಯಾದ ಇನ್ನೂ ಕೆಲವು ಸಂಗತಿಗಳಿವೆ. ಅವಕ್ಕೂ ಕಾಲ ಕೂಡಿ ಬರುವ ಕಾಲ ಸನ್ನಿಹಿತ.

ಸಮ್ಮೇಳನಾಧ್ಯಕ್ಷ ಭಾಷಣದ ಪುಸ್ತಿಕೆಯ ಪುಟಸಂಖ್ಯೆ ಹದಿನೈದರ "ಕಡಕೋಳ ಮಡಿವಾಳಪ್ಪನ ನಾಡಿಗೆ ಬೇಕಾದ ಎಂಟು ಅಗತ್ಯ" ಅಂಶಗಳಲ್ಲಿ ಇದೀಗ ಮುನ್ನೆಲೆಗೆ ಬಂದು ತೀವ್ರ ಸಂಚಲನೆ ಮೂಡಿಸಿರುವ ಮೂರನೇ ಅಂಶ ಹೀಗಿದೆ. "ನೆನೆಗುದಿಗೆ ಬಿದ್ದಿರುವ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳ್ಳಬೇಕು. ಅದಕ್ಕಾಗಿ ಮಠಾಧೀಶರು ಮತ್ತೊಮ್ಮೆ ಸತ್ಯಾಗ್ರಹಕ್ಕೆ ಕೂಡುವಂತಾಗ ಬಾರದು". ಅಂದಿನ ಪ್ರಥಮ ಸಾಹಿತ್ಯ ಸಮ್ಮೇಳನ ಈ ಕುರಿತು ಠರಾವು ಸಹಿತ ತೆಗೆದು ಕೊಂಡಿತ್ತು. ತಾಲೂಕು ಅಲ್ಲ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ತೆಗೆದುಕೊಳ್ಳುವ ಅನೇಕ ನಿರ್ಣಯಗಳಿಗೂ ಸರಕಾರದ ನಿರ್ಲಕ್ಷ್ಯವೇ ಗತಿ.

ಬಹುಪಾಲು ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳಿಗೆ ಸರ್ಕಾರದ ಕಣ್ಣು ಕಿವಿಗಳು ಸೂಕ್ಷ್ಮ ಸಂವೇದನೆ ಕಳಕೊಳ್ಳುವುದು ರೂಢಿಯಾಗಿ ಹೋಗಿದೆ. ಮಲ್ಲಾಬಾದಿ ಏತ ನೀರಾವರಿ ಯೋಜನೆ ಕುರಿತಾದ ನಿರ್ಣಯ ಅದಕ್ಕೆ ಹೊರತಾಗಿ ಉಳಿಯಲು ಸಾಧ್ಯವಾಗಲಿಲ್ಲ. ಏಕೆಂದರೆ ರಾಜಕಾರಣ ಮತ್ತು ರಾಜಕಾರಣಿ ಎಲ್ಲಕಡೆ ಮತ್ತು ಎಲ್ಲ ಕಾಲಕ್ಕೂ ಒಂದೇಬಗೆಯ ರಕ್ತದಗುಂಪಿಗೆ ಸೇರಿಕೆ ಆಗಿರುವ ಪ್ರಭೇದಗಳು. ಅದು ಆಳುವ ಪ್ರಭುತ್ವದ ಬಲಾಢ್ಯ ಅವಲಕ್ಷಣವೂ ಆದಂತಿದೆ. ಆದರೆ ದಡ್ಡುಗಟ್ಟಿದ ಅಧಿಕಾರಶಾಹಿಗೆ ಮತ್ತು ಕುಯುಕ್ತಿಯ ರಾಜಕಾರಣಕ್ಕೆ ಪಾಠ ಕಲಿಸುವ ಸಾಮರ್ಥ್ಯ ಜನಶಕ್ತಿಗಿದೆ ಎಂಬುದನ್ನು ಯಾರೂ ಮರೆಯಬಾರದು.

ಅಂದಿನ ಅವಿಭಜಿತ ಜೇವರ್ಗಿ ತಾಲೂಕಿನ ನಮ್ಮವರೇ ಆಗಿದ್ದ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದರು. ತಾಲೂಕಿನ ನಮಗೆಲ್ಲ ಅಪಾರ ಸಂತಸ. ಅಪರಿಮಿತ ಆನಂದ. ಹೀಗೆ ಏನೆಲ್ಲ ಪ್ರೀತಿ, ಮಮಕಾರಗಳ ಮಹಾಪೂರ. ಸಹಜವಾಗಿ ತಾಲೂಕಿನ ಮಲ್ಲಾಬಾದಿ ಏತ ನೀರಾವರಿಗೆ ಮುಕ್ತಿ ದೊರಕುತ್ತದೆಂಬ ಮುಗುಮ್ಮಾದ ನಂಬಿಕೆ ನಮಗೆಲ್ಲರಿಗೂ ಇತ್ತು. ಅದು ಫಲಿಸದೇ ಇದ್ದಾಗ ಜೇವರ್ಗಿ ತಾಲೂಕಿನ ಸಾವಿರಾರು ರೈತರು, ಹದಿನಾರು ಮಂದಿ ಮಠಾಧೀಶರು ಅದಕ್ಕಾಗಿ ಉಪವಾಸ ಸತ್ಯಾಗ್ರಹ ಕುಂತರು. ಒಂಬತ್ತು ದಿನಗಳ ಕಾಲ ಜರುಗಿದ ಸತ್ಯಾಗ್ರಹದ ಸಾರಥ್ಯ ವಹಿಸಿದವರು ಅಂದಿನ ಜೆಡಿಎಸ್ ಪಕ್ಷದ ತಾಲೂಕು ಮತ್ತು ಜಿಲ್ಲಾ ಮುಖಂಡರಾಗಿದ್ದ ಕೇದಾರಲಿಂಗಯ್ಯ. ಸತ್ಯಾಗ್ರಹಕ್ಕೆ ತಾತ್ಕಾಲಿಕ ಪರಿಹಾರವೂ ದೊರಕಿತು.

ಅದೇ ಕೇದಾರಲಿಂಗಯ್ಯ, ಕಳೆದ ವಿಧಾನಸಭೆ ಚುನಾವಣೆಯ ಬದಲಾದ ರಾಜಕೀಯ ಸಂದರ್ಭದಲ್ಲಿ ಧರ್ಮಸಿಂಗ್ ಅವರ ಮಗ ಅಜಯಸಿಂಗ್ ಅವರೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಸೇರ್ಪಡೆಯಾದರು. ತನ್ಮೂಲಕ ಮಲ್ಲಾಬಾದಿ ಏತ ನೀರಾವರಿಯಂತಹ ಅನೇಕ ಜನಪರ ಕಾರ್ಯಗಳ ಕುರಿತು ತಾಲೂಕಿನಲ್ಲಿ ಮೊದಲಿನಂತೆ ಹಕ್ಕಿನೊಡೆತನ ಹಾಗೂ ಹೋರಾಟದ ಧ್ವನಿಯಲ್ಲಿ ಮಾತಾಡುವುದನ್ನು ಅವರು ಕಳೆದುಕೊಂಡರು. ಆದಾಗ್ಯೂ ಒಂದರೆಡು ಬಸ್ಸುಗಳಲ್ಲಿ ರೈತರನ್ನು ಬೆಂಗಳೂರಿಗೆ ಕರಕೊಂಡು ಹೋಗಿ ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿ ಅವರನ್ನು ಭೆಟ್ಟಿ ಮಾಡಿ ಮಲ್ಲಾಬಾದಿ ಏತ ನೀರಾವರಿಗೆ ಪೂರ್ಣ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ, ಕೇದಾರಲಿಂಗಯ್ಯ ನನ್ನೊಂದಿಗೆ ಮಾತಾಡುತ್ತಾ ನಿಸೂರದ ದನಿಯಲ್ಲಿ ಹೇಳಿದರು.

ಹಿರಿಯ ಹೋರಾಟಗಾರ, ರೈತಪ್ರೇಮಿ ಕೇದಾರಲಿಂಗಯ್ಯ ಹೇಳುವ ಪ್ರಕಾರ ಇದು ಜೆ. ಎಚ್. ಪಟೇಲರು ಮುಖ್ಯಮಂತ್ರಿ ಆಗಿರುವಾಗಲೇ ಶುರುವಾದ ಕೆಲಸ. ಯಡ್ರಾಮಿ ಮತ್ತು ಜೇವರ್ಗಿ ಪ್ರಾಂತ್ಯಗಳ ಎತ್ತರ ಪ್ರದೇಶದ ಭೂಸಮೀಕ್ಷೆ ಕಾರ್ಯ ಆಗಲೇ ಜರುಗಿತು. ಹಾಗೆ ಶುರುವಾದ ಮಲ್ಲಾಬಾದಿ ಏತ ನೀರಾವರಿ ಕಾರ್ಯ ಮೂವತ್ತು ವರ್ಷಗಳ ಕಾಲ ಆಮೆಗತಿಯಲ್ಲಿ ಜರುಗುತ್ತಲೇ ನಡೆದಿದೆ. ಬೆಂಗಳೂರು, ಬೆಳಗಾವಿ, ಕಲಬುರ್ಗಿಯಲ್ಲಿ ಜರುಗಿದ ವಿಧಾನಸಭಾ ಅಧಿವೇಶನಗಳ ಕಾರ್ಯಕಲಾಪಗಳಲ್ಲಿ ಹತ್ತಾರು ಬಾರಿ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ ಚರ್ಚೆಗೂ ಗ್ರಾಸವಾಗಿದೆ. ಹಾಗೆಯೇ ಅದರ ಪ್ರಗತಿಯೂ ಕುಂಟುತ್ತಲೇ ಜರುಗಿದೆ.

ಅಪ್ಪ ಧರ್ಮಸಿಂಗ್ ಮುಖ್ಯಮಂತ್ರಿ ಆದಾಗಿಂದ ಹಿಡಿದು ಅವರ ಮಗ ಡಾ. ಅಜಯಸಿಂಗ್ ಮೂರನೇ ಬಾರಿಗೆ ಜೇವರ್ಗಿ ಶಾಸಕ ಮತ್ತು ಮೊದಲ ಬಾರಿಗೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾದರು. ತಂದೆ ಮಗ ಇಬ್ಬರೂ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೂ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ ಅಬಾಧಿತವಾಗಿ ಸಂಪೂರ್ಣಗೊಂಡು ಯಡ್ರಾಮಿ, ಜೇವರ್ಗಿ ಸೀಮೆಯ ರೈತರ ಹಸಿವು ಹಿಂಗಿಸಲಿಲ್ಲ. ಶಾಸಕ ಅಜಯಸಿಂಗ್ ಸಹಿತ ವಿಧಾನಸಭೆಯ ಅಧಿವೇಶನಗಳಲ್ಲಿ ಈ ಕುರಿತು ಕೆಲವು ಸಲ ಪ್ರಸ್ತಾಪಿಸಿದ್ದೇ ಸಾಧನೆ ಆಗಿ ಬಿಟ್ಟಿತು. ಆದರೆ ಮಲ್ಲಾಬಾದಿ ಏತ ನೀರಾವರಿಯ ಕಾಮಗಾರಿ ಕೆಲಸಗಳು ಮಾತ್ರ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ತೀವ್ರ ಕೊರತೆಯಿಂದಾಗಿ ಕಲ್ಯಾಣ ಕರ್ನಾಟಕದ ಬಹುಪಾಲು ಯೋಜನೆಗಳು ನಿಷ್ಕ್ರಿಯಗೊಂಡಿವೆ. ಅದರಿಂದಾಗಿ ಮೊಗಲಾಯಿ ನೆಲದ ಮುಗ್ದ ಜನಮಾನಸ ಸಂಕಟದ ಮಡುವಲ್ಲಿ ಮುಳುಗಿ ನಲುಗುವಂತಾಗಿದೆ. ಜನರು ನೀಡಿದ ಟ್ಯಾಕ್ಸ್ ಹಣದಲ್ಲಿ ಜನಪ್ರತಿನಿಧಿಗಳು ವಿಮಾನ, ಐಷಾರಾಮಿ ಬಂಗಲೆ, ಕಾರುಗಳಲ್ಲಿ ಮೋಜು ಮಸ್ತಿ ಮಾಡಿ ಮೆರೆದಾಡುವುದು ಮಾತ್ರ ತಪ್ಪಿಲ್ಲ.

ಆದರೆ ಜನಚಳವಳಿ ನಿಂತಿಲ್ಲ. ಮುಖ್ಯವಾಗಿ ಯಡ್ರಾಮಿ ಮತ್ತು ಜೇವರ್ಗಿ ಎಂಬ ಅವಳಿ ತಾಲೂಕು ಹಳ್ಳಿಗಳ ನೆಲದೊಡಲ ಹಸಿವಿನ ಕತೆಯಿದು. ಸರಕಾರ ಮತ್ತು ಅಧಿಕಾರಿಗಳ ಲೆಕ್ಕದಲ್ಲಿ ಅಂಕಿಅಂಶಗಳ ಸಬೂಬಿನ ಲೆಕ್ಕ. ಯಡ್ರಾಮಿ ತಾಲೂಕಿನ ಮೂವತ್ತೆಂಟು ಹಳ್ಳಿಗಳ ಹದಿನಾರು ಸಾವಿರದ ಏಳುನೂರಾ ಎಪ್ಪತ್ತೆರಡು (16772) ಹೆಕ್ಟೇರ್ ಭೂಪ್ರದೇಶ ಮತ್ತು ಜೇವರ್ಗಿ ತಾಲೂಕಿನ ಇಪ್ಪತ್ತು ಹಳ್ಳಿಗಳ ಎಂಟು ಸಾವಿರದ ಆರು ನೂರಾ ನಲವತ್ತೆರಡು(8642) ಹೆಕ್ಟೇರ್ ಭೂಪ್ರದೇಶದ ನೀರುಣ್ಣುವ ಯೋಜನೆ ಇದಾಗಿದೆ. ಅದಲ್ಲದೇ ಪಕ್ಕದ ಸುರಪುರ ಮತ್ತು ಶಹಾಪುರ ತಾಲೂಕಿನ ಭೂಪ್ರದೇಶಗಳ ಸಹಸ್ರಾರು ಹೆಕ್ಟೇರ್ ಜಮೀನು ಸೇರಿದಂತೆ ಅಜಮಾಸು ಒಂದು ಲಕ್ಷ ಎಕರೆಯಷ್ಟು ನೀರಾವರಿ ಪ್ರದೇಶವೇ ಮಲ್ಲಾಬಾದಿ ಏತ ನೀರಾವರಿ ಯೋಜನೆ. ಅದೆಲ್ಲವು ಭೂತಾಯ ಹಸಿವು ನೀಗಬೇಕಾದ ವ್ಯಥೆಯ ಕಥನ. ನೀರಾವರಿ ಎನ್ನುವುದು ಕೇವಲ ಭೂಮಿ, ಬೆಳೆ ಕೇಂದ್ರಿತ ನೀರಧಾರೆಯಲ್ಲ. ಅದು ನಿಸರ್ಗವಾಸಿ ಪಶು, ಪಕ್ಷಿ, ಪ್ರಾಣಿ, ಕೀಟ ಒಟ್ಟಾರೆ ಎಲ್ಲಾ ಜೀವಸಂಕುಲದ ಪಾಲಿನ ಜೀವಜಲಧಾರೆಯ ಅಮೃತ ಸಿಂಚನ.

ಮೂರು ದಶಕಗಳ ಮಲ್ಲಾಬಾದಿ ಏತ ನೀರಾವರಿ ಮೂರು ಮುಖ್ಯ ಜಾಗೆಗಳಲ್ಲಿ ಕೃಷ್ಣೆಯ ಮುಖ್ಯ ಕಾಲುವೆಯ ನೀರೆತ್ತುವ ಮೂಲಕ ಮೂರುಕಡೆ ಲಿಫ್ಟ್ ಮಾಡುವ ಕೇಂದ್ರಗಳ ವ್ಯವಸ್ಥೆ ನಿರ್ಮಾಣಗೊಂಡಿದೆ. ಸುರಪುರ ತಾಲೂಕಿನ ನಗನೂರು ಮತ್ತು ಯಡ್ರಾಮಿ ತಾಲೂಕಿನ ಬಳಬಟ್ಟಿ ‌ಮತ್ತು ಜಮಖಂಡಿ ಗ್ರಾಮಗಳ ಬಳಿ ನಿರ್ಮಾಣಗೊಂಡ ವಾಟರ್ ಲಿಫ್ಟ್ ಕೇಂದ್ರಗಳ ಮೂಲಕ ರೈತರ ಹೊಲಗಳು ನೀರುಣ್ಣುತ್ತವೆ. ಕಳೆದ ವರ್ಷ ೦೭.೦೩.೨೦೨೩ ರಂದು ಜರುಗಿದ ೧೩೮ನೇ ಮಂಡಳಿ ಸಭೆಯಲ್ಲಿ ₹ ೧೩೨ ಕೋಟಿ ಅನುಮೋದನೆ ದೊರಕಿದ ಮಾಹಿತಿ ಇದೆ. ಇದು ಎಂ.ಬಿ.ಸಿ. ಶಾಖಾ ಕಾಲುವೆಗೆ ಸಂಬಂಧಿಸಿದ್ದಾಗಿದೆ. ಜೆ.ಬಿ.ಸಿ.ಗೆ ಸಂಬಂಧಿಸಿದಂತೆ ₹ ೧೫೪ ಕೋಟಿ. ಒಟ್ಟಾರೆ ಯೋಜನೆ ಪೂರ್ಣಗೊಳಿಸಲು ₹ ೨೮೪ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅನುಮೋದನೆಗೊಂಡ ಯೋಜನೆಗೆ ಟೆಂಡರ್ ಕರೆಯುವಲ್ಲಿ ವಿಳಂಬನೀತಿ ಯಾಕೆ.? ಏನೇ ಕೇಳಿದರೂ ಗ್ಯಾರಂಟಿಗಳದ್ದೇ ಅಡ್ಡಿ ಎಂಬಂತೆ ಸಾಮಾನ್ಯ ಜನರೇ ಮಾತಾಡಿಕೊಳ್ಳುವಂಥ ವೈರುಧ್ಯಸ್ಥ ವಾತಾವರಣ. ಅಷ್ಟಕ್ಕೂ ಈಗ ಆಗಬೇಕಾಗಿರುವುದು ಶಾಖಾ ಕಾಲುವೆ ಮತ್ತು ಉಪ ಕಾಲುವೆ, ಹೊಲದೊಳಗಿನ ಕಿರು ಕಾಲುವೆಗಳ ನಿರ್ಮಾಣ ಕಾರ್ಯ.

ಯಡ್ರಾಮಿ ಮತ್ತು ಜೇವರ್ಗಿ ಅವಳಿ ತಾಲೂಕುಗಳ ಐವತ್ತೆಂಟು ಹಳ್ಳಿಗಳ ರೈತರು, ಕೃಷಿ ಕಾರ್ಮಿಕರು, ವಿಶೇಷವಾಗಿ ರೈತ ಮಹಿಳೆಯರು ದಿನಾಂಕ: ೧೬.೦೭.೨೦೨೪ ರಂದು ಮಂಗಳವಾರ ಬೀಳವಾರ ಗ್ರಾಮದಲ್ಲಿ ಸಭೆ ಸೇರಲಿದ್ದಾರೆ. ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಕಲಬುರ್ಗಿ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ನೇತೃತ್ವದಲ್ಲಿ ಮಲ್ಲಾಬಾದಿ ಏತ ನೀರಾವರಿ ಕುರಿತಂತೆ "ಮಾಡು ಇಲ್ಲವೇ ಮಡಿ" ಎಂಬ ಹೋರಾಟಕ್ಕೆ ರೈತಸೈನ್ಯ ಸಿದ್ದಗೊಳ್ಳುತ್ತಲಿದೆ. ಆರೂವರೆ ಟಿಎಂಸಿ ನೀರು, ನೆಲದ ಮಕ್ಕಳ ಹಕ್ಕಿನಂತೆ ಪಡೆದೇ ತೀರುವ ಸಂಕಲ್ಪ ರೈತರದು.

ಹೌದು ನಮ್ಮನೆಲದ ನೋವುಗಳು ಇಂದು ನಿನ್ನೆಯವಲ್ಲ. ನಮ್ಮದು ಆರುನೂರು ವರುಷಗಳ ನೋವಿನ ಕಥನ. ಸ್ವಾತಂತ್ರ್ಯ ಬಂದು ಏಳೂವರೆ ದಶಕದಲ್ಲಿ ಐದೂವರೆ ದಶಕ ಕಾಲ ಧರ್ಮಸಿಂಗ್ ಮನೆತನವೇ ಆಳಿದೆ. ಸೆಕ್ಯುಲರ್ ಮನಸ್ಥಿತಿಯ ನಮ್ಮ ನೆಲವು ಅವರಿಗೆ ನೀಡಿದ ಸಹೃದಯ ಅವಕಾಶದಿಂದ ಮುಖ್ಯಮಂತ್ರಿಯಾಗಿದ್ದು, ಅವರ ಮಗ ಮೂರು ಬಾರಿ ಶಾಸಕರಾದುದು ನಮಗೆ ಹೆಮ್ಮೆಯೇ ಆಗಿದೆ. ಆದರೆ ನೆಲದ ಕಣ್ಣೀರು ಒರೆಸುವ ಋಣದ ಕಿಂಚಿತ್ತೂ ಕಾಳಜಿ ಅವರಿಗೆ ಇಲ್ಲದೇ ಹೋಯ್ತಲ್ಲ.!?

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಎ.ಕೆ. ರಾಮಾನುಜನ್ ಅವರ ಅಣ್ಣಯ್ಯನ ಮಾನವಶಾಸ್ತ್ರ

08-01-2025 ಬೆಂಗಳೂರು

"ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ...

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...