Date: 18-02-2023
Location: ಬೆಂಗಳೂರು
“ಹೆಸರಾಂತ ಕಥೆಗಳ ನೇಯ್ಗೆ ಕಾಯಕದ ಬ್ರ್ಯಾಂಡೆಡ್ ಕತೆಗಾರರ ವೃತ್ತಿಪರತೆ ನಡುವೆ ಯಾವುದೇ ಖ್ಯಾತಿಯ ಹೆಸರಿಲ್ಲದ ಕತೆಗಾರ ನಾನು. ಖ್ಯಾತಿಯೆಂಬುದು ನನ್ನ ಪಾಲಿಗೆ ಒಗ್ಗದ ಮತ್ತು ಒಣ ತಿಣುಕಾಟದ ಕೆಲಸ. ಕೆಲವರಿಗದು ಆತ್ಮರತಿ ಮತ್ತು ಒಣ ಧಿಮಾಕಿನ ಕೆಲಸ. ಅಷ್ಟಕ್ಕೂ ಏಳು ಸಮುದ್ರಗಳಾಚೆಯ ದ್ವೀಪದ ನಟ್ಟ ನಡುಗಡ್ಡೆಯ ಅಟ್ಟಟ್ಟ ಅರಣ್ಯದಲ್ಲೊಂದು ಮಹಾವೃಕ್ಷ,” ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ‘'ಮುಟ್ಟು'’ ಕಥಾಸಂಕಲನದ ಕುರಿತು ಲೇಖನವನ್ನು ಬರೆದಿದ್ದಾರೆ.
ನಾನು ಕತೆಗಳನ್ನು ಬರೆದುದೇ ಅಪರೂಪ. ವಾಸ್ತವವಾಗಿ ನನ್ನ ರೆಗ್ಯುಲರ್ ಬರಹಗಳಿಗೆ ಕಥನ ಕಲೆಯೇ ಉದಕ ಮತ್ತು ಉಸಿರಾಗಿರುತ್ತದೆ. ಈ ಹಿಂದಿನ ನನ್ನ ಪುಸ್ತಕಗಳನ್ನು ಓದಿ ಮುನ್ನುಡಿ ಬರೆದ ಹಿರಿಯ ವಿದ್ವಾಂಸರು ಮತ್ತು ನನ್ನ ಅಂಕಣ ಬರಹಗಳನ್ನು ಓದಿದ ಬಹುತೇಕ ಜಾಣ ಓದುಗರು ಅದನ್ನು ಗುರುತಿಸಿ ಹೇಳಿದ್ದಾರೆ. ನನ್ನ ಬರವಣಿಗೆಯ ನಿಷ್ಠುರತೆ, ಆಪ್ತತೆ, ಆರ್ದ್ರತೆಗಳನ್ನು ಉಲ್ಲೇಖಿಸಿ ಅನೇಕರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಇಂಥದೇ ಪ್ರತಿಕ್ರಿಯೆ ತೋರುತ್ತಲೇ ಇರುತ್ತಾರೆ. " ನಿಮ್ಮ ಬರಹಗಳು ಖುದ್ದು ನಾವೇ ಬರೆದ ನಮ್ಮ ಅನುಭವದ ಸಾರ " ಎಂದು ಹೃದಯಕ್ಕೆ ಮುಟ್ಟಿಸಿ ಕೊಳ್ಳುತ್ತಾರೆ.
ನನ್ನ ಬರಹದ ಅಭಿವ್ಯಕ್ತಿ ಓದುಗ ದೊರೆಗಳ ಅನನ್ಯ ಅನುಭವವೇ ಆಗಿರುವಂತಿದ್ದರೆ ಅದಕ್ಕಿಂತ ಅಧಿಕ ಸಾರ್ಥಕ್ಯ ಮತ್ತೊಂದಿರಲಾರದು. ಅದು ನನಗೆ ಧನ್ಯತೆಯನ್ನು ತಂದು ಕೊಟ್ಟಿದೆ. ಅಂತೆಯೇ ಪ್ರಕಟಿತ ನನ್ನ ಯಾವ ಪುಸ್ತಕಗಳು ಖರ್ಚಾಗದೇ ನನ್ನಲ್ಲಿ ಉಳಿದಿಲ್ಲ. ಹಾಗಂತ ನಾನು ಬಹುಬೇಡಿಕೆಯ ಬರಹಗಾರನೆಂದರ್ಥವಲ್ಲ. ಬರವಣಿಗೆಯನ್ನು ನಾನು ಯಾವತ್ತೂ ಹಣ ಮತ್ತು ಕೀರ್ತಿ ಕಾಮುಕತೆಯ ವ್ಯವಹಾರಕ್ಕೆ ಬಳಸಿಕೊಂಡವನಲ್ಲ. ನನಗೊಂದು ಅಪ್ರಸ್ತುತ ಭಯವಿತ್ತು. ನಾನು ವಿ. ವಿ. ಪದವಿಗಳನ್ನು ಪಡೆದ ಪದವಿಧರನಲ್ಲ. ನನ್ನ ನೆರವಿಗೆ ಮೇಲುಸ್ತರದ ಅಧಿಕಾರ, ಜಾತಿ, ಮತ್ತಿತರೆ ಯಾವುದೇ ಹೆಗ್ಗಳಿಕೆಗಳು ಇರಲೇ ಇಲ್ಲ. ಹೀಗಾಗಿ ಬರಹ ನನ್ನ ಪಾಲಿಗೆ ಫಲಪ್ರದವಲ್ಲ ಎಂದುಕೊಂಡಿದ್ದೆ.
ಯಾಕೆಂದರೆ ನಾನು ಬರೆದುದನ್ನು ನಮ್ಮ ಮನೆಯಲ್ಲೇ ಯಾರೂ ಓದುವುದು ಸಾಧ್ಯವೇ ಇರುತ್ತಿರಲಿಲ್ಲ. ಅಂದರೆ ನನ್ನ ಅಪ್ಪ ಅವ್ವ ಮತ್ತು ವಿವಾಹಪೂರ್ವದ ನನ್ನದು ಇಡಿಯಾಗಿ ಅನಕ್ಷರಸ್ಥ ಕುಟುಂಬ. ನಾನು ನಮ್ಮ ಅನಕ್ಷರಸ್ಥ ಕುಟುಂಬದ ಮೊದಲ ಅಕ್ಷರಸ್ಥ ಮತ್ತು ನಮ್ಮ ಕುಟುಂಬದಲ್ಲಿ ಮೆಟ್ರಿಕ್ ಪಾಸಾದ ಮೊದಲಿಗ ನಾನು. ಹೀಗಾಗಿ ಇದರಲ್ಲಿನ ಕೆಲವು ಕತೆಗಳು ಕೆಲವು ವರ್ಷಗಳ ಕಾಲ ನಾನು ನನ್ನ ಹುಟ್ಟೂರಿಗೆ ಹೋಗದಂತೆ ಮಾಡಿದವು. ಅಂತಹದ್ದೊಂದು ವಾತಾವರಣ ನಿರ್ಮಾಣಗೊಂಡಿತ್ತು.
ಅಷ್ಟುಮಾತ್ರವಲ್ಲ ನಾನು ಅನೇಕ ವರ್ಷಗಳ ಕಾಲ ಕತೆಗಳನ್ನು ಬರೆಯುವುದನ್ನೇ ಬಾಯ್ತಡಿ ಹಾಕಿದಂತೆ ಫ್ಯೂಡಲ್ ವ್ಯವಸ್ಥೆ ನನಗೆ ಕೈತಡಿ ಹಾಕಿದ್ದು ಸುಳ್ಳಲ್ಲ. ಅದೀಗ ಪೂರ್ತಿಯಾಗಿ ಸರಳಗೊಂಡಿದೆಯೆಂದು ಖಂಡಿತಾ ಹೇಳಲಾಗದು. ಏಕೆಂದರೆ "ಕಡಕೋಳ ನೆಲದ ನೆನಪುಗಳು" ಎಂಬ ನನ್ನ ಪುಸ್ತಕ ಈಗ್ಗೆ ಕೇವಲ ಎಂಟು ತಿಂಗಳ ಹಿಂದೆ ಬಿಡುಗಡೆಯಾಗದಂತೆ ಕೆಲವು ಪ್ರಚ್ಛನ್ನರು ಪುಂಡಾಟಿಕೆ ಮೆರೆದರು. ಅದೇನೇ ಆಗಲಿ ನನಗೆ ನನ್ನ ನೆಲದ ಬಗೆಗಿನ ಪ್ರೀತಿ ಕುಗ್ಗಲಿಲ್ಲ. ಅದು ವಿಭಿನ್ನ ನೆಲೆಗಳಲ್ಲಿ ಹಿಗ್ಗುತ್ತಲೇ ನಡೆಯಿತು. ನನ್ನ ಬರವಣಿಗೆ ಕಾಯಕ ಕತೆಗಳಿಂದ ಬರಹದ ಇತರೆ ಪ್ರಾಕಾರಕ್ಕೆ ಸ್ಥಿತ್ಯಂತರಗೊಂಡಿತು. ನೆನಪಿರಲಿ ಆ ಎಲ್ಲ ಪ್ರಕಾರಗಳಲ್ಲಿ ನನ್ನ ಸೃಜನಶೀಲ ಕಥನಕಲೆಯೇ ಆಲಿಂಗನಗೊಂಡಿತ್ತು.
ಹೆಸರಾಂತ ಕಥೆಗಳ ನೇಯ್ಗೆ ಕಾಯಕದ ಬ್ರ್ಯಾಂಡೆಡ್ ಕತೆಗಾರರ ವೃತ್ತಿಪರತೆ ನಡುವೆ ಯಾವುದೇ ಖ್ಯಾತಿಯ ಹೆಸರಿಲ್ಲದ ಕತೆಗಾರ ನಾನು. ಖ್ಯಾತಿಯೆಂಬುದು ನನ್ನ ಪಾಲಿಗೆ ಒಗ್ಗದ ಮತ್ತು ಒಣ ತಿಣುಕಾಟದ ಕೆಲಸ. ಕೆಲವರಿಗದು ಆತ್ಮರತಿ ಮತ್ತು ಒಣ ಧಿಮಾಕಿನ ಕೆಲಸ. ಅಷ್ಟಕ್ಕೂ ಏಳು ಸಮುದ್ರಗಳಾಚೆಯ ದ್ವೀಪದ ನಟ್ಟ ನಡುಗಡ್ಡೆಯ ಅಟ್ಟಟ್ಟ ಅರಣ್ಯದಲ್ಲೊಂದು ಮಹಾವೃಕ್ಷ. ಆ ವೃಕ್ಷದೊಡಲಲ್ಲಿ ವಾಸವಾಗಿರುವ ಪಂಜರ ಪಕ್ಷಿಯ ಅಸ್ಮಿತೆ, ಮತ್ತದರ ಜೀವಾಳ ಹುಡುಕಾಟದ ಕತೆಗಳನ್ನು ಹೇಳುವ ಕಾಲ ಇದಲ್ಲ. ಅದೇನಿದ್ದರೂ ನನ್ನ ಮತ್ತು ನನ್ನೊಳಗಿನ ಕತೆಗಾರನ ಮನಸಾಕ್ಷಿ ಸಂಬಂಧಗಳ ನಡುವಿನ ಅನುಸಂಧಾನ ಕ್ರಿಯೆ. ವರ್ತಮಾನದ ಕತೆಗಳ ಅಭೀಪ್ಸೆ, ಅಭಿವ್ಯಕ್ತಿ ಪ್ರಕ್ರಿಯೆಗಳು ಆಧುನಿಕ ಸಂವಹನಗಳ ಅಪ್ಡೇಟ್ ಸಂವೇದನೆ ಪಡಕೊಳ್ಳುತ್ತಿವೆ.
ನಾವೀಗ ಯಾರಿಗಾಗಿ ಕತೆ ಬರೆಯುತ್ತೇವೆ ಮತ್ತು ಹೇಗೆ ಬರೆದರೆ ಬಹುಮಾನ ಗೆಲ್ಲ ಬಹುದೆಂಬ ಬದ್ಧತೆಗೆ ಬದ್ಧವಾಗಿ ಬರೆದ ಬಹುಮಾನ ಕೇಂದ್ರಿತ ಕತೆಗಳು ಇವಲ್ಲ. ಆದಾಗ್ಯೂ ವಿಶೇಷಾಂಕಗಳಿಗೆ ಆಹ್ವಾನಿತ ಮತ್ತು ಸಾಪ್ತಾಹಿಕವೊಂದರ ಬಹುಮಾನಿತ ಕತೆಗಳು ಪ್ರಸ್ತುತ ಸಂಕಲನದಲ್ಲಿವೆ. ಅದೇನೆ ಇರಲಿ ನನ್ನ ಅಂತರಂಗ ಸತಾಯಿಸಿದಾಗ ಜನ್ಮತಾಳಿದ ಕತೆಗಳಿವು. ಹಾಗೆಂದು ನಲವತ್ತು ವರ್ಷ ಮತ್ತು ಅದಕ್ಕಿಂತ ಹಿಂದೆ ಹೇಳುತ್ತಿದ್ದ ಕಥನ ಶೈಲಿ ಈಗ ಔಟ್ ಡೇಟೆಡ್ ಎಂದರ್ಥವಲ್ಲ. ಕಾಲದ ಮತ್ತು ಕಥನ ಕಾಲದ ಕೌತುಕಗಳನ್ನು ಗ್ರಹಿಸುವ ಕಲೆ ಕತೆಗಾರನ ಸವಾಲು ಮತ್ತು ಪ್ರತಿಭೆಯ ನಿವ್ವಳ ತಾಕತ್ತು. ಪ್ರಭುತ್ವದ ಒಳಹೇತು ಬಯಲು ಮಾಡಲು, ಅಪ್ರಿಯ ಮತ್ತು ಕಹಿಸತ್ಯಗಳನ್ನು ಹೇಳಲು ಕತೆಗಳು ಅತ್ಯುತ್ತಮ ಮಾಧ್ಯಮಗಳು.
ಅನಕ್ಷರಸ್ಥೆ ನನ್ನವ್ವ ಹೇಳುತ್ತಿದ್ದ ಅವರ ನಿತ್ಯಕಾಲದ ಬದುಕಿನ ಅನುಭವದ ಕಥನಗಳು ನನ್ನೊಳಗಿನ ಕತೆಗಾರನನ್ನು ಜೀವಂತ ಆಗಿಸಿವೆ. ಕಾಲಜ್ಞಾನವು ನನ್ನೊಳಗಿನ ಕತೆಗಾರನಿಗೆ ಹಾಳತವಾದ ಪ್ರೇರಣೆ ನೀಡಿದೆ. ಹೀಗಾಗಿ ಇಲ್ಲಿ ನಾನು ಒಮ್ಮೊಮ್ಮೆ ನೆಪಮಾತ್ರ. ಅಂತೆಯೇ ಇದರಲ್ಲಿನ ಬಹುಪಾಲು ಕತೆಗಳು ಕಾಲಜ್ಞಾನದ ಅರಿವಿನಿಂದ ಬರೆಸಿಕೊಂಡ ಕತೆಗಳು. ಅದರಲ್ಲಿ ಕೆಲವು ಮಾತ್ರ ನಾನು ಬರೆದ ಕತೆಗಳು. ಈ. ಎ. ಹೆ. ಗು. ಅಂದರೆ ಈ ಎಡಗೈ ಹೆಬ್ಬೆಟ್ಟಿನ ಗುರುತು ಎಂದು ತಮ್ಮ ಎಡಗೈ ಹೆಬ್ಬೆರಳಿಗೆ ಮಸಿ ಹಚ್ಚಿಸಿಕೊಂಡು ಫ್ಯುಡಲ್ ಲಾರ್ಡ್ ಗಳು ಹೇಳಿದ ಜಾಗದಲ್ಲಿ ಬೆಟ್ಟು ಒತ್ತುತ್ತಿದ್ದ ಅಪ್ಪ ಅವ್ವಂದಿರುಗಳ ಅನುಭವಗಳನ್ನು ನಾನು ಮತ್ತು ನನ್ನಂಥವರು ದಾಖಲಿಸದೇ ಹೋದರೆ ಅವರ ಸಂಕಟಗಳನ್ನು ಇನ್ಯಾರು ದಾಖಲಿಸಿಯಾರು.?
ಅಕ್ಷರಸ್ಥರಾದ ನಾವು ನಮ್ಮ ಆತ್ಮಕಥನಗಳನ್ನು ನಮ್ಮ ನೇರಕ್ಕೆ ಬರೆದು ಕೊಳ್ಳುತ್ತೇವೆ. ಅನಕ್ಷರಸ್ಥರಾದ ಅವರ ಆತ್ಮಕಥನಗಳನ್ನು ಯಥಾವತ್ತಾಗಿಯಾದರೂ ಯಾರು ಬರೆಯಬೇಕು.? ನನ್ನ ಪಾಲಿಗೆ ನಿಜವಾದ ಭಾರತದ ಮತ್ತು ಭಾರತೀಯರ ಕತೆಗಳೆಂದರೆ ನನ್ನ ಅಪ್ಪ ಅವ್ವಗಳಂಥ ಸಹಸ್ರಾರು ಮಂದಿಯ ಬದುಕು ಮತ್ತು ಕಣ್ಣೀರಿನ ಕಥನಗಳು. ಅದನ್ನು ನಾವೇ ಹೇಳದೇ ಹೋದರೆ ಅದು ನಮ್ಮ ಅಪ್ಪ ಅವ್ವಗಳು ಬಾಳಿ ಬದುಕಿದ ಭಾರತದ ಕರುಳಿನ ಕತೆಯಾದೀತು ಹೇಗೆ.? ಹೌದು ನಮ್ಮ ನೆಲದ ಕತೆಗಳನ್ನು ನಾವೇ ಬರೆಯಬೇಕಿದೆ. ಅನ್ಯರು ಬರೆಯಲಾರರು. ಬರೆದರೂ ಅವರು ಸುಳ್ಳಗಳನ್ನೇ ಬರೆಯಬಲ್ಲರು. ನಾವು ಬದುಕಿರುವ ನೆಲದ ವಿವೇಕ ಎಂದರೆ ಅಪ್ಪ ಅವ್ವಂದಿರ ಬದುಕಿನ ಜೀವ ಸಂವೇದನೆಗಳು. ನಾನು, ನನ್ನಂಥವರ ಅಪ್ಪ ಅಮ್ಮಗಳ ಸಂತಸ ಮತ್ತು ಸಂಕಟಗಳ ಕುರಿತು ನಾವೇ ಬರೆಯಬೇಕು. ಎರಡನೆಯವರ ಎರವಲು ಬರವಣಿಗೆಗಳು ನಮ್ಮವು ಅಂತನಿಸಲಾರವು.
ಅಂದಹಾಗೆ ಆಕಾಶವಾಣಿಯಲ್ಲಿ ಓದಿದ ಕತೆಗಳು ಸೇರಿದಂತೆ, ನಾನು ಬರೆದ ಎಲ್ಲಾ ಕತೆಗಳು ನನಗೆ ಸಿಕ್ಕಿಲ್ಲ. ಮುಖ್ಯವಾಗಿ " ಭಟ್ಟರ ಮಗಳು ಮತ್ತು ಹಜಾಮರ ಕಿಟ್ಟಿ " ಕತೆಯೇ ಸಿಕ್ಕಿಲ್ಲ. ಅಜಮಾಸು ನಾಲ್ಕು ದಶಕಗಳ ಹಿಂದೆ ಅದನ್ನು ಬರೆದ ದ್ಯಾಸ ಸಹಿತ ಮಾಸಿ ಹೋಗಿದೆ. ಪ್ರಸ್ತುತ ನಿಮ್ಮ ಕೈಯಲ್ಲಿರುವುದು 'ಮುಟ್ಟು' ಆ್ಯಂಥಾಲಜಿಯ ಕೆಲವು ಕತೆಗಳು ಮಾತ್ರ. ನಾಲ್ಕು ದಶಕಗಳಷ್ಟು ಹಿಂದೆ ಬರೆದ ಮತ್ತು ಇವುಗಳನ್ನು ಅಂದು ಪ್ರಕಟಿಸಿದ ಪತ್ರಿಕೆಗಳನ್ನು ಕಾಯ್ದಿಡುವಷ್ಟು ಶಿಸ್ತು ಮತ್ತು ಶ್ಯಾಣೇತನ ನನ್ನದಲ್ಲ. ಸ್ವಲ್ಪವೇ ಏನು ಬಂತು ಕಂಡಾಪಟಿ ಅಶಿಸ್ತು ಮತ್ತು ದಡ್ಡತನ ನನ್ನದು. ಅದರಲ್ಲೂ ಇವತ್ತಿಗೂ ಬಾಡಿಗೆ ಮನೆಯಲ್ಲಿ ವಾಸಿಸಿರುವ, ಮನೆಗಳ ಬದಲಾವಣೆಯ ಸಂದರ್ಭದಲ್ಲಿ ನನಗದು ದುಃಸಾಧ್ಯದ ಕೆಲಸ. ಪ್ರಕಟಿತ ಒಂದೆರಡು ಹಳೆಯ ಕತೆಗಳನ್ನು ಹುಡುಕಿ ಕೊಡುವಲ್ಲಿ ನೆರವಾದ ಚಿತ್ರದುರ್ಗದ ವೈ. ಬಿ. ಎಚ್. ಜಯದೇವ ಮತ್ತು ಸಿರಿಗೆರೆಯ ಕೆ. ವಿಜಯಲತಾ ಅವರಿಗೆ ಕೃತಜ್ಞತೆಗಳು.
ಅಷ್ಟಲ್ಲದೇ ನನ್ನ ಹುಡುಕಾಟಕ್ಕೂ ದೊರಕಿದ ಕೆಲವು ಕತೆಗಳು ಇದರಲ್ಲಿವೆ. ನಲವತ್ತೆರಡು ವರ್ಷಗಳಷ್ಟು ಹಿಂದೆ ಬರೆದು ಪ್ರಕಟಿಸಿದ ಕತೆಗಳ ಜತೆಗೆ ಇತ್ತೀಚೆಗೆ ಮುರ್ನಾಲ್ಕು ವರ್ಷಗಳ ಹಿಂದಷ್ಟೇ ಬರೆದ ಕೆಲವು ಕತೆಗಳೂ ಇದರಲ್ಲಿವೆ. ಈ ಮೊದಲು ಇವುಗಳನ್ನು ಪ್ರಕಟಿಸಿದ ತುಷಾರ, ಕಸ್ತೂರಿ, ತರಂಗ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ನನ್ನ ಕೃತಜ್ಞತೆಗಳು ಸಲ್ಲಲೇಬೇಕು.
'ಮುಟ್ಟು' ನಲವತ್ತು ವರುಷಗಳ ಹಿಂದೆ ದ.ಕ. ಜಿಲ್ಲೆಯ ಮಣಿಪಾಲದ ತುಷಾರ ಮಾಸಿಕದ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಆಮಂತ್ರಿತ ಕತೆ. ಆ ಕತೆಯ ಹೆಸರನ್ನೇ ಈ ಕಥಾ ಸಂಕಲನಕ್ಕೆ ಶೀರ್ಷಿಕೆಯಾಗಿ ಇಟ್ಟಿದ್ದೇನೆ. ಮುಟ್ಟು ಎಂದೊಡನೆ ಮಹಿಳೆಯ ಮುಟ್ಟಿನ ಮೈಲಿಗೆಯ ರೂಢಿಗತ ನೆನಪು ಕಾಡದಿರದು. ಮತ್ತೊಂದು 'ಮುಟ್ಟು' ಮನುಷ್ಯರನ್ನು ಮುಟ್ಟದಿರುವ ಅಸ್ಪೃಶ್ಯತೆಯ ಘೋರ ಆಚರಣೆ. ಈ ಎಲ್ಲ ಸಂಕೀರ್ಣಪ್ರಜ್ಞೆ 'ಮುಟ್ಟು' ಕತೆಗಳ ಗುಚ್ಛ ತನ್ನ ಹೊಟ್ಟೆಯಲ್ಲಿಟ್ಟುಕೊಂಡಿದೆ. ನಾಲ್ಕು ದಶಕಗಳ ಹಿಂದೆ ಕರಾವಳಿ ಪ್ರಾಂತ್ಯದ ಮಾಸಿಕವೊಂದರಲ್ಲಿ 'ಮುಟ್ಟು' ಪ್ರಕಟವಾದಾದಾಗ ಐದಾರು ತಿಂಗಳ ಕಾಲ ಈ ಕತೆ ಕುರಿತು ತುಂಬಾ ಗಂಭೀರವಾದ ಚರ್ಚೆಗಳು ಅದೇ ತುಷಾರದಲ್ಲಿ ಏರ್ಪಟ್ಟವು. ಡಾ. ಶಾಂತಿನಾಥ ದೇಸಾಯಿ ಅವರು ತಮ್ಮ ಸೂಕ್ಷ್ಮ ಮೀಮಾಂಸೆ ಬರೆಯುವ ಮೂಲಕ ಸಮಪ್ ಮಾಡಿದ್ದರು. ಇವತ್ತು 'ಮುಟ್ಟು' ಎಂಬ ಪ್ರಕ್ರಿಯೆ ಸಾರಸ್ವತ ಲೋಕದ ಬಹುಚರ್ಚಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಸಂಗತಿ. ಅಂಥದೊಂದು ಸಂಕಥನ ನಾಲ್ಕು ದಶಕಗಳಷ್ಟು ಹಿಂದೆಯೇ ತಿಂಗಳುಗಟ್ಟಲೇ ಸಂವಾದಕ್ಕೆ ವಸ್ತುವಾದ ಕತೆ.
ಅನಸೂಯಾ ನನಗೆ ಬಾಳ ಸಂಗಾತಿ ಆಗುವ ಪೂರ್ವದಲ್ಲಿ ಆಕೆಯ ಮೇಲಿನ ಅದಮ್ಯ ಪ್ರೀತಿಗಾಗಿ ಅವಳ ಹೆಸರಲ್ಲೇ ನಾನು ಕತೆಗಳ ಬರವಣಿಗೆ ಮಾಡುತ್ತಿದ್ದೆ. ಅವಳ ಹೆಸರಲ್ಲಿ ಈ ಹಿಂದೆ ಪ್ರಕಟವಾದ ಒಂದೆರಡು ಕತೆಗಳು ಅವಳ ಪ್ರೀತಿ ಮತ್ತು ಕ್ಷಮೆಯೊಂದಿಗೆ ಇಲ್ಲಿ ಪ್ರಕಟಗೊಂಡಿವೆ. ಕೊರೊನಾ ಕಾಲದ 'ಚಾಂದಬೇಗಂ' ಕತೆ ನಿರೀಕ್ಷೆ ಮೀರಿ ನೂರಾರು ಮಂದಿ ಸಹೃದಯರ ಮನ ಕಲಕಿದ ಕತೆ. ಅಂತಹದ್ದೇ ಹೃದ್ಯಮೆಚ್ಚುಗೆ ಈ ಕತೆಗೆ ತೋರಿದವರು ಮೈಸೂರಿನ ಹಿರಿಯ ಬಂಡಾಯ ಸಾಹಿತಿ ಡಾ. ರಾಜಪ್ಪ ದಳವಾಯಿ. ಅವರ ಮೆಚ್ಚುಗೆ ಅಕ್ಷರ ಮಾತುಗಳಿಗೆ ತಮಣಿಯಾಗದೇ 'ಚಾಂದಬೇಗಂ' ಎಂಬ ಕತೆ ಸಿನೆಮಾ ಮಾಡಲು ರಾಜಪ್ಪ ದಳವಾಯಿ ಮುಂದೆ ಬಂದರು. ಸಿನೆಮಾ ಆಗುತ್ತಿರುವ ಚಾಂದಬೇಗಂ ಕತೆಗೆ ಗೌರವದ ಹಣ ಸಂದಾಯ ಮಾಡಿ ಆಗಲೇ ಕರಾರು ಪತ್ರ ಮಾಡಿಸಿ ಕೊಂಡಿದ್ದಾರೆ. ಸಂಕಲನದ ಮತ್ತೊಂದು ಕತೆ 'ಕಲ್ಯಾಣಿ' ಆಧುನಿಕ ರಂಗ ಶೈಲಿಯಲ್ಲಿ ಎಸ್. ವೀರಪ್ಪ ಅವರಿಂದ ರಂಗರೂಪಗೊಂಡು ಯಶಸ್ವಿ ನಾಟಕವಾಗಿ ಪ್ರದರ್ಶನ ಕಂಡಿದೆ.
ಬಹಳಷ್ಟು ಗೆಳೆಯರು ನನ್ನ ಹಳೆಯ ಕತೆಗಳನ್ನು ಓದಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ಪದೇ ಪದೇ ಕೇಳುತ್ತಲೇ ಇದ್ದರು. ಅವರ ಅಪೇಕ್ಷೆ ಈಡೇರಿಸುವುದು ನನ್ನಿಂದಾಗಿರಲಿಲ್ಲ. ಕಲಬುರ್ಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ನಮ್ಮೆಲ್ಲರ ಹಂಬಲ ಈಡೇರಿಸಿದೆ. ಬರೀ ಕಲ್ಯಾಣ ಕರ್ನಾಟಕ ಮಾತ್ರವಲ್ಲ, ನಾಡಿನಾದ್ಯಂತ ಪುಸ್ತಕ ಪ್ರಕಾಶನ ಲೋಕದ ಮಹತ್ವದ ಸಂಸ್ಥೆ ಅದಾಗಿದೆ. ನನ್ನ ಈ ಕತೆಗಳನ್ನು ಪ್ರಕಟಿಸಿದ ಸಿದ್ಧಲಿಂಗೇಶ್ವರ ಪ್ರಕಾಶನದ ಹಿರಿಯ ಮಿತ್ರರಾದ ಶ್ರೀ ಬಸವರಾಜ ಕೋನೆಕ ಅವರಿಗೆ ಕೃತಜ್ಞತೆಗಳು. ಮುಟ್ಟು ಕತೆಗಳ ಆಶಯಗಳಿಗೆ ತಕ್ಕುದಾದ ಕವರ್ ವಿನ್ಯಾಸ ಮಾಡಿಕೊಟ್ಟ ಗಿರೀಶ ತಾಳಿಕಟ್ಟೆಗೆ ನಲುಮೆಯ ನೆನಪುಗಳು. ಎಲ್ಲೆಲ್ಲೋ ಕಳೆದುಹೋಗುತ್ತಿರುವ ಕತೆಗಳನ್ನು ಆದಷ್ಟು ಲಗೂನೆ ಹುಡುಕಿ ಪ್ರಕಟಿಸಲು ತಾಳಿಕಟ್ಟೆ ಈ. ಚಂದ್ರ, ಷಣ್ಮುಖ, ಸಂಧ್ಯಾ, ಸುಮತಿ, ಬಾಳಿ ಮೀನಾಕ್ಷಿ , ಶಿವರಾಜ ಪಾಟೀಲ ಹೀಗೆ ಸಾಹಿತ್ಯ ಲೋಕದ ಅನೇಕರು ಆಸಕ್ತಿ ತೋರಿದ್ದಾರೆ. ಅವರೆಲ್ಲರ ಸಖ್ಯ, ಪ್ರೀತಿಗೆ ಶರಣಾರ್ಥಿಗಳು.
ವರ್ತಮಾನದ ನೂರಾರು ತಲ್ಲಣಗಳು. ರೂಕ್ಷ ಬದುಕಿನ ಅನೇಕ ಸವಾಲುಗಳು ನಿತ್ಯವೂ ಸಂಕೀರ್ಣವೇ ಆಗುತ್ತಿರುವಾಗ ಸಾಹಿತಿಯಾದವನು ಕಡೆಯಪಕ್ಷ ತನಗಿರುವ ಅಭಿವ್ಯಕ್ತಿಯ ಮೂಲಕ ಸತ್ಯ ಹೇಳದೇ ಹೋದರೆ ದೊಡ್ಡ ಅಪಚಾರ. ನನ್ನ ಸಾಧ್ಯತೆಯ ಕ್ಷಿತಿಜದೊಳಗೆ ಅಂತಹದ್ದೊಂದು ಸತ್ಯನಿಷ್ಟ ಮತ್ತು ವಸ್ತುನಿಷ್ಠ ಕರ್ತವ್ಯ ನಿರ್ವಹಿಸಿದ ಸಮಾಧಾನವಿದೆ. ಈ ಕತೆಗಳನ್ನು ನಿಮ್ಮ ಉಡಿಗೆ ಹಾಕಿದ್ದೇನೆ. ಅವುಗಳನ್ನು ಓದಿ ಮನಸು ತುಂಬಿಸಿಕೊಳ್ಳಿರಿ.
ಮುನ್ನುಡಿ ಬರೆದ ಕನ್ನಡ ಪ್ರಾಧ್ಯಾಪಕ ಪ್ರೊ. ದಾದಾಪೀರ ನವಿಲೇಹಾಳ್, ಬೆನ್ನುಡಿ ಬರೆದು ಹರಸಿದ ಅನುಗಾಲದ ಸಾಹಿತ್ಯ ಸಂಗಾತಿ ಬಾಳಿ ಮೀನಾಕ್ಷಿಗೆ ನೆನವರಿಕೆಗಳು. ಅಂದಹಾಗೆ ಪತ್ನಿ ಅನಸೂಯಗೆ ಈ ಕೃತಿ ಅರ್ಪಿಸಿದ್ದೇನೆ. ಮಗಳು ಮಂಜುಶ್ರೀ ಅನಂತ, ಅವರ ಮಗಳು ಅಂದರೆ ನನ್ನ ಮುದ್ದು ಮೊಮ್ಮಗಳು ಅಸ್ಮಿತಾ ಕುಸುಮಳನು ನೆನೆಯದಿರಲಾರೆ. ಫೆಬ್ರವರಿ ಕೊನೆಯವಾರ ಕಲಬುರ್ಗಿಯಲ್ಲಿ ಬಿಡುಗಡೆಯಾಗಲಿರುವ 'ಮುಟ್ಟು' ಕೃತಿಯಾಗಿ ಹೊರಬರಲು ಕಾರಣರಾದ ಎಲ್ಲರಿಗೂ ಮತ್ತೊಮ್ಮೆ ಹೃದಯಪೂರ್ವಕ ಕೃತಜ್ಞತೆಗಳು.
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.