ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ

Date: 10-04-2025

Location: ಬೆಂಗಳೂರು


"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂರು ಕಡಕೋಳದಂತಹ ಬಹುತೇಕ ಹಳ್ಳಿಗಳ ಹಲವು ದೈಹಿಕ ಬೆಳವಣಿಗೆಗಳಿಗೆ ಹುದ್ದರಿಯಂತಹ ಈ ಊರು ನಮಗೊಂದು ಬಗೆಯ ರೋಲ್ ಮಾಡೆಲ್. ಅಂತೆಯೇ ಈ ಊರು ಮತ್ತು ಊರಿನ ಸಂತೆ ನಾನು ಪ್ರಕಟಿಸಿದ ಹತ್ತಾರು ಕತೆಗಳಲ್ಲಿ ಮತ್ತೆ ಮತ್ತೆ ಹೊಸ ಹೊಸ ವಿನ್ಯಾಸಗಳೊಂದಿಗೆ ಪ್ರಸ್ತಾಪಗೊಳ್ಳುತ್ತಲೇ ಇರುತ್ತದೆ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಅವರ ‘ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ' ಕುರಿತು ಬರೆದ ಲೇಖನ.

ಬಸಿರಿಲ್ಲದ ಮಗನ ಹಡೆದೆವ್ವ/ ಅದಕ
ಹೆಸರೇನಿಡಬೇಕು ಹಡದವ್ವ/
ಅಸರಂತ ಹಸ ಹುಸಿ ನುಡಿದಾನ /
ಹಸಿ ಕೆಸರಿಗೆ ಬೆಂಕಿಹಚ್ಚಿ ನಡದಾನ//

ನಡು ಜಡೆಯಲಿ ಹುಟ್ಯಾನ ಸ್ವಾಮಿ
ನಡಗತಾವ ನವಖಂಡ ಭೂಮಿ
ತಿರುಗುತಾನ ನಾಲ್ಕೂರ ಸೀಮಿ
ಮುಂದೆ ಸಡಗರ ನೋಡರಿ ಯಡ್ರಾಮಿ//

ಎಂದು ನಮ್ಮ ಕಡಕೋಳ ಮಡಿವಾಳಪ್ಪನವರ ಒಡನಾಟದ ಸರೀಕ ಅನುಭಾವಿ ಕವಿಶಿಷ್ಯ ಖೈನೂರು ಕೃಷ್ಣಪ್ಪ ಹಾಡಿ ಹರಸಿದ ಊರು ಯಡ್ರಾಮಿ. ಕಾಲಜ್ಞಾನ ಸೋಜಿಗದ ಸ್ವರವಚನದಲಿ ಮಡಿವಾಳಪ್ಪನನ್ನು ಕೊಂಡಾಡುತ್ತಾ ಕಡುಬೆಡಗಿನ ಕಾವ್ಯಗಂಧದಲಿ "ಮುಂದೆ ಸಡಗರ ನೋಡರಿ ಯಡ್ರಾಮಿ" ಎಂಬ ಕವಿಯ ಹ್ರಸ್ವ ಹಾರೈಕೆ ಈಡೇರಿದೆ. ಮತ್ತೊಂದೆಡೆ ಕವಿಯೇ ಹೇಳುವಂತೆ ಹಸಿ ಕೆಸರಿಗೆ ಬೆಂಕಿ ಹಚ್ಚುವ ಅಕ್ಷರ ನುಡಿ ಬೆರಗು ಇದಾಗಿದೆ. ಅದೇನೇ ಇರಲಿ ಈಗ್ಗೆ ಕೆಲವು ವರುಷಗಳ ಹಿಂದೆಯೇ ಯಡ್ರಾಮಿಯು ತಾಲೂಕು ಕೇಂದ್ರವಾಗುವ ಮೂಲಕ ಖೈನೂರು ಕೃಷ್ಣಪ್ಪನೆಂಬ ವಿಮಲಕವಿ ಮನದ ತತ್ವಪದಕಾರನ ಹದುಳ ಹಾರೈಕೆ ಖರೇಖರೇ ಈಡೇರಿದಂತಾಗಿದೆ. ಯಡ್ರಾಮಿಯ ಮೈ ಮನಸುಗಳ ತುಂಬೆಲ್ಲಾ ಸಹಜವಾಗಿ ಸಂತಸ, ಸಡಗರಗಳ ಸಂಭ್ರಮ ತುಂಬಿ ತುಳುಕುತ್ತಲಿರುವ ಜೀವ ಸಂವೇದನೆಗಳು.

ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂರು ಕಡಕೋಳದಂತಹ ಬಹುತೇಕ ಹಳ್ಳಿಗಳ ಹಲವು ದೈಹಿಕ ಬೆಳವಣಿಗೆಗಳಿಗೆ ಹುದ್ದರಿಯಂತಹ ಈ ಊರು ನಮಗೊಂದು ಬಗೆಯ ರೋಲ್ ಮಾಡೆಲ್. ಅಂತೆಯೇ ಈ ಊರು ಮತ್ತು ಊರಿನ ಸಂತೆ ನಾನು ಪ್ರಕಟಿಸಿದ ಹತ್ತಾರು ಕತೆಗಳಲ್ಲಿ ಮತ್ತೆ ಮತ್ತೆ ಹೊಸ ಹೊಸ ವಿನ್ಯಾಸಗಳೊಂದಿಗೆ ಪ್ರಸ್ತಾಪಗೊಳ್ಳುತ್ತಲೇ ಇರುತ್ತದೆ. ಸಂತೆಯ ಉಸ್ತುವಾರಿಗಳಂತಿರುವ ಈ ಊರಿನ ವಣಿಕರೆಲ್ಲ ಸಾಹುಕಾರರೆಂಬ ಬಿರುದಾಂಕಿತರು. ಅವರೆಷ್ಟೇ ಬಡವರಾಗಿದ್ದರು ಸಹ ಸಾಹುಕಾರರೆಂಬ ಅಡ್ಡ ಹೆಸರಿನಿಂದ ಕರೆಸಿಕೊಳ್ಳುವಲ್ಲಿ ಮಹಾ ಧಾರಾಳ ಗುಣಗ್ರಾಹಿಗರು. ಕೆಲವರಂತು ಕೈಯಲ್ಲಿ ಅಲ್ಲ ಕಣ್ಣಲ್ಲೇ ತಕ್ಕಡಿ ಇಟ್ಟುಕೊಂಡವರು.

ಅವತ್ತು ಅಷ್ಟೇನು ಸ್ಥಿತಿವಂತರಲ್ಲದ ಯಡ್ರಾಮಿಯ ಅಕ್ಕಸಾಲಿಗರ ಕಲ್ಲಪ್ಪನವರದು ಹಸುಗೂಸುಗಳ ಕಿವಿಗೆ ಮುರುವು ಚುಚ್ಚುವ ಕಾಯಕ. ನನ್ನ ಬಾಲ್ಯದ ದಿನಗಳಲ್ಲಿ ಆತನನ್ನು ಕಲ್ಲಪ್ಪ ಸಾಹುಕಾರನೆಂತಲೇ ಕರೀತಿದ್ವಿ. ಅವರು ಆಗ ಪುಟ್ಟಮಕ್ಕಳ ಮತ್ತು ಹೆಣ್ಣುಮಕ್ಕಳ ಆಯ್ದ ಕೆಲವು ಸಣ್ಣ ಪುಟ್ಟ ಕಾಯಿಲೆಗಳಿಗೆ ಪೆಟೆಂಟ್ ಔಷಧಿ ನೀಡುತ್ತಿದ್ದ ನೆನಹು ನನ್ನದು. ಅದು ಮನೆ ಮದ್ದಿನ ವನಸ್ಪತಿ ಔಷಧೀಯ ಗುಣಗಳುಳ್ಳದ್ದೆಂಬ ಯತಾರ್ಥ ನಂಬುಗೆ ಆಗ ನಮಗೆಲ್ಲ.

ಹೇಳಲೇಬೇಕಾದ ಮತ್ತೊಂದು ಮಹತ್ವದ ಸಂಗತಿ ಎಂದರೆ ಪತರಾಸು ಹಾಕಿದ ಕಲ್ಲಪ್ಪ ಸಾಹುಕಾರರ ಮನೆ. ಅದರ ಮುಂಚಾವಣಿಯ ನೆಲುವಿಗೆ ತೂಗು ಹಾಕಿದ ಪಂಜರದಲ್ಲಿ ಅವರೇ ಸಾಕಿದ ಅರಗಿಣಿಗಳು. ಅವುಗಳ ಮುದ್ದು ಮುದ್ದು ಮಾತುಗಳ ಸ್ವಾಗತದ ಮಜಕೂರ. ಕಿನ್ನರಿ ಸ್ವರದ ಮೋಹಕ ಗಿಳಿಗಳ ಕುಶಲೋಪರಿಯ ಕಚಗುಳಿ. ಗಿಣಿಮಾತುಗಳೆಂದರೆ ನನಗೆ ಬಣ್ಣಿಸಲಾಗದ ಕೌತುಕವೇ ಕೌತುಕ. ಪಂಜರದ ಗಿಳಿಗಳೊಂದಿಗೆ ಮಾತಾಡುವ ದಿವ್ಯ ಕುತೂಹಲ.

ಹಳೇ ಬಜಾರಿನಲ್ಲಿ ಸಾಲು ಸಾಲಾದ ಕಿರಾಣಿ, ಕಪ್ಪಡದ ಅಂಗಡಿಗಳು. ಅಂಗಡಿ ಮಾಲೀಕರು ಕುಳಿತುಕೊಳ್ಳುವ ಗಲ್ಲೇದ ಕಟ್ಟೆಗಳು. ದಿನಸಿ ಸಾಮಾನುಗಳನ್ನು ಕಾಗದದ ಪುಡಿಕೆ, ಚೀಟುಗಳಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲು ಮತ್ತು ಅಳತೆ ಕಟ್ಟಿಗೆಗೆ ಬದಲು ಕೈಮೊಳಗಳಲ್ಲೇ ಬಟ್ಟೆಯನ್ನು ಅಳೆದು ಕೊಡಲು ಇರುವ ಒಂದೆರಡು ಚುರುಕಾದ ಆಳುಗಳು. ಈ ಎಲ್ಲ ಸಾಲಂಗಡಿಗಳ ನಡುವೆ ಬಾಣಂತಿ ಹಾಗೂ ಹಸುಗೂಸುಗಳ ಜಡ್ಡು ಜಾಪತ್ರಿಗೆ ಅಗಶುದ್ದಿ (ಔಷಧ) ಮತ್ತು ಕವಡೆ ಲೋಬಾನದಂತಹ ಪೂಜಾ ಸಾಮಗ್ರಿಗಳು ಸಿಗುವ ತಾಳಿಕೋಟಿಯವರ ಅಂಗಡಿಯದು ವಿಶೇಷ.

ಒಟ್ಟಿನಲ್ಲಿ ಸೋಮವಾರದ ಯಡ್ರಾಮಿ ಸಂತೆಯೆಂದರೆ ಎಲ್ಲಾ ಕಡೆಗೂ ಕಂಡಾಪಟಿ ಹೆಸರು. ಅಷ್ಟಕ್ಕು ನಾನು ಯಡ್ರಾಮಿ ಸಂತೆ ನೋಡಿದ್ದು ಮೂರನೇ ಈಯತ್ತೆ ಸೇರಿದ ಮೇಲೆ. ಅದುವರೆಗೆ ಯಡ್ರಾಮಿ ಸಂತೆ ಕುರಿತು ನನ್ನ ವಾರಗೆಯವರಲ್ಲಿ ಕೇಳಿದ ತರಹೇವಾರಿ ಕತೆಗಳ ಪರಿಚಯವಿತ್ತು. ನಮ್ಮ ಭಾಗದಲ್ಲಿ ಆಗ ಯಡ್ರಾಮಿ ಸಂತೆಗೆ ಹೋಗಿ ಸಂತೆ ಮಾಡಿಕೊಂಡು ಬರುವುದು ಸಣ್ಣದೊಂದು ಪ್ರತಿಷ್ಠೆಯೇ ಆಗಿರುತ್ತಿತ್ತು.

ಯಡ್ರಾಮಿಯ ಹಳೆ ಬಜಾರಿನ ಬಾವಾಗೋಳ ತೆಕ್ಕೇದ ಹತ್ತಿರವೇ ರುದ್ರಯ್ಯ ಮುತ್ಯಾನ ಹೋಟೆಲ್ ಇತ್ತು. ಸಾಲಿ ಕಲಿಯಲು ಯಡ್ರಾಮಿಗೆ ಬರುವ ಹಳ್ಳಿಯ ಮಕ್ಕಳಿಗೆ ಸಂತೆ ದಿವಸ ರುದ್ರಯ್ಯ ಮುತ್ಯಾ ಪುಗಸಟ್ಟೆಯಾಗಿ ಪೂರಿ ಕೊಡ್ತಾರಂತೆ. ಪೂರಿಯ ಅಳಸು ಚಟ್ನಿಗೆ ಕೇಳಿದಷ್ಟು ಸಕ್ರೆ ಹಾಕ್ತಾರಂತೆ. ಇಂತಹ ಸಕ್ಕರೆ ಮಾತುಕತೆಗಳ ಪ್ರತೀತಿಗಳಿದ್ದವು. ಯಡ್ರಾಮಿ ಸಂತೆಯ ಮಲ್ಲೇದ ನಿಂಗಪ್ಪ ಸಾಹುಕಾರರ ಅರವಿ ಅಂಗಡಿಯಲ್ಲಿ ದೊಡ್ಡವರ ಸೈಜಿನ ರೆಡಿಮೇಡ್ ಅಂಗಿಗಳು. ಫರ್ತಬಾದಿ ನಿಂಗಪ್ಪ ಸಾಹುಕಾರರ ಅಂಗಡಿ ಸಣ್ಣ ಸಣ್ಣ ಚುಕ್ಕೋಳ ಅಂಗಿ ಚೆಡ್ಡಿಗಳಿಗೆ ಭಾಳ ಫೇಮಸ್.

ಮಲ್ಲೇದ ಸಾಹುಕಾರರ ಅಂಗಡಿ ಎದುರಿಗೆ ತೆಲಗಬಾಳ ಸಾತಣ್ಣನ ಮೆಡಿಕಲ್ ದುಕಾನ. ಅದರ ಮೇಲಿನ ಮಹಡಿ ಮನೆಯೇ ಗಾಂವಟಿ ವೈದ್ಯ ಬಿರಾದಾರ ಡಾಕ್ಟರ್ ದವಾಖಾನೆ. ಯಡ್ರಾಮಿ "ಬಿರೆದಾರ ದವಾಖಾನಿಗೆ ತೋರಿಸಿದ್ರೂ ಬದುಕಿ ಉಳಿಲಿಲ್ಲ" ಎಂಬ ದಂತಕತೆಗಳೇ ಹುಟ್ಟಿಕೊಂಡಿದ್ದ ಅದು ಆ ಕಾಲದ ಹೈಟೆಕ್ ಹಾಸ್ಪಿಟಲ್. ಎಂಥದೇ ಜಡ್ಡು ಬಂದಿದ್ರೂ ಹಳ್ಳೀಮಂದಿ ಬಿರೆದಾರ ಡಾಕ್ಟರಿಗೇ ತೋರಿಸಬೇಕೆಂದು ಸೋಮವಾರದ ಸಂತೆ ದಿನದವರೆಗೂ ಸಂಭಾಳಿಸಿಕೊಂಡಿರುತ್ತಿದ್ರು. ಹೀಗೆ ಯಡ್ರಾಮಿ ಸಂತೆಯ ಇನ್ನೂ ಅನೇಕ ಅಂಗಡಿಗಳ ಕುರಿತಾಗಿ ಚಮತ್ಕಾರದ ಚೇತೋಹಾರಿ ಚರ್ಚೆಗಳು ಜನಜನಿತವಾಗಿದ್ದವು.

ಮೂರಂತಸ್ತಿನ ಫರ್ತಬಾದಿಯವರ ಬಿಗ್ ಬಜಾರ್ ನೋಡುವುದೆಂದರೆ ವರ್ಲ್ಡ್ ಟ್ರೇಡ್ ಸೆಂಟರ್ ನೋಡಿದ ಸೋಜಿಗ. ಅದು ಆಗಿನ ನಮ್ಮ ಬಹುದೊಡ್ಡ ಕನಸಿನ ಬಹುಮಹಡಿ ಕಟ್ಟಡ. ಅದು ಆ ಕಾಲದ ನಮ್ಮ ಭಾಗದ ಪ್ರತಿಷ್ಠಿತ ಒರಾಯನ್ ಮಾಲ್ ಆಗಿತ್ತು ಎಂದರೆ ಯಾರೂ ಅತಿಶಯೋಕ್ತಿ ಪಡಬೇಕಿಲ್ಲ. ಹೀಗೆ ನಮಗೆ ನಾವೇ ಆಗ ಯಡ್ರಾಮಿ ಸಂತೆ ಬಜಾರಿನ ಬಗೆಗೆ ಕಲ್ಪಿತ ಕನಸುಗಳ ಕೋಟೆ - ಕೊತ್ತಲ - ಬುರುಜುಗಳನ್ನು ಕಟ್ಟಿ ಕೊಳ್ಳುತ್ತಿದ್ದೆವು.

ಎರಡನೇ ಈಯತ್ತೆವರೆಗೂ ನಮ್ಮಪ್ಪ ನನಗೆ, ಯಡ್ರಾಮಿ ಬಯಲು ಸಂತೆಯ ಬಟ್ಟೆ ಗಂಟುಗಳ ಮಮ್ಮಣಿಗರ ಬಳಿ ಕಮೀಜದಂತಹ ಉದ್ದನೆ ಅಂಗಿ ತರುತ್ತಿದ್ದ. ಮೊಳಕಾಲ ಕೆಳಗಿನವರೆಗೂ ಇರುತ್ತಿದ್ದ ಆ ಉದ್ದನೆ ಅಂಗಿ ನನ್ನ ಅಮೂಲ್ಯ ಅಂಗಾಂಗಗಳ ಮರ್ಯಾದೆ ಕಾಪಾಡುವ ಟೂ ಇನ್ವನ್ ಗಾರ್ಮೆಂಟ್. ಯಾಕಂದ್ರೆ ಅಪ್ಪ ಆಗ ನನಗೆ ಚಡ್ಡಿ ಕೊಡಿಸುತ್ತಿರಲಿಲ್ಲ. ಅಷ್ಟಕ್ಕೂ ನಾನು ಚಣ್ಣ ತೊಡಲು ಆರಂಭಿಸಿದ್ದು ಮೂರನೇ ಈಯತ್ತೆ ಸೇರಿದ ಮೇಲೆಯೇ. ಅದೂ ಯಡ್ರಾಮಿಯ ಸರಕಾರಿ ಸಾಲಿಗೆ ಹೆಸರು ಹಚ್ಚಿದ ಮೇಲೆಯೇ ಚಡ್ಡಿ ತೊಡುವುದನ್ನು ಕಲಿತೆ. ಅಂದಹಾಗೆ ನಾನು ಮೆಟ್ರಿಕ್ ಓದುವಾಗ ಅಪ್ಪ ನನಗೆ ಟೈರ್ ಚಪ್ಪಲಿ ಕೊಡಿಸಿದ್ದರು. ನನ್ನ ಜೀವನದ ಮೊದಲ ಪಾದರಕ್ಷೆಗಳಾದ ಆ ಟೈರ್ ಚಪ್ಪಲಿಗಳು ಕಳ್ತನವಾಗಿ ಹೋದ ರೋಚಕ ಕತೆ ಬ್ರೇಕಿಂಗ್ ನ್ಯೂಸಿನಂತೆ ಇನ್ನೊಮ್ಮೆ ಹೇಳುವೆ.

ನೀವೇನೇ ಅಂದ್ಕೊಳ್ರೀ... ನನಗೆ ಈಗಿನ ಯಡ್ರಾಮಿ ಹಳೇ ಬಸ್ ಸ್ಟ್ಯಾಂಡ್ ಬಾಜೂಕಿನ ಹಣಮಂದೇವರ ಗುಡಿ ಹತ್ತಿರ ಜರುಗುವ ವರ್ತಮಾನದ ಸಂತೆ ಒಂದಿಷ್ಟೂ ಖುಷಿ ಕೊಟ್ಟಿಲ್ಲ. ಚಾಳೀಸು ಹಾಕಿ ಹುಡುಕಿದರೂ ಮೇಲಿನ ಬಜಾರದ ಸಂತೆಯಲ್ಲಿ ನನಗೆ ಎಳ್ಳರ್ಧ ಕಾಳಿನಷ್ಟೂ ಆಪ್ತತೆ, ಆರ್ದ್ರತೆಯ ಪ್ರೀತಿ ಸಿಗುವುದಿಲ್ಲ. ಆದರೆ ನನಗೆ ಕೆಳಗಿನ ಬಜಾರದ ಹಳೆಸಂತೆಯ ಸಂತಸವೇ ಬಿಲ್ಕುಲ್ ಖುಷಿ.

ನಾವು ನಮ್ಮ ಹಳ್ಳಿಗಳಿಂದ ತಲೆ ಮೇಲೆ ಹೊತ್ತುತಂದ ಜೋಳ, ಸಜ್ಜೆ , ಗೋಧಿ, ಕಡಲೆ, ಹುರಳಿ,...ಹೀಗೆ ನಾವೇ ಖುದ್ದು ನಮ್ಮ ಹೊಲಗಳಲ್ಲಿ ಬೆಳೆದ ದವಸ ಧಾನ್ಯಗಳನ್ನು ಸಂತೆಯಲ್ಲಿ
ಮಾರಾಟ ಮಾಡಿ ಸಂಜೆಯ ಇಳಿಹೊತ್ತಿನ ಸಂತೆ ಮಾಡ್ತಿದ್ವಿ. ಹಾಗೆಯೇ ಯಡ್ರಾಮಿ ಸಂತೆಯಲ್ಲಿ ಹೊತ್ತು ಏರುವ ಮುನ್ನ ಹಳ್ಳಿಗಳಿಂದ ಕಾಯಿಸಿ ತಂದ ಆಕಳ ತುಪ್ಪ ಮತ್ತು ಬೆಣ್ಣೆಗೆ ಭಾರೀ ಬೇಡಿಕೆ ಇರ್ತಿತ್ತು.

ಒಮ್ಮೆ ನಾನು, ನಮ್ಮವ್ವ ತಲೆ ಮೇಲೆ ಹೊತ್ತು ತಂದ ವಮ್ಮನ ಜೋಳ ಮಾರಾಟವಾಗದೇ, ಸಂಜೆಯ ಸಂತೆಗೆ ರೊಕ್ಕವಿಲ್ಲದೆ ನಮ್ಮೂರಿಗೆ ವಾಪಸು ಹೋಗಿ ಅಪ್ಪನಿಂದ ಬೈಸಿ ಕೊಂಡಿದ್ವಿ. ನನಗಂತೂ ಆ ಸೋಮವಾರ ಅಲ್ಲಾಪುರದ ಬಸಣ್ಣನ ಬಯಲು ಅಂಗಡಿಯ ಬೇಸನುಂಡಿ, ಬೆಲ್ಲದ ಜಿಲೇಬಿ, ಬೆಲ್ಲದ ಸಿಣ್ಣಿ, ಕೆಂಪ್ಸಿಣ್ಣಿ, ಕರ್ದಂಟು, ಪುಗ್ಗೆ ತಿನ್ನುವ ಭಾಗ್ಯವಿರಲಿಲ್ಲ. ಅಲ್ದಿಯ ಲಾಳೇ ಮಶ್ಯಾಕ ತೋರಿಸುವ ಆ ಕಾಲದ ನಮ್ಮ ಪಾಲಿನ ಬಾಲಿವುಡ್ ಸಿನೆಮಾ ಎಂದರೆ "ಗರ್ದಿ ಗಮ್ಮತ್ತು" ನೋಡುವ ಅವಕಾಶ ದಕ್ಕಲಿಲ್ಲ. ಆ ವಾರದ ಸಂತೆಯ
ನನ್ನ ಖಂಡುಗ, ಖಂಡುಗ ಕನಸು ಪೆಂಡಿಂಗ್ ಉಳೀತು.

ಯಡ್ರಾಮಿ ಪಟ್ಟಣದ ಮೇಲಿನ ಓಣಿಯಲ್ಲಿ ಚೌಧರಿಯವರ ಸಾಂಬಾರ ಮಸಾಲೆಯ ದಿನಸಿ ಅಂಗಡಿ. ಅದು ಮಾಂಸದ ಅಡುಗೆಗೂ ಹೇಳಿಮಾಡಿಸಿದ ಮಸಾಲೆ. ಅದರಾಚೆ ರಾಜೇಲಿಯ ಕುಸುಬೆ ಎಣ್ಣೆಯ ಗಾಣ. ಒಂಟೆತ್ತು ಗಾಣ ತಿರುಗುವ ಕುಸುಬೆಯ ತಾಜಾ ಎಣ್ಣೆ. ಗಾಣದಂಗಡಿ ದಾಟಿ ತುಸು ಮುಂದಕ್ಕೆ ಹೋದರೆ ಸೇಂದಿ ಸರಾಯಿ ಅಂಗಡಿಯೊಂದರ ದರ್ಬಾರ್. ಕಟುಕರ ಅಂಗಡಿಯ ಮುಂದೆ ಸೇಂದಿ ಕುಡಿದ ಸಭ್ಯ ಕುಡುಕರ ಸುಂದರ ಕೂಟ. ಆಗ ಊರುಗಳಲ್ಲಿ ಒಬ್ಬಿಬ್ಬರು ಸಭ್ಯ‌ ಮತ್ತು ತುಸು ಮರ್ಯಾದಸ್ಥ ಕುಡುಕರು ಇರ್ತಿದ್ರು. ಅವರಿಗೆಲ್ಲ ವಾರಕ್ಕೊಮ್ಮೆ ಯಡ್ರಾಮಿ ಸಂತೆಯ ಸೇಂದಿಯೆಂಬ ಮಧುರ 'ಮದ್ಯ'ದ ಸೌಭಾಗ್ಯ.

ಉ‌‌ದ್ದನೆಯ ಗಟ್ಟಿ ಕಡ್ಡಿಗಳಿಗೆ ಸಿಕ್ಕಿಸಿ ಕೆಂಡದ ಉಂಡೆಗಳಲ್ಲಿ ಚಿಮಣಾಬಾಯಿ ಸುಡುತ್ತಿದ್ದ ಖಮ್ಮನೆ ವಾಸನೆಯ ಉಪ್ಪು ಸವರಿದ ಖಂಡದ ಕರೀ ತುಂಡು ಚಾಕಣಗಳು. ಸುಡುವ ಖಂಡದ ತುಂಡುಗಳನ್ನು ತಿನ್ನುತ್ತಲೇ ಜೊಲ್ಲು ಸೋರಿಸುವ ಸೇಂದಿ ಕುಡುಕರು ಎಡರು ತೊಡರು ನುಡಿಗಳಲ್ಲಿ ಜಗಳಾಡುವುದನ್ನು ನೋಡುವುದೇ ಮಸ್ತ್ ಮಜಾ. ಅದು ಸಾರ್ವಜನಿಕ ಮೆಗಾ ಸೀರಿಯಲ್ ಮನರಂಜನೆ.

ಸುತ್ತಲ ಹಳ್ಳಿಗಳ ಜನರ ದಿನನಿತ್ಯದ ಬದುಕಿಗೆ ಬೇಕಾದ ಅತ್ಯಗತ್ಯದ ಕಿರಾಣಿ ಅಂಗಡಿ ದಿನಸಿಗಳು ಒಂದೆಡೆ. ಮತ್ತೊಂದೆಡೆ ಸಿ. ಎಸ್. ಡಂಬಳದವರ ಸ್ಟೇಷನರಿ ಅಂಗಡಿ. ಅವರು ಆಗ ಚನ್ನಬಸಪ್ಪ ಶಿವಲಿಂಗಪ್ಪ ಡಂಬಳ ಹೆಸರಿನ‌ ರಟ್ಟಿನ ಕ್ಯಾಲೆಂಡರ್ ಪ್ರಿಂಟ್ ಮಾಡಿಸಿದ್ದು ಯಡ್ರಾಮಿಯಲ್ಲೇ ವರ್ಲ್ಡ್ ಫೇಮಸ್ ಆಗಿತ್ತು. ಇವರ ಅಂಗಡಿಯಲ್ಲಿ ಕುರ್ಪಿ, ಕುಡುಗೋಲು, ದನ ಕರುಗಳ ಮಗಡ, ಮುಗುದಾಣಿ ಹೀಗೆ ರೈತಾಪಿ ವಸ್ತುಗಳ ಭಂಡಾರ. ಅಷ್ಟಲ್ಲದೇ ಶಾಲಾಮಕ್ಕಳ ಪಠ್ಯ ಪುಸ್ತಕಗಳು ಅವರ ಅಂಗಡಿಯಲ್ಲಿ ದೊರಕುತ್ತಿದ್ದವು.

ಹಾಗೆಯೇ ದೇಸಾಯರ ಅರವಿ ಅಂಗಡಿಯದು ದೊಡ್ಡ ಹೆಸರು. ದೊಡ್ಡ ದೇಸಾಯರು ಅಂಗಡಿಯ ಬಿಳಿಗಾದಿ ತೆಕ್ಕೆಗಳಿಗೆ ಆರಾಮ ಸಿರಿಯಿಂದ ಕುಂತಿರುವುದನ್ನು ನೋಡುವುದೇ ಹಳ್ಳಿಯ ನಮಗೆ ಕಂಡಾಪಟಿ ಖುಷಿಯ ವಿಷಯ. ಅದು ನಮಗೆ ಕನಸಿನಲ್ಲೂ ಸಿಗದ ಸಂಭ್ರಮ. ಬಾಣಂತಿಯರ ಎಚ್ಚ ದೊರಕುವ ಶೀಲವಂತರಂಗಡಿ ಬಹಳೇ ಹಳೆಯ ಅಂಗಡಿಯೆಂಬ ಕೀರ್ತಿ. ಹೀಗೆ ಯಡ್ರಾಮಿ ಹಳೆಯ ಬಜಾರಿನ ಹಳೇಸಂತೆಯ ಜವಾರಿತನದ ಸಂಪ್ರೀತಿ ಒಂದು ಸಂಚಿಕೆಯ ಬರಹಕ್ಕೆ ತೀರುವಂತಹದಲ್ಲ.

ಈ ಅಂಕಣದ ಹಿಂದಿನ ಬರಹಗಳು:
ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯಿತ್ತಿರುವ ರಂಗಮೌಲ್ಯಗಳು
ನಲವತ್ತೆಂಟು ವರುಷಗಳ ಹಿಂದೆ ಡಾವಣಗೇರಿ ಸೀಮೆಗೆ ಕಾಲಿಟ್ಟ ಹೊಸತರಲ್ಲಿ...

ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ
ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...
ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...
ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?
ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ
ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ
ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..
ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು
ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಐವತ್ತು ವರ್ಷಗಳ ಕಥನ ಚರಿತ್ರೆಯನ್ನು ಕಟ್ಟಿಕೊಡುವ ‘ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು’

15-04-2025 ಬೆಂಗಳೂರು

"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...

ಅಮಾಸ ಕಥೆಯಲ್ಲಿ ಕಾಣುವ ಪುನರಾವರ್ತನಾ ಬದುಕು

04-04-2025 ಬೆಂಗಳೂರು

"ಅಮಾಸ ಕಥೆಯು ಇವರ ದ್ಯಾವನೂರು ಕಥಾ ಸಂಕಲನದಿಂದ ಆಯ್ದುಕೊಂಡ ಕಥೆಯಾಗಿದ್ದು ಇದು ತಬ್ಬಲಿಯಾದ ಅಮಾಸ ಎಂಬ ಹುಡುಗನನ್ನು...