ಐವತ್ತು ವರ್ಷಗಳ ಕಥನ ಚರಿತ್ರೆಯನ್ನು ಕಟ್ಟಿಕೊಡುವ ‘ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು’

Date: 15-04-2025

Location: ಬೆಂಗಳೂರು


"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮವನ್ನು ಅವಲಂಬಿಸಿರುವದರಿಂದ ಇದು ಹಾಗಾಗಬಾರದೆಂದು ಅದರ ಸಂಪಾದನೆಯಲ್ಲಿ ತುಂಬಾ ಎಚ್ಚರ ವಹಿಸಿದ್ದೇನೆ. ಓದುಗರಿಗೆ `ಅವರ ಈ ಕಥೆಗಿಂತ ಆ ಕಥೆ ಚನ್ನಾಗಿತ್ತು; ಸಂಕಲನಕ್ಕೆ ಅವರ ಆ ಕಥೆ ಸೇರಿಸಬಹುದಾಗಿತ್ತು’-ಎಂದೆಲ್ಲಾ ಅನೇಕರಿಗೆ ಅನ್ನಿಸುವುದು ಸಹಜ," ಎನ್ನುತ್ತಾರೆ ಅಂಕಣಕಾರ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು’ ಕೃತಿ ಕುರಿತು ಬರೆದ ಲೇಖನ.

ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಕಟಿಸಿದ ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು 1950 ದಿಂದ 2000 ದವರೆಗೆ ಕನ್ನಡದಲ್ಲಿ ಬಂದ ಅತ್ಯತ್ತಮ ಕಥೆಗಳನ್ನು ಒಳಗೊಂಡ ಕೃತಿಯಾಗಿದೆ. ಕನ್ನಡ ಕಥನವನ್ನು ಚಾರಿತ್ರಿಕವಾಗಿ ಅಧ್ಯಯನ ಮಾಡುವವರಿಗೆ ಆಕರ ಗ್ರಂಥವಾಗಿದೆ. ಐವತ್ತು ವರ್ಷಗಳ ಕಥನ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಇದು ಬಹಳ ಪರಿಶ್ರಮ ಬೇಡುವ ಕಾರ್ಯ. ಐವತ್ತು ವರ್ಷಗಳಲ್ಲಿ ಬಂದ ಕಥೆಗಳನ್ನು ಓದಿ ಅದರಲ್ಲಿ ಮುಖ್ಯವಾದ ಕಥೆಗಳನ್ನು ಆಯ್ಕೆ ಮಾಡುವುದು, ಅದರಲ್ಲೂ ಪುಟಗಳ ಮಿತಿ ಇರುವಾಗ ದೊಡ್ಡ ಸವಾಲಿನದು. ಭಾರತದಂತ ಹಲವು ಸಮುದಾಯಗಳಿರುವ ದೇಶದಲ್ಲಿ ಈ ಕಾರ್ಯ ಇನ್ನೂ ಕಠಿಣವಾದುದು. ಪ್ರಾದೇಶಿಕ ವಲಯಗಳ ಕಥೆಗಳಿಗೆ ಸ್ಥಾನ ನೀಡಬೇಕಾದ ಒತ್ತಡವೂ ಇರುತ್ತದೆ. ಸಾಹಿತ್ಯದ ಕಲಾತ್ಮಕತೆ ಮತ್ತು ಅನುಭವಗಳನ್ನು ಸಾದ್ಯಗೊಳಿಸಿದ ಕಥನಗಳ ಕಡೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಆಗ ಕೇವಲ ಅನುಭವದ ದಟ್ಟತೆಯನ್ನು ಒಳಗೊಂಡ ಕಥೆಗಳನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತದೆ. ಅನುಭವಗಳನ್ನು ಶೋಧಕ್ಕೊಡ್ಡಿ ಕಥನ ಪರಂಪರೆಯಲ್ಲಿ ವಿಶೇಷತೆಯನ್ನು ಸಾಧಿಸಿದ ಹಾಗೂ ಕಥನ ಪರಂಪರೆಯನ್ನು ಮುಂದುವರೆಸಲು ಸಮರ್ಥವಾದ ಕಥೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಕಥನದ ಕಲೆಗಾರಿಕೆ ಬದುಕಿನ ಅನುಭವಗಳ ಜೊತೆ ಸಂಯೋಗ ಸಾಧಿಸಿದ ಕಥೆಗಳು ಕಾಲದೊಂದಿಗೆ ಚಲಿಸುತ್ತವೆ. ಮುಂದೆ ಕಥೆ ಬರೆಯುವವರಿಗೆ ದಾರಿಯನ್ನು ತೋರಿಸುತ್ತವೆ. ಒಂದು ರೀತಿಯಲ್ಲಿ ಗಣಿ ಅಗೆದು ಚಿನ್ನ ತೆಗೆಯುವ ಕೆಲಸ. ಹಾಗಾದರೆ ಚಿನ್ನ ಮಾತ್ರ ಮುಖ್ಯವೆ, ಮಣ್ಣು ಬೇಡವೇ ಎಂಬ ಪ್ರಶ್ನೆಯು ಹುಟ್ಟುತ್ತದೆ. ಚಿನ್ನ ಮಣ್ಣು ಎರಡು ಮುಖ್ಯವೆ. ಆದರೆ ಚಿನ್ನವನ್ನು ತರಾವರಿ ಆಭರಣ ಮಾಡುವುದು ಅಷ್ಟೇ ಮುಖ್ಯವಾದುದು. ಇಂತಹ ಇಕ್ಕಟ್ಟುಗಳನ್ನು ಐವತ್ತು ವರ್ಷದ ಕಥೆಗಳನ್ನು ಪುಟಗಳ ಮಿತಿಯಲ್ಲಿ ಕೂಡಿ ಹಾಕುವಾಗ ಡಾ. ಕರೀಗೌಡ ಬೀಚನಹಳ್ಳಿಯವರು ಎದುರಿಸಿದ್ದಾರೆ. ಈ ಇಕ್ಕಟ್ಟನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಕೃತಿಗೆ ಬರೆದ ಪ್ರಸ್ತಾವನೆ ಅವರ ಪರಿಶ್ರಮ ಹಾಗೂ ವಿಸ್ತುçತವಾದ ಅಧ್ಯಯನ ವಿಧಾನವನ್ನು ಸೂಚಿಸುತ್ತದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಅವರು ಗಾಢವಾಗಿ ಅಧ್ಯಯನ ಮಾಡಿರುವದರಿಂದ ಭಿನ್ನ ನೆಲೆಯ ಕಥೆಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿದೆ.

ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮವನ್ನು ಅವಲಂಬಿಸಿರುವದರಿಂದ ಇದು ಹಾಗಾಗಬಾರದೆಂದು ಅದರ ಸಂಪಾದನೆಯಲ್ಲಿ ತುಂಬಾ ಎಚ್ಚರ ವಹಿಸಿದ್ದೇನೆ. ಓದುಗರಿಗೆ `ಅವರ ಈ ಕಥೆಗಿಂತ ಆ ಕಥೆ ಚನ್ನಾಗಿತ್ತು; ಸಂಕಲನಕ್ಕೆ ಅವರ ಆ ಕಥೆ ಸೇರಿಸಬಹುದಾಗಿತ್ತು’-ಎಂದೆಲ್ಲಾ ಅನೇಕರಿಗೆ ಅನ್ನಿಸುವುದು ಸಹಜ. ಉದಾಹರಣೆಗೆ ನೆನೆಯುವದಾದರೆ ಪುಟದ ಮಿತಿ ವಿಧಿಸಿದರಿಂದಾಗಿ ರಾಜಶೇಖರ ನೀರಮಾನ್ವಿ, ಗಿರಡ್ಡಿ ಗೋವಿಂದರಾಜ, ಖಾಸನೀಸ, ರಾಜಜಲಕ್ಷ್ಮೀ ಎನ್.ರಾವ್, ಭಾನುಮುಷ್ತಾಕ್, ಮನುಬಳಿಗಾರ, ರಾಜೇಂದ್ರಚೆನ್ನಿ, ಹಂದ್ರಾಳ, ಕೃಷ್ಣಮೂರ್ತಿ ಹನೂರು, ಅರವಿಂದ ಮಾಲಗತ್ತಿ, ಬಾಳಸಾಹೇಬ ಲೋಕಾಪುರ, ಟಿ.ಜಿ. ರಾಘವ, ಕೆ. ಸದಾಶಿವ. ಮಿತ್ರಾ ವೆಂಕಟರಾಜ್, ಕಾ. ತ. ಚಿಕ್ಕಣ್ಣ, ಲೋಹಿತ್ ನಾಯ್ಕರ್, ಪ್ರಹ್ಲಾದ ಅಗಸನಕಟ್ಟೆ ಮುಂತಾದ ಕಥೆಗಾರರ ಕಥೆಗಳನ್ನು ಇಲ್ಲಿ ಸೇರಿಸಲಾಗಿಲ್ಲ. ಆದರೆ ಈ ಕಥೆಗಾರರಲ್ಲಿ ಕಂಡು ಬರುವ ಅಂಶಗಳನ್ನು ಇಲ್ಲಿ ಆಯ್ಕೆ ಮಾಡಿರುವ ಕೆಲವು ಕಥೆಗಾರರ ಕಥೆಗಳಲ್ಲೂ ಕಾಣುವುದಕ್ಕೆ ಅವಕಾಶವಿದೆ. ಇವರಲ್ಲಿ ಇಂದೂ ಇನ್ನೂ ಕಥೆಗಳನ್ನು ಬರೆಯುವವರಾಗಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಇದೇ ಅಂತಮ ಕಥಾಸಂಕಲನವೆಂದು ಭಾವಿಸಬೇಕಾಗಿಲ್ಲ. ಇಂತಹ ಇತಿಮಿತಿಗಳ ನಡುವೆಯೂ ವಸ್ತು ನಿಷ್ಠತೆಯನ್ನು ಕಾಯ್ದುಕೊಂಡು 1950-2000 ನಡುವೆ ಬಂದ ಐದು ದಶಕಗಳ ಅವಧಿಯಲ್ಲಿ ಪ್ರಕಟವಾದ ಕಥೆಗಳಿಂದ ಆಯ್ದ ಪ್ರಾತಿನಿಧಿಕ ಕಥಾಸಂಕಲನವನ್ನಾಗಿ ರೂಪಿಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದ್ದೇನೆ.’ ಕರೀಗೌಡ ಬೀಚನಹಳ್ಳಿಯವರು ಬಹುತ್ವದ ಅಸ್ಮಿತೆಯ ಕನ್ನಡದ ನೆಲೆಯಲ್ಲಿ ಈ ಸಂಕಲನವನ್ನು ರುಪಿಸಿದ್ದಾರೆ.

ಕನ್ನಡದ ವೈವಿದ್ಯತೆ ವಿಭಿನ್ನವಾದುದು. ಭಿನ್ನ ಪ್ರದೇಶ, ಸಮುದಾಯದಿಂದ ಬಂದ ಕಥೆಗಾರರ ಮನೋಭಾವವವೂ ಕಥನಕ್ಕೆ ಹೊಸ ಕಸುವನ್ನು ತರುತ್ತವೆ. ಅವರು ಲೋಕವನ್ನು ನೋಡುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಭಾಷೆಯ ಕುಸುರಿ ಕೌಶಲವನ್ನು ಅಭಿವ್ಯಕ್ತಿಸುತ್ತವೆ. ಬದುಕಿನ ಚಲನೆಯನ್ನು ಯಾವ ಬಗೆಯಲ್ಲಿ ಶೋಧಿಸುತ್ತವೆಂಬುದು ಮುಖ್ಯವಾಗುತ್ತದೆ. ಸಾಂಸ್ಕೃತಿಕ ಅನನ್ಯತೆಯನ್ನು ಕಥನ ಹೇಗೆ ಹಿಡಿಯುತ್ತದೆ, ಅನ್ವೇಷಿಸುತ್ತದೆ, ಪಲ್ಲಟಗಳ ಸಂಕೀರ್ಣ ಬದುಕಿನ ವಿನ್ಯಾಸವನ್ನು ಹೇಗೆ ಕಟ್ಟುತ್ತದೆಂಬುದನ್ನು ಸಂಪಾದಕ ಗಮನಿಸಬೇಕಾಗತ್ತದೆ. ಸ್ವತಃ ಕಥೆಗಾರರಾಗಿರುವ ಸಂಪಾದಕರು ಕಥೆಗಳ ಒಳಜಗತ್ತನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. `ಇಲ್ಲಿಯ ಕಥೆಗಳನ್ನು ಆಯ್ಕೆ ಮಾಡುವಾಗ ಕೆಲವು ಸೂಕ್ಷ್ಮವಾದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡಿದ್ದೇನೆ. ಕಥಾ ವಸ್ತು, ಪಾತ್ರ, ಭಾಷೆ, ಪ್ರದೇಶ, ಸನ್ನಿವೇಶ, ವೈವಿಧ್ಯತೆ, ಗ್ರಥನ ಕೌಶಲ, ಅನನ್ಯತೆ, ಧ್ವನಿಪೂರ್ಣತೆ, ಸೃಜನಶೀಲತೆ, ಪ್ರಯೋಶೀಲತೆ- ಇತ್ಯದಿ ವಿಷಯಗಳನ್ನು ಪ್ರತಿನಿಧಿಸುವಂತಹ ಕಥೆಗಳನ್ನು ಆಯ್ಕೆ ಮಾಡಲು ಯತ್ನಿಸಿದ್ದೇನೆ. ದೇಶೀ ಕಥನ ಪರಂಪರೆ ಹಾಗೂ ಸಂಕ್ಕೃತಿಯ ಅಸ್ಮಿತೆಗಳ ಮೂಲಕ ಕಥೆಗೆ ಮುಕ್ತತತೆಯನ್ನು ಮೌಲ್ಯವನ್ನು ತಂದಂತಹ ಕಥೆಗಳನ್ನು ಇಲ್ಲಿ ಆಯ್ಕೆ ಮಾಡಿದ್ದೇನೆ. ಮುಖ್ಯವಾಗಿ ಕನ್ನಡ ಸಣ್ಣ ಕಥೆಯ ಚಾರಿತ್ರಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ನಿರಂತರತೆಯನ್ನು ಪ್ರತಿನಿಧಿಸುವ ಕಥೆಗಳನ್ನು ಆಯ್ಕೆ ಮಾಡುವ ಉದ್ದೇಶವನ್ನು ಇಲ್ಲಿ ಇಟ್ಟುಕೊಂಡಿದ್ದೇನೆ. ಕಾಲಕಾಲಕ್ಕೆ ಕಥೆಗಾರರು ಹೇಗೆ ತಮ್ಮ ಸೃಜನಾತ್ಮಕ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ ಬಂದರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯ ಕಥೆಗಳನ್ನು ಆಯ್ಕೆ ಮಾಡಿದ್ದೇನೆ. ಹಾಗಾಗಿ ಇಲ್ಲಿ ಹಳಬರು, ಹೊಸಬರು, ದಲಿತರು, ಮಹಿಳೆಯರು ಹೀಗೆ ಎಲ್ಲಾ ಕಥೆಗಾರರು ಸೇರಿದಂತೆ ಎರಡು ಮೂರು ತಲೆಮಾರಿನ ಕಥೆಗಾರರ ವಸ್ತು ವೈವಿಧ್ಯಮಯವಾದ ಕಥೆಗಳು ಇಲ್ಲಿವೆ. ಪ್ರಧಾನವಾಗಿ ಈ ಸಂಕಲನದ ಕಥೆಗಳು ಸ್ವಾತಂತ್ರ್ಯೋತ್ತರ ಕಾಲಾವಧಿಯ(1950-2000) ಐದು ದಶಕಗಳ ಕನ್ನಡ ಸಣ್ಣ ಕಥೆಯ ಸಮ್ಯಗ್ ದರ್ಶನವನ್ನು ಬಿಂಬಿಸಬೇಕೆಂಬುದು ನನ್ನ ಅಭಿಲಾಷೆಯಾಗಿದೆ.’

ಸಂಪಾದಕರು ಕಥೆಗಳನ್ನು ಆಯ್ಕೆ ಮಾಡಿ ಕೇವಲ ಐವತ್ತು ದಶಕಗಳ ಸಣ್ಣ ಕಥೆಗಳ ಚರಿತ್ರೆಯ ಬಗ್ಗೆ ಮಾತ್ರ ಚಿಂತಿಸಿಲ್ಲ. ಇಡೀ ಕನ್ನಡ ಸಣ್ಣ ಕಥೆಗಳ ಚರಿತ್ರೆಯನ್ನು ಕಥೆಗಳ ಹಿನ್ನಲೆಯಲ್ಲಿ ವಿಶ್ಲೇಷಿಸಿದ್ದಾರೆ. ಸಣ್ಣಕಥೆಗಳು ಕನ್ನಡದಲ್ಲಿ ವಿಕಾಸವಾದ ಬಗೆ ಹಾಗೂ ಕನ್ನಡ ವಿಮರ್ಶೆ ಆ ಕಥೆಗಳ ವಿನ್ಯಾಸವನ್ನು ಕಂಡುಕೊಂಡ ಬಗೆಯನ್ನು ಅಭೇದಗೊಳಿಸಿ ಪರಂಪರೆಯನ್ನು ನೋಡಿದ್ದಾರೆ. ಈ ವಿಧಾನದಿಂದಾಗಿ ಸಣ್ಣಕಥೆಗಳ ಚರಿತ್ರೆ ಅಧಿಕೃತತೆಯನ್ನು ಪಡೆದುಕೊಂಡಿದೆ. ಕಾಲ ಕಾಲಕ್ಕೆ ಕನ್ನಡ ಸಣ್ಣಕಥೆಗಳು ರೂಪಗೊಂಡ ಕ್ರಮವನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿದ್ದಾರೆ. ದೇಶೀಯತೆ, ಪರಂಪರೆ, ಚರಿತ್ರೆಯ ನೆಲೆಯಲ್ಲಿ ಸಣ್ಣಕಥೆಗಳನ್ನು ಗ್ರಹಿಸಿರುವದರಿಂದ ಸಾಮಾಜಿಕ ಸಂಸ್ಕೃತಿಯೊಂದು ರೂಪಗೊಂಡಿದೆ. ಪಠ್ಯ ಕೇಂದ್ರಿತವಾದ ಸಂಸ್ಕೃತಿ ವಿಶ್ಲೇಷಣೆ ಹೊಸ ಬಗೆಯ ಚರಿತ್ರೆಯನ್ನು ನಿರೂಪಿಸುತ್ತದೆ. ಅದು ಪ್ರಭುತ್ವಗಳ ಪ್ರಮಾಣಗಳನ್ನು ಕಳೆದು ಸಮುದಾಯಗಳ ಸಾಮಾಜಿಕ ಪ್ರಮಾಣಗಳನ್ನು ಸೃಜಿಸುತ್ತದೆ. ಈ ಸೃಜನಶೀಲತೆಯಲ್ಲಿ ಹುಟ್ಟುವ ಸಂಸ್ಕೃತಿ ಚಿಂತನೆ ವೈವಿಧ್ಯತೆಯ ಐಕ್ಯತೆಯನ್ನು ಬಿಂಬಿಸುತ್ತದೆ. ಸಂಪಾದಕರು ಬಹಳ ಸೂಕ್ಷ್ಮವಾಗಿ ಪ್ರಸ್ತಾವನೆಯಲ್ಲಿ `ವೈವಿಧ್ಯತೆಯ ಐಕ್ಯತೆ’ಗೆ ಪ್ರಾಧನ್ಯತೆಯನ್ನು ನೀಡಿದ್ದಾರೆ. ಹೀಗಾಗಿ ಕನ್ನಡದಲ್ಲಿ ಸಣ್ಣ ಕಥೆಗಳ ಅಧ್ಯಯನಕ್ಕೆ ಪ್ರಸ್ತಾವನೆ ಒಂದು ಭೂಮಿಕೆಯನ್ನು ಒದಗಿಸಿದೆ.

ಕನ್ನಡ ಸಣ್ಣ ಕಥೆಯ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದ, ಪ್ರಯೋಗಗಳನ್ನು ಮಾಡಿದ ಭಾಷಿಕ ನುಡಿಗಟ್ಟೊಂದನ್ನು ಸೃಷ್ಟಿಸಿದ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಬಿ.ಸಿ. ರಾಮಚಂದ್ರ ಶರ್ಮ ಆದಿಯಾಗಿ ಕಲಿಗಣನಾಥ ಗುಡದೂರು ವರೆಗೆ ಕಥೆಗಳಿವೆ. ಯಶವಂತಚಿತ್ತಾಲ, ಶಾಂತಿನಾಥ ದೇಸಾಯಿ, ಯು. ಆರ್. ಅನಂತಮೂರ್ತಿ. ಪಿ. ಲಂಕೇಶ್. ದೇವನೂರು ಮಹಾದೇವ, ವೀಣಾ ಶಾಂತೇಶ್ವರ, ಬರಗೂರು ರಾಮಚಂದ್ರಪ್ಪ, ರಾಘವೇಂದ್ರ ಪಾಟೀಲ, ನೇಮಿಚಂದ್ರ, ಕುಂ ವೀರಭದ್ರಪ್ಪ, ಮೊಗಳ್ಳಿ ಗಣೇಶ, ಅಮರೇಶ ನುಗಡೋಣಿಯಂತಹ ಕಥೆಗಾರರು ಕನ್ನಡ ಸಣ್ಣ ಕಥಾ ಜಗತ್ತಿಗೆ ಹೊಸ ಕಸುವಿನ ನುಡಿಗಟ್ಟನ್ನು ರೂಪಿಸಿದವರು. ಸಾಹಿತ್ಯವನ್ನು ಸಾಮಾಜಿಕವಾಗಿ ಚಿಂತಿಸಿದವರು. ಇವರ ಪ್ರಯೋಗಶೀಲತೆಯನ್ನು, ಹೊಸ ಕಾಣ್ಕೆಯನ್ನು ಅವರ ಕಥೆಗಳ ಜೊತೆಗೆ ವಿಶ್ಲೇಷಿದ್ದಾರೆ. ಈ ಸಂಕಲನದಲ್ಲಿರುವ ಮುವತ್ರೊಂಬತ್ತು ಕಥೆಗಾರರ ಸಂವೇದನೆಯನ್ನು ಆಯಾ ಕಾಲಘಟ್ಟದ ಮುಖೇನ ಅರ್ಥೈಯಿಸಿದ್ದಾರೆ. `ನವೋದಯ ಕಥೆಗಳಲ್ಲಿ ಕಾಣಿಸಿಕೊಂಡಿದ್ದ ಕಥನದ ಗುಣ ಹಾಗೂ ಪ್ರಗತಿಶೀಲರಲ್ಲಿ ಕಾಣಿಸಿಕೊಂಡಿದ್ದ ಸಾಮಾಜಿಕ ಆಕ್ರೋಶವನ್ನು ಕಾವ್ಯಾತ್ಮಕವಾಗಿ ಸಂಯಮದ ಕಡೆಗೆ ತಿರುಗಿಸುವದನ್ನು ಈ ಘಟ್ಟದ ಕಥೆಗಳಲ್ಲಿ ಗುರುತಿಸಬಹುದಾಗಿದೆ. ಸ್ವಾತಂತ್ಯ್ರ ಪೂರ್ವದಲ್ಲಿ ಕಂಡಿದ್ದ ಮನುಷ್ಯನ ಕನಸುಗಾರಿಕೆ, ಹಂಬಲ ಹಾಗೂ ನಿರೀಕ್ಷೆಗಳು ಸ್ವಾತಂತ್ರ್ಯೋತ್ತರ ಕಾಲದ ಕನ್ನಡ ಕಥಾ ಸಾಹಿತ್ಯದಲ್ಲಿ ಮೌಲ್ಯಮಾಪನಕ್ಕೆ, ಶೋಧನೆಗೆ ಒಳಗಾಗುವದನ್ನು ಕಾಣುತ್ತೇವೆ’ ಎಂದು ಸಂಪಾದಕರು ಇಲ್ಲಿಯ ಕಥೆಗಳ ಜಗತ್ತನ್ನು ವ್ಯಾಖ್ಯಾನಿಸುತ್ತಾರೆ.

ಮುವತ್ರೊಂಬತ್ತು ಕಥೆಗಳನ್ನು ಒಂದೊಂದಾಗಿ ಅವುಗಳ ಅನನ್ಯತೆಯನ್ನು ಬಿಂಬಿಸಿದ್ದಾರೆ. ಕಥೆಗಳ ಧ್ವನಿಗೆ ಒತ್ತು ಕೊಟ್ಟು ವಿಶ್ಲೇಷಿಸಲಾಗಿದೆ. ಇದರಿಂದಾಗಿ ಪ್ರತಿಯೊಂದು ಕಥೆಯ ವಿಶೇಷತೆ ಹಗೂ ಮಹತ್ವ ಅರಿವಿಗೆ ಬರುತ್ತದೆ. ಐವತ್ತರ ದಶಕದ ನಂತರ ಬದುಕಿನಲ್ಲಾದ ಪಲ್ಲಟ, ಸಾಂಸ್ಕೃತಿಕ ಸಂಘರ್ಷ, ರಾಜಕೀಯ ಅನೈತಿಕ ಅಧಃಪತನ, ಭೂಮಾಲಿಕ ವ್ಯವಸ್ಥೆಯ ಸಿಥಿಲತೆ, ಕಾಮ, ಪ್ರೇಮ, ಜಾತಿ, ಮಹಿಳೆ, ಧರ್ಮಾಂಧತೆಯ ಬಿಕ್ಕಟ್ಟುಗಳನ್ನು ಇಲ್ಲಿಯ ಕಥೆಗಳು ಶೋಧಿಸುತ್ತವೆ. ಮುವತ್ರೊಂಬತ್ತು ಕಥೆಗಾರರು ಸಮಾಜವಾದಿ ನಿಲುವನ್ನು ಹೊಂದಿದವರು. ಸಾಹಿತ್ಯದಾಚೆಯ ಮಾನವಿಕಗಳಿಗೆ ಮುಖಾಮುಖಿಯಾವರು. ವ್ಯವಸ್ಥೆಯ ಕೇಡುಗಳಿಗೆ ಪ್ರತಿಕ್ರಿಯಿಸುತ್ತಾ ಬಂದವರು. ಹೀಗಾಗಿ ಇವರ ಕಥೆಗಳು ಸೌಂದರ್ಯಾನುಭೂತಿಯ ಸೊಗಸನ್ನು ಕಾಣಿಸುವದಿಲ್ಲ. ವಾಸ್ತವದ ದಂದುಗದ ಉರಿಯೊಂದಿಗೆ ಅನುಸಂಧಾನಗೊಳ್ಳುತ್ತವೆ. ಅಧಿಕಾರ ಪ್ರಮಾಣಗಳು ಮಾಡುವ ಹುನ್ನಾರಗಳನ್ನು ಸೂಕ್ಷ್ಮವಾಗಿ ಶೋಧಿಸುತ್ತವೆ. ಮನುಷ್ಯನ ಸ್ವಭಾವಗಳ ವೈರುಧ್ಯಗಳನ್ನು ಸಾಮಾಜಿಕ, ಚಾರಿತ್ರಿಕ ನೆಲೆಯಲ್ಲಿ ಕಟ್ಟಿಕೊಡುತ್ತವೆ. ಸಮಾಜವನ್ನು ಕಪ್ಪು ಬಿಳಿಪು ನೆಲೆಯಲ್ಲಿ ಕಾಣಿಸದೆ ಕಲಾತ್ಮಕತೆಯ ಸಂವೇದನೆಯನ್ನು ಮುಖ್ಯವಾಗಿ ಕಾಣಿಸುತ್ತವೆ. ಇದರಿಂದಾಗಿ ಇಲ್ಲಿಯ ಕಥೆಗಳು ನಾಡಿನ ಚರಿತ್ರೆಯನ್ನೆ ಹೊಸ ಬಗೆಯಲ್ಲಿ ನಿರೂಪಿಸುತ್ತವೆ.

ಕರೀಗೌಡ ಬೀಚನಹಳ್ಳಿಯವರು ಮುಂದಿನ ತಲೆಮಾರಿಗೆ ಮಾದರಿಯಾಗುವ ಸಂಪಾದನೆಯನ್ನು ಮಾಡಿ ಕೊಟ್ಟಿದ್ದಾರೆ. ಮುಂದಿನ ಕಥೆಗಾರರು ಕಂಡುಕೊಳ್ಳುವ ದಾರಿಯನ್ನು ಈ ಸಂಗ್ರಹ ಸಂಕಲನದ ಮೂಲಕ ತೋರಿಸಿದ್ದಾರೆ. ಐದು ದಶಕಗಳಲ್ಲ್ಲಿ ಕಥೆಗಳು ಪಡೆದುಕೊಂಡ ಸಾಂಸ್ಕೃತಿಕ ವಿಸ್ತಾರವೂ ಮುಂದಿನ ಕಥೆಗಳ ರಚನೆಗೆ ಭೂಮಿಕೆಯನ್ನು ಒದಗಿಸಿವೆ. ವಿವಿಧ ಮಾನವಿಕಗಳು ಸಾಮಾಜಿಕ ಪಲ್ಲಟಗಳನ್ನು ಸರಿಯಾಗಿ ಗ್ರಹಿಸುವಲ್ಲಿ ಸೋತಿವೆ. ಕೇವಲ ಅಂಕಿ ಅಂಶಗಳಿಗೆ ಪ್ರಾಧನ್ಯತೆಯನ್ನು ಕೊಟ್ಟಿದ್ದರಿಂದ ತೀವ್ರಗಾಮಿ ಪರಿಣಾಮಗಳು ಗೋಚರಿಸದೆ ಹೋಗಿವೆ. ಈ ಕಥೆಗಳು ಮಾನವಿಕಗಳಿಗೆ ಆಕರವಾಗುವ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಕಟ್ಟಿಕೊಡುತ್ತವೆ. ಮುಟ್ಟಿಸಿಕೊಂಡವನು, ಅವನತಿ, ಗಾಂಧಿ, ಗ್ರಸ್ತರು, ಕೋಳಿಪಾಲು, ದೃಷ್ಟಿ, ಬುಗುರಿ, ಕೊನೆಯ ದಾರಿ, ಮೀರಿದ ಘನ ಮುಂತಾದ ಕಥೆಗಳು ಸಮಾಜವನ್ನು ನೋಡುವ ದೃಷ್ಟಿಕೋನವನ್ನು ಬದಲಿಸುತ್ತವೆ. ಈ ಸಂಕಲನದ ಪ್ರತಿಯೊಂದು ಕಥೆಯು ಕೂಡ ಧ್ವನಿಪೂರ್ಣ ಸಾಧ್ಯತೆಯನ್ನು ಸೃಷ್ಟಿಸುತ್ತವೆ. ಈ ಕಥೆಗಳ ಒಳಗಿಂದ ನಮ್ಮ ಸಾಂಸ್ಕೃತಿಕ ಜಗತ್ತನ್ನು ಕಟ್ಟಿಕೊಂಡರೆ ಅಭಿವೃದ್ಧಿ ಆಶಯಗಳಿಗೆ ಅರ್ಥ ಬರಬಹುದು. ಹೀಗಾಗಿ ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು ಕೃತಿ ಐದು ದಶಕಗಳ ಸಣ್ಣ ಕಥೆಗಳ ಅತ್ಯುತ್ತಮ ಸಂಪಾದನೆಯಾಗಿದೆ.

ಹಳೆಮನೆ ರಾಜಶೇಖರ,
ಕನ್ನಡ ವಿಭಾಗ
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ),  ಉಜಿರೆ-574240
ತಾ. ಬೆಳ್ತಂಗಡಿ
ಜಿ. ದಕ್ಷಿಣ ಕನ್ನಡ
9008528112

ಈ ಅಂಕಣದ ಹಿಂದಿನ ಬರಹಗಳು:
ಪ್ರೇಮದ ಹೊಸ ಆಖ್ಯಾನದ ಕವಿತೆಗಳು

ಅನುಭಾವದರಳುಃ ಭವದ ಕೇಡಿಗೆ ದಿವ್ಯತೆಯ ಬೀಜಗಳು
ಹೊಸ ರೂಪಕದ ಕವಿತೆಗಳು
ಅನುಭಾವದರಳುಃ ಭವದ ಕೇಡಿಗೆ ದಿವ್ಯತೆಯ ಬೀಜಗಳು
ಮೃತ್ಯುಂಜಯ ಕಾದಂಬರಿ ತಾತ್ವಿಕ ವಿಶ್ಲೇಷಣೆ

ಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನರು
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಆದಿಪುರಾಣ – ವೈಭೋಗ ಮತ್ತು ವೈರಾಗ್ಯದ ತಾತ್ವಿಕತೆ
ನಳ ಚರಿತ್ರೆ : ಪ್ರೇಮದ ಅವಿಷ್ಕಾರ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ
ಧರ್ಮಾಧಿಕಾರದ ಆಶಯಗಳು

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

 

MORE NEWS

ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ

10-04-2025 ಬೆಂಗಳೂರು

"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...

ಅಮಾಸ ಕಥೆಯಲ್ಲಿ ಕಾಣುವ ಪುನರಾವರ್ತನಾ ಬದುಕು

04-04-2025 ಬೆಂಗಳೂರು

"ಅಮಾಸ ಕಥೆಯು ಇವರ ದ್ಯಾವನೂರು ಕಥಾ ಸಂಕಲನದಿಂದ ಆಯ್ದುಕೊಂಡ ಕಥೆಯಾಗಿದ್ದು ಇದು ತಬ್ಬಲಿಯಾದ ಅಮಾಸ ಎಂಬ ಹುಡುಗನನ್ನು...