ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು

Date: 20-03-2023

Location: ಬೆಂಗಳೂರು


''ಚಿತ್ರಕಶಕ್ತಿಯ ಗೊಂಬೆಗಳ ಕಿನ್ನರಲೋಕವನ್ನೇ ಸೃಷ್ಟಿಸಿದ್ದು ಸಿದ್ದು ಬಿರಾದಾರ. ಗಡಿನಾಡಿನ ಜಾಕಂಪಲ್ಲಿಯ ಸರಕಾರಿ ಪ್ರೌಢಶಾಲೆಯ ಅಶೋಕ ತೋಟ್ನಳ್ಳಿ ನಿರ್ದೇಶನದ ಮಕ್ಕಳ ದೊಡ್ಡಾಟ ಮುದ ನೀಡಿತು. ಕಡೆಯದಿನ ಬುದ್ಧನೆಲೆಯ ಪುರಾತನ ಶಾಸನ ಶಿಲ್ಪಗಳ ಪುರಾತತ್ವಭೂಮಿ ಸನ್ನತಿಯ ಮಹಾಯಾನ,” ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, “ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು” ಕುರಿತು ಲೇಖನವನ್ನು ಬರೆದಿದ್ದಾರೆ.

ಕಲೆ, ಶಾಲೆ, ಪರಿಸರ, ಮಕ್ಕಳು, ಶಿಕ್ಷಕರು ಮತ್ತು ಶಿಕ್ಷಣ ಕುರಿತಾಗಿ ತೀವ್ರ ತೆರನಾದ ಜಿಜ್ಞಾಸೆಗಳು ಹೊಸವೇನಲ್ಲ. ಕಲಿಯುವ, ಕಲಿಸುವ ಕಲಿಕಾ ಪ್ರಮೇಯಗಳು ಸಹಿತ ಹೊಸವೇನಲ್ಲ. ಸಮಾಜಮುಖಿ ಆಗಬೇಕಾದ ಹೊಸ ಶಿಕ್ಷಣನೀತಿ ಪ್ರಖರಜಾರಿ ಪ್ರಕ್ರಿಯೆಗೆ ಹುಡುಕಿಕೊಂಡ ಹಾದಿಗಳು ಪಠ್ಯಕ್ರಮಗಳಿಗಿಂತ ಚೇತೋಹಾರಿ ಮತ್ತು ಪರಿಣಾಮಕಾರಿ. ಅಷ್ಟೇ ಕ್ರಿಯಾತ್ಮಕವಾಗಿಯೇ ಆಗಿರುತ್ತವೆ. ಅದು ಕಾಲಸ್ಥ ಮತ್ತು ದೇಶಸ್ಥ ಸಂಕಥನ ಕ್ರಿಯೆಯಂತೆ ಕಾಲೋಚಿತ. ಪಠ್ಯಸಹಿತ ಶೈಕ್ಷಣಿಕ ಸಂವೇದನೆಗಳು ಅನುಸಂಧಿಸುವ ಬೋಧನಾಕ್ರಮಗಳನ್ನು ಶಾಲೆಗಳ 'ಆವರಣದಾಚೆ' ಹುಡುಕಿಕೊಳ್ಳುವ ಜ್ಞಾನಶಿಸ್ತು ವರ್ತಮಾನದ ಅಗತ್ಯ. ಪಠ್ಯಪುಸ್ತಕಗಳ ಕುಡುಮಿಗಳಾಗಿ ಅಂಕಪ್ರಣೀತ ಅಂಕಪ್ರಾಣಿಗಳಾಗುವ ಬದಲು ಮೌಲ್ಯ ಬದುಕಿನ ಹಾದಿ ಕಾಣುವ ಮುಕ್ತಜ್ಞಾನ ಅತ್ಯಗತ್ಯ. ಅಂತಹ ಅಗತ್ಯಗಳ ಬಿಂದುಗಳೆಲ್ಲ ಸೇರಿ ಒಂದಾಗುವ ಸರಳ ರೇಖೆಗಳು ಲಲಿತ ಕಲೆಯ ಕತೆಗಳು. ಅದರಲ್ಲೂ ಜನಪದ ಕಲೆಗಳಂತಹ ಲೋಕಜ್ಞಾನ ಮೀಮಾಂಸೆಯ ಕಲಿಕೆ ಕತೆಗಳು ಈ ದಿಸೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ.

ಅಂತಹದ್ದೊಂದು ಪ್ರಯತ್ನ ಕಳೆದ ತಿಂಗಳಾಂತ್ಯದ ಮೂರು ದಿವಸಗಳ ಕಾಲ ಕಲಬುರ್ಗಿಯಲ್ಲಿ ಜರುಗಿತು. ಅದಕ್ಕೆ ಕಲ್ಯಾಣ ಕರ್ನಾಟಕ ಸ್ಥಾನೀಯ ಸಮಾವೇಶವೆಂದು ಹೆಸರಿಸಲಾಗಿತ್ತು. ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (IFA) ಸಂಸ್ಥೆ ಅದನ್ನು ಏರ್ಪಡಿಸಿತ್ತು. ಕಳೆದ ಎರಡೂವರೆ ದಶಕಗಳಿಂದ ಈ ಸಂಸ್ಥೆ ಈ ಬಗೆಯ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅದು ಶೈಕ್ಷಣಿಕ, ಸಾಂಸ್ಕೃತಿಕ ಸಂಯೋಜನೆಗಳ ಮೂಲಕ ಸಂವೇದನಾಶೀಲ ಆಲೋಚನೆಗಳನ್ನು ಸಮೃದ್ಧವಾಗಿ ಬದುಕಿದೆ. ತನ್ಮೂಲಕ ಜ್ಞಾನೋತ್ಪನ್ನ ಶಾಖೆಯಂತೆ ದಿವಿನಾಗಿ ಬೆಳೆದಿದೆ. ಬಹುದೂರದ ಕೊಲ್ಕತ್ತಾದಿಂದ ಬಂದು ಕರ್ನಾಟಕದವರೇ ಆಗಿರುವ ಅರುಂಧತಿ ಘೋಷ್, ಇಂತಹ ಹತ್ತಾರು ಸಕಾರಾತ್ಮಕ ಕನಸುಗಳ ಸರಳ ಸಜ್ಜನಿಕೆಯ ಮಹಿಳೆ. ಅವರು ಐ.ಎಫ್.ಎ. ಮುಖ್ಯಸ್ಥೆ. ಅವರ ಜತೆಗಿರುವ ಸುಮನಾ ಸೂಕ್ಷ್ಮಗ್ರಾಹಿ ಮಹಿಳೆ. ಸುಮನಾ ಅವರು ದಕ್ಷಿಣಾದಿ ಶಾಸ್ತ್ರೀಯ ಸಂಗೀತದ ಘಟಂ ವಾದಕಿ. ಐ.ಎಫ್.ಎ. ಕಾರ್ಯಕ್ರಮಗಳ ವೈಶಿಷ್ಟ್ಯವೆಂದರೆ ಅಲ್ಲಿ ರಾಜಕಾರಣ ಮತ್ತು ರಾಜಕಾರಣಿಗಳಿರುವುದಿಲ್ಲ. ಉದ್ಘಾಟನೆ, ಸಮಾರೋಪಗಳಂತಹ ನಿರುಪಯುಕ್ತ ಯಾವುದೇ ಶಿಷ್ಟಾಚಾರಗಳಿರುವುದಿಲ್ಲ.

ಅಂತಹದ್ದೊಂದು ಸ್ಥಾನೀಯ ಸಮಾವೇಶಕ್ಕೆ ಕರೆ ಬಂದಾಗ, ಅದೂ ನನ್ನ ಕಲ್ಯಾಣ ಕರ್ನಾಟಕದ ಾರಾಜಧಾನಿಯಂತಿರುವ ಕಲಬುರ್ಗಿಯಲ್ಲೇ ಜರುಗುತ್ತದೆ ಎಂದಾಗ ನಾನು ಒಂದೇ ಮಾತಿಗೆ ಒಪ್ಪಿ ಹೊರಡಲು ಸಿದ್ಧತೆ ಮಾಡಿಕೊಂಡೆ. ತಾಬಡ ತೋಬಡ ಎಂಬಂತೆ ಹೊರಟು ಬಿಟ್ಟೆ. ಅದಕ್ಕೆ ವಾರದ ಹಿಂದೆ ಐ.ಎಫ್.ಎ. ಹಿರಿಯ ಅಧಿಕಾರಿ ಕೃಷ್ಣಮೂರ್ತಿ ಎಂಬುವರು ನನಗೆ ಫೋನ್ ಮಾಡಿ ಗುಂಪು ಸಂವಾದ (Panel discussion) ವೊಂದರ ಸಾರಥ್ಯ ವಹಿಸಿ ಕಾರ್ಯಕ್ರಮ ನಡೆಸಿಕೊಡಬೇಕೆಂದು ಕೇಳಿದರು. ಹಾಗೆಯೇ ಅವರು ಐ.ಎಫ್.ಎ. ಕುರಿತು ಚುಟುಕಾಗಿ ಮತ್ತು ಚುರುಕಾಗಿ ತಿಳಿಸುವುದನ್ನು ಮರೆಯಲಿಲ್ಲ. ಗೂಗಲ್ಲು, ವೆಬ್ ಸೈಟ್, ಯೂಟ್ಯೂಬ್... ಇತ್ಯಾದಿಗಳಲ್ಲಿ ದೊರಕಬಲ್ಲ ಐ.ಎಫ್.ಎ. ವಿವರಗಳ ಕುರಿತು ಸಂಕ್ಷೇಪ ಮಾಹಿತಿ ನೀಡಿ ಖುದ್ದು ನೋಡಿ ತಿಳಿಯಲು ತಿಳಿಸಿದರು. ಯಾಕೆಂದರೆ ನಾನು ಭಾಗವಹಿಸುತ್ತಿರುವ ಐ.ಎಫ್.ಎ. ಮೊದಲ ಕಾರ್ಯಕ್ರಮ ಅದಾಗಿತ್ತು.

ವಿದ್ಯುನ್ಮಾನ ಜಾಲತಾಣಗಳ ಹುಡುಕಾಟಗಳಿಗೆ ಅಪರಿಚಿತನಾದ ನನಗವು ಅಷ್ಟೇ ಅಪರಿಚಿತ. ಒಂದು ಬಗೆಯ ಅಪ್ರಸ್ತುತ ಭಯ ಮತ್ತು ಹಿಂಜರಿಕೆ. ಹೀಗಾಗಿ ಅವರು ನನ್ನ ಇ - ಮೇಲ್ ವಿಳಾಸಕ್ಕೆ ಕಳಿಸಿಕೊಟ್ಟ ಸವಿವರಗಳನ್ನು ನಾನು ಹುಡುಕಿದ್ದೇ ತುಸು ತಡವಾಗಿ. ಇನ್ನು ಇಂಗ್ಲಿಷ್ ಓದಿ ತಿಳಿದುಕೊಳ್ಳುವಷ್ಟು ಸಾಮರ್ಥ್ಯದ ಕುಸ್ತಿಗೆ ಕೈ ಹಾಕಲಿಲ್ಲ. ಹಾಗೆ ನೋಡಿದರೆ ನನ್ನ "ಇ - ಜ್ಞಾನ ಸಂಪತ್ತು" ಜಸ್ಟ್ ಪಾಸ್ ಅಂಕ ಗಳಿಕೆಯದ್ದೂ ಅಲ್ಲ. ಅದೇನೇ ಇರಲಿ ಕೃಷ್ಣಮೂರ್ತಿಯವರ ದೂರವಾಣಿಯ ಅಸ್ಖಲಿತ ಮಾತುಗಳು ನನ್ನ ವಿಚಾರಧಾರೆಗೆ ತೀರ ಹತ್ತಿರವಾಗಿ ಕೇಳಿಸಿದ್ದೆ ತಡ ಕಲಬುರ್ಗಿ ಸಮಾವೇಶ ಒಪ್ಪಿಗೆಯಾಯಿತು.

ಕಲಬುರ್ಗಿಯ ವಿ.ಜಿ.ಅಂದಾನಿಯವರ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿಯ ಮಾತೋಶ್ರೀ ನೀಲಗಂಗಮ್ಮ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಏಳು ಜಿಲ್ಲೆಗಳ ಆಯ್ದ ಶಿಕ್ಷಕರು, ಸಾಹಿತಿ, ಕಲಾವಿದರು ಸೇರಿದ ಸಮಾವೇಶ. ಮೂರು ದಿನಗಳ ಕಾಲ ಕಣ್ಣು ಮಿಸುಕಿಸಲು ಪುರುಸೊತ್ತು ಇಲ್ಲದಷ್ಟು ವೇಳೆ ವ್ಯರ್ಥವಾಗದ ಗೋಷ್ಠಿಯ ಪಠ್ಯ ಮತ್ತು ಪ್ರಾಯೋಗಿಕ ವಿಚಾರ ಸಂಕಿರಣಗಳಲ್ಲಿ ತೊಡಗಿಸಿಕೊಳ್ಳುವಿಕೆ. ಗರುಡಾದ್ರಿ ಕಲೆಯ ಜಾಗತಿಕ ಮಟ್ಟದ ಪ್ರಬುದ್ಧ ಕಲಾವಿದ ವಿಜಯ ಹಾಗರಗುಂಡಗಿ ಮತ್ತು ಹೊನ್ನ ಕಿರಣಗಿಯವರಾದ ನಾಡಿನ ಹೆಸರಾಂತ ಹಿರಿಯ ಕಲಾವಿದ ವಿ. ಜಿ. ಅಂದಾನಿ ಅವರ ಜತೆ ಎರಡು ದಿನ ಕಳೆಯುವ ಅವಕಾಶ ನನ್ನದಾಗಿತ್ತು.

ಎರಡು ದಿವಸದ ಲೋಕಸಂತೆಯ ಎರಡು ಆತ್ಮಕಥನಗಳು ಬಹುತೇಕರ ಮನ ಮುಟ್ಟಿದವು. ಸಹ್ಯಕತೆಗಳ ಸಂತೆಯ ಮೊದಲ ದಿನದಂದು ಮಸ್ಕಿಯ ರಮೇಶ ಗಬ್ಬೂರು ತಮ್ಮ ಶಿಕ್ಷಕ ವೃತ್ತಿಯ ಆಂಧ್ರಪ್ರದೇಶದ ಗಡಿ ಹಳ್ಳಿಯೊಂದರಲ್ಲಿ ಕಂಡುಂಡ ಗ್ರಾಮ ಬದುಕಿನ ನೆನಪಿನ ಬುತ್ತಿ ಸೊಗಸಾಗಿತ್ತು ಎಂದು ಹೇಳಿದರೆ ಏನನ್ನೂ ಹೇಳಿದಂತಾಗದು. ಅಕ್ಷರ ಮಾತುಗಳನ್ನು ಮೀರಿ ಉಣಬಡಿಸಿದ ಅನುಭವ ಕಥನ ಅದಾಗಿತ್ತು. ತತ್ವಪದಗಳೊಳಗಿನ ವಿನ್ಯಾಸ, ವಿಸ್ತಾರದ ಒಳಪೇಚುಗಳ ಅರಿವು ಅಪ್ಪನಿಂದ ರಾಮಣ್ಣ(ರಮೇಶ)ಗೆ ಬಳುವಳಿಯಾಗಿ ಬಂದಿದೆ. ಅಂತೆಯೇ ಕಾಯಕ ಬದುಕಿನ ಅನುಭಗಳನ್ನು ಭಳಾರೇ ವಿಚಿತ್ರಂ ಎನ್ನುವಂತೆ ವಿಸ್ತರಿಸಿ ತೋರಿಸಿದಂತಿತ್ತು.

ಮರುದಿನ ಮಂಜಮ್ಮ ಜೋಗತಿಯ ಆತ್ಮ ಕಥನವಂತೂ ಕೇಳುಗರೆಲ್ಲರನ್ನು ದೃಶ್ಯಕಾವ್ಯ ಲೋಕಕ್ಕೆ ಕರಕೊಂಡು ಹೋದಷ್ಟು ಮಂತ್ರಮುಗ್ದರನ್ನಾಗಿಸಿತ್ತು. ಪದ್ಮಶ್ರೀ ಮಂಜಮ್ಮ ಬರೋಬ್ಬರಿ ಎಪ್ಪತ್ತೈದು ನಿಮಿಷಗಳ ಕಾಲ ಮನ ಕಲಕುವಂತೆ ಮತ್ತು ಯಾವೊಬ್ಬ ಕತೆಗಾರನಿಗೆ ಕಮ್ಮಿ ಇಲ್ಲದಂತೆ ತೃತೀಯ ಲಿಂಗಿಯ ಅಂತರಂಗ ಬಿಚ್ಚಿಟ್ಟರು. ನೀಳ್ಗತೆಯೊಂದನ್ನು ಮನೋಜ್ಞವಾಗಿ ಪ್ರಸ್ತುತ ಪಡಿಸಿದ ಅಭಿವ್ಯಕ್ತಿ ಅದಾಗಿತ್ತು. ದ್ವಿಲಿಂಗಿಯಾಗಿ ಅನುಭವಿಸಿದ ಸಂಕಟ, ಹೋರಾಟ ಜೀವನಪ್ರೀತಿಯ ಸವಾಲುಗಳನ್ನು ಅವರು ಸಹಜವಾಗಿ ಹೇಳುತ್ತಿದ್ದರು. ಹೌದು ಅದು ಅವರಿಗೆ ಸೋಜಾಗಿ ಅನಿಸಿರಬಹುದು. ಆದರೆ ಅವರ ಅನುಭವಗಳ ಪ್ರಸ್ತುತಿ ಮಾತ್ರ ತೀವ್ರ ಪರಿಣಾಮಕಾರಿ. ಹಾಗೆ ಅನುಭವಗಳನ್ನು ಒಪ್ಪಿಸುವಾಗ ನಾಲ್ಕು ಬಾರಿ ಜೋಗತಿಯ ದುಃಖದ ಕಟ್ಟೆ ಒಡೆದು ಹರಿಯಿತು.ಕೇಳುಗರನ್ನು ಹಿಡಿದು ಅಲ್ಲಾಡಿಸಿತು. ಗೆಳೆಯ ಅರುಣ ಜೋಳದ ಕೂಡ್ಲಿಗಿ ನಿರೂಪಿಸಿದ ಪುಸ್ತಕದ ಬರಹಕ್ಕಿಂತಲೂ ಮಂಜಮ್ಮ ತಾನೇ ಖುದ್ದಾಗಿ ತೋಡಿಕೊಂಡ ಮನದಾಳದ ಮಾತುಗಳು ಕಾಡು ಕಟುಕರ ಕಲ್ಲು ಹೃದಯ ಕೂಡಾ ಕರಗಿ ಹರಿಯುವಂತಿತ್ತು.

ಎರಡು ದಿನವೂ ಸಂಜೆ ಆರುಗಂಟೆಗೆ ಸರಿಯಾಗಿ ನೆಲಮೂಲ ನೆಲೆಯ ಪ್ರದರ್ಶನ ಕಲೆಗಳ ದೇಶೀಯ ಸಂಸ್ಕೃತಿ ದರ್ಶನ. ಮೊದಲ ದಿನದ ಸಂಜೆ ಮರಿಯಮ್ಮನಹಳ್ಳಿಯ ರಾಮಕ್ಕ ಜೋಗತಿ ತಂಡ ಮತ್ತು ಕೊತಬಾಳ ಶಂಕರಣ್ಣನ ಅಪರೂಪದ ಲಾವಣಿಗಳು. ಮರುದಿನದ ಸಂಜೆ ದೂರದ ಕಡಲ ಕಿನಾರೆಯ ಕಾರವಾರ ಜಿಲ್ಲೆಯ ಸಿದ್ದಾಪುರದ ಸೂತ್ರದ ಗೊಂಬೆಯಾಟ ಮನೋಜ್ಞವಾಗಿತ್ತು. ಬಡಗುತಿಟ್ಟಿನ ಪುಟ್ಟದೊಂದು ವರ್ಣಮಯ ಯಕ್ಷಗಾನ. ಇಪ್ಪತ್ತು ನಿಮಿಷದ ಗೊಂಬೆಗಳದ್ದೇ ಮತ್ತೊಂದು ದೊಡ್ಡಾಟ. ಚಿತ್ರಕಶಕ್ತಿಯ ಗೊಂಬೆಗಳ ಕಿನ್ನರಲೋಕವನ್ನೇ ಸೃಷ್ಟಿಸಿದ್ದು ಸಿದ್ದು ಬಿರಾದಾರ. ಗಡಿನಾಡಿನ ಜಾಕಂಪಲ್ಲಿಯ ಸರಕಾರಿ ಪ್ರೌಢಶಾಲೆಯ ಅಶೋಕ ತೋಟ್ನಳ್ಳಿ ನಿರ್ದೇಶನದ ಮಕ್ಕಳ ದೊಡ್ಡಾಟ ಮುದ ನೀಡಿತು. ಕಡೆಯದಿನ ಬುದ್ಧನೆಲೆಯ ಪುರಾತನ ಶಾಸನ ಶಿಲ್ಪಗಳ ಪುರಾತತ್ವಭೂಮಿ ಸನ್ನತಿಯ ಮಹಾಯಾನ. ಒಂದರ್ಥದಲ್ಲಿ ಅನಾಥ ಪ್ರಜ್ಞೆಯಿಂದ ನರಳುತ್ತಾ ತಬ್ಬಲಿಗಳಂತೆ ಸನ್ನತಿಯ ಸಣ್ಣೆರೆ ಮಣ್ಣಲ್ಲಿ ಬಿದ್ದುಕೊಂಡಿರುವ ಜಾತಕ ಕತೆಗಳ ಭಗ್ನಶಿಲ್ಪಗಳು.

ಅಂತೆಯೇ ಸನ್ನತಿಯದು ಖಂಡುಗ ದಾಖಲೆಯ ಜೀವಶಿಲ್ಪಗಳ ಅಖಂಡ ಭೆಟ್ಟಿ. ಒಂದೊಂದು ಶಿಲ್ಪಕ್ಕೂ ಪ್ರಾಗೈತಿಹಾಸಿಕ ಅಂತಃಕರಣದ ಕತೆಗಳು. ನನ್ನ ಆದಿಯಾಗಿ ಅದೆಷ್ಟೋ ಮಂದಿ ಸಾಹಿತಿ, ಪಂಡಿತರು, ವಿದ್ವಾಂಸರು ಬುದ್ಧವಿಚಾರ ಧಾರೆಯ ದಟ್ಟ ಸಂಗತಿಗಳನ್ನು ಸನ್ನತಿಯ ನೆಲ ಮತ್ತು ನೆಲೆಯೊಂದಿಗೆ ತಳಕು ಹಾಕಿಕೊಂಡು ಬರೆಯುವುದು ಮತ್ತು ಮಾತಾಡುವುದು ಕರತಲಾಮಲಕ ಮಾಡಿಕೊಂಡಿರುತ್ತೇವೆ. ಆದರೆ ಸನ್ನತಿ ಎಲ್ಲಿದೆ ಎಂದು ಕಣ್ತುಂಬಿಸಿಕೊಂಡಿರುವುದಿಲ್ಲ. ನಾವೆಲ್ಲ ಗೂಗಲ್, ವಿಕಿಪಿಡಿಯಾ ಪಂಡಿತರು. ಹೀಗಂತಲೇ ಅಂತಹ ಸನ್ನತಿಯನ್ನು ಕಣ್ತುಂಬಿಸಿಕೊಳ್ಳುವ ಸೌಭಾಗ್ಯ ಸಮಾವೇಶದ ಮಹತ್ತರ ಸಂಗತಿ. ಹಾಗೆ ನೋಡಿದರೆ ಬುದ್ಧವಿಹಾರ ಸ್ಥಾಪನೆ ಕಲಬುರ್ಗಿಯಲ್ಲಲ್ಲ ಸನ್ನತಿಯಲ್ಲಿ ಸ್ಥಾಪನೆ ಆಗಬೇಕಿತ್ತು. ಉತ್ಖನನಶಾಸ್ತ್ರ ತಜ್ಞರು ಇದೇ ಅಭಿಮತ ಹೊಂದಿದವರಾಗಿದ್ದರು. ಹಾಗೆಂಬುದು ಕುಲಕರ್ಣಿ ಮತ್ತು ‌ಕೃಷ್ಣಮೂರ್ತಿಯವರ ಹೇಳದಿರಲಾಗದ ಅಂತರಂಗದ ಅನಿಸಿಕೆ. ನನ್ನದೂ ಹೌದು.

ರಾಜಕಾರಣ ಅದೇನೇ ಇರಲಿ, ಮೂರು ದಿವಸಗಳ ಕಾಲ ಸ್ಥಾನೀಯ ಸಮಾವೇಶದ ಸದ್ವಿನಿಯೋಗ ಮಾಡಿಕೊಂಡ ಸಂತಸವಂತೂ ನನ್ನದು. 'ಆವರಣದಾಚೆ' ನಾನು ನಡೆಸಿಕೊಟ್ಟ ಗೋಷ್ಠಿ. ಕೊಪ್ಪಳದ ಕಿಶನರಾವ್ ಕುಲಕರ್ಣಿ, ರಾಷ್ಟ್ರ ಖ್ಯಾತಿಯ ಕಿನ್ನಾಳ ಕಲೆಯ ಕುರಿತು ಸಾಪೇಕ್ಷ ಸಂಗತಿಗಳನ್ನು ಸಭೆಗೆ ತಲುಪಿಸುವ ಜತೆಗೆ ಕಲಾವಿದರ ಏಳುಬೀಳುಗಳ ಕುರಿತು ವಿಸ್ತೃತ ರೂಪದಲ್ಲಿ ತಮ್ಮ ಪ್ರಬಂಧ ಸಾದರ ಪಡಿಸಿದರು.‌ ದಿಲ್ಲಿಯಲ್ಲಿ ಮ್ಯುಜಿಯಾಲಜಿ ವಿಷಯದ ಸ್ನಾತಕೋತ್ತರ ಪದವಿ ಪಡೆದು, ಪ್ರಸ್ತುತ ಹಂಪಿ ಪುರಾತತ್ವ ಇಲಾಖೆಯ ಸಂಜನಾ ರಂಗನ್ ಚುರುಕಾದ ವಿಷಯ ವಿವರಿಸಿದ್ದು ವಿಶೇಷವಾಗಿತ್ತು. ಅವರ ಆಂಗ್ಲಗನ್ನಡದ ಚುಳುಕೆನಿಸುವ ಮುದ್ದುಮಾತುಗಳು ಮುದ ಕೊಡುತ್ತಿದ್ದವು. ರಂಗಕರ್ಮಿ ಇನ್ಸಾಫ್ ಪಿಂಜಾರ ಹಿಂದುಸ್ತಾನಿ ಘರಾಣೆ ಹಾಡಿ ಮುದಗೊಳಿಸಿದರು. ಮಲ್ಲಿಕಾರ್ಜುನ ಶೆಟ್ಟಿ ಪಠ್ಯಪುಸ್ತಕಗಳಲ್ಲಿ ಚಿತ್ರಕಲೆಯ ಮಹತ್ತರ ಪಾತ್ರವನ್ನು ಸೋದಾಹರಣವಾಗಿ ವಿವರಿಸಿದರು.

ಮೂರು ದಿವಸಗಳ ಕಾಲ ವಿಶ್ವೇಶ್ವರಿ ಹಿರೇಮಠ, ಸತೀಶ ವಲ್ಯಾಪುರೆ, ಮಲ್ಲಿಕಾರ್ಜುನ ಬಾಗೋಡಿ, ಗುಂಡೂರಾವ್ ದೇಸಾಯಿ, ಸೋಮು ಕುದುರಿಹಾಳ್, ಸಹನಾ ಪಿಂಜಾರ, ನಿಂಗೂ ಸೊಲಗಿ, ಸುಮಲತಾ ಬಿ.ಎಂ., ಅಭಿಷೇಕಾ ಕೆ., ನಾರಾಯಣ ಜೋಶಿ, ಆರ್. ಎಚ್. ಕುಲಕರ್ಣಿ, ಎಸ್.ಎಫ್. ಹುಸೇನ್, ತಾಜುದ್ದೀನ್ ಆಜಾದ, ಚಂದನ್ ಹೀಗೆ ಅನೇಕ ಪ್ರತಿಭಾಶಾಲಿ ಸಂಪನ್ಮೂಲ ಪರಿಣಿತರು ಭಾಗವಹಿಸಿದ ಅಪರೂಪದ ಸಮಾವೇಶ ಅದಾಗಿತ್ತು. ಇದೆಲ್ಲವು ನಾಲ್ಕು ಗೋಡೆಗಳ ಆವರಣದೊಳಗೆ ಕುಂತ ಆವರಣದಾಚೆಯ ಕಥನ ಫಲಿತವ್ಯಗಳು. ಆದರೆ ಮುಕ್ತಜ್ಞಾನದ ಸನ್ನತಿಯ ಭೆಟ್ಟಿ, ಸಂಜನಾ ರಂಗನ್ ಆಂಗ್ಲಗನ್ನಡ, ರಾವೂರಿನ 'ಸೂಸ್ಲಾ' ನಾಸ್ಟಾ ಮಾತ್ರ ಮರೆಯಲಾಗದು.

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...