Date: 24-04-2024
Location: ಬೆಂಗಳೂರು
"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ್ಷರು. ಇಂತಹದ್ದೊಂದು ವಿಭಿನ್ನ ಸಾರಸ್ವತ ಸಂವೇದನೆ ಮೂಲಕ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೊಸ ಆಲೋಚನೆಯ ಹೆಜ್ಜೆಗಳನ್ನು ಇಟ್ಟಿದ್ದಾರೆ," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣಕ್ಕೆ ಬರೆದ ಲೇಖನವಿದು.
ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ "ಜಿಲ್ಲಾ ಮಟ್ಟದ ತತ್ವಪದ ಸಾಹಿತ್ಯ ಸಮ್ಮೇಳನ" ಏರ್ಪಡಿಸುವ ಮೂಲಕ ಹೊಸದೊಂದು ಸಾಹಿತ್ಯ ಸಂಸ್ಕೃತಿಗೆ ನಾಂದಿ ಹಾಡುತ್ತಲಿದೆ. ಇದೇ 2024 ಎಪ್ರಿಲ್ 28 ರಂದು ಕಲಬುರಗಿ ಶಹರದಲ್ಲಿ ತತ್ವಪದ ಸಾಹಿತ್ಯದ ಪ್ರಥಮ ಸಮ್ಮೇಳನ ಜರುಗಲಿದೆ. ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ್ಷರು. ಇಂತಹದ್ದೊಂದು ವಿಭಿನ್ನ ಸಾರಸ್ವತ ಸಂವೇದನೆ ಮೂಲಕ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೊಸ ಆಲೋಚನೆಯ ಹೆಜ್ಜೆಗಳನ್ನು ಇಟ್ಟಿದ್ದಾರೆ. ಇದು ಸುವರ್ಣ ಕರ್ನಾಟಕ ನಾಮಕರಣ ವರ್ಷಾಚರಣೆಯ ಪ್ರೀತಿಗೆ ಪರಿಮಳದ ಮೆರಗು.
ಕಳೆದ ವರ್ಷ 2023ರ ನವೆಂಬರ್ ತಿಂಗಳಲ್ಲಿ ಜೇವರ್ಗಿ ತಾಲೂಕು ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನೇರವೇರಿತು. ಸಾಂಸ್ಕೃತಿಕವಾಗಿ ವಿನೂತನ ಸಾಹಿತ್ಯ ಸಂವರ್ಧನೆಯ ತೋರುದಾರಿ ತೋರಿದವರು ಜೇವರ್ಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಕೆ. ಬಿರಾದಾರ. ಅದರ ಮುಂದುವರಿಕೆ ಎಂಬಂತೆ ಕಲಬುರಗಿ ಜಿಲ್ಲಾಮಟ್ಟದ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಶ್ಲಾಘನೀಯ. ನಿಜಕ್ಕೂ ಇದು ತಾರೀಫು ಮಾಡುವಂತಹ ಮಾದರಿ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಸಹಿತ ಅನುಕರಿಸುವಂತಹದ್ದು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಯಕ ಜೀವಿಗಳ ತತ್ವಪದ ಸಾಹಿತ್ಯಕ್ಕೆ ತಕ್ಕನಾದ ಸ್ಥಾನಮಾನ ಸಿಕ್ಕಿಲ್ಲ. ತತ್ವಪದಗಳ ಕಾಲಘಟ್ಟವನ್ನು ಚರಿತ್ರೆಕಾರರು 'ಕತ್ತಲೆಯುಗ' ಎಂದು ಕರೆದ ಮತ್ತು ಮೇಲ್ವರ್ಗದ ಮನಸುಗಳು ಬರೆದ ಸಾಹಿತ್ಯ ಚರಿತ್ರೆ ನಮ್ಮದು. ನೆನಪಿರಲಿ: ಕಾವ್ಯಮೀಮಾಂಸೆಯನ್ನು ಮೀರಿದ್ದು ಲೋಕಮೀಮಾಂಸೆ. ಅದು ದಿಟದ ಚರಿತ್ರೆಯನ್ನು ಭಜನೆ ಎಂಬ ಏಕತಾರಿ ಧಾರೆಯ ಹಾಡುಗಬ್ಬದ ಮುಖಾಂತರ ಬಂಧುರಗೊಳಿಸಿದೆ. ಆ ಮೂಲಕ ತತ್ವಪದ ಸಾಹಿತ್ಯವು ಲೋಕಮಾನಸದ ಮನಸು ಗೆದ್ದು ಜನಸಂಸ್ಕೃತಿಯಾಗಿ ಬೆಳೆದು ಬಂದಿದೆ. ಮೇಲ್ವರ್ಗದ ಎಲೈಟ್ ವೀಣೆಗಳ ನಾಜೂಕಿನ ಭರದಲ್ಲಿ ಬಹುತೇಕ ತಳ ಸಮುದಾಯದ ಕರಿ ಕುಂಬಳಕಾಯಿಯ ಏಕತಾರಿ ನಾದ ಭಜನೆಗಳಿಗೆ ಸಿಗಬೇಕಾದ ಅವಕಾಶ, ಮಾನ್ಯತೆಗಳು ಸಿಗಲಿಲ್ಲ ಎಂಬುದು ಸುಡುವ ಸತ್ಯ. ಏಕತಾರಿ, ದಮಡಿ, ಚಳ್ಳಮ, ಚಿನ್ನಿ, ತಾಳಗಳ ಭಜನೆಗಳನ್ನು ವಿದ್ವಾಂಸರು ಹಗುರವಾಗಿ ಮತ್ತು ಉಪೇಕ್ಷಿತ ಭಾವಗಳಿಂದ ಕಂಡದ್ದೇ ಅಧಿಕ. ಅಷ್ಟೇಯಾಕೆ ಕಲಬುರಗಿ ತತ್ವಪದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ಗಮನಿಸಿದ ಕೇಂದ್ರೀಯ ವಿ.ವಿ.ಯ ಪಿಎಚ್.ಡಿ. ಪದವೀಧರನೊಬ್ಬ "ನಿಮ್ಮ ಭಜನಾ ಜಾತ್ರೆಗೆ ಶುಭಾಶಯ" ಅಂತ ವ್ಯಂಗ್ಯದ ಪ್ರತಿಕ್ರಿಯೆ ನನಗೆ ಕಳಿಸಿದ್ದಾನೆ.
ಈ ರೀತಿಯಲ್ಲಿ ತತ್ವಪದಗಳ ಗಾಯನ ಪರಂಪರೆಯನ್ನು ವಿಮರ್ಶಕ ಲೋಕ ಕಡೆಗಣಿಸಿದೆ. ತನ್ನ ಸಾಂಸ್ಕೃತಿಕ ಯಜಮಾನಿಕೆ ಮೆರೆದು ಅಧೀನ ಸಂಸ್ಕೃತಿಯ ಕಡೆಗಣ್ಣುಗಳಲ್ಲಿ ಕಾಣಲಾಗಿದೆ. ಪ್ರಧಾನ ಸಂಸ್ಕೃತಿ ಧಾರೆಯಾಗಿ ಗುರುತಿಸಬೇಕಾದ ತತ್ವಪದ ಸಾಹಿತ್ಯವು ಸಾಂಸ್ಕೃತಿಕ ರಾಜಕಾರಣಕ್ಕೆ ತುತ್ತಾಗಿದೆ. ತೀರಾ ಇತ್ತೀಚಿನ ದಶಕಗಳ ಬದಲಾದ ಸಾಹಿತ್ಯ ಸಂದರ್ಭಗಳಲ್ಲಿ ವಿದ್ವತ್ ಜಗತ್ತು ಇತ್ತ ಗಂಭೀರ ಚಿತ್ತ ಹರಿಸುತ್ತಲಿದೆ. ತತ್ವಪದ ಸಾಹಿತ್ಯವು ವಿಶ್ವವಿದ್ಯಾಲಯಗಳ ವಿದ್ವಾಂಸರು, ಸಂಶೋಧನಾರ್ಥಿಗಳಿಗೆ ಆಕರ ವಸ್ತುವಿನ ಚಿಮ್ಮುಹಲಗೆಯಾಗಿ ಬಳಕೆಯಾಗುತ್ತಿರುವುದು ಸುಳ್ಳಲ್ಲ. ಕಾರ್ಪೋರೇಟ್ ಪ್ರಪಂಚದ ವಿದ್ವನ್ಮಣಿ ಸಂಗೀತಜ್ಞರಿಗೆ ತತ್ವಪದಗಳು ಪ್ಯಾಷನೇಟ್ ಆಗಿ ಗ್ಯಾಜೆಟ್ ಕಲ್ಚರ್ ತರಹ ಹೊರದೇಶಕ್ಕೂ ಹಾಳತವಾಗಿ ಪರಿಚಯಗೊಳ್ಳುತ್ತಲಿವೆ. ಅದೇನೇ ಇರಲಿ, ಲೋಕಜ್ಞಾನ ತತ್ವಪದಗಳ ಸಾಂಸ್ಕೃತಿಕ ಸಾಧ್ಯತೆಯ ಕ್ಷಿತಿಜಗಳಂತೂ ವಿಸ್ತೃತಗೊಳ್ಳುತ್ತಿರುವುದು ಮಾತ್ರ ಸ್ವಾಗತಾರ್ಹ.
ಆದರೆ ಅವುಗಳನ್ನು ಬಳಕೆ ಮಾಡಿಕೊಂಡು ಬೆಳೆಯುತ್ತಿರುವವರಿಗೆ ಅವು ಅವಕಾಶದ ಅಗಸಿಬಾಗಿಲು ಆಗುತ್ತಲಿರುವುದು ಒಂದು ಬಗೆಯ ಸಾಂಸ್ಕೃತಿಕ ವ್ಯವಹಾರವೆಂದೇ ಬಗೆಯುವಂತಾಗಿದೆ. ಶಿಶುನಾಳ ಶರೀಫರ ತತ್ವಪದಗಳು ಬಹುಪಾಲು ವಿದ್ವಾಂಸರು ಮತ್ತು ಗಾಯಕರಿಗೆ ಹಣ ಮತ್ತು ಕೀರ್ತಿ ಶಿಖರ ತಲುಪಲು ಮೆಟ್ಟಿಲೇರಿ ಹೋಗುವ ನಿಚ್ಚಣಿಕೆಯಾದವು. ಹೊರತಾಗಿ ತತ್ವಪದಗಳ ನಿಜದ ನೆಲೆಯ ಉದ್ದೇಶಗಳು ಈಡೇರಲಿಲ್ಲ. ಉದ್ದೇಶಗಳು ತಿಳಿದಿದ್ದರೂ ಅದನ್ನು ಪ್ರಚುರ ಪಡಿಸದ ಪಂಡಿತರು. ಹಾಗೆಯೇ ತತ್ವಪದಗಳನ್ನು ವಿವಿಧ ಜ್ಞಾನಶಿಸ್ತುಗಳ ಮುಖೇನ ಮನಗಾಣುವ ಚಿಂತನಶೀಲ ಅಧ್ಯಯನ, ಸಂಶೋಧನೆ, ತರ್ಕ ಇತ್ಯಾದಿ ಕೆಲಸಗಳು ಜರುಗಲಿಲ್ಲ. ಅದಕ್ಕಾಗಿ ಈ ದಿಕ್ಕಿನ ಮಹತ್ವದ ವಿಚಾರಗಳು ಈಗ ಜರುಗಲಿರುವ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನದಲ್ಲಿ ವಿಸ್ತೃತವಾಗಿ ಚರ್ಚೆಯಾಗಬೇಕಿದೆ.
ನಮ್ಮ ಬಹುಪಾಲು ವೀರಶೈವ, ಲಿಂಗಾಯತ ಮಠಗಳು ವಚನ ಸಾಹಿತ್ಯಕ್ಕೆ ತೋರಿದ ಪ್ರಾಮುಖ್ಯತೆಯನ್ನು ತತ್ವಪದ ಸಾಹಿತ್ಯಕ್ಕೆ ತೋರಲಿಲ್ಲ. ಒಂದೆರಡು ಮಠಗಳು ಮಾತ್ರ ತತ್ವಪದ ಸಾಹಿತ್ಯ ಪ್ರಕಟಣೆಗೆ ಆಸ್ಥೆ ತೋರಿದವು. ಅದರಲ್ಲಿ ಗದಗಿನ ತೋಂಟದಾರ್ಯ ಮತ್ತು ಕಡಕೋಳ ಶ್ರೀ ಮಠವು ಪ್ರಮುಖವಾದವು. ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರು ರಚಿಸಿದ ತತ್ವಪದಗಳು, ನಿಜಲೀಲಾನುಭವ ವಚನಗಳು, ನಾಮಾವಳಿ ಮತ್ತು ತತ್ವಾನುಭಾವಕ್ಕೆ ಸಂಬಂಧಿಸಿದ ಇತರೆ ಪ್ರಕಾರದ ಸಾಹಿತ್ಯ ಪ್ರಕಟಿಸುವಲ್ಲಿ ಕಡಕೋಳ ಶ್ರೀಮಠದ ಡಾ. ರುದ್ರಮುನಿ ಶಿವಾಚಾರ್ಯರು ತೋರಿದ ತಾಯ್ತನದ ಪ್ರೀತಿ, ಪ್ರೋತ್ಸಾಹ ಅನನ್ಯವಾದುದು.
ಅಣಜಿಗಿ ಗೌಡಪ್ಪ ಸಾಧುಗಳ ಕೈವಲ್ಯ ವಾಕ್ಯಾಮೃತ, ಪ್ರೊ. ಎಂ. ಎಸ್. ಲಠ್ಠೆ ಅವರ ಸ್ವರ ವಚನಗಳು, ಮೀನಾಕ್ಷಿ ಬಾಳಿ ಅವರಿಗೆ ಡಾಕ್ಟರೇಟ್ ತಂದುಕೊಟ್ಟ 'ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರು' ಮಹಾಪ್ರಬಂಧ, ಶಿವರಾಜ ಪಾಟೀಲರ 'ಕಡಕೋಳ ಮಡಿವಾಳಪ್ಪನವರ ಜೀವನ ಚರಿತ್ರೆ', ಮಲ್ಲಿಕಾರ್ಜುನ ಕಡಕೋಳ ಅವರ 'ಕಡಕೋಳ ನೆಲದ ನೆನಪುಗಳು', ಎಲ್. ಬಿ. ಕೆ. ಆಲ್ದಾಳ ಅವರ 'ಶಿವಯೋಗಿ ಕಡಕೋಳ ಮಡಿವಾಳೇಶ್ವರ ಮಹಾ ಪುರಾಣ', ಗುರುಸಂಗಪ್ಪ ಹಗರಟಗಿಯವರ 'ಮಡಿವಾಳೇಶ್ವರ ಸುಪ್ರಭಾತ' ಹೀಗೆ ಹತ್ತಾರು ಗ್ರಂಥಗಳನ್ನು ಶ್ರೀಮಠದಿಂದ ಪ್ರಕಟಿಸಿದ ಸಂತಸ, ಸಂಭ್ರಮ ಶ್ರೀಗಳದು. ತತ್ವಪದ ಮತ್ತು ಶರಣ ಸಾಹಿತ್ಯದ ಪೋಷಕರಾದ ರುದ್ರಮುನಿ ಶಿವಾಚಾರ್ಯ ಅವರನ್ನು ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಸ್ವಾಗತಾರ್ಹ.
ವಚನ ಚಳವಳಿ ಕಾಲದ ಅಲ್ಲಮನ ನೇತೃತ್ವದ ಅನುಭವ ಮಂಟಪ ಮಾದರಿಯಲ್ಲಿ ತತ್ವಾನುಭಾವ ಗೋಷ್ಠಿಗಳು ಕಡಕೋಳ ಮಡಿವಾಳಪ್ಪನ ಸಾರಥ್ಯದಲ್ಲಿ ಜರುಗಿದ ಸಾಕ್ಷ್ಯಗಳಿವೆ. ಈ ಸಂವಾದದಲ್ಲಿ ಸಕಲೆಂಟು ಕುಲದ ಕಾಯಕನಿರತ ತತ್ವಪದಕಾರರು ಸಾಕ್ಷಾತ್ಕರಿಸಿದ್ದಾರೆ. ಬ್ರಾಹ್ಮಣ ಕುಲದ ಖೈನೂರು ಕೃಷ್ಣಪ್ಪ, ಜೀರ ಕುಲದ ರಾಮಪ್ಪ, ಮುಸ್ಲಿಮರ ಚೆನ್ನೂರ ಜಲಾಲ ಸಾಹೇಬ, ಕಬ್ಬಲಿಗರ ಕಡ್ಲೇವಾಡ ಸಿದ್ದಪ್ಪ, ಲಿಂಗಾಯತರ ಭಾಗಮ್ಮ. ಹೀಗೆ ನೂರಾರು ಮಂದಿ ಪದಕಾರರು ಒಳಗೊಂಡಿದ್ದರು. ಅಂತೆಯೇ ಕಡಕೋಳ ಮಡಿವಾಳಪ್ಪನನ್ನು ತತ್ವಪದಗಳ ಅಲ್ಲಮನೆಂದೇ ಕರೆಯಲಾಗುವುದು.
ಕಡಕೋಳ ಎಂಬ ತತ್ವಪದಗಳ ತಾಯ್ನೆಲವನ್ನು ಮಡಿವಾಳಪ್ಪನಿಂದಾಗಿ ಅಮರಾಕ್ಷರಗಳಲ್ಲಿ ಬರೆಯುವಂತಾಗಿದೆ. ಇದೇ ರೀತಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅನೇಕ ತತ್ವಪದಕಾರರ ಅಸ್ಮಿತೆಯ ವಿವರಗಳಿವೆ. ತತ್ವಪದಗಳ ಭಜನೆಗಳಿಲ್ಲದ ಊರುಗಳಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಒಂದೆರಡು ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದಲ್ಲಿ ಅಜಮಾಸು ಐದುನೂರು ಮಂದಿ ತತ್ವಪದಕಾರರ ನೆಲೆಗಳು ದೊರಕಿವೆ. ಮಹಿಳೆ ಮತ್ತು ದಲಿತರು ಮೊದಲ್ಗೊಂಡು ಎಲ್ಲ ಕುಲ, ಧರ್ಮಗಳ ತತ್ವಪದಕಾರರಿದ್ದು ಬಹುತ್ವದ ಕರ್ನಾಟಕ ಕಟ್ಟಿದ ಮಹತ್ವದ ಕೀರ್ತಿ ಅವರದಾಗಿದೆ. ಅವರಲ್ಲಿ ನೂರಕ್ಕೂ ಹೆಚ್ಚುಮಂದಿ ಕಲ್ಯಾಣ ಕರ್ನಾಟಕದವರೆಂಬ ಹೆಮ್ಮೆ ನಮ್ಮದು. ಕನ್ನಡ ಮಾತ್ರವಲ್ಲದೆ ತೆಲುಗು, ಉರ್ದು, ಮರಾಠಿ ಭಾಷೆಗಳ ತತ್ವಪದ ರಚನೆಕಾರರು ಕರ್ನಾಟಕದ ಪರಮ ಹೆಗ್ಗಳಿಕೆ.
ಕಡಕೋಳ ಮಡಿವಾಳಪ್ಪನವರ ಮುಕ್ತ ಪರಂಪರೆಯ ಮುಂದುವರಿಕೆಯಾಗಿ ಡಾ. ರುದ್ರಮುನಿ ಶಿವಾಚಾರ್ಯರು ತತ್ವಪದಗಳ ಬಗ್ಗೆ ಮಾತೃತ್ವದ ಪ್ರೀತಿ ಇಟ್ಟು ಕೊಂಡವರು. ಅವರು ಎಷ್ಟೇ ದೂರದ ಪ್ರಯಾಣದಲ್ಲಿದ್ದರೂ ಅಮವಾಸ್ಯೆಯಂದು ಕಡ್ಡಾಯವಾಗಿ ಕಡಕೋಳಕ್ಕೆ ಬಂದೇ ಬರುತ್ತಾರೆ. ಕಡಕೋಳ ಮಹಾಮಠದಲ್ಲಿ ಪ್ರತಿ ಅಮವಾಸ್ಯೆಯಂದು ಜರುಗುವ ಆಹೋರಾತ್ರಿ ತತ್ವಪದಗಳ ಅನುಸಂಧಾನದಲ್ಲಿ ಒಂದಾಗುತ್ತಾರೆ. ಗಾಯನದ ನಂತರ ಪದಗಳ ತಾತ್ಪರ್ಯ, ಟೀಕುಗಳು ಜಬರ್ದಸ್ತಾಗಿ ಜರುಗುವ ಅದು ಅರಿವು ಮತ್ತು ಆಚಾರದ ಆಡುಂಬೊಲವೇ ಆಗಿರುತ್ತದೆ. ತೀರಾ ಇತ್ತೀಚೆಗಿನ ಯಡ್ರಾಮಿಯ ಶಿವಪುತ್ರಪ್ಪ ಜೋಗುರ, ಕೋರವಾರದ ಕಲ್ಲಪ್ಪ ಶರಣರು ಕಾಲವಾಗುವವರೆಗೆ ನಿತಾಂತವಾಗಿ ಅದು ನಡಕೊಂಡು ಬಂದಿದೆ.
ನಮ್ಮ ನಡುವಿನ ಬೋರಗಿ ಮಹಾಲಿಂಗಯ್ಯ ಸ್ವಾಮಿ, ಚೌಕಿಮಠದ ಮುರುಗೇಂದ್ರ ಶಾಸ್ತ್ರೀ, ಸುಂಬಡ ಮಾಸ್ತರ, ಬಸ್ತೀಹಾಳದ ಅಮೋಘಸಿದ್ಧ ಶಾಸ್ತ್ರೀ ಹೀಗೆ ಕೆಲ ಹಿರೀಕರು ಅಂತಹ ನೆನಪುಗಳ ನಿದರ್ಶನದಂತಿದ್ದಾರೆ. ಬಹುತೇಕ ಅವರಿಗೆ ಶಿವಯೋಗಿ ನಿಜಗುಣರ ಪ್ರಭಾವ. ಮಠೀಯತೆಯನ್ನು ಮೀರಿ ಮಠದ ಒಳಾವರಣದಲ್ಲಿ ಜರುಗುವ ಸತ್ಸಂಗ ಭಜನೆಗಳಲ್ಲಿ ಅಂತ್ಯಜರಾದಿಯಾಗಿ ಎಲ್ಲಾ ಜಾತಿ, ಮತ, ಧರ್ಮಗಳ ತತ್ವಪದ ಗಾಯಕರು ಸಕ್ರಿಯವಾಗಿ ಪಾಲ್ಗೊಳ್ಳುವರು. ಪರ ಊರುಗಳ ಭಜನಾ ತಂಡಗಳು ಭಾಗವಹಿಸುತ್ತವೆ. ಅಂತಹದ್ದೊಂದು ಜಾತ್ಯತೀತ ಮತ್ತು ಭಾವೈಕ್ಯದ ತತ್ವಪದಗಳ ಪರಂಪರೆಯನ್ನು ಶ್ರೀಮಠವು ಒಂದೆರೆಡು ಶತಮಾನಗಳಿಂದ ಸಂಪ್ರದಾಯದ ಮಾದರಿಯಂತೆ ಬೆಳೆಸಿಕೊಂಡು ಬಂದಿದೆ. ಅದಕ್ಕೆ ಕಾರಣ ರುದ್ರಮುನಿ ಶಿವಾಚಾರ್ಯರೆಂಬ ದಿವ್ಯಸ್ಪಂದನ.
ಕರ್ನಾಟಕದ ಮತ್ತೊಂದು ವಿಶೇಷವೆಂದರೆ ನಾಡಿನ ಎಲ್ಲಾ ಪ್ರಾಂತ್ಯಗಳ ಸಾವಿನ ಮನೆಗಳ ಶವದ ಸಮಕ್ಷಮದಲ್ಲಿ ಇಡೀರಾತ್ರಿ ತತ್ವಪದಗಳ ಗಾಯನ. ಹೀಗೆ ಸೂತಕ ಮತ್ತು ಅಮವಾಸ್ಯೆಯ ಕತ್ತಲೆಗೂ ತತ್ವಪದಗಳಿಗೂ ಅವಿನಾಭಾವ ಸಂಬಂಧ. ಕಡಕೋಳ ಮಠದ "ಅಮವಾಸ್ಯೆಯ ಪೂರ್ಣರಾತ್ರಿ ತತ್ವಪದಗಳ ಭಜನೆ" ಅದಕ್ಕೊಂದು ದಿವಿನಾದ ನಿದರ್ಶನ. ಇಂತಹ ಅಪರೂಪದ ಸಾಹಿತ್ಯ ಪ್ರಕಾರ ಕುರಿತು ಕನ್ನಡ ಸಂಸ್ಕೃತಿ ಇಲಾಖೆ ಮುವತ್ತೆರಡು ಸಂಪುಟಗಳಲ್ಲಿ ತತ್ವಪದಗಳ ಸಂಗ್ರಹ ಕಾರ್ಯ ಜರುಗಿಸಿದೆ. ಇದು ಆರಂಭಿಕವಾದ ಮಹತ್ವದ ಹೆಜ್ಜೆ. ತತ್ವಪದಗಳ ಸೂಕ್ಷ್ಮತೆ, ಅವುಗಳ ವಿಸ್ತಾರ, ಒಟ್ಟಾರೆ ಅವುಗಳ ಶ್ರೇಯೋಭಿವೃದ್ಧಿಗಾಗಿ ಪ್ರಾಧಿಕಾರವೇ ರಚನೆಯಾದರೆ ಹೆಚ್ಚು ಶ್ರೇಯಷ್ಕರ.
ತತ್ವಪದ ಹೆಸರಲ್ಲಿ ಫಿಲಾಸಫಿ ಮತ್ತು ಮ್ಯುಸಿಕ್ ಫಲಿತವ್ಯದ ಸಂವೇದನೆಗಳಿವೆ. ತತ್ವಪದಗಳು ಜಡರಹಿತ ವೇದಾಂತದ ಜನಸಾಹಿತ್ಯ ಫಲಕುಗಳು. ಶುಷ್ಕವಾದ ಅಧ್ಯಾತ್ಮ ಸರಳ ಮಾಡಿ ಹೇಳಿದ್ದು ತತ್ವಪದ. ಕೆಲವೊಮ್ಮೆ ಸೂಕ್ಷ್ಮದೇಹಿಯಾಗಿ ಕಂಡುಬರುವ ಅವುಗಳ ನಿಗೂಢ ಪರತತ್ವಗಳು ಅನುಭವಕ್ಕೆ ಮಾತ್ರ ನಿಲುಕುವಂತಹವು. ಅಂತಹ ಆನುಭಾವಿಕ ಚಿಂತನೆಗಳನ್ನು ಪದಗಳಲ್ಲಿ ಹಿಡಿದಿಡುವುದು ಆಕ್ಷಣದ ಸತ್ಯ. ಪದ ಹಾಡುವವರ ಹೃನ್ಮನ ತಟ್ಟುವ ಅನನ್ಯತೆಗಳು ಅವರವರಿಗೆ ಸೇರಿದ್ದು. ಅದಕ್ಕೆ ಹೇಳೋದು
ಎಂಥಾ ಆಕಳ ಕೊಟ್ಟೆ ಗುರು ಕಾಮಧೇನ/ ಉಂಡ ನೋಡಿದವನೆ ಬಲ್ಲ ಇದರ ಹೈನ//
ಆಕಳಿರುವ ಸ್ಥಳ ಶಿವಪುರದಲ್ಲಿ/
ಬಲ್ಲವರಿಗೆ ತಿಳಿದಿತಪ್ಪ ಅದರ ನೆಲಿ//
ತತ್ವಪದ ಸಾಹಿತ್ಯದ ಚಿಂತನೆಗಳು ಹಲವು ಹೆಸರಿನ ಶಾಖಾಧಾರೆಗಳಲ್ಲಿ ಹರಿದು ಹಂಚಿ ಹೋಗಿವೆ. ಸಿದ್ಧ, ಅಚಲ, ಆರೂಢ, ಅವಧೂತ, ಅಮನಸ್ಕ, ಪಿಪಿಲಿಕ ಹೀಗೆ ಆನುಭಾವಿಕ ಸಾಧನೆಯ ಹಾದಿಗಳು ಹತ್ತು ಹಲವು. ಆದರೆ ಆ ಎಲ್ಲ ದಾರಿಗಳು ಹೋಗಿ ಸೇರುವ ಗಮ್ಯ ಗಂತವ್ಯದ ಊರು ಮಾತ್ರ ಒಂದೇ. ಆ ಊರು ಅನೇಕ ತಾತ್ವಿಕ ಪ್ರಸ್ಥಾನಗಳ ಮಹಾಸಂಗಮ.
ಕರ್ನಾಟಕ ಸರ್ಕಾರ ಇತ್ತೀಚೆಗೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ "ಸೂಫಿ ಮತ್ತು ತತ್ವಪದಕಾರರ ಅಧ್ಯಯನ ಪೀಠ" ಸ್ಥಾಪಿಸುವ ನಿರ್ಣಯ ಕೈಗೊಂಡಿದೆ. ಕಳೆದ ಮೂರ್ನಾಲ್ಕು ದಶಕಗಳಿಂದ ಕಡಕೋಳ ಶ್ರೀಮಠ ಮತ್ತು ಮಠದ ಪೂಜ್ಯರು ಸರಕಾರದಲ್ಲಿ ಮಾಡಿಕೊಂಡ ಮನವಿಯೊಂದಿತ್ತು. ಅದೇನೆಂದರೆ "ತತ್ವಪದಗಳ ಸಮಗ್ರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ" ಸ್ಥಾಪಿಸಬೇಕು. ತನ್ಮೂಲಕ ತತ್ವಪದಗಳ ಅಭಿವೃದ್ಧಿ ಮತ್ತು ಇತರೆ ವಿಧಾಯಕ ಕೆಲಸಗಳಾಗಬೇಕು.
ಆದರೆ ವರ್ತಮಾನ ವಿಶ್ವವಿದ್ಯಾಲಯದ ಅಧ್ಯಯನ ಪೀಠಗಳ ಕಾರ್ಯ ನಿರ್ವಹಣೆಯ ವೈಖರಿಯಿಂದ ತತ್ವಪದ ಸಾಹಿತ್ಯದ ಅಭಿವೃದ್ಧಿ ದುಃಸಾಧ್ಯ. ಇದು ತತ್ವಪದ ವತ್ಸಲರಾದ ರುದ್ರಮುನಿ ಶಿವಾಚಾರ್ಯರ ಜಂಗಮ ಮನದ ಇಂಗಿತ.
ಈಗಲೂ ಕಾಲ ಮಿಂಚಿಲ್ಲ. ಸರ್ಕಾರದ ಮುಖ್ಯಸ್ಥರು ಮತ್ತು ಸಂಬಂಧ ಪಟ್ಟವರು ಅಧ್ಯಯನ ಪೀಠಕ್ಕೆ ಬದಲು ರಾಷ್ಟ್ರೀಯ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮಾದರಿಯ "ತತ್ವಪದಗಳ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ" ಆರಂಭಿಸಲು ಮುಂದಾಗಲಿ. ಕರ್ನಾಟಕದ ತತ್ವಪದ ಸಾಹಿತ್ಯ ಪ್ರಿಯರು ಮತ್ತು ಜನಪ್ರತಿನಿಧಿಗಳು ತಮ್ಮ ಸಾಂಸ್ಕೃತಿಕ ಇಚ್ಛಾಶಕ್ತಿ ತೋರಬೇಕು. ದುರಿತ ಕಾಲದ ನಿವಾರಣೆಗಾಗಿ ಅಂತಹದ್ದೊಂದು ಹಕ್ಕೊತ್ತಾಯದ ನಿರ್ಣಯವನ್ನು ಡಾ. ರುದ್ರಮುನಿ ಶಿವಾಚಾರ್ಯರ ಸರ್ವಾಧ್ಯಕ್ಷತೆಯ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ ಕೈಗೊಳ್ಳಲಿ.
- ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು:
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.