Date: 12-09-2023
Location: ಬೆಂಗಳೂರು
''ಜೇವರ್ಗಿ ರಾಜಣ್ಣನವರ ಬಹುಪಾಲು ನಾಟಕಗಳ ತಾಯಿಬೇರುಗಳಿರುವುದೇ ವೃತ್ತಿರಂಗಭೂಮಿಯ ಪೂರ್ವಸೂರಿ ಕವಿವರ್ಯರ ಕೃತಿಗಳ ಕೆಚ್ಚಿನಲ್ಲಿ. ಪೂರ್ವಕಾಲದ ವೃತ್ತಿ ರಂಗಭೂಮಿಯ ನಾಟಕಕಾರರು ಕವಿಗಳೆಂದೇ ಪ್ರತೀತರು. ಪ್ರಸ್ತುತ 'ಜೇರಾ' ಕವಿಯಾಗಿ ಆವಾಹಿಸಿಕೊಳ್ಳದೇ ನಾಟಕಕಾರರಾಗಿ ಹೆಚ್ಚು ಹೆಸರು ಮಾಡಿದವರು,'' ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ `ರೊಟ್ಟಿಬುತ್ತಿ' ಅಂಕಣದಲ್ಲಿ, “ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು” ಕುರಿತು ಲೇಖನವನ್ನು ಬರೆದಿದ್ದಾರೆ.
ಹಾಗೆ ನೋಡಿದರೆ ನಮ್ಮ ಜೇವರ್ಗಿ ರಾಜಣ್ಣ ವೃತ್ತಿರಂಗಭೂಮಿಗೆ ಪ್ರವೇಶ ಪಡೆದುದೇ ಯೋಗಾಯೋಗ ಪ್ರೀತಿ ಬಲುಮೆಯಿಂದ. ಅಷ್ಟಕ್ಕೂ ಹಳೆಯ ಹೈದರಾಬಾದ್ ಕರ್ನಾಟಕ ಮತ್ತು ಇವತ್ತಿನ ನೂತನ ಕಲ್ಯಾಣ ಕರ್ನಾಟಕದ ಬಹುತೇಕ ಸನ್ನಿವೇಶ ಮತ್ತು ಸಾಂಸ್ಕೃತಿಕ ಸಂದರ್ಭಗಳು ಉತ್ಕಟ ಕಾಂಕ್ಷೆಯ ಬಹುಳ ಪ್ರಜ್ಞೆಯಿಂದ ಕೂಡಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆ, ಆಸರೆಯೇ ಇಲ್ಲದ ಕುಟುಂಬದಲ್ಲಿ ಹುಟ್ಟಿಬೆಳೆದ ಪ್ರತಿಭೆ ರಾಜಣ್ಣ. ಅಂದಿನ ಜೇವರ್ಗಿ ಪರಿಸರದ ಜನಪದ ಬಾಹುಳ್ಯದ ಬದುಕು, ರಾಜಣ್ಣ ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಳ್ಳಲು ಅನುವಾಯಿತು. ನಮ್ಮ ಬಹುಪಾಲು ಹಳ್ಳಿಗಾಡಿನ ಪ್ರತಿಭೆಗಳಿಗೆ ಹೇಳಿಕೊಳ್ಳಲು ನಮಗೆ ನಮ್ಮ ಮನೆತನಗಳ ಬಲಾಢ್ಯತನದ ಬಲವಿರುವುದಿಲ್ಲ. ಹೀಗಂತಲೇ ನಮ್ಮ ಹುಟ್ಟೂರುಗಳು ನಮ್ಮಂಥವರ ಹೆಸರಿನ ನೆರವಿಗೆ ಬರುತ್ತವೆ. ಪ್ರಾಯಶಃ ರಾಜಣ್ಣ ಅದಕ್ಕೆ ಹೊರತಲ್ಲ.
ಭಜನೆ, ಬಯಲಾಟ, ಜಾನಪದಗಳ ವಿವಿಧ ಕಲಾ ಪ್ರಕಾರಗಳು ಎಲ್ಲರ ಬಾಲ್ಯದ ಬಾಳಿನ ತುಂಬಾ ತುಂಬಿಹರಿದ ಸಹಜ ಸಾಂಸ್ಕೃತಿಕ ಧಾರೆಗಳು. ದೊಡ್ಡಾಟ, ಸಣ್ಣಾಟ, ಹರದೇಶಿ - ನಾಗೇಶಿ ಡಪ್ಪಿನಾಟ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಗ್ರಾಮೀಣ ರಂಗಭೂಮಿಯ ಪ್ರದರ್ಶನ ಕಲೆಗಳು. ಅವುಗಳನ್ನು ಆವಾಹನೆಗೈಯ್ದು ಗ್ರಾಮ್ಯಜನ್ಯ ಸಂವೇದನೆಗಳನ್ನು ತಾದಾತ್ಮ್ಯಗೊಳಿಸಿಕೊಂಡು ರಂಗಬರಹದ ಸರಕಿಗೆ ಜಾರಿದವರು ರಾಜಣ್ಣ. ಆರಂಭಕ್ಕೆ ಟೈಲರ್ ಆಗಿ ರಂಗಭೂಮಿಯ ಪ್ರವೇಶ. ನಂತರ ಪಾತ್ರಕ್ಕೆ ಪ್ರಮೊಷನ್ ಪಡೆದು ನಾಟಕಕಾರನಾಗಿ ನೆಲೆ ಕಂಡಿರುವ ರಾಜಣ್ಣನದು ಸಾಹಸಗಾಥೆ. ಎಲ್ಲ ವೃತ್ತಿ ರಂಗಕಲಾವಿದರಂತೆ ಸಾಮಾನ್ಯವಾಗಿ ಗೇಟ್ ಕಾಯುವ ಕಾಯಕದಿಂದ ಶುರುವಾಗಲಿಲ್ಲ.
ರಾತ್ರಿಯ ಪ್ರದರ್ಶನದಲ್ಲಿ ಇಂದ್ರನ ಅಮರಾವತಿಯನ್ನೇ ಸೃಷ್ಟಿಸುವ ಬಣ್ಣ ಬಣ್ಣದ ರಂಗಸಜ್ಜಿಕೆ, ಹಗಲಿನ ಬೆಳಕಿನಲ್ಲಿ ಬಣ ಬಣ - ಬೋಳು ಬೋಳು. ಇದು ವಾಸ್ತವದಲ್ಲಿ ನಮ್ಮ ಕಲಾವಿದರ ಸ್ಥಿತಿಗತಿಗಳನ್ನು ಪ್ರತಿಫಲಿಸುತ್ತದೆ. ಅಂತೆಯೇ ಬರ್ಟೋಲ್ಟ್ ಬ್ರೆಕ್ಟ್ ತನ್ನ "The theatre, home of dreams" ಕವಿತೆಯ ಸಾಲುಗಳಲ್ಲಿ ಹೀಗೆ ಹೇಳುತ್ತಾನೆ: ರಂಗಭೂಮಿಯೆಂದರೆ ಅನೇಕರ ದೃಷ್ಟಿಯಲ್ಲಿ ಕನಸು ಹುಟ್ಟಿಸುವ ತಾಣ. ನೀವು ನಟರು ಮಾದಕ ಕನಸುಗಳ ಮಾರಾಟಗಾರರು
ಆತನ ಮತ್ತೊಂದು ಕವಿತೆಯ ಮತ್ತೆರಡು ಸಾಲುಗಳು ಹೀಗಿವೆ : ನಾಟಕ ಮುಗಿಯಿತು. ಸಂಕುಚಿತವಾಗುವ ಕರುಳ ರಂಗಮಂದಿರ ಖಾಲಿಯಾಯಿತು. ಪ್ರಸಾದನ ಕೊಠಡಿಯಲಿ ಚಮತ್ಕಾರದ ಅಣಕುವಾಡಿನ ವ್ಯಾಪಾರಿಗಳು. ಕೊಳಕು ವಾಚಾಳಿಗಳು. ಅಲಂಕಾರ ಮತ್ತು ಬೆವರನ್ನು ತೊರೆಯುತ್ತಾರೆ.
ಗುಣೀಭೂತ ವ್ಯಂಗ್ಯದಂತಿರುವ ಬ್ರೆಕ್ಟ್ ಕವಿತೆಯ ಈ ಸಾಲುಗಳು ರಂಗಭೂಮಿಯ ಎರಡು ಮುಖಗಳನ್ನು ಪರಿಚಯಿಸುತ್ತವೆ. ಇದೇ ತರಹದ ದುರಾದೃಷ್ಟದ ಜತೆಗೆ ಅದೃಷ್ಟದ ಅಮರ ಫಲಾನುಭವಿ "ಜೇರಾ" ಅರ್ಥಾತ್ ಜೇವರ್ಗಿ ರಾಜಣ್ಣ. ಹೌದು ಜೇರಾ, ರಂಗಭೂಮಿಯ ಆನುಷಂಗಿಕಫಲ ಉಂಡವರು. ಸುಂದರ ಭ್ರಮೆ ಮತ್ತು ಸಂತಸದ ಕ್ಷಣಗಳ ಸೃಷ್ಟಿಸುವ ಕಲೆ ನಾಟಕದ್ದು. ಅವು ರಂಗಭೂಮಿಯ ಮಾಂತ್ರಿಕ ಗಳಿಗೆಗಳು.
ಬಡತನ ಮತ್ತು ಅವಮಾನದ ನೋವುಗಳ ಮಡುವಿನಲ್ಲಿ ಈಸಿಬಂದ 'ಜೇರಾ' ಜೇರಕರ್ತ್ ದಾವಣಗೆರೆಗೆ ಕ್ಯಾಂಪ್ ಮಾಡದೇ ಹೋಗಿದ್ರೇ ಅವರ ರಂಗಬದುಕಿನ ಚಾರಿಷ್ಮಾ ಬದಲಾಗುತ್ತಿರಲಿಲ್ಲ. ಒಂದೇ ನಾಟಕದ ನಿರಂತರ ನಾಲ್ಕು ನೂರಕ್ಕೂ ಹೆಚ್ಚು ಪ್ರಯೋಗಗಳು ಈ ಊರಲ್ಲಿ ಜರುಗದೇ ಹೋಗಿದ್ರೆ ಅದು ಚಾರಿತ್ರಿಕ ಫಲಿತವ್ಯಗಳನ್ನು ಕಾಣುತ್ತಿರಲಿಲ್ಲ. "ದಾವಣಗೆರೆ ಮತ್ತು ಕುಂಟ ಕೋಣ ಮೂಕ ಜಾಣ" ಈ ಎರಡೂ ಜೇರಾ ಮತ್ತು ಅವರ ನಾಟಕ ಕಂಪನಿಯ ಚರಿತ್ರೆಯನ್ನೇ ಸಕಾರಾತ್ಮಕವಾಗಿ ಬದಲಿಸಿದವು.
ವರ್ತಮಾನ ಕರ್ನಾಟಕದ ಕಂಪನಿ ನಾಟಕಗಳಲ್ಲಿ ಜೇರಾಗೆ ನಂ. ಒನ್ ಸ್ಥಾನ. ಜೇರಾ ಇದುವರೆಗೆ ಹನ್ನೊಂದಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದು ಸಹಸ್ರ ಸಹಸ್ರ ಪ್ರದರ್ಶನ ಕಂಡಿವೆ. ಸಾಮಾಜಿಕ ಜಾಲತಾಣಗಳಲ್ಲೂ ಸಹಸ್ರಾರು ಪ್ರಯೋಗಗಳ ರಂಗದಾಖಲೆ ಮಾಡಿದ್ದುಂಟು. ಪ್ರಸ್ತುತ ಅವರ ಕ್ಯಾಂಪ್ ರಾಜಧಾನಿ ಬೆಂಗಳೂರಿಗೆ ಆಗಮಿಸಿ ನಾಲ್ಕು ತಿಂಗಳು ಕಳೆದಿವೆ.
* * *
ಲಾಗಾಯಿತಿನಿಂದಲೂ ವೃತ್ತಿ ರಂಗಭೂಮಿಯ ನಾಟಕ ಕಂಪನಿ ಪರಂಪರೆಗಳಲ್ಲಿ "ಅರ್ಥಾತ್" ಎಂಬ ಪದಬಳಕೆಯ ರೂಢಿಗತ ನಾಟಕಗಳದ್ದೇ ಮುಗಿಯದ ಹವಾ. ಅದೊಂದು ರೀತಿಯ ರಂಗ ಸಂಪ್ರದಾಯದಂತೆ ಬೆಳೆದು ಬಂದಿದೆ. ಪ್ರಸ್ತುತ ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ 'ರೈತ ಮನೆತನ' ಅರ್ಥಾತ್ 'ಕುಡುಕ ಕಲ್ಯಾ ಸಿಡುಕಿ ಮಲ್ಲಿ' ಎಂಬ ಯಡವಟ್ಟು ಹೆಸರಿನ ನಾಟಕ ನಿಜಕ್ಕೂ ಮನೋಜ್ಞವಾಗಿದೆ. ತುಂಬಾ ಹಳತೆನಿಸುವ ಪರಂಪರಾಗತ ನಾಟಕಗಳ ಸೋಪಜ್ಞಶೀಲ ಸಂವೇದನೆಯ ಎಲ್ಲ ಚಹರೆಗಳನ್ನು ನೆನಪಿಸುವಂತೆ ಅದು ಅವತಾರಗೊಳ್ಳುತ್ತದೆ. ಹಿರಿಯ ತಲೆಮಾರಿನ ಸಾಮಾಜಿಕ ವೃತ್ತಿರಂಗದ ಸೂಕ್ಷ್ಮಾತೀಸೂಕ್ಷ್ಮ ಎಸಳುಗಳನ್ನು ಪ್ರಸ್ತುತ ನಾಟಕದಲ್ಲಿ ಪಸಂದಾಗಿ ಕಾಣಬಹುದು.
ಸಮಷ್ಟಿ ಪ್ರಜ್ಞೆಯ ರಂಗಕೃತಿಗಳ ಸಿದ್ಧಸಾಹಿತ್ಯ ಸೂತ್ರಗಳನ್ನು ಪೊಗದಸ್ತಾಗಿ ಬಳಸಿಕೊಂಡ ಇದೊಂದು ಪ್ರಭಾವೀ ರಂಗಪ್ರಯೋಗ. ವೃತ್ತಿಪರ ನುರಿತ ಕಲಾವಿದರ ಜೊತೆಯಲ್ಲಿ ಆಧುನಿಕ ರಂಗನೆಲೆಯ ರೆಪರ್ಟರಿಗಳ ತರಬೇತಿ ಪಡೆದ ಕಲಾವಿದರು ಅಭಿನಯಿಸಿದ್ದು ಈ ನಾಟಕದ ವೈಶಿಷ್ಟ್ಯ. ಅದು ವೃತ್ತಿ ಹವ್ಯಾಸಗಳ ಸಮನ್ವಯ ರಂಗಪ್ರೀತಿ. ಎತ್ತುಗಳು ಮತ್ತು ಅವುಗಳ ಪೋಷಕರ ನಡುವಿನ ನವಿರು ಸಂಭಾಷಣೆಗಳ ರಂಗಭಿತ್ತಿ ಮತ್ತೊಂದು ವಿಶೇಷ. ಅದು ತಮ್ಮನ್ನು ಸಾಕಿ ಸಲಹುವ ಅಪ್ಪ ಅವ್ವಗಳಂತಹ ಪಾಲಕರು ಮತ್ತು ಸಾಕುಪ್ರಾಣಿಗಳ ನಡುವಿನ ಜೀವಸಂಕುಲ ಸಂಬಂಧಗಳ ಸಾಕ್ಷಾತ್ಕಾರ.
ಮಹೇಶ ಮತ್ತು ವಿಷ್ಣು ಎಂಬೆರಡು ಎತ್ತುಗಳಲ್ಲಿನ ಕನಿಕರದ ಕರುಳಪ್ರಜ್ಞೆ ಪ್ರೇಕ್ಷಕರ ಅಂತಃಕರಣ ಕಲಕುತ್ತದೆ. ಅಶರೀರವಾಣಿಯಂತಹ ಪುರಾಣ ಕಾವ್ಯದ ಪ್ರಾಚೀನ ರಂಗಮೌಲ್ಯಗಳು ಪ್ರಯೋಗದ ಎತ್ತುಗಳ ಮೂಕ ವೇದನೆಯ ಮೈಮಾತುಗಳ ಮೂಲಕ ರೂಪಕದಂತೆ ಮರುಕಳಿಸುತ್ತವೆ. 'ನಾಗಮಂಡಲ' ಒಪ್ಪುವ ರಂಗಮೀಮಾಂಸಕರು ಇಂಥದನ್ನೆಲ್ಲ ಪ್ರಾಜ್ಞ ಚಿಂತನೆಗೆ ಒಡ್ಡಿಕೊಳ್ಳಲಿಲ್ಲ. ಆದರೆ ಕಾಲಧರ್ಮದ ನೆಲೆಯಲ್ಲಿ ವೃತ್ತಿ ರಂಗಭೂಮಿ ಉತ್ತರಗಳನ್ನು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಮತ್ತು ಕಾಲಧರ್ಮ.
ಅಂದಹಾಗೆ ಕೆಲವು ದಶಕಗಳಿಂದ ಪ್ರಚಲಿತಗೊಳ್ಳುತ್ತಿರುವ ಫುಲ್ ಕಾಮೆಡಿ ನಾಟಕಗಳೆಂಬ 'ಟ್ಯಾಗ್ ಲೈನ್ ಟೈಟಲ್' ಸಾಲಿಗೆ ಈ ನಾಟಕವನ್ನು ಸೇರಿಸಲಾಗದು. ಏಕೆಂದರೆ ನಾಟಕಗಳ ಮುಖ್ಯಪ್ರಾಣ ಆಗಬೇಕಿರುವ ಕಥೆಗೂ ಉಪಕತೆಯ ಹಾಸ್ಯಪಾತ್ರಗಳಿಗೂ ಸಂಬಂಧವೇ ಇರದ ಟ್ರೆಂಡ್ ಸೆಟ್ ನಿರ್ಮಾಣಗೊಂಡು, ವೃತ್ತಿ ನಾಟಕಗಳ ಮನ್ವಂತರವೇ ಸ್ಥಿತ್ಯಂತರದ ಸ್ಥಿತಿ ತಲುಪಿದೆ. ಆದರೆ ಪ್ರಸ್ತುತ ನಾಟಕ ಅದಕ್ಕೆ ತುಸು ಭಿನ್ನ ಮತ್ತು ಅಪವಾದ. ಪದ್ಧತಿಯಂತೆ ನೀತಿಯುತ ಸಾತ್ವಿಕ ಕುಟುಂಬ ಪ್ರೀತಿ ಮತ್ತು ಸಾಮಾಜಿಕ ವೈರುಧ್ಯತೆಯ ರಂಗ ಸಂಕೀರ್ಣತೆಗಳನ್ನು ಮೆರೆಯುತ್ತದೆ.
ಜೇವರ್ಗಿ ರಾಜಣ್ಣನವರ ಬಹುಪಾಲು ನಾಟಕಗಳ ತಾಯಿಬೇರುಗಳಿರುವುದೇ ವೃತ್ತಿರಂಗಭೂಮಿಯ ಪೂರ್ವಸೂರಿ ಕವಿವರ್ಯರ ಕೃತಿಗಳ ಕೆಚ್ಚಿನಲ್ಲಿ. ಪೂರ್ವಕಾಲದ ವೃತ್ತಿ ರಂಗಭೂಮಿಯ ನಾಟಕಕಾರರು ಕವಿಗಳೆಂದೇ ಪ್ರತೀತರು. ಪ್ರಸ್ತುತ 'ಜೇರಾ' ಕವಿಯಾಗಿ ಆವಾಹಿಸಿಕೊಳ್ಳದೇ ನಾಟಕಕಾರರಾಗಿ ಹೆಚ್ಚು ಹೆಸರು ಮಾಡಿದವರು. ಕವಿಮಾರ್ಗಕಾರರ ಹೆದ್ದಾರಿಯಲ್ಲಿ ಕಾಲುದಾರಿಯ ಪಯಣ. ವೃತ್ತಿ ರಂಗಕೃತಿಗಳ ಮೂಲಧಾತುಗಳಿಗೆ ಧಕ್ಕೆ ಬಾರದಂತೆ 'ಜೇರಾ' ಫೇರ್ನೆಸ್ ಪರಿಮಳ ಚಿಮುಕಿಸುವ ಜಾಣ ನಾಟಕಕಾರ.
ಜೇರಾ ನಾಟಕಗಳು ರಂಗಕೃತಿಗೆ ಬದಲು ರಂಗಪ್ರಯೋಗವಾಗಿ ಸಾಧ್ಯತೆ ಮತ್ತು ಅಸ್ಮಿತೆಯ ರಂಗಕ್ಷಿತಿಜ ತಲುಪುವಲ್ಲಿ ಯಶಸ್ಸು ಪಡೆಯುತ್ತವೆ. ಅಷ್ಟಕ್ಕೂ ಕತೆ ಮತ್ತು ಹಾಸ್ಯಕತೆಗಳದ್ದೇ ವಿಭಿನ್ನ ರಂಗಚಿಂತನೆಗಳು. ಹೌದು ಈಗೀಗ ಅಂತಹದ್ದೊಂದು ಮುನ್ನೆಲೆಯ ಆಯಾಮವೇ ಸೃಷ್ಟಿಯಾಗಿ ಬಿಟ್ಟಿದೆ. ಈ ಬಗೆಯ ರಂಗಸೃಷ್ಟಿಯ ನೇಪಥ್ಯದಲ್ಲಿ ಆರ್ಥಿಕ ಸಾಕ್ಷರತೆಯ ಸಾಕಷ್ಟು ಕಾರಣಗಳು ಇರಬಹುದು. ಅದು ಕಂಪನಿಗಳ ಉಳಿವಿನ ಪ್ರಶ್ನೆಯೂ ಹೌದು. ರಂಗಕೃತಿ ಕೇಂದ್ರಿತ ಪ್ರದರ್ಶನಗಳಿಗೆ ಹೊರತಾಗಿ ಕಾಮೆಡಿ ಕಲಾವಿದರು ಕೇಂದ್ರಿತ ಪ್ರದರ್ಶನಗಳ ಮೊರೆ ಹೋಗುವ ಬೆಳವಣಿಗೆಗಳು ನಿರ್ಮಾಣಗೊಂಡಿವೆ. ಇದೊಂದು ರೀತಿಯ ಅಸ್ತಿತ್ವಕ್ಕಾಗಿ ಅನಿವಾರ್ಯದ ಹೋರಾಟ ಅಥವಾ ಅನುಸಂಧಾನವೇ ಆಗಿದೆ.
ರೈತ ಮನೆತನ ನಾಟಕದ ಬಹುತೇಕ ಪಾತ್ರಗಳು ಮುಖಾಮುಖಿ ರಂಗಸಂಬಂಧ ಹೊಂದಿವೆ. ತನ್ಮೂಲಕ ರಂಗಬಂಧ ಸಮೃದ್ಧಗೊಂಡು ಪ್ರೇಕ್ಷಕನಲ್ಲಿ ಹೃದ್ಯಪ್ರೀತಿ ಹಸಾದಗೊಳಿಸಿದೆ. ಕಿರುತೆರೆಗಳಲ್ಲಿ ತನ್ನ ವೈನೋದಿಕ ಪಾತ್ರಗಳ ಮೂಲಕ ಗೆಲುವು ಸಾಧಿಸಿದ ಆಧುನಿಕ ರಂಗಭೂಮಿ ಕಲಾವಿದೆ ಜೇವರ್ಗಿ ನೀಲಾ 'ಮಲ್ಲಿ' ಪಾತ್ರದಲ್ಲಿ ಮಿಂಚಿದ್ದಾಳೆ. ಸಿಡುಕು ಮಲ್ಲಿಯ ಕುಡುಕು ಗಂಡನ ಜತೆಯ ಚುರುಕಾದ ಅಭಿನಯ ಆರಂಭಕ್ಕೆ ತುಸು ಅತಿರೇಕ ಅನಿಸಿದರೂ ಪೊಲೀಸ್ ಅಧಿಕಾರಿಯಾಗಿ ಆಕೆ ತೋರುವ ಗಂಭೀರತೆ ಮಾತ್ರ ಗಮನಾರ್ಹ. ನೀಲಾ ಹಾಡುನಟಿಯಾಗಿ ರಂಗಪ್ರಯೋಗದ ಉದ್ದಕ್ಕೂ ಗೆದ್ದಿದ್ದಾಳೆ. ಅನುಭವಿ ರಂಗನಟರಾದ ಮಾರುತಿಶೆಟ್ಟಿ ಮತ್ತು ರಘು ಮುಧೋಳ ಇಬ್ಬರೂ ಸುಲಲಿತ ಮತ್ತು ಸಹನೀಯ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ. ಎಲ್ಲೂ ಹೀನಾರ್ಥಗಳಿಗೆ ಅವಕಾಶವಿಲ್ಲ.
ಹಳ್ಳಿಯ ಶೋಕಿಲಾಲ ಭರಮಗೌಡನದು ವಿಷಯ ಲೋಲುಪತೆಯ ಕ್ಯಾರೆಕ್ಟರ್. ಸತಿ ಸಾದ್ವಿ ರೈತಪತ್ನಿಯ ಮೇಲೆ ಆತ ಕಣ್ಣು ಹಾಕುವುದು. ನಿರೀಕ್ಷೆಯಂತೆ ಬಲತ್ಕಾರದ ಯತ್ನ. ಅಷ್ಟೇ ನಿರೀಕ್ಷಿತ ಎಂಬಂತೆ ಅವಳಿಂದ ಪ್ರಬಲ ಪ್ರತಿಭಟನೆ. ಈ ಸನ್ನಿವೇಶವನ್ನು ಕಲಾವಿದೆ ಅನ್ನಪೂರ್ಣ ಸಮರ್ಥವಾಗಿ ನಿಭಾಯಿಸಿದ್ದಾರೆ. ಗೌಡನ ಆಯಕಟ್ಟಿನ ಜಾಗಕ್ಕೆ ಆಕೆ ಎಗರಿ ಒದೆಯುವುದು. ಅದಕ್ಕೆ ಅವನು ಕುಸಿದು ಬಿದ್ದು ನಗೆಪಾಟಲಾಗುವುದು. ಮತ್ತೊಂದೆಡೆ ಗೌಡ ಹೆಣ್ಣೊಂದರ ಜತೆ ತನ್ನ ತಲಬು ತೀರಿಸಿಕೊಳ್ಳುವಿಕೆ. ಮಿಲನ ಮುನ್ನದಂತಹ ಕಡುಮೋಹಕ ಮದನ ಗೀತೆಯ ಜೋಡಿನೃತ್ಯ ಗಂಭೀರ ರಂಜನೆ ನೀಡುತ್ತದೆ. ಜತೆ ಜತೆಗೆ ಅದು ಕುತಂತ್ರ ಸಿದ್ಧತೆಯ ಮುನ್ನುಡಿ ಒದಗಿಸುತ್ತದೆ. ಊಹೆಯಂತೆ ವಿಷಪ್ರಾಶನ ಸನ್ನಿವೇಶ.
ಇದು ವೃತ್ತಿ ರಂಗನಾಟಕಗಳ ಚರ್ವಿತ ಚರ್ವಣ ತಂತ್ರವೇ ಆದರೂ ರಂಗಸಾಂದ್ರತೆಯ ಪ್ರಮುಖ ತಿರುವು. ಭರಮಗೌಡನಾಗಿ ರಂಗಾಯಣದ ರವಿ ಬಿಸಲಹಳ್ಳಿ ತನ್ನ ಅಮೋಘ ಅಭಿನಯದ ಮೂಲಕ ವೃತ್ತಿರಂಗ ಪರಂಪರೆ ಮೆರೆದಿದ್ದಾನೆ. ರೈತ ಮತ್ತು ಆತನ ಪತ್ನಿ ಗೌರಿ ಪಾತ್ರಗಳು ಜೀವತುಂಬಿ ತುಳುಕಿಸಿವೆ. ಇಂತಹ ಇನ್ನೂ ಕೆಲವು ಸಂಗತಿಗಳನ್ನು ಉಲ್ಲೇಖಿಸಬಹುದು. ಅಂತಿಮದಲ್ಲಿ ಸುಖಾಂತ್ಯ. ಎಂದಿನಂತೆ ಸಿನೆಮಾ ಹಾಡು, ಕಾಮೆಡಿಗಳದ್ದೇ ಮೇಲೋಗರ. ಇವುಗಳ ಅಬ್ಬರದ ನಡುವೆಯೂ ''ಮೂಕನಾಗ ಬೇಕು ಜಗದೊಳು ಜ್ವಾಕ್ಯಾಗಿರಬೇಕು'' ಹೀಗೆ ಒಂದೆರಡು ತತ್ವಪದಗಳ ಪಲ್ಲವಿಗಳು ಕಾಲೋಚಿತ ಖುಷಿ ಒದಗಿಸುತ್ತವೆ. ವರ್ತಮಾನದ ವೃತ್ತಿ ನಾಟಕಗಳಿಗೆ ದೊರಕಬಹುದಾದ ಧ್ವನಿ, ಬೆಳಕಿನ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತವು ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯಸಂಘದ ರೈತ ಮನೆತನಕ್ಕೂ ದಕ್ಕಿದೆ.
- ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು:
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.