ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು

Date: 10-05-2023

Location: ಬೆಂಗಳೂರು


“ಸಾರ್ವತ್ರಿಕ ಚುನಾವಣೆಗಳ ಈ ಭರಾಟೆಯಲ್ಲಿ ಮೇಲಿನ ನಿದರ್ಶನವನ್ನು ಅಕ್ಷರಶಃ ದಿಕ್ಸೂಚಿ ದೃಷ್ಟಾಂತವಾಗಿ ನೋಡಬೇಕಾಗಿದೆ. ಬಹುತೇಕ ಕಡೆ ಅತೃಪ್ತರಿಂದ ಬಂಡಾಯ, ಪಕ್ಷೇತರ ಇತರೆ ಸ್ಪರ್ಧೆಗಳು. ಹಾಗೆ ಸ್ಪರ್ಧೆಯಲ್ಲಿದ್ದ ಕೆಲವರು ಕಣದಿಂದ ನಿವೃತ್ತಿ ಹೊಂದುವ, ಇಲ್ಲವೇ ನಾಮಕಾ ವಾಸ್ತೆ ಇದ್ದು ಬಿಡುವ ಇತ್ಯಾದಿ ಸಂಗತಿಗಳನ್ನು ಕೇಳುತ್ತಲೇ ಇರುತ್ತೇವೆ,” ಎನ್ನುತ್ತಾರೆ ಅಂಕಣಕಾರ, ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, “ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು ಕುರಿತು ಲೇಖನವನ್ನು ಬರೆದಿದ್ದಾರೆ.

ನನಗೆ ಚಿರಪರಿಚಿತರಾಗಿದ್ದ ಪ್ರಬುದ್ಧ ರಾಜಕಾರಣಿಯೊಬ್ಬರ ಇಬ್ಬರು ಹೆಣ್ಣುಮಕ್ಕಳು ಕಳೆದ ಕೆಲವು ವರ್ಷಗಳಿಂದ ವಿಧಾನಸಭಾ ಕ್ಷೇತ್ರವೊಂದರ ನಿಕಟವಾದ ಜನಸಂಪರ್ಕ ಹೊಂದಿದ್ದರು. ಅದೆಷ್ಟು ಪ್ರೀತಿ ಸಂಪರ್ಕ ಅಂತ ಕೇಳಿದರೆ ಆ ಕ್ಷೇತ್ರದ ಯಾವುದೇ ಸಣ್ಣ ಸಣ್ಣ ತಾಂಡಾ, ಹಟ್ಟಿಗಳಲ್ಲಿ ಜರುಗುವ ಜಾತ್ರೆ, ಸಣ್ಣಪುಟ್ಟ ಸಾಂಸ್ಕೃತಿಕ ಸಮಾರಂಭ ಸೇರಿದಂತೆ ತೊಟ್ಟಿಲು, ಮದುವೆಗಳಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಸಹಿತ ತಪ್ಪದೇ ಭಾಗವಹಿಸುತ್ತಿದ್ದರು. ಕ್ಷೇತ್ರದ ಯಾವುದೇ ಹಳ್ಳಿಯಲ್ಲಿ ಯಾರಾದರೂ ನಿಧನರಾದರೆ ಶವಸಂಸ್ಕಾರಗಳಲ್ಲಿ ಮರೆಯದೇ ಭಾಗವಹಿಸುವುದು. ಹೀಗೆ ಅವರ ಒಡನಾಟ ಸಂಪೂರ್ಣವಾಗಿ ಆ ಕ್ಷೇತ್ರದ ಉಸಿರಾಟದಂತೆ ತಾದಾತ್ಮ್ಯಗೊಳಿಸಿ ಕೊಂಡಿದ್ದರು.

ಅಷ್ಟಕ್ಕೂ ಅವರ ತಂದೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದವರು. ಅಷ್ಟು ಮಾತ್ರವಲ್ಲ ಮುಖ್ಯಮಂತ್ರಿ ಪದವಿಯ ಹತ್ತಿರಕ್ಕೆ ಹೋಗಿ ಬಂದವರಾಗಿದ್ದರು. ಹೀಗಾಗಿ ಅವರ ಮಕ್ಕಳ ಈ ಜನಸಂಪರ್ಕ ಸಂಬಂಧಗಳಿಗೆ ಸಂಬಂಧಿತ ಅಲ್ಲಿನ ವಿಧಾನಸಭಾ ಕ್ಷೇತ್ರದ ತುಂಬೆಲ್ಲಾ ಸಾರ್ವಜನಿಕವಾಗಿ ಸಹಜವಾದ ಮಹತ್ವ ಗಳಿಸಿಕೊಂಡಿತ್ತು. ಹಾಗೊಂದು ವೇಳೆ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದರೆ ಅವರು ಖಂಡಿತಾ ಗೆದ್ದು ಬರುವಷ್ಟು ಜನಸಂಪರ್ಕ ಹೊಂದಿದ್ದರು. ಅದನ್ನು ಖುದ್ದು ಜನಗಳೇ ಖುಲ್ಲಂ ಖುಲ್ಲಾ ಮಾತಾಡಿಕೊಳ್ಳುತ್ತಿದ್ದರು. ಹೌದು ಅವರು ತಮ್ಮ ತಂದೆ ಮತ್ತು ಸೋದರನ ನಿರ್ಗಮನದ ನಂತರ ಅಂತಹದ್ದೊಂದು ಅವಕಾಶಕ್ಕಾಗಿ ವರುಷಗಟ್ಟಲೇ ಇಷ್ಟೆಲ್ಲ ಕಷ್ಟ ಪಡುತ್ತಿದ್ದಾರೆ. ಅವರಿಗೆ ಒಳ್ಳೆಯ ಅವಕಾಶಗಳು ಸಿಗಬೇಕು. ಹಾಗಂತ ಕ್ಷೇತ್ರದ ಜನರೇ ಮುಕ್ತವಾಗಿ ಮಾತಾಡಿಕೊಳ್ಳುತ್ತಿದ್ದುದು ಕೂಡಾ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದುದನು ಗಮನಿಸಿದ್ದೇನೆ.

ದೂರದ ಬೆಂಗಳೂರಿನಲ್ಲೇ ಅವರು ವಾಸವಿದ್ದರೂ ತಮ್ಮ ಜಿಲ್ಲೆಯ ಆ ವಿಧಾನಸಭಾ ಕ್ಷೇತ್ರದ ದಿವಿನಾದ ಒಡನಾಟ ಅವರದಾಗಿತ್ತು. ಕ್ಷೇತ್ರದಲ್ಲೊಂದು ಜನಸಂಪರ್ಕ ಕಚೇರಿಯನ್ನೇ ಸ್ಥಾಪಿಸಿದ್ದರು. ಹೀಗೆ ನಿರಂತರ ಜನಸಂಪರ್ಕಕ್ಕಾಗಿ ಲೆಕ್ಕವಿಲ್ಲದಷ್ಟು ಹಣದ ಖರ್ಚು. ಅವರದು ಜನಸ್ಪಂದನದ ಕ್ರಿಯಾಶೀಲ ಸಾಮಾಜಿಕ ಚಟುವಟಿಕೆ. ಸೋಜಿಗವೆಂದರೆ ಇಂತಹ ಅಪಾರ ಜನಸಂಪರ್ಕ ಹೊಂದಿದ್ದ ಅವರಿಗೆ ಅವರಪಕ್ಷ ಇಬ್ಬರಲ್ಲಿ ಒಬ್ಬರಿಗಾದರೂ ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಲಿಲ್ಲ. ಹಾಗಂತ ಅವರೇನು 'ಕೈ' ಕಟ್ಟಿ ಕೂಡಲಿಲ್ಲ. ಹಿರಿಯ ಸೋದರಿ ಸೆಡ್ಡು ಹೊಡೆದಂತೆ ಬಂಡಾಯದ ಅಭ್ಯರ್ಥಿಯಾಗಿ ಬಾವುಟ ಹಾರಿಸಿದರು. ಕಲ್ಯಾಣ ಕರ್ನಾಟಕಕ್ಕೆ ಸೇರಿದ ಈ ವಿಧಾನಸಭಾ ಕ್ಷೇತ್ರದಿಂದ ಈ ಮಹಿಳೆ ಗೆದ್ದರೆ ಅಚ್ಚರಿಯೇನಿಲ್ಲ. ಅದು ಅವರ ಆ ಕ್ಷೇತ್ರದ ಜನರ ಸಂಪ್ರಭುತ್ವ ಮತ್ತು ಸಹಸ್ಪಂದನದ ನಿರೀಕ್ಷೆಯು ಹೌದು.

ಸಾರ್ವತ್ರಿಕ ಚುನಾವಣೆಗಳ ಈ ಭರಾಟೆಯಲ್ಲಿ ಮೇಲಿನ ನಿದರ್ಶನವನ್ನು ಅಕ್ಷರಶಃ ದಿಕ್ಸೂಚಿ ದೃಷ್ಟಾಂತವಾಗಿ ನೋಡ ಬೇಕಾಗಿದೆ. ಬಹುತೇಕ ಕಡೆ ಅತೃಪ್ತರಿಂದ ಬಂಡಾಯ, ಪಕ್ಷೇತರ ಇತರೆ ಸ್ಪರ್ಧೆಗಳು. ಹಾಗೆ ಸ್ಪರ್ಧೆಯಲ್ಲಿದ್ದ ಕೆಲವರು ಕಣದಿಂದ ನಿವೃತ್ತಿ ಹೊಂದುವ, ಇಲ್ಲವೇ ನಾಮಕಾ ವಾಸ್ತೆ ಇದ್ದು ಬಿಡುವ ಇತ್ಯಾದಿ ಸಂಗತಿಗಳನ್ನು ಕೇಳುತ್ತಲೇ ಇರುತ್ತೇವೆ. ಒಟ್ಟಿನಲ್ಲಿ ಚುನಾವಣೆ ವ್ಯವಸ್ಥೆ ಹಲವು ರೋಚಕ ಪ್ರಸಂಗಗಳ ಸುದ್ದಿಭಂಡಾರ. ಕೆಲವು ಮಂದಿ ಪ್ರವೇಶಾರ್ಥಿಗಳಿಗೆ ಹೊಸದಾಗಿ ಚುನಾವಣೆಗೆ ಸ್ಪರ್ಧಿಸಲು ಇದೆಲ್ಲ ಕ್ಷೇತ್ರಸಾಂಗತ್ಯ ಅಗತ್ಯದ ಸಿದ್ಧತೆಗಳೇ ಆಗಿರಬಲ್ಲವು.

ಚುನಾವಣೆಗಳ ಪೂರ್ವಸಿದ್ಧತೆಗಳು ಕ್ಷೇತ್ರದ ಜನಗಳ ಉದ್ಧಾರ ಇಲ್ಲವೇ ಜನಗಳ ಮೇಲಿನ ವಾಸ್ತವ್ಯದ ಹೃತ್ಪೂರ್ವಕ ಪ್ರೀತಿ, ಅಪ್ಪಟ ಕಳಕಳಿ, ಜನಪರ ಸಂವೇದನೆ ಇತ್ಯಾದಿಗಳೆಂದು ಕಟ್ಟುನಿಟ್ಟಾಗಿ ಭಾವಿಸಬಾರದು. ಅದೇನಿದ್ದರೂ 'ಹೇಗಾದರೂ ಮಾಡಿ' ಗೆಲ್ಲುವ, ಅಧಿಕಾರದ ಚುಕ್ಕಾಣಿ ಹಿಡಿಯುವ ತಂತ್ರ. ಅದು ಈಗೀಗ ಉದ್ಯಮವೇ ಆಗಿದೆ. ಹಾಗಿರುವಾಗ ಪ್ರಜಾಪ್ರಭುತ್ವದ ಸೌಂದರ್ಯ, ಜನಪರ ಚಿಂತನೆ, ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬಗಳೆಂದು ಕರೆದು ಸಂಭ್ರಮಿಸುವಲ್ಲಿ ಅರ್ಥಗಳನ್ನು ಹುಡುಕುವುದು ಹೇಗೆಸಾಧ್ಯ.?

ಗೆಲುವಿಗಾಗಿ ಅಭ್ಯರ್ಥಿ ಮತ್ತು ಪಕ್ಷಗಳು ಕಂಡುಕೊಂಡಿರುವ ಮಾರ್ಗಗಳು ತರಹೇವಾರಿ. ಕಂಡಕಂಡವರ ಕಾಲು ಹಿಡಿಯುವ, ಕೈ ಮುಗಿದು ಮತಯಾಚಿಸುವ ರೀತಿಗಳೇ ರೋಚಕ. ಚುನಾವಣೆ ಮಾಡುವಲ್ಲಿ ಕೆಲವರಂತು ಅಗಾಧ ಪ್ರಮಾಣದ ಪರಿಣತಿಯನ್ನೇ ಹೊಂದಿರುತ್ತಾರೆ. ಮನೆ ಮನೆ, ಓಣಿ ಓಣಿ ತಿರುಗಿ ಮತಬೇಟೆಯಾಡುವ ತಜ್ಞ ಬೇಟೆಗಾರರೇ ಆಗಿರಬಲ್ಲರು. ಹಾಗೆಯೇ ಸಾಹಿತಿ, ಸಿನೆಮಾ ಸೆಲೆಬ್ರಿಟಿ ನಟ, ನಟಿಯರ ರೋಡ್ ಶೋಗಳು, ಗ್ಯಾರಂಟಿಗಳೆಲ್ಲ ಜನರ ವಿಶ್ವಾಸ ಕಳೆದುಕೊಂಡ ಅವು ನನಗೆ ಮುಖವಾಡದ ಪ್ರಣಾಳಿಕೆಗಳಂತೆ ಗೋಚರವಾಗುತ್ತಲಿವೆ. ಆದರೆ ಈ ಪ್ರಚಾರಗಳಿಂದ ದೊರಕುವ ಬಾಹುಳ್ಯಗಳದ್ದೇ ಹೆಚ್ಚು ಜನಪ್ರಿಯ ನಡೆ. ತಾರಾಮೌಲ್ಯದ ಹೆಸರಿನಷ್ಟೇ ಪ್ರಸಿದ್ದಿ ಪಡೆದಿರುವ ರಾಜಕಾರಣಿ ಸೆಲೆಬ್ರಿಟಿಗಳದ್ದೂ ಮತ್ತೊಂದು ಪ್ರಚಾರ ವೈಖರಿಯ ಪಾರಮ್ಯ.

ಸಿದ್ಧರಾಮಯ್ಯ ಅವರಂತಹ ಕೆಲವು ರಾಜಕಾರಣಿಗಳಿಗೆ ಸಿನೆಮಾ ತಾರೆಗಳಿಗಿಂತ ಹೆಚ್ಚು ಬೇಡಿಕೆ. ಅನೇಕರಿಗೆ ಅವರ ಭಾಷಣಗಳನ್ನು ಕೇಳುವುದೇ ಭಯಂಕರ ಹುಚ್ಚು. ಅವರ ಭಾಷಣಗಳಿಗೆ "ಹೌದ್ದ ಹುಲಿಯಾ" ಎಂಬ ಪ್ರತಿಕ್ರಿಯೆಗಳ ಸುರಿಮಳೆ. ವಚನ, ವ್ಯಂಗ್ಯೋಕ್ತಿಗಳ ಸಿ. ಎಂ. ಇಬ್ರಾಹಿಂ ಭಾಷಣಕ್ಕೆ ಬಹಳೇ ಬೇಡಿಕೆ. ಇನ್ನು ಕನ್ನಡ ಬಾರದ ಸೆಲೆಬ್ರಿಟಿಗಳಿಂದ ಕನ್ನಡದಲ್ಲೇ ಭಾಷಣ ಆರಂಭಿಸುವ ಬಹಳ 'ದೊಡ್ಡಹವಾ' ನಿರ್ಮಾಣಗೊಂಡಿದೆ. ಅವರ ನಾಲಗೆಯಿಂದ ಉದುರುವ ಮುದ್ದು ಮುದ್ದಾದ ಮತ್ತು ಪೆದ್ದು ಪೆದ್ದಾದ ಕಾನ್ವೆಂಟ್ ಕನ್ನಡ ಪದಗಳನ್ನು ಕೇಳಿ ಪುಳಕಗೊಳ್ಳುವವರಿಗೇನು ಕೊರತೆ ಇರುವುದಿಲ್ಲ. ಇನ್ನು ಮೋದಿಯವರ ಕನ್ನಡ ಕೇಳುವುದೇ ಖಂಡುಗ ಖುಷಿ. ಈ ಬಾರಿಯ ನಿರ್ಧಾರ ಬಹುಮತದ ಬೀಜೇಪಿ ಸರಕಾರ ಎಂದು ಮೋದಿ, ಉತ್ತರದ ದೇಸಿಯಂಥ ಭೋಜಪುರಿ ರಾಗದಲ್ಲಿ ಘೋಷವಾಕ್ಯ ಉಚ್ಛರಿಸುವುದೇ ಉಮೇದಕಾರಿ.

ಚುನಾವಣೆಗಳಲ್ಲಿ ಈಗೀಗ ಹೆಚ್ಚು ಪ್ರಮಾಣದಲ್ಲಿ ಟ್ರಂಪ್ ಕಾರ್ಡ್ ತರಹ ಬಳಕೆಯಾಗುವ ಮತ್ತೊಂದು ಸಂಗತಿಯೆಂದರೆ ಕೊವಿಡ್ ಕಾಲದಲ್ಲಿ ಜನರ ನೆರವಿಗಾಗಿ 'ಹೋರಾಟ ಮಾಡಿದವರೆಂಬ' ಪ್ರಖರ ಟ್ರೆಂಡೇ ಕ್ರಿಯೇಟ್ ಆಗಿದೆ. ಅದ್ಯಾವ ಪರಿಯೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತೆತ್ತ ಹುತಾತ್ಮರ ಸ್ವರದಲ್ಲಿ ಅದು ಸದ್ದು ಮಾಡುತ್ತಲಿದೆ. ಇನ್ನು ಈ ಬಾರಿ ಫಾರ್ಟಿ ಪರ್ಸೆಂಟ್ ಭ್ರಷ್ಟಾಚಾರ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ. ಇವುಗಳನ್ನು ಮೀರಿಸುವಂತೆ ಜಾತಿ, ಮತ, ಧರ್ಮಗಳ ಬಳಕೆ. ವಯಕ್ತಿಕ ನಿಂದನೆಯ ವಿಕಾರದ ಬೈಗುಳಗಳಿಗೇನು ಪ್ರಚಾರದ ಕಣದಲ್ಲಿ ಕೊರತೆ ಇರಲಿಲ್ಲ.

ಎಲೆಕ್ಷನ್ ಕಾಲದಲ್ಲಿ ದೃಶ್ಯ ಮಾಧ್ಯಮಗಳಿಗೆ ಅದರಲ್ಲೂ ಖಾಸಗಿ ಛಾನಲ್ಲುಗಳ ಸಂಪಾದಕ/ಮುಖ್ಯಸ್ಥ ಮಹಾಶಯರಿಂದ ಸಂದರ್ಶನ. ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಅಧಿಕಾರಸ್ಥ ನಾಯಕರೊಂದಿಗೆ ಹೆಲಿಕಾಪ್ಟರ್, ಇಲ್ಲವೇ ವಿಮಾನ ಪ್ರಯಾಣ ಕಾಲದ ಮಾತುಕತೆಗಳ ಆಟಾಟೋಪಗಳು. ಹೀಗೆ ಮಾಧ್ಯಮಗಳು ಆಕಾಶದಲ್ಲಿ ಓಲಾಡುತ್ತವೆ. ಮತ್ತು ಹಾಗೆ ಓಲಾಡುತ್ತಾ ಕೋಟು ಹಾಕೊಂಡ ಛಾನಲ್ ಮುಖ್ಯಸ್ಥ ಮಹಾಶಯರು ಎಲ್ಲವೂ ತಮ್ಮ ನಿಯಂತ್ರಣದ ಹಕ್ಕು ಎಂಬಂತೆ ಬೋಂಗು ಬಿಡುವುದನ್ನು ನೋಡುವುದೇ ಮೋಜು. ಇವರನ್ನು ನಿಯಂತ್ರಣ ಮಾಡುವುದು ಸಾಧ್ಯವೇ ಇಲ್ಲವೆಂಬ ಸ್ಥಿತಿ ನಿರ್ಮಾಣ ಆಗಿರುವುದು ಮಾತ್ರ ಖರೇ. ಮಾಧ್ಯಮಗಳು ಪಕ್ಷಗಳ ಪರವಾಗಿರುವುದೇ ಅಧಿಕ. ಆದರೆ ಅವು ಜನಪರ ಎಂಬ ಮುಖವಾಡ ಧರಿಸಿರುತ್ತವೆ. ಅಷ್ಟಕ್ಕೂ ಇದುವರೆಗೆ ರಾಜಕೀಯ ಪಕ್ಷಗಳೇ ಅಧಿಕಾರಕ್ಕೆ ಬಂದಿವೆ. ಜನಸರ್ಕಾರಗಳು ಬಂದಿಲ್ಲ.

ಈ ಬಾರಿಯಂತೂ ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ರಾಷ್ಟ್ರಮಟ್ಟದ ಟೀವಿ ಛಾನಲ್ ಕ್ಯಾಮೆರಾಗಳು ದಾಳಿ ಮಾಡಿವೆ. ಹಳ್ಳಿ ಹಳ್ಳಿಗಳ ತುಂಬಾ ಡಿಜಿಟಲ್ ಸುದ್ದಿ ಮಾಧ್ಯಮಗಳ ಪ್ರವೇಶ. ಅದರಲ್ಲೂ ಪ್ರಿಯಾಂಕ್ ಖರ್ಗೆ ಕ್ಷೇತ್ರ, ವರುಣಾ, ಹುಬ್ಬಳ್ಳಿ ಸೆಂಟ್ರಲ್, ಅಥಣಿ ಕ್ಷೇತ್ರದ ಹಳ್ಳಿಗಳ ತುಂಬೆಲ್ಲಾ ಟಿವಿ ಕ್ಯಾಮೆರಾಗಳು ಠಿಕಾಣಿ ಹೂಡಿವೆ. ಮೊಬೈಲ್ ಪ್ರಣೀತ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಚುನಾವಣೆ ಸುದ್ದಿಗಳದ್ದೇ ಗೌಜು ಗದ್ದಲ. ಮೊಬೈಲ್ ಮೂಲಕವೇ ಜನರಿಂದ ಆಡಳಿತ ವಿರೋಧಿ ಅಲೆಯ ಪುಂಖಾನುಪುಂಖ ಪ್ರತಿಕ್ರಿಯೆಗಳ ಮಹಾಪೂರ. ಅದರಲ್ಲೂ ಯುವತಿಯರು ಮತ್ತು ಮಹಿಳೆಯರು ಪ್ರತಿಕ್ರಿಯೆ ತೋರುವಲ್ಲಿ ಮುಂಚೂಣಿಯಲ್ಲಿರುವುದು ಮಹಾವಿಶೇಷ.

ಮಾಧ್ಯಮಗಳ ಮತ್ತಿತರೆ ಬಗೆಯ ಸಂವಹನ, ಸಂಪರ್ಕಗಳಿಗೆ ಸ್ಪಂದಿಸುವ ವ್ಯವಸ್ಥೆ. ಸರ್ಕಾರಿ ಸೌಲಭ್ಯದ ನೌಕರರನ್ನೇ ಹೊಂದಿರುವ ಅಧಿಕಾರಸ್ಥ ಅವಕಾಶವಾದಿಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕಿದೆ. ಮತ್ತೊಂದೆಡೆ ಆಯಾ ರಾಜಕೀಯ ಪಕ್ಷಗಳ ಮೂಗಿನ ನೇರದ ಅವೈಜ್ಞಾನಿಕ ಸಮೀಕ್ಷೆಗಳ ಅವಾಂತರ. ಸರಕಾರ ಇಂತಹ ಅವೈಜ್ಞಾನಿಕ ಸಮೀಕ್ಷೆಗಳನ್ನು ಬ್ಯಾನ್ ಮಾಡುವುದು ಒಳಿತು. ಅದೇನೇ ಇರಲಿ ಹೊಸದಾಗಿ ರಾಜಕಾರಣಕ್ಕೆ ಪ್ರವೇಶಿಸುವವರಿಗೆ ಇದೆಲ್ಲ ಬೆಳವಣಿಗೆಗಳು ಪಾಠವಾಗಬೇಕಿದೆ.

ಕೋಟಿ, ಕೋಟಿ ಲೆಕ್ಕರಹಿತ ಹಣದ ಮೂಟೆಗಳನ್ನು ತಲಾಷ್ ಮಾಡುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದುತ್ತೇವೆ. ಆದರೆ ಕಡೆಯ ಕ್ಷಣದ ಕತಲ್ರಾತ್ರಿಗಳಲ್ಲಿ ಮತದಾರರಿಗೆ ಹಂಚುವ ಹಣವನ್ನು ತಡೆಗಟ್ಟಲು ಇದುವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಅದಕ್ಕೆ ವಯಕ್ತಿಕ ನೆಲೆಯಲ್ಲಿ ಮತದಾರ ಪ್ರಭುವೇ ಆಮಿಷಕ್ಕೆ ಧಿಕ್ಕಾರ ಹೇಳಿ ಮನಸಾಕ್ಷಿಯಾಗಿ ಮತದಾನ ಮಾಡಬೇಕಿದೆ. ಬೆಂಗಳೂರು ನಗರದ ಓರ್ವ ಚುನಾವಣಾ ಪರಿಣಿತರು ಹೇಳಿದ ಮಾತು ನನಗೆ ಗಾಬರಿ ಹುಟ್ಟಿಸಿತು. ಅದೇನೆಂದರೆ: ಬೆಂಗಳೂರಿನ ಒಂದೊಂದು ಮೀಸಲು ಕ್ಷೇತ್ರಗಳಲ್ಲೇ ನೂರು ಕೋಟಿವರೆಗೂ ವಹಿವಾಟು ನಡೆಯುತ್ತದೆಯಂತೆ. ಹಾಗಿದ್ದರೆ ಜನರಲ್ ಕ್ಷೇತ್ರಗಳ ವಹಿವಾಟು ಎಷ್ಟಿರಬಹುದು.!?ಇದು ಪಕ್ಷಾತೀತವಾಗಿ ಮತ್ತು ಹೈ ವೋಲ್ಟೇಜ್ ಕ್ಷೇತ್ರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಜರುಗುವ ವಹಿವಾಟು. ಅಷ್ಟಕ್ಕೂ ಇದೇನು ಯಾರೂ ಅರಿಯದ ಹೊಸ ವಿಷಯವೇನಲ್ಲ. ಪ್ರಾಯಶಃ ಇದುವರೆಗೆ ಹಣ ಹೆಂಡ ಹಂಚಿಕೆಯಾಗದ ಒಂದು ಕ್ಷೇತ್ರವೂ ಸಿಗಲಿಕ್ಕಿಲ್ಲ.!?

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...

ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...

25-12-2024 ಬೆಂಗಳೂರು

"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...