ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ

Date: 27-05-2023

Location: ಬೆಂಗಳೂರು


“ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಬಹುಪಾಲು ಸಾಂಸ್ಕೃತಿಕ ಸಂಸ್ಥೆಗಳು ಬೆಂಗಳೂರಲ್ಲೇ ಠಿಕಾಣಿ ಹೂಡಿಕೊಂಡಿವೆ. ಉರ್ದು ಎಂಬುದು ಮುಸ್ಲಿಮರ ಮಾತೃಭಾಷೆ ಎಂಬ ತಪ್ಪು ಗ್ರಹಿಕೆ ಕೆಲವರದು. ಹೀಗೆ ಕೆಲವು ಸಂಕೀರ್ಣ ಸಂಗತಿಗಳ ನಡುವೆ ಅದು ಹಿಂದೂ ಮುಸ್ಲಿಂ ಎನ್ನದೇ ಎಲ್ಲರ ಮನೆಮಾತಿನಂತಹ ಸಂವಹನದ ಭಾಷೆ,” ಎನ್ನುತ್ತಾರೆ ಅಂಕಣಕಾರ, ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, “ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ” ಕುರಿತು ಲೇಖನವನ್ನು ಬರೆದಿದ್ದಾರೆ.

ಸಿದ್ಧರಾಮಯ್ಯ ಎಂಬ ಹೆಸರಿನ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ... ಎಂಬ ಪ್ರಮಾಣ ವಚನ ಸ್ವೀಕಾರದ ಮಾತುಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂ ಪ್ರಾಂಗಣದಲ್ಲಿ ಕೇಳಿ ಬರುತ್ತಿದ್ದವು. ಹಾಗೆ ಕೇಳಿಸಿಕೊಳ್ಳುತ್ತಿದ್ದಂತೆ ಕೆಲವು ಅವಕಾಶವಾದಿ ಸಾಂಸ್ಕೃತಿಕ ಸೋಗಲಾಡಿಗಳ ಕಣ್ಣು, ಕಿವಿ, ಕಾಲುಗಳಲ್ಲಿ ನಿಮಿರುವಿಕೆಯ ಸಂಚಲನ. ಅದರಲ್ಲೂ ಮುಖ್ಯವಾಗಿ ಬೆಂಗಳೂರು ಕೇಂದ್ರಿತ ಕೆಲವು ಲಾಬಿಕೋರರು ಸಾಂಸ್ಕೃತಿಕ ಲೋಕದ ಆಯಕಟ್ಟಿನ ಜಾಗೆಗಳಿಗೆ ಅಮರಿಕೊಳ್ಳಲು ಆಗಲೇ ಬಗೆ ಬಗೆಯ ಸಿದ್ಧತೆಗಳಿಗೆ ತಯಾರಾಗುತ್ತಿದ್ದಾರೆ.

ಕುಚೋದ್ಯವೆಂದರೆ ಇಂತಹ ಸಿದ್ದತೆಯಲ್ಲಿ ಈ ಹಿಂದಿನ ಬಲಪಂಥೀಯ ಸರಕಾರದೊಂದಿಗೆ ಸುಮಧುರ ಬಾಂಧವ್ಯ ಹೊಂದಿ ಮತ್ತು ಸಾಂಸ್ಕೃತಿಕ ಜಗತ್ತಿನ ಯಥೇಚ್ಛ ಅವಕಾಶಗಳನ್ನು ಗಿಟ್ಟಿಸಿಕೊಂಡವರೂ ಇದ್ದಾರೆ. ಅಂಥವರು ಸಹ ಈ ಸರಕಾರದಲ್ಲೂ ಅವಕಾಶಗಳನ್ನು ಹುಡುಕಿಕೊಳ್ಳುವ, ಇಲ್ಲವೇ ಹೊಡಕೊಳ್ಳುವ ಒಳಹುನ್ನಾರದ ಹೊಂಚು ಹಾಕುತ್ತಿದ್ದಾರೆ. ಇವರು ಯಾವುದೇ ಸೈದ್ಧಾಂತಿಕ ನೆಲೆಗಟ್ಟಿಲ್ಲದ ಭಟ್ಟಂಗಿ ಕಾಯಕದ ಅವಕಾಶವಾದಿ ದಂಧೆಕೋರರು. ಇಂತಹ ಸೋಗಲಾಡಿಗಳು ವಿಧಾನಸೌಧದ ಮೂರನೇ ಮಹಡಿಯ ಅಧಿಕಾರ ಶಕ್ತಿಕೇಂದ್ರದ ಸುತ್ತಲೂ ಪೈರವಿ ಹಾಕುತ್ತಿರುತ್ತಾರೆ. ವಿಧಾನಸೌಧದ ಉನ್ನತ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳನ್ನು ತಮ್ಮ ಮಾಯಾಬುಟ್ಟಿಗೆ ಸೆಳೆದುಕೊಳ್ಳುವ ಇವರು ಸಕಲ ಕಲಾ ವಲ್ಲಭರು.

ಮತ್ತೆ ಕೆಲವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಯಾರಾಗ ಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಅಷ್ಟಕ್ಕೂ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿ ಪದವಿ ಎಂಬುದು ಯಾರಿಗೂ ಬೇಡವಾದುದು. ಯಾರೊಬ್ಬರೂ ಇದುವರೆಗೆ ಈ ಇಲಾಖೆಯೇ ಬೇಕೆಂದು ಹಟ ಹಿಡಿದು ಪಡೆದ ನಿದರ್ಶನಗಳಿಲ್ಲ. ಯಾವತ್ತೋ ಒಂದು ಬಾರಿ ಕೆ. ಎಚ್. ಶ್ರೀನಿವಾಸ ಅಂಥವರು ಪ್ರೀತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಪದವಿ ಪಡೆದ ಉದಾಹರಣೆಗಳಿವೆಯಷ್ಟೇ. ಅದೊತ್ತಟ್ಟಿಗಿರಲಿ ಮತ್ತೆ ಕೆಲವರದು ಈ ಇಲಾಖೆಯ ಮಂತ್ರಿ ನಮಗದ್ಯಾವ ಲೆಕ್ಕ? ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳೇ ನಮಗೆ ತುಂಬಾ ಬೇಕಾದವರು ಎಂಬ ಒಳಮುಸುಗು ಪ್ರಭಾವದ ಪಾರಮ್ಯ ಹೊಂದಿದವರು. ಇನ್ನೂ ಕೆಲವರ ಆಲೋಚನೆಗಳು ಬಹಳೇ ವಿಭಿನ್ನ. ಯಾವುದೇ ಪಕ್ಷದ ಸರಕಾರ ಬರಲಿ ತಮಗೇನೂ ಚಿಂತೆ ಇಲ್ಲ. ತಮ್ಮ ಕುಲದ ಮಠಾಧೀಶರು ಮತ್ತು ಧರ್ಮಾಧಿಕಾರಿಗಳ ಫರ್ಮಾನಿಗೆ ಎಲ್ಲಾ ಸರಕಾರಗಳ ಸಂದರ್ಭದಲ್ಲಿ ಸೋಲೆಂಬುದು ಇಲ್ಲವೇ ಇಲ್ಲವೆಂಬ ಆತ್ಮವಿಶ್ವಾಸದ ಒಳಉಮೇದು.

ಸರ್ಕಾರಗಳು ಬದಲಾದಾಗೆಲ್ಲ ನಿಗಮ ಮಂಡಳಿ, ಇತರೆ ಸ್ವಾಯತ್ತ ಸಂಸ್ಥೆಗಳಂತೆ ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿ, ಪ್ರತಿಷ್ಠಾನ, ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯ, ನಿರ್ದೇಶಕರ ಬದಲಾವಣೆ ಪ್ರಕ್ರಿಯೆಗಳು ಸಹಜ ಎನ್ನುವಂತಾಗಿ ಬಿಟ್ಟಿದೆ. ಪ್ರೊ. ಬರಗೂರು ರಾಮಚಂದ್ರಪ್ಪ ಅವರ "ಸಾಂಸ್ಕೃತಿಕ ನೀತಿ" ವರದಿ ಪ್ರಕಾರ ಸಾರಸ್ವತ ಲೋಕಕ್ಕೆ ಇದು ಲಾಗೂ ಆಗಬಾರದು. ಸಧ್ಯಕ್ಕೆ ಕಳೆದ ಸರ್ಕಾರದ ಅವಧಿಯಲ್ಲಿ ನೇಮಕಗೊಂಡ ಅಕಾಡೆಮಿ, ಪ್ರತಿಷ್ಠಾನ, ಪ್ರಾಧಿಕಾರಗಳ ಅವಧಿ ಮುಗಿದಂತಿತ್ತು. ಆದರೆ ರಂಗಾಯಣಗಳ ನಿರ್ದೇಶಕರ ಅವಧಿಗಳನ್ನು ಅದೇಕೋ ಸರಕಾರ ಮುಂದೂಡಿತ್ತು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರಿಯಪ್ಪ ರಾಜಿನಾಮೆ ನೀಡಿದ ಮೊದಲಿಗನೆಂಬ ಸುದ್ದಿ ಬಂದಿದೆ.
* * *
ಕಂದಮ್ಮಗಳ ಪಠ್ಯಪುಸ್ತಕಗಳನ್ನು ಒಳಗೊಂಡಂತೆ ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಒಟ್ಟಾರೆ ಸಾಂಸ್ಕೃತಿಕ ಲೋಕದ ತುಂಬಾ ಕೋಮುದ್ವೇಷದ ವಿಷ ಉಣ್ಣಿಸುವ ಹತ್ತು ಹಲವು ನಿದರ್ಶನಗಳು ಮೂರೂವರೆ ವರ್ಷಗಳ ಅವಧಿಯಲ್ಲಿ ಜರುಗಿದ್ದು ವಿದ್ವತ್ ಜಗತ್ತೇ ಬೆಚ್ಚಿ ಬೀಳಿಸುವಂತಾಯಿತು. ಎಳೆಯ ಮಕ್ಕಳ ಮಿದುಳಿಗೆ ಧರ್ಮದ "ಉರಿ - ನಂಜು"ಗಳನ್ನು ಹುರಿದು ಬೆರೆಸುವಂತಾಯಿತು. ಒಂದೆಡೆ ದ್ರಾಬೆ ಮತ್ತು ಜೋಬದ್ರಗೇಡಿತನ, ಮತ್ತೊಂದೆಡೆ ಜಾತಿ ಮತ ಧರ್ಮಗಳ ಕೊಳಕಾಟದಲ್ಲಿ ಸಾಂಸ್ಕೃತಿಕ ವ್ಯವಸ್ಥೆ ಹೊಲಬುಗೆಟ್ಟು ನಲುಗಿ ಹೋಯಿತು. ಇದನ್ನೆಲ್ಲ ವೃತ್ತಿಪರ ರಾಜಕಾರಣಿಗಳಿಗಿಂತ ಪ್ರಗತಿಪರ ಚಿಂತಕರು, ತಮ್ಮ ಮಾತು ಮತ್ತು ಬರಹಗಳ ಮೂಲಕ ಪ್ರಭುತ್ವದ ವಿರುದ್ಧ ಸಮರ ಸಾರಿದರು. ಅನೇಕ ಯುವ ಮನಸುಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿನಿತ್ಯವೂ ಪ್ರತಿರೋಧ ವ್ಯಕ್ತಪಡಿಸಿದವು. ಇವರ ಅಪೂರ್ವ ಹೊಣೆಗಾರಿಕೆಗೆ ನನ್ನದೊಂದು ಸಲಾಂ.

ಹಿಂದಿನ ಸರಕಾರದ ಜೀವವಿರೋಧಿ ಸಾಂಸ್ಕೃತಿಕ ಧೋರಣೆ ವಿರುದ್ಧ ಬೃಹತ್ತಾದ ಪ್ರತಿಭಟನೆಗಳಾದವು. ಪರಿಣಾಮ ಶೋಷಿತ ಸಮುದಾಯಗಳು ಸಂಘಟಿತಗೊಂಡು ಮೊನ್ನೆಯ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದವು. ಮೊನ್ನೆಯದು ಕೇವಲ ಚುನಾವಣೆಯಾಗಿರಲಿಲ್ಲ. ನಿಜಕ್ಕೂ ಜನಸಂಸ್ಕೃತಿಯ ಉಳಿವಿನ ಮತ್ತು ಕೋಮುವಿರೋಧಿ ಯಶಸ್ಸಿನ ಹೋರಾಟವೇ ಅದಾಗಿತ್ತು. ಅಂತೆಯೇ ಅದು ಹಲವು ನಿರೀಕ್ಷೆ ಮತ್ತು ಸವಾಲುಗಳಿಗೆ ದೊರಕಿದ ಜನಶಕ್ತಿಯ ಜಯವೇ ಆಗಿದೆ. ಇಂತಹ ಹೋರಾಟದ ಮುಂಚೂಣಿಗರು ಕಾಂಗ್ರೆಸ್ ಪಕ್ಷದ ಸದಸ್ಯರಲ್ಲದಿರಬಹುದು. ಸಾಮಾನ್ಯವಾಗಿ ಆಳುವಪಕ್ಷವು ಸಾಂಸ್ಕೃತಿಕ ಲೋಕದಿಂದ ದೂರವಿರಿಸುವ ಅದರ ಒಳರಾಜಕೀಯ ನಿಲುವುಗಳು ಪ್ರಶ್ನಾರ್ಹ.

ಅಂತಹ ಹೋರಾಟಗಾರರನ್ನು ರಾಜಕಾರಣದ ಚಾಳೀಸಿನಿಂದ ನೋಡುವುದೇ ಸರಿಯಲ್ಲ. ಅಂಥವರನ್ನು ಕಡೆಗಣ್ಣಿನಿಂದ ಕಾಣದೇ ಸಾಂಸ್ಕೃತಿಕ ಲೋಕದಲ್ಲಿ ಅವರಿಗೆ ತಕ್ಕನಾದ ಸ್ಥಾನಮಾನಗಳು ಸಿಗಬೇಕಿದೆ. ಇದರ ಜತೆಗೆ ರಾಜಕೀಯವಾಗಿ ಉಲ್ಲೇಖನೀಯ ಹೆಸರು ಯುವ ಶಾಸಕ ಪ್ರದೀಪ ಈಶ್ವರ್. ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನದಿಂದಲೇ ಕ್ಷೇತ್ರದ ಜನರ ಮನೆ ಮನೆ ತಿರುಗಿ ಜನರ ನೋವಿಗೆ ಮಿಡಿಯುತ್ತಿರುವ ಪ್ರಾಣಮಿತ್ರ ಪ್ರದೀಪ ಈಶ್ವರ್. ಅಂಥವರು ಶತಮಾನದ ಅಚ್ಚರಿ ಎಂಬಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ದಶಕದಿಂದ ಪ್ರಗತಿಯ ಮಹತ್ಸಾಧನೆ ಮಾಡಿದ್ದಾರೆ. ಪ್ರದೀಪ ಈಶ್ವರ್ ಎಂಬ ಮೆಡಿಕಲ್ ಮೇಷ್ಟ್ರು , ಮೆಡಿಕಲ್ ಮಿನಿಸ್ಟರ್ ಎಂಬ ಭ್ರಷ್ಟಾಚಾರದ ಐರಾವತವನ್ನೇ ಹೊಡೆದು ಸೊಕ್ಕು ಅಡಗಿಸಿರುವುದು ಲೋಕಸತ್ತೆಗೆ ದಕ್ಕಿದ ವಿಜಯೋತ್ಸವ.

ಚಿಕ್ಕಬಳ್ಳಾಪುರದ ಪೆರೇಸಂದ್ರ ಎಂಬ ಹಳ್ಳಿಯ ಇಂತಹ ಉತ್ಸಾಹಿ ಶಾಸಕ ಶಿಕ್ಷಣ ಸಚಿವನಾಗಬೇಕಾದುದು ಅತ್ಯಂತ ಯೋಗ್ಯ ವಿಚಾರ. ಗೊತ್ತಿಲ್ಲ ಕಾಂಗ್ರೆಸ್ ಎಂಬ ಮಹಾಸಾಗರದಲ್ಲಿ ಯಾರು ಯಾವಾಗ ಏನಾಗುತ್ತಾರೆಂಬುದೇ ಸೋಜಿಗ. ಪವಾಡ ಸದೃಶದಂತೆ ಪ್ರದೀಪ್ ಈಶ್ವರ್ ಶಿಕ್ಷಣ ಸಚಿವನಾದರೆ ಶೈಕ್ಷಣಿಕ ಕ್ರಾಂತಿಯ ಕೆಲವಾದರೂ ನಿರೀಕ್ಷೆಗಳು ಸಾಕಾರಗೊಳ್ಳಬಲ್ಲವು ಎಂಬ ನಂಬುಗೆ ನನ್ನದು. ಸಾಂಸ್ಕೃತಿಕ ಪ್ರಪಂಚದಷ್ಟೇ ಪ್ರಮುಖವಾದ ಮತ್ತೊಂದು ಖಾತೆಯೇ ಶಿಕ್ಷಣ. ಯಾವುದೇ ದೇಶದ ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುಸ್ಥಿರ ಬದುಕು ಇದ್ದರೇ ಬಾಕಿ ಎಲ್ಲವೂ ತನ್ನಷ್ಟಕ್ಕೆ ತಾನೇ ಸುಭಿಕ್ಷು ಆಗಿರಬಲ್ಲದು.
* * *
ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಬಹುಪಾಲು ಸಾಂಸ್ಕೃತಿಕ ಸಂಸ್ಥೆಗಳು ಬೆಂಗಳೂರಲ್ಲೇ ಠಿಕಾಣಿ ಹೂಡಿಕೊಂಡಿವೆ. ಉರ್ದು ಎಂಬುದು ಮುಸ್ಲಿಮರ ಮಾತೃಭಾಷೆ ಎಂಬ ತಪ್ಪು ಗ್ರಹಿಕೆ ಕೆಲವರದು. ಹೀಗೆ ಕೆಲವು ಸಂಕೀರ್ಣ ಸಂಗತಿಗಳ ನಡುವೆ ಅದು ಹಿಂದೂ ಮುಸ್ಲಿಂ ಎನ್ನದೇ ಎಲ್ಲರ ಮನೆಮಾತಿನಂತಹ ಸಂವಹನದ ಭಾಷೆ. ಕಲಬುರ್ಗಿ, ಯಾದಗಿರಿ, ಬೀದರ, ರಾಯಚೂರಿನಂತಹ ಉರ್ದು ಪ್ರಾಬಲ್ಯ ಇರುವ ಕಲ್ಯಾಣ ಕರ್ನಾಟಕದಲ್ಲಿ ಉರ್ದು ಅಕಾಡೆಮಿ ಇರಬೇಕಾದುದು ನ್ಯಾಯೋಚಿತ. ಶಾಸ್ತ್ರೀಯ ಸಂಗೀತದಲ್ಲಿ ಆರೇಳು ಪದ್ಮಭೂಷಣ, ವಿಭೂಷಣರಿರುವ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಸಂಗೀತ ಅಕಾಡೆಮಿ ಇರುವುದು ಹೆಚ್ಚು ಅರ್ಥಪೂರ್ಣ. ರಂಗಭೂಮಿಯ ತವರುಮನೆಯಂತಿರುವ ನಡುನಾಡು ಡಾವಣಗೇರಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಇರಬೇಕಿದೆ.

ಈಗಾಗಲೇ ನಾಕೈದು ಅಕಾಡೆಮಿಗಳು, ಕೆಲವು ಪ್ರತಿಷ್ಠಾನಗಳು ಪ್ರಾದೇಶಿಕ ಸಂವೇದನೆಗನುಗುಣ ಬಾಗಲಕೋಟೆ, ಮಂಗಳೂರು, ಮಡಿಕೇರಿ ಮುಂತಾದಕಡೆ ಕ್ರಿಯಾಶೀಲಗೊಂಡಿವೆ. ಅದೇ ಮಾದರಿಯಲ್ಲಿ ಎಲ್ಲಾ ಅಕಾಡೆಮಿ, ಪ್ರತಿಷ್ಠಾನ, ಪ್ರಾಧಿಕಾರಗಳ ಸಾಂಸ್ಕೃತಿಕ ವಿಕೇಂದ್ರೀಕರಣ ಆಗಬೇಕು. ಎರಡು ಪ್ರಬಲ ಸಮುದಾಯಗಳ ರಾಜಕೀಯ ಏಕೀಕರಣಕ್ಕಿಂತ ಸಮಸ್ತ ಬದುಕಿನ ಸಾಂಸ್ಕೃತಿಕ ವಿಕೇಂದ್ರೀಕರಣ ಇವತ್ತಿನ ತುರ್ತು ಅಗತ್ಯ. ನೂತನ ಸರಕಾರ ಇಂತಹ ಸಾಂಸ್ಕೃತಿಕ ವಿಕೇಂದ್ರೀಕರಣದ ತುರ್ತಿಗೆ ತುರ್ತಾಗಿ ಸ್ಪಂದಿಸಲಿ. ಅದರೊಂದಿಗೆ ಬೆಂಗಳೂರು ಕೇಂದ್ರಿತ ಅನಾರೋಗ್ಯಕರ ಬೆಳವಣಿಗೆ ತಪ್ಪಲಿ. ತನ್ಮೂಲಕ ಸಾಂಸ್ಕೃತಿಕವಾಗಿಯೂ ಪ್ರಾದೇಶಿಕ ಅಸಮಾನತೆ ನೀಗಲಿ. ಏಕೆಂದರೆ ಬೆಂಗಳೂರೇ ಕರ್ನಾಟಕವಲ್ಲ.

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...