ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

Date: 01-01-2025

Location: ಬೆಂಗಳೂರು


"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದರು. ಅವರ ಅವಧಿಯೊಳಗೆ ಹೆಸರಾಂತ ಪತ್ರಕರ್ತ, ರಂಗಕರ್ಮಿಯೂ ಆಗಿದ್ದ ಸಾಹಿತಿ ಬಿ. ವಿ. ವೈಕುಂಠ ರಾಜು ಅವರ ನೇತೃತ್ವದ "ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ಸಮೀಕ್ಷೆ" ಜರುಗಿತು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಅವರ ‘ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...' ಕುರಿತು ಬರೆದ ಲೇಖನ.

ನಾನು ದಾವಣಗೆರೆ ರಂಗಾಯಣ ನಿರ್ದೇಶಕನಾಗಿ ನೇಮಕಗೊಳ್ಳುವ ಪೂರ್ವದಲ್ಲೇ ಕರ್ನಾಟಕ ಸರಕಾರವು ನನ್ನನ್ನು ವೃತ್ತಿ ನಾಟಕ ಕಂಪನಿಗಳಿಗೆ ಅನುದಾನ (ಧನಸಹಾಯ ನೀಡಿಕೆ) ಶಿಫಾರಸು ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಿತ್ತು. ಕ್ರಿ.ಶ. ೨೦೦೭ ರಲ್ಲಿ ದಾವಣಗೆರೆಯಲ್ಲಿ ಜರುಗಿದ ವೃತ್ತಿ ರಂಗಭೂಮಿ ಸಮಾವೇಶದ ಸಂಚಾಲಕನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ವೃತ್ತಿ ನಾಟಕ ಕಂಪನಿಗಳಿಗೆ ಕಾಯಕಲ್ಪದ ಹೊಸದೊಂದು ಆಯಾಮ ದಕ್ಕಿತ್ತು. ಆಗ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಐ. ಎಂ. ವಿಠಲಮೂರ್ತಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಶ್ರೀನಿವಾಸ ಜಿ. ಕಪ್ಪಣ್ಣ ಇವರ ಕಳಕಳಿಯಿಂದಾಗಿ ಇಂತಹದ್ದೊಂದು ಹಣಕಾಸು ನೆರವಿನ ವಿವಿಧ ಸ್ಲ್ಯಾಬ್ಗಳ ಯೋಜನೆ ಜಾರಿಗೆ ಬಂತು.

ದಾವಣಗೆರೆಯ ಅವತ್ತಿನ ರಂಗ ಸಮಾವೇಶ ಅಂತಹದ್ದೊಂದು ರಂಗಾಲೋಚನೆಗೆ ಕ್ರಿಯಾತ್ಮಕ ನಾಂದಿ ಹಾಡಿತ್ತು ಎಂಬುದನ್ನು ಅಕ್ಷರಶಃ ಯಾರೂ ಮರೆಯಲಾಗದು. ಅಂದಿನಿಂದ ಶಾಸ್ತ್ರೀಯ ನೆಲೆಯಲ್ಲಿ ಆರಂಭಗೊಂಡ ಅನುದಾನದ ಈ ಯೋಜನೆ ನಿರಂತರ ಇಂದಿಗೂ ನಡೆದು ಬಂದಿದೆ‌. ಇಲಾಖೆ ಮತ್ತು ಸರ್ಕಾರ ರೂಪಿಸಿಕೊಂಡ ಮಾರ್ಗಸೂಚಿಯ ಮೇರೆಗೆ ಅದು ಅನೂಚಾನಗೊಂಡಿದೆ. ಹಾಗೆಂದು ಅದಕ್ಕೆ ಪೂರ್ವದಲ್ಲಿ ನಾಟಕ ಕಂಪನಿಗಳಿಗೆ ಸರಕಾರದ ನೆರವಿನ ಚಿಂತನೆಗಳು ಇರಲಿಲ್ಲ ಎಂದರ್ಥವಲ್ಲ. ಚಿಂದೋಡಿ ಲೀಲಾ ಅವರು ತೊಂಬತ್ತರ ದಶಕದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಅಂತಹದ್ದೊಂದು ಆಲೋಚನೆಗೆ ನಾಂದಿ ಹಾಡಿದವರು. ಹಾಗೆ ನೋಡಿದರೆ ಸರಕಾರಕ್ಕೆ ಇವತ್ತಿಗೂ ವೃತ್ತಿ ರಂಗಭೂಮಿಗೆ ಏನಾದರೂ ಒಳಿತನ್ನು ಮಾಡುವ ಕಳಕಳಿ ಇದೆ. ಆದರೆ ಅದಕ್ಕೆ ಆ 'ಒಳಿತು' ಏನೆಂಬುದು ನಿಖರವಾಗಿ ತಿಳಿದಿಲ್ಲ.

ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದರು. ಅವರ ಅವಧಿಯೊಳಗೆ ಹೆಸರಾಂತ ಪತ್ರಕರ್ತ, ರಂಗಕರ್ಮಿಯೂ ಆಗಿದ್ದ ಸಾಹಿತಿ ಬಿ. ವಿ. ವೈಕುಂಠ ರಾಜು ಅವರ ನೇತೃತ್ವದ "ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ಸಮೀಕ್ಷೆ" ಜರುಗಿತು. ಇಡೀ ದೇಶದಲ್ಲಿಯೇ ಜರುಗಿದ ಮೊಟ್ಟಮೊದಲ ವೃತ್ತಿರಂಗ ಸಮೀಕ್ಷಾ ವರದಿ ಅದಾಗಿದೆ. ಬಿ.ವಿ.ವಿ. ಅವರು ಅಧ್ಯಕ್ಷರಾಗಿದ್ದ ಈ ಸಮಿತಿಯಲ್ಲಿ ವೃತ್ತಿರಂಗ ನಾಟಕಕಾರ ಎಚ್. ಎನ್. ಹೂಗಾರ, ಗುಬ್ಬಿ ಕುಟುಂಬದ ಜಿ. ವಿ. ಶಿವಾನಂದ ಮತ್ತು ಹೊಸಅಲೆ ನಾಟಕಗಳ ರಂಗಕರ್ಮಿ ಶ್ರೀನಿವಾಸ ತಾವರಗಿರಿ ಈ ಮೂವರು ಸದಸ್ಯರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯೊಂದನ್ನು ಹೊರತು ಪಡಿಸಿ ಸಮಗ್ರ ಕರ್ನಾಟಕದ ಅಂದಿನ ಹದಿನೆಂಟು ಜಿಲ್ಲೆಗಳನ್ನು ಸಂಚರಿಸಿ ತಯಾರಿಸಿದ ನಾಟಕ ಕಂಪನಿಗಳ ಸಮೀಕ್ಷಾ ವರದಿ ಅದಾಗಿತ್ತು. ಆಗ ಅದನ್ನು ಸಂಕ್ಷೇಪಿಸಿ ಸರಕಾರಕ್ಕೆ ಸಲ್ಲಿಸುವಲ್ಲಿ ನೆರವಾದವರು ಕರ್ನಾಟಕ ನಾಟಕ ಅಕಾಡೆಮಿಯ ಅಂದಿನ ರಿಜಿಸ್ಟ್ರಾರ್ ಆಗಿದ್ದ ಸುಧೀಂದ್ರ ಅವರು. ಈ ಮಾತನ್ನು ಸಮೀಕ್ಷಾ ಸಮಿತಿ ಅಧ್ಯಕ್ಷರಾಗಿದ್ದ ಬಿ. ವಿ. ವೈಕುಂಠ ರಾಜು ಅವರು ವರದಿಯಲ್ಲಿ ಪ್ರೀತಿಯಿಂದ ಉಲ್ಲೇಖಿಸಿದ್ದಾರೆ. ಪರಿಹಾರ ಸ್ವರೂಪಿ ಮಹತ್ವದ ಮುವತ್ತಾರು ಅಂಶಗಳನ್ನು ವರದಿಯಲ್ಲಿ ಸೋದಾಹರಣವಾಗಿ ನಮೂದಿಸಿದ್ದಾರೆ. ಆ ವರದಿಯನ್ನೇ ಯಥಾವತ್ತಾಗಿ ಜಾರಿಗೊಳಿಸಿದರೆ ಸಾಕು. ಏಕಗವಾಕ್ಷಿಯ ಲೈಸೆನ್ಸ್ ಸೇರಿದಂತೆ ನಾಟಕ ಕಂಪನಿ ಮಾಲೀಕರು ಮತ್ತು ಕಲಾವಿದರ ಬಹುತೇಕ ಸಮಸ್ಯೆಗಳು ನಿವಾರಣೆ ಆಗಬಲ್ಲವು. ಸರ್ಕಾರ ಆ ದಿಕ್ಕಿನಲ್ಲಿ ಇವತ್ತಿಗೂ ಕ್ರಿಯಾಶೀಲ ಆಗಬೇಕಿದೆ.

ಅಂದಹಾಗೆ ವೃತ್ತಿ ನಾಟಕ ಕಂಪನಿಗಳಿಗೆ ಧನಸಹಾಯ ನೀಡಿಕೆ ಶಿಫಾರಸು ಸಮಿತಿಯ ನಮ್ಮ ಪರಿವೀಕ್ಷಣೆ ಶುರುವಾದುದು ಕರ್ನಾಟಕದ ಈಶಾನ್ಯ ಮೂಲೆಯ ಬೀದರ ಎಂಬ ಹುರಮಂಜು ಬಣ್ಣದ ನೆಲದಿಂದ. ಅದು ಹಗಲುವೇಷಗಾರರ ವೃತ್ತಿಪರ ರಂಗನಾಟಕ ಕಂಪನಿ. ಹೆಸರು ಶ್ರೀ ಶಿರಡಿ ಸಾಯಿಬಾಬಾ ನಾಟಕ ಸಂಘ ಎಂಬ ಕಂಪನಿ. ಬೀದರಿನ ಮಧುರ ಸ್ವರದ ಗಾಯಕ ಮಿತ್ರ ಮತ್ತು ನಮ್ಮ ಸಮಿತಿಯ ಸದಸ್ಯ ಶಂಭುಲಿಂಗ ವಾಲ್ದೊಡ್ಡಿ, ಇಳಕಲ್ ಪಟ್ಟಣದ ರಂಗಮಿತ್ರ ಡಾ. ವಿಶ್ವನಾಥ ವಂಶಾಕೃತ ಮಠ, ಹೆಸರಾಂತ ರಂಗನಟಿ ಮೈಸೂರು ಹೆಲನ್ ಈ ಮೂವರು ಸದಸ್ಯರೊಂದಿಗೆ ಕರ್ನಾಟಕ ನಾಟಕ ಅಕಾಡೆಮಿಯ ಕೆ. ರೇವಣ್ಣ ನಮ್ಮೊಂದಿಗೆ ಅಂದು ಮುಂಜಾನೆಯೇ ಸೇರಿಕೊಂಡರು.

ಹಗಲು ವೇಷಗಾರರು, ಬಹುರೂಪಿಗಳು, ಬುಡಕಟ್ಟು, ಅಲೆಮಾರಿ ಮುಂತಾದ ವಿಶೇಷಣಗಳಿಂದ ಕರೆಯಲ್ಪಡುವ ವೃತ್ತಿ ರಂಗಸಂಸ್ಕೃತಿ ಪರಂಪರೆಯೊಂದು ಕರ್ನಾಟಕದಲ್ಲಿದೆ. ಅದಕ್ಕೆ ಸಾಂಸ್ಕೃತಿಕ ಲೋಕ ಮತ್ತು ಸರ್ಕಾರದ ಮಟ್ಟದಲ್ಲಿ ದೊರಕಬೇಕಾದ ಮಹತ್ವ ಮತ್ತು ಅಗತ್ಯದ ವಿಶೇಷ ಸೌಲಭ್ಯಗಳು ಇದುವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ದೊರಕಿಲ್ಲ. ಅವರನ್ನು ಪ್ರಧಾನ ಸಾಂಸ್ಕೃತಿಕ ನೆಲೆಯಲ್ಲಿ ನೋಡಿಯೇ ಇಲ್ಲ. ಅಷ್ಟೇ ಯಾಕೆ ಅಧೀನ ಸಂಸ್ಕೃತಿಗಳ ಕಣ್ಣಲ್ಲೂ ಕಂಡಿಲ್ಲ. ಹಾಗೆ ನೋಡಿದರೆ ರಂಗಸಂಸ್ಕೃತಿ ಚರಿತ್ರೆಕಾರರು ವೃತ್ತಿ ರಂಗಭೂಮಿಯನ್ನೇ ಪ್ರಧಾನ ಸಂಸ್ಕೃತಿ ಧಾರೆಯಲ್ಲಿ ಪರಿಗಣಿಸಿಲ್ಲವೆಂದರೆ ಇನ್ನು ಹಗಲು ವೇಷಗಾರರನ್ನು ಕಾಣುವುದುಂಟೇ.? ಆದರೆ ಇವರ ನಾಟಕಗಳು ಲೋಕಮೀಮಾಂಸೆಗೆ ಭಾಜನಗೊಂಡಿವೆ. ನೆನಪಿರಲಿ : ಹನ್ನೆರಡನೇ ಶತಮಾನದ ವಚನ ಚಳವಳಿಯ ''ಬಹುರೂಪಿ ಚೌಡಯ್ಯ" ಕನ್ನಡದ ಮೊಟ್ಟ ಮೊದಲ ವೃತ್ತಿ ರಂಗಕರ್ಮಿ.

ಇಂತಹದ್ದೊಂದು Primitive character culture ಇರುವ ಬಹುರೂಪಿ ಉರುಫ್ ಹಗಲು ವೇಷಗಾರರು ವರ್ತಮಾನದಲ್ಲಿ ನಾಟಕ ಕಂಪನಿಗಳ ಮೂಲಕ ವೃತ್ತಿರಂಗ ಪರಂಪರೆಯನ್ನು ಅನೇಕ ದಶಕಗಳಿಂದ ಬದುಕುತ್ತಿದ್ದಾರೆಂಬುದು ಸಾಂಸ್ಕೃತಿಕ ಹೆಗ್ಗಳಿಕೆ. ಈ ಬಗೆಯ ರಂಗಸಂಸ್ಕೃತಿ ಕಲ್ಯಾಣ ಕರ್ನಾಟಕದಲ್ಲಿ ವೆಗ್ಗಳವಾಗಿರುವುದು ಪ್ರಾಯಶಃ ಅಲ್ಲಿನ ವಚನ ಚಳವಳಿಯ ಆದಿಮ ರಂಗಪುರುಷ ಬಹುರೂಪಿ ಚೌಡಯ್ಯನ ಮುಂದುವರೆದ ರಂಗಕಾಯಕ ಪರಂಪರೆಯೇ ಆಗಿದ್ದೀತು. ಅಂದಹಾಗೆ ನಾವು ಬೀದರ ಶಹರದಲ್ಲಿ ಭೇಟಿಮಾಡಿದ ರಂಗ ಸಮೀಕ್ಷೆಯ ಮೊದಲ ನಾಟಕ ಕಂಪನಿ ಅದಾಗಿತ್ತು. ಅದರ ಮಾಲೀಕನ ಹೆಸರು ಬಸವರಾಜ ಕೊಡೇಕಲ್. ಅವರ ನಾಟಕ ಕಂಪನಿಯ ರಂಗಭಾಷೆಯೇ ವಿಭಿನ್ನವಾದುದು. ಬಹುತೇಕ ಅವರ ನಾಟಕ ಕಂಪನಿ ಎಂದರೆ ಅವರ ರಂಗ ಕುಟುಂಬವೇ ಆಗಿದೆ. ಹಾಗೆಂದು ಹೊರಗಿನ ಕಲಾವಿದರಿಗೆ ಅಲ್ಲಿ ಅವಕಾಶ ಇಲ್ಲವೆಂದಲ್ಲ. ನಮ್ಮ ರಂಗಸಮೀಕ್ಷಾ ಸಮಿತಿಯ ಸದಸ್ಯೆ ಮೈಸೂರು ಹೆಲನ್ ಇದೇ ನಾಟಕ ಕಂಪನಿಯಲ್ಲಿ ಅನೇಕ ಬಾರಿ ಅತಿಥಿ ನಟಿಯಾಗಿ ಅಭಿನಯಿಸಿದ್ದುಂಟು. ಅದನ್ನು ಹೆಲನ್ ಸಹಿತ ಅಂದು ಪ್ರೀತಿಯಿಂದ ಸ್ಮರಿಸಿಕೊಂಡರು.

ಹಗಲು ವೇಷಗಾರರು ವೃತ್ತಿ ರಂಗಕಲೆಯ ಆಧುನಿಕತೆಗೆ ಒಗ್ಗಿಕೊಂಡಿದ್ದಾರೆ. ಅಪ್ಡೇಟ್ ಕೂಡ ಆಗಿದ್ದಾರೆ. ಆದರೆ ಅವರಿಗೆ ಸಮ ಸಾಂಸ್ಕೃತಿಕ ಸಾಮಾಜಿಕ ನ್ಯಾಯ ಇದುವರೆಗೆ ದೊರಕಿಲ್ಲವೆಂದು ಅವರು ಅಲವತ್ತುಗೊಳ್ಳುತ್ತಾರೆ. ಹತ್ತು ಹಲವು ಸಾಂಸ್ಕೃತಿಕ ಉದಾಸೀನ, ಸಾಮಾಜಿಕ ಅವಹೇಳನಗಳ ನಡುವೆಯೂ ವೃತ್ತಿಪರ ರಂಗಸಂಸ್ಕೃತಿ ಅವರು ಬದುಕುತ್ತಿರುವುದು ಕನ್ನಡ ರಂಗಸಂಸ್ಕೃತಿಯ ಹೆಮ್ಮಯೇ ಹೌದು. ಬಹುಪಾಲು ಅವರು ಅನಕ್ಷರಸ್ಥರು. ತೆಲುಗು ಅವರ ಮಾತೃಭಾಷೆ. ಸಾಮಾಜಿಕವಾಗಿ ಸಕಲೆಂಟು ಸಂಕಟಗಳನ್ನು ಸಹಿಸಿಕೊಂಡು ಸರ್ಕಾರ ನೀಡುವ ಸಾಂಸ್ಕೃತಿಕ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದಾರೆ. ಮೂರನೇ ಸಾಲಿನ ಸಹಾಯ ಸೌಲಭ್ಯಗಳಿಗೆ ಸಮಾಧಾನ ಪಡಬೇಕಾದ ಅನಿವಾರ್ಯತೆ ಅವರಿಗೆ ಪ್ರತಿಬಾರಿಯೂ ಎದುರಾಗುತ್ತದೆ. ಮೇಲ್ದರ್ಜೆಯ ಸಹವರ್ತಿಗಳೆಂದು ಸರ್ಕಾರದ ಅಧಿಕಾರಿಗಳ ವಲಯದ ಫ್ರಂಟ್ ಲೈನಲ್ಲಿ ಗುರುತಿಸಿಕೊಂಡಿರುವವರಿಂದ ತಮಗೆ ಅನ್ಯಾಯವಾಗುತ್ತಿದೆಯೆಂದು ನಮ್ಮ ಸಮಿತಿ ಮುಂದೆ ಅಂದು ನೋವಿನಿಂದ ಹೇಳಿಕೊಂಡರು. ಅದಕ್ಕಾಗಿ ಸರ್ಕಾರ ತಮಗೆ ವಿಶೇಷ ಅನುದಾನ ನಿಗದಿ ಮಾಡಬೇಕೆಂಬುದು ಅವರ ವಿನಮ್ರ ಮನವಿ.

ನಮ್ಮ ರಂಗಸಮೀಕ್ಷೆಯ ಮುಂದಿನ ಭೆಟ್ಟಿಗಳು, ನಾಕೈದು ನಾಟಕ ಕಂಪನಿಯ ಹತ್ತಾರು ಮೊಕ್ಕಾಮುಗಳು. ಅದರಲ್ಲಿ ಒಂದನ್ನು ಹೊರತು ಪಡಿಸಿದರೆ ಇತರೆ ಎಲ್ಲವುಗಳು ಬೀದರಿನ ನಾಟಕ ಕಂಪನಿಯಂತೆಯೇ ಸುಸಜ್ಜಿತವಾಗಿದ್ದವು. ಅದರಲ್ಲೂ ಮಾದನ ಹಿಪ್ಪರಗಿ ಕ್ಯಾಂಪಿನ ನಿರ್ಣಾವಾಡಿ ನಾಟಕ ಕಂಪನಿ ಮತ್ತು ಇಂಡಿ ಮುಕ್ಕಾಮಿನ ಶ್ರೀಗುರುಪಾದಲಿಂಗೇಶ್ವರ ನಾಟಕ ಕಂಪನಿಯ ನಾಟಕವನ್ನು ಸಮಿತಿಯ ನಾವೆಲ್ಲರೂ ನೋಡಿ ಸಂಭ್ರಮಿಸಿದೆವು. ನಾಟಕದ ಹೆಸರೇ ಸಮೃದ್ಧವಾಗಿತ್ತು. ನಾಟಕದ ಹೆಸರು ಹೀಗಿತ್ತು: ಮಾತು ಬಿದ್ದಿತು ಮೌನ ಗೆದ್ದಿತು. ಸ್ತ್ರೀ ಕುಲಕ್ಕೆ ಮುಜುಗುರ ಉಂಟು ಮಾಡುವ ಶೀರ್ಷಿಕೆಯುಳ್ಳ ಕಿಲುಬು, ಕೊಳಕು ಕೊಳಕಿನ ದುರಿತಾದಿ ದುರಿತದ ಕೆಲವು ಹೆಸರುಗಳ ನಡುವೆ ಇಂತಹದ್ದೊಂದು ಹೆಸರು ಸಹಜವಾಗಿ ಕಣ್ಮನ ತಣಿಸಿತು.

ನಮ್ಮ ರಂಗ ಸಮೀಕ್ಷಾ ಪ್ರಯಾಣ ಕಲಬುರಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳನ್ನು ಸೋಜಾಗಿ ದಾಟಿ ಕೊಪ್ಪಳ ಜಿಲ್ಲೆಯ ವಿವಿಧ ಕಡೆ ಮುಕ್ಕಾಂ ಮಾಡಿರುವ ಕೆಲವು ಕ್ಯಾಂಪುಗಳನ್ನು ಸಂದಿಸಿತು. ಇದೀಗ ರಾಯಚೂರಿನ ಮುದಗಲ್ ಮೊಕ್ಕಾಮಿನಲ್ಲಿ ಪ್ರೇಮಾ ಗುಳೇದಗುಡ್ಡ ಅವರ ಶ್ರೀ ಸಂಗಮೇಶ್ವರ ನಾಟ್ಯ ಸಂಘದ ಎಂಬತ್ತೈದರ ಏರು ಹರೆಯದ ಹಿರಿಯ ರಂಗನಟ ಗುರುಲಿಂಗಯ್ಯ ಸ್ವಾಮಿಯ ರಂಗಸಿರಿಯ ಸಿರಿಕಂಠಕ್ಕೆ ನಾವೆಲ್ಲರೂ ಮಾರು ಹೋಗಿ ಮುಗಿಬಿದ್ದೆವು. ನಿರೀಕ್ಷೆಯಂತೆ ನಮ್ಮ ಮೊದಲ ಸುತ್ತಿನ ರಂಗಸಮೀಕ್ಷೆಯನ್ನು ನಿರುಮ್ಮಳವಾಗಿ ಮುಗಿಸಿ ಎರಡನೇ ಸುತ್ತಿನ ರಂಗಸುತ್ತಾಟಕ್ಕೆ ಬದಾಮಿಯೆಂಬ ಬನಶಂಕರಿಯ ನಾಟಕಗಳ ಜಾತ್ರೆಗೆ ಸಿದ್ಧಗೊಳ್ಳುತ್ತಿದ್ದೇವೆ. ಬನಶಂಕರಿ ಜಾತ್ರೆಯ ಅನುಭವಗಳು ತರಹೇವಾರಿ ಆಗಿರ ಬಲ್ಲವು. ಅವುಗಳನ್ನು ಕಂಡುಂಡ ಮೇಲೆಯೇ ಒಂದು ಬಾರಿ ಸಂಕ್ಷೇಪಿಸಿ ನಿಮಗೆ ಇದೇ ಅಂಕಣದಲ್ಲಿ ಹಾಳತವಾಗಿ ಹೇಳುವೆ.

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...
ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?
ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ
ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ
ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..
ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು
ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...