Date: 06-03-2024
Location: ಬೆಂಗಳೂರು
"ದಾವಣಗೆರೆ ಬಾಡಿಗೆ ಮನೆಗಳ ಹಂಗು ಅವಳನ್ನು ಘೋರವಾಗೇ ಕಾಡಿ ಕಹಿ ಅನುಭವಗಳಿಗೆ ಈಡು ಮಾಡಿತ್ತು. ಮೂರ್ನಾಕು ವರುಷಕ್ಕೆ ಮನೆಯ ಮಾಲೀಕರು ಬಂದು ಮನೆ ಖಾಲಿ ಮಾಡಿರೆಂದು ಪದೇ ಪದೇ ಹೇಳುವುದನ್ನು ಅವಳು ಕೇಳಿಸಿಕೊಂಡರೆ ಮುಗಿದೇ ಹೋಯಿತು," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿಬುತ್ತಿ’ ಅಂಕಣದಲ್ಲಿ ‘ಬಾಡಿಗೆ ಮನೆಗಳು ಮತ್ತು ಜಾತಿ ಹುಡುಕಾಟದ ನೀಚ ಹುನ್ನಾರಗಳು’ ಕುರಿತು ಬರೆದಿದ್ದಾರೆ.
ಅವ್ವ ಬದುಕಿದ್ದಾಗ "ಯಾವಾಗ ಮನೆ ಕಟ್ಟುಸ್ತಿಯಾ" ಅಂತ ತಾನು ಸಾಯುವ ಕೊನೇ ದಿನಗಳವರೆಗೂ ಕೇಳುತ್ತಲೇ ಇದ್ದಳು. ಅಷ್ಟಕ್ಕೂ ನಾವಿರುತ್ತಿದ್ದ ದಾವಣಗೆರೆಯ ಬಾಡಿಗೆ ಮನೆಗಳಲ್ಲಿ ತಾನು ಸಾಯಬಾರದೆಂಬ ಸಂಕಲ್ಪ ತೊಟ್ಟಿದ್ದಳು. ಬದುಕಿರುವ ತನ್ನಜೀವ ಇರುವಾಗಲೇ ತನ್ನನ್ನು ಕಡಕೋಳಕ್ಕೆ ಕರಕೊಂಡು ಹೋಗಬೇಕೆಂಬ ಕಠಿಣ ಹಂಬಲ ಹೊಂದಿದ್ದಳು. ಅಂತೆಯೇ ತಾನು ಎಪ್ಪತ್ತೆಂಬತ್ತು ವರುಷಗಳಿಗೂ ಹೆಚ್ಚುಕಾಲ ಬಾಳಿ ಬದುಕಿದ ಮಡಿವಾಳಪ್ಪನ ಕಾಯಕ ಭೂಮಿ ಕಡಕೋಳ ನೆಲದ ಅಗಸಿ ಹೊಸ್ತಿಲಿಗೆ ಹಣೆಹಚ್ಚಿ ಮರಣ ಹೊಂದುವ ಅಂತಿಮ ಬಯಕೆ ಆಕೆಯದಾಗಿತ್ತು. ಅದು ಅವಳ ಮೋಕ್ಷ ವಾಂಛೇಯೇ ಆದಂಗಿತ್ತು. ತನ್ನ ಉಸಿರಿನ ಕಟ್ಟಕಡೆಯ ಇಚ್ಛೆ ಈಡೇರಿದಂತೆ ಕಡಕೋಳಕ್ಕೆ ಕರೆದುಕೊಂಡು ಹೋದ ಮರುದಿನವೇ ಚಿತ್ತಶಾಂತಿ, ಸಮಾಧಾನದಿಂದ ಪ್ರಾಣಬಿಟ್ಟಳು. ಮನದಿಚ್ಛೆ ಈಡೇರಿದ ಅವಳ ಪಾಲಿಗದು ಸಂಭ್ರಮ ತುಂಬಿದ ಸಾವು.
ಹಾಗೊಂದು ವೇಳೆ ತಾನು ದಾವಣಗೆರೆ ಇಲ್ಲವೇ ಬೇರೊಂದು ಊರಲ್ಲಿ ಪ್ರಾಣಬಿಟ್ಟರೂ ಕಡಕೋಳಕ್ಕೆ ತನ್ನ ಪಾರ್ಥಿವ ಶರೀರ ಕೊಂಡೊಯ್ಯುವುದಾಗಿ ನಾನು "ಮಡಿವಾಳಪ್ಪನ ಮೇಲೆ ಆಣೆ ಪ್ರಮಾಣ ಮಾಡಿ ಹೇಳುತ್ತಿದ್ದರೆ" ಅವಳ ಅನುಭವ ಪ್ರಮಾಣ ಅದನ್ನು ನಂಬುತ್ತಿರಲಿಲ್ಲ. ಹಾಗೆ ಹೇಳುವುದನ್ನು ಖಾತರಿ ಮಾಡಿಕೊಳ್ಳ ಬೇಕೆಂದರೆ ತಾನಾಗ ಬದುಕಿಯೇ ಇರುತ್ತಿಲ್ಲವಾದ್ದರಿಂದ ತಾನು ಜೀವಂತವಾಗಿರುವಾಗಲೇ ಅದನ್ನು ಖಾತರಿಯಾಗಿಸಬೇಕು. ಅದಕ್ಕಾಗಿ ತನ್ನ ಪ್ರಾಣದ ಕೊನೇ ಗಳಿಗೆಗಳು ಕಡಕೋಳದಲ್ಲೇ ಕಳೆಯಬೇಕೆಂಬ ಅವಳ ಬದುಕಿನ ಏಕೈಕ ಮತ್ತು ಕೊನೆಯ ಆಸೆಯೇ ಆಗಿತ್ತು. ಹೀಗೆ ಭರತಿಯಾದ ಜೀವದ ಅಂತಿಮ ಬಯಕೆ ನೆಲಕ್ಕೆ ಬರಕಿ ಖಾಲಿಯಾಗುವಂತೆ ತನ್ನನ್ನು ಕಡಕೋಳಕ್ಕೆ ಕರಕೊಂಡು ಹೋಗೆಂದು ವಾರವೊಪ್ಪತ್ತು ಊಟ ಮಾಡುವುದನ್ನೇ ಬಿಟ್ಟಳು. ಬರೀ ನೀರನ್ನೇ ಕುಡಿದೇ ವಾರಕಾಲ ಬದುಕಿದ್ದಳು.
ಅದಕ್ಕಾಗಿ ಕಡಕೋಳಕ್ಕೆ ಹೋಗಿಯೇ ಪ್ರಾಣ ತ್ಯಜಿಸಬೇಕೆಂದು ಜೀವ ಹಿಡಕೊಂಡಿದ್ದಳು. ಕಡೆಗೂ ಅವಳ ಅನುಭವ ಪ್ರಮಾಣದೆದುರು ನಮ್ಮೆಲ್ಲ ಶಬ್ದ ಪ್ರಮಾಣಗಳು ಸೋತು ಹೋದವು. ಕೊನೆಗೂ ಅವ್ವ ಅಕ್ಷರಶಃ ಗೆದ್ದಳು. ಏಕೆಂದರೆ ನನ್ನ ಮಾತುಗಳು ಹೆಚ್ಚೆಂದರೆ ಅಕ್ಷರದ ಅರಿವಿನೊಡನಾಟದ ಶಬುದ ಪ್ರಮಾಣಗಳಷ್ಟೇ. ಅವಳದು ಹಾಗಲ್ಲ ಅನುಭವ ಪ್ರಮಾಣ. ಇದು ನನ್ನ ಪ್ರಾಣಾನುಸಂಧಾನದ ಪ್ರಾಮಾಣಿಕ ಅನಿಸಿಕೆ. ಅವಳ ಅಭೀಪ್ಸೆಯಂತೆ ಅವ್ವ ಬದುಕಿರುವಾಗಲೇ ಅದೂ ಅವಳ ಕೊನೇ ಉಸಿರಿನ ಇಪ್ಪತ್ನಾಲ್ಕು ತಾಸು ಮೊದಲೇ ಕಡಕೋಳಕ್ಕೆ ಕರಕೊಂಡು ಹೋದೆ. ಊರವರೊಂದಿಗೆ ಅಷ್ಟೂ ತಾಸುಗಳನ್ನು ಕಳ್ಳುಬಳ್ಳಿಯಿಂದ ಮಾತಾಡುತ್ತಲೇ ಕಳೆದು ಮರುದಿನ ಸಂಜೀಮುಂದ ಜೀವ ಬಿಟ್ಟಳು.
* * *
ದಾವಣಗೆರೆ ಬಾಡಿಗೆ ಮನೆಗಳ ಹಂಗು ಅವಳನ್ನು ಘೋರವಾಗೇ ಕಾಡಿ ಕಹಿ ಅನುಭವಗಳಿಗೆ ಈಡು ಮಾಡಿತ್ತು. ಮೂರ್ನಾಕು ವರುಷಕ್ಕೆ ಮನೆಯ ಮಾಲೀಕರು ಬಂದು ಮನೆ ಖಾಲಿ ಮಾಡಿರೆಂದು ಪದೇ ಪದೇ ಹೇಳುವುದನ್ನು ಅವಳು ಕೇಳಿಸಿಕೊಂಡರೆ ಮುಗಿದೇ ಹೋಯಿತು. ಘಾಸಿಗೊಂಡು ಊಟ ಮಾಡದೇ ಗಂಟಲು ತುಂಬಾ ಶೋಕ ತುಂಬಿದವಳಂತೆ ಮಹಾಮೌನಿಯಾಗಿ ಮಲಗಿ ಬಿಡುತ್ತಿದ್ದಳು. ಅವ್ವ ಹಾಗೆ ಉಪವಾಸ ಮಲಗುವುದನ್ನು ನೋಡಲು ಆಗುತ್ತಿರಲಿಲ್ಲ. ಅವಳು ಪಡುವ ಅಮೂರ್ತ ಸಂಕಟ ಸಹಿಸಿಕೊಳ್ಳಲು ಮನೆಯ ನಮಗೆಲ್ಲರಿಗೂ ಆಗುತ್ತಿರಲಿಲ್ಲ. ಸಮಸ್ಯೆಯ ಪರಿಹಾರದ ಒಣಮಾತಿಗೆ ಮಾತುಗಳು ಬೆಳೆದು ಕೆಲವೊಮ್ಮೆ ತನ್ನ ಹಳೆಯ ಸೀರೆಗಂಟು ಕಟ್ಟಿಕೊಂಡು ಹೊರಟು ಬಿಡುತ್ತಿದ್ದಳು.
ದಾವಣಗೆರೆ ಶಹರದ ದುಗ್ಗಮ್ಮನ ಪ್ಯಾಟಿಯಲ್ಲಿದ್ದ ನಮ್ಮೂರಿನ ಶಖಾಪುರ ಶರಣಪ್ಪನ ಮನೆಗೆ ಬಹುತೇಕ ಬಾರಿ ಹೋಗುತ್ತಿದ್ದಳು. ನಾವು ದಿಕ್ಕೆಟ್ಟು ಹುಡುಕಿ ಹುಡುಕಿ ಸಿಕ್ಕಾಪಟ್ಟೆ ಟೆನ್ಷನ್ ಆಗಿ ಬಿಡುತ್ತಿದ್ದೆವು. ಖುದ್ದು ಶರಣಪ್ಪನೇ ಬಂದು "ಮುದುಕಿ ನಿಂಗಮ್ಮಾಯಿ ನಮ್ಮನಿಗಿ ಬಂದಾಳ" ಎಂದಾಗಲೇ ಏನೋ ಹಳಾರ. ಒಮ್ಮೆ ಅವಳ ಮುನಿಸಿನ ಪಯಣ ದಾವಣಗೇರಿಯ ದಣಿ, ಕಡು ಸಾಹುಕಾರ ಶಾಮನೂರು ಶಿವಶಂಕರಪ್ಪ ಅವರ ಮನೆತನಕ ಮುಟ್ಟಿತ್ತು. ಆಗ ಅಲ್ಲಿದ್ದ ಗೆಳೆಯ, ಕಾಂಗ್ರೆಸ್ ಮುಖಂಡ ಡಿ. ಬಸವರಾಜ ಆಕೆಯನ್ನು ರಮಿಸಿ ಪ್ರೀತಿಯಿಂದ ನಮ್ಮ ಮನೆಗೆ ತಂದು ಬಿಟ್ಟು ಹೋಗಿದ್ದರು. ಯಾಕೆಂದರೆ ಜುಲುಮೆ ಮಾಡಿದರೆ ಸಣ್ಣ ಮಕ್ಕಳಂತೆ ಹಟಕ್ಕೆ ಬೀಳುತ್ತಿದ್ದಳು.
ಮತ್ತೆ ಕೆಲವೊಮ್ಮೆ ಬಾಡಿಗೆ ಮನೆ ವಿಚಾರ ಮತ್ತಿತರೆ ಗೃಹಕೃತ್ಯದ ವಿಚಾರ ಪ್ರಸ್ತಾಪ ಆಗುತ್ತಿದ್ದವು. ಆಗ ತಪ್ಪದೇ ಮುಂದಿನ ವರ್ಷ ಗ್ಯಾರಂಟಿಯಾಗಿ ಮನೆ ಕಟ್ಟಿಸಿಯೇ ತೀರುವುದಾಗಿ ಭರವಸೆಯ ಮಹಾ ಗಡುವು ನಿರ್ಧಾರವಾಗುತ್ತಿತ್ತು. ಇಂತಹ ಪೊಳ್ಳು ಭರವಸೆ ನೀಡುವಾಗ ನನಗೆ ತರಕಲಾಂಡಿ ರಾಜಕಾರಣಿಗಳ ನೆನಪಾಗುತ್ತಿತ್ತು. ಅಷ್ಟಕ್ಕೂ ಆ ರೀತಿ ಸುಳ್ಳು ಹೇಳುವುದು ನನಗೆ ಅನಿವಾರ್ಯ ಆಗಿರುತ್ತಿತ್ತು. ನಮ್ಮೆಲ್ಲರ ಗಟ್ಟಿಧ್ವನಿಯ ಭರವಸೆಯಿಂದಾಗಿ ಅವಳ ಮುನಿಸು, ಒಡಲು ತುಂಬಿದ ದುಃಖ ತಾತಕ್ಷಣಿಕವಾಗಿ ತುಸು ಕಮ್ಮಿಯಾಗುತ್ತಿತ್ತು. ಇಂತಹ ಹತ್ತಾರು ಘಟನೆಗಳು ಆಗಾಗ ಜರುಗಿ ಕುಟುಂಬದ ನಮಗೆಲ್ಲರಿಗೂ ಅದು ರೂಢಿಯಾದಂತಾಗಿತ್ತು.
* * *
ಹೀಗಿರಬೇಕಾದರೆ ಕೆಟ್ಟ ದಿನವೊಂದು ನಮಗೆ ಕಾಯ್ದು ಕುಂತಿತ್ತು. ನಾವು ಆ ಬಾಡಿಗೆ ಮನೆಗೆ ಬಂದು ಮೂರೇ ಮೂರು ತಿಂಗಳು ಕಳೆದಿರಬಹುದು. ಅಷ್ಟೇ ತಿಂಗಳಿಗೆ ಮನೆ ಖಾಲಿ ಮಾಡಬೇಕೆಂದು ಒಂದು ಮುಂಜಾನೆ ಮನೆ ಮಾಲಿಕನೆಂಬಾತನ ತಗಾದೆ ಶುರುವಿಟ್ಟುಕೊಂಡಿತು. ಕುಟುಂಬದ ನಮಗೆಲ್ಲರಿಗೂ ಗಾಬರಿ. ಸಣ್ಣ ಸಣ್ಣ ಮಕ್ಕಳು, ವಯಸ್ಸಾದ ಅವ್ವ, ಕಡಿಮೆ ಪಗಾರ. ಅಷ್ಟಕ್ಕೂ ಆ ಮನೆಗೆ ಬಂದು ಮೂರು ತಿಂಗಳು ಸಹಿತ ಆಗಿಲ್ಲ. ಆಗಲೇ ಮನೆ ಖಾಲಿ ಮಾಡಿರೆಂಬ ಕಿರಿಕಿರಿ. ತುಂಬಾ ಕಠೋರ ಧ್ವನಿಯಲ್ಲಿ, ಅದರಲ್ಲೂ ಮಾರಾಯ ಮಾಲಿಕನ ಸೆಡವಿನಲ್ಲಿ "ಮನೆ ಖಾಲಿ ಮಾಡಲೇ ಬೇಕೆಂದು" ಅಕ್ಕಪಕ್ಕದ ಮನೆಯವರಿಗೂ ಕೇಳುವಂತೆ ಕಿರುಚ ತೊಡಗಿದ. ನಮ್ಮಂಥವರಿಗೆ ಮನೆ ಬಾಡಿಗೆಗೆ ನೀಡಿದ್ದೇ ತುಂಬಾ ಪ್ರಮಾದವಾಗಿದೆ, ತಾನು ಮೋಸ ಹೋದೆನೆಂತಲೂ ಏನೇನೋ ಸುತ್ತಿ ಬಳಸಿ ಮಾತಾಡ ತೊಡಗಿದ. ಆ ಎಲ್ಲ ಸುತ್ತು ಬಳಕೆ ಹಿಂದಿನ ಒಳ ಕಾರಣವೆಂದರೆ ಅವರ ಮನೆ ಬಾಡಿಗೆಗೆ ಬಂದ ನಮ್ಮದು ಕಿಗ್ಗಳು ಕುಲವೆಂಬುದಾಗಿತ್ತು. ಆಮೇಲೆ ಅವನ ಮಾತುಗಳೇ ಅದನ್ನು ಸಾಬೀತು ಮಾಡಿದವು.
ನಾನು ಬರೆಯುವ "ಕಡಕೋಳ ಕಾಲಂ" ಹೆಸರಿನ ಅಂಕಣ ಬರಹಗಳನ್ನು ಓದಿ ಮತ್ತು ನನ್ನ ಹೆಸರು ಕೇಳಿ " ತಮ್ಮದೇ ಮೇಲ್ಜಾತಿಯವರೆಂದು ತಿಳಿದು " ಮನೆ ಬಾಡಿಗೆ ಕೊಟ್ಟು ಅಪಚಾರವಾಯಿತೆಂದು ಜೋರು ಸ್ವರದಲ್ಲೇ ದಬಾಯಿಸ ತೊಡಗಿದ. ಮನೆ ಬಾಡಿಗೆಗೆ ಬರುವ ಮೊದಲು ನಮ್ಮ ಜಾತಿಯನ್ನು ಅವನಿಗೆ ತಿಳಿಸದಿರುವುದೇ ನಮ್ಮಿಂದಾದ ಅಪರಾಧವಂತೆ. ಅದನ್ನು ನಾವೇ ಸ್ವಯಂಪ್ರೇರಿತರಾಗಿ ಒಪ್ಪಿಕೊಳ್ಳಬೇಕೆಂಬ ನಿರೀಕ್ಷೆ ಅವನದಾಗಿತ್ತು. "ನಿಮ್ಮದು ಕಪ್ಪು ಕಡಿ ತಿನ್ನುಣ್ಣುವ ಜಾತಿ ಅಂತ ಗೊತ್ತಿದ್ದರೆ ನಿನಗೆ ಮನೆ ಬಾಡಿಗೆಗೆ ಕೊಡ್ತಿರಲಿಲ್ಲ." ಇನ್ನೂ ಏನೇನೋ ಕೊಳಕು ಧ್ವನಿಯಲ್ಲಿ ಒದರಾಡತೊಡಗಿದ. ಅವತ್ತು ಮುಂಜಾನೆ ಮುಂಜಾನೆಯೇ ಅವನು ಕಂಟಮಟ ಕುಡಿದು ಬಂದವರಂತೆ ಒದರಾಡ ತೊಡಗಿದ್ದನ್ನು ಗಮನಿಸಿದ ನಮಗೆ ಅವನೊಂದಿಗೆ ಮಾತಾಡಲು ಮನಸು ಬರಲಿಲ್ಲ. ನಾವು ಮಾತಾಡದಿರುವುದನ್ನೇ ಬಂಡವಾಳ ಎಂದುಕೊಂಡು, ನಮ್ಮ ಅಪರಾಧ ಸಾಬೀತಾಯಿತು ಎನ್ನುವ ವರಸೆಯಲ್ಲಿ ಕೂಗಾಟ ಮತ್ತೆ ಮತ್ತೆ ಮುಂದುವರೆಸಿದ.
ಆಯ್ತು ಮೂರು ತಿಂಗಳು ಟೈಮ್ ಕೊಡ್ರಿ, ಮನೆ ಖಾಲಿ ಮಾಡುವುವೆವೆಂದು ಪರಿಪರಿಯಾಗಿ ಮನವಿ ಮಾಡಿಕೊಂಡೆವು. "ಏಯ್ ಇಲ್ಲ ಇಲ್ಲ ಸಾಧ್ಯವಿಲ್ಲ, ವಾರದೊಳಗೇ ಮನೆ ಖಾಲಿ ಮಾಡಬೇಕು. ಮಾಡದಿದ್ರೆ ಹ್ಯಂಗ ಖಾಲಿ ಮಾಡಿಸಬೇಕಂತ ನನಗೆ ಗೊತ್ತಿದೆ" ಅಂತ ಖಚಿತ ಸ್ವರದಲ್ಲಿ ಧಮಕಿ ಹಾಕಿದ. ಅದನ್ನು ಕೇಳಿದ ನಾನು ಕ್ಷಣಕಾಲ ಸ್ತಂಭೀಭೂತನಾಗಿಬಿಟ್ಟೆ. ಯಾಕೆಂದರೆ ಮನೆ ಖಾಲಿ ಮಾಡಿಸುವ ಕೊಳಕು ಕುತಂತ್ರಗಳನ್ನು ಅಲ್ಲಿನ ಕೆಲವು ಬಾಡಿಗೆಮನೆ ಬ್ರೋಕರ್ ಗಳಿಂದ ಕೇಳಿ ತಿಳಿದದ್ದರಿಂದ ನನಗೆ ಭಯ ಮತ್ತು ಹೇಸಿಗೆ ಏಕಕಾಲಕ್ಕೆ ಹುಟ್ಟಿಕೊಂಡಿತು. ಅಷ್ಟಕ್ಕೂ ಆ ಊರಲ್ಲಿ ಮನೆ ಬಿಡಿಸುವ ಕಸಬುದಾರರೇ ಇದ್ದರು. ಪಾಪ ಅವರೇನು ದೈಹಿಕ ದೌರ್ಜನ್ಯ ಎಸಗುತ್ತಿರಲಿಲ್ಲ. ಆದರೆ ಅವರು ಬಳಸುವ ಹೊಲಸು ಮಾರ್ಗ ಮಾತ್ರ ನರಕ ಸದೃಶದ ಹೇಸಿಕೆ ಹುಟ್ಟಿಸುವುದಾಗಿತ್ತು. ಹೇಸಿಕೆ ಯಾಕೆಂದರೆ ಮನೆ ಖಾಲಿ ಮಾಡಿಸಲು ಅವರು ಬಳಸುತ್ತಿದ್ದ ಕೊಳಕು ತಂತ್ರ ಕೇಳಿದರೆ ಬೆಚ್ಚಿ ಬೀಳುತ್ತೀರಿ.
ಅದೇನೆಂದರೆ ಮನೆಖಾಲಿ ಮಾಡ ಬೇಕಾದವರು ನಸುಕಿನ ನಿದ್ದೆಯಲ್ಲಿರುವಾಗಲೇ ಅವರಿಗೆ ಗೊತ್ತಾಗದಂತೆ ಬೆಳಗಿನ ಜಾವ ನಾಕೈದು ಗಂಟೆ ಸುಮಾರಿಗೆ ಮನೆಯ ಬಾಗಿಲ ಮುಂದೆ ಬಕೆಟುಗಟ್ಟಲೇ ಹೇಲು ಸುರಿಸಿ ಬಿಡುವುದು. ಅಂತಹ ಹೇಸಿ ಕಸುಬಿಗಾಗಿ ಯಥೇಚ್ಛ ಹಣದ ರುದ್ರನರ್ತನ. ಇದೆಲ್ಲ ನೆನಪಾಗಿ "ಮನೆ ಹೇಗೆ ಖಾಲಿ ಮಾಡಿಸಬೇಕೆಂಬುದು ಗೊತ್ತಿದೆ" ಎಂಬ ಮಾಲೀಕನ ಗತ್ತಿನ ದಬಾಯಿ ಮಾತುಗಳು ನನ್ನನ್ನು ಅಧೀರನನ್ನಾಗಿ ಮಾಡಿದವು. ಮನೆ ಖಾಲಿ ಮಾಡಿಸುವ ಕೊಳಕು ವಿಧಾನಗಳ ವಿವರಗಳನ್ನು ನಮ್ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ಅಂತೆಯೇ ಬೆದರಿಕೆಯ ವಾರದ ಗಡುವು ತೀರುವ ಮೊದಲೇ ಮನೆ ಖಾಲಿ ಮಾಡಲೇ ಬೇಕಾಗಿತ್ತು. ಇಲ್ಲವಾದಲ್ಲಿ ಮನೆ ಹೊಸ್ತಿಲಲ್ಲೇ ಮಲದ ರಾಶಿ ಎಂಬ ಕರಾಳ ಭಯ ಘೋರವಾಗಿ ಕಾಡ ತೊಡಗಿತು.
ನೌಕರಿಗೆ ರಜೆ ಹಾಕಿ ಬಾಡಿಗೆ ಮನೆಗಳ ಹುಡುಕಾಟಕ್ಕೆ ತೊಡಗಿದೆ. ಸ್ಥಳೀಯ ಪತ್ರಿಕೆಗಳ ಜಾಹೀರಾತು ಅಂಕಣಗಳನ್ನು ತಲಾಷ್ ಮಾಡಿ ನೋಡಿದರೆ "ಸಸ್ಯಾಹಾರಿಗಳಿಗೆ ಮಾತ್ರ" ಎಂಬ ಬಾಡಿಗೆ ಮನೆಗಳ ಜಾಹೀರಾತುಗಳು. ಈ ಜಾಹೀರಾತುಗಳು ಒಂದರ್ಥದಲ್ಲಿ ಕೆಳಜಾತಿಗಳನ್ನು ಪತ್ತೆಹಚ್ಚುವ ನೀಚಹುನ್ನಾರಗಳು. ಈ ಕ್ಷಣದಲ್ಲಿ ಸೋಜಿಗ ಮತ್ತು ದುರಂತದ ಸತ್ಯಸಂಗತಿಯೊಂದನ್ನು ಹೇಳದೇ ಹೋದರೆ ನನ್ನ ಆತ್ಮಸಾಕ್ಷಿಗೆ ನಾನೇ ದ್ರೋಹ ಬಗೆದಂತಾದೀತು. ಅಕ್ಷರಶಃ ನಮ‌್ಮನ್ನು ಜಾತಿ ಕಾರಣಕ್ಕಾಗಿ ಮನೆ ಖಾಲಿ ಮಾಡಿಸಿದ ಮೇಲ್ಜಾತಿಯ ಆತ ಪ್ರಗತಿಪರ ಸಾಹಿತಿಯೊಬ್ಬರ ಒಡಹುಟ್ಟಿದ ಸಹೋದರನಾಗಿದ್ದ.
ಪ್ರಗತಿಪರ ಸಾಹಿತಿ ತನ್ನ ಸಹೋದರನ ಇಂತಹ ಅಮಾನವೀಯ ನಡೆಗಾಗಿ ನನಗೆ ಫೋನ್ ಮಾಡಿ ಕ್ಷಮೆ ಯಾಚಿಸಿದ್ದರು. ವಿದ್ಯಾವಂತರು ಎಷ್ಟೇ ಪ್ರಗತಿಪರ ಎಂದು ತೋರಿಸಿ ಕೊಂಡಿದ್ದರೂ ಮನೆ ಮತ್ತು ಮನಗಳಲ್ಲಿ ತುಂಬಿಕೊಂಡ ಮಲಗಳಿಂದ ಮುಕ್ತರಾಗಿಲ್ಲ. ಮನೆಯ ಮುಂದೆ ಬಂದು ಬೀಳುವ ಮಲದ ರಾಶಿಗಿಂತ ಮನುವಾದಿ ಮನಸಿನ ಮಡಿವಂತರ ಮನದೊಳಗೆ ತುಂಬಿಕೊಂಡ ಮಲ ಹೆಚ್ಚು ಅಪಾಯಕಾರಿ. ಅಂತೆಯೇ ಮಲ ತುಂಬಿಕೊಂಡ ಮನದ ಮಾಲೀಕರ ಬಾಡಿಗೆ ಮನೆಯಲ್ಲಿ ನನ‌್ನವ್ವ ದೇಹ ಬಿಡಲಿಲ್ಲ ಎಂಬ ಸಣ್ಣ ಸಮಾಧಾನ.
- ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.