Date: 14-04-2023
Location: ಬೆಂಗಳೂರು
''ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಪಿಆರ್ಟಿ ಅವರದು ಸುಮಧುರ ಬಾಂಧವ್ಯ. ಕುವೆಂಪು ಮಾರ್ಗದರ್ಶನದ ಮೇರೆಗೆ ಕುಪ್ಪಳ್ಳಿಯ ಹಸಿರು ಕಾನನದ ಸುಂದರವಾದ ನಿಸರ್ಗ ಚಿತ್ರಗಳನ್ನು ರಚಿಸುತ್ತಾರೆ. ಕುವೆಂಪು ಅದನು ಮೆಚ್ಚಿ ತಮ್ಮ ಕವಿಶೈಲದಿಂದ ಕುಂದಾದ್ರಿ ಸಾಲುಗಳಲ್ಲಿ " ಇದು ಚಿತ್ರಕೃತಿ ಯಲ್ತೆನಗೆ ಪ್ರಕೃತಿಗೆ ಗವಾಕ್ಷಂ ತೆರೆದಿಹುದು ವರ್ಣಶಿಲ್ಪಿಯ ಕುಂಚ" ಎಂದು ಬರೆದು ಅದಮ್ಯ ಪ್ರೀತಿ ತೋರುತ್ತಾರೆ,'' ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, “ಪಿ. ಆರ್. ಟಿ. ಜನ್ಮ ಶತಮಾನೋತ್ಸವ ಮತ್ತು ಕಲಾ ಸಂಭ್ರಮ” ಕುರಿತು ಲೇಖನವನ್ನು ಬರೆದಿದ್ದಾರೆ.
ಕರ್ನಾಟಕದ ಹೆಸರಾಂತ ನಿಸರ್ಗಚಿತ್ರ ಕಲಾವಿದ ಪಿ. ಆರ್. ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ. ಆ ಪ್ರಯುಕ್ತ ಅವರ ಹೆಸರಿನ ಪ್ರತಿಷ್ಠಾನವು ದಾವಣಗೆರೆ ವಿ.ವಿ. ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪಿ. ಆರ್. ಟಿ. ಹೆಸರಿನ ಕಲಾಸಂಭ್ರಮ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸರಕಾರದ ನೆರವಿನಿಂದ ೨೦೨೩ ರ ಎಪ್ರಿಲ್ ಹದಿನೆಂಟರಂದು ದಾವಣಗೆರೆಯಲ್ಲಿ ದಿನಪೂರ್ತಿ ಸವುಡಿಲ್ಲದ ಕಾರ್ಯಕ್ರಮಗಳ ಸಡಗರ, ಸಂಭ್ರಮ. ಅವತ್ತು ಪಿ.ಆರ್.ಟಿ. ಕಲಾಸಂಭ್ರಮದ ಉದ್ಘಾಟನೆ, ಅವರ ಬದುಕು ಸಾಧನೆಗಳ ಮೇಲೆ ಬೆಳಕು ಬೀರುವ ವಿಚಾರ ಸಂಕಿರಣ. ಅಲ್ಲದೇ ಚಿತ್ರಕಲಾ ಪ್ರದರ್ಶನ ಮತ್ತು ಸ್ಪರ್ಧೆಗಳ ಏರ್ಪಾಡು. ಅಂದು ಸಂಜೆ ಅವರ ಹೆಸರಿನಲ್ಲಿ ಚಿತ್ರ ಕಲಾವಿದ ಅಶೋಕ ಬಂಡಾರೆ ಮತ್ತು ಚೌಡಿಕೆ ಪದಗಳ ರಾಧಾಬಾಯಿ ಮಾದರ ಎಂಬ ಇಬ್ಬರು ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ.
ಹಾಗೆ ನೋಡಿದರೆ ವರ್ತಮಾನದ ಲೋಕಮಾನಸದಲ್ಲಿ 'ಸಂಭ್ರಮ' ಅನ್ನುವುದು ಕಣ್ಮರೆಯಾಗುತ್ತಿದೆ. ಸುಡುವ ಸಂಕಟಗಳು ಹೆಚ್ಚುತ್ತಿವೆ. ಆದರೆ ಸಂಕಟಗಳು ಮಾತಾಡುತ್ತಿಲ್ಲ. ಸಂಕಟಗಳೇ ಸಂಭ್ರಮಗಳೆಂದು ಭ್ರಮಿಸುತ್ತಿರುವ ಸಂದರ್ಭಗಳು ಎದುರಾಗುತ್ತಿವೆ. ಅಂತಹದರ ನಡುವೆ ಕಲಾಸಂಭ್ರಮ. ಬಹುಪಾಲು ನಾವೆಲ್ಲರೂ ಅನೂಹ್ಯ ಬಿಕ್ಕಟ್ಟು, ಸಂಕಟದ ಸಂಕರಗಳನ್ನೇ ದಾಟುತ್ತಾ ನಡೆಯುತ್ತಿರುವ ಸ್ಥಿತಿಗಳಲ್ಲಿ ಬದುಕುತ್ತಿದ್ದೇವೆ. ಅದಕ್ಕೆ ಸಾಹಿತಿ, ಕಲಾವಿದ ಇತರೆ ಎಲ್ಲ ಬಗೆಯ ಮಾನವೀಯ ಸಂವೇದನೆಯ ಸಾಂಸ್ಕೃತಿಕ ಪ್ರತಿಭೆಗಳು ಹೊರತಾಗಿಲ್ಲ.
ಅಂತೆಯೇ ಹೇಳಲಾಗದ ಮತ್ತು ಹೇಳದಿರಲಾಗದ ತಲ್ಲಣಗಳ ನಡುವೆ ಅಸ್ಮಿತೆಗಾಗಿ ಹೋರಾಟ. ಧರ್ಮ ಮತ್ತು ಸಂಸ್ಕೃತಿಗಳ ವಿಭಿನ್ನ ತಾಕಲಾಟಗಳ ತಂತಿಯ ಮೇಲೆ ಚಲಿಸುತ್ತಿರುವ ಹೇರಿಕೆಯ ಅನುಭವ. ಅಂಥದರ ನಡುವೆ ಕೆಲವು ಸನಾತನ ಸಂಪ್ರದಾಯಗಳ ಸಂಕೋಲೆಗಳನ್ನು ಮೀರಿ ಮುನ್ನುಗ್ಗಬೇಕಾದ ಸವಾಲುಗಳು. ಮನುಷ್ಯ ಮನುಷ್ಯರ ನಡುವೆ ಘೋರ ಬಿರುಕಿನ ಗೋಡೆಗಳು. ಹೆಸರಿಗಷ್ಟೇ ಭಾವೈಕ್ಯದ ಮಾತುಗಳು. ಸೋಗಲಾಡಿ ಸೌಹಾರ್ದತೆಯ ಖೋಟಾ ಜಪಗಳು. ಹೀಗೆ ಕಾರ್ಪೊರೇಟ್ ಮತ್ತು ಕೋಮುವಾದಿ ಶಕ್ತಿಗಳ ಪಕ್ಷಭೇದ ಮರೆತ ರಾಜಕೀಯ ವ್ಯವಸ್ಥೆಯ ಚೆಲ್ಲಾಟದ ನಡವಳಿಕೆಗಳು.
ಈ ಎಲ್ಲ ಅಪಸವ್ಯಗಳನ್ನು ಬದಿಗೊತ್ತಿ ಸಾಹಿತಿ, ಕಲಾವಿದರೆಲ್ಲರೂ ಬಹುತ್ವ ಭಾರತದ ಮಾನವೀಯ ಆವರಣ ನಿರ್ಮಾಣ ಮಾಡಬೇಕಿದೆ. ಬಹಳಷ್ಟು ಮಂದಿ ಪ್ರಗತಿಪರ ಸಾಹಿತಿಗಳು ''ತಾವು ಮುಕ್ತವಾಗಿ ಬರೆಯುವ ಮತ್ತು ಸತ್ಯ ಹೇಳುವ ಪೂರಕ ವಾತಾವರಣ ಇಲ್ಲವೆಂದು'' ಹೇಳುತ್ತಲೇ ಇದ್ದಾರೆ. ಆದರೆ ಚಿತ್ರ ಕಲಾವಿದರ ಅಭಿವ್ಯಕ್ತಿ ಮಾಧ್ಯಮ ಅಂತಹ ಪ್ರತಿಭಟನೆಯ ವೈರುಧ್ಯಗಳನ್ನು ಎದುರಿಸುತ್ತಿರುವ ಅವಕಾಶಗಳಿಂದ ತುಸು ದೂರವೇ ಇದೆ. ಪ್ರಯುಕ್ತ ಪುರೋಗಾಮಿ ಧಾರೆಯ ಮತ್ತು ಪ್ರತಿರೋಧದ ಚಳವಳಿಗಳನ್ನು ಕಲೆಯ ಮೂಲಕ ಅರಳಿಸಬಹುದಾಗಿದೆ. ಪ್ರಜಾಪ್ರಭುತ್ವದ ಪ್ರಖರ ಜೀವಂತಿಕೆಯ ಚುನಾವಣೆಯಂತಹ ಈ ನಿರ್ಣಾಯಕ ಸಂದರ್ಭಗಳಲ್ಲಿ ಸಾಹಿತಿ, ಕಲಾವಿದರು ಧಾರ್ಷ್ಟ್ಯದಿಂದ ತಮ್ಮ ವಿವೇಕದ ಮಾತುಗಳಾಡದೇ ಸುಮ್ಮನಿದ್ದು ಆಮೇಲೆ ಮಾತಾಡುವುದು ಎಷ್ಟು ಸರಿ.?
ಅಷ್ಟಕ್ಕೂ ಅದಕ್ಕಾಗಿ 'ತೀರಾ ಹುಸೇನ್ ತರಹ' ಪೌರಾಣಿಕ ಪರಂಪರೆಗಳನ್ನೇ ಧಿಕ್ಕರಿಸುವ ಪ್ರಖರ ಚಿತ್ರಗಳೇ ಆಗಬೇಕೆಂದೇನಿಲ್ಲ. ಕಡೆಯಪಕ್ಷ ಕರ್ನಾಟಕ ಮಟ್ಟದಲ್ಲಿಯಾದರೂ ಜಾನ್ ದೇವರಾಜ್, ಸುದೇಶ್ ಮಹಾನ್, ಕೆ. ಟಿ. ಶಿವಪ್ರಸಾದ್, ಸಿ. ಚಂದ್ರಶೇಖರ, ಅವರಂತಹ ವಿಚಾರಮುಖಿ ಕಲಾವಿದರು ಗಂಭೀರವಾಗಿ ಸಮಾಲೋಚನೆ ಮಾಡಬೇಕಾದ ತುರ್ತು ಅಗತ್ಯವಿದೆ. ಸಮಾಧಾನದ ಸಂಗತಿಯೆಂದರೆ ವ್ಯಂಗ್ಯಚಿತ್ರಕಾರರು ಮಾತ್ರ ಪ್ರಭುತ್ವದ ಮುಲಾಜಿಗೊಳಗಾಗದೇ ಚೂಪು ಕುಂಚದ ಮೊನಚನ್ನು ಝಳಪಿಸುತ್ತಾರೆ. ಆದರೆ ಕೆಲವು ಸಂಪ್ರದಾಯವಾದಿ ಕಲಾವಿದರು ಪರಂಪರೆ ಹೆಸರಲ್ಲಿ ಜೀವವಿರೋಧಿ ಮತ್ತು ಹೊಂದಾಣಿಕೆ ಧೋರಣೆಯ ಮೌನದಾಸರಾಗುತ್ತಿದ್ದಾರೆ. ಅವರಿಗೆ ಎಡ ಬಲಗಳೆರಡರ ಅವಕಾಶವಾದಿ ಬದ್ಧತೆಯೇ ಆಧ್ಯತೆಯಾದಂತಿದೆ. ಇಂತಹ ಸಂಕೀರ್ಣ ಸನ್ನಿವೇಶಗಳಲ್ಲಿ ಪಿ. ಆರ್. ಟಿ. ಜನ್ಮ ಶತಮಾನೋತ್ಸವದ ಸಂಭ್ರಮಾಚರಣೆ ಜರುಗುತ್ತಿದೆ. ವಾಸ್ತವವಾಗಿ ಅದು ಜನಸಂಸ್ಕೃತಿಯ ಕಲಾರೂಪಕವಾಗಿ ಪರಿವೇಶಗೊಳ್ಳಬೇಕಿದೆ. ಪಿ.ಆರ್.ಟಿ. ಅವರಂತಹ ಬಹುಮುಖ ಪ್ರತಿಭೆಯ ಸರಳ, ಸಜ್ಜನ ಮತ್ತು ಸಮಾಜಮುಖಿ ಕಲಾವಿದರು ಅಪರೂಪ.
ಈಗ್ಗೆ ಅಜಮಾಸು ಇಪ್ಪತ್ತೈದು ವರುಷಗಳ ಹಿಂದೆ ದಾವಣಗೆರೆಯ ಕಲಾಭವನದಲ್ಲಿ ನಾನು ಪಿ. ಆರ್. ತಿಪ್ಪೇಸ್ವಾಮಿ ಅವರೊಂದಿಗೆ ತಾಸೊಪ್ಪತ್ತು ಸಂವಾದ ನಡೆಸಿದ ಅನನ್ಯ ನೆನಪುಗಳಿವೆ. ಪ್ರಾಯಶಃ ಆಗ ಅವರಿಗೆ ಎಪ್ಪತ್ತೈದು ತುಂಬುತ್ತಿರುವ ಏರುಪ್ರಾಯದ ಅಮೃತ ಮಹೋತ್ಸವ ಆಗಿದ್ದೀತು. ಅಂದು ಅವರ ಜತೆ ಸೂರ್ಯಪಾನದ ಕವಿ ಎಂದೇ ಖ್ಯಾತನಾಮರಾಗಿದ್ದ ಮುಂಬಯಿ ನಿವಾಸಿ ಬಿ. ಎ. ಸನದಿ ಇದ್ದರು. ಬಾಬುಸಾಬ ಅಹ್ಮದಸಾಬ ಸನದಿ ಮೂಲತಃ ಕರ್ನಾಟಕದ ಬೆಳಗಾವಿ ಹತ್ತಿರದ ಸಿಂಧೊಳ್ಳಿಯವರು. ಸನದಿ ತಮ್ಮ ಬದುಕಿನ ಬಹುಪಾಲು ಆಯಸ್ಸು ಸವೆಸಿದ್ದು ಮುಂಬಯಿ ಆಕಾಶವಾಣಿಯಲ್ಲಿ.
ಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿ "ಪಿ.ಆರ್.ಟಿ." ಅಂತಲೇ ಸಾರಸ್ವತ ಲೋಕದಲ್ಲಿ ಖ್ಯಾತನಾಮರು. ಅವರ ಹುಟ್ಟೂರು (ಜನನ: ೧೧.೦೮. ೧೯೨೨) ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆ. ರುದ್ರಪ್ಪ ಮತ್ತು ಲಕ್ಷ್ಮಮ್ಮ, ತಿಪ್ಪೇಸ್ವಾಮಿಯವರ ಅಪ್ಪ ಅಮ್ಮ. ನೂರು ಎಕರೆಗಳಷ್ಟು ಸಿರಿವಂತ ಜಮೀನ್ದಾರ ಕುಟುಂಬ. ಪಟೇಲ್ ರುದ್ರಪ್ಪನವರು ಆ ಕಾಲದಲ್ಲಿ ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿ ಮಂಡಳಿ ಸದಸ್ಯರು. ಮಗ ಕಾನೂನು ಓದಿ ರಾಜಕಾರಣಿ ಆಗಬೇಕೆಂಬ ಸಹಜ ಬಯಕೆ. ಹರ್ತಿಕೋಟೆಯಂತಹ ಗ್ರಾಮ್ಯಜನ್ಯ ಹಟ್ಟಿ ಸಂಸ್ಕೃತಿಗಳ ನಡುವೆ ಹುಟ್ಟಿಬಂದ ಪಿಆರ್ಟಿಗೆ ಅಷ್ಟೇ ನಿಸರ್ಗಸುಬಗ ನೆಲಮೂಲದ ಜೀವಸ್ಪರ್ಶಗಳ ಸಂಬಂಧ. ಅಂತೆಯೇ ಅವರು ನಿಸರ್ಗ ಚಿತ್ರಗಳ ಗಾರುಡಿಗ.
ಆರಂಭಿಕ ಶಿಕ್ಷಣದಗುರು ದಾವಣಗೆರೆಯ ಗುರುಸಿದ್ದಪ್ಪ ಮಾಸ್ತರ, ಕಲಾಗುರುವಾಗಿ ದೊರಕಿದ್ದೆ ಅವರು ಕಲಾಕ್ಷೇತ್ರದಲ್ಲಿ ಅಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತೆಂದು ಅವರು ಅಂದು ನನಗೆ ಹೇಳಿದ ನೆನಪು. ಅದರಲ್ಲೂ ಬಾಲ್ಯದಲ್ಲಿ ಗುರುಸಿದ್ದಪ್ಪ ಮಾಸ್ತರ ಚಿತ್ರಿಸಿದ್ದ ರೈಲುಬಂಡಿ ಚಿತ್ರದ ಗಾಢನೆನಪು. ಪಟೇಲ್ ರುದ್ರಪ್ಪನವರ ಸ್ನೇಹಿತರಾಗಿದ್ದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಹರ್ತಿಕೋಟೆಯ ಅವರ ಮನೆಗೆ ಬಂದಿದ್ದಾಗ ಬಾಲಕ ತಿಪ್ಪೇಶ ಚಿತ್ರಿಸಿದ್ದ ಗಾಂಧಿ ಚಿತ್ರ ನೋಡಿ "ಇವನನ್ನು ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಗೆ ಸೇರಿಸಿರೆಂದು" ಸಲಹೆ ನೀಡುತ್ತಾರೆ.
ಅಪ್ಪ ಪಟೇಲ್ ರುದ್ರಪ್ಪಗೆ ಅಷ್ಟಕ್ಕೇ ತೃಪ್ತಿಯಾಗದೇ ಮಗನನ್ನು ಮಹಾರಾಜಾ ಕಾಲೇಜಿನ ಕಲಾಪದವಿ ಓದಿಗೂ ಸೇರಿಸುತ್ತಾರೆ. ಅಲ್ಲಿ ಸಹಪಾಠಿಯಂತೆ ಜಾನಪದ ಸಾಹಿತ್ಯದ ಒಡನಾಡಿಯಾದವರು ಜಿ. ಶಂ. ಪರಮಶಿವಯ್ಯ ಮತ್ತು ಕಾ.ರಾ. ಕೃಷ್ಣಸ್ವಾಮಿ. ಅದರ ಪರಿಣಾಮ ಪಿ.ಆರ್.ಟಿ. ಅವರ ಜಾನಪದ ಮತ್ತು ಸಾಹಿತ್ಯದ ಒಲವಿನ ಒರತೆ ಭರತಿಯಾಗತೊಡಗಿತು. ಕಲಾವಿದ ಪಿ.ಆರ್.ಟಿ. ಲೇಖಕರಾಗಿಯೂ ಜನಪದ ಜೀವಜಗತ್ತು, ಅಂಕಣ ಬರಹ, ಚಿತ್ರಕಲೆ, ವ್ಯಕ್ತಿಚಿತ್ರ ಕುರಿತಾಗಿ ಹದಿನೇಳು ಗ್ರಂಥಗಳನ್ನು ರಚಿಸಿದ್ದಾರೆ. ಅವರು ತಮ್ಮ ಸಾಧನೆಯ ಸುದೀರ್ಘ ಸಮಯ ಕಳೆದದ್ದು ಸಾಂಸ್ಕೃತಿಕ ನಗರ ಮೈಸೂರಲ್ಲಿ. ಅದು ಅವರ ಕರ್ಮಭೂಮಿಯೇ ಆಯಿತು. ಮೈಸೂರಿನ ರಮಾವಿಲಾಸ ಬಡಾವಣೆಯ ಅಗ್ರಹಾರವೇ ಅವರ ವಾಸದಮನೆ. ಅವರ ಮಹಡಿಮನೆ ನೂರಾರು ಕಲಾವಿದರು, ಸಾಹಿತಿಗಳ ಸಾಹಚರ್ಯದ ಸಮೃದ್ಧ ಕೂಟ. ಹಾಗೆಯೇ ಅನೇಕ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ತರಬೇತಿ ತಾಣವೂ ಹೌದು.
ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಪಿಆರ್ಟಿ ಅವರದು ಸುಮಧುರ ಬಾಂಧವ್ಯ. ಕುವೆಂಪು ಮಾರ್ಗದರ್ಶನದ ಮೇರೆಗೆ ಕುಪ್ಪಳ್ಳಿಯ ಹಸಿರು ಕಾನನದ ಸುಂದರವಾದ ನಿಸರ್ಗ ಚಿತ್ರಗಳನ್ನು ರಚಿಸುತ್ತಾರೆ. ಕುವೆಂಪು ಅದನು ಮೆಚ್ಚಿ ತಮ್ಮ ಕವಿಶೈಲದಿಂದ ಕುಂದಾದ್ರಿ ಸಾಲುಗಳಲ್ಲಿ " ಇದು ಚಿತ್ರಕೃತಿ ಯಲ್ತೆನಗೆ ಪ್ರಕೃತಿಗೆ ಗವಾಕ್ಷಂ ತೆರೆದಿಹುದು ವರ್ಣಶಿಲ್ಪಿಯ ಕುಂಚ" ಎಂದು ಬರೆದು ಅದಮ್ಯ ಪ್ರೀತಿ ತೋರುತ್ತಾರೆ. ಕುವೆಂಪು ಒಡನಾಟದ ಇಂತಹ ಹತ್ತಾರು ಸಂಗತಿಗಳಿವೆ. ಇದಲ್ಲದೇ ಪೋಲಿಸ್ ಅಧಿಕಾರಿ ಜೆ. ಬಿ. ರಂಗಸ್ವಾಮಿ ಒಡನಾಟದ ಕೆಲವು ರಸವತ್ತಾದ ನೆನಪುಗಳನ್ನು ಪಿಆರ್ಟಿ ಆಪ್ತಮಿತ್ರರಾಗಿದ್ದ ಮೈಸೂರಿನ ಪ್ರೊ. ಎಚ್. ಎಸ್. ಹರಿಶಂಕರ ಈಗಲೂ ಸೊಗಸಾಗಿ ಮೆಲುಕಾಡುತ್ತಾರೆ.
ಪ್ರೊ. ದೇ. ಜವರೇಗೌಡರ ಆಶಯದಂತೆ ಮೈಸೂರು ವಿ.ವಿ.ಯಲ್ಲಿ ಪಿ.ಆರ್.ಟಿ. ಶ್ರಮಕ್ಷಮತೆಯಿಂದ ನಿರ್ಮಿಸಿದ ಜಾನಪದ ವಸ್ತು ಸಂಗ್ರಹಾಲಯ ಜಾಗತಿಕ ಮನ್ನಣೆಗೆ ಭಾಜನವಾಗಿದೆ. ಅದಕ್ಕಾಗಿ ಈ ಜಾನಪದ ಜಂಗಮ ತಿರುಗದ ಊರುಗಳೇ ಉಳಿದಿಲ್ಲ. ರಾಷ್ಟ್ರೀಯ ಮಟ್ಟದ ಮ್ಯುಜಿಯಾಲಜಿ ಅಧ್ಯಯನಕಾರರಿಗೆ ಅದು ಆಕರದಂತಿದೆ. ಅದನ್ನೆಲ್ಲ ಮನಗಂಡು ವೀರೇಂದ್ರ ಹೆಗ್ಗಡೆಯವರು ಪಿ. ಆರ್.ಟಿ. ಅವರನ್ನು ಧರ್ಮಸ್ಥಳಕ್ಕೆ ಕರೆಸಿಕೊಂಡರು. ಅಲ್ಲಿ "ಮಂಜೂಷ" ಹೆಸರಿನ ಅಪರೂಪದ ವಸ್ತು ಸಂಗ್ರಹಾಲಯವು ಪಿ.ಆರ್.ಟಿ. ಪ್ರಯತ್ನದ ಫಲವಾಗಿ ನಿರ್ಮಾಣವಾಯಿತು. ತದನಂತರ ಅಂತಹದೇ ಕಾರ್ಯ ಸುತ್ತೂರು ಮತ್ತು ಮುರುಘಾ ಮಠಗಳು ಅವರಿಂದ ರೂಪಿಸಿಕೊಂಡವು.
ಪಿ. ಆರ್.ಟಿ. ಮತ್ತು ಬಿ. ಎ. ಸನದಿ ಈ ಇಬ್ಬರನ್ನು ಕಾಲು ಶತಮಾನದ ಹಿಂದೆ ಅಂದು ಡಾವಣಗೇರಿಯ ಕಲಾಭವನದ ವೇದಿಕೆಯಲ್ಲಿ ಕೂಡಿಸಿ ಮಾತುಕತೆಗೆ ಮುಂದಾದವರು ದಾವಣಗೆರೆಯ ಖ್ಯಾತ ಕಲಾವಿದ ಪ್ರೊ. ಶಂಕರ ಪಾಟೀಲ. ಕಲೆ ಮತ್ತು ಕಾವ್ಯದ ಕ್ರಿಯೆಟಿವಿಟಿ ಕುರಿತು ಸಂವಾದದ ನಡುವೆ ಅನೇಕ ಗಂಭೀರವಾದ ಮಾತುಗಳು ಸೋಸಿ ಸುಳಿದಾಡಿದವು. ಬಂಡಾಯ ಸಾಹಿತ್ಯವೆಂಬುದು ನವ್ಯಕ್ಕೆ ಪ್ರತಿಕ್ರಿಯೆ ಅಲ್ಲ. ನಮ‌್ಮ ಕಾವ್ಯ ಮತ್ತು ಕಲೆ ಮಿದುಳಿಂದ ಹೃದಯಕ್ಕೆ ಹರಿಯಬೇಕು. ಏಕತಾರಿ 'ತಂತಿನಾದ' ಭಾರತೀಯ ಕಾವ್ಯದ ಜೀವತಂತು ಎಂಬ ಅವರ ಅಂತಃಸ್ಫುರಣದ ಮಾತುಗಳನ್ನು ನಾನು ಮರೆತಿಲ್ಲ. ದಾವಣಗೆರೆಯ ನಾಟಕಕಾರ ಕೋಲ ಶಾಂತಪ್ಪ ವಿರಚಿತ ಸ್ತ್ರೀ, ಬಿ.ಎ. ನಾಟಕಗಳನ್ನು ಆಗ ಪ್ರದರ್ಶನ ಮಾಡುತ್ತಿದ್ದ ಕುಡುಗೋಲು ಜೆಟ್ಟೆಪ್ಪನವರ ಕಂಪನಿ ನಾಟಕಗಳನ್ನು ಪಿ.ಆರ್.ಟಿ. ಅಪಾರವಾಗಿ ಮೆಚ್ಚಿಕೊಂಡವರು.
ನಮ್ಮ ಮಾತುಕತೆಗಳು ಕಲೆ ಸಾಹಿತ್ಯ ಇತ್ಯಾದಿ ಮೀರಿ ಅವರ ವಯಕ್ತಿಕ ಜೀವನದತ್ತ ಸಾಗಿ "ಸಾಧನೆಯ ಭರದಲ್ಲಿ ನೀವು ಮದುವೆ ಆಗುವುದನ್ನೇ ಮರೆತು ಬಿಟ್ರೇನು" ಅಂತ ಕೇಳಿದೆ. ಹಂಗೇನಿಲ್ಲ ಬಣ್ಣದ ತಾರುಣ್ಯದಲ್ಲಿ ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸಿದ್ದೆ. ಅವಳು ಕೈಕೊಟ್ಟ ಮೇಲೆ ಅವಿವಾಹಿತನಾಗೇ ಉಳಿದೆ. ಆದರೆ ಈಗ ಅವಳಿರಬೇಕಿತ್ತೆಂದು ನನ್ನ ಮುಪ್ಪಾಗದ ಮತ್ತು ಮುಕ್ಕಾಗದ ಮನಸು ಹೇಳುತ್ತಿದೆಯೆಂದು ಹಳಹಳಿ ಪಟ್ಟರು.
ಪಿ.ಆರ್.ಟಿ. ಪ್ರವರ್ಧಮಾನಕ್ಕೆ ಬಂದುದು ಪ್ರಗತಿಶೀಲ ಸಾಹಿತ್ಯ ಚಳವಳಿ ಕಾಲವೇ ಆಗಿದ್ದರೂ ಅವರಿಗೆ ಅದರ ಬಿಸುಪು ತಾಗಿದಂತಿಲ್ಲ. ಕ್ಯಾಮೆರಾ ತೆಗೆಯುವ ತದ್ರೂಪು ಫೋಟೋಗಳಿಗಿಂತ ಇವರ ಚಿತ್ರಗಳಲ್ಲಿರುವ ಜೀವಂತಿಕೆ, ಕ್ರಿಯಾಜನ್ಯತೆ ಅನನ್ಯ. ಇದು ಖ್ಯಾತ ಅಂಕಣಕಾರ ಎಚ್ಚೆಸ್ಕೆ ಮೆಚ್ಚಿ ಬರೆದ ಮಾತುಗಳು. ಮುಂದುವರೆದು ಅವರನ್ನು 'ಚತುರ್ಮುಖ ಕುಂಚಬ್ರಹ್ಮ' ಎಂದು ಎಚ್ಚೆಸ್ಕೆ ಕರೆದಿದ್ದಾರೆ. ಹೌದು ಅವರ ನೈಪುಣ್ಯ ಕಲೆಯ ಸಾಧ್ಯತೆಯಲ್ಲಿ ಪರಂಪರೆಯ ಪ್ರೀತಿ ಮತ್ತು Social homogeneity ಇದೆ. ಪ್ರಕೃತಿಯ ಸರಳ ಸಹೃದಯ ಸಂಪನ್ನತೆ ಇದೆ.
ಪಿ. ಆರ್. ಟಿ. ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿ ಕಲೆಗೆ ಸಂಬಂಧಿಸಿದ ನಲವತ್ತೇಳು ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರೇ ಸಂಪಾದಿಸಿದ ಇಪ್ಪತ್ತು ಗ್ರಂಥಗಳಿವೆ. ಇದುವರೆಗೆ ಈ ದಾಖಲೆ ಮುರಿಯಲಾಗಿಲ್ಲ. ಸಾಹಿತ್ಯ ಅಕಾಡೆಮಿ ಇಲ್ಲವೇ ಪುಸ್ತಕ ಪ್ರಾಧಿಕಾರ ಮಾಡುವಷ್ಟು ಮಹತ್ತರ ಕೆಲಸವದು. ನಿಸರ್ಗ ಚಿತ್ರಗಳ ನಿಸ್ಸೀಮ ಪಿ.ಆರ್.ಟಿ. ಅವರನ್ನು ಹುಡುಕಿಬಂದ ಗೌರವ ಪ್ರಶಸ್ತಿಗಳು ಹತ್ತು ಹಲವು. ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಕಲೆಗಾಗಿ ಕರ್ನಾಟಕ ಸರಕಾರ ಮುಡಿಪಿಟ್ಟ ಅತ್ಯುನ್ನತ ವರ್ಣಶಿಲ್ಪಿ ಕೆ. ವೆಂಕಟಪ್ಪ ಪ್ರಶಸ್ತಿ ಮುಖ್ಯವಾದವು. ತನ್ನ ಎಪ್ಪತ್ತೆಂಟನೆಯ (೦೭.೦೪.೨೦೦೦) ಮುಪ್ಪಿನ ಕಾಲದಲ್ಲಿ ಈ ಹಿರಿಯ ಚೇತನ ವಿರಾಮಕ್ಕೆ ತೆರಳಿತು. ಮೈಸೂರು ಮಹಾನಗರ ಪಾಲಿಕೆ, ಮಾನಸ ಗಂಗೋತ್ರಿ ಅತಿಥಿಗೃಹದ ಬಳಿಯ ಚೌಕಕ್ಕೆ ಪಿ.ಆರ್.ಟಿ. ಹೆಸರಿಟ್ಟಿದೆ. ಸರಕಾರ ಮೈಸೂರಲ್ಲಿ ಅವರ ಹೆಸರಿನ ಪ್ರತಿಷ್ಠಾನ ಸ್ಥಾಪಿಸಿದೆ.
ಮಲ್ಲಿಕಾರ್ಜುನ ಕಡಕೋಳ
9341010712
ವಿಳಾಸ :
ಮಲ್ಲಿಕಾರ್ಜುನ ಕಡಕೋಳ
1784/20, ಮಹಡಿ - 1
ಮೇನ್ - 7, ಕ್ರಾಸ್ - 14,
ಸಿದ್ಧವೀರಪ್ಪ ಬಡಾವಣೆ
ದಾವಣಗೆರೆ - 577004
ಈ ಅಂಕಣದ ಹಿಂದಿನ ಬರಹಗಳು
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.