Date: 07-08-2024
Location: ಬೆಂಗಳೂರು
"ಏಕಕಾಲಕ್ಕೆ ನಾಡಿನಾದ್ಯಂತ ಇಂತಹದ್ದೊಂದು ಸಾಂಗತ್ಯದ ಪ್ರೀತಿಕಾಂಕ್ಷೆಗಳನ್ನು ಹೊಂದಿದ ಅಪರೂಪದ ಸಾಂಸ್ಕೃತಿಕ ವ್ಯಕ್ತಿ ಬರಗೂರು ಮೇಷ್ಟ್ರು. ಮನುಷ್ಯ ಸಂಬಂಧಗಳು ಕಣ್ಮರೆಯಾಗುತ್ತಿರುವ ಪ್ರಸ್ತುತ ದುರಿತ ಕಾಲದಲ್ಲಿ ಅಕ್ಷರಶಃ ಇದು ಅಪರೂಪವೇ ಹೌದು. ಅಂತೆಯೇ ನಮ್ಮ ಕಾಲದ ಮಹಾನ್ ವ್ಯಕ್ತಿತ್ವದ ಜತೆ ಒಡನಾಡಿದ ಪ್ರೀತಿ ನಮಗೆಲ್ಲ. ಆದರೆ ಅತೀ ಸಾಮಾನ್ಯನಂತೆ ಬಾಳಿದ ಬರಗೂರು ಮಾಸ್ತರ ಅಸಾಮಾನ್ಯರು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣದಲ್ಲಿ ‘ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ’ ಕುರಿತು ಬರೆದಿರುವ ಲೇಖನ.
ಬೆಂಗಳೂರು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಬೃಹತ್ ಸಭಾಂಗಣ ತುಂಬಿ ತುಳುಕಿತ್ತು. ದೂರದ ಬೀದರಿನ ಮುಡಬಿಯಿಂದ ಹಿಡಿದು ಇತ್ತ ಚಾಮರಾಜ ನಗರದ ಮೂಡ್ನಾಕೂಡುವರೆಗೂ ಎಂಬಂತೆ ಕಿಕ್ಕಿರಿದ ಜನಜಾತ್ರೆ. ಬಸ್ಸು, ಮಿನಿ ಬಸ್ಸು, ಕಾರು, ರೈಲು ಹೀಗೆ ತುಂಬಿ ಬಂದ ಜನಪ್ರೀತಿ, ಸ್ನೇಹಗಳ ಸಾಗರ. ಏಕಕಾಲಕ್ಕೆ ನಾಡಿನಾದ್ಯಂತ ಇಂತಹದ್ದೊಂದು ಸಾಂಗತ್ಯದ ಪ್ರೀತಿಕಾಂಕ್ಷೆಗಳನ್ನು ಹೊಂದಿದ ಅಪರೂಪದ ಸಾಂಸ್ಕೃತಿಕ ವ್ಯಕ್ತಿ ಬರಗೂರು ಮೇಷ್ಟ್ರು. ಮನುಷ್ಯ ಸಂಬಂಧಗಳು ಕಣ್ಮರೆಯಾಗುತ್ತಿರುವ ಪ್ರಸ್ತುತ ದುರಿತ ಕಾಲದಲ್ಲಿ ಅಕ್ಷರಶಃ ಇದು ಅಪರೂಪವೇ ಹೌದು. ಅಂತೆಯೇ ನಮ್ಮ ಕಾಲದ ಮಹಾನ್ ವ್ಯಕ್ತಿತ್ವದ ಜತೆ ಒಡನಾಡಿದ ಪ್ರೀತಿ ನಮಗೆಲ್ಲ. ಆದರೆ ಅತೀ ಸಾಮಾನ್ಯನಂತೆ ಬಾಳಿದ ಬರಗೂರು ಮಾಸ್ತರ ಅಸಾಮಾನ್ಯರು. ಒಮ್ಮೆ ಅವರ ಒಡನಾಟದ ಕಕ್ಷೆಗೆ ಹೋದರೆ ಸಾಕು, ಅವರ ಸ್ನೇಹಶೀಲ ತಿತಿಕ್ಷೆಯೆದರು ಎಲ್ಲ ನಿರ್ಲಿಪ್ತತೆಗಳು ಸೋರಿ ಹೋಗುತ್ತವೆ.
ಅವರು ಹುಟ್ಟಿ ಬೆಳೆದ ಬರಗೂರೆಂಬುದು ಬಯಲು ಸೀಮೆಯ ಬಿಸಿಲನಾಡು. ಬಲಾಢ್ಯ ಜಾತಿ, ಹಣ, ಅಧಿಕಾರಗಳಿಲ್ಲದವರ ಗುಣಾಢ್ಯತನದಂತೆ ನೆರವಿಗೆ ಬರುವುದೇ ಹುಟ್ಟೂರ ಹೆಸರು. ಅಂತೆಯೇ ತನ್ನ ಹೆಸರಿನ ಹಿಂದೆ ರಾಮಚಂದ್ರಪ್ಪ ಇಟ್ಟುಕೊಂಡ ಹುಟ್ಟೂರ ಹೆಸರೇ ಬರಗೂರು. ಕರ್ನಾಟಕದ ಅನೇಕ ಹಳ್ಳಿಗಳಂತೆ ಇದೊಂದು ಸಾಮಾನ್ಯ ಹಳ್ಳಿ. ಕಮರಿದ ಕೆರೆ, ಕರಿಜಾಲಿ, ಬೇವಿನ ಗಿಡ, ಮರ, ಕಾಗೆ, ಗುಬ್ಬಿಗಳೇ ಬರಗೂರು ಸೀಮೆಯ ಸಂಪತ್ತು. ಬಾಲ್ಯದಲ್ಲಿ ಬಸ್ ಚಾಲಕನಾಗುವ ಕನಸು. ತಮ್ಮೂರಿಗೆ ಬರುವ ಖಾಸಗಿ ಮತ್ತು ಸರ್ಕಾರದ ಕೆಂಪು ಬಸ್ಸುಗಳ ಪೈಪೋಟಿಯಲ್ಲಿ 'ಕೆಂಪು' ಬಸ್ ಪರವಾದ ನಿಲುವು. ಹೀಗೆ ಅರಿವು ಮೂಡದ ಎಳಮೆಯಲ್ಲೇ ಎಡದ ಒಲುಮೆ. ಇದನ್ನವರು ಆತ್ಮಕಥನವಾಗಿ ಹೇಳಿ ಕೊಂಡಿದ್ದಾರೆ. ಕಾಲಕಾಲಕ್ಕೆ ಎರಗಿ ಬರುವ ಬದುಕಿನ ನೂರಾರು ಸವಾಲುಗಳನ್ನು ಏಕಲವ್ಯನಾಗಿ ಎದುರಿಸಿದ ರೀತಿಯಲ್ಲೇ ಪ್ರೀತಿ ಮತ್ತು ನಿರ್ಭೀತಿ ಹುಡುಕಿ ಕೊಂಡವರು.
ಸತ್ಯ ಅಪಸತ್ಯದ ವ್ಯಾಖ್ಯಾನ - ಅಪ ವ್ಯಾಖ್ಯಾನಗಳ ಕುರಿತಾದ ಅವರ ವಿಶ್ಲೇಷಣೆಗಳೇ ಅನನ್ಯ. ಪ್ರಭುತ್ವದ ಜತೆ ಯಾವತ್ತೂ ರಾಜೀ ಮನೋಭಾವ ಹೊಂದದೇ ಜನಪರ ನಿಲುವು ಮತ್ತು ಗೆಲುವಿನ ದಿಟದ ದಾರಿಯ ಆಯ್ಕೆ. ಅದು ಅವರಿಗೆ ಮಾತ್ರ ಸಾಧ್ಯ. ವರ್ತಮಾನದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ಅವರ ಲೋಕಸ್ಪಂದನಕ್ಕೆ ಅಪ್ಡೇಟ್ಸ್ ಮತ್ತು ಸಮುದಾಯ ಪ್ರಜ್ಞೆಯ ಆಳದ ಕಾಳಜಿ. ಅವರ ಪ್ರತಿ ಭಾಷಣದಲ್ಲೂ ಅಯಾಚಿತವಾಗಿ ಒದಗಿ ಬರುವ ಅಪ್ರತಿಮತೆ. ಅದೇನೋ ಹೊಸತನದ ಶೋಧಪ್ರದ ವಿವೇಚನೆಗಳು.
ಅಂದು ಬರಗೂರು ಮೇಷ್ಟ್ರಿಗೆ ಎಪ್ಪತ್ತೈದು ದಾಟಿದ (೧೮.೧೦.೧೯೪೬) ಸ್ನೇಹ ಗೌರವದ ಹಬ್ಬ. ಅವತ್ತು ಸಹಿತ ಅವರ ಮಾತುಗಳಲ್ಲಿ ಇದೆಲ್ಲ ಪ್ರತ್ಯಕ್ಷವಾಯ್ತು. ಅಲ್ಲಿ ಎಲ್ಲವೂ ಅಚ್ಚುಕಟ್ಟು. ಎಲ್ಲೂ ಅನಗತ್ಯ ಮಾತುಗಳಿಗಿನಿತು ಅವಕಾಶವಿಲ್ಲ. ಜ್ಞಾನಜ್ಯೋತಿ ಸಭಾಂಗಣದ ಸಹಸ್ರಕ್ಕು ಮಿಕ್ಕಿದ ಕುರ್ಚಿಗಳು ತುಂಬಿದ್ದವು. ನಿಂತುಕೊಂಡೇ ಕಾರ್ಯಕ್ರಮ ಸವಿದವರನೇಕರು. ಇದು ಸಂಖ್ಯೆಗಾಗಿ ಉಲ್ಲೇಖಿತ ಲೆಕ್ಕವಲ್ಲ. ಮನದುಂಬಿ ಬಂದ ಪ್ರೀತ್ಯಾದರದ ಗುಣಸಂಖ್ಯೆ. ಕಾರ್ಯಕ್ರಮಕ್ಕೆ ಮುನ್ನ ತಾಸೊಪ್ಪತ್ತು ಮನೆ ಮಗಳಂತಹ ಶಮಿತಾ ಮಲ್ನಾಡ್ ಮತ್ತು ತಂಡದಿಂದ ಬರಗೂರು ನಿರ್ದೇಶನದ ಚಲನಚಿತ್ರ ಗೀತೆಗಳು, ವರನಟ ರಾಜಕುಮಾರ ಹಾಡುಗಳ ಮಧುರ ಗಾಯನ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮನದುಂಬಿ ಹರಸಿ ಬರೆದು ಕಳಿಸಿದ ಹದುಳ ಹಾರೈಕೆಯ ಸಂದೇಶ ವಾಚನ. ವತ್ಸಲಾ ಮೋಹನ್ ಉಣ ಬಡಿಸಿದ ರುಚಿ ರುಚಿಯಾದ ನಿರೂಪಣೆ. ಹೌದು ವಾಂಛಲ್ಯ ತುಂಬಿದ ವತ್ಸಲಾ ಮಾತುಗಳಲ್ಲಿ ಬುರುಗುಭರಿತ ಬಿಸಿ ಬಿಸಿಯಾದ ಫಿಲ್ಟರ್ ಕಾಫಿಯ ಘಮ. ಬಯಕೆ ತುಂಬಿದ ಭಾವ ಬರಕಿ ಖಾಲಿ ಮಾಡಿಕೊಳ್ಳುವ ಅಮಿತ ವಾತ್ಸಲ್ಯ.
ನಮ್ಮವರೇ ಆದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ತೊಂಬತ್ತರ ಅಂಚಿನ ಜಾನಪದ ಕಾವ್ಯಚೇತನ ಡಾ. ಚಂದ್ರಶೇಖರ ಕಂಬಾರ, ಬರಗೂರು ಮೇಷ್ಟ್ರ ಪ್ರೀತಿಗೆ ಪಾತ್ರರು ಮತ್ತು ಸ್ನೇಹಗೌರವ ಕಾರ್ಯಕ್ರಮದ ಪ್ರಮುಖ ರೂವಾರಿಯಾದ ಎಂ.ಎಲ್.ಸಿ. ಪುಟ್ಟಣ್ಣ ವೇದಿಕೆ ಮೇಲಿದ್ದರು. ಉಲ್ಲೇಖಿಸಲೇ ಬೇಕಾದ ಎರಡು ಮೇರು ವ್ಯಕ್ತಿತ್ವ ಸಂಗತಿಗಳಿವೆ. ನೆರೆಯ ಕೇರಳದ ಪ್ರಗತಿಪರ ಚಿಂತಕಿ ಶೈಲಜಾ ಟೀಚರ್ ಉಪಸ್ಥಿತಿ. ಕೊರೊನಾ ಕಾಲದಲ್ಲಿ ಭಾರತ ದೇಶವೇ ಮೆಚ್ಚಿ, ಅಚ್ಚರಿ ಪಡುವಂತೆ ಸಾಂಕ್ರಾಮಿಕ ಕೊರೊನಾ ತಹಬಂದಿಗೆ ತಂದು ಜನರ ಪ್ರಾಣ ಉಳಿಸಿದ ಕೀರ್ತಿಶಾಲಿ ಶೈಲಜಾ ಟೀಚರ್. ಆಗ ಆಕೆ ಕೇರಳ ಸರ್ಕಾರದ ಆರೋಗ್ಯ ಸಚಿವೆ. ಈಗವರು ಶಾಸಕಿ ಮಾತ್ರ. ಜಾಗತಿಕ ಮಟ್ಟದ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ''ಅಕ್ರಮಾಸಿ'' ಕೃತಿ ಖ್ಯಾತಿಯ ಮಹಾರಾಷ್ಟ್ರದ ಶರಣಕುಮಾರ ಲಿಂಬಾಳೆ ಉಪಸ್ಥಿತಿಯು ಅಷ್ಟೇ ಮುಖ್ಯವಾಗಿತ್ತು. ಕನ್ನಡ ಬಾರದ ಅವರಿಬ್ಬರೂ ಬರಗೂರು ಮತ್ತು ಕನ್ನಡ ಸಾರಸ್ವತ ಪ್ರಪಂಚ ಕುರಿತು ಪ್ರಬುದ್ಧ ಮಾತುಗಳನ್ನೇ ಆಡಿದರು. ಜೀವಪ್ರಜ್ಞೆಯ ದಾರ್ಶನಿಕ ದೃಷ್ಟಿಕೋನದ ಬರಗೂರು ಬದುಕು ಸಾಧನೆಗಳನ್ನು ಕೊಂಡಾಡಿದರು.
ಬರಗೂರು ಅವರದು ಬಹುತ್ವ ಸಂಸ್ಕೃತಿಯಂತೆ ಸಾಹಿತ್ಯ, ಸಿನೆಮಾ, ಮಾನವೀಯತೆ, ಸ್ನೇಹ ಸಂಸ್ಕೃತಿಗಳ ಮಹಾ ಸಂಗಮ. ಮನುಷ್ಯಪ್ರೀತಿಯ ಬಹುಮುಖ ಪ್ರತಿಭೆ. ಮುಕ್ಕಾಗದ ಮತ್ತು ಮುಪ್ಪಾಗದ ತಾಯ್ತನವುಳ್ಳ ಮಾನವೀಯತೆ ಅವರದು. ಬರಗೂರು ಅವರಿಗಿಂತ ಶ್ರೇಷ್ಠ ಸಾಹಿತಿಗಳು ಇರಬಹುದು. ಆದರೆ ಅವರಂತಹ ಅಂತಃಕರಣವುಳ್ಳವರು ಅವರೊಬ್ಬರೇ ಅನ್ನುವಷ್ಟು ಅಪರೂಪ. ಬರಗೂರು ರಾಮಚಂದ್ರಪ್ಪ ಬಂಡಾಯ ಸಾಹಿತಿ, ಪರಿಣಾಮಕಾರಿ ಭಾಷಣಕಾರ, ಕಲಾತ್ಮಕ ಚಲನಚಿತ್ರಗಳ ನಿರ್ದೇಶಕ, ಸಂವೇದನಾಶೀಲ ಹೋರಾಟಗಾರ, ಜನಚಳವಳಿಯ ನೇತಾರ ಹೀಗೆ ಅವರದು ಬಹುಮುಖಿ ಆಯಾಮದ ವ್ಯಕ್ತಿತ್ವ. ಕನ್ನಡ ಸಾಹಿತ್ಯ, ಸಿನಿಮಾ, ಪ್ರಾಧ್ಯಾಪನ, ಪ್ರಗತಿಪರ ಚಳವಳಿ ಮತ್ತು ಸಾಂಸ್ಕೃತಿಕ ಲೋಕದ ಐಕಾನ್. ಹೌದು ಇದ್ದರೆ ಸಾಂಸ್ಕೃತಿಕ ನಾಯಕನೊಬ್ಬ "ಹೀಗೇ" ಇರಬೇಕೆಂಬುದಕ್ಕೆ ರೂಪುಗೊಂಡ ಮಾದರಿ ಬರಗೂರು.
ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳ ಕೆರೆಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಕರಿಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ. ಇವು ಬರಗೂರು ರಾಮಚಂದ್ರಪ್ಪನವರ ಅಂತರಾಳ ತುಂಬಿದ ನೆಲಧರ್ಮದ ಮಾತುಗಳು. ತಳಮಟ್ಟದ ಜನರ ನೋವುಗಳಿಗೆ ಸದಾ ತುಡಿಯುವ, ಚಿಂತಿಸುವ ಮನಸ್ಸು ಅವರದು.
ಅವರದೇ ಕಾವ್ಯ" ಬದಲಾವಣೆಯ ಬಾವುಟ ಹಿಡಿದು ಬರುತೇವ ನಾವು ಬರುತೇವ. ಬವಣೆ, ಬೆವರು ಬಂಡಾಯದ ಸಮತೆಯ ಶಕ್ತಿಯಾಗಿ" ಎಂಬ ಹಾಡಿನ ಝೇಂಕಾರ ನಾದ. ಬೆವರೇ ದೇವರೆಂಬ ಮತ್ತು ಆಸ್ತಿಯನ್ನು ನಾಸ್ತಿ ಎನ್ನುವ ಶ್ರಮ ಸಂಸ್ಕೃತಿ. ಕನ್ನಡ ಅವರ ಸಿರಿಕಂಠದಲ್ಲಿ ವಿನೂತನ ಪದದೀಕ್ಷೆ ಪಡೆದು ಹೊಸಹುಟ್ಟು ಪಡೆವ ಕಾವ್ಯಾನುಭೂತಿ. ಅಂತಹ ಜೀವಧ್ವನಿಯ ಅವರ ಮಾತುಗಳೇ ವಿಭಿನ್ನ ಸಂಸ್ಕೃತಿಯಾಗಿ ರೂಪಾಂತರಗೊಳ್ಳುವ ಸೋಜಿಗ. ಏನಿಲ್ಲವೆಂದರೂ ಕಳೆದ ನಾಲ್ಕು ದಶಕಗಳಿಂದ ನಾನು ಅವರ ಭಾಷಣಗಳನ್ನು ಕೇಳಿ ಕೇಳಿ ಕಂಡುಕೊಂಡ ಸತ್ಯವಿದು.
ಅವು ದಿಟದ ನುಡಿಗಳು. ಹಟದ ಮತ್ತು ಚಟದ ನುಡಿಗಳಲ್ಲ. ನಡೆ ನುಡಿ ಒಂದಾದ ಬದುಕು ಮತ್ತು ಸಾಧನೆ. ಬರಹಕ್ಕಿಂತ ಬದುಕು ದೊಡ್ಡದು. ಅಂತಹ ಬದುಕು ಬಾಳಿದವರು ಬರಗೂರು. ಅದು ಕಾಗೆ ಕಾರುಣ್ಯದ ಸಂಬಂಧ. ಒಂದರ್ಥದಲ್ಲಿ ಅವರದು ತತ್ವಪದಕಾರರ ಗುರುಮಾರ್ಗ ಪರಂಪರೆ. ಅವರಿಂದ ಬದುಕ ದೀಕ್ಷೆ ಪಡಕೊಂಡ ಶಿಷ್ಯರನೇಕರಲ್ಲಿ ಅಂತಹದ್ದೊಂದು ಶಿಶುಮಕ್ಕಳ ಭಾವ ಬಂಧುರತೆ. ಅವರ ನೇರ ಶಿಷ್ಯರಲ್ಲದ ನನ್ನಂತಹ ಅನೇಕರಿಗೂ ಬರಗೂರು ಬಗ್ಗೆ ಗುರು ಭಾವಬಂಧ.
ಎಂದೂ ಇಲ್ಲದ ಬರಗೂರು ಅಂದು ಮಾತ್ರ ಕುಟುಂಬ ವತ್ಸಲರಾಗಿ ಒಂದೆರಡು ಕೃತಜ್ಞತೆಯ ಮಾತುಗಳಾಡಿದರು. ಆದರೆ ಅಲ್ಲೊಂದು ಬೃಹತ್ ಕೊರತೆ ಅನೇಕರಿಗೆ ಕಂಡದ್ದು ಹೀಗಿತ್ತು. ಅಲ್ಲಿ ರಾಜಲಕ್ಷ್ಮಿ ಮೇಡಂ ಇರಬೇಕಿತ್ತು, ಎಂಬುದೇ ವಿಪ್ರಲಂಭ ಭಾವ. ಅದನ್ನು ಕಾರ್ಯಕ್ರಮ ನಿರೂಪಕಿ ವತ್ಸಲಾ ಸೂಚ್ಯವಾಗಿ ಉಲ್ಲೇಖಿಸಿದರು. ಸಮಷ್ಟಿ ಪ್ರಜ್ಞೆಯ ಅವರು ಅವತ್ತು ಕೃತಜ್ಞತೆಯ ಸಣ್ಣದೊಂದುನೆನಪು ಮಾಡಿಕೊಂಡದ್ದೇ ದೊಡ್ಡದು.
ಚಲನಚಿತ್ರ ರಂಗದ ನಿರ್ಮಾಪಕ, ಸಂಗೀತ ಲೋಕ, ತಂತ್ರಜ್ಞರು, ನಟ ನಟಿಯರು ಅಲ್ಲಿ ಸೇರಿದ್ದರು. ಸಾಹಿತ್ಯ ಜಗತ್ತಿನ ಜಾತ್ರೆಯೇ ಸೇರಿತ್ತು. ರಂಗಭೂಮಿ, ಪತ್ರಿಕಾ ಲೋಕ. ಎಲ್ಲಾ ರಾಜಕೀಯ ಪಕ್ಷಗಳ ಚಿಂತನಶೀಲರು. ಒಟ್ಟಾರೆ ಅದು ಸಾಂಸ್ಕೃತಿಕ ಲೋಕದ ಹಬ್ಬವಾಗಿತ್ತೆಂದರೆ ಅತಿಶಯೋಕ್ತಿ ಅಲ್ಲ. ಅಂತಹದ್ದೊಂದು ಹಬ್ಬಕ್ಕೆ ಬರಗೂರು ಮೇಷ್ಟ್ರರನ್ನು ಒಪ್ಪಿಸಿದ ಕತೆಯನ್ನು ಪ್ರಾಸ್ತಾವಿಕ ಮಾತುಗಳ ಮೂಲಕ ರಾಜಪ್ಪ ದಳವಾಯಿ ಮತ್ತು ಪುಟ್ಟಣ್ಣ ಸೊಗಸಾಗಿ ಸಾದರ ಪಡಿಸಿದರು.
ಗೆಳೆಯರೊಬ್ಬರ ಅಂದಾಜಿನಂತೆ ಸಾವಿರಕ್ಕೂ ಹೆಚ್ಚು ಮಂದಿ ಮೇಷ್ಟ್ರು ಜೊತೆ ಫೋಟೋ ತೆಗೆಸಿಕೊಂಡರು. ಮೆರುನ್ ಕಲರಿನ ಹಳೆಯ ಶರ್ಟ್ ತೊಟ್ಟುಕೊಂಡಿದ್ದ ಮೇಷ್ಟ್ರು ಇವತ್ತಾದರೂ ವಿಶೇಷ ಡ್ರೆಸ್ ಮಾಡಿಕೊಂಡು ಬರಬೇಕಿತ್ತೆಂದು ನಾವು ಗೆಳೆಯರನೇಕರು ಮಾತಾಡಿಕೊಂಡೆವು. ಇನ್ನೇನಿಲ್ಲ ರಾಜಲಕ್ಷ್ಮಿ ಮೇಡಂ ಇಲ್ಲದಿರುವುದೇ ಅಲ್ಲಿ ಎಲ್ಲರನು ಕಾಡಿತ್ತು. ಬರಗೂರು ಅವರು ತಮ್ಮ ಭಾಷಣದ ಕೊನೆಯಲ್ಲಿ ಹೇಳಿದ ಮನುಷ್ಯರಾಗೋಣ ಮತ್ತು ಮರ್ಯಾದಸ್ಥರಾಗೋಣ ಎಂಬ ಮಾತುಗಳು ಮನುಷ್ಯರೆಲ್ಲರಿಗೂ ಮತ್ತೆ ಮತ್ತೆ ಮುಟ್ಟಲೇ ಬೇಕಾದ ಮಾತುಗಳು.
- ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು:
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.