Date: 29-04-2023
Location: ಬೆಂಗಳೂರು
''ಈ ಬಾರಿಯಂತೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಸೀಟು ಹಂಚಿಕೆಯಲ್ಲೇ ಹೆಣಗಾಟ ಮಾಡಿ ಹೈರಾಣಗೊಂಡಿವೆ. ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದ ಪಕ್ಷಾಂತರ ಪಂದ್ಯಾಟವೇ ಈ ಬಾರಿ ಜರುಗಿದೆ. ತಾವು ಬಯಸಿದ ಟಿಕೆಟ್ ಸಿಗದ ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿಗಳ ಮತ್ತು ಕೆಲವು ಹಾಲಿ ಶಾಸಕರುಗಳ ಪಕ್ಷಾಂತರ ಪರ್ವವೇ ಪ್ರಚಂಡ ಪ್ರಮಾಣದಲ್ಲಿ ಗುರುಮಗುಟ್ಟಿದೆ,'' ಎನ್ನುತ್ತಾರೆ ಅಂಕಣಕಾರ, ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, “ವಿಧಾನಸಭೆಯ ಚುನಾವಣೆ” ಕುರಿತು ಲೇಖನವನ್ನು ಬರೆದಿದ್ದಾರೆ.
ವಿಧಾನಸಭೆಯ ಚುನಾವಣೆಗಳು ಜರುಗಲು ಕೇವಲ ಹತ್ತೇ ಹತ್ತು ದಿನಗಳು ಬಾಕಿ ಉಳಿದಿವೆ. ನಿರ್ಣಾಯಕ ಕ್ಷಣಗಳ ಪ್ರಜಾಪ್ರಭುತ್ವದ ಜೀವಂತಿಕೆಯ ಮತ್ತು ಕುತೂಹಲದ ಕ್ಷಣಗಳವು. ಚುನಾವಣಾ ಪ್ರಕ್ರಿಯೆಗಳು, ಪ್ರಚಾರಗಳು, ಅಕ್ರಮಗಳು ದಿನೆ ದಿನೇ ಚುರುಕಾಗುವುದು ಮಾತ್ರವಲ್ಲ, ಕಲಬುರ್ಗಿಯ ಬಿಸಿಲಿನಂತೆ ತಾರಕಕ್ಕೇರಿವೆ. ಪ್ರಜಾಪ್ರಭುತ್ವದ ತರಹೇವಾರಿ ಸೊಬಗಿನಲ್ಲಿ ಚುನಾವಣೆಗಳಿಗೆ ಸಹಜವಾಗಿ ಬಹುಮಹತ್ವ. ಅದಕ್ಕೆಂದೇ ಸಾರ್ವತ್ರಿಕ ಚುನಾವಣೆಗಳನ್ನು ಚುನಾವಣೆ ಆಯೋಗದಂತಹ ಸರ್ಕಾರದ ಸಂಸ್ಥೆಗಳು ಪ್ರಜಾಸತ್ತೆಯ ಹಬ್ಬ ಮತ್ತು ಜಾತ್ರೆಯೆಂತಲೇ ಕರೆದು ಸರ್ಕಾರಿ ಸಂಭ್ರಮಾಚರಣೆ ಮಾಡಿ ಅಧಿಕಾರಶಾಹಿ ಸಿಬ್ಬಂದಿ ತಮಗೆ ತಾವೇ ಬೆನ್ನು ಚಪ್ಪರಿಸಿಕೊಂಡು ಖುಷಿ ಪಡುತ್ತವೆ. ವಾಸ್ತವವಾಗಿ ಚುನಾವಣೆಗಳು ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ, ಕೆಲವು ಭ್ರಷ್ಟಾತೀಭ್ರಷ್ಟ ಮಧ್ಯವರ್ತಿ ಪುಢಾರಿಗಳಿಗೆ ಮಾತ್ರ ಜಾತ್ರೆ ಮತ್ತು ಹಬ್ಬಗಳಾಗಿವೆ. ಚುನಾವಣೆಗಳ ಈ ಹಬ್ಬ, ಜಾತ್ರೆ ಮುಗಿಯುವಷ್ಟರಲ್ಲಿ ಕೆಲವರಂತೂ ಸರಿಯಾಗೇ ದುಂಡಗಾಗಿ ಬಿಡುತ್ತಾರೆ.
ಹೀಗಾಗಿಯೇ ಬ್ಲಾಸ್ಟ್ ಕುಕ್ಕರುಗಳು, ಬ್ಲ್ಯಾಕ್ ಗಡಿಯಾರಗಳು, ಸಹಕಾರಿ ಸಂಘಗಳ ಸಾವಿರ ಕೋಟಿ ರುಪಾಯಿಗಳ ಖೊಟ್ಟಿ ಹಣಕಾಸು ವ್ಯವಹಾರಗಳು, ನಿತ್ಯವೂ ಪತ್ತೆಯಾಗುತ್ತಿರುವ ಲೆಕ್ಕರಹಿತ ಲಕ್ಷ, ಕೋಟಿ ಕೋಟಿ ನೋಟುಗಳು, ಸಹಸ್ರಾರು ಲೀಟರುಗಳ ಮದ್ಯದ ಬಾಟಲಿಗಳು ಅಟ್ಟಹಾಸ ಮೆರೆಯುತ್ತವೆ. ಜತೆಗೆ ಹಳೆಯ ಶೈಲಿಯ ಸಾವಿರ ಸಾವಿರ ಸಂಖ್ಯೆಯ ಸೀರೆ, ಪಂಚೆಗಳು. ಈಗಾಗಲೇ ಮೂರು ಸಾವಿರಕ್ಕೂ ಮಿಕ್ಕಿ ಮುಂದುವರೆಯುತ್ತಲೇ ಇರುವ ಅಂಕೆ ಮೀರಿದ ಚುನಾವಣೆ ಅಕ್ರಮಗಳು. ಅಂತೆಯೇ ಚುನಾವಣೆಗಳು ಕೆಲವರಿಗೆ ಅಕ್ರಮ ಸಂಪಾದನೆಯ ಉದ್ಯಮಗಳಾಗಿವೆ. ಚುನಾವಣೆ ಎಂದರೆ ಕೆಲವು ಅಭ್ಯರ್ಥಿಗಳಿಗೆ ಏನಾದರೂ ಮಾಡಿ ಗೆಲ್ಲುವ ಆಟಗಳಷ್ಟೇ.
ಈ ಬಾರಿಯಂತೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಸೀಟು ಹಂಚಿಕೆಯಲ್ಲೇ ಹೆಣಗಾಟ ಮಾಡಿ ಹೈರಾಣಗೊಂಡಿವೆ. ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದ ಪಕ್ಷಾಂತರ ಪಂದ್ಯಾಟವೇ ಈ ಬಾರಿ ಜರುಗಿದೆ. ತಾವು ಬಯಸಿದ ಟಿಕೆಟ್ ಸಿಗದ ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿಗಳ ಮತ್ತು ಕೆಲವು ಹಾಲಿ ಶಾಸಕರುಗಳ ಪಕ್ಷಾಂತರ ಪರ್ವವೇ ಪ್ರಚಂಡ ಪ್ರಮಾಣದಲ್ಲಿ ಗುರುಮಗುಟ್ಟಿದೆ. ಒಂದು ರಾಷ್ಟ್ರೀಯ ಮಟ್ಟದ ರಾಜಕೀಯ ಪಕ್ಷದ "ಮಾದರಿ" ಲೆಕ್ಕಾಚಾರವಂತೂ ಎಕ್ಕುಟ್ಟಿ ಹೋಗಿದೆ. ಹೀಗಾಗಿ ಅದು ಕಕ್ಕಾಬಿಕ್ಕಿಯಾದಂತಿದೆ.
ಇನ್ನು ಅಳೆದು ತೂಗಿ, ಚುನಾವಣಾಪೂರ್ವ ಸಮೀಕ್ಷೆಗಳ ಆಧಾರ ಇತ್ಯಾದಿ, ಇತ್ಯಾದಿ ಮಾನದಂಡಗಳ ದಂಡ ಪಿಂಡಗಳನ್ನು ಮತ್ತೆ ಮತ್ತೆ ಉಲ್ಲೇಖಿಸುವ ದೃಶ್ಯ ಮಾಧ್ಯಮಗಳ ತುಂಬೆಲ್ಲಾ ಸುದ್ದಿಗಳ ಅರಚಾಟ ಕಿರುಚಾಟ. ಅರ್ಥವಾಗದ ಇದ್ಯಾವ ನಿಯತ್ತಿನ ಇವರ ಪ್ರಜಾಪ್ರಭುತ್ವ.? ಮಾತು ಮಾತಿಗೆ "ಕ್ಷೇತ್ರದ ಜನತೆಯನ್ನು ಕೇಳಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ತನ್ನ ಸ್ಪರ್ಧೆ" ಮುಂತಾಗಿ ಅಭ್ಯರ್ಥಿಗಳ ಹೇಳಿಕೆಗಳು. ಅಕ್ಷರಶಃ ಅವು ಅರ್ಥ ಕಳೆದುಕೊಂಡ ರಾಜಕೀಯ ಬುಬ್ಬಣಾಚಾರದ ಸಿದ್ದಸೂತ್ರದ ಹೇಳಿಕೆಗಳೆಂಬುದು ತರಕಲಾಂಡಿ ಅಡನಾಡಿಗಳಿಗೂ ಅರ್ಥವಾಗುತ್ತದೆ. ಜನರನ್ನು ಮೂರ್ಖರನ್ನಾಗಿಸಿ ಬಿಡುವ ಕಲೆ ವೃತ್ತಿಪರ ರಾಜಕಾರಣಿಗಳಿಗಿಂತ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಇನ್ನು ಚುನಾವಣೆಗೆ ಮುನ್ನವೇ ಅಣಕು ಮತದಾನ ಮತ್ತು ಅಣಕು ಫಲಿತಾಂಶದಂತಹ ಮಾಧ್ಯಮಗಳ ಕೆಲವು ಸಮೀಕ್ಷೆಗಳು ಜನತಂತ್ರವನ್ನು ಅಣಕಿಸುತ್ತಲೇ ನಡೆದುದು ಢಾಳಾಗಿ ಗೋಚರಿಸುತ್ತಲಿದೆ. ಸಾಮಾಜಿಕ ಜಾಲತಾಣಗಳು ಸಹಿತ ಅದಕೆ ಹೊರತಾಗಿಲ್ಲ. ಇವರ ಸಂದೇಹಾಸ್ಪದದ ಎಲ್ಲ ಅಂತೆ ಕಂತೆ ಸೆಮಿಫೈನಲ್ ಸಮೀಕ್ಷೆಗಳನ್ನು ಕಿತ್ತೆಸೆಯುವ ಸಾಧ್ಯತೆಗಳಿವೆ.
ಇದರ ನಡಬರಕೂ ಮತಜಾಗೃತಿಯ ಕೆಲವು ಕಾರ್ಯಕ್ರಮಗಳು ಅಲ್ಲಲ್ಲಿ ಯಶಸ್ವಿಯಾಗಿ ಜರುಗುವುದನ್ನು ಅಲ್ಲಗಳೆಯಲಾಗದು. ಆದರೆ ಕೆಲವಂತು ಕೇವಲ ರಾಜಕೀಯ ವಿರೋಧಕ್ಕಾಗಿ ಎಂಬಂತೆ ವಿರೋಧಿ ಕಾರ್ಯಕ್ರಮ ನೀತಿಗಳೇ ಅವುಗಳ ಒಳಹೇತು ಆಗಿರುವುದು ಅಂತಹ ವಿಶೇಷವೇನಲ್ಲ. ಆದರೆ ವಾಮಪಂಥೀಯರಿಗೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಧಿಕಾರ ಮರೀಚಿಕೆಯಂತಾಗಿದೆ. ಅವರಿಗೆ ಅವಕಾಶಗಳು ಇಲ್ಲವೇ ಇಲ್ಲ ಎನ್ನುವಂತಿರುವಾಗ ಕೆಲವೊಮ್ಮೆ ಕಾಂಗ್ರೆಸ್ ಪರವಾದ ಅಪ್ರಕಟಿತ ವಿಚಾರಗಳು ಪ್ರಸ್ತುತವಾಗಿ ಕಾಣಿಸುತ್ತವೆ. ಇತ್ತೀಚೆಗೆ ಬೆಂಗಳೂರಿನ ಗಾಂಧಿಭವನದಲ್ಲಿ "ಸೌಹಾರ್ದ ಕರ್ನಾಟಕ ವೇದಿಕೆ" ಅಂತಹದ್ದೊಂದು ಮತಜಾಗೃತಿಯ ಕಾರ್ಯಕ್ರಮ ಏರ್ಪಡಿಸಿತ್ತು.
ಸೌಹಾರ್ದ ಭಾರತ ಮತ್ತು ಸೌಹಾರ್ದ ಕರ್ನಾಟಕಕ್ಕೆ ಧಕ್ಕೆ ಬಂದಿರುವ ಸಂದರ್ಭದಲ್ಲಿ "ಸೌಹಾರ್ದ ಕರ್ನಾಟಕ" ವೇದಿಕೆಯ ಈ ಕಾರ್ಯಕ್ರಮ ಸ್ವಾಗತಾರ್ಹ. ನಿನ್ನೆಯವರೆಗೆ ಬಲಪಂಥೀಯ ಪಕ್ಷದಲ್ಲಿದ್ದು ಇಂದು ತಮ್ಮ ಪಕ್ಷಕ್ಕೆ ಹಾರಿ ಬಂದೊಡನೆ ಅವನಲ್ಲಿನ ಅಷ್ಟು ವರ್ಷಗಳ ಎಲ್ಲ ಬಲಪಂಥೀಯ ಭಾವನೆಗಳು ಎಲ್ಲಿಗೆ ಹೋಗುತ್ತವೆ.? ಅಸೆಂಬ್ಲಿಯ ನಟ್ಟ ನಡುಮನೆಯಲ್ಲೇ ಕುಂತು ರಾಜಾರೋಷವಾಗಿ ನೀಲಿಚಿತ್ರ ನೋಡಿದವರನ್ನು ಆಗ ಹಿಗ್ಗಾಮುಗ್ಗಾ ಮೂದಲಿಸಿದವರೇ ಇಂದು ಅವರನ್ನು ಸಕಲೆಂಟು ಗೌರವಗಳೊಂದಿಗೆ ಪಕ್ಷದ ಧ್ವಜ ನೀಡಿ ಹೆಮ್ಮೆಯಿಂದ ಕರೆದುಕೊಂಡರು. ಒಂದಿಬ್ಬರು ಪ್ರಮುಖ ರಾಜಕಾರಣಿಗಳಿಗೆ ತಾವಿದ್ದ ಪಕ್ಷದಲ್ಲಿ ಟಿಕೆಟ್ ಸಿಗದ್ದಕ್ಕೆ ಮತ್ತೊಂದು ಪಕ್ಷಕ್ಕೆ ಜಂಪ್ ಮಾಡಿದರು. ಹಾಗಂದ ಮಾತ್ರಕ್ಕೆ ಸಮಗ್ರ ಅವರಿಬ್ಬರ ಜಾತಿ ಜನಾಂಗವೇ ತಮ್ಮ ಪಕ್ಷಕ್ಕೆ ಜಂಪ್ ಮಾಡಿದೆಯೆಂದು ಭಾವಿಸಬಾರದು.
ರಾಜಕಾರಣದಲ್ಲಿ ಯಾರೂ ಶಾಶ್ವತ ಸ್ನೇಹಿತರು ಮತ್ತು ಶಾಶ್ವತ ವೈರಿಗಳಲ್ಲ ಎಂಬುದನ್ನು ಈ ಮೂಲಕ ಸಾಬೀತು ಮಾಡುತ್ತಿದ್ದಾರೆ. ಅದೇನೇ ಇರಲಿ ಈ ಅಂಕಣ ಬರಹ ಬರೆದು ಮುಗಿಸುವ ಸಮಯದಲ್ಲಿ ಬದಲಾವಣೆಯ ಬಿರುಗಾಳಿ ದಟ್ಟವಾಗಿ ಬೀಸತೊಡಗಿದೆ. ಅದು ಬೀಸಬೇಕಾದ ನಿರೀಕ್ಷಿತ ಗಾಳಿಯೂ ಹೌದು. ನಿಸ್ಸಂದೇಹವಾಗಿ ಆಡಳಿತ ವಿರೋಧಿ ಅಲೆ ಪ್ರಚಂಡವಾಗಿ ಬೀಸತೊಡಗಿದ್ದು ಆಡಳಿತಾರೂಢ ಪಕ್ಷ ಎಕ್ಕುಟ್ಟಿ ಹೋಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಲಕ್ಷಣಗಳು ದಿನೆ ದಿನೇ ಹೆಚ್ಚಾಗತೊಡಗಿವೆ.
ಭೂಪತಿಗಳ ಮೆಚ್ಚಿ ಅರಸುಖ ತನಗಾಯ್ತು
ತಾ ಪೂರ್ಣ ಸುಖವಿಲ್ಲದೇ ಹೋಯ್ತೋಯ್ತು/
ಆ ಪರಬ್ರಹ್ಮವು ಒಲಿದರೇನಾಯ್ತು/
ಈ ಪರಿಭವವೆಲ್ಲ ಹರಿದು ಹರಿದು ಹೋಯಿತು.//
ಇದು ಕಡಕೋಳ ಮಡಿವಾಳಪ್ಪನ ಅನುಭಾವ ಪದ. ಪ್ರಸ್ತುತ ದುಡಿಯುವ ವರ್ಗದ ಸ್ವಾನುಭವದ ಮಾತುಗಳನ್ನು ಶತಮಾನಗಳ ಹಿಂದೆಯೇ ಆನುಭಾವಿಕ ದಂಗೆಖೋರ ಮಡಿವಾಳಪ್ಪ ಮನಮುಟ್ಟುವಂತೆ ಹೇಳಿದ್ದಾರೆ. ಆಳುವ ಆಳರಸರ ನಂಬಿ ಅರ್ಧ ಸುಖ(ಅರಸುಖ)ವನ್ನು ಸಹಿತ ಪಡೆಯದ ಸ್ಥಿತಿ ದುಡಿಯುವ ಜನಗಳದ್ದು. ಶ್ರಮಿಕರಿಗೆ ಪೂರ್ಣಸುಖದ ಮಾತು ಗಗನ ಕುಸುಮ. ಹೀಗೆ ಪರಿಶ್ರಮ ಸಂಸ್ಕೃತಿ ಕುರಿತು ಪ್ರಭುತ್ವಕ್ಕೆ ಚುರುಕು ಮುಟ್ಟಿಸುವ ನುಡಿಗಟ್ಟಿನ ಗಟ್ಟಿಪದವಿದು. ಅಂಥವರಿಗೆ ಆ ಪರಬ್ರಹ್ಮನೇ ಒಲಿದರೇನುಪಯೋಗ ಈ ಪರಿಭವವೆಲ್ಲ ಹರಿದು ಹರಿದು ಹೋಯಿತೆಂಬ ಹಳಹಳಿ ತುಂಬಿದ ಪ್ರತಿರೋಧದ ಮಾತುಗಳಿವು. ಜಮೀನುದಾರಿ ವ್ಯವಸ್ಥೆಯ ಪ್ರಭುತ್ವ ವಿರೋಧದ ಪ್ರತಿಭಟನೆಯ ನುಡಿಗಳಿವು.
ಅಂತೆಯೇ ಚುನಾವಣೆ ಘೋಷಣೆಯಾದ ವಾರವೊಪ್ಪತ್ತಲ್ಲೇ ಬೆಂಗಳೂರಿನ ಗಾಂಧಿಭವನದಲ್ಲಿ ಏರ್ಪಡಿಸಿದ್ದ "ಸಾರ್ವತ್ರಿಕ ಚುನಾವಣೆಗಳು ಮತ್ತು ಸಾರ್ವಜನಿಕರ ಹೊಣೆಗಳು" ವಿಷಯ ಕುರಿತು ಏರ್ಪಡಿಸಿದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಡಾ. ಮೀನಾಕ್ಷಿ ಬಾಳಿ, ಕಡಕೋಳ ಮಡಿವಾಳಪ್ಪನ ಈ ಅನುಭಾವ ಪದವನ್ನು ಉಲ್ಲೇಖಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅವರು ಸಮಕಾಲೀನ ಮಹಿಳೆಯ ಸಂಕಟ, ಬೇಗುದಿಗಳನ್ನು ಕುರಿತು ವಿವರಿಸಿದರು. ಕೆಲವು ವರ್ಷಗಳಿಂದ ನಮ್ಮನ್ನು ಆಳುತ್ತಿರುವ ಈ ಸರಕಾರವನ್ನು ಸಾಂಸ್ಕೃತಿಕ ಕಾರಣಗಳಿಗಾಗಿ ಕಿತ್ತೊಗೆಯಲೇ ಬೇಕಾಗಿದೆ ಎಂದು ಹೇಳಿದವರು ಹಿರಿಯ ರಂಗಕರ್ಮಿ, ಸಂಸ್ಕೃತಿ ಚಿಂತಕ ಪ್ರಸನ್ನ.
ಕುಬೇರ ಅದಾನಿಯ ಸಂಪತ್ತನ್ನು ಸಮೃದ್ಧಿಗೊಳಿಸಲು ಸಂಸ್ಕೃತಿಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೋಮುವಾದಿ ಪಕ್ಷವನ್ನು ನಿರ್ದಾಕ್ಷಿಣ್ಯವಾಗಿ ಸೋಲಿಸಲೇ ಬೇಕಾಗಿದೆ. ಹೀಗೆ ಮುಂದುವರೆದು ಮಾತನಾಡುತ್ತಾ ಕಾರ್ಪೊರೇಟ್ ಜಗತ್ತು ನಿರ್ಮಿಸಿರುವ ಬಿಕ್ಕಟ್ಟನ್ನು ಎದುರಿಸುತ್ತಿರುವ ದುಡಿಯುವ ವರ್ಗದ ಸಂಕಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟವರು ಕಾರ್ಮಿಕ ಮುಖಂಡ ದಿಲ್ಲಿಯ ಕೆ. ಎನ್. ಉಮೇಶ್. ಇವರ ಜತೆಯಲ್ಲಿ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ, ಕವಯತ್ರಿ ಕೆ. ಷರೀಫಾ, ಹಿರಿಯ ಪತ್ರಕರ್ತ ಬಿ. ಎಂ. ಹನೀಫ, ಆರ್ಥಿಕ ತಜ್ಞ, ವಿಚಾರವಾದಿ ಟಿ. ಆರ್. ಚಂದ್ರಶೇಖರ ಹೀಗೆ ಅನೇಕ ಪ್ರಜಾಪ್ರಭುತ್ವವಾದಿ ಚಿಂತಕರು ಭಾಗವಹಿಸಿದ್ದರು. ಅವರೆಲ್ಲರೂ ಪ್ರಸಕ್ತ ವ್ಯವಸ್ಥೆಯ ಕುರಿತು ಪ್ರಖರ ವಿರೋಧ ತೋರಿ ಈಗ ಮತದಾರ ಜಾಗೃತನಾಗದಿದ್ದರೆ ಮುಂದಿನ ವರ್ಷದ ರಾಷ್ಟ್ರೀಯ ಮಟ್ಟದ ಮಹತ್ತರ ಬದಲಾವಣೆ ಸಾಧ್ಯವಿಲ್ಲ. ಆದ್ದರಿಂದ ಇದೀಗ ಬದಲಾವಣೆಯ ಕಾಲ ಸನ್ನಿಹಿತಗೊಂಡಿದೆಯೆಂಬ ನಿರ್ಧಾರಕ್ಕೆ ಬಂದರು. ಆದರೆ ನೆನಪಿರಲಿ : ರಾಜಕೀಯ ಪಕ್ಷ ಮತ್ತು ವ್ಯಕ್ತಿ ಎರಡರ ನಡುವೆ ಪೂರ್ಣ ಪ್ರಮಾಣದ ಪ್ರಾಮಾಣಿಕ ಆಯ್ಕೆಯ ಸವಾಲು ಪ್ರಜ್ಞಾವಂತ ಮತದಾರನದಾಗಿದೆ. ಹೀಗಾಗಿ ಅಂತಿಮವಾಗಿ ಕಡಿಮೆ ಭ್ರಷ್ಟರು, ಕಡಿಮೆ ದುಷ್ಟರು, ಕಡಿಮೆ ಕೊಳಕರ ಆಯ್ಕೆಯೇ ಅನಿವಾರ್ಯವಾಗಿದೆ.
ಸಂವಿಧಾನ ಮತ್ತು ಅದರ ಮೂಲ ಆಶಯಗಳನ್ನೇ ಸುಡುವ ಹುನ್ನಾರಗಳನ್ನು ಕಿತ್ತೆಸೆಯದಿದ್ದರೆ ಜನಬದುಕಿಗೆ ಜಾಗವಿಲ್ಲ. ಏಕೆಂದರೆ ಭೂಪಟ ತೋರಿಸಿ ದೇಶವೆಂದು ಹೇಳುವವರಿಗೆ, ಬಾವುಟ ತೋರಿಸಿ ಭಾಷೆ ಗುರುತಿಸುವವರಿಗೆ, ಸಂವಿಧಾನವನ್ನು ಅದೊಂದು 'ಸಾಧಾರಣ ಪುಸ್ತಕ' ಅದನ್ನು ಸುಟ್ಟು ಹಾಕಬಹುದೆಂದು ಭಾವಿಸಿರುವವರಿಗೆ ತಕ್ಕಪಾಠ ಕಲಿಸದಿದ್ದರೆ ಉಳಿಗಾಲವಿಲ್ಲ. ಲೋಕಬದುಕಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರಗಳು ಧರ್ಮ ಮತ್ತು ಸನಾತನ ಸಂಸ್ಕೃತಿ ಹೆಸರಿನಲ್ಲಿ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕೆಲಸಗಳು ಎಗ್ಗಿಲ್ಲದೇ ಜರುಗುತ್ತಿವೆ.
ಮನುಸ್ಮೃತಿ ಸಂವಿಧಾನ ಜಾರಿ ಮಾಡುವ ಹುನ್ನಾರಗಳು ಒಳಗೊಳಗೆ ತಜಿವಿಜಿಯಲ್ಲಿ ತೊಡಗಿವೆ. ಅದಕ್ಕಾಗಿ ದೇಶ, ಭಾಷೆ, ಜನರ ಬದುಕಿನ ಸಂವಿಧಾನ ರಕ್ಷಣೆಗೆ ಇದು ಸಕಾಲ. ಅದು ಕರ್ನಾಟಕದಿಂದಲೇ ಗಟ್ಟಿಯಾಗಿ ಆರಂಭಗೊಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಅದಕ್ಕಾಗಿ ಇನ್ನೇನು ಹತ್ತೇಹತ್ತು ದಿನಗಳು. ಅದಕ್ಕಾಗಿ ಕಾಯೋಣ. ಬದಲಾವಣೆಯ ಬಿರುಗಾಳಿ ಬೀಸಿದೆ. ಹೊಸ ಕರ್ನಾಟಕದ ಹೊಸ ಕನಸುಗಳ ಬದುಕಿಗಾಗಿ ಸಿದ್ಧವಾಗೋಣ.
- ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.