Date: 05-12-2024
Location: ಬೆಂಗಳೂರು
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ್ಲಿನ ವ್ಯವಸ್ಥೆಯ ತೀವ್ರತೆಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರತಿಬಿಂಬಿಸುವ ಚಾಕಚಕ್ಯತೆಯನ್ನು ಕಾಣಬಹುದು. “ವಾಸ್ತವ ಪರಿಸ್ಥಿತಿಗೆ ಕಣ್ಣು ಕಿವಿ ತೆರದಿಟ್ಟು ಒಳ್ಳೆಯ ಬದುಕಿಗಾಗಿ ಹೋರಾಡುತ್ತಿರುವ ಜನತೆಗೆ ಸ್ಪೂರ್ತಿ ನೀಡುವಂತಹ ಕೃತಿ ರಚಿಸುವುದೇ ಪ್ರಗತಿಶೀಲತೆ”-( ಹಾ.ಮಾ.ನಾಯಕ) ಎಂಬುದು ಕಟ್ಟಿಮನಿಯವರ ನಿಲುವಾಗಿತ್ತು," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ಬಸವರಾಜ ಕಟ್ಟಿಮನಿಯವರ “ಅಜ್ಞಾತವಾಸಿ” ಕತೆಯ ಬಗ್ಗೆ ವಿಮರ್ಶಿಸಿದ್ದಾರೆ.
ಬಸವರಾಜ ಕಟ್ಟಿಮನಿ ಅವರು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಗತಿಶೀಲ ಕಾಲಘಟ್ಟದ ಬರಹಗಾರರಲ್ಲಿ ಪ್ರಮುಖರಾಗಿದ್ದವರು. ಉತ್ತರ ಕರ್ನಾಟಕದ ರೈತ ಕುಟುಂಬದಲ್ಲಿ 1919ರಲ್ಲಿ ಜನಿಸಿದ ಕಟ್ಟಿಮನಿಯವರು ಹಠ ಛಲ ಒರಟುತನದೊಂದಿಗೆ ಕಾರುಣ್ಯತೆ ಸಹ ಅವರಿಗೆ ಹುಟ್ಟಿನಿಂದಲೇ ಬಂದಿರುವಂಥದ್ದು. ತಾಯಿಯ ಎದೆಗಾರಿಕೆ ಕಲಿಸಿದ ಪಾಠ ಅನನ್ಯವಾಗಿರುವಂಥದ್ದು. “ನಾವಾಗಿಯೇ ಯಾರ ಮೇಲು ಬೀಳಬಾರದು ಅವರಾಗಿಯೇ ಸೊಕ್ಕಿ ಬಂದರೆ ಒಂದು ಕೈ ನೋಡಲೇಬೇಕು” ಎಂಬುದು ತಾಯಿಯ ಧೋರಣೆ. ಪತ್ರಿಕೋದ್ಯಮದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಸೆಣಸಾಡುತ್ತಲೇ ಹಲವಾರು ಪತ್ರಿಕೆಗಳಲ್ಲಿ ದುಡಿದರು. ‘ಸಂಯುಕ್ತ ಕರ್ನಾಟಕ’, ಗದುಗಿನ ‘ಕರ್ನಾಟಕ ಬಂಧು’ ‘ತರುಣ ಕರ್ನಾಟಕ’, ಮುಂತಾದ ಪತ್ರಿಕಾಲಯದಲ್ಲಿ ಉದ್ಯೋಗಸ್ಥರಾಗಿದ್ದರು. “ಸ್ವಾತಂತ್ರ್ಯದೆಡೆಗೆ”, “ಮಾಡಿ ಮಾಡಿದವರು”, “ ಜ್ವಾಲಾಮುಖಿಯ ಮೇಲೆ”, “ಮೋಹದ ಬಲೆಯಲ್ಲಿ”, “ಜರಕಾರಿ ಜಗದ್ಗುರು”, “ಬೀದಿಯಲ್ಲಿ ಬಿದ್ದವಳು”, ಮುಂತಾದ 35ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡ ಸರಸ್ವತ ಲೋಕಕ್ಕೆ ನೀಡಿದ ಅಪೂರ್ವ ಕೊಡುಗೆ ಇವರದು. “ಜ್ವಾಲಾಮುಖಿಯ ಮೇಲೆ”. ಕೃತಿಗೆ “ಸೋವಿಯತ್ ಲ್ಯಾಂಡ್ ನೆಹರು” ಪ್ರಶಸ್ತಿಯ ಗೌರವ ಸಹ ದೊರಕಿದೆ. “ಕಾರವಾನ್, ಗುಲಾಬಿ ಹೂ, ಆಗಸ್ಟ್ ಒಂಬತ್ತು, ಸೆರೆಯಿಂದ ಹೊರಗೆ, ಮುಂತಾದ ಹತ್ತಕ್ಕೂ ಹೆಚ್ಚು ಕಥಾಸಂಕಲನಗಳನ್ನು ನೀಡಿದ ಇವರು ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರು.
ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ್ಲಿನ ವ್ಯವಸ್ಥೆಯ ತೀವ್ರತೆಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರತಿಬಿಂಬಿಸುವ ಚಾಕಚಕ್ಯತೆಯನ್ನು ಕಾಣಬಹುದು. “ವಾಸ್ತವ ಪರಿಸ್ಥಿತಿಗೆ ಕಣ್ಣು ಕಿವಿ ತೆರದಿಟ್ಟು ಒಳ್ಳೆಯ ಬದುಕಿಗಾಗಿ ಹೋರಾಡುತ್ತಿರುವ ಜನತೆಗೆ ಸ್ಪೂರ್ತಿ ನೀಡುವಂತಹ ಕೃತಿ ರಚಿಸುವುದೇ ಪ್ರಗತಿಶೀಲತೆ”-( ಹಾ.ಮಾ.ನಾಯಕ) ಎಂಬುದು ಕಟ್ಟಿಮನಿಯವರ ನಿಲುವಾಗಿತ್ತು.
ಇವರ ಅಜ್ಞಾತವಾಸಿ ಕಥೆಯನ್ನು “ಆಗಸ್ಟ್ ಒಂಬತ್ತು” ಕಥಾ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಅಜ್ಞಾತವಾಸಿ ಕಥೆಯು ಸ್ವತಂತ್ರ ಸಂದರ್ಭದ ಒಂದು ಚಿತ್ರಣವನ್ನು ನಮಗೆ ಕಟ್ಟಿಕೊಡುತ್ತದೆ. ಕಥಾ ನಾಯಕ ಚನ್ನಬಸಪ್ಪನ ಹಳ್ಳಿಯಲ್ಲಿ ಸ್ವಾತಂತ್ರ ರಾಜ್ಯ ಸ್ಥಾಪನೆ ಸಲುವಾಗಿ ಪಟೇಲ ಶಾನುಭೋಗರ ರಾಜೀನಾಮೆ ಸ್ವಾತಂತ್ರ ರಾಜ್ಯವನ್ನು ಮುರಿಯಲು ಬಂದ ಪೊಲೀಸ್ ಅಧಿಕಾರಿಗಳು ಹಳ್ಳಿಯ ಕಾವಲು ನಡೆಸುತ್ತಿದ್ದ ಹುಡುಗರನ್ನು ಹೊಡೆದದ್ದು, ಈ ಗಲಾಟೆಯಲ್ಲಿ ಹಳ್ಳಿಯ ಜನ ರೇಗಿದ್ದು, ಇನ್ನೂ ಹೆಚ್ಚು ಗಲಭೆಯಾದದ್ದು, ಆ ಹೊಡೆದಾಟದಲ್ಲಿ ಅಧಿಕಾರಿಯೊಬ್ಬ ಗಾಯಗೊಂಡು ಪ್ರಾಣ ಬಿಟ್ಟದ್ದು, ಅದೇ ಸಮಯದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾಂಗ್ರೆಸ್ನ ಮುಖಂಡನಾದ ಚೆನ್ನಬಸಪ್ಪನಿಗೆ ಸುದ್ದಿ ತಿಳಿದಂತೆ ಆ ಸ್ಥಳಕ್ಕೆ ಧಾವಿಸಿ ಬಂದದ್ದು, ಮರು ದಿನ ಮಿಲಿಟರಿಯವರು ಬಂದು ಊರನೆಲ್ಲ ಕೊಳ್ಳೆ ಹೊಡೆಯುವರೆಂಬ ಸುದ್ದಿ ಹರಡಿದ್ದು, ಹೀಗಾಗಿ ಆ ರಾತ್ರಿಗೆ ಅವರೆಲ್ಲರೂ ಹಳ್ಳಿಯನ್ನು ಬಿಟ್ಟು ಹೋದದ್ದು ಈ ಎಲ್ಲ ಕಾರಣದಿಂದ ಪೊಲೀಸರು ಊರಿನಲ್ಲಿ ಅಳಿದುಳಿದ ಮುದುಕರು ಹೆಂಗಸರು ಇವರನ್ನು ಬೇಕಾಬಿಟ್ಟಿಯಂತೆ ತಳಿಸಿದ್ದು,ಕಾಂಗ್ರೆಸ್ನ ಮುಖಂಡನಾದ ಚನ್ನಬಸಪ್ಪನನ್ನು ಹುಡುಕುವ ಸಲುವಾಗಿಯೇ ಆತನ ಪತ್ನಿ ನಾಗಮ್ಮನ್ನು ಎಳೆದು ತಂದು ಭೀಕರವಾಗಿ ಚಿತ್ರಹಿಂಸೆ ನೀಡಿ ನಿತ್ಯವೂ ಅತ್ಯಾಚಾರ ನಡೆಸುತ್ತಲೇ,,ಅವಳ ಗಂಡನನ್ನು ಎಲ್ಲಿ ಬಚ್ಚಿಟ್ಟಿದ್ದೀಯ? ಎಂದು ಅಮಾನೀಯವಾಗಿ ಅಕೆಯನ್ನು ನಡೆಸಿಕೊಳ್ಳುವ ಹಾಗೂ ಈ ಎಲ್ಲಾ ಕ್ರೌರತೆಗಳು ತಲೆಮರೆಸಿಕೊಂಡು ಅಡ್ಡಾದಿಡಿಯಾಗಿ ಕಾಡಿನಲ್ಲಿ ಅಲೆಮಾರಿಯಂತೆ ಸಂಚರಿಸುವ ಚನ್ನಬಸಪ್ಪನಿಗೆ ತಿಳಿಯುವ ಸನ್ನಿವೇಶ. ತನ್ನ ಪತ್ನಿಯನ್ನು ಬಿಡಿಸಿಕೊಳ್ಳಲು ಬಂದಾಗ ತನ್ನ ಗಂಡನ ಬರುವಿಕೆಗಾಗಿ ಕಾದ ನಾಗಮ್ಮ ಆತನನ್ನು ನೋಡಿದ ಕ್ಷಣವೇ ಒಂದೆರಡು ಮಾತಾನಾಡಿದ ಬಳಿಕ ಆತನ ತೊಡೆಯ ಮೇಲೆ ಪ್ರಾಣ ಪಕ್ಷಿ ಹಾರಿಹೋಗುವ ದುರಂತ ಸನ್ನಿವೇಶವನ್ನು ಕಟ್ಟಿಕೊಡುವ ಚಿತ್ರಣವೆ ಈ ಅಜ್ಞಾತವಾಸಿಯ ಕಥಾಂದರ.
“ಸ್ವಾತಂತ್ರ್ಯದೆಡಗೆ”, ಮತ್ತು ‘ಮಾಡಿ ಮಡಿದವರು’, ಅಂತಹ ಕಾದಂಬರಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬಗೆಗೆ ಇರುವಷ್ಟೆ ಆವೇಶವನ್ನು ‘ಮೋಹದ ಬಲೆಯಲ್ಲಿ’ ಮತ್ತು ‘ಜರತಾರಿ ಜಗದ್ಗುರು’, ಕಾದಂಬರಿಗಳಲ್ಲಿ ಸಮಾಜದ ಹುಳುಕುಗಳನ್ನು ಬಯಲಿಗೆಳೆಯುವಲ್ಲಿ ಆಕ್ರೋಶ ತಾಳುತ್ತಾರೆ”-( ಸಾಲು ದೀಪ) ಈ ನಿಟ್ಟಿನಲ್ಲಿ ಅಜ್ಞಾತವಾಸಿ ಕಥೆಯು ಕೂಡ ಅದಕ್ಕೆ ಹೊರತಾಗಿಲ್ಲ ನಮ್ಮ ಸಮಾಜದ ಕ್ರೌರ್ಯದ ವಿರುದ್ಧ ಹೋರಾಡುವ ಹಳ್ಳಿಯ ಜನರಿರಬಹುದು ಅಥವಾ ಕಥಾನಾಯಕನಾದ ಚನ್ನಬಸಪ್ಪ ಇರಬಹುದು ಅಥವಾ ದುರಂತ ನಾಯಕಿಯಾಗಿ ಕಾಣುವ ಚನ್ನ ಬಸಪ್ಪನ ಮಡದಿ ನಾಗಮ್ಮಳಿರಬಹುದು, ಇವರೆಲ್ಲರೂ ಛಲದ ಪ್ರತೀಕಗಳಾಗಿ ಹಟದ ರೂವಾರಿಗಳಾಗಿ ಕಾಣಿಸುತ್ತಾರೆ. ತಪ್ಪು ಮಾಡದೆ ಶಿಕ್ಷೆಗಳಿಗೆ ಎಡೆಕೊಡುವ ಅಮಾಯಕ ಮುಗ್ಧ ಜೀವಿಗಳ ಕಥೆಯು ನೆನ್ನೆ ಮೊನ್ನೆಯದಲ್ಲ. ಅನಾದಿಕಾಲದಿಂದಲೂ ಈ ಸಮಾಜ ಅಮಾಯಕರ ಮುಗ್ಧರ ಬಲಿಯನ್ನು ಕೇಳಿ ಪಡೆಯುತ್ತಲೇ ಬಂದಿದೆ. ಇತಿಹಾಸದ ಪುಟಗಳನ್ನು ತೆರೆದಾಗ ಅಮಾಯಕರು ಬಲಿ ಆದಷ್ಟು ಮತ್ತಾರು ಆಗಿಲ್ಲ. ಯಾವುದೇ ಯುದ್ಧ, ಘರ್ಷಣೆ, ಜಗಳ, ದೊಂಬಿ, ಹೊಡೆದಾಟಗಳು ನಡೆದರೂ ಅಲ್ಲಿ ಸೈನಿಕರೊ, ಅವರ ಹೆಂಡತಿ ಮಕ್ಕಳೊ, ಅಥವಾ ಬಡಪಾಯಿಗಳೋ, ನಿರ್ಗತಿಕರೋ, ಹೀಗೆ ಚರಿತ್ರೆ ರಕ್ತಸಿಕ್ತವಾಗಿ ಮುಗ್ಧರ ಬಲಿ ತೆಗೆದುಕೊಂಡಿದ್ದೆ ಕಾಣುವುದು. ಇನ್ನು ಸ್ವಾತಂತ್ರ್ಯ ಸಂದರ್ಭದಲ್ಲಿ ಯಾವುದೋ ಒಂದು ಊರು ಹಳ್ಳಿ ಗ್ರಾಮ ರಾಜ್ಯ ಎಲ್ಲವನ್ನು ಮೀರಿ ದೇಶವೇ ಬಲಿಯಾಗಿದ್ದು ದುರಂತ ಚಿತ್ರಣ. ಆ ಚಿತ್ರಣದ ಯಾವುದೋ ಒಂದು ಭಾಗವನ್ನು ಕಥೆಗಾರರು ತಮ್ಮ ಅಜ್ಞಾತವಾಸಿ ಕಥೆಯ ಮೂಲಕ ತೆರೆದಿಟ್ಟಿರುವುದು ಓದುಗರ ಮನಸ್ಸನ್ನು ಕೆರಳಿಸುತ್ತದೆ. ಅಮಾಯಕ ನಾಗಮ್ಮಳ ತಪ್ಪಾದರೂ ಏನು? ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಸ್ವಾತಂತ್ರ್ಯದ ಚಿಂತನೆ ಹೊರತು ಬೇರೆನಲ್ಲ. ಇಂತಹ ಸಮಯದಲ್ಲಿ ಮಸಲತ್ತಿನ ದಾಳಿ, ಸ್ವಾರ್ಥದ ಕುಯುಕ್ತಿ, ಇವೆಲ್ಲದರ ನಡುವೆ ತತ್ತರಿಸಿದ್ದು ಮಾತ್ರ ಅಪ್ಪಟ ಈ ಮಣ್ಣಿನ ಹೃದಯವಂತ ಮಕ್ಕಳು ಮಾತ್ರ. ಎಷ್ಟೊ ಹೆಣ್ಣು ಮಕ್ಕಳ ಅತ್ಯಾಚಾರ ಶೋಷಣೆ ಮೇಲಿಂದ ಮೇಲೆ ಜರುಗುತ್ತಲೇ ಬಂದಿದ್ದು ಇಂದಿಗೂ ಅಚ್ಚಳಿಯದ ಸತ್ಯವೇ.
ಹೆಣ್ಣು ಅಸಹಾಯಕಳು ಅಬಲೇ ಎಂಬುದನ್ನು ನಾಲ್ಕಾರು ಜನ ಸೇರಿಕೊಂಡು ಆಕೆಯ ಮೇಲೆ ಮಾಡುವ ಅತ್ಯಾಚಾರದ ಮೂಲಕ ಸಾಬೀತು ಮಾಡುವಂತೆ ತೋರುವ ಈ ಗಂಡು ರಾಜಕಾರಣದ ದಬ್ಬಾಳಿಕೆಗೆ ಕನ್ನಡಿ ಹಿಡಿದಂತೆ. ಒಂದು ಹೆಣ್ಣನ್ನು ಸದೆ ಬಡೆಯಲು ಅತ್ಯಾಚಾರವೆಂಬ ಮಂತ್ರವನ್ನು ಪ್ರಯೋಗಿಸುವ ಗಂಡು ರಾಜಕಾರಣವನ್ನು, ಪುರುಷ ಸಾಮ್ರಾಜ್ಯವನ್ನು ಧಿಕ್ಕರಿಸುವಂತಹ ಕಾಲ ಇಂದು ಬಂದಿದ್ದರೂ ಕೂಡ ಮತ್ತೆ ಮತ್ತೆ ಹೆಣ್ಣು ಅತ್ಯಾಚಾರಕ್ಕೆ ಒಳಗಾಗುತ್ತಲೇ ಇರುವುದು ನಮ್ಮ ಸಮಾಜದ ಅವ್ಯವಸ್ಥೆಯ ಕ್ರೂರ ಮನಸ್ಸನ್ನು ಎತ್ತಿ ತೋರಿಸುವುದು. ತಲೆಮರೆಸಿಕೊಂಡಿದ್ದ ಚನ್ನಬಸಪ್ಪನನ್ನು ಹುಡುಕಲು ದಾಳವಾಗಿದ್ದು ಮಾತ್ರ ನಾಗಮ್ಮ. ಆ ನಾಗಮ್ಮಳ ದೇಹವನ್ನು ಚನ್ನಬಸಪ್ಪನನ್ನು ಹುಡುಕಲಾಗದ ಷಂಡರು ಆಕೆ ಮೇಲೆ ಅತ್ಯಾಚಾರ ಮಾಡುವುದರ ಮೂಲಕ ತಮ್ಮ ಪೌರುಷವನ್ನು ಮೆರೆಯುತ್ತಾರೆ ಇದೆಂತಹ ಅಮಾನವೀಯ ಧೋರಣೆ? “ಎಲ್ಲಿ ಅಸಹಾಯಕತೆ ಅಡಗಿರುತ್ತದೋ ಅಲ್ಲಿ ಕ್ರೂರ ಒರಟು ಕೃತ್ಯಗಳು ಜರುಗುತ್ತವೆ,, ಎಂದರೆ ಈ ಕ್ರೂರತೆಗೆ ಅಸಹಾಯಕತೆ ಎಂಬುದೊಂದು ಮೆಟ್ಟಿಲಷ್ಟೇ”. ತಮ್ಮ ಪೌರುಷವನ್ನು ಎತ್ತಿ ತೋರಿಸುವ ಸಲುವಾಗಿ ಅಸಹಾಯಕತೆಯನ್ನ ಮತ್ತಷ್ಟು ಹಿಂಡುವುದು ಮಗದಷ್ಟು ಹಿಂಸಿಸುವುದು ಯಾವ ಮಟ್ಟದ ಪೌರುಷ ಎಂಬ ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ.
ಕಥೆಯಲ್ಲಿ ಮನಸ್ಸಿಗೆ ನಾಟುವಂತಹ ಚಿತ್ರಣ ಗಂಡ ಹೆಂಡತಿಯ ಅವಿನಾಭಾವದ ಸಂಬಂಧ. ಎಂಟು ವರ್ಷದ ದಾಂಪತ್ಯ ಜೀವನಕ್ಕೆ ಕ್ರೂರ ಮನದ ಪೋಲಿಸರು ಎಳ್ಳು ನೀರು ಬಿಟ್ಟಿದ್ದರು. ಗಂಡನನ್ನು ಬಿಟ್ಟುಕೊಡದೆ ತನಗೆಷ್ಟೆ ಹಿಂಸೆ ಕೊಟ್ಟರು ಸುಳಿವು ನೀಡದ ಆಕೆಯ ಮನೋ ಧೈರ್ಯ ಮೆಚ್ಚತಕ್ಕದ್ದು. ಅಷ್ಟಕ್ಕೂ ಸುಳಿವು ನೀಡಲು ಆಕೆಗಾದರೂ ಪತಿಯೆಲ್ಲಿದ್ದಾನೆ ಎಂಬುದು ತಿಳಿದಿರುವುದಿಲ್ಲ. ಆದರೂ ತನ್ನ ಗಂಡನಿಗೋಸ್ಕರ ಎಲ್ಲ ಹಿಂಸೆಯನ್ನು ತಡೆದುಕೊಳ್ಳುವ ಆಕೆಯ ಮನೋಚಿತ್ತ ನಿಜಕ್ಕೂ ಹೃದಯ ಕಿತ್ತು ಬರುವಂತಹ ಚಿತ್ರಣ. ಪ್ರೇಮದಿಂದ ತನ್ನ ಪತ್ನಿ ತನಗಾಗಿ ಕಷ್ಟವನ್ನು ಸಹಿಸುತ್ತಿದ್ದಾಳೆ ಎಂಬ ಸತ್ಯ ತಿಳಿಯುತ್ತಿದ್ದಂತೆ ಕಾಡಿನಿಂದ ಆಕೆ ಇರುವಲ್ಲಿಗೆ ಬರುವ ಆತನ ಗಟ್ಟಿತನ ಆತನ ಪ್ರೇಮ ಆತನನ್ನು ನೋಡುತ್ತಿದ್ದಂತೆ ಒಂದೆರಡು ಮಾತನಾಡಿ ಆತನ ತೊಡೆ ಮೇಲೆ ಪ್ರಾಣ ಬಿಡುವ ಆಕೆಯ ಆಂತರ್ಯದ ಪ್ರೀತಿ ಇವೆಲ್ಲವೂ ಸಹೃದಯರನ್ನು ಮಂತ್ರ ಮುಗ್ದರನ್ನಾಗಿಸಿಬಿಡುತ್ತದೆ.
ಈ ಕಥೆಯುದ್ದಕ್ಕೂ ನೋವು, ಕಣ್ಣೀರು, ಅಸಹಾಯಕತೆ,ದೌರ್ಜನ್ಯ, ಪ್ರೀತಿ, ದಾಸ್ಯದ ವಿರುದ್ದ ಹೋರಾಟ, ಹಠ,ಛಲ,ಒರಟುತನ, ಮನೋಸ್ಥೈರ್ಯ, ಸ್ವಾತಂತ್ರ್ಯದ ಮನೋಭಾವ,ದಬ್ಬಾಳಿಕೆ, ಇವೆಲ್ಲದರ ನಡುವೆ ಅವರಿಬ್ಬರ ಪ್ರೇಮಮಯದ ದೃಶ್ಯ ಮಾತ್ರ ಬದುಕಿನ ಭಾಗವೇ ಆಗಿಹೋದ ಸನ್ನಿವೇಶವನ್ನು ಕೆಲವೇ ಪದಗಳಲ್ಲಿ ಕತೆಗಾರರು ಕಟ್ಟಿಕೊಡುತ್ತಾರೆ. ಈ ಕಥೆಯ ಹಲವು ಸನ್ನಿವೇಶದಲ್ಲಿ ಎಲ್ಲಿಯೂ ಅಬ್ಬರದ ಮಾತುಗಳು ಕಾಣಲಾರೆವು. ಪ್ರಗತಿಶೀಲರಲ್ಲಿ ಅಬ್ಬರ ಹೊಡೆದಾಟ ಬಡಿದಾಟವೇ ಹೆಚ್ಚಾಗಿ ಕಂಡುಬರುತ್ತದೆ ಎಂಬ ಹಲವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಅಜ್ಞಾತವಾಸಿ ಕಥೆಯಲ್ಲಿ ಹೃದಯಂಗಮಯ ಚಿತ್ರಣವೇ ಕಾಣುತ್ತದೆ. “ತಾವೆಲ್ಲ ಕೂಡಿ ಆರಂಭಿಸಿದ್ದ ಪ್ರಗತಿಶೀಲ ಚಳುವಳಿ ಒಂದು ಘಟ್ಟದಲ್ಲಿ ಕೇವಲ ಢಾಂಬಿಕ ಅನಿಸ್ತಿದೆ ಎನಿಸಿದಾಗ ನಿರ್ದಾಕ್ಷಿಣ್ಯವಾಗಿ ಅದರಿಂದಲೂ ಸಿಡಿದೆದ್ದು ತಮ್ಮದೇ ಆದ ವಿಚಾರಧಾರೆಗಳನ್ನು ರೂಪಿಸಿಕೊಂಡವರು”-(ಸಾಲುದೀಪ) ಎಂಬ ನಿಲುವಿಗೆ ಬದ್ದರಾದ ಕಟ್ಟಿಮನಿಯವರ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಹೊತ್ತು ನಿಂತಿರುವಂತಹದ್ದು.
ಸಮಕಾಲೀನ ಸಂದರ್ಭಕ್ಕೆ ಈ ಕತೆಯನ್ನು ವಿಮರ್ಶಿಸುವುದಾದರೇ ಸನ್ನಿವೇಶ ಸಂದರ್ಭ ಪಾತ್ರ ಚಿತ್ರಣಗಳು ಬೇರೆಯೇ ಆದರೂ ಘಟನೆಗಳು ಮಾತ್ರ ಪುನರಾವರ್ತನೆಗೊಳ್ಳುತ್ತಲೇ ಇವೆ.ಇಂತಹ ಘಟನೆಗಳಿಗೆ ಸಾವಿರಾರು ಉದಾಹರಣೆಗಳನ್ನು ನೀಡಬಹುದಾದದ್ದು ಸ್ವಾತಂತ್ರ ಭಾರತದ ದುರಂತವೇ ಸರಿ.ಮೌಲ್ಯಗಳ ಕೋಡುಕೊಳ್ಳುವಿಕೆ ಹಾಗೂ ಅಮಾನವೀಯತೆ, ದುಷ್ಟತೆ,ಸ್ವಾರ್ಥ,ಲಂಪಟತೆ, ಕ್ರೂರತೆ, ಅಪ್ರಮಾಣಿಕತೆ, ಇಂತಹ ನೀಚತ್ವಕ್ಕಿರುವ ಮೌಲ್ಯ ಬೆಲೆ ಮಾತ್ರ ಅಗಾಧ ಎಂಬುದು ಅಷ್ಟೆ ಸತ್ಯ ಸಂಗತಿಯಾಗಿದೆ.
ಬಸವರಾಜ ಕಟ್ಟಿಮನಿ ಅವರ ಹಲವು ಕೃತಿಗಳಲ್ಲಿ ರೊಚ್ಚು ಕೆಚ್ಚಿನ ಅಬ್ಬರದ ಧ್ವನಿಗಳು ಕಂಡುಬಂದರೂ ಇನ್ನು ಕೆಲವು ಇವರ ಸಾಹಿತ್ಯದಲ್ಲಿ ಪ್ರೇಮ ಹೃದಯಂಗಮಯವಾಗಿ ನವಿರಾದ ಚಿತ್ರಣಗಳು ಸಿಗುವುದಕ್ಕೆ ಸಾಕ್ಷಿಭೂತವಾಗಿ ಈ ಅಜ್ಞಾತವಾಸಿ ಕಥೆಯೇ ನಮಗೆ ಎದುರು ನಿಲ್ಲುತ್ತದೆ.ಇವರ “ಜಟ್ಟಿಯ ಪ್ರೇಮ” ದಂತಹ ಕಥೆಗಳಲ್ಲಿ ಸಹ ‘ಸುಲೇಮಾನ್ ಖಾನ್’ ನಂತಹ ಪಾತ್ರಗಳ ಚಿತ್ರಣ ಮಾನವೀಯ ದೃಷ್ಟಿಯನ್ನು ಬೀರುತ್ತದೆ.ಹಾಗೂ ‘ಗಿರಿಯ ನವಿಲು’ ಕಾದಂಬರಿಯಲ್ಲಿ ಅಕ್ಕಮಹಾದೇವಿ ಪಾತ್ರಕ್ಕೆ ಮಹತ್ವವನ್ನು ನೀಡಿರುವುದು ಸಹ ಮೌಲಿಕೆಯನ್ನು ಹೆಚ್ಚಿಸಿದೆ. ಇವರ ಹಲವಾರು ಕಥೆಗಳಲ್ಲಿ ಹಳ್ಳಿಯ ಮುಗ್ದರ ಮನಸಿನ ಭಾವಗಳು, ವಸ್ತು ವೈವಿಧ್ಯತೆ ಹಾಗೂ ಪಾತ್ರಗಳು ವಿಶಾಲ ಚಿಂತನೆಯನ್ನು ಕಾಣಬಹುದಾಗಿದೆ. ಈ ಕತೆಯಲ್ಲಿ ಬಹುಮುಖ್ಯವಾಗಿ ನೋವಿನಲ್ಲೂ ಸೋಲಿನಲ್ಲೂ ಗಂಡ ಹೆಂಡತಿಯ ಮನೋಜ್ಞ ಆದರ್ಶ ಪ್ರೇಮದ ಜೀವಂತಕೆ,ಸಾವಿನಲ್ಲೂ ಸತ್ಯವನ್ನು ಕಾಪಾಡಿಕೊಳ್ಳುವ ನಾಗಮ್ಮಳ ಧೀಮಂತಿಕೆ, ಗಂಡನನ್ನು ಉಳಿಸುವ ಅವಳ ಹಂಬಲಿಕೆ ಇವೆಲ್ಲವೂ ಓದುಗರ ಮನೆ ಸೂರೆಗೊಳಿಸದೆ ಬಿಡದು.
- ವಾಣಿ ಭಂಡಾರಿ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
©2024 Book Brahma Private Limited.