ವಿಶ್ವಕಪ್ ಕ್ರಿಕೆಟ್

Author : ಸತೀಶ್ ಚಪ್ಪರಿಕೆ

Pages 224

₹ 60.00




Year of Publication: 1999
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಇಂಗ್ಲೆಂಡ್ ನಲ್ಲಿ (1999)  ಐಸಿಸಿ ಏಳನೇ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನವೇ, ಈ ಮೊದಲಿನ ಆರು ವಿಶ್ವಕಪ್ ಟೂರ್ನಿ ಗಳ ಕುರಿತು  ’ಪ್ರಜಾವಾಣಿ’ ಕ್ರೀಡಾ ಪುರವಣಿಯಲ್ಲಿ,ಸರಣಿ ಸರಣಿಯಾಗಿ ಲೇಖಕ ಸತೀಶ ಚಪ್ಪರಿಕೆ ಅವರು ಲೇಖನಗಳ ಸಂಗ್ರಹವೇ ‘ವಿಶ್ವಕಪ್ ಕ್ರಿಕೆಟ್’ ಕೃತಿ. 

ಇಂಗ್ಲೆಂಡ್ ನಲ್ಲಿ ನಡೆದ ಮೊದಲೆರಡು ವಿಶ್ವಕಪ್ ನ್ನು  ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಗೆಲುವು ಸಾಧಿಸಿದ ಬಗೆ, ಕಪಿಲ್ ದೇವ್ (1983) ನೇತೃತ್ವದ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್ ನಲ್ಲಿ ಹೇಗೆ ಸೋಲಿಸಿತು?, ಭಾರತ ಉಪಖಂಡದಲ್ಲಿ ನಡೆದ ರಿಲಯೆನ್ಸ್ ವಿಶ್ವಕಪ್ ನ ರೋಚಕ (1987) ಹಾದಿ; ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಅಂಡ್ ಹೆಜಸ್ ವಿಶ್ವಕಪ್ (1992) ಟೂರ್ನಿಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡ ಜಯಗಳಿಸಿದ್ದು ಹೇಗೆ?  ವಿಲ್ಸ್ ಕಪ್ ನಲ್ಲಿ ಅರ್ಜುನ ರಣತುಂಗಾ ನೇತೃತ್ವದ ಶ್ರೀಲಂಕಾ (1996) ತೋರಿಸಿದ ಬಗೆ, ಐಸಿಸಿ ವಿಶ್ವಕಪ್ ನಲ್ಲಿ (1999) ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯಾ ತಂಡ 2ನೇ ಬಾರಿಗೆ ವಿಶ್ವಕಪ್ ಗೆಲುವು ಸಾಧಿಸಿದ ಪರಿ, ಅಂಕಿ-ಸಂಖ್ಯೆ ಸಮೇತ ವಿವರಗಳ ರೋಮಾಂಚನಾಕಾರಿ ಲೇಖನಗಳು ಪ್ರಕಟವಾಗಿದ್ದವು. ಈ ಲೇಖನಗಳ ಸಂಗ್ರಹವೇ ಈ ಕೃತಿ.

About the Author

ಸತೀಶ್ ಚಪ್ಪರಿಕೆ

ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್  ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ  ಸತೀಶ್ ಲಂಡನ್‌ನ ವೆಸ್ಟ್ ಮಿನಿಸ್ಟರ್  ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ...

READ MORE

Reviews

ಅನನ್ಯ ಶೈಲಿಯ ’ವಿಶ್ವಕಪ್ ಕ್ರಿಕೆಟ್’ 

ಕನ್ನಡದಲ್ಲಿ ಕ್ರೀಡೆ ಕುರಿತು ಪ್ರಕಟವಾಗುವ ಪುಸ್ತಕಗಳು ಅಪರೂಪ. ಈ ಹಿನ್ನಲೆಯಲ್ಲಿ ’ವಿಶ್ವಕಪ್ ಕ್ರಿಕೆಟ್’ ಒಂದು ಸಾರ್ಥಕ ಪ್ರಯತ್ನ. ಸತೀಶ್ ಚಪ್ಪರಿಕೆಯವರ ಈ ಪುಸ್ತಕ ಕನ್ನಡ ಕ್ರೀಡಾ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಲೇಖಕರು ಎಲ್ಲ ಏಳು ವಿಶ್ವಕಪ್ ಪಂದ್ಯಾವಳಿಗಳನ್ನು ಈ ಪುಸ್ತಕದಲ್ಲಿ ಅವಲೋಕಿಸಿದ್ದಾರೆ. ೧೯೭೧ರಲ್ಲಿ ಅಂತರ್‍ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಏಕದಿನ ಕ್ರಿಕೆಟ್ ಕಣ್ಣು ಬಿಟ್ಟ ರೋಚಕ ಘಟನೆಯಿಂದ ಹಿಡಿದು ೧೯೯೯ರ ವಿಶ್ವಕಪ್ ಫೈನಲ್ ನಲ್ಲಿ ಸ್ವೀವ್ ವಾ ಬಳಗ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ವಿಶ್ವ ಕಪ್ ಎತ್ತಿದ ತನಕ ಈ ಪುಸ್ತಕದಲ್ಲಿ ವಿಶ್ವಕಪ್ ಇತಿಹಾಸವನ್ನು ಹೆಕ್ಕಿ ಕೊಡುವ ಪ್ರಯತ್ನ ಮಾಡಿದ್ದಾರೆ. 

ಕನ್ನಡದಲ್ಲಿ ಬಂದಿರುವ ಇತರ ಕ್ರೀಡಾ ಪುಸ್ತಕಗಳಿಗಿಂತ ಈ ಪುಸ್ತಕ ಭಿನ್ನವಾಗಿ ನಿಲ್ಲುತ್ತದೆ. ಸಾಮಾನ್ಯವಾಗಿ ಕನ್ನಡದಲ್ಲಿ ಬಂದ ಕ್ರೀಡಾಪುಸ್ತಕಗಳು ಪಠ್ಯಪುಸ್ತಕದ ಶೈಲಿಯಲ್ಲಿ ಇರುವಂಥದ್ದು. ಆದರೆ ’ವಿಶ್ವಕಪ್ ಕ್ರಿಕೆಟ್’ ಪುಸ್ತಕ ಭಿನ್ನವಾಗಿದೆ. ಬರವಣಿಗೆಯಲ್ಲಿ ಲವಲವಿಕೆಯಿದೆ. ಓದುಗರನ್ನು ಹಿಡಿದಿಡುವ ಶಕ್ತಿಯಿದೆ. ಪೂರಕವಾಗಿ ಕೊಡುವ ಅಂಕಿ-ಅಂಶಗಳು ಆಸಕ್ತಿಕಾರಕವಾಗಿದ್ದು ಕ್ರೀಡಾಪ್ರಿಯರನ್ನು ಆಕರ್ಷಿಸುವಲ್ಲಿ ಸಫಲವಾಗುತ್ತದೆ. 

ಲೇಖಕರು ಪುಸ್ತಕದಲ್ಲಿ ಇಡೀ ವಿಶ್ವಕಪ್ ನಲ್ಲಿ ಭಾರತ ಆಡಿದ ಪಂದ್ಯಗಳ ಕುರಿತು ಹೆಚ್ಚಿನ ಒತ್ತು ನೀಡಿದ್ದಾರೆ. ಈ ಪಂದ್ಯಗಳ ಕುರಿತು ಅವರ ಬರಹಗಳಂತೂ ರಂಜನೀಯವಾಗಿದೆ. ಉದಾಹರಣೆಗೆ ೧೯೮೩ರ ವಿಶ್ವಕಪ್ ನಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ೧೭ ರನ್ ಗಳಿಗೆ ೫ ವಿಕೆಟ್ ಕಳೆದುಕೊಂಡಿದ್ದ ಸಂದರ್ಭ; ’ಜಿಂಬಾಬ್ವೆಯ ಬೌಲರ್‍ ಗಳಾದ ರಾಸನ್ ಹಾಗೂ ಕ್ಯುರಾನ್ ೫ ವಿಕೆಟ್ ಗಳನ್ನು ಉರುಳಿಸಿದ ಹುಮ್ಮಸ್ಸಿನಲ್ಲಿ ಉಬ್ಬುತ್ತಿರುವಾಗಲೇ ಕಪಿಲ್ ದೇವ್ ಮೈದಾನಕ್ಕೆ ಇಳಿದರು. ಈ ಕಪಿಲ್ ದೇವ್ ಅವರನ್ನು ನಂಬುವುದು ಹೇಗೆ? ಚೆಂಡು ಬ್ಯಾಟಿಗೆ ಬಡಿದರೆ ಫೋರ್‍, ಹೆಚ್ಚು ಕಮ್ಮಿಯಾದರೆ ಕ್ಯಾಚ್, ತಪ್ಪಿದರೆ ಕ್ಲೀನ್ ಬೌಲ್ಡ್!’ ಕಪಿಲ್ ಅವರ ಬ್ಯಾಟಿಂಗ್ ಶೈಲಿಯನ್ನು ಇದಕ್ಕಿಂತ ಚೆನ್ನಾಗಿ ವಿವರಿಸುವುದು ಕಷ್ಟ. ಕೇವಲ ಮೂರು ಸಾಲಿನಲ್ಲಿ ಕಪಿಲ್ ಬ್ಯಾಟಿಂಗ್ ಶೈಲಿಯನ್ನು ವಿವರಿಸಿದ ಶೈಲಿ ಅನನ್ಯ ಎನ್ನಬಹುದು.

ಲೇಖಕರು ಪ್ರತಿ ವಿಶ್ವಕಪ್ ನ ಸ್ವಾರಸ್ಯಕರ ಅಂಶಗಳನ್ನು ದಾಖಲಿಸಿದ್ದಾರೆ. ಈ ಸ್ವಾರಸ್ಯಕರ ಅಂಶಗಳು ಪುಸ್ತಕ ಕೇವಲ ವಿಶ್ವಕಪ್ ಅಂಕಿ-ಅಂಶಗಳನ್ನೊಳಗೊಂಡ ಒಣ ಕಂತೆಯಾಗದಂತೆ ಮಾಡಿದೆ. ಪುಸ್ತಕವನ್ನು ಜೀವಂತವಾಗಿಸಿದೆ.

ಪುಸ್ತಕದಲ್ಲಿ ಪ್ರತಿ ವಿಶ್ವಕಪ್ ನ ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗದ ಸಂಪೂರ್ಣ ವಿವರಣೆಯಿದೆ. ಎಲ್ಲ ವಿಶ್ವಕಪ್ ಪಂದ್ಯಗಳ ಫಲಿತಾಂಶವಿದೆ. ಇದು ಕ್ರಿಕೆಟ್ ಪ್ರಿಯರಿಗೆ ಅಮೂಲ್ಯ ಮಾಹಿತಿ ಒದಗಿಸುತ್ತದೆ ಎನ್ನುವುದು ನಿಸ್ಸಂಶಯ. 

ಪುಸ್ತಕದ ಕೊನೆಯಲ್ಲಿ ಲೇಖಕರು ’ಸಜ್ಜನರ ಕ್ರೀಡೆ ಎತ್ತ ಸಾಗಿದೆ?’ ಎಂಬ ಲೇಖನದಲ್ಲಿ ಸದ್ಯದ ಪ್ರವೃತ್ತಿಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಏಕದಿನ ಕ್ರಿಕೆಟ್ ಹೇಗೆ ಟೆಸ್ಟ್ ಕ್ರಿಕೆಟನ್ನು ಮೂಲೆಗುಂಪಾಗುವಂತೆ ಮಾಡಿದೆ ಎಂಬ ಅಂಶಗಳತ್ತಲೂ ಬೆಳಕು ಚೆಲ್ಲಿದ್ದಾರೆ. ೨೮ ವರ್ಷಗಳ ಹಿಂದೆ ಕ್ರಿಕೆಟ್ ಇದ್ದ ಸ್ಥಿತಿ ಮತ್ತು ಇಂದಿನ ಬೆಳವಣಿಗೆಗಳ ತೌಲನಿಕ ಅಧ್ಯಯನ ಸಹ ಲೇಖಕರಿಂದ ಆಗಿದೆ.

ಹಾಗೆಂದು ಈ ಪುಸ್ತಕ ಎಲ್ಲ ದೃಷ್ಟಿಯಿಂದ ಪರಿಪೂರ್ಣ ಎಂದೇನೂ ಅರ್ಥವಲ್ಲ. ಒಮ್ಮೊಮ್ಮೆ ಲೇಖಕರು ಅಗತ್ಯಕ್ಕಿಂತ ಹೆಚ್ಚು ರಂಜನೀಯವಾಗಿ ವಿವರಿಸಿದ್ದಾರೆ. ಉದಾಹರಣೆಗೆ ವೆಸ್ಟ್ ಇಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್ ಅವರನ್ನು ’ಅಭಿಮನ್ಯು’ ಎನ್ನುತ್ತಾರೆ. ಈ ಹೋಲಿಕೆ ಅಷ್ಟು ಸರಿಯೆನಿಸುವುದಿಲ್ಲ. ಹಾಗೆಯೇ ಲೇಖಕರು ಕೆಲ ಸಂದರ್ಭಗಳಲ್ಲಿ ಶಬ್ದಗಳ ಜಾಲ ಹೆಣೆದು ಓದುಗರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಉದಾಹರಣೆಗೆ ’ಜಾವೇದ್‌ ಮಿಯಾಂದಾದ್ ಕ್ರಾಫ್ಟ್ ಎಸೆತದಲ್ಲಿ ವಿಕೆಟ್ ಎದುರು ಸಿಕ್ಕಿಹಾಕಿಕೊಂಡರು’ ಎಂದು ಬರೆಯುತ್ತಾರೆ. ಈ ಸಾಲುಗಳು ಮಿಯಾಂದಾದ್ ಕ್ರಾಫ್ಟ್ ಗೆ ಎಲ್ ಬಿ ಡಬ್ಲ್ಯೂ ಆದರು ಎಂಬುದನ್ನು ಸರಿಯಾಗಿ ಧ್ವನಿಸುತ್ತದೆ ಎಂದೆನಿಸುವುದಿಲ್ಲ. ಒಂದೆಡರು ಕಡೆ ದೋಷಗಳೂ ನುಸುಳಿವೆ. ಉದಾಹರಣೆಗೆ ಮೊದಲ ವಿಶ್ವಕಪ್ ಸ್ವಾರಸ್ಯಗಳನ್ನು ವಿವರಿಸುತ್ತಾ ಲೇಖಕರು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ೪ ವಿಕೆಟ್ ನಷ್ಟಕ್ಕೆ ೩೩೪ ರನ್ ಗಳಿಸಿತ್ತು ಎನ್ನುತ್ತಾರೆ. ಅದು ವಸ್ತುಶಃ ಇಂಗ್ಲೆಂಡ್ ಎಂದಾಗಬೇಕಿತ್ತು. ಇದಲ್ಲದೇ ಲೇಖಕರು ಪಂದ್ಯಗಳ ವಿಶ್ಲೇಷಣೆಯನ್ನು ಇನ್ನೂ ಸ್ವಲ್ಪ ಗಂಭೀರವಾಗಿ ಮಾಡಬಹುದಿತ್ತು ಎಂಬ ಭಾವನೆ ಬರುತ್ತದೆ.

ಪುಸ್ತಕದಲ್ಲಿ ಅಪರೂಪದ ಚಿತ್ರಗಳಿವೆ. ಶ್ರೀಪಾದ ಅವರು ಅಚ್ಚುಕಟ್ಟಾಗಿ ಮುಖಪುಟ ರಚಿಸಿದ್ದಾರೆ. ಉತ್ತಮ ಗುಣಮಟ್ಟದ ಕಾಗದ ಮತ್ತು ಮುದ್ರಣದಿಂದ ಪುಸ್ತಕ ಇನ್ನಷ್ಟು ಪ್ರಿಯವಾಗುತ್ತದೆ. ಮುದ್ರಣ ಸ್ಖಾಲಿತ್ಯ ಇಲ್ಲ ಎನ್ನುವಷ್ಟು ಕಡಿಮೆ. ಒಟ್ಟಾರೆ ’ವಿಶ್ವಕಪ್ ಕ್ರಿಕೆಟ್’ ಕ್ರಿಕೆಟ್ ಪ್ರಿಯರಿಗೆ ಒಂದು ಸಂಗ್ರಹಯೋಗ್ಯ ಪುಸ್ತಕ.

(ಪತ್ರಕರ್ತ ಪರಮೇಶ್ವರ ಗುಂಡ್ಕಲ್ ಅವರು 10 ಡಿಸೆಂಬರ್‍, 1999ರ ’ವಿಜಯ ಕರ್ನಾಟಕ’ ಪುರವಣಿಯಲ್ಲಿ ಬರೆದ ’ವಿಶ್ವಕಪ್ ಕ್ರಿಕೆಟ್’ ಕೃತಿಯ ಕುರಿತು ಬರೆದ ವಿಮರ್ಶೆ)

Related Books