ಆಧುನಿಕ ತಂತ್ರಜ್ಞಾನಗಳ ಜೊತೆಗೆ ಯಂತ್ರ ನಾಗರಿಕತೆಗೆ ಮನಸೋತು ಅವುಗಳಿಂದ ಅಭಿವೃದ್ಧಿಯನ್ನು ಆಶಿಸುತ್ತಾ, ಇರುವ ನೆಮ್ಮದಿಯನ್ನು ಕಳೆದುಕೊಂಡು ಮತ್ತೆ ಅದರದೇ ಹುಡುಕಾಟದಲ್ಲಿ ಮುಳುಗೇಳುತ್ತಾ ಬದುಕುತ್ತಿರುವ 21ನೇಯ ಶತಮಾನದ ಸಮಾಜಕ್ಕೆ ಮರುಭೂಮಿಯ ಮರೀಚಿಕೆ ಎಂಬಂತೆ ರಚನೆಗೊಂಡ ಕೃತಿ ಇದು. ಪ್ರಸನ್ನ ಅವರ ಈ ಯಶಸ್ವಿ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಗಾಂಧಿವಾದಿಯಾಗಿ ಗಾಂಧಿ ಹಾದಿ ಹಿಡಿದು ಸಾಗಿ ಆಧುನಿಕತೆಯ ಅಬ್ಬರದ ನಡುವೆಯೂ ಶ್ರಮಸಹಿತ ಸರಳ ಬದುಕಿನ ಸವಿಯನ್ನು ಉಣ್ಣುತ್ತಿರುವ ಅನುಭವಗಳ ದಾಖಲೆ, ಈ ಕೃತಿಯ ಕುರಿತು ಮತ್ತು ಶ್ರಮಸಹಿತ ಸರಳ ಬದುಕಿನ ಕುರಿತು ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸುತ್ತದೆ. ಶ್ರಮಜೀವಿಗಳೇ ಸುಲಭಜೀವಿಗಳಾಗಲು ತುಡಿಯುತ್ತಿದ್ದಾರೆ. ಯಂತ್ರನಾಗರಿಕತೆಯೇ ಇವಕ್ಕೆ ಮುಖ್ಯ ಕಾರಣ. ಹಳ್ಳಿಯ ಯುವಕರು ಶ್ರಮಸಹಿತ ಸರಳ ಜೀವನವನ್ನು ನಿರ್ಲಕ್ಷಿಸಿ ಸುಲಭಜೀವನದ ಕನಸು ಕಾಣುತ್ತಾ ನಗರದ ಕಡೆ ಧಾವಿಸಿ ಯಂತ್ರಗಳ ಜೊತೆ ಸೆಣಸಾಡಿ ಸಂಪಾದಿಸಲು ಸಾಧ್ಯವಾಗದೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುವ ವಾಸ್ತವವನ್ನು ತಿಳಿಸುತ್ತದೆ. ತನ್ನಿಂದಾದಷ್ಟು, ತಿಳಿದಿರುವಷ್ಟು ಮಾಹಿತಿ ಮುನ್ನೆಚ್ಚರಿಕೆಗಳನ್ನು ಜನರಿಗೆ ಮುಟ್ಟಿಸಬೇಕೆಂಬ ಹಂಬಲ ಈ ಕೃತಿಯಲ್ಲಿ ಎದ್ದು ಕಾಣುತ್ತದೆ. ಯಂತ್ರಗಳು ಆಳುತ್ತಿರುವ ಇಂದಿನ ಜಗತ್ತಿನಲ್ಲಿ ಯಂತ್ರಗಳನ್ನು ತೊರೆದು ಸುಲಭ ಜೀವನವನ್ನು ಬಿಟ್ಟು ಶ್ರಮಸಹಿತ ಸರಳ ಬದುಕಿಗೆ ಮರಳುವುದೆಂದರೆ? ಇದು ಸಾಧ್ಯವೇ? ಹೇಗೆ ಸಾಧ್ಯ? ಎಂಬೆಲ್ಲಾ ಪ್ರಶ್ನೆಗಳನ್ನು ಮನಸ್ಸಿನೊಳಗಿಟ್ಟುಕೊಂಡೇ ಅವಕ್ಕೆ ಉತ್ತರಿಸುವವರಿಲ್ಲವೆಂದು ಭಾವಿಸಿಕೊಂಡು ಜನರು ಬದುಕುತ್ತಿದ್ದಾರೆ. ಈ ರೀತಿಯ ಎಲ್ಲಾ ಗೊಂದಲಗಳನ್ನು ಒಂದೊಂದಾಗಿ ತಾಳ್ಮೆಯಿಂದ ಬಗೆಹರಿಸುತ್ತಾ, ಕೆಲವೊಂದಕ್ಕೆ ನಮ್ಮಳಗೇ ಚಿಂತನೆಯ ಬೆಳಕು ಹಚ್ಚುವಂತೆ ಮಾಡುತ್ತಾ ಮುಂದುವರಿಯುವ ಈ ಸರಳ ಸುಂದರ ಕೃತಿ ಶ್ರಮಸಹಿತ ಸರಳ ಬದುಕಿನ ದಾರಿಗೆ ಬೆಳಕು ಚೆಲ್ಲುವ ಕೃತಿ, ಮಾತ್ರವಲ್ಲದೆ, ಜಗತ್ತಿನ ಪ್ರಶ್ನಾರ್ಥಕ ನೋಟಕ್ಕೆ ಸೂಕ್ತವಾದ ಉತ್ತರವನ್ನು ಕಟ್ಟಿಕೊಡುತ್ತದೆ.
©2024 Book Brahma Private Limited.