‘ಸಂಚಿ ಮುನ್ನುಡಿಗಳ ಸಂಕಲನ’ ಎಂ. ಎಸ್. ಆಶಾದೇವಿಯವರ ಮುನ್ನುಡಿಗಳ ಸಂಕಲನವಾಗಿದೆ. ಇದಕ್ಕೆ ಎಸ್. ದಿವಾಕರ್ ಅವರ ಬೆನ್ನುಡಿ ಬರಹವಿದೆ; ಕಳೆದ ಎರಡು ಮೂರು ದಶಕಗಳಿಂದ ಕನ್ನಡದ ಹಿಂದಿನ ಮತ್ತು ಇಂದಿನ ಸಾಹಿತ್ಯ ಕೃತಿಗಳನ್ನು ಮರುವ್ಯಾಖ್ಯಾನಿಸುತ್ತಿರುವ ಎಂ.ಎಸ್. ಆಶಾದೇವಿಯವರು ನಮ್ಮ ವಿಚಾರಗಳ, ಪ್ರತಿಮೆಗಳ ಮತ್ತು ನಂಬಿಕೆಗಳ ಸಂಕೀರ್ಣ ಜಾಲವನ್ನು ಜಾಲಾಡಿ ಅದರಲ್ಲಿ ಅಂತರ್ಗತವಾದ ಅರ್ಥ, ಮೌಲ್ಯಗಳನ್ನು ಬೆಳಕಿಗೆ ತರುತ್ತಿರುವ ಅಪರೂಪದ ವಿಮರ್ಶಕರು. ಕಾವ್ಯ, ಕತೆ, ಕಾದಂಬರಿ, ಪ್ರಬಂಧ, ಅಂಕಣ ಬರಹ, ಅನುವಾದ, ಹೀಗೆ ಅವರು ಯಾವುದರ ಬಗ್ಗೆ ಬರೆದರೂ ಅದರ ಹಿನ್ನೆಲೆಯಲ್ಲಿ ಅವರಿಗಿರುವ ಇಡೀ ಕನ್ನಡ ಸಾಹಿತ್ಯದ ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಅವರದು ಪ್ರತಿಯೊಂದು ಕೃತಿಯ ಸೂಕ್ಷ್ಮ ಓದಿನಿಂದ ಐತಿಹಾಸಿಕ ಮತ್ತು ಸಮಕಾಲೀನ ಒಳನೋಟಗಳನ್ನು ಬೆಸೆದು ತೋರಿಸುವ ಅಪರೂಪದ ಪ್ರತಿಭೆ; ನಿಷ್ಪಕ್ಷಪಾತ ವಿಮರ್ಶೆಯನ್ನು ಸಾಧ್ಯವಾಗಿಸುವ ವಿದ್ವತ್ತು. ಆದ್ದರಿಂದಲೇ ಅವರಿಗೆ 'ಪ್ರಮುಖ ಲೇಖಕನೊಬ್ಬನ ಕೃತಿ ಮನುಷ್ಯ ಲೋಕದ ಸಮಸ್ತ ವ್ಯಾಪಾರಗಳ 'ದರ್ಶನ'ವಾಗಿ ಕಾಣುವಂತೆ ಪ್ರಮುಖ ಲೇಖಕಿಯರ ಕೃತಿಗಳನ್ನು ಹಾಗೆ ಒಟ್ಟು ಬದುಕಿನ ಕ್ಯಾನ್‌ವಾಸಿನ ಹಿನ್ನೆಲೆಯಲ್ಲಿಟ್ಟು ನೋಡುವ ಪರಿಪಾಠ' ಸಾಧ್ಯವಾಗಿದೆ. ಹಲವು ಕ್ಷೇತ್ರಗಳ ಬಗ್ಗೆ ಯಾರಿಗೂ ಬೆರಗು ಹುಟ್ಟಿಸುವಷ್ಟು ಆಳವಾದ ಜ್ಞಾನವುಳ್ಳ ಈ ವಿಮರ್ಶಕಿ ನಮ್ಮ ಜೀವನದ ಪ್ರಬಲವೂ ನಿಯಂತ್ರಣಶಕ್ತಿಯೂ ಉಳ್ಳ ಕಥನಗಳನ್ನು ವಿಚಾರಣೆಗೊಳಪಡಿಸುತ್ತ ಅವುಗಳ ಒಳಸುಳಿಗಳನ್ನು ತೋರಿಸಿಕೊಡುತ್ತಾರೆ.
©2025 Book Brahma Private Limited.