‘ಪರದೇಶವಾಸಿ’ ಕೃತಿಯು ಕಿರಣ್ ಉಪಾಧ್ಯಾಯ ಅವರ ಅಂಕಣಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ನಮ್ಮ ದೇಶ ನಮಗೆ ಮತ್ತಷ್ಟು ಆಪ್ತವಾಗುವುದು 'ಪರದೇಶವಾಸಿ'ಯಾಗಿದ್ದಾಗ, ನಮ್ಮ ದೇಶ ನಮಗೆ ಗಾಢವಾಗಿ ತಟ್ಟುವುದು, ದೇಶದ ಬಗ್ಗೆ ನಾವು ಗಾಢವಾಗಿ ಯೋಚಿಸುವುದು ವಿದೇಶಿ ನೆಲದಲ್ಲಿದ್ದಾಗಲೇ, ನಿರಂತರ ಕಾಡುವ ಪರಕೀಯ ಭಾವ, ನಮ್ಮನ್ನು ನಮ್ಮ ದೇಶದ ಬಗ್ಗೆ ಅಲೋಚಿಸಲು ಹೆಚ್ಚುತ್ತದೆ, ಅದಕ್ಕೆ ವಿದೇಶ ವಾಸದ ಅನುಭವವೂ ಸೇರಿಕೊಂಡು, ಆ ಆಲೋಚನೆ ಮತ್ತಷ್ಟು ಗಂಭೀರ ಆಯಾಮವನ್ನು ಪಡೆಯುತ್ತದೆ. ಎಲ್ಲ ಅನಿವಾಸಿಗಳನ್ನು ಕಾಡುವ, 'ಭಾರತವನ್ನು ಸುಧಾರಿಸುವುದು ಹೇಗೆ" ಎಂಬ ವರೆಗೆ ಎಲ್ಲಾ ವಿದೇಶವಾಸಿಗಳಲ್ಲೂ ಉತ್ತರವಿದೆ, ಆದರೆ ಆ ಉತ್ತರ ಮತ್ತಷ್ಟು ಪ್ರಶ್ನೆ ಮತ್ತು ಸಮಸ್ಯೆಗಳನ್ನು ಹುಟ್ಟು ಹಾಕಬಹುದು, ಹೀಗಾಗಿ ವಿದೇಶಿ ನೆಲದಲ್ಲಿ ಕುಳಿತು ಬರೆಯುವುದು ಯಾವತ್ತೂ ಸವಾಲು, ಎಲ್ಲೋ, ಅವೆಷ್ಟೋ ದೂರದಲ್ಲಿ ನಿಂತು, ತಾಯ್ನೆಲದ ತಾಕಲಾಟ, ತಟವಟಗಳನ್ನು ನೋಡುವದು ಕನ್ನವೇ, ಕಲ್ಪನೆಯನ್ನು ಸದಾ ವಿಸ್ತರಿಸುವ, ಲಂಬಿಸುವ ಕಸರತ್ತನ್ನು ಮಾಡುತ್ತಿರಬೇಕು. ಈ ಕೆಲಸವನ್ನು ಕಿರಣ್ ಉಪಾಧ್ಯಾಯ, ಅತ್ಯಂತ ಪ್ರೀತಿ ಮತ್ತು ಜರೂರತ್ತಿನಿಂದ ಮಾಡುತ್ತಿದ್ದಾರೆ. ಎರಡು ಖಂಡಗಳನ್ನು ಹತ್ತಿರಗೊಳಿಸುವ, ಆಪ್ತವಾಗಿಸುವ ಕಸಬುದಾರಿಕೆಯಲ್ಲಿ ಅವರ ಅಂಕಣ ಮಹತ್ವದ ಸೇತುವೆಯಾಗಿದೆ. ವಿದೇಶದ ಅನುಭವವನ್ನು ಸ್ಥಳೀಯ ಸಂದರ್ಭಕ್ಕೆ ಎಳೆದು ತಂದು, ಇಲ್ಲಿನ ಸನ್ನಿವೇಶಕ್ಕೆ ಸಮೀಕರಿಸಿ, ಅದನ್ನು ದೇಶ-ವಿದೇಶದ ಮಿಶ್ರಪಾಕವಾಗಿ, ಹೊಸ ಅನುಭವವಾಗಿಸುತ್ತಿದ್ದಾರೆ, ಈ ಕಾರಣದಿಂದ ಅವರ ಬರಹ ವಿಶೇಷ ಮೆರುಗನ್ನು ಪಡೆದಿದೆ, ಕಡಿಮೆ ಅವಧಿಯಲ್ಲಿ ಅವರು ಒಬ್ಬ ಪ್ರಬುದ್ಧ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಪರದೇಶದ ಅನುಭವಗಳನ್ನು ಕಟ್ಟಿಕೊಡುತ್ತಾ ನಮಗೆ ಅಲ್ಲಿನ ಜೀವನ ಮತ್ತು ಜನಜೀವನವನ್ನು ಹೃದ್ಯವಾಗಿಸುತ್ತಿದ್ದಾರೆ. ಹೀಗಾಗಿ ಕಿರಣ್ ಬರಹದಲ್ಲಿ ತಾಯ್ನಾಡಿನ ಸೆಳೆತ ಹಾಗೂ ವಿದೇಶಿ ನೆಲದ ಘಮಲನ್ನು ಏಕಕಾಲದಲ್ಲಿಆಫ್ರಾಣಿಸಬಹುದು. ಈ ಕೃತಿ ನಿಮಗೆ ಆ ಅನುಭವವನ್ನು ಸಂಪನ್ನಗೊಳಿಸುತ್ತದೆ.
©2025 Book Brahma Private Limited.