ಪತ್ರಕರ್ತ-ಲೇಖಕ ತುರುವನೂರು ಮಂಜುನಾಥ ಅವರು ತಮ್ಮದೇ ‘ಕೆಂಧೂಳಿ’ ವಾರಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ-ಮನಮಿಡಿತ. ಒಟ್ಟು 35 ಬರಹಗಳಿವೆ. ಸಂಖ್ಯೆಯಲ್ಲಿ ಪ್ರಚಲಿತ ರಾಜಕೀಯ ವಿದ್ಯಮಾನಗಳೇ ಹೆಚ್ಚು. ಪ್ರತಿ ಬರಹವು ನಿಯಮಗಳಿಂದ ದೂರ ಸರಿಯುತ್ತಿರುವ ಪತ್ರಿಕೋದ್ಯಮ, ಸಾಮಾಜಿಕ ಹೊಣೆಗಾರಿಕೆಯ ನಿರ್ಲಕ್ಷ್ಯದ ಪರಿಸರ, ಸಂವಿಧಾನ ಪಾಲನೆಯಲ್ಲ; ಪುರೋಹಿತಶಾಹಿಯನ್ನು ಮೆಚ್ಚಿಸುವಂತೆ ನಡೆದುಕೊಳ್ಳುತ್ತಿರುವ ಸರ್ಕಾರಗಳನ್ನು ಕೇಂದ್ರವಾಗಿರಿಸಿಕೊಂಡಿವೆ. ತೆರೆಮರೆಯ ಪ್ರತಿಭೆ, ಮುತ್ಸದ್ಧಿಗಳನ್ನೂ ಸಹ ಇಲ್ಲಿಯ ಅಂಕಣ ಬರಹಗಳು ನಿರ್ಲಕ್ಷಿಸಿಲ್ಲ. ನ್ಯಾಯ ನಿಷ್ಠುರಿ, ಲೋಕ ವಿರೋಧಿ ಎನ್ನುವ ಹಾಗೆ ಅಪಾಯಗಳನ್ನು ಎದುರುಗೊಳ್ಳುವ ಸಾಹಸಗಳನ್ನು ಇಲ್ಲಿಯ ಬರಹಗಳಲ್ಲಿ ಕಾಣಬಹುದು. ಆದರೆ, ಈ ಎಲ್ಲ ಬರಹಗಳ ಮೂಲ ಮಾನವೀಯತೆ ಎಂಬುದು ಸ್ವತಃ ಅಂಕಣಕಾರರೇ ಹೇಳಿಕೊಂಡಿದ್ದು, ಅವರ ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯ ಎಚ್ಚರವನ್ನು ತೋರುತ್ತದೆ.
ಕೃತಿಗೆ ಮುನ್ನುಡಿ ಬರೆದ ಪತ್ರಕರ್ತ-ಚಿಂತಕ ಅನಂತ ಚಿನಿವಾರ ‘ಇಲ್ಲಿಯ ಬರಹಗಳಲ್ಲಿ ನೇರವಂತಿಕೆ ಹಾಗೂ ಸೈದ್ಧಾಂತಿಕ ಬದ್ಧತೆಗಳಿವೆ ಮಾತ್ರವಲ್ಲ; ಅಧ್ಯಯನದ ಹೊಳವುಗಳಿವೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ-ಪತ್ರಕರ್ತ ಶೂದ್ರ ಶ್ರೀನಿವಾಸ್ ಕೃತಿಗೆ ಬೆನ್ನುಡಿ ಬರೆದು ‘ನಾನಾ ವಿಧವಾದ ವರ್ತಮಾನದ ವಿಷಯಗಳಿಗೆ ಅನ್ವಯಿಸಿ, ಆರೋಗ್ಯಪೂರ್ಣವಾಗಿ ಅರಿಯುವ ಮತ್ತು ಗ್ರಹಿಸುವ ಅನನ್ಯ ಚಿಂತನೆ ಇದೆ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.